ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ. ರಾಮಕೃಷ್ಣ ಶಾಸ್ತ್ರಿ ಅವರ ಕಥೆ: ಗೋರಿಯಿಂದ ಎದ್ದ ಆತ್ಮ

Published 30 ಸೆಪ್ಟೆಂಬರ್ 2023, 23:30 IST
Last Updated 30 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ಪ. ರಾಮಕೃಷ್ಣ ಶಾಸ್ತ್ರಿ

ಹಿಮಾಚಲದ ಒಂದು ಊರು. ಅಲ್ಲೊಂದು ಗೋರಿ. ಯಾವ ಕಾಲದಲ್ಲಿ ಅದರೊಳಗೆ ಶವವನ್ನಿಟ್ಟು ಮಣ್ಣು ಮುಚ್ಚಿದ್ದರೋ ಗೊತ್ತಿಲ್ಲ. ತಾನೊಂದು ಪವಾಡ ಮಾಡುವುದಾಗಿ ಹೇಳಿಕೊಂಡು ಒಬ್ಬ ಸಾಮಾಜಿಕ ಹೋರಾಟಗಾರ ಬಂದ. ಉರವರೆಲ್ಲ ಅವನ ಹಿಂದೆಯೇ ಬಂದರು.

ʻಈ ಗೋರಿಯೊಳಗೆ ಯಾರ ಶವವಿದೆ?ʼ ಹೋರಾಟಗಾರ ಕೇಳಿದ.

ʻಒಬ್ಬ ಅಮಾಯಕ ಹುಡುಗಿಯ ಶವವಿದೆ. ಅದೆಷ್ಟೋ ಮಂದಿ ದುಷ್ಟರು ಸೇರಿಕೊಂಡು ಅವಳ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ಕೊಂದು ಹಾಕಿದರು. ಇವರು ಯಾರೂ ಸಿಕ್ಕಿ ಬೀಳಲಿಲ್ಲ. ಒಬ್ಬ ಅಮಾಯಕನನ್ನು ಪೊಲೀಸರು ಹಿಡಿದು ತಂದರು. ಹೊಡೆದು ಬಡಿದು ಅತ್ಯಾಚಾರ ನಾನೇ ಮಾಡಿದ್ದು ಎಂದು ಅವನನ್ನು ಒಪ್ಪಿಸಿದರು...ʼ ಒಬ್ಬ ಕತೆ ಹೇಳಿದ.

ʻಅಮಾಯಕನಿಗೆ ಶಿಕ್ಷೆಯಾಯಿತಾ?ʼ ಹೋರಾಟಗಾರ ಕೇಳಿದ.

ʻಇಲ್ಲ, ಅಪರಾಧ ಸಾಬೀತಾಗದೆ ಅವನಿಗೆ ಬಿಡುಗಡೆಯಾಯಿತು. ನಿಜವಾದ ಅಪರಾಧಿಗಳ ಪತ್ತೆಯೇ ಆಗಲಿಲ್ಲ, ನೊಂದ ಹುಡುಗಿಯ ಆತ್ಮಕ್ಕೆ ಕಡೆಗೂ ನ್ಯಾಯ ಸಿಗಲಿಲ್ಲʼ ವಿಷಣ್ಣನಾದ ಕತೆ ಹೇಳುತ್ತಿದ್ದವ.

ʻನಿಜವಾದ ಅಪರಾಧಿಗೆ ಶಿಕ್ಷೆಯಾಗಬೇಕೆಂಬುದು ನಿಮ್ಮ ಬಯಕೆಯೆ?ʼ ಹೋರಾಟಗಾರ ಪ್ರಶ್ನಿಸಿದ. ʻಹೌದುʼ ಎಂದರು ಎಲ್ಲರೂ.

ಹೋರಾಟಗಾರ ಗೋರಿಯೊಳಗೆ ಕೈಹಾಕಿ ಹುಡುಗಿಯ ಆತ್ಮವನ್ನು ಹೊರಗೆ ಎಳೆದು ತಂದು ಕೂಡಿಸಿದ. ಆತ್ಮ ಚಡಪಡಿಸಿತು. ʻಒಳಗೆ ನೆಮ್ಮದಿಯಾಗಿ ಮಲಗಿದ್ದೆ. ಈ ಜಂಜಾಟದ ಪ್ರಪಂಚದೊಳಗೆ ಮತ್ತೆ ಯಾಕೆ ನನ್ನನ್ನು ಕರೆತಂದಿರಿ?ʼ ಕೇಳಿತು.

ʻನಿನ್ನ ಮೇಲೆ ಅತ್ಯಾಚಾರ ಎಸಗಿ ದುರುಳರು ಕೊಲೆ ಮಾಡಿದ್ದಾರೆ. ಅವರಿಗೆ ಗಲ್ಲು ಶಿಕ್ಷೆಯಾಗಬೇಕು. ಅವತ್ತು ಈ ದುಷ್ಕೃತ್ಯ ಯಾರು ಮಾಡಿದರು ನೆನಪುಂಟಾ?ʼ ಹೋರಾಟಗಾರ ಕೇಳಿದ.

ʻಇಲ್ಲ, ನೆನಪಿಲ್ಲ. ಅತ್ಯಾಚಾರ ನಡೆದುದು ದೇಹದ ಮೇಲೆ. ಇಲ್ಲಿರುವುದು ಆತ್ಮ. ಹೀಗಾಗಿ ನನಗದು ನೆನಪಿಲ್ಲʼ ಆತ್ಮ ಹೇಳಿತು.

ʻನಿನಗದು ನೆನಪಿರಬೇಕಾಗಿಲ್ಲ. ನನಗೆ ಯಾರೆಂಬುದು ಗೊತ್ತಿದೆ. ಅವರನ್ನು ಎಳೆದು ತಂದು ಕಟಕಟೆಯಲ್ಲಿ ನಿಲ್ಲಿಸಬೇಕು. ಅವರಿಗೆ ಗಲ್ಲು ಶಿಕ್ಷೆಯಾಗಬೇಕು. ಆ ತನಕ ಹೋರಾಟ ಮಾಡುತ್ತೇವೆ. ನಿನ್ನ ಕಣ್ಮುಂದೆ ಪಾಪಿಗಳು ಸಾಯುವುದನ್ನು ಕಾಣುವ ವರೆಗೆ ನೀನಿಲ್ಲಿಯೇ ಕುಳಿತಿರಬೇಕು. ಉಳಿದುದೆಲ್ಲವನ್ನೂ ನಾವು ಮಾಡುತ್ತೇವೆʼ ಹೇಳಿದ ಹೋರಾಟಗಾರ. ಮಳೆ, ಗಾಳಿ, ಚಳಿ ಲೆಕ್ಕಿಸದೆ ಆತ್ಮ ಅಚಲವಾಗಿ ಕುಳಿತಿತು.

ಹುಡುಗಿಯ ಆತ್ಮವನ್ನು ಕಾಣುತ್ತಲೇ ಸೇರಿದವರ ಹೃದಯಗಳು ಕರಗಿದವು. ನಿಜವಾದ ಹಂತಕರಿಗೆ ಶಿಕ್ಷೆಯಾಗುವ ವರೆಗೂ ಅವಳ ಆತ್ಮಕ್ಕೆ ಶಾಂತಿ ಸಿಗಲಾರದೆಂದು ನಿರ್ಧರಿಸಿದರು. ಹಂತಕರನ್ನು ಕಂಡು ಹಿಡಿಯುವ ಕೆಲಸವನ್ನು ಅದೇ ಹೋರಾಟಗಾರನಿಗೆ ಒಪ್ಪಿಸಿದರು. ಹೋರಾಟಗಾರ ಕಾನೂನಿನ ಕುಣಿಕೆಗೆ ಸಿಗದ ಕೆಲವರ ಹೆಸರು ಹೇಳಿದ. ʻಅವರೇ ಅಪರಾಧಿಗಳುʼ ಎಂದು ಸೇರಿದ ಕೆಲವರು ಒಪ್ಪಿಕೊಂಡರು.

ಹೋರಾಟಗಾರ ಮೈಕ್‌ ಹಿಡಿದ. ಊರೂರಲ್ಲಿ ಮೆರವಣಿಗೆ ಮಾಡಿದ. ಸಾವಿರಾರು ಜನ ಸೇರಿಸಿದ. ಹುಡುಗಿಯ ಆತ್ಮಕ್ಕೆ ಶಾಂತಿ ಸಿಗುವಂತಾಗಲು ಎಲ್ಲರ ಸಹಕಾರವನ್ನು ಬೇಡಿದ. ಅವನ ಭಾಷಣ ಕೇಳಿದವರು ಕರಗಿ ಕಂಬನಿಯಾಗಿ ಹರಿದರು. ʻಹೌದು, ನಮಗೂ ಹೆಣ್ಣುಮಗಳಿದ್ದಾಳೆ. ನಾಳೆ ಇದೇ ಗತಿ ಅವರಿಗೂ ಆಗಬಾರದು. ಈ ದುಷ್ಟರನ್ನು ಹುಡುಕಿ ನ್ಯಾಯಾಲಯಕ್ಕೆ ಎಳೆದುತಂದು ಶಿಕ್ಷೆ ಕೊಡಿಸಲೇಬೇಕು. ತಗೊಳ್ಳಿ ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲʼ ಎಂದರು. ಸೇರಿದ ಜನ ಎಷ್ಟು ಕೊಟ್ಟರೋ ಗೊತ್ತಿಲ್ಲ. ಹೋರಾಟಗಾರ ತಂದಿದ್ದ ಗೋಣಿಚೀಲ ನೋಟಿನ ಕಟ್ಟುಗಳಿಂದ ತುಂಬಿಹೋಯಿತು.

ಹುಡುಗಿಯ ಜಾತಿ ಯಾವುದು ಎಂಬ ಪ್ರಶ್ನೆ ಬಂದಿತು. ಜಾತಿಯವರೆಲ್ಲ ಒಗ್ಗೂಡಿದರು. ಹೋರಾಟಕ್ಕೆ ಜನಧನ ಬೆಂಬಲದ ರಾಶಿ ಸುರಿಸಿದರು. ಇನ್ನೊಂದೆಡೆ ಎಲ್ಲೆಲ್ಲಿಂದಲೋ ಹೋರಾಟಗಾರರು, ಪ್ರಖರ ವಾಗ್ಮಿಗಳು ಚಿತ್ತೈಸಿದರು. ಅತ್ಯಾಚಾರ ಮಾಡಿದವರ ಕುಲಗೋತ್ರ ಉದ್ಧಾರ ಮಾಡುವಷ್ಟು ಹರಿತವಾದ ಮಾತುಗಳ ಬಾಣದಿಂದ ಮುಚ್ಚಿಬಿಟ್ಟರು. ʻನೊಂದ ಆತ್ಮಕ್ಕೆ ಶಾಂತಿ ಸಿಗುವ ತನಕ ವಿರಮಿಸುವುದಿಲ್ಲʼ ಎಂದು ಗುಡುಗಿದರು.

ಹೋರಾಟಗಾರನ ಮಾತಿನ ವರಸೆ ಸತ್ತಂತವರನು ಬಡಿದೆಬ್ಬಿಸಿತು. ಊರಿನಲ್ಲಿ ಎರಡು ಬಣಗಳಾದವು. ಪರ ವಿರೋಧದ ಅಲೆಯಲ್ಲಿ ಸಿಲುಕಿ ಅಗತ್ಯವಿದ್ದವರೂ ಸಂಬಂಧಿಸದವರೂ ಬಡಿದಾಡಿಕೊಂಡರು. ಹೋರಾಟಗಾರ ಎಲ್ಲವನ್ನೂ ಗಮನಿಸಿ ಮನಸ್ಸಿನಲ್ಲೇ ನಗುತ್ತಿದ್ದ.

ಕೆಲಸವಿಲ್ಲದೆ ಕುಳಿತಿದ್ದ ವಾಹಿನಿಗಳಿಗೆ ಪರ್ವ ಕಾಲ ಉದಯಿಸಿತು. ಕೆಲವರು ಆತ್ಮದ ಪರವಾಗಿ ಕಾರ್ಯಕ್ರಮಗಳನ್ನು ಮಾಡಿದರು. ಅತ್ಯಾಚಾರ ನಡೆದ ಸ್ಥಳವನ್ನು ತೋರಿಸಿದರು. ಹೆಣವನ್ನು ಎಸೆದು ಹೋದ ಜಾಗವನ್ನು ತೋರಿಸಿದರು. ಅವರದೇ ಆದ ತರ್ಕಗಳನ್ನು ಮಂಡಿಸಿದರು. ಶಂಕಿತ ಅಪರಾಧಿಗಳ ಮುಖವನ್ನು ಪ್ರದರ್ಶಿಸಿದರು. ಪ್ರಕರಣದ ಜಡ್ಜ್‌ ತಾವೇ ಆಗಿ ತೀರ್ಪು ನೀಡಿದರು.

ಇಷ್ಟೆಲ್ಲ ಮಾಡಿದರೂ ವಾಹಿನಿಯ ಮಂದಿಗೆ ಬಿಡಿಗಾಸೂ ಸಿಗಲಿಲ್ಲ. ಆಗ ಅವರ ತನಿಖಾ ವರದಿಯ ದಿಕ್ಕು ಬದಲಿಸಿದರು. ಸತ್ತವರ ಹಿತ ಕಟ್ಟಿಕೊಂಡರೆ ಅವರ ನೆತ್ತಿ ತಂಪಾಗುವುದೆ? ಶಂಕಿತರ ಪರ ನಿಂತರು. ಮಾನಗೆಟ್ಟು ಮುಖಕ್ಕೆ ಬಟ್ಟೆ ಮುಚ್ಚಿಕೊಂಡು ಓಡುತ್ತಿದ್ದವರು ನಿರಪರಾಧಿಗಳು ಎಂಬಂತೆ ತೀರ್ಪು ನೀಡಿದರು. ಆಗ ಅವರು ಕೊಟ್ಟ ಹಣದ ಮೊತ್ತ ಕಂಡು ಬೆರಗಾದರು. ಇನ್ನಷ್ಟು ವಾಹಿನಿಗಳ ಜನ ಜೊಲ್ಲು ಸುರಿಸಿಕೊಂಡು ಬಂದರು. ತನಿಖಾ ವರದಿಗಳ ಹೆಸರಿನಲ್ಲಿ ಎಷ್ಟು ಸಾಧ್ಯವೋ ಅಷ್ಟು ಹಣವನ್ನು ದನದ ಕೆಚ್ಚಲು ಖಾಲಿಯಾಗುವ ವರೆಗೆ ಹಾಲು ಹಿಂಡಿದ ಹಾಗೆಯೇ ಹಿಂಡಿದರು.

ಊರೂರುಗಳಲ್ಲಿ ಪ್ರತಿಭಟನೆಯ ಮೆರವಣಿಗೆಗಳಾದವು. ಭಾಷಣದ ಕಿಚ್ಚು ಧಗಧಗಿಸಿತು. ಊರೂರಿನ ಜನವೂ ಸತ್ತ ಹುಡುಗಿಯ ಅಂತಿಮ ಕ್ಷಣಗಳನ್ನು ನೆನೆದು ಕಂಬನಿ ಮಿಡಿಯಿತು. ಹುಡುಗಿಯ ಕುಟುಂಬದವರೂ ಮೆರವಣಿಗೆ ನಡೆದಲ್ಲಿಗೆ ಹೋಗಿ ತಮ್ಮ ಮಗಳಿಗೆ ನ್ಯಾಯ ಬೇಕು ಎಂದು ಅಂಗಲಾಚಿದರು. ರಾಜಕಾರಣಿ ಭರಮಯ್ಯ, ವಿರೋಧ ಪಕ್ಷದ ಪುಂಗಪ್ಪ ಒಂದೇ ವೇದಿಕೆಯಲ್ಲಿ ನಿಂತು ನ್ಯಾಯ ಕೊಡಿಸುವ ಭರವಸೆ ನೀಡಿದರು.

ಹುಡುಗಿಯ ಆತ್ಮಕ್ಕೆ ನೆಮ್ಮದಿ ಕೊಡಿಸಲು ಸರಕಾರವೂ ಬದ್ಧವಾಗಿದೆ ಎಂದರು ಸಚಿವರು. ಒಂದು ವರ್ಷ ದಾಟಿತು. ಎಲ್ಲವೂ ನೀರವ ಮೌನ. ಗಲಾಟೆಯಲ್ಲ. ಜಗಳವಿಲ್ಲ. ವಾಹಿನಿ ಮಂದಿಯ ಅನಿಷ್ಟ ಮಾತುಗಳಿಲ್ಲ. ಭಾಷಣಗಳಿಲ್ಲ. ಎಲ್ಲರೂ ಉಂಡು ತೇಗಿ ಸಂತೃಪ್ತಭಾವದಿಂದ ಕಾಣಿಸುತ್ತಿದ್ದಾರೆ.

ತನಗಾದ ಅನ್ಯಾಯಕ್ಕೆ ನ್ಯಾಯ ಸಿಗುತ್ತದೆಂದು ಭ್ರಮಿಸಿ ಆತ್ಮ ಗೋರಿಯ ಬಳಿ ಕುಳಿತುಕೊಂಡೇ ಇತ್ತು. ನಿಧಾನವಾಗಿ ಜನ ಸಮೂಹ ಕರಗುವುದು ಕಂಡು ಹತಾಶೆಯಿಂದ ಅದು ಉಳಿದಿದ್ದ ಒಬ್ಬನೇ ಒಬ್ಬನನ್ನು ಬಳಿಗೆ ಕರೆಯಿತು. ʻಅಣ್ಣ, ನನಗೆ ನ್ಯಾಯ ಕೊಡಿಸುವುದಾಗಿ ಹೇಳಿ ಗೋರಿಯಿಂದ ಎಬ್ಬಿಸಿದನಲ್ಲ, ಆ ಹೋರಾಟಗಾರ ಪುಣ್ಯಾತ್ಮ! ಎಲ್ಲಿ ಹೋದ?ʼ ವಿಚಾರಿಸಿತು.

ʻಅವನಾ?ʼ ಖೆಕ್‌ ಎಂದು ನಕ್ಕುಬಿಟ್ಟ ವ್ಯಕ್ತಿ. ʻಹೋರಾಟ ಬೇಡ ಅಂತ ಅವನಿಗೆ ಶಂಕಿತ ವ್ಯಕ್ತಿಗಳು ಚೀಲ ತುಂಬ ಹಣ ತಂದುಕೊಟ್ಟರು. ಹೊತ್ತುಕೊಂಡು ಹೋದ. ಹೊಸ ಕಾರು ತೆಗೆದಿದ್ದಾನೆ. ಮನೆ ಕಟ್ಟಿಸಿದ್ದಾನೆ. ಕೃಷಿ ಆರಂಭಿಸಿದ್ದಾನೆ. ಇಲ್ಲಿದ್ದರೆ ಅದನ್ನೆಲ್ಲ ಯಾರು ಮಾಡುತ್ತಾರೆ?ʼ ಕೇಳಿದ.

ʻತುಂಬ ಜನ ಭಾಷಣಕಾರರು ಬಂದಿದ್ದರು. ಅವರೀಗ ಯಾವ ಊರಿನಲ್ಲಿ ನನ್ನ ಬಗ್ಗೆ ಭಾಷಣ ಮಾಡುತ್ತಿದ್ದಾರೆ?ʼ ಕೇಳಿತು ಆತ್ಮ.

ʻಪಕ್ಕದ ಊರಿನಲ್ಲಿ ಇನ್ನೊಂದು ಆತ್ಮವನ್ನು ಮೇಲಕ್ಕೆತ್ತಿದ್ದಾರೆ. ಇವರೆಲ್ಲ ಅಲ್ಲಿ ಪ್ರತಿಭಟನೆ ಆರಂಭಿಸಿದ್ದಾರೆʼ ಎಂದ ಅವನು.

ʻಅಷ್ಟೊಂದು ಯೂ ಟ್ಯೂಬರ್ಸ್, ವಾಹಿನಿಯವರು ನನ್ನ ಬಗೆಗೇ ಎಪಿಸೋಡ್‌ ಮಾಡ್ತಿದ್ರಲ್ಲ, ಒಬ್ಬರೂ ಬಂದಿಲ್ಲವೆ?ʼ ಆತ್ಮಕ್ಕೆ ಕಂಬನಿ ಹರಿಯಿತು.

ʻಇನ್ನು ನಿನ್ನ ಹೆಸರೆತ್ತಿದರೆ ಬಿಡಿಗಾಸೂ ಹುಟ್ಟುವುದಿಲ್ಲ ಎಂದು ತಿಳಿದೇ ಅವರು ಇನ್ನೊಂದು ಆತ್ಮದ ಬಗೆಗೆ ಹೊಸ ಎಪಿಸೋಡ್‌ ಮಾಡ್ತಾ ಇದ್ದಾರೆ. ಮುಗ್ಧೆ ನೀನು. ಬೆಲ್ಲ ಮುಗಿದ ಮೇಲೆ ಇರುವೆ ಯಾಕಿರುತ್ತೆ ಹೇಳು?ʼ ನಗುಬಂತು ಅವನಿಗೆ.

ʻಹಾಗಿದ್ರೆ ನನ್ನ ಸಾವಿಗೆ ಕಾರಣರಾದವರಿಗೆ ಶಿಕ್ಷೆಯಾಯಿತು ಅನ್ನುʼ ಆತ್ಮ ಅವನತ್ತ ನೋಡಿತು.

ಇನ್ನೂ ಜೋರಾಗಿ ನಕ್ಕ ಅವನು. ʻಯಾವ ಕಾಲದಲ್ಲಿದ್ದೀಯಾ ನೀನು! ಇದು ಕಲಿಯುಗ ಕಣಮ್ಮ, ರಾಮಾಯಣದ ಯುಗವಲ್ಲ. ಆಗ ಇದ್ದವನು ಒಬ್ಬನೇ ರಾವಣ. ಈಗ ನಿನಗೆ ನ್ಯಾಯ ಕೊಡಿಸುವುದಾಗಿ ಬಂದವರೆಲ್ಲ ಶ್ರೀರಾಮಚಂದ್ರರು ಅಂದುಕೊಂಡೆಯಾ? ನಿನ್ನ ಪರವಾಗಿ ನಿಂತವರು, ಹಂತಕರ ಪರವಾಗಿ ಬ್ಯಾಟಿಂಗ್‌ ಮಾಡಿದವರು ಎಲ್ಲರೂ ರಾವಣರೇ. ಇನ್ನೂ ನೂರು ವರ್ಷ ಕಳೆದರೂ ಯಾರೂ ನಿನ್ನ ನಿಜವಾದ ಹಂತಕರನ್ನು ಕಂಡು ಹಿಡಿದು ಶಿಕ್ಷೆ ಕೊಡಿಸುವುದಿಲ್ಲ. ಯಾರಿಗೂ ಅದು ಬೇಕಾಗಿಲ್ಲʼ ಸತ್ಯವನ್ನು ನಿಷ್ಠುರವಾಗಿ ಹೇಳಿದ.

ʻನನ್ನ ಹೆತ್ತವರು ನನಗೆ ನ್ಯಾಯ ಸಿಗಲಿಲ್ಲವೆಂದು ಮರುಗುತ್ತಿದ್ದರಲ್ಲ, ಏನಾದರು?ʼ ಆತ್ಮ ವಿಚಾರಿಸಿತು.

ʻಇವರೊಂದಿಗೆ ಹೋರಾಟಕ್ಕೆ ಬಂದು ಸಾಲ ಮಾಡಿಕೊಂಡರು. ಮನೆ, ಮಠ ಮಾರಾಟ ಮಾಡಿ ಊರಿನಿಂದ್ಲೇ ಹೋದರುʼ ಅವನು ಬೇಸರದ ಸುದ್ದಿ ಹೇಳಿದ.

ʻಎಲ್ಲರೂ ಹೋದ ಮೇಲೆ ನೀನು ಏಕೆ ಇಲ್ಲಿ ಉಳಿದಿದ್ದೀ? ನೀನೂ ಹೋಗಬಾರದೆ?ʼ ಆತ್ಮ ಕೇಳಿತು.

ʻನಿನ್ನ ಆತ್ಮ ಅತ್ಯಾಚಾರ ಮಾಡಿದೆ ಎಂದು ಆರೋಪಿಸಿದರಲ್ಲ, ಅದೇ ವ್ಯಕ್ತಿ ನಾನು. ಸತ್ತುಹೋದೆ. ನಿರ್ದೋಷಿ ಎನಿಸಿಕೊಂಡು ನ್ಯಾಯಾಲಯದಿಂದ ಹೊರಬಂದರೂ ನನ್ನ ದೇಹಕ್ಕೆ ಗೋರಿ ತೋಡಲು ಯಾರೂ ಸ್ಥಳ ಕೊಡಲಿಲ್ಲ. ಹೀಗಾಗಿ ಇಲ್ಲಿ ನಿಂತಿದ್ದೇನೆ. ನಾನೂ ಒಂದು ಆತ್ಮʼ ಎಂದ ಅವನು.

ʻನನ್ನ ಸಾವಿಗೆ ಕಾರಣರಾದವರು ಎನಿಸಿಕೊಂಡವರಿದ್ದರಲ್ಲ, ಅವರಿಗೆ ಏನು ದಂಡನೆಯಾಯಿತು?ʼ ಆತ್ಮಕ್ಕೆ ಕುತೂಹಲ. ʻಆಗುವುದೇನು, ಏನೂ ಆಗಿಲ್ಲ. ಸುಖ ಸಂತೋಷದಿಂದ ಬದುಕುತ್ತಿದ್ದಾರೆʼ ಎಂದಿತು ಎರಡನೆಯ ಆತ್ಮ.

ʻಹೀಗಾ ಕತೆ? ಇವರು ಎಲ್ಲರಿಗೂ ನನ್ನ ಆತ್ಮ ಜೀವಂತವಾಗಿರುವುದಷ್ಟೇ ಬೇಕು. ನ್ಯಾಯ ಸಿಗುವುದು ಮುಖ್ಯವಲ್ಲʼ ಎಂದು ಗೊಣಗುತ್ತ ಆತ್ಮ ಮತ್ತೆ ಗೋರಿಯೆಡೆಗೆ ನುಸುಳಲು ಪ್ರಯತ್ನಿಸಿತು. ಆದರೆ ಅಲ್ಲಿ ಗೋರಿಯೇ ಇರಲಿಲ್ಲ. ಯಾರೋ ಒಬ್ಬನ ಐಷಾರಾಮೀ ಬಂಗಲೆ ತಲೆಯೆತ್ತಿತ್ತು. ಹುಡುಗಿಯ ಆತ್ಮಕ್ಕೆ ನೆಮ್ಮದಿಯ ಸ್ಥಳವನ್ನೂ ಇಲ್ಲದ ಹಾಗೆ ಮಾಡಿ ಅದೆಷ್ಟೋ ಕಾಲದ ವರೆಗೂ ಆತ್ಮ ಅಲೆದಾಡುವ ಸ್ಥಿತಿಗೆ ಅವನು ತಂದುಬಿಟ್ಟಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT