ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ. ರಾಮಕೃಷ್ಣ ಶಾಸ್ತ್ರಿ ಅವರ ಕಥೆ: ತೀರ್ಮಾನ

ಪ. ರಾಮಕೃಷ್ಣ ಶಾಸ್ತ್ರಿ
Published 3 ಆಗಸ್ಟ್ 2024, 23:38 IST
Last Updated 3 ಆಗಸ್ಟ್ 2024, 23:38 IST
ಅಕ್ಷರ ಗಾತ್ರ

ಮುಸ್ಸಂಜೆಯ ಹೊತ್ತು. ಕಾಡಿನ ದಟ್ಟ ಮರಗಳ ನೆರಳಿನಿಂದಾಗಿ ಸೂರ್ಯ ಎಂದಿನಂತೆ ಸ್ವಲ್ಪ ಬೇಗನೆ ಮರೆಯಾಗಿಬಿಟ್ಟಿದ್ದ. ಜೀರುಂಡೆಗಳು ಒಂದೇ ಸಮನೆ ಧ್ವನಿಯಂತ್ರದ ಚಕ್ರಕ್ಕೆ ಕಿರೀ ಎಂದು ಕೀಲಿ ಕೊಡುತ್ತಲೇ ಇದ್ದವು. ಕಾಗೆಗಳ ಸಾಲು ಕಾಕಾ ಎಂದು ಕೂಗುತ್ತ ಗೂಡಿನ ಕಡೆಗೆ ಹಾರಿಹೋದವು.

ಕುರುಂಬಿಲ ಹೊನ್ನೆಣ್ಣೆಯ ದೀಪ ಉರಿಸಿ, ಅದರ ಬೆಳಕಿನಲ್ಲಿ ಮೀನು ಹಿಡಿಯುವ ಬುಟ್ಟಿ ಮಾಡಲೆಂದು ಕಾಡಿನಿಂದ ತಂದ ಹಸಿ ಬಿದಿರನ್ನು ಸೀಳುತ್ತಾ ಇದ್ದ. ಅಷ್ಟೊತ್ತಿಗೆ ಕಾಡಿನ ಕುರುಚಲು ಗಿಡಗಳ ನಡುವೆ ದಾರಿ ಮಾಡಿಕೊಂಡು ಯಾರೋ ಬರುತ್ತಿರುವಂತೆ ಅನಿಸಿತು. ಕುರುಂಬಿಲ ಆ ಕಡೆಗೇ ನೋಡುತ್ತ ನಿಂತ. ಬಂದಿರುವವ ಪ್ಯಾಂಟು ಹಾಕಿದ್ದಾನೆ. ಮೇಲೊಂದು ಕೋಟು ಇದೆ. ಹೆಗಲಲ್ಲಿ ಕೋವಿ ಇದೆ. ಕಾಡಿನ ತಂಪಿನಲ್ಲೂ ಕುರುಂಬಿಲ ಬೆವತುಬಿಟ್ಟ. ಬಂದಿರುವವನ ಗುರುತು ಸಿಕ್ಕಿತು, ಅವನು ಕಿರಿಸ್ತಾನರ ಜೋನು. ಇವನ್ಯಾಕೆ ಬಂದ ಮುಂಡೇಮಗ? ಯಾಕೋ ಭಯವಾಯಿತು ಕುರುಂಬಿಲನಿಗೆ.

ಹಾಡಿಯ ಜನರೆಲ್ಲ ಜೋನು ಬಗ್ಗೆ ಹಲವು ಕತೆಗಳನ್ನು ಹೇಳುವುದು ಕುರುಂಬಿಲನ ಕಿವಿಗೂ ಬಿದ್ದಿತ್ತು. ಅವನು ಉಂಡಾಡಿ ಗುಂಡನಂತೆ ಕೋವಿ ಹಿಡಿದುಕೊಂಡು ತಿರುಗುತ್ತಿದ್ದ. ಕೋವಿಯ ಗುರಿ ಹಿಡಿದು ಹೊಡೆದರೆ ಒಂದೇಟಿಗೇ ಹಾರುವ ಹಕ್ಕಿಯಾಗಲಿ, ಓಡುವ ಹಂದಿಯಾಗಲಿ ಮರ್ಮಸ್ಥಾನಕ್ಕೆ ಗುಂಡು ತಗುಲಿ ಕೆಳಗುರುಳುವ ಸೋಜಿಗವನ್ನೂ ಕಂಡವರಿದ್ದರು. ಯಾರ ಅಂಗಳಕ್ಕಾದರೂ ಅವನು ಕಾಲಿಟ್ಟು ಅಲ್ಲಿ ಸಾಕಿದ ಹುಂಜವನ್ನೋ, ನಾಯಿಮರಿಯನ್ನೋ ನೋಡಿ `ಇದು ನನಗೆ ಬೇಕು' ಎಂದು ಎತ್ತಿಕೊಂಡರೆ ಯಾರಿಗೂ ತಡೆಯುವ ಎದೆಗಾರಿಕೆ ಇರಲಿಲ್ಲವಂತೆ. ಕಟ್ಟುಮಸ್ತಾಗಿರುವ ಅವನು ಕೈಯಿಂದ ಒಂದು ಹೊಡೆದರೆ ಸಾಕು, ಸಣಕಲು ದೇಹದವರು ಚಟ್ನಿಯಾಗುತ್ತಿದ್ದರಂತೆ. ಹಾಗೆಯೇ ಹುಮ್ಮಸ್ಸಿಗಿರಲಿ ಎಂದು ಹೆಚ್ಚಿನ ಮನೆಯವರು ಗೇರುಹಣ್ಣು, ಬೈನೆಹಣ್ಣು ಧಾರಾಳವಾಗಿ ಸಿಗುವ ಕಾಲದಲ್ಲಿ ಸ್ವಂತಕ್ಕೆ ಕುಡಿಯಲು ಅಂತ ಕದ್ದು ಕಳ್ಳಭಟ್ಟಿ ತಯಾರಿಸಿಕೊಳ್ಳುತ್ತಿದ್ದರು. ಗಾಜಿನಶೀಸೆಗಳಲ್ಲಿ ತುಂಬಿಸಿ ಮಣ್ಣಿನಲ್ಲಿ ಹೂಳಿಟ್ಟರೂ ಅವನ ಮೂಗಿಗೆ ವಾಸನೆ ಹೊಡೆಯುತ್ತಿತ್ತಂತೆ. ಅವನಿಗೆ ಒಂದೆರಡು ಬಾಟಲಿ ಇನಾಮಾಗಿ ಕೊಡದಿದ್ದರೆ ಎದೆಗೇ ಕೋವಿಯನ್ನು ಗುರಿಯಿಟ್ಟು ಹೆದರಿಸುತ್ತಿದ್ದನಂತೆ.

ತಾಳೆಮರದಿಂದ ಸೇಂದಿಯಿಳಿಸುವ ಪೂಜಾರಣ್ಣ ಕೂಡ ಹಾಡಿಯವರಿಗೆ ದುಡ್ಡು ಕೊಡದೆ ಕಳ್ಳು ಮೊಗೆಯುತ್ತಿರಲಿಲ್ಲ. ಆದರೆ ಜೋನು ಕೇಳಿದರೆ ಸಾಕು, ತುಟಿ ತೆರೆಯದೆ ಕುಡಿಯುವಷ್ಟು ಸೇಂದಿ ಬಗ್ಗಿಸುವುದನ್ನು ಕಣ್ಣಾರೆ ಕಂಡವರಿದ್ದರು. ಯಾವ ಪೋಲೀಸೂ, ಕೋರ್ಟೂ, ಕಾನೂನೂ ಜೋನನ ಮಟ್ಟಿಗೆ ತೊಂದರೆ ಮಾಡುವುದಿಲ್ಲ ಎಂದು ಹಾಡಿಯವರು ತಿಳಿದುಕೊಂಡಿದ್ದ ಕಾರಣ ಜೋನು ಬಂದು ಕೇಳಿದರೆ ಇಲ್ಲವೆನ್ನದೆ ಯಾವುದೇ ವಸ್ತುವನ್ನೂ ತಕರಾರಿಲ್ಲದೆ ಕೊಟ್ಟುಬಿಡುತ್ತಿದ್ದರು.

ಜೋನು ತನ್ನ ಅಂಗಳಕ್ಕೆ ಯಾಕಾದರೂ ಬಂದಿರಬಹುದು? ಅವನಿಗೆ ಇಷ್ಟವಾಗುವ ಯಾವ ವಸ್ತುವೂ ತನ್ನ ಅಂಗಳದಲ್ಲಿಲ್ಲ. ಕೋಳಿಯಿಲ್ಲ, ಹಂದಿ ಮರಿಯಿಲ್ಲ, ನಾಯಿಯೂ ಇಲ್ಲ, ಸಾರಾಯಿ ತೆಗೆಯುವುದೂ ಇಲ್ಲ. ಮತ್ತೇಕೆ? ಎಂದು ಯೋಚಿಸುತ್ತಿರುವಾಗಲೇ ಅವನು ಅಧಿಕಾರವಾಣಿಯಿಂದ, ‘ಕುರುಂಬಿಲಾ, ನಿನ್ನ ತಂಗಿ ಮಗಳು ಚಿಂಗಾರಿ ಮನೇಲಿಲ್ವಾ? ಕರೀ ಅವಳನ್ನು’ ಎಂದು ಹೇಳಿ ಕೋವಿಯನ್ನು ಮನೆಯ ಮೆಟ್ಟುಗಲ್ಲಿನ ಮೇಲಿಟ್ಟು ಠೀವಿಯಿಂದ ನಿಂತ.


ಕುರುಂಬಿಲನಿಗೆ ನಾಲಿಗೆಯಲ್ಲಿ ಪಸೆಯಿರಲಿಲ್ಲ. ಬೆಳೆದು ನಿಂತ ಹೆಣ್ಣುಮಗಳು. ಹೊಟ್ಟೆಗೆ ಸರಿಯಾಗಿ ಕೂಳಿಲ್ಲದಿದ್ದರೂ ಗುಂಡುಗುಂಡಗೆ ಬೆಳೆದಿದ್ದಾಳೆ. ಒಳ್ಳೆಯ ಸೀರೆ ಉಡಲಿಲ್ಲ, ಕುಪ್ಪಸ ತೊಡಲಿಲ್ಲವಾದರೂ ಕಂಡವರಿಗೆ ಅವಳ ಆಕರ್ಷಕವಾದ ಮೈಯ ಏರುತಗ್ಗುಗಳನ್ನು ಸ್ವಾದಿಷ್ಟವಾಗಿ ಅದೇ ಉಡುಪು ಎತ್ತಿ ತೋರಿಸುತ್ತಿತ್ತು. ಹಿಂಭಾಗದ ಪುಟ್ಟ ಪರ್ವತ, ಮುಂಭಾಗದ ಜೋಡಿ ಕಳಶಗಳು, ಬಣ್ಣ ಕಪ್ಪಾದರೂ ಕೆಂಪಗಿರುವ ತುಟಿಗಳು, ಅಚ್ಚ ಬಿಳಿಯ ಹಲ್ಲುಗಳನ್ನು ತೋರಿಸಿ ಬೀರುವ ಸ್ವಚ್ಛ ನಗು ಅವಳನ್ನು ಹಾಡಿಯ ಸುರಸುಂದರಿಯರ ಸಾಲಿಗೆ ಸೇರಿಸಿತ್ತು. ತಂಗಿಯ ಗಂಡ ತೀರಿಕೊಂಡ ಮೇಲೆ ಕುಲದ ಪದ್ಧತಿಯ ಪ್ರಕಾರ ಹೆಂಡತಿಗೆ ಅಲ್ಲಿ ಯಾವ ಹಕ್ಕೂ ಇರಲಿಲ್ಲ. ಅವಳು ತನ್ನ ಮಕ್ಕಳ ಜೊತೆಗೆ ತವರುಮನೆ ಸೇರಲೇಬೇಕು. ಹಾಗೆ ವಿಧವೆಯಾದ ತಂಗಿ ಮಾಚಮ್ಮ ಸಹಜವಾಗಿ ಚಿಂಗಾರಿಯೊಂದಿಗೆ ಕುರುಂಬಿಲನ ಮನೆಗೆ ಬಂದು ವರ್ಷಗಳೇ ಕಳೆದಿದ್ದವು.

ತಂಗಿ ಮನೆಗೆ ಬಂದು ಸಂಸಾರದ ಹೊರೆ ಹೆಚ್ಚಾಯಿತೆಂದು ಕುರುಂಬಿಲ ಕಳವಳ ಪಡಬೇಕಾಗಿರಲಿಲ್ಲ. ಮಾಚಮ್ಮ ಕೂಡ ಬೇರೆಯವರ ಹೊಲಕ್ಕೆ ದುಡಿಮೆಗೆ ಹೋಗಿ ಅಕ್ಕಿ, ಭತ್ತ ತರುತ್ತಿದ್ದಳು. ಬಿದಿರಿನಿಂದ ಮೀನು ಹಿಡಿಯುವ ಮಕ್ಕೇರಿ ತಯಾರಿಸಿ ಮಾರಾಟಕ್ಕೆ ಕೊಡುತ್ತಿದ್ದಳು. ಕುರುಂಬಿಲನಿಗೆ ಮಕ್ಕಳಿರದ ಕಾರಣ ಚಿಂಗಾರಿಯನ್ನು ಅವನು, ಅವನ ಹೆಂಡತಿ ಇಬ್ಬರೂ ಸ್ವಂತ ಮಗಳಂತೆ ಮಮತೆಯಲ್ಲೇ ಬೆಳೆಸಿದ್ದರು. ಕಳೆದ ವರ್ಷ ಮೈ ನೆರೆದಿದ್ದ ಕಾರಣ ಅವಳಿಗೆ ಮದುವೆ ಮಾಡಲು ಕುರುಂಬಿಲ ಪ್ರಯತ್ನ ಮಾಡುತ್ತಲೇ ಇದ್ದ. ಆದರೆ ಹಾಳು ವರದಕ್ಷಿಣೆಯ ಬೇಡಿಕೆಯಿಂದಾಗಿ ಅವನಿಗೆ ಸಂಬಂಧ ಕುದುರಿಸಲು ಕಷ್ಟವಾಗಿತ್ತು. ಊರಿನ ಬ್ರಹ್ಮಚಾರಿಗಳೆಲ್ಲರ ದೃಷ್ಟಿಯೂ ಜಾತಿ, ಮತ ಭೇದವಿಲ್ಲದೆ ಚಿಂಗಾರಿಯ ಅಂಗಾಂಗಗಳ ಮೇಲೆ ಸವಾರಿ ಮಾಡುತ್ತಿದ್ದುದನ್ನು ಗಮನಿಸಿದ ಮೇಲೆ ಅವನು ಕುಂಬಳಕಾಯಿ ಕೆಡುವ ಮೊದಲು ಸಂತೆಗೆ ತಲುಪಿಸಬೇಕು ಎಂದು ಮನಸ್ಸಿನಲ್ಲಿ ಯೋಚನೆ ಮಾಡುತ್ತ ಇದ್ದ.

ಹೀಗಿರುವಾಗ ಜೋನು ಚಿಂಗಾರಿಯನ್ನು ಕರೆದಿರುವ ಉದ್ದೇಶ ಬೇರೆ ಯಾವುದಕ್ಕೂ ಅಲ್ಲ ಎಂಬುದು ಅರ್ಥವಾಗದಷ್ಟು ಹೆಡ್ಡ ಕುರುಂಬಿಲನೇನೂ ಆಗಿರಲಿಲ್ಲ. ಆದರೆ ಅವಳು ಮನೆಯಲ್ಲಿಲ್ಲ ಎಂದು ಸುಳ್ಳು ಹೇಳಲೂ ಅವನಿಗೆ ನಾಲಿಗೆ ಏಳಲಿಲ್ಲ. ಹಾಗೆ ಹೇಳಿದರೆ ಜೋನು ಮನೆಯೊಳಗೆ ಹೊಕ್ಕು ಹುಡುಕುತ್ತಾನೆ. ಸುಳ್ಳು ಹೇಳಿದ್ದಕ್ಕೆ ಪ್ರಾಯಶ್ಚಿತ್ತವೆಂಬಂತೆ ತನಗೇನು ಕೇಡು ಮಾಡುತ್ತಾನೋ ಹೇಳಲಾಗದು. ಇದನ್ನೆಲ್ಲ ಲೆಕ್ಕ ಹಾಕಿಯೇ ಕುರುಂಬಿಲ, ‘ಚಿಂಗಾರೂ, ಪುಟ್ಟ, ಸೋಮೇರು ಕರೀತಿದಾರೆ, ಹೊರಕ್ಕೆ ಬಂದು ಯಾಕೆ ಅಂತ ಕೇಳವ್ವಾ' ಎಂದು ಕೂಗಿದ.

ಚಿಂಗಾರು ಹೊರಗೆ ಬಂದಳು. ಊಟ ಕಾಣದವ ಅನ್ನ ಕಂಡ ಕೂಡಲೇ ಕಣ್ಣುಗಳನ್ನು ಅರಳಿಸುವ ಹಾಗೆ ಈ ಅನಾಘ್ರಾತ ಹೂವನ್ನು ನೋಡಿದ ಕೂಡಲೇ ಜೋನನ ನರನಾಡಿಗಳ ತುಂಬ ಬಯಕೆಯ ಬೆಂಕಿ ಸರಸರನೆ ಹರಿಯಿತು. ಆಸೆ ತುಂಬಿದ ಕಣ್ಣುಗಳಿಂದ ಅವಳ ದೇಹವನ್ನಿಡೀ ವೀಕ್ಷಿಸಿದ. ಕೈಗಳನ್ನು ಹಿಡಿದುಕೊಂಡ. ‘ಬಾ ನ್ನೊಂದಿಗೆ. ನನಗೆ ನಿನ್ನ ಸುಖ ಬೇಕು' ಎಂದು ಎಳೆಯುತ್ತ ಅಂಗಳಕ್ಕಿಳಿದ. ಅವಳು ಪ್ರತಿಭಟಿಸಲಿಲ್ಲ. ಅವನು ಎಳೆದ ಹಾಗೆ ಅವನೊಂದಿಗೆ ಅಂಗಳಕ್ಕಿಳಿದಳು. ಕಾಡಿನ ದಟ್ಟ ಮರಗಳ ಎಡೆಯಲ್ಲಿ ಹೋಗಹೋಗುತ್ತ ಅವರಿಬ್ಬರೂ ಕಾಣದಾದರು.

ತನ್ನ ಕಣ್ಮುಂದೆಯೇ ಬೆಳೆದ ಹುಡುಗಿಯನ್ನು ಅನ್ಯ ಜಾತಿಯನೊಬ್ಬ ಕರೆದೊಯ್ಯುವಾಗ ಪ್ರಾಣಭಯದಿಂದ ತತ್ತರಿಸಿದ್ದ ಕುರುಂಬಿಲನಿಗಾಗಲಿ ಅವನ ಹೆಂಡತಿಗಾಗಲಿ ತಡೆಯುವ ಶಕ್ತಿಯಿರಲಿಲ್ಲ, ಕೂಗಿಕೊಳ್ಳಲೂ ದನಿ ಇರಲಿಲ್ಲ. ಘಟನೆ ನಡೆದು ಎಷ್ಟೋ ಹೊತ್ತಾದ ಮೇಲೆ ಕುರುಂಬಿಲ ಅಪಾಯ ಬಂದಾಗ ಹಾಡಿಯಲ್ಲಿ ಕೂಗಿಕೊಳ್ಳುವ ರೀತಿಯಲ್ಲೇ ವಿಶಿಷ್ಟ ದನಿಯಿಂದ ಕೂಗಿಕೊಂಡ. ಈ ಕೂಗು ದೂರದೂರದ ಮನೆಗಳಿಗೂ ತಲುಪಿತು. ಮನೆಯ ಗಂಡಸರು ಒಣಗಿದ ಮಡಲಿನಿಂದ ಕಟ್ಟಿ ಸಿದ್ಧವಾಗಿಟ್ಟ ಸೂಟೆಯನ್ನು ಉರಿಸಿಕೊಂಡು ಕುರುಂಬಿಲನ ಮನೆಗೆ ಓಡೋಡಿ ಬಂದರು. `ಕುರುಂಬಿಲಣ್ಣ, ಏನಾಯಿತು, ಹಂದಿ ಗಿಂದಿ ಬಂತಾ? ಅಲ್ಲ ಹುಲಿ ಗರ್ಜನೆ ಏನಾದ್ರೂ ಕೇಳಿಸ್ತಾ?' ವಿಚಾರಿಸಿದರು.
`ಇಲ್ಲ ಕಣಪ್ಪೋ, ನನ್ ಮನಿ ಮರ್ವಾದೆ ಹೋಗ್ಬಿಡ್ತು' ಎಂದು ಬಿಕ್ಕಿ ಬಿಕ್ಕಿ ಅಳುತ್ತ ಕುರುಂಬಿಲ ನಡೆದ ಘಟನೆಯನ್ನು ವಿವರಿಸಿದ.

ಬಂದವರಲ್ಲಿ ದಾಂಡಿಗನಾಗಿದ್ದ ಸೋಮು, `ಎಷ್ಟೊತ್ತಿಗೆ ಇದು ನಡೀತು?' ಕೇಳಿದ. `ಒಂದು ಊಟ ಮಾಡಿ ಏಳೋವಷ್ಟು ಹೊತ್ತು ಮೊದಲು ಅಷ್ಟೇಯ' ಎಂದು ಕುರುಂಬಿಲ ಹೇಳಿದ. `ಹಂಗಾದರೆ ಹೆಚ್ಚು ದೂರ ಹೋಗಿರ್ಲಿಕ್ಕಿಲ್ಲ. ಇಲ್ಲೇ ಹತ್ತಿರದ ಪೊದೇಲಿ ಅವಳೊಟ್ಟಿಗೆ ಮಕ್ಕೊಂಡಿರಬಹುದು. ಕೈಲಿ ಸೂಟೆ ಇದೆ. ಹಸೀ ಮರದ ಒಂದೊಂದು ಬಡಿಗೆ ತಕ್ಕಳ್ಳಿ. ಹಂದಿ ಬೇಟೇಲಿ ಹಂದಿ ಹುಡುಕಿದಂಗೆ ಪೊದೆಗಳಿಗೆ ಬಾರಿಸಿಕೊಂಡು ಹೋಗೋಣ. ಸಿಕ್ಕಿದ್ರೆ ಎಲ್ರೂ ಸೇರಿ ಹೊಡೆದು ಮತ್ತೆ ಮಗ ಏಳದಂಗೆ ಮಾಡಿದ್ರಾಯ್ತು' ಎಂದು ಸೋಮು ಎಲ್ಲರಿಗೂ ಉಮೇದು ತುಂಬಿಸಿದ. `ಹೊಡೆಯುವಾಗ ಎಚ್ಚರ. ನಮ್ ಹುಡುಗೀಗೆ ಏಟು ಗೀಟಾದೀತು' ಎಂದ ಪರಮೇಶಿ.

ಬಾಯಲ್ಲಿ ಬೊಬ್ಬೆ ಹೊಡೆಯುತ್ತ ಕಡುಗತ್ತಲಿನಲ್ಲಿ ಎಲ್ಲರೂ ಒಂದು ಪೊದೆಯನ್ನೂ ಬಿಡದೆ ಜಾಲಾಡಿಸುವಾಗ ಬೇಟೆ ನಾಯಿಗಳೂ ಕಂಯಿ ಕುಂಯಿ ಎನ್ನುತ್ತ ಪೊದೆ ಮೂಸಿಕೊಂಡು, ಕಾಲೆತ್ತಿ ಉಚ್ಚೆ ಹೊಯ್ದುಕೊಂಡು ಯಜಮಾನರ ಕಾಯಕಕ್ಕೆ ಸಹಕಾರ ನೀಡಿದವು. ಒಂದೆಡೆ ನಾಯಿಗಳು ಬೇಟೆ ಕಂಡ ಹಾಗೆ ಗುಂಪುಗೂಡಿ ಬೊಗಳುತ್ತ ಬೇಟೆ ಅಲ್ಲಿಯೇ ಇರುವಂತೆ ಪೊದೆಗೆ ಸುತ್ತು ಬಂದು ಬೊಗಳುವುದು ನೋಡಿ, `ಬೋಳಿಮಗ ಅದ್ರಲ್ಲೆ ತಬ್ಕೊಂಡು ಮಲಗಿರ್ಬೇಕು, ಹೋಗಿ ಬಡಿಗೆಯಿಂದ ಹೊಡೀರಿ' ಎಂದು ಸೋಮು ಸರ್ವ ಶಕ್ತಿಯನ್ನೂ ಕೇಂದ್ರೀಕರಿಸಿ ಅತ್ತ ಧಾವಿಸಿದ. ಹಿಂದುಮುಂದು ನೋಡದೆ ಎಲ್ಲರೂ ಅರೆ ಬೆಳಕಿನಲ್ಲಿ ಪೊದೆಗೆ ಹೊಡೆಯುವಾಗಲೂ ಮಂಜ, `ನೋಡ್ಕೊಳ್ರಪ್ಪೋ, ನಮ್ ಹುಡುಗೀಗೆ ಏನೂ ಮಾಡ್ಬೇಡಿ' ಎಂದು ಎಚ್ಚರಿಸಿದ.

ಹೊಡೆದು ಹೊಡೆದು ಬಡಿಗೆಗಳು ಮುರಿದುಹೋದರೂ ಪೊದೆಯಲ್ಲಿ ಮಲಗಿದವರು ಯಾಕೆ ಏಳಲಿಲ್ಲ, ಎಲ್ಲಾದರೂ ಮರ್ಗಾಯಿ ಆಗಿಬಿಟ್ಟರೋ ಎಂಬ ಭಯದಿಂದ ಕುರುಂಬಿಲ ಎಲ್ಲರೂ ಜತೆಗಿರುವ ಕಾರಣ ಧೈರ್ಯದಿಂದಲೇ ಹೋಗಿ ನೋಡಿದರೆ ಪೊದೆ ಪುಡಿ ಪುಡಿಯಾಗಿತ್ತು. ಬಡಿಗೆಯ ಪೆಟ್ಟಿನಿಂದ ತಪ್ಪಿಸಿಕೊಂಡು ಹೆಬ್ಬಾವೊಂದು ಸಲೀಸಾಗಿ ಪೊದೆಯಿಂದ ಹೊರಗೆ ಬಂದು ಹರಿದುಕೊಂಡು ಹೋಗುವುದು ಕಾಣಿಸಿತು. ಥೂ, ಇವನಲ್ಲವ? ಎಂದು ಎಲ್ಲರೂ ಬೇಸರಪಟ್ಟುಕೊಂಡರು. ಅಷ್ಟರಲ್ಲಿ ಮಳೆ ಬರುವ ಲಕ್ಷಣಗಳು ಕಾಣಿಸಿದವು. ಕೈಯಲ್ಲಿರುವ ಸೂಟೆಗಳು ನಂದಿಹೋದರೆ ಬೆಳಗಾಗುವ ವರೆಗೂ ನಡು ಕಾಡಿನಲ್ಲೇ ಇರಬೇಕಾದೀತು ಎಂಬ ಸತ್ಯದ ಅರಿವಾಗಿ ಮರುದಿನ ಬೆಳಗಾದ ಕೂಡಲೇ ಹುಡುಕಾಟ ಮುಂದುವರೆಸಲು ನಿರ್ಧರಿಸಿ ಅವರವರ ಮನೆಗಳ ಕಡೆಗೆ ಮುಖ ಮಾಡಿದರು.

ಮರುದಿನ ಹಗಲಿನಲ್ಲಿ ಕಾಡಿನ ಎಲ್ಲ ಗುಹೆ, ಪೊದೆ, ಮರಗಳ ಮರೆಯಿರುವ ಸ್ಥಳವನ್ನೂ ಬಿಡದೆ ಹುಡುಕಿದ್ದೇ ಬಂತು. ಜೋನು ಎಲ್ಲಿಯೂ ಕಾಣಿಸಲಿಲ್ಲ. ಹುಡುಗಿಯ ಗತಿ ಏನಾಯಿತೆಂದು ತಿಳಿಯದೆ ಎಲ್ಲರೂ ಕಂಗಾಲಾಗಿರುವಾಗ ಒಂದು ದಿನ ಸಂಜೆ ಇದ್ದಕ್ಕಿದ್ದಂತೆ ಚಿಂಗಾರು ಬಂದು ಅಂಗಳದಲ್ಲಿ ನಿಂತುಬಿಟ್ಟಳು. ಫಕ್ಕನೆ ಅವಳ ಗುರುತು ಕುರುಂಬಿಲನಿಗೆ ಸಿಗಲಿಲ್ಲ. ಹೊಸ ಸೀರೆ ಉಟ್ಟಿದ್ದಾಳೆ. ಅದಕ್ಕೊಪ್ಪುವ ಬಿಗಿಯಾದ ತೆಳು ರವಕೆ ಧರಿಸಿದ್ದಾಳೆ. ಇಷ್ಟರ ವರೆಗೆ ನೋಡಿಯೇ ಇರದ ಬ್ರಾ ತೊಟ್ಟಿದ್ದಾಳೆಂದು ಬೆನ್ನಿನ ಭಾಗದಲ್ಲಿ ಹೊರ ಬಿದ್ದಿರುವ ಅದರ ಲಾಡಿ ಹೇಳುತ್ತಿದೆ. ತುಟಿಗೆ ಕೆಂಪುಬಣ್ಣ ಹಚ್ಚಿಕೊಂಡಿದ್ದಾಳೆ. ಕೈತುಂಬ ಗಿಜಿ ಗಿಜಿ ಎನ್ನುವ ಕುಪ್ಪಿಯ ಬಳೆಗಳಿವೆ. ತಲೆಯಲ್ಲಿ ಜೋತಾಡುವ ಮಂಗಳೂರು ಮಲ್ಲಿಗೆಯ ಘಮಘಮಿಸುವ ದಂಡೆಯಿದೆ.

ಪರ ಪರುಷನಿಂದ ಅಪಹೃತಳಾಗಿ ನಾಲ್ಕಾರು ದಿನಗಳಿಂದಲೂ ನಾಪತ್ತೆಯಾಗಿದ್ದವಳು ಮನೆಗೆ ಬಂದಿದ್ದಾಳೆ. ಅವಳ ಮುಖದಲ್ಲಿ ತಪ್ಪಿತಸ್ಥ ಭಾವವಿಲ್ಲ. ನಾಚುಗೆಯಿಲ್ಲ. ಪಶ್ಚಾತ್ತಾಪವಿಲ್ಲ. ಕಂಡರಿಯದ ಸುಖವೊಂದನ್ನು ಅನುಭವಿಸಿದ ಸುಖದ ಪರಾಕಾಷ್ಠೆ ತುಟಿಗಳ ತುಂಬ ಮುಗುಳ್ನಗುವಾಗಿ ಹರಡಿದೆ ಎಂದು ಕುರುಂಬಿಲ ಕಂಡುಕೊಂಡ. `ಬೋಸುಡಿ, ಅವ್ನೊಟ್ಟಿಗೆ ಎಲ್ಲಿಗೆ ಹೋಗಿದ್ದೀಯೆ? ಏನು ಮಾಡಿದ್ನೇ ಅವ್ನು ನಿನಗೆ?' ಎಂದು ಕೋಪದಿಂದಲೇ ಕೇಳಿದ.
`ರಾತ್ರೇನೇ ಪ್ಯಾಟಿಗೆ ಕರ್ಕೊಂಡ್ ಹೋದ ಮಾಮ. ದೊಡ್ ಹೋಟೆಲ್ನಾಗೆ ರೂಮು ಮಾಡ್ದ. ಊಟ ತರಿಸ್ದ. ಕುಡಿಯೋಕೆ ಅಪ್ಪಪ್ಪ ಎಂಥ ರುಚಿ, ಇನ್ನೂ ನಾಲಿಗೆ ರುಚೀನೇ ಹೋಗ್ಲಿಲ್ಲ ಮಾಮಾ, ಇನ್ನೂ ಏನೇನೋ ತಿಂದೆ. ಸಿನಿಮಾ ನೋಡ್ದೆ. ಅರಮನೆ ತೋರಿಸ್ದ...' ಚಿಂಗಾರು ಹೇಳುತ್ತ ಹೋದ.
ಕುರುಂಬಿಲ ಬೇಸರ ಮತ್ತು ಕೋಪ ಸಮ್ಮಿಲಿತಗೊಂಡ ದನಿಯಿಂದ, `ಹಾಸಿಗೇಲಿ ಒಟ್ಗೆ ಮಲಗಿರುವಾಗ ಬೇರೆ ಏನೂ ತೋರಿಸಲಿಲ್ವೇನೆ?' ಕೇಳಿದ.
`ಹೋಗಿ ಮಾಮಾ' ನಾಚಿಕೆಯಿಂದ ಚಿಂಗಾರು ಮುಖ ಮುಚ್ಚಿಕೊಂಡು ಕಿಸಕಿಸ ನಕ್ಕಳು. `ಅವ್ನಿಗೆ ನಾಚ್ಕೆ ಮರ್ವಾದೆ ಸ್ವಲ್ಪಾನೂ ಇಲ್ಲ' ಎಂದಳು.
`ಅವ್ನು ಮಾಡಿದ ಕೆಲ್ಸ ನಿಂಗೆ ಕುಷಿ ತಂದಿದೆ ಅಲ್ವೇನೆ? ಅವ್ನ ಜವಾಬ್ದಾರಿ ಮುಗೀತು. ಇನ್ನು ಹಾಡಿ ಜನ ಪಂಚಾತಿ ಸೇರಿಸ್ತಾರೆ. ಕಿರಿಸ್ತಾನನೊಟ್ಗೆ ಹೋಗಿದ್ದಕ್ಕೆ ನಿನ್ನ ಜಾತಿಯಿಂದ ತೆಗೀತಾರೆ. ಯಾಕೆ ವಾಪಾಸು ಬಂದೆ? ಅವ್ನ ಮದ್ವೆಯಾಗಿ ಒಟ್ಟಿಗೆ ಇರಬೇಕಿತ್ತಲ್ವ?' ಕುರುಂಬಿಲ ವ್ಯಥೆಯಿಂದ ಕೇಳಿದ.
`ಮದ್ವೆಯಾಗು ಅಂದೆ ಮಾಮಾ. ಆದ್ರೆ ಅವ್ನು ಒಪ್ಕಳ್ಲಿಲ್ಲ. ನಂಗೆ ಸ್ರೀಮಂತ್ರ ಹುಡ್ಗಿ ಕೊಡ್ತಾರೆ. ನೀನು ಬೇಕಾದಾಗ ಕರೀತೀನಿ, ಬಂದು ಸುಖ ಕೊಡು. ಸೀರೆ ಕೊಡ್ತೀನಿ, ಹಣ ಕೊಡ್ತೀನಿ, ನಿನ್ ಮಾಮಂಗೆ ಇಲಾಯಿತಿ ವಿಸ್ಕಿ ಕೊಡ್ತೀನಿ ಅಂದ ಮಾಮ. ಅವ್ನೇ ಹಾಡಿ ತನ್ಕ ಕರ್ಕಂಬಂದು ಬಿಟ್ಟು ಹೋಗವನೆ' ಎಂದಳು ಚಿಂಗಾರು.
ಇಷ್ಟು ವರ್ಷ ರಕ್ಷಿಸಿಟ್ಟ ಶೀಲವೆಂಬ ಸಂಪತ್ತು ಬಲವಂತವಾಗಿ ಸೂರೆಯಾಗಿದ್ದರೂ ಹುಡುಗಿ ಅದರ ಗೊಡವೆಯಿಲ್ಲದೆ ಸಂತೋಷಪಡುತ್ತಿರುವುದು ಕಂಡು ಕುರುಂಬಿಲನಿಗೆ ಸೋಜಿಗವಾಯಿತು.

ಕಿರಿಸ್ತಾನನ ಜೊತೆಗೆ ಹೋಗಿ ಮಜಾ ಮಾಡಿ ಮರಳಿ ಬಂದ ಚಿಂಗಾರುವಿನ ವರ್ತಮಾನ ಇಡೀ ಹಾಡಿಗೆ ಕಾಡ್ಗಿಚ್ಚಿನಂತೆ ಹರಡಲು ತಡವಾಗಲಿಲ್ಲ. ಮನೆಯ ಹಿರಿಯರೆಲ್ಲರೂ ಗುಂಪುಕಟ್ಟಿಕೊಂಡು ಕುರುಂಬಿಲನ ಮನೆಯಂಗಳಕ್ಕೆ ಬಂದೇಬಿಟ್ಟರು. ಎಲಡಿಕೆ ತಿಂದು ಕಪ್ಪಾದ ಹಲ್ಲುಗಳನ್ನು ಕಿಸಿದು ಕುರುಂಬಿಲ, `ಏನಣ್ಣ, ಈಟೊಂದು ಜನ ಒಟ್ಟಿಗೇ ಬಂದ್ಬಿಟ್ಟಿದೀರಿ, ಏನಾತು?' ಕೇಳಿದ.
`ಆಗುವುದೇನು?' ಹಿರಿಯನಾದ ಬುಜಂಗ ರೋಷವನ್ನುಗುಳಿದ. `ಕಿರಿಸ್ತಾನನ ಒಟ್ಟಿಗೆ ಹೋಗಿ ಮೈ ಹೊಲೆಯಾದವಳು ವಾಪಸ್ಸು ಬಂದ್ಳಂತೆ, ಹೌದೇನೋ?' ಕೇಳಿದ.
`ಹ್ಞೂನಣ್ಣ, ಅಂತೂ ಹುಡುಗಿ ಬಂದ್ಬಿಟ್ಳು. ಪುಣ್ಯಾತ್ಮ, ಮನೆಗೆ ತಲುಪಿಸಿಬಿಟ್ಟ. ಹೊಸ ಸೀರೆ, ಹೊಸ ರವಿಕೆ ತಕ್ಕೊಟ್ಟಿದ್ದಾನೆ' ನಗುತ್ತ ಹೇಳಿದ ಕುರುಂಬಿಲ.
`ಥೂ, ನಿನ್ನ ಜನ್ಮಕ್ಕಷ್ಟು ಬೆಂಕಿ ಮಡಗ. ಮದ್ವೆಯಾಗದ ಹುಡುಗಿ ಮರ್ವಾದೆ ಹೋಗಿದೆ, ನಿಂಗೆ ಸೀರೆ, ರವಿಕೆ ದೊಡ್ಡದಾಯ್ತೇನೋ? ಏನ್ಮಾಡ್ತೀ ಅವಳನ್ನೀಗ ಹೇಳು?' ಬುಜಂಗ ಕುರುಂಬಿಲನ ಮೈಯಲುಗಿಸಿದ.
`ಏನ್ಮಾಡೋದೋ ಬುಜಂಗಣ್ಣ? ಏನೂ ಅರಿಯದ ಕೂಸು. ಬಲವಂತ ಮಾಡಿ ಕರ್ಕೊಂಡ್ ಹೋದ. ಅನುಭವಿಸ್ದ. ನನ್ನೇನು ಮಾಡೂಂತೀಯಾ?' ಕುರುಂಬಿಲ ಅಸಹಾಯನಾಗಿ ಕೇಳಿದ.
`ನೋಡು, ನಾಯಿ ಮುಟ್ಟಿದ ಗಡಿಗೇನ ಮನೆಯೊಳಕ್ಕೆ ಇಟ್ಕಂಡ್ರೆ ಏನಾಗುತ್ತೆ? ನೀನ್ ಜಾತಿಯಿಂದ ಹೊರಗಾಗ್ತೀಯಾ. ನಿನ್ ಮನೆ ಧರ್ಮ ಕರ್ಮಕ್ಕೆ ಕುಲದವರು ಯಾರೂ ಬರೋದಿಲ್ಲ. ಸತ್ರೆ ಎಣ ನಾಯಿ, ಕಾಗೆ ತಿನ್ಬೇಕೇ ಹೊರ್ತು ಹೊರಾಕೆ ಯಾರು ಬತ್ತಾರೆ ಹೇಳು? ಬಾವಿ ಮುಟ್ಟಂಗಿಲ್ಲ, ಊರಿನ ಕ್ಷೌರಿಕ ತಲೆ ಗೀಸಂಗಿಲ್ಲ. ವಿಸ ಮುಟ್ಟಿದ್ರೆ ಪಂಡಿತ್ರು ಔಸ್ದ ಕೊಡಂಗಿಲ್ಲ. ಏನಂತೀರಾ?' ಉಳಿದವರ ಮುಖ ನೋಡಿದ ಬುಜಂಗ.
`ಹೌದು ಹೌದು' ಬಂದವರೆಲ್ಲ ಒಕ್ಕೊರಲಿನಿಂದ ಕೂಗಿದರು. `ಕಿರಿಸ್ತಾನನ್ ಜತೆ ಮಲಗಿದವಳು ನಿನ್ ಮನಿಯಾಗೆ ಇರೋಗಂಟ ನಾವ್ಯಾರೂ ನಿನ್ನ ಕೂಡುಗಟ್ಟಿಗೆ ಕರೆಯೋ ಹಂಗಿಲ್ಲ' ಎಂದರು.
`ಅಂಗಾ? ಕುಲದ ಜನದ ಸಂಬಂಧ ಬಿಟ್ಟು ಬದುಕೋ ಶಕ್ತಿ ನಂಗಿಲ್ಲ ಕಣಣ್ಣ. ಅವ್ಳನ್ನು ನನ್ನ ಕುಲದಲ್ಲಿ ಹುಟ್ಟಿಲ್ಲ ಅಂತ ಭಾವಿಸಿ ಮನೆಯಿಂದ ಹೊರಾಕೆ ತಳ್ಳಿಬಿಡ್ತೀನಿ' ಎಂದು ಕುರುಂಬಿಲ ಬೇರೆ ದಾರಿಗಾಣದೆ ಒಪ್ಪಿಕೊಂಡ.
`ಒಪ್ಪಿದ್ರೆ ಸಾಲ್ದು. ನಮ್ಮ ಕಣ್ ಮುಂದೇನೇ ಅವ್ಳನ್ನು ಮನೆಯಿಂದ ಹೊರಾಕೆ ದೂಡಬೇಕು' ಬಂದವರು ಪಟ್ಟು ಹಿಡಿದರು.
ಜಾತಿಗಾಗಿ, ಕುಲಕ್ಕಾಗಿ ಹರಯಕ್ಕೆ ಕಾಲಿರಿಸಿದ ಸೋದರ ಸೊಸೆಯನ್ನು ಮನೆ ಬಿಟ್ಟು ಓಡಿಸಲು ಕುರುಂಬಿಲ ಸಿದ್ಧನಾದ. `ಹಾದರಗಿತ್ತಿ, ಬೀದಿ ಸೂಳೆ. ನಡಿಯೇ ಮನೆಯಿಂದ ಹೊರಕ್ಕೆ. ಒಂದು ಘಳಿಗೆ ಕೂಡ ನೀನು ಇನ್ನು ಈ ಮನೆ ಚಾವಣಿ ನೆರಳಿನಾಗೆ ಇರೋ ಹಂಗಿಲ್ಲ. ಮತ್ತೆ ಬರೋ ಹಂಗೂ ಇಲ್ಲ. ಉಟ್ಟ ಸೀರೆ, ತೊಟ್ಟ ರವಿಕೆ ಈ ಮನಿ ಋಣ ತೀರಿತು ಅಂದ್ಕಂಡು ಮನೆ ಮೆಟ್ಟುಕಲ್ಲು ಇಳ್ದು ಹೋಗ್ಬುಡು' ಚಿಂಗಾರುವನ್ನು ಒಳಗಿನಿಂದ ಹೊರಗೆ ಕರೆದು ಹೇಳಿದ ಕುರುಂಬಿಲ.

ಚಿಂಗಾರು ಕಂಗಳಲ್ಲಿ ಹನಿ ನೀರು ಕೂಡ ಬರಲಿಲ್ಲ. `ಮಾಮಾ, ಒಬ್ಳು ಅಸಹಾಯ ಹೆಣ್ಣುಮಗಳನ್ನು ನಡೆಸಿಕೊಳ್ಳೋ ರೀತಿ ಇದೇನಾ? ಕಿರಿಸ್ತಾನ ಬಂದು ಕರೆದಾಗ ಗಂಡುಸಾಗಿ ನಿಮ್ಗೂ ತಡೀಬಹುದಿತ್ತಲ್ಲ? ಕೋವಿಗೆ ಹೆದರಿ ಸುಮ್ಮಗೆ ಕುಳಿತ್ರಿ. ಹೆಣ್ಣಾಗಿ ನಾನು ಅವನ್ನ ತಡೀಲಿಕ್ಕೆ ಆಗ್ತಿತ್ತಾ? ಮನೆ ಬಿಟ್ಟು ಹೋಗು ಅಂದ್ರೆ ಎಲ್ಲಿಗೇ ಹೋಗ್ಬೇಕು? ಯಾರ ಜತಿ ಹೋಗ್ಬೇಕು ವಸಿ ಯೋಳ್ಬುಡಿ' ದಿಟ್ಟವಾಗಿ ನಿಂತು ಪ್ರಶ್ನೆ ಕೇಳಿದಳು.

ಕುರುಂಬಿಲ ಅವಳ ಪ್ರಶ್ನೆಗೆ ಉತ್ತರಿಸಲಾಗದೆ ತಲೆ ತಗ್ಗಿಸಿದ. ಆದರೂ, `ನಿನ್ನ ಬುದ್ಧಿ ನಿನಗೆ ಬೇಕಿತ್ತಲ್ಲ? ಅವನು ಕರೆದ ಅಂತ ಹೋದದ್ದು ಯಾಕೆ? ಅವನನ್ನೇ ಕಟ್ಕೊಳ್ಳಬಹುದಿತ್ತಲ್ಲ? ಅದು ಬಿಟ್ಟು ಮತ್ತೆ ನನ್ನ ನೆಮ್ಮದಿ ಕೆಡಿಸೋದಕ್ಕೆ ಯಾಕೆ ವಾಪಾಸು ಬಂದೆ? ಇನ್ನಿಲ್ಲಿ ನಿನಗೆ ಜಾಗ ಇಲ್ಲ. ಹೋಗು ಹೋಗು ಎಲ್ಲಿ ಬೇಕಿದ್ರೂ ಹೋಗು' ಹೇಳಿಬಿಟ್ಟ.
ಬಂದವರ ಪೈಕಿ ಎಲ್ಲರಿಗಿಂತ ಮೊದಲು ಪರಮೇಶಿ ಚಡಪಡಿಸುತ್ತಿದ್ದ. ಯುವಕ ಆದರೆ ಅವನ ಮೆಳ್ಳೆಗಣ್ಣು, ತುಟಿ ದಾಟಿ ಹೊರಗೆ ಬಂದ ಹಲ್ಲು ಯಾವ ಹುಡುಗಿಗೂ ಇಷ್ಟವಾಗುವಂತಿರಲಿಲ್ಲ. ಕಾಡಿನ ಮರಕ್ಕೆ ಹತ್ತಿ ಹೆಜ್ಜೇನು ಇಳಿಸುವುದರಲ್ಲಿ ನಿಪುಣ. ದಾಲಚೀನಿ, ಸೀಗೆ, ನೊರೆಕಾಯಿ ಎಲ್ಲ ಕಾಡಿನಿಂದ ಕೊಯಿದು ಮಾರಾಟ ಮಾಡಿ ಕೈತುಂಬ ಸಂಪಾದಿಸುತ್ತಿದ್ದ. ಹಾಡಿಯ ಬೇರೆಯವರಿಗೆ ಹೋಲಿಸಿದರೆ ಅವನಿಗೆ ವಾಸಕ್ಕೆ ಒಳ್ಳೆಯ ಮನೆ ಇತ್ತು. ಓದಿಕೊಂಡವನಾದ್ದರಿಂದ ರಾಜಕಾರಣಿಗಳ ಕಾಲು ಹಿಡಿದು ಮನೆಗೆ ಕರೆಂಟು ಹಾಕಿಸಿಕೊಂಡಿದ್ದ. ಮನೇಲಿ ಟೀವಿ ಇತ್ತು. ಇವತ್ತಿನ ಅನುಕೂಲಗಳೆಲ್ಲ ಅವನ ಮನೆಗೆ ಬಂದಿತ್ತು.
ಪರಮೇಶಿ ಒಂದು ಸಲ ಚಿಂಗಾರು ಮುಂದೆ ಪ್ರೇಮ ನಿವೇದನೆ ಮಾಡಿದ್ದ. ಒಪ್ಪಿರಲಿಲ್ಲ ಅವಳು. ಅಪಹಾಸ್ಯ ಮಾಡಿ ಕಿಸಕ್ಕನೆ ನಕ್ಕಿದ್ದಳು. `ನಿನ್ನನ್ನಾ? ನಾನಾ? ಮದುವೆಯಾಗೋದಾ? ಫೂ ಫೂ ಎಂತ ಮಾತಾಡ್ತೀಯ? ಹನುಮಂತನಂಗಿದೀಯಾ. ಮುತ್ತು ಕೊಟ್ರೆ ತುಟಿಗೆ ನಿನ್ನ ಹಲ್ಲು ಚುಚ್ಚೀತು. ಹೋಗು ಹೋಗು ಸತ್ರೂ ನಿನ್ ಕೈಲಿ ತಾಳಿ ಕಟ್ಸಿಕೊಳ್ಳಂಗಿಲ್ಲ' ಮುಖಕ್ಕೆ ಬಾರಿಸಿದಂತೆ ಹೇಳಿದ್ದಳು. ಪರಮೇಶಿ ಈ ಮಾತಿಗೆ ಏನೂ ಉತ್ತರಿಸಿರಲಿಲ್ಲ. ತಲೆ ತಗ್ಗಿಸಿ ಎದ್ದುಹೋಗಿದ್ದ.

ಈಗ ಪರಮೇಶಿ ಹಿಂದೆ ಇದ್ದವನು ಮುಂದೆ ಬಂದ. ಅಂದಿನ ನಿರಾಕರಣೆಯ ಸೇಡು ತೀರಿಸ್ಕೊಳ್ತಾನೆ ಎಂಬುದನ್ನು ಊಹಿಸಿ ಚಿಂಗಾರು ಮನಸ್ಸಿನಲ್ಲೇ ಹೆದರಿದಳು. ಆದರೆ ಅವನು ಆ ವಿಷಯ ಪ್ರಸ್ತಾಪಿಸಲಿಲ್ಲ. `ಅಣ್ಣಗಳಿರೇ, ಎಂಥಾ ಪೌರುಸ ನಿಮ್ದು. ಒಂಟಿ ಹೆಣ್ಣುಮಗಳು. ಕರೆದುಕೊಂಡು ಹೋದವನು ಮಹಾ ಸಕ್ತಿಶಾಲಿ ಕಿರಿಸ್ತಾನ. ಅವ್ನ ಕೈಯಿಂದ ಪಾರು ಮಾಡೋದಕ್ಕೆ ಒಬ್ರೂ ಇರಲಿಲ್ಲ. ಜೀವ ಹೋದ್ರೆ ಹೋಗ್ಲಿ ಅಂತ ಕುರುಂಬಿಲಣ್ಣ ಅಡ್ಡ ನಿಲ್ಬಹುದಿತ್ತು. ಅದನ್ನೂ ಮಾಡದೆ ಈಗ ಅವ್ಳನ್ನು ಮನೆ ಬಿಟ್ಟು ಹೋಗ್ಬೇಕು ಅಂದ್ರೆ ಅವಳು ಎಲ್ಲಿ ಹೋಗಬೇಕು? ಸಾಧ್ಯವಿದ್ದರೆ ಆ ಮುಂಡೇಮಗನಿಗೆ ಸಿಕ್ಷೆ ಕೊಡಿ. ಅದು ನಿಮ್ಮಿಂದ ಆಗ್ದು ಅಲ್ವ?' ಅಲ್ಲಿದ್ದವರನ್ನು ಕೇಳಿದ.

`ಹೋಗಬೇಕು ಅಂದ್ರೆ ಹೋಗಬೇಕು. ಇದು ಕುಲಗಟ್ಟಿನ ಯಜಮಾನರ ತೀರ್ಮಾನ. ಬೇರೆ ಜಾತಿಯವರು ಮುಟ್ಟಿದ ಹುಡುಗಿ ಕುಲಕ್ಕೆ ಆಗಂಗಿಲ್ಲ. ಮನೆ ಬಿಟ್ಟು ಅವನ್ನೇ ಹುಡ್ಕಂಡ್ ಹೋಗ್ಲಿ. ಇಲ್ಲ ಕೆರೆನೋ ಬಾವಿನೋ ನೋಡ್ಕಳ್ಳಿ ಅನ್ಯಾಯ ಮಾಡಿದೋನಿಗೆ ದ್ಯಾವ್ರು ಶಿಕ್ಷೆ ಕೊಡ್ತಾನೆ' ಎಂದ ಬುಜಂಗ.

`ಒಳ್ಳೆ ತೀರ್ಮಾನವೇ ಯೋಳ್ಬುಟ್ಟೆ ಕಣಪ್ಪ. ಬದುಕೊಕಾಗದವಳು ಇನ್ನೇನ್ಮಾಡ್ತಾಳೆ ಯೋಳು? ಕೆರೆಗೋ ಬಾವಿಗೋ ಬೀಳ್ತಾಳೆ. ಈ ಹುಡುಗಿಗೆ ಒಂದಿಷ್ಟು ಓದು ಬರಹ ಕಲ್ಸಿದಾನಲ್ಲ ಕುರುಂಬಿಲಣ್ಣ. ಒಂದು ಚೀಟೀಲಿ ನನ್ ಸಾವಿಗೆ ಬುಜಂಗ, ಕುರುಂಬಿಲ, ಪರಮೇಶಿ ಸೇರಿ ಹಾಡಿಯ ಎಲ್ಲ ಗಂಡಸ್ರೂ ಕಾರಣ ಅಂತ ಬರೆದಿಟ್ಟು ಕೆರೆಗೆ ಹಾರಿ ಸಾಯ್ತಾಳೆ. ನಾಳೆ ಏನಾಗ್ತದೆ? ನಾಲ್ಕು ವರ್ಷದ ಹಿಂದೆ ಹನುಮಪ್ಪನ ಹೆಂಡತೀನ ಹಿಂಗೇ ಕುಲದಿಂದ ಹೊರಗೆ ಹಾಕಿದಾಗ ಬೆಂಕಿ ಹಚ್ಕೊಂಡು ಸುಟ್ಹೋದ್ಳು. ಸಾಯೋ ಮೊದ್ಲು ಪೊಲೀಸ್ರಿಗೆ ಕೊಟ್ಟ ಹೇಳಿಕೆಯಿಂದಾಗಿ ಏನಾಯ್ತೋ? ಜೈಲಿಗೆ ಹೋದ ಹನುಮಪ್ಪ, ತಿಮ್ಮಪ್ಪ, ನಾರಾಯಣ ಇನ್ನೂ ಹೊರಕ್ಕೆ ಬಂದಿಲ್ಲ ತಾನೆ? ನೆಪ್ಪು ಮಾಡಿ' ಪರಮೇಶಿ ಗತಕಾಲದ ನೆನಪನ್ನು ಕೆದಕಿದ.

ಈ ಮಾತು ಕೇಳಿದ ಕೂಡಲೇ ಸೇರಿದವರೆಲ್ಲ ಸ್ತಬ್ಧರಾಗಿಬಿಟ್ಟರು. ವಿಷಯ ಹೌದು. ಜೈಲಿಗೆ ಹೋದವರು ಹೊರಗೆ ಬಂದರೆ ಮನುಷ್ಯರಾಗಿರೋದಿಲ್ಲ. ಅವರ ಉಗುರು ಕೀಳುತ್ತಾರಂತೆ. ಮಕ್ಕಳಾಗದ ಹಾಗೆ ನರ ಕತ್ತರಿಸ್ತಾರಂತೆ. ಹಲ್ಲು ಮುರಿಯುತ್ತಾರಂತೆ. ನಡುಕ ಶುರುವಾಯಿತು ಎಲ್ಲರಿಗೂ. ಪರಮೇಶಿಯ ಮಾತನ್ನು ತಿರಸ್ಕರಿಸಿ ಇವಳನ್ನು ಮನೆಯಿಂದ ಹೊರಗೆ ಹಾಕಿದರೆ ಎಲ್ಲರೂ ಜೈಲಿಗೆ ಹೋಗಬೇಕಲ್ಲವೆ!

ಚಿಂಗಾರುವನ್ನು ಮನೆಯಿಂದ ಹೊರಗೆ ದೂಡಿಯೇ ಸಿದ್ಧ ಎಂದು ಬಂದವರಿಗೆ ಉತ್ಸಾಹ ಬರ‍್ರನೆ ಇಳಿದುಹೋಯಿತು. ಸ್ವಲ್ಪ ದೂರ ಹೋದರು. ಅವರವರೇ ಮಾತನಾಡಿಕೊಂಡರು. ಮತ್ತೆ ಒಳಗೆ ಬಂದರು. ಬುಜಂಗ, `ಪರಮೇಶಿ, ನೀನಂದದ್ದು ಸರಿ ಕಣೋ. ಏಕಾಯೇಕಿ ಇವ್ಳನ್ನು ಮನೆ ಬಿಟ್ಟು ಓಡಿಸಿದರೆ ನಮಗೆಲ್ಲ ಗ್ರಹಚಾರ ಕೆಟ್ಟುಹೋದೀತು. ಆದರೆ ಮಾಡಿದ ತಪ್ಪು ಕೆಲಸಕ್ಕೆ ಒಂದು ಪರಿಹಾರ, ಪ್ರಾಯಶ್ಚಿತ್ತ ಮಾಡದೆ ಒಳಕ್ಕೆ ಕರೆಯೋದಕ್ಕೆ ಆಗೋದಿಲ್ಲವಲ್ಲ' ತಮ್ಮ ಅಸಹಾಯತೆಯನ್ನು ತೋಡಿಕೊಂಡರು.
`ನಮ್ಮ ಕುಲದ ಇನ್ನೂ ಒಂದು ಸಂಪ್ರದಾಯವೂ ಉಂಟಲ್ಲ. ಮರ್ತೇಬಿಟ್ರಾ?' ಕೇಳಿದ ಪರಮೇಶಿ.
`ಏನೋ ಅದು ಸಂಪ್ರದಾಯ?' ಕೇಳಿದ ಕುರುಂಬಿಲ.
`ದೇವರ ಗುಡಿಗೆ ಹೋಗೋದು? ಪೂಜಾರಿ ಮುಂದೆ ನಿಲ್ಸಿ ದೇವ್ರಲ್ಲಿ ಇಂಗಿಂಗೆ ತಪ್ಪಾಗಿದೆ, ಪರಿಹಾರ ಬೇಕು ಅಂತ ಕೇಳ್ಕೊಳ್ಳೋದು. ಹದಿನಾರು ರೂಪಾಯಿ ತಪ್ಪು ಕಾಣಿಕೆ ಹಾಕಿ, ಕಲಶಸ್ನಾನ ಮಾಡಿಸಿ ಅಂತ ಪೂಜಾರಿ ತೀರ್ಪು ಹೇಳಿದ್ರೆ ಅಂಗೇ ಮಾಡಿ ಒಳಕ್ಕೆ ಕರ್ಕೊಳ್ಳೋದು, ಏನಂತೀರಾ?' ಕೇಳಿದ ಪರಮೇಶಿ.
ವಿಷಯ ಹೌದು. ಇದಕ್ಕಿಂತ ಮೊದಲು ಗಂಡನನ್ನು ಬಿಟ್ಟು ಬೇರೆ ಜಾತಿಯವನ ಜೊತೆಗೆ ಹೋಗಿದ್ದ ಹೆಂಗಸರನ್ನು ದೈವವಾಣಿಯ ಪರಿಹಾರ ಪಡೆದುಕೊಂಡೇ ಶುದ್ಧ ಸ್ನಾನ ಮಾಡಿಸಿ ಕುಲಕ್ಕೆ ಸೇರಿಸಿಕೊಂಡ ಉದಾಹರಣೆಗಳು ಇದ್ದವು. ಹುಡುಗೀನ ದೇವಾಲಯಕ್ಕೆ ಕರೆದುಕೊಂಡು ಹೋಗಿ ತಪ್ಪೊಪ್ಪಿಗೆ ಮಾಡಿಸಿ, ಕಾಣಿಕೆ ಹಾಕಿಸಿ, ಮನೀಗೆ ಕರ್ಕೊಂಬರಾದು ಎಂದು ಅವರು ಒಮ್ಮತದ ತೀರ್ಮಾನಕ್ಕೆ ಬಂದರು.
`ಬಾರೇ, ದೇವರ ತೀರ್ಮಾನ ಹೆಂಗಿದೆ ಅಂತ ಕೇಳೋಣ' ಎಂದು ಕುರುಂಬಿಲ ಸೊಸೆಯನ್ನು ಕರೆದ.
ಎಲ್ಲರೂ ದೇವಸ್ಥಾನಕ್ಕೆ ಹೋದರು. ಪೂಜಾರಿ ಬಾವಿಯಿಂದ ಸೇದಿದ ಕೊಡದ ನೀರನ್ನು ಗಡಗಡನೆ ತಲೆಯ ಮೇಲೆ ಹೊಯ್ದುಕೊಂಡು, ಒಳಗೊಂದು ಬೈರಾಸು ಕಟ್ಟಿ ಮೇಲೊಂದು ಪಟ್ಟೆ ಉಟ್ಟುಕೊಂಡು ಗರ್ಭಗುಡಿಯೊಳಗೆ ಹೋಗಲು ಸಿದ್ಧವಾಗಿದ್ದರು. ಬಂದವರನ್ನು ನೋಡಿ, ಅವರ ಮಾಸಿದ ಬಟ್ಟೆಯ ಲಕ್ಷಣ ಕಂಡೇ ಇವರಿಂದ ಆರತಿ ತಟ್ಟೆಗೆ ಎಷ್ಟು ಹಣ ಬರಬಹುದು ಎಂದು ಲೆಕ್ಕಾಚಾರ ಹಾಕುವ ಮನುಷ್ಯ. ಮಾತೆತ್ತಿದರೆ, `ಮಡಿ. ಮಡಿಯಲ್ಲಿದೀನಿ. ದೂರ ನಿಲ್ಲಿ' ಎಂದು ಹುಂಕರಿಸುತ್ತಾರೆ. `ಕಣ್ಣು ಕಾಣೋದಿಲ್ವೇನಯ್ಯ ನಿನಗೆ? ಮುಟ್ಟೋದಕ್ಕೆ ಬರ್ತೀಯಲ್ಲ, ಹಾಳಾಗಿ ಹೋಗ್ತಿ' ಎಂದು ಶಪಿಸಿ ತಾನೊಬ್ಬ ಮಹಿಮಾವಂತನೆಂದು ತೋರಿಸಿಕೊಳ್ಳುವುದರ ಮೂಲಕ ನಿಶ್ಚಿಂತವಾದ ಬದುಕು ಕಟ್ಟಿಕೊಂಡವರು.
ಬಂದವರನ್ನು ಕಂಡು, `ಏನಿದೆ ವಿಶೇಷ? ಹುಡುಗಿ ಮೈ ನರೆದಳೇನೋ? ಕಲಶಾಭಿಷೇಕ ಮಾಡಿಸಲು ಬಂದಂತಿದೆ. ಮೊದಲು ನೂರು ರೂಪಾಯಿ ಕೊಟ್ಟು ಸೇವೆಯ ಚೀಟು ಮಾಡಿಸಿ' ಎಂದರು ಪೂಜಾರಿ.
`ಅದಲ್ಲ ಸ್ವಾಮಿ’ ಕುರುಂಬಿಲ ಕೈಮುಗಿದ. ಅವನ ಕಣ್ಣುಗಳಲ್ಲಿ ನೀರಾಡುತ್ತಿತ್ತು. `ಅರಿಯದ ಹುಡುಗಿ ತಪ್ಪು ಮಾಡಿದಾಳೆ ಸ್ವಾಮಿ, ದೇವರ ಮುಖದಿಂದ ಪ್ರಾಯಶ್ಚಿತ್ತ ಗೊತ್ತಾಗಬೇಕು' ಕುರುಂಬಿಲ ಬೇಡಿಕೊಂಡ.
`ತಪ್ಪು ಕೆಲಸ ಅಂದರೆ?' ಪೂಜಾರಿ ಬಯಕೆಯ ದೃಷ್ಟಿ ಹರಯದ ಹುಡುಗಿಯ ಪುಟಿಯುವ ಅಂಗಾಂಗಗಳ ಮೇಲೆ ಓಡಾಡಿತು. ತುಂಬ ಅಸಹ್ಯವಾಗಿ ಮುಖಭಾವ ತೋರಿದರು. `ಮಣ್ಣು ತಿನ್ನುವ ಕೆಲಸ ಮಾಡಿದ್ದಾಳಾ? ಯಾರ ಜೊತೆಗಾದರೂ ಓಡಿಹೋಗಿ ಸುಖಪಟ್ಟು ಬಂದಿದ್ದಾಳಾ? ದೇವರ ಮುಂದೆ ಏನನ್ನೂ ಮುಚ್ಚಿಡುವಂತಿಲ್ಲ. ಸತ್ಯ ಹೇಳಿ' ಕೇಳಿದರು.
`ಹ್ಞಾ ಸ್ವಾಮಿ. ಮರ್ಯಾದೆ ಹೋಗುವ ಕೆಲಸ ಮಾಡಿಬಿಟ್ಟಳು. ಜಾತಿಯಿಂದ ಹೊರಗೇ ಹಾಕಿಬಿಡಾಣ ಅಂತ ಇವ್ರೆಲ್ಲ ಒಂದೇ ಸಮ ಹೇಳ್ತಿದಾರೆ. ಆದ್ರೆ ಜೀವಕ್ಕೇನಾರ ಮಾಡ್ಕೊಂಡ್ರೆ ಅನ್ನೋ ಭಯ ನಮ್ಗೆ. ಸತ್ತವ್ರ ಜತೀಗೆ ಇದ್ದವರೂ ಒದ್ದಾಡಬಾರದಲ್ಲ? ಹೀಗಾಗಿ ದೇವರಿಂದಲೇ ದರ್ಶನ ವಾಣಿಯ ಮೂಲಕ ಪ್ರಾಯಶ್ಚಿತ್ತ ಕೇಳೋಣ ಅಂತ ಬಂದ್ವಿ ಸ್ವಾಮಿ' ಎಂದ ಮಾದೇಶ. ಅವನೂ ಕುಲದ ಮುಖ್ಯಸ್ಥರಲ್ಲಿ ಒಬ್ಬನಾಗಿದ್ದ.
`ಸರಿ ಹಾಗೇ ಮಾಡಿ. ಆದ್ರೆ ಇಂಥದಕ್ಕೆಲ್ಲ ಸೇವಾಶುಲ್ಕ ಐನೂರು ರೂಪಾಯಿ ಆಗ್ತದೆ. ದರ್ಶನದ ದಕ್ಷಿಣೆ ಬೇರೆ, ಅದು ನಿಮಗೆ ಇಷ್ಟ ಬಂದಷ್ಟು. ಮಹಾಪೂಜೆ ಮುಗಿಯುವ ಹೊತ್ತಿಗೆ ಹುಡುಗಿ ತೀರ್ಥದ ಕೆರೆಯಲ್ಲಿ ಮುಳುಗು ಹಾಕಿ ಒದ್ದೆಬಟ್ಟೆಯಲ್ಲಿ ಬಂದು ಗರ್ಭಗುಡಿಯ ಮುಂದೆ ನಿಲ್ಲಬೇಕು. ದರ್ಶನದ ಸಮಯ ಬ್ಯಾಂಡ್, ವಾಲಗ ಬಾರಿಸಿದವರಿಗೆ ಪ್ರತ್ಯೇಕ ಹಣ ನಿಗದಿಪಡಿಸಿದೆ. ಅದನ್ನು ನೀವು ಕೊಡಬೇಕು. ದೇವರ ವಾಣಿಯನ್ನು ಬದಲಾಯಿಸಬಾರದು. ಹಾಗೆಯೇ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು' ಪೂಜಾರಿ ನಿಯಮಗಳನ್ನು ಸ್ಪಷ್ಟವಾಗಿ ಹೇಳಿದರು.

ಎಲ್ಲರೂ ನಿಯಮವನ್ನು ಮೀರುವುದಿಲ್ಲ ಎಂದು ಒಪ್ಪಿಕೊಂಡ ಮೇಲೆ ಪೂಜಾರಿ ಪೂಜೆ ಮಾಡಲು ಒಳಗೆಹೋದರು. ಚಿಂಗಾರು ಕಣ್ಸನ್ನೆಯಿಂದ ಪರಮೇಶಿಯನ್ನು ಏನೋ ಮಾತಾಡಲಿಕ್ಕಿದೆ ಎಂಬಂತೆ ಕರೆದಳು. ಪರಮೇಶಿ ಅದನ್ನು ಅರ್ಥ ಮಾಡಿಕೊಂಡು ಸದ್ದಿಲ್ಲದೆ ಹೊರಗೆ ಹೋದ. ತೀರ್ಥದ ಕೆರೆಯ ಮೇಲುಭಾಗದಲ್ಲಿರುವ ತೆಂಗಿನಮರದ ಮರೆಯಲ್ಲಿ ನಿಂತರು. ಚಿಂಗಾರು ಹೇಳಿದಳು, `ಪರಮೇಶಿ, ಕೈಮುಗ್ದು ಕೇಳ್ಕೊಳ್ತೀನಿ. ಈ ಪೂಜಾರಿಯಿಂದ ನನಗೆ ನ್ಯಾಯ ಸಿಗೋದಿಲ್ಲ. ನೀನೇ ನನ್ನ ಕಾಪಾಡಬೇಕಷ್ಟೇ' ಅವಳ ದನಿಯಲ್ಲಿ ದುಃಖ ಮಡುಗಟ್ಟಿತ್ತು.
`ಯಾಕೆ ಹಾಗಂತೀಯಾ? ಪವಿತ್ರಾತ್ಮರು, ದೇವರ ಅರ್ಚಕರು. ನ್ಯಾಯವಾದುದನ್ನೇ ಹೇಳುತ್ತಾರಲ್ಲವೆ?' ಪರಮೇಶಿ ಅವಳ ಆತಂಕ ನಿವಾರಿಸಲು ಮುಂದಾದ.
`ಇಲ್ಲ ಪರಮೇಶಿ, ನನಗೆ ನಂಬಿಕೆ ಇಲ್ಲ. ಅವತ್ತೊಂದು ದಿನ ಏನಾಯ್ತು ಗೊತ್ತಾ? ಪ್ಯಾಟೆಯಿಂದ ಮನೆಗೆ ಬರ್ತಾ ಇದ್ದೆ. ಮುಸ್ಸಂಜೆ ಹೊತ್ತು. ಈ ಪೂಜಾರಿ ನನ್ ಹಿಂದಿಂದ ಬಂದು ಗಟ್ಟಿಯಾಗಿ ಹಿಡ್ಕೊಂಡ. ಎದೆಗೆ ಕೈಹಾಕಿದ. ತಲೆ ತಿರುಗಿಸಿ ನೋಡ್ತೇನೆ ಇವನು! ಒಂದೇ ಒಂದು ಸಾರಿ ನಂಗೆ ಸುಖ ಕೊಡು ಅಂತ ಬೇಡ್ಕೊಂಡ ಹಂಗೆ ಮಾತನಾಡಿದ. ಒಪ್ಲಿಲ್ಲ ನಾನು. ನಂಗೇಕೋ ಅಸಹ್ಯವಾಯಿತು. ನೀವು ದೇವ್ರ ಪೂಜೆ ಮಾಡೋವ್ರು. ನಾವು ಕೋಳಿ, ಹಂದಿ ತಿನ್ನೋರು, ಬ್ಯಾಡ ಬಿಟ್ಬಿಡಿ ಅಂತ ಬೇಡ್ಕೊಂಡೆ. ಅದಕ್ಕವನು ಜನಿವಾರ ಬದಲಾಯ್ಸಿದ್ರೆ ದೋಷ ಹೋಗುತ್ತೆ. ಗುಡಿ ಪೂಜಾರಿಗೆ ಸುಖ ಕೊಟ್ರೆ ದ್ಯಾವ್ರಿಗೆ ಸುಖ ಕೊಟ್ಟಂತೆ ಅಂದ' ಮೆಲ್ಲಗೆ ಹೇಳಿದಳು ಚಿಂಗಾರು.
`ಅಂದರೆ ಇವನು ಅಂಥವನಾ? ನೀನೇನು ಮಾಡಿದೆ? ಉಟ್ಟ ಬಟ್ಟೆ ಬಿಚ್ಚಿಬಿಟ್ಯಾ?' ಕೇಳಿದ ಪರಮೇಶಿ.
`ಇಲ್ಲ ಕಣೋ. ಬಿಡ್ಲಿಲ್ಲ ಅಂದ್ರೆ ಕೋಗ್ಕೋತೀನಿ. ಮರ್ವಾದೆ ತೆಗೀತೀನಿ. ಚಪ್ಲಿ ತೆಗ್ದು ಹೊಡೀತೀನಿ ಅಂದ್ಮೇಲೆ ಬಿಟ್ಟುಬಿಟ್ಟ. ನಿನ್ನ ನೋಡ್ಕಂತೀನಿ. ಎಂಗೆ ಬುದ್ಧಿ ಕಲಿಸೋದು ಅಂತ ನಂಗೊತ್ತು ಅಂದ. ಈಗ ಅವನೇ ತೀರ್ಮಾನ ಮಾಡೋದಾದ್ರೆ ನಂಗೆ ಎಂತಹ ಶಿಕ್ಷೆ ಕೊಡ್ತಾನೆ ಗೊತ್ತಾ?' ಭಯವನ್ನು ಹೊರಚೆಲ್ಲಿದಳು ಹುಡುಗಿ.
`ಸುಮ್ನಿರೇ, ದೇವ್ರು ಹಂಗೆಲ್ಲ ಶಿಕ್ಷೆ ಕೊಡೋದಿಲ್ಲ. ಕ್ಷಮಿಸ್ತಾನೆ' ಎಂದ ಪರಮೇಶಿ ಭರವಸೆಯ ದನಿಯಲ್ಲಿ.
ಮಹಾಪೂಜೆ ಮುಗಿಯಿತು. ಮಂಗಳಾರತಿಗೆ ಮೊದಲು ಪೂಜಾರಿಯ ದರ್ಶನ ನಡೆಯಬೇಕು. ಎಲ್ಲರ ಕೈಗೂ ಅಕ್ಷತೆಕಾಳು ಕೊಟ್ಟರು. ದೇವರ ಮುಂದೆ ಕೈಮುಗಿದು ನಿಂತು ಭಯಭಕ್ತಿಯಿಂದ ಪೂಜಾರಿ ಹೇಳಿಕೊಟ್ಟ ಹಾಗೆಯೇ ಎಲ್ಲರೂ, `ಏನೋ, ನಮ್ಮ ಹುಡುಗಿಯಿಂದ ತಪ್ಪು ನಡೆದುಹೋಗಿದೆ. ಅವಳನ್ನು ಬಲವಂತಪಡಿಸಿ ಶೀಲಗೆಡಿಸಿದ ಕಿರಿಸ್ತಾನನಿಗೆ ಮುಂದಿನ ವರ್ಷ ಜಾತ್ರೆ ನಡೆಯುವ ಮೊದಲು ದೇವರು ಘೋರ ಪ್ರಾಯಶ್ಚಿತ್ತ ನೀಡಬೇಕು. ಹಾಗೆಯೇ ಹುಡುಗಿಯ ಮೈಯಲ್ಲಿ ಅಂಟಿಕೊಂಡ ಮಾಲಿನ್ಯವನ್ನು ದೂರ ಮಾಡಿ ಶುದ್ಧಗೊಳಿಸಲು ಏನು ಮಾಡಬೇಕೆಂಬುದನ್ನು ದರ್ಶನದ ಮೂಲಕ ಅಪ್ಪಣೆಯಾಗಬೇಕು' ಎಂದು ಪ್ರಾರ್ಥಿಸಿ ದೇವರ ಪ್ರತೀಕವಾಗಿ ಇರಿಸಿದ ಅಕ್ಕಿ, ತೆಂಗಿನಕಾಯಿ ಸ್ವಸ್ತಿಕದ ಮೇಲೆ ಅಕ್ಷತೆಕಾಳು ಎರಚಿದರು.

ಪೂಜಾರಿ ದೇವರ ಶಿರದಿಂದ ತಂದ ಹಿಂಗಾರದ ಎಸಳನ್ನು ತಲೆಯ ಮೇಲಿಟ್ಟುಕೊಂಡು ಕಣ್ಮುಚ್ಚಿ, `ದೇವರು ನನ್ನ ಮೈಮೇಲೆ ಆವೇಶಿತರಾಗಿ ಪ್ರಾಯಶ್ಚಿತ್ತವನ್ನು ಹೇಳಬೇಕು' ಎಂದು ಕೇಳಿಕೊಂಡರು. ವಾಲಗದವರು ಪೀಪೀ ಊದಿದರು. ತಮ್ಮಟೆಗಳ ಸದ್ದು ಕಿವಿಗಡಚಿಕ್ಕಿತು. ಜಾಗಟೆ, ಘಂಟಾ ನಿನಾದ ಮೊಳಗಿತು.
ಸದ್ದು ಹೆಚ್ಚಾಗುತ್ತಿದ್ದ ಹಾಗೆಯೇ ಪೂಜಾರಿಯ ಮೈ ಗಡಗಡ ನಡುಗತೊಡಗಿತು. ಕಣ್ಣುಗಳಲ್ಲಿ ಆವೇಶ. ತಲೆಗೂದಲು ಗಾಳಿಗೆ ಹಾರಾಡುತ್ತಿತ್ತು. ಹಲ್ಲುಗಳು ಕಟಕಟ ಸದ್ದೆಬ್ಬಿಸಿದವು. ನಾಲಿಗೆಯಿಂದ ಕಠಿಣ ವಾಕ್ಯಗಳು ಹೊರಹೊಮ್ಮಿದವು. `ದೇವರ ಇಷ್ಟವನ್ನು ಮೀರಿ ಅನ್ಯ ಧರ್ಮೀಯನಿಗೆ ದೇಹ ಸಮರ್ಪಣೆಯಂತಹ ಹೇಯ ಕೆಲಸ ನಡೆದಿದೆ. ವಂಶನಾಶವಾಗುತ್ತದೆ. ಜಾನುವಾರುಗಳಿಗೆ ಕಾಯಿಲೆ ಬರುತ್ತದೆ. ಹೊಲದಲ್ಲಿ ಕಂಡ ಬೆಳೆ ಮನೆಗೆ ತಲುಪುವುದಿಲ್ಲ. ಹಾಡಿಯ ಜನರಿಗೆ ಸರ್ವನಾಶ ಕಾದಿದೆ...' ದೇವರ ನುಡಿಯಾಯಿತು.
ಹಾಡಿಯ ಜನಗಳೆಲ್ಲ ಭಯಭೀತರಾದರು. ಮತ್ತೆ ಮತ್ತೆ ಕೈಮುಗಿದು ದೈನ್ಯವಾಗಿ ಬೇಡಿಕೊಂಡರು. `ಏನೋ ತಪ್ಪು ನಡೆದುಹೋಗಿದೆ. ಸನ್ನಿಧಾನಕ್ಕೆ ಅರಿಯದ್ದೇನಲ್ಲ. ಕೋವಿ ತಂದು ಬೆದರಿಸಿ ಕರೆದುಕೊಂಡು ಹೋಗಿದ್ದಾನೆ. ತಪ್ಪಿಗೆ ಮಾಫಿ ಮಾಡಿ ಪ್ರಾಯಶ್ಚಿತ್ತ ತೋರಿಸಿಕೊಡಬೇಕು. ಮುಂದಿನ ಜಾತ್ರೆಗೆ ಜೋಡು ಬಾಳೆಗೊನೆ ತಂದು ಸನ್ನಿಧಿಗೆ ಒಪ್ಪಿಸುತ್ತೇವೆ' ವಿನೀತರಾಗಿ ಪ್ರಾರ್ಥಿಸಿದರು.
ದೇವರು ಕೊಂಚ ಸಮಾಧಾನವಾದಂತೆ ಕಂಡಿತು. `ಆಗಲಿ, ನೀವೆಲ್ಲರೂ ಸನ್ನಿಧಿಯ ಭಕ್ತರು. ಯಾಚಿಸಿ ಬಂದವರನ್ನು ಕೈಬಿಡುವುದಿಲ್ಲ. ನಡೆದ ತಪ್ಪಿಗೆ ಇದೇ ದಿನ ಪ್ರಾಯಶ್ಚಿತ್ತ ಮಾಡಿಸಿ ಹುಡುಗಿಯನ್ನು ಜಾತಿಗೆ ತೆಗೆದುಕೊಳ್ಳಿ' ನುಡಿಯಾಯಿತು.
`ಪ್ರಾಯಶ್ಚಿತ್ತ ಏನೆಂಬುದನ್ನು ಸನ್ನಿಧಿಯಿಂದ ಆದೇಶವಾಗಬೇಕು. ಕಾಲಲ್ಲಿ ತೋರಿಸಿದ್ದನ್ನು ತಲೆಯಲ್ಲಿ ಹೊತ್ತುಕೊಂಡು ನಡೆಸುತ್ತೇವೆ' ಕುರುಂಬಿಲ ಬೇಡಿಕೊಂಡ.
ದೈವವಾಣಿ, `ಈ ಪಾಪಿಯ ತಲೆಯನ್ನು ಗುಂಡುಕಲ್ಲಿನ ಹಾಗೆ ಬೋಳಿಸಿ. ಕಣ್ಣಿನ ಹುಬ್ಬನ್ನೂ ತೆಗೆಸಿ. ಏಕ ವಸ್ತ್ರ ಉಡಿಸಿ. ಮುಖಕ್ಕೆ ಮಸಿ ಬಳಿಯಿರಿ. ಕತ್ತೆಯ ಮೇಲೆ ಕೂಡಿಸಿ ದೇವಸ್ಥಾನಕ್ಕೆ ಹತ್ತು ಸಲ ಪ್ರದಕ್ಷಿಣೆ ತನ್ನಿ. ಒಂದು ವರ್ಷ ಉಪ್ಪು, ಹುಳಿ, ಖಾರ, ಸಿಹಿ ಹಾಕದ ಆಹಾರ ಕೊಡಿ. ಆಮೇಲೆ ದೇವಸ್ಥಾನಕ್ಕೆ ಕರೆದುಕೊಂಡು ಬಂದು ತಪ್ಪು ಕಾಣಿಕೆ ಹಾಕಿಸಿ. ಅದಾಗಿ ಒಂದು ವರ್ಷ ಮನೆಯಿಂದ ಹೊರಗೆ ಬರದ ಹಾಗೆ ನೋಡಿಕೊಳ್ಳಿ' ಎಂದು ಪೂಜಾರಿಯ ನಾಲಿಗೆಯಿಂದ ಆದೇಶ ನೀಡಿತು.

ಹಾಡಿಯ ಜನರೆಲ್ಲ ಭಯ, ಭಕ್ತಿಯಿಂದ ದೈವದ ನುಡಿಯಂತೆಯೇ ನಡೆದುಕೊಳ್ಳುವುದಾಗಿ ಹೇಳಿದರು. ಆವೇಶವಾದ ದೈವ ಇನ್ನೂ ಪೂಜಾರಿಯ ಮೈಯಿಂದ ಬಿಡುಗಡೆಯಾಗಿರಲಿಲ್ಲ. ಅಷ್ಟರೊಳಗೆ ಅನಿರೀಕ್ಷಿತ ವಿದ್ಯಮಾನವೊಂದು ಸಂಭವಿಸಿತು. ಪರಮೇಶಿಯ ಮೈಗೆ ದೇವಸ್ಥಾನದ ಹೊರಭಾಗದ ಗುಡಿಯಲ್ಲಿದ್ದ ದೇವರ ಬಂಟ ಕಲ್ಲುರ್ಟಿ ಆವೇಶಗೊಂಡಿತು. ಕಣ್ಣುಗಳನ್ನು ಅಕರಾಳ ವಿಕರಾಳವಾಗಿ ತಿರುಗಿಸುತ್ತ ಸನಿಹವೇ ಇದ್ದ ಚಾಪೆಯೊಂದನ್ನು ಹಲ್ಲುಗಳಿಂದ ಕಚ್ಚಿ ಕಚ್ಚಿ ಚೂರು ಮಾಡಿ ಎಸೆದ. ಬೆಳ್ಳಿಯ ಬಟ್ಟಲನ್ನು ಎತ್ತಿ ತಲೆಗೆ ಚಚ್ಚಿಕೊಂಡು ಮುದ್ದೆ ಮಾಡಿದ. ಭಯಂಕರವಾಗಿ ಗರ್ಜಿಸಿದ. `ನಾನು ಕಲ್ಲುರ್ಟಿ ಬಂದಿದ್ದೇನೆ' ಅಬ್ಬರಿಸಿದ.
ಹಾಡಿಯವರೆಲ್ಲ ದೈವದ ಮುಂದೆ ನಿಂತು ಕೈಮುಗಿದರು. `ದೈವ ಶಾಂತವಾಗಿ ನಮಗೆ ಅಪ್ಪಣೆ ಮಾಡಬೇಕು. ಮುಂದಿನ ದೀಪಾವಳಿಗೆ ಕೋಳಿ, ಜೋಡಗೆಲು ಅರ್ಪಿಸುತ್ತೇವೆ' ಎಂದು ಪ್ರಾರ್ಥಿಸಿದರು.
`ಕರಾಯದಿಂದ ಬಂದೆ. ಇಲ್ಲಿ ನೆಲೆಗೊಂಡೆ. ದೇವರ ಸನ್ನಿಧಿಯಲ್ಲಿ ಸತ್ಯವಿದೆ ಎಂದು ಭಾವಿಸಿದೆ. ಆದರೆ ಅನ್ಯಾಯ, ಅಸತ್ಯ, ಕಳ್ಳತನ, ಮೋಸ, ವಂಚನೆಗಳಿಂದ ಪವಿತ್ರ ಸನ್ನಿಧಿಯನ್ನೇ ಭ್ರಷ್ಟಮಾಡಿದ ಒಬ್ಬ ಬ್ರಾಹ್ಮಣ. ಏನು ಮಾಡಿದರೂ ಬಿಡುವುದಿಲ್ಲ. ಒಬ್ಬ ಅಮಾಯಕಿ ಹೆಣ್ಣುಮಗಳನ್ನು ಬಲವಂತವಾಗಿ ಅನ್ಯ ಮತೀಯನೊಬ್ಬ ಒಯಿದಿರುವಾಗ ಅವನಿಗೆ ಏನೂ ದಂಡನೆಯಿಲ್ಲ. ಮುಗ್ಧ ಹೆಣ್ಣುಮಗಳಿಗೆ ಶಿಕ್ಷೆಯಾ? ಇದು ಇವನ ಮೋಸ..' ಕಲ್ಲುರ್ಟಿಯ ನುಡಿಯಾಯಿತು.

ಪರಮೇಶಿಯ ಮೈಮೇಲೆ ಆವೇಶಿತಗೊಂಡ ಕಲ್ಲುರ್ಟಿ ಅಲ್ಲಿಗೇ ಸುಮ್ಮನುಳಿಯಲಿಲ್ಲ. ಕೈಯಲ್ಲೊಂದು ದೊಣ್ಣೆ ಹಿಡಿದುಕೊಂಡು ದೇವರು ಇನ್ನೂ ಮೈಯಲ್ಲೇ ಇದ್ದ ಪೂಜಾರಿಯನ್ನು ಹೊಡೆಯಲು ಧಾವಿಸಿತು.
ಮೈಯಲ್ಲಿ ಇದ್ದ ದೇವರು ಬರ‍್ರನೆ ಇಳಿದು ಜೀವ ಭಯದಿಂದ ತತ್ತರಿಸಿದ ಪೂಜಾರಿ ಬಿಚ್ಚುತ್ತಿರುವ ಕಚ್ಚೆ ಕಾಲಿಗೆ ತೊಡರುತ್ತಿದ್ದರೂ ಗಮನವಿಲ್ಲದೆ ದೇವಾಲಯದಿಂದ ಹೊರಗೆ ಓಡತೊಡಗಿದ. ಅವನ ಹಿಂದೆ ಪರಮೇಶಿ, ಬಳಿಕ ಹಾಡಿಯ ಜನರು, ಅವರೊಂದಿಗೆ ಚಿಂಗಾರು ಓಡುತ್ತಲೇ ಇದ್ದರು.

ಕಡೆಗೂ ಪೂಜಾರಿ ಕೈಗೆ ಸಿಗಲಿಲ್ಲ. ಪರಮೇಶಿ ಆಯಾಸದಿಂದ ಒಂದು ಕಡೆ ಕುಕ್ಕರು ಕುಳಿತ. ಅವನ ಬಳಿ ಕುಳಿತು ಅವನ ತಲೆಯನ್ನು ತನ್ನ ಎದೆಗಾನಿಸಿಕೊಂಡು ಚಿಂಗಾರು ಸೆರಗಿನಿಂದ ಗಾಳಿ ಹಾಕುತ್ತ, `ನನ್ನ ಜೀವವುಳಿಸಿದೆ ಕಣೋ ಪರಮೇಶಿ. ಮುಂದೆಯೂ ನನ್ನ ಬದುಕಿಗೆ ಆಸರೆಯಾಗ್ತೀಯಾ? ಇಲ್ಲಿದ್ರೆ ಇವ್ರು ಹೀಗೇ ಬಿಡೋದಿಲ್ಲ. ನನ್ನ ಎಲ್ಲಾದ್ರೂ ದೂರ ಕರೆದ್ಕೊಂಡು ಹೋಗ್ತೀಯಾ? ನಿನ್ನ ಚೆನ್ನಾಗಿ ನೋಡ್ಕಳ್ತೇನೋ' ಎಂದು ಹೇಳಿದಳು. ಚಿಂಗಾರುವಿನ ಮಾತಿಗೆ ಒಪ್ಪಿಗೆಯಾಗಿ ಅವಳ ತುಟಿಗಳ ಮೇಲೆ ಪರಮೇಶಿ ತನ್ನ ತುಟಿಗಳನ್ನೊತ್ತಿದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT