“ನೀ ಏನೇ ಹೇಳು ಸರೋಜಾ ನಿನ್ನ ಮಗಳಿಗೆ ದೊಡ್ಡ ಮೊಬೈಲು ಕೊಡಿಸಬಾರದಿತ್ತು ಕಣೆ, ಕೇಳಿದ್ಯಾ? ಆ ಶಂಕರಣ್ಣನ ಮೊಮ್ಮಗಳ ಕಥೆ” ನೇತ್ರ ಹೇಳಿದಾಗ
“ಇಲ್ಕಣೇ ಎಂತ ಕತೆಯೇ! ಅದಕ್ಕು ನಮ್ಮ ಐಶುಗೆ ಮೊಬೈಲ್ ಕೊಡಿಸಿದ್ದಕ್ಕು ಎಂತಾ ಸಂಬಂಧನೆ ಮಾರಾಯ್ತಿ” ಸರೋಜ ಕೇಳಿದಳು.
ಆ ಹುಡುಗಿ ಕಾಲೇಜಿಗೆ ಅಂತ ಹೋಗ್ತಿತ್ತಲೇ , ನಾಕ್ದಿನ ಆಯ್ತಂತೆ ಮನೆಗೆ ಬರದೆ! ಎಲ್ಲೋ ಓಡಿ ಹೋಗಿದಾಳಂತೆ. ಎಲ್ಲ ಕಡೆಗೂ ಹುಡುಕ್ತಿದಾರಂತೆ. ಮೂರು ಹೊತ್ತು ಮೊಬೈಲ್ ನೋಡ್ತ ಹುಲಿಗೆಮ್ಮನ ಗುಡ್ಡದಗೆ ಅಡ್ಡಾಡ್ತಿತ್ತು. ನಾವು ಕಟ್ಟಿಗೆ ಸೊಪ್ಪಿಗೆ ಹೋದವರು ಹಿಂಗೆಲ್ಲ ಒಬ್ಬೊಬ್ಬಳೆ ಅಡ್ಡಾಡಬ್ಯಾಡ ಅಂತ ಹೇಳಿದ್ವಿ ಕಣೇ, ಅದರ ಅವ್ವಂಗೂ ಹೇಳಿದ್ವಿ, ಈಗ ನೋಡು ಯಾವನ ಜೊತಿಗೆ ಹೋತೋ ಏನೋ,”
ನೇತ್ರ ಹೇಳಿ ಮುಗಿಸುತ್ತಿದ್ದ ಹಾಗೇ ನಾಕ್ದಿನದ ಹಿಂದೆ ಸಂತೆಗೆ ಹೋಗಿ ಹಿಂದಿರುಗಿ ಬರಲು ಬಸ್ ಕಾಯ್ತಾ ಇದ್ದಾಗ ಆ ಹುಡುಗಿ ಯಾರದ್ದೋ ಬೈಕಿನ ಮೇಲೆ ಹೋಗಿದ್ದನ್ನು ಕಂಡ ನೆನಪಾಯ್ತು ಸರೋಜಳಿಗೆ. ಆದರೆ ಯಾಕೋ ಹೇಳಬೇಕೆನಿಸಲಿಲ್ಲ.
“ಸುಟ್ಟಮೊಬೈಲೊಂದು ಬಂದು ಈ ಮಕ್ಳೆಲ್ಲ ಹಾಳಾಗ್ತಿದಾವೆ , ಅದೇನೋ ಫೇಸ್ಬುಕ್ಕಂತೆ, ಗ್ರಾಮಂತೆ, ಅದ್ರಾಗೆ ಯರ್ಯಾರನ್ನೋ ಬ್ಯಾಡದಿದ್ದವರನ್ನೆಲ್ಲ ಪರಿಚಯ ಮಾಡ್ಕ್ಯಂಡು ಅವರ ಹಿಂದೆ ಓಡಿ ಹೋಗೋವ್ರೂ ಇದಾರೆ, ಅದಕೆ ಹೇಳಿದ್ದು ಈಗಲೇ ನಿನ್ನ ಮಗಳನ್ನ ತುಸು ಹದ್ದು ಬಸ್ತಿನಲ್ಲಿಡು”
ರೇಶನ್ ತರಲೆಂದು ಸರೋಜ ನೇತ್ರಾ ಇಬ್ಬರೂ ಸೊಸೈಟಿಯೊಳಗೆ ಬಂದರು. ಅಲ್ಲೊಬ್ಬ ಹುಡುಗ ಕಿವಿಗೆ ವೈರು ಸಿಕ್ಕಿಸಿಕೊಂಡು ಮೊಬೈಲು ನೋಡುತ್ತ ಅದರಲ್ಲೇ ಮುಳುಗಿಹೋಗಿದ್ದ. ಇನ್ನೊಬ್ಬ ಹುಡುಗಿ ಒಂದೇ ಸಮನೆ ಮೆಸೇಜು ಮಾಡುತ್ತ ತನ್ನಷ್ಟಕ್ಕೆ ಆಗಾಗ ನಗುತ್ತಿದ್ದಳು. ಈ ಮೊಬೈಲು ಭಾರೀ ವಿಚಿತ್ರ ಮತ್ತು ಯಾಕೋ ಭಯ ಹುಟ್ಟಿಸ್ತದೆ ಎನಿಸಿಬಿಟ್ಟಿತು ಸರೋಜಳಿಗೆ.
ರಿಕ್ಷಾ ಕಾಯುತ್ತ ಕ್ಷಣಕಾಲ ನಿಂತಿರುವಷ್ಟರಲ್ಲೆ ಮಹೇಶಣ್ಣನ ಅಟೋ ಬಂದು ನಿಂತಿತು. ಇವರೊಂದಿಗೆ ಆ ಲಗೇಜ್ ಅಟೋದಲ್ಲಿ ಇನ್ನೂ ನಾಕಾರು ಜನರು ಹತ್ತಿಕೊಂಡರು.
“ಓ ನಲ್ಲ ನೀನಲ್ಲ ಕರಿಮಣಿ ಮಾಲಿಕ ನೀನಲ್ಲ” ಎಂದು ಮಹೇಶಣ್ಣನ ಮೊಬೈಲು ಹಾಡತೊಡಗಿತು. ಹಂಗರೆ ಮತ್ಯಾರೋ ಮಹೇಶ ಎಂದು ಸಾವಂತ್ರಜ್ಜಿ ಕುಶಾಲು ಮಾಡಿದಳು. ಹೆ ಹೆ ಎಂದು ನಗುತ್ತ ಮಹೇಶ “ಈ ಹಾಡಿಗೆ ಒಂದು ಹೆಂಗ್ಸು ಮೊಬೈಲಿನಲ್ಲಿ ಅದೇನೋ ರೀಲ್ಸು ಅಂತ ಬಿಟ್ಟಿದ್ಲಂತೆ, ಅದನ್ನ ನೋಡಿ ಅವಳ ಗಂಡ ನೇಣು ಹಾಕ್ಯಂಡ್ನಂತೆ ಗೊತೈತೇನೇ ಅಜ್ಜಿ” ಎಂದು ಕೇಳಿದ. ಹಪ್ಗೆಟ್ಟವು ಎಂದ ಸಾವಂತ್ರಜ್ಜಿ ಅಡಿಕೆ ಹೋಳು ಬಾಯಿಗೆಸೆದಳು.
ಪ್ಯಾಟೆಲಿರೋ ನಮ್ಮ ತಮ್ಮನ ಮಗಳು, ಮುಖಕ್ಕೆ ಸುಣ್ಣ ತುಟಿಗೆ ಬಣ್ಣ ಬಳದು ಮೂರು ಹೊತ್ತು ಹಾಂಗೆ ಕುಣಿದು ಹೀಂಗೆ ಮಾಡಿ ಇದ್ದ ಬದ್ದೌರ ಕೈಲೆಲ್ಲ ವೀಡಿಯೋ ಮಾಡಿ ಅಂತ ಪೋನ್ ಕೊಟ್ಟು ಮೂರು ಹೊತ್ತು ಅದ್ರಾಗೇ ಮುಳುಗರ್ತಾಳೆ, ಕೊನಿಗೆ ಎಷ್ಟು ಜನ ಅದನ್ನ ನೋಡಿದಾರೆ ಅಂತ ನೋಡದು ಮತ್ತೆ ಕುಣಿಯದು, ಅಯ್ಯಬ್ಬಾ ಕಾಲ ಹೇಳದು ಕೆಟ್ ಕೆರ ಹಿಡದೋತು” ಅಂಗನವಾಡಿ ಆಯಾ ಕೆಲಸದ ಪಾರ್ವತಿ ಹೇಳುತ್ತಿದ್ದಳು.
ಅಟೋ ಮನೆಯೆದುರು ಬಂದು ನಿಂತಾಗ ಸರೋಜ ಇಳಿದಳು. ನೇತ್ರಾ ಹೇಳಿದ್ದು ತಲೆಯೊಳಗೆ ಹುಳು ಬಿಟ್ಟಂತಾಗಿತ್ತು.
ತಾನಂತೂ ಎಲ್ಲೋ ನಾಕಕ್ಷರ ಕಲಿತಿದ್ದಷ್ಟೇ, ಅದೂ ಮೇಷ್ಟ್ರು ತಮ್ಮ ಕೇರಿಗೇ ಬಂದು ಎಳೆದುಕೊಂಡು ಹೋಗಿದ್ದರಿಂದ.
ಮಗಳು ಚೆನ್ನಾಗಿ ಓದಿ ನೌಕರಿಗೆ ಸೇರಿ ಬೆಂಗಳೂರಿನಲ್ಲಿ ನೌಕರಿ ಮಾಡೋವ್ನ ಹೆಂಡತಿ ಆಗಬೇಕೆಂಬುದೇ ಸರೋಜಳ ಮಹದಾಸೆ. ರಾತ್ರಿಯಾಯ್ತೆಂದರೆ ಹೆಂಡದ ಅಮಲಿನಲ್ಲಿ ತೇಲಾಡುತ್ತ ಕಟ್ಟಿಕೊಂಡ ಹೆಂಡತಿಗೆ ಬಡಿದು ಗಲಾಟೆ ಎಬ್ಬಿಸುವ ಕೇರಿಯ ಹೆಚ್ಚಿನ ಗಂಡಸರನ್ನು ಕಂಡು ಇಂತಹಾ ಬದುಕು ಮಗಳಿಗೆ ಸಿಗಬಾರದೆಂದೇ ಸರೋಜಾ ಒಂದೇ ಸಮನೆ ಗಾಣದೆತ್ತಿನಂತೆ ದುಡಿಯುತ್ತಿದ್ದಳೆಂದರೂ ತಪ್ಪಿಲ್ಲ.
ಬೇರೆ ಬೇರೆ ವ್ಯವಹಾರಕ್ಕೆಲ್ಲ ಮೊಬೈಲ್ ಬೇಕು ಅಂತಾದಾಗ ಸರೋಜ ತಮ್ಮ ಕೇರಿಯ ಕಾಲೇಜು ಓದುವ ಸಂದೀಪನೊಂದಿಗೆ ಪೇಟೆಗೆ ಹೋಗಿ ಆರು ಸಾವಿರ ಕೊಟ್ಟು ಮೊಬೈಲ್ ಖರೀದಿ ಮಾಡಿದ್ದಳು.
“ಮತ್ತೆ ನೋಡು ಐಶು ಬೇಕಾದಷ್ಟಕ್ಕೆ ಮಾತ್ರ ಇದನ್ನ ಉಪಯೋಗಿಸಬೇಕು, ಇಲ್ದೆ ಹೋದ್ರೆ ಕಣ್ಣು ಹಾಳು ತಲೆಯೂ ಹಾಳು, ಭಟ್ರಮ್ಮ ಮೊದಲೇ ಹೇಳಿದಾರೆ” ಎಂದೆಲ್ಲ ಎಚ್ಚರಿಸಿದಳು. ಕೊರೋನಾ ಬಂದು ಆನ್ಲೈನ್ ಪಾಠಗಳು ಶುರುವಾದಾಗ ಪಾಠ ಹೋಂವರ್ಕ್ ಎಂಬ ಕಾರಣಕ್ಕೆ ಹೆಚ್ಚುಕಾಲ ಮೊಬೈಲು ಐಶ್ವರ್ಯಳ ಬಳಿಯೇ ಇರುತ್ತಿತ್ತು.

ಸರೋಜ ಕೆಲಸಕ್ಕೆ ಹೋಗುವ ಭಟ್ಟರ ಮನೆಯಲ್ಲಿ ಅವರ ಮಗಳು ಬೆಂಗಳೂರಿನ ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು.
ತಾನು ಹಾಕಿಬಿಟ್ಟ ಚೂಡಿದಾರ್ ಕುರ್ತಾ ಜೀನ್ಸ್ ಪ್ಯಾಂಟುಗಳೆಲ್ಲ ಹಳತಾದವೆಂದೋ ಅಥವಾ ಪ್ಯಾಶನ್ ಹೋಯಿತೆಂದೋ ಅವುಗಳನ್ನೆಲ್ಲ ತಾನು ಊರಿಗೆ ಬರುವಾಗ ತಂದು ಮೂಲೆಗೆ ಹಾಕುತ್ತಿದ್ದಳು.ಅಷ್ಟೇ ಅಲ್ಲ ಉಪಯೋಗಿಸಿ ಬಿಟ್ಟ ಲಿಪ್ ಸ್ಟಿಕ್ಕುಗಳು, ನೈಲ್ ಪಾಲೀಶ್, ಐ ಲೈನರ್ಗಳು ಒಂದೇ ಎರಡೇ, ಸಕಲ ಅಲಂಕಾರ ಸಾಮಗ್ರಿಗಳನ್ನೂ ಹಳೆಯ ಚೀಲದಲ್ಲಿ ತುಂಬಿ ಮನೆಗೆ ತಂದೆಸೆಯುತ್ತಿದ್ದಳು.
ಸರೋಜಳ ಜೊತೆಗೆ ಐಶ್ವರ್ಯ ಒಮ್ಮೆ ಅಡಿಕೆ ಸುಲಿಯಲೆಂದು ಹೋದಾಗ ಭಟ್ರಮ್ಮ ಮಗಳು ಬೇಡವೆಂದು ಬಿಟ್ಟು ಹೋದ ಬಟ್ಟೆಗಳು ಮೇಕಪ್ ಸಾಮಾನುಗಳೆಲ್ಲವನ್ನು ತಂದು ಐಶ್ವರ್ಯಳ ಮುಂದೆ ಸುರಿದು “ನಿನಗೆ ಬೇಕಾದ್ರೆ ತಗಳೆ ಹುಡುಗಿ, ಬ್ಯಾಡದಿದ್ರೆ ತಗಂಡ್ಹೋಗಿ ಎಲ್ಲಾದರೂ ಹೊತ್ಹಾಕು” ಎಂದು ಹೇಳಿದಾಗ ಐಶ್ವರ್ಯ ಎಲ್ಲವನ್ನು ಗಬಗಬನೆ ಬಾಚಿಕೊಂಡಿದ್ದಳು. ದೂರದಿಂದ ಆಸೆಗಣ್ಣಿನಲ್ಲಿ ನೋಡಿದ್ದೆಲ್ಲವೂ ಕೈಗೇ ಸಿಕ್ಕಂತಾಗಿ ಮನೆಗೆ ಬಂದವಳಿಗೆ ಸಂಭ್ರಮವೋ ಸಂಭ್ರಮ. ತುಟಿಗೆ ಬಣ್ಣ ಬಳಿದಿದ್ದೇ ಬಳಿದಿದ್ದು, ಕೈಯುಗುರು ಕಾಲುಗುರಿಗೆ ಬಣ್ಣ ಹಚ್ಚಿದ್ದೇ ಹಚ್ಚಿದ್ದು!
ಭಟ್ರಮ್ಮಿ ತೊಟ್ಟು ಬಿಟ್ಟ ತರತರದ ಬಟ್ಟೆಗಳೆಲ್ಲವನ್ನು ಹಾಕಿ ತನಗೆ ತಾನೇ ನೋಡಿ ಪಟ್ಟ ಸಂತೋಷಕ್ಕೆ ಎಣೆಯೇ ಇರಲಿಲ್ಲ.

ಬೆಳಗಾದರೆ ತುಟಿಗೆ ಲಿಪ್ ಸ್ಟಿಕ್ ಹಚ್ಚಿ ಕನ್ನಡಿ ನೋಡುತ್ತ ನಿಲ್ಲುವ ಮಗಳನ್ನು ಕಂಡು ಸರೋಜ ಏನೋ ಹುಡುಗಾಟ ಆಸೆ ಎಂದುಕೊಂಡು ಬಿದ್ದ ಕಟ್ಟಿಗೆಯನ್ನಾದರೂ ತರೋಣವೆಂದು ಪ್ಲಾಂಟೇಷನ್ ಕಡೆಗೆ ನಡೆದಳು. ಕಟ್ಟಿಗೆಗಳನ್ನು ಒಟ್ಟುಮಾಡಿ ಹೊರೆ ಕಟ್ಟಿ ತಲೆಯ ಮೇಲೆ ಹೊತ್ತು ಬಂದವಳು ಹಿತ್ತಲ ಬಾಗಿಲಲ್ಲಿ ಹೊರೆ ಇಳಿಸಿ ಅಲ್ಲೇ ಕಟ್ಟೆಯ ಮೇಲೆ ಕುಳಿತು
“ ಐಶೂ ಒಂದು ಚೊಂಬು ನೀರು ತಗಂಬಾರೇ” ಎಂದು ಹೇಳಿ. ಐದು ನಿಮಿಷ ಕಳೆದರೂ ನೀರು ಬರಲಿಲ್ಲವಾದಾಗ ಮತ್ತೆ ದೊಡ್ಡ ದನಿಯಲ್ಲಿ ಐಶೂ ಎಂದು ಕರೆದು ಒಳಗಿಣುಕಿದಳು. ಮಗಳ ಆಟ ಇನ್ನೂ ನಿಂತಿರದಿದ್ದನ್ನು ಕಂಡಾಗ ಮಾತ್ರ ಸರೋಜಳಿಗೆ ಸಿಟ್ಟು ಉಕ್ಕಿ ಬಂತು. ಸುಸ್ತಾಗಿ ಬಂದವಳು ನೀರು ಕೇಳಿದರೆ ತಂದು ಕೊಡೋದು ಬಿಟ್ಟು ಹೀಗೆ ಮಳ್ರೂಪು ಮಾಡ್ತಿದಾಳೆ ಬೋಸುಡಿ,ಎಂದುಕೊಳ್ಳುತ್ತ ತಾನೇ ಚೊಂಬು ಹಿಡಿದು ನೀರಿನ ಕೊಡದತ್ತ ಬಂದರೆ ಕೊಡದಲ್ಲಿ ಹನಿ ನೀರೂ ಇರಲಿಲ್ಲ.
ಪಿತ್ತ ನೆತ್ತಿಗೇರಿದಂತಾಗಿ ಏ ಐಶೂ ಎಂದು ಕೂಗಿದ ಹೊಡೆತಕ್ಕೆ ಆಗಷ್ಟೇ ಎಚ್ಚರಾದವಳಂತೆ ಐಶ್ವರ್ಯ ತಾಯಿಯ ಮುಖ ನೋಡಿದಳು.
ಅವಳ ಉಗ್ರಾವತಾರಕ್ಕೆ ಹೆದರಿ ಒಂದೂ ಮಾತನಾಡದೇ ನೀರು ತಂದಿಟ್ಟವಳು ಮುಸುರೆ ಪಾತ್ರೆಗಳನ್ನೆಲ್ಲ
ತೊಳೆಯಲು ಕೂತಳು.
ತಣ್ಣಗೊಂದಿಷ್ಟು ನೀರನ್ನು ಗಟಗಟನೆ ಕುಡಿದ ಸರೋಜ ಹಾಗೆಯೇ ಸ್ವಲ್ಪ ಹೊತ್ತು ಸುಮ್ಮನೆ ಕುಳಿತಳು. ಮಗಳ ಮೊಬೈಲ್ ಮುಂಗಾರು ಮಳೆಯೇ ಎಂದು ಹಾಡಿದ್ದು ಕೇಳಿತು. ಪಾತ್ರೆ ತೊಳೆಯುತ್ತಿದ್ದವಳು ಮೊಬೈಲ್ ತೆಗೆದುಕೊಂಡು ಹಿತ್ತಿಲಕಡೆ ಹೋಗಿದ್ದನ್ನು ಕಂಡು ಯಾಕೋ ಈಗಿತ್ಲಾಗಿ ಇವಳ ಫೋನು ಬಡ್ಕೊಳದು ಹೆಚ್ಚಾಗೈತಿ! ಆ ನೇತ್ರ ಹೇಳಿದಂಗೆ ಸ್ವಲ್ಪ ನಿಗಾ ಮಡಗ್ಬೇಕುಎಂದುಕೊಂಡಳು. ಎಷ್ಟು ಹೊತ್ತಾದರೂ ಮಗಳ ಮಾತು ಮುಗಿಯದಾದಾಗ ಕೂಗಿದಳು “ಎಲ್ಲಿ ಹೋದ್ಯೇ ಪಾತ್ರೆನೆಲ್ಲ ಹಂಗಂಗೇ ಬಿಟ್ಟು, ಎಲ್ಲ ಒಣಗಿ ಕೂತ್ವು” ಜೋರಾಗಿ ಗದರಿದಾಗ ಐಶು ಏನೋ ಹೇಳಿ ಮತ್ತೆ ಬಂದು ಪಾತ್ರೆ ತೊಳೆಯಲು ಕೂತಳು.
“ಯಾರದ್ದೇ ಫೋನು? ಭಾರೀ ಮಾತುಕತೆ ನಡೀತಿದ್ಹಾಂಗಿತ್ತು!
ಇತ್ತಿತ್ಲಾಗಿ ಬಾರೀ ಫೋನು ಬರ್ತೈತಲ್ಲೇ”
“ಚಂದ್ರಿ ಕಣೇ, ಸಾಗರದಾಗೆ ಗೇರುಬೀಜದ ಫ್ಯಾಕ್ಟರೀಲಿ ಕೆಲಸ ಇದೆಯಂತೆ, ಬರ್ತೀಯಾ ಅಂತ ಕೇಳಿದ್ಲು” ಎಂಬ ಉತ್ತರ ಬಂತು
ಮನೆಯಲ್ಲಿ ಬರೀ ಪುಗಸಟ್ಟೆಮೊಬೈಲು ನೋಡುತ್ತ ಕಾಲ ಕಳೆಯುವ ಬದಲು ನಾಕು ಕಾಸು ಸಂಪಾದನೆಯಾದರೂ ಮಾಡಲಿ, ಕಷ್ಟ ಪಟ್ಟರೆ ಕಾಸಿನ ಬೆಲೆ ತಿಳೀತದೆ ಎಂದು ಯೋಚಿಸಿದ ಸರೋಜ
“ಸರಿ ಸರಿ ತೆಪ್ಪಗೆ ಹೋಗಿ ತೆಪ್ಪಗೆ ಬನ್ನಿ ,ಮತ್ತೇನಾರ ಶುರು ಹಚ್ಕಂಡ್ರೆ ಹುಷಾರ್ “ ಎಂದು ಎಚ್ಚರಿಸಿದಳು.

ಮಗಳು ಓದಿ ನೌಕರಿ ಹಿಡಿದು ಭಟ್ರಮ್ಮಿಯ ತರ ಬೆಂಗಳೂರಿನಲ್ಲಿ ಅದೆಂತದೋ ಸಾಫ್ಟ್ವೇರು ಹೇಳ್ತಾರಲ್ಲಾ ಅದೇ ಆಗಬೇಕು ಎಂದು ಸರೋಜ ಅದೆಷ್ಟು ಕನಸು ಕಂಡಿದ್ದಳು. ಆದರೆ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಗೊತ್ತಾದ ದಿನ ಮಗಳಿಗಿಂತ ಹೆಚ್ಚಾಗಿ ಸಂಕಟ ಪಟ್ಟವಳೂ ಅವಳೇ. ಮತ್ತೆ ಪರೀಕ್ಷೆ ಕಟ್ಟಿ ಓದೇ ಎಂದರೂ “ ಬಿಡವ್ವ ಓದಿ ನೋಕರಿ ತಗಳದು ಅಷ್ಟರಾಗೇ ಇದೆ, ನಾ ಫ್ಯಾಕ್ಟರಿಗೆ ಹೋಗ್ತೀನಿ “ ಖಡಾಖಂಡಿತವಾಗಿ ಹೇಳಿದ್ದಳು ಐಶು.
ಮನೆಯ ಹತ್ತಿರವೇ ಬರುತ್ತಿದ್ದ ಕೆಂಪು ಬಸ್ಸಿನಲ್ಲಿ ಐಶೂ ಗೆಳತಿ ಚಂದ್ರಮತಿಯ ಜೊತೆ ಗೇರುಬೀಜದ ಫ್ಯಾಕ್ಟರಿ ಗೆ ಹೋಗುತ್ತಿದ್ದಳು. ತಾಯಿಗೆ ತಿಳಿಯದಂತೆ ತುಟಿಗೆ ತೆಳುವಾಗಿ ಲಿಪ್ ಸ್ಟಿಕ್ ಸವರಿ ಕಣ್ಣಿಗೆ ಕಾಡಿಗೆ ಹಚ್ಚಿ ಲೆಗ್ಗಿನ್ಸು ಕುರ್ತಾ ಹಾಕಿ ಹೊರಟಳು. ಮೊದಲನೆಯ ದಿನ ಹೋದವಳೇ ಕೆಲಸ ಮುಗಿಸಿ ಬರುವಾಗ ಅಂಜುಮಾನ್ ಚಪ್ಪಲಿ ಅಂಗಡಿಗೆ ಹೋಗಿ ಎತ್ತರ ಹಿಮ್ಮಡಿಯ ಚಪ್ಪಲಿಯೊಂದನ್ನು ಕೊಂಡಿದ್ದಳು. ಗೆಳತಿ ಚಂದ್ರಿಯ ಅಣ್ಣ ಗೋವಾದಲ್ಲಿ ಕೆಲಸ ಮಾಡುವವನು ತಂಗಿಗೆ ಬೇಕಾದಷ್ಟು ದುಡ್ಡು ಕಳಿಸುತ್ತಿದ್ದ. ಹಾಗಾಗಿ ಅವಳ ಶೋಕಿಗೇನೂ ಕೊರತೆ ಇರಲಿಲ್ಲ. ಅವಳೇ ಇವಳಿಗೆ ಸಲಹೆಗಾರ್ತಿಯಾಗಿದ್ದಳು.
ಆಕರ್ಷಕ ಮುಖ, ಅದೇ ತಾನೇ ಮೊಗ್ಗೊಡೆದು ಅರಳುತ್ತಿರುವ ದೇಹ, ಕನಸು ಕಣ್ಣುಗಳ ಹುಡುಗಿ ಅಕ್ಕ ಪಕ್ಕದ ಹುಡುಗರನ್ನು ಕುಡಿನೋಟದಲ್ಲಿ ಒಮ್ಮೆ ನೋಡಿದರೆ ಅವರು ಮತ್ತೆ ಮತ್ತೆ ನೋಡುತ್ತಲೇ ಇದ್ದರು.
“ಏ ಐಶು ನನ್ನ ಫೋಟೋ ತೆಗೆಯೇ” ಎಂದು ಚಂದ್ರಿ ಬೇರೆ ಬೇರೆ ಫೋಸು ಕೊಡುತ್ತಾ ಮೊಬೈಲಿನಲ್ಲಿ ಫೋಟೋ ತೆಗೆಸಿಕೊಳ್ಳುತ್ತಿದ್ದಳು. ವೀಡಿಯೋ ಮಾಡೇ ಎಂದು ಡ್ಯಾನ್ಸ್ ಮಾಡುತ್ತಿದ್ದಳು. ಅವೆಲ್ಲವನ್ನು ಫೋನಿನಲ್ಲಿ ತೋರಿಸುತ್ತಿದ್ದರೆ ಬೆರಗಾಗಿ ನೋಡುವ ಐಶ್ವರ್ಯಳಿಗೆ “ನೋಡೇ ಇಷ್ಟು ವ್ಯೂಸ್ ಫೇಸ್ಬುಕ್ನಾಗೆ, ಇಷ್ಟು ಇನ್ಸ್ಟಾಗ್ರಾಂ ನಾಗೆ ಬಂದಾವೆ, ನೀನೂ ಮಾಡಿ ಹಾಕು” ಎಂದು ಪ್ರೋತ್ಸಾಹಿಸುತ್ತಿದ್ದಳು.
“ ಬ್ಯಾಡ ಕಣೇ ಚಂದ್ರಿ ,ನಮ್ಮಮ್ಮಂಗೆ ಇಂತಾವೆಲ್ಲ ಆಗಿ ಬರಲ್ಲ, ಗೊತ್ತಾದ್ರೆ ಮತ್ತೇನಿಲ್ಲ ಚಮಡ ಸುಲಿದು ಬಾಗ್ಲಿಗೆ ತೋರಣ ಕಟ್ತಾಳೆ, ತಗಾ ನಿನ್ನ ಮೊಬೈಲು” ಎಂದು ಗೆಳತಿಗೆ ಹೇಳಿ ಮನೆಯೊಳಗೆ ಬಂದಳು.
ಕಪಾಟಿನಲ್ಲಿದ್ದ ಮೊಬೈಲನ್ನು ನೋಡಿದ ಕೂಡಲೇ ಮನಸ್ಸು ತಡೆಯದೆ ಕೈಗೆತ್ತಿಕೊಂಡು ಸೆಲ್ಫಿ ತೆಗೆದುಕೊಂಡಳು. ನಾಲಿಗೆ ಚಾಚಿ ಮುಖ ಮೂಗುಗಳನ್ನು ಓರೆ ಕೋರೆಯಾಗಿಸಿ ತರತರದ ಮಂಗನಾಟಗಳಲ್ಲಿ ಸೆಲ್ಫಿ ತೆಗೆದು ಗೆಳತಿಯ ನಂಬರಿಗೆ ಸೆಂಡ್ ಮಾಡಿದಳು. ನೀಲಿ ಗೆರೆ ಬಂದ ಕೂಡಲೇ ತಾಯಿಗೆ ತಿಳಿಯಬಾರದೆಂದು ಡಿಲೀಟ್ ಮಾಡಿಬಿಟ್ಟಳು.
ಸೂಪರ್ ಎಂದು ಬಂದ ಚಂದ್ರಿಯ ಮೆಸೇಜೂ ಡಿಲೀಟಾಗಿ ಸರೋಜ ಬರುವ ವೇಳೆಗೆ ಮೊಬೈಲು ಕಪಾಟಿನಲ್ಲಿತ್ತು.
ಅವತ್ತು ಚಂದ್ರಿ ಬಂದಿರಲಿಲ್ಲ. ಕೆಲಸ ಮುಗಿಸಿ ಮದ್ಯಾನ್ನದ ಬಿರು ಬಿಸಿಲಿನಲ್ಲಿ ಐಶೂ ಒಬ್ಬಳೇ ಬಿ ಹೆಚ್ ರಸ್ತೆಯ ಬಸ್ ನಿಲ್ದಾಣದಲ್ಲಿ ಊರ ಕಡೆ ಹೋಗುವ ಬಸ್ ಕಾಯುತ್ತ ನಿಂತಿದ್ದಳು.ಪಕ್ಕದಲ್ಲೇ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ಆಗಾಗ ಇವಳತ್ತಲೇ ನೋಡುತ್ತಿದ್ದ ಹುಡುಗನೊಬ್ಬ ಬೈಕಿನಲ್ಲಿ ಬಂದುನಿಂತ. ‘‘ಬೇಬಿ ನೀನು ತುಂಬಾ ಸ್ಮಾರ್ಟ್” ಎಂದು ಹೇಳಿದಾಗ ಐಶು ನಾಚಿ ತಲೆ ತಗ್ಗಿಸಿದಳು.

“ಅದೇನೇ ಐಶೂ ಯಾವಾಗ ನೋಡಿದ್ರೂ ತುಟಿಗೆ ಬಣ್ಣ ಹಚ್ಚಿ ಕೂತೀರ್ತಿಯವ್ವ ಇತ್ತಿತ್ಲಾಗಿ ನಮ್ಕೂಟೆ ಮಾತಿಲ್ಲ ಕತೆಯಿಲ್ಲ ಬಿಡವ್ವ ನಾಕಕ್ಸರ ಕಲಿತಿದ್ದಕ್ಜೆ ಈಟೊಂದು ಜಂಬ ಪಡಬರ್ದು”
ಹಿಂದೆಲ್ಲ ಕುಂಟಾಬಿಲ್ಲೆ ಯತಿಗಲ್ಲುಗಳನ್ನು ಒಟ್ಟಾಗಿ ಆಡುತ್ತಿದ್ದ ಸಂಪಿಗೆ ಹಣ್ಣು ಕೌಳಿಯ ಹಣ್ಣುಗಳನ್ನೆಲ್ಲ ಕೊಯ್ಯಲು ಜೊತೆಯಾಗುತ್ತಿದ್ದ ತನ್ನದೇ ಓರಗೆಯ ಸರಸಿ ಹೇಳಿದಾಗ ಇಲ್ಕಣೆ ಹಂಗೆ ಹಿಂಗೇ ಎಂದು ಏನೋ ಹೇಳಿ ತಪ್ಪಿಸಿಕೊಂಡಳು. ಇವರೊಂದಿಗೆಲ್ಲ ಎಂತ ಮಾತೆನಿಸಿಬಿಡುತ್ತಿತ್ತು.
ಆದರೆ ತನಗೆ ಮೊಬೈಲಿನಲ್ಲಿ ರೀಲ್ಸ್ ಮಾಡುವ ಹುಚ್ಚು ಹಿಡಿದಿದ್ದನ್ನು ಹೇಳಲೇ ಇಲ್ಲ.
ಐಶ್ವರ್ಯ ಕಪಾಟಿನಲ್ಲಿಟ್ಟ ಮೊಬೈಲ್ ಕೈಗೆತ್ತಿಕೊಂಡು ಅದರಲ್ಲೇ ಮುಳುಗಿಹೋದಳು..ತೋರುಬೆರಳ ತುದಿಯೆಂಬುದು ಏನೇನೆಲ್ಲ ಮುಟ್ಟಿತೋ! ಗಂಟೆಯೊಳಗೆ ತಾನೊಂದು ಬೇರೆಯದೇ ಲೋಕದಲ್ಲಿರುವಂತೆ ಭ್ರಮೆ ಆವರಿಸಿತು.
ಐಸೂ ಐಸೂ ಎಂಬ ನೇತ್ರಕ್ಕನ ದನಿಗೆ ಎಚ್ಚರಾಗಿ ಗಡಬಡಿಸಿ ಎದ್ದು ಹೊರಬಂದು ಬಾಗಿಲುತೆರೆದಳು.
“ ಇವತ್ತು ಮೂರುಗಂಟೆಗೆ ಸಂಘದ ಮೀಟಿಂಗ್ ಐತೆ ನೆನಪು ಮಾಡು ನಿಮ್ಮವ್ವನಿಗೆ” ಎಂದ ನೇತ್ರ ಇವಳತ್ತ ಒಂದು ರೀತಿಯಾಗಿ ನೋಟ ಹರಿಸಿ ನಡೆದಳು.
ಇದ್ದಕಿದ್ದಂತೆ ತಾಯಿ ಹೇಳಿದ ಕೆಲಸಗಳೆಲ್ಲ ನೆನಪಾಗಿ ತಾನೇನಾದರೂ ಅಡಿಗೆ ಮಾಡಿಟ್ಟಿಲ್ಲವೆಂದರೆ ಬಂದವಳು ಹಸಿವಿಗೆ ತನ್ನನ್ನೇ ಕೊಂದು ತಿಂದರೂ ತಿಂದಳೇ ಎನ್ನುತ್ತ ಅಡರಾ ಬಡರಾ ಕೆಲಸ ಶುರು ಹಚ್ಚಿಕೊಂಡಳು.
ಚಂದ್ರಿಯ ತಾಯಿಗೆ ಹುಶಾರಿಲ್ಲವೆಂದು ಅವಳು ಫ್ಯಾಕ್ಟರಿಗೆ ಹೋಗುತ್ತಿರಲಿಲ್ಲ. ಐಶ್ವರ್ಯ ಒಬ್ಬಳೇ ಕೆಂಪು ಬಸ್ಸು ಹತ್ತುತ್ತಿದ್ದಳು. “ನೀನೂ ಹೋಗದು ಬ್ಯಾಡ ಕಣೆ ಇಲ್ಲೇ ಗೌಡರ ಮನೆಲಿ ಚಾಲಿ ಅಡಿಕೆ ಸುಲಸ್ತಾರೆ ಹೋಗಿ ಸುಲಿಯೋಗು” ಎಂದು ಸರೋಜ ಹೇಳಿದಳು. ಆದರೀಗ ಅವಳ ಮಾತು ಕೇಳದಷ್ಟು ಮಗಳು ಮುಂದೆ ಹೋಗಿದ್ದಳೆಂಬುದು ಅವಳಿಗೆ ಅರಿವಾಗಲೇ ಇಲ್ಲ.
ನಿನ್ನ ಮಗಳು ಪ್ಯಾಟೇಲಿ ಯಾರೋ ಹುಡುಗನ ಜೊತೆ ಬೈಕಿನ ಮೇಲೆ ಹೋಗ್ತಿದ್ಲಲ್ಲೇ ಸರೋಜಾ ಎಂದು ಎದುರಿನ ಮನೆ ಶೇಕ್ರಣ್ಣ ಹೇಳಿದಾಗ ಒಂದು ಕ್ಷಣ ಗಲಿಬಿಲಿ ಗೊಂಡರೂ ಮತ್ತೆ ಇದೇ ದೊಡ್ಡ ಸುದ್ದಿಯಾಗುವುದು ಬೇಡವೆಂದು “ ಓ ಅದಾ , ನಮ್ನ ದೊಡ್ಡವ್ವನ ಮಗಳ ಮಗ ಅವ್ನು ಶೇಕ್ರಣ್ಣ’’ ಎಂದು ಹೇಳಿದವಳು ಮತ್ತೆ ಮಾತಿಗೆ ನಿಲ್ಲದೆ ಬಿರಬಿರನೆ ನಡೆದೇಬಿಟ್ಟಳು. ಮಗಳೆಂದರೆ ಅಪಾರ ಪ್ರೀತಿ ನಂಬಿಕೆ ಎಲ್ಲವೂ ಇದ್ದರೂ ಮಗಳ ವಯಸ್ಸಿನ ಬಗ್ಗೆ ತಾನು ಜಾಗರೂಕಳಾಗಿರಬೇಕೆಂಬ ಎಚ್ಚರಿಕೆಯೊಂದು ಸದಾ ಸರೋಜಳನ್ನು ಎಚ್ಚರಿಸುತ್ತಿತ್ತು. ಗಂಡ ಸೊಪ್ಪು ಕಡಿಯಲೆಂದು ಮರ ಹತ್ತಿದವನು ಮೇಲಿನಿಂದ ಬಿದ್ದು ಮತ್ತೆ ಎದ್ದಿರಲೇ ಇಲ್ಲ. ಅಂದಿನಿಂದ ತಂದೆ ಕಳೆದುಕೊಂಡ ಹುಡುಗಿ ಎಂದು ಮತ್ತಷ್ಟು ಮುದ್ದಿನಿಂದ ಮಗಳನ್ನು ಸಾಕಿದ್ದಳು. ಇನ್ನಿವಳಿಗೆ ಒಳ್ಳೆಯ ಹುಡುಗನೊಬ್ಬನನ್ನು ಹುಡುಕಿ ಸರಿಯಾದ ನೆಲೆ ಸೇರಿಸಿ ತನ್ನ ಜವಾಬ್ದಾರಿ ಕಳೆದುಕೊಳ್ಳಬೇಕು, ತನ್ನ ತಲೆಗೆ ಹೇಗೂ ಹಾಳೆ ಟೊಪ್ಪಿಯೇ ಗತಿ ಎಂದುಕೊಂಡಳು.
ಐಶ್ವರ್ಯ ಮನೆಗೆ ಬಂದವಳು ಗೋಡೆಗೊರಗಿ ಕೂತು ನಿನ್ನೆ ಬಿಟ್ಟ ರೀಲ್ಸಿಗೆ ಎಷ್ಟು ವ್ಯೂಸು ಲೈಕ್ಸು ಬಂದಿದೆ ಎಂದು ನೋಡುತ್ತಿದ್ದಳು. ಬೆನ್ನ ಮೇಲೆ ಬಲವಾಗಿ ಹೊಡೆತ ಬಿದ್ದಾಗ ಬೆಚ್ಚಿ ನೋಡಿದರೆ ತಾಯಿ! ಯಾವನೆ ಅಂವ ಬೋಸುಡಿ ?
ಯಾವ ಮಿಂಡಗಾರನ್ನ ಕಟ್ಕ್ಯಂಡ್ ಬೈಕಿನಲ್ಲಿ ಹೋಗ್ತಿದ್ದೆ ಬೊಗಳೇ” ಎಂದು ಜೋರಾಗಿ ಬೈದಳು
“ಯಾವನೂ ಇಲ್ಲ, ಬಿಡೇ ಮಾರಾಯ್ತಿ, ಬಸ್ಸಿಗೆ ತಡಾಯ್ತು ಅಂತ ಪ್ಯಾಕ್ಟರಿಲಿ ಕೆಲಸ ಮಾಡೋವ್ನೊಬ್ಬನ ಜೊತೆ ಬಂದೆ ಅಷ್ಟೇ , ಅಷ್ಟಕ್ಕೇ ಇಷ್ಟ್ ಎಗರಾಡ್ತೀಯಲ್ಲೆ, ಮಗಳು ಬಾಯಿ ದೊಡ್ಡ ಮಾಡಿದಾಗ ಸರೋಜ ಸುಸ್ತಾದವಳಂತೆ ಕೂತುಬಿಟ್ಟಳು. ಎಲ್ಲೋ ಹಳಿ ತಪ್ಪುತ್ತಿದೆ ಎಂದರಿವಾಯಿತು.
ಮಗಳು ಸ್ನಾನಕ್ಕೆಂದು ಬಚ್ಚಲಿಗೆ ಹೋದಾಗ ಮೊಬೈಲು ತೆಗೆದು ನೋಡಿದಳು, ಯಾಕೋ ಏನೂ ಬರ್ತಾ ಇರಲಿಲ್ಲ, ಏನು ಮಾಡಿಟ್ಟವಳೋ ಲೌಡಿ ಎಂದು ಅದನ್ನಲ್ಲೇ ಬಡಿದಳು.
ತಲೆಗೆ ಸ್ನಾನಮಾಡಿ ಫಳಫಳಾ ಅಂತ ಹೊಳೆಯುತ್ತ ಬಂದ ಮಗಳನ್ನು ನೋಡುತ್ತಿದ್ದಂತೆ ಅದೇನನಿಸಿತೋ ಸರೋಜಳಿಗೆ!
ಏ ಐಶು ಈ ಮೊಬೈಲ್ನಾಗೆ ಅದೇನೇನು ಬರ್ತೈತೋ ಎಲ್ಲ ನನಗೂ ತೋರ್ಸು, ಹೇಳ್ಕೊಡು “ ಎಂದಳು.
ಅಯ್ಯಬ್ಬಾ ಇವಳಿಗೇನು ಬಂತಪ್ಪಾ ಎಂದುಕೊಂಡರೂ ಐಶ್ವರ್ಯ ತಾಯಿಗೆ ಯು ಟ್ಯೂಬು ಫೇಸ್ಬುಕ್ಕು ಎಲ್ಲ ತೋರಿಸಿದಳು. ತಾನು ಹಾಕಿದ ರೀಲ್ಸನ್ನು ಮಾತ್ರ ಸದ್ಯ ಬೇಡವೆಂದು ತೋರಿಸಲಿಲ್ಲ.

ಬೇಬಿ ಬೇಬಿ ಎಂದೆಲ್ಲ ಮುದ್ದುಗರೆಯುವ ಹೊಗಳುವ ಹಿತೇಶ ಎಂಬ ಗೆಣೆಕಾರ ಆಗಾಗ ಹಗಲಿನಲ್ಲೂ ಕನಸಾಗಿ ಬಂದು ಏನೆಲ್ಲ ಮಾಡುತ್ತಿದ್ದ. ಫ್ಯಾಕ್ಟರಿಗೆ ಹೋಗದೇ ಇಬ್ಬರೂ ಬೈಕಿನಲ್ಲಿ ಅಂಟಿಕೊಂಡು ಕುಳಿತು ಜೋಗಕ್ಕೆ ಹೋಗಿದ್ದನ್ನು ಅಲ್ಲಿನದನ್ನು ನೆನೆದರೆ ಮೈಯೆಲ್ಲಾ ಬಿಸಿಬಿಸಿ.
ನನ್ನ ರೀಲ್ಸನ್ನೆಲ್ಲ ನೋಡಿ ಸಿನಿಮಾ ಮಾಡೋರು ಕಾಲ್ ಮಾಡ್ತಾರೆ, ಟಿ ವಿ ಧಾರಾವಾಹಿಯವರು ಕರೀತಾರೆ ಎಂದೆಲ್ಲ ಊಹಿಸಿ ಪುಳಕಗೊಳ್ಳುತಗತಿದ್ದಳು. ಒಂದಿಷ್ಟು ಮೇಕಪ್ ಸಾಮಾನೆಲ್ಲ ತಗೋಬೇಕು, ರೀಲ್ಸಿನಲ್ಲಿ ಚಂದ ಕಾಣ್ಬೇಕು, ಬೆಂಗಳೂರಿಗೆ ಕರೆದ್ರೆ ಹೇಗೂ ಅವನೇ ಕರ್ಕಂಡ್ಹೋಗ್ತೇನೆ ಎಂದಿದಾನೆ ,ಮನಸ್ಸು ರೀಲುಗಳಾಗಿ ಸುತ್ತುತ್ತಲೇ ಇತ್ತು.

ಸಂಜೆಯಾದರೂ ಮಗಳು ಮನೆಗೆ ಬಂದಿರಲಿಲ್ಲ.
ಓ ಕಥೆ ಕೆಡ್ತು ಈ ಚಿನಾಲಿ ಏನೋ ನಾಟ್ಕ ಶುರು ಹಚ್ಕಂಡವಳೆ, ಏನು ಆಗಬರ್ದು ಅಂದ್ಕಂಡಿದ್ನೋ ಅದೇ ಆಗ್ತಾ ಇದೆ, ಚಂದ್ರಿಯ ಮನೆಯಲ್ಲಿ ನೋಡೋಣವೆಂದು ಅಲ್ಲಿಗೆ ಹೋದಳು. ಅಲ್ಲಿ ಮಗಳು ಕಾಣಲಿಲ್ಲ. ಚಂದ್ರಿಗೆ ಏನೂ ಹೇಳದೇ ಹಾಗೇ ಅಲ್ಲಿಂದ ಬಿರಬಿರನೆ ಮನೆಯತ್ತ ಹೆಜ್ಜೆ ಹಾಕಿದಳು. ಮನೆಗೆ ಬರುವ ವೇಳೆಗೆ ದೀಪ ಹಾಕಿತ್ತು. ಮಗಳು ಬಂದು ಮೊಬೈಲ್ ಹಿಡಿದು ಕೂತಿದ್ದಳು.
ತುಟಿ ಮತ್ತು ಕೆನ್ನೆಯ ರಂಗುಗಳು ಸುರುಳಿ ಕೂದಲು,ಏನೇನೋ ಕಥೆ ಹೇಳಿದವು.
“ಇಷ್ಟೊತ್ತನಾ ನಿನ್ನ ಕೆಲ್ಸ ಇರ್ತೈತೇನೇ, ಪ್ಯಾಟೆಗೆ ಹೋಗಿ
ಏನಾಟ ನಡೆಸೀಯೆ ಹೇಳು’’. ಏನೂ ಉತ್ತರ ಬರಲಿಲ್ಲ. “ಸತ್ಯ ಯಾವುದು ಸುಳ್ಳು ಯಾವುದು ತಿಳಿಯದ ವಯಸ್ಸು ನಿಂದು ಅರ್ಥ ಮಾಡ್ಕ್ಯಳೇ ಹೇಳು ಏನು ಮಾಡ್ತಿದೀಯೆ ಅಂತ” ಎಂದಳು
“ಹೌದೇ ನಾನು ರೀಲ್ಸ್ ಮಾಡಿ ಹಾಕ್ತೇನೆ, ಸಿನಿಮಾ ಸ್ಟಾರಾಗ್ತೇನೆ, ನನಗೆ ಎಷ್ಟು ಲೈಕ್ಸ್ ಬರ್ತಾವೆ ಅದೆಲ್ಲಾ ನಿನಗೇನು ಗೊತ್ತು ಬಿಡೇ” ಎಂದು ಐಶ್ವರ್ಯ ತಾಯಿಗೆ ಒರಟಾಗಿ ಹೇಳಿದಾಗ ಕೋಪದಿಂದ ಸರೋಜ ಮಗಳ ಕೂದಲನ್ನು ಜಗ್ಗಿ ಹಿಡಿದು ಕೆನ್ನೆಗೊಂದೇಟು ಕೊಡಬೇಕೆನ್ನುವಷ್ಟರಲ್ಲಿ ಹೋಗೇ ಅತ್ಲಾಗಿ ಎಂದು ಐಶು ತಾಯಿಯನ್ನು ಜೋರಾಗಿ ದೂಡಿಬಿಟ್ಟಳು.
ತಲೆ ಜೋರಾಗಿ ಗೋಡೆಗೆ ಬಡಿದು ಹಾಗೇ ಬಿದ್ದುಬಿಟ್ಟಳು ಸರೋಜ
ತಲೆಯಿಂದ ಇಳಿದ ರಕ್ತ ನೆಲದ ಮೇಲೆ ಬಿದ್ದು ಗಟ್ಟಿಯಾಗಿತ್ತು. ಎಚ್ಚರವಾದಾಗ ಏಳಲೂ ಆಗದ ನಿತ್ರಾಣ.ಮತ್ತಲ್ಲೇ ಮಲಗಿಬಿಟ್ಟಳು. ಅರೆ ಮಂಪರು. ನೂರಾರು ಲಿಪ್ಸ್ಟಿಕ್ಗಳು ಕ್ಯುಟೆಕ್ಸುಗಳು ಪೌಡರ್ ಸ್ನೋ ಡಬ್ಬಿಗಳು ಹೇರ್ಕ್ಲಿಪ್ಪು ಸರ ಬಳೆಗಳು, ಎಲ್ಲವನ್ನು ಹರಡಿಕೊಂಡು ನಡುವೆ ಮೇಕಪ್ ಮಾಡುತ್ತ ಕುಳಿತ ಐಶು, ಒಂದಲ್ಲ ಎರಡಲ್ಲ ನಾಕಾರು ದೊಡ್ಡದೊಡ್ಡ ಮೊಬೈಲುಗಳು, ವೀಡಿಯೋ ಮಾಡೆನ್ನುತ್ತಿದ್ದಾಳೆ,
ಯಾವುದೋ ಒಂದನ್ನು ಸರೋಜ ಕೈಗೆತ್ತಿಕೊಳ್ಳುತ್ತಿದ್ದಂತೆ ಅದಕ್ಕೆ ಬಾಲ ಮೂಡಿ ಹೆಡೆ ಬೆಳೆದು ಬುಸ್ ಎಂದು ಬಾಯಿ ಕಳೆಯಿತು. ಮತ್ತೆ ನೋಡುತ್ತಿದ್ದಂತೆಯೇ ಉದ್ದದ ತಲೆ ಕೂದಲು ಗಡ್ಡ ಬಿಟ್ಟು ಬಗಲಲ್ಲಿ ಜೋಳಿಗೆ ಹಿಡಿದ ಜೋಗಿಯಾದ,
“ಮಾಯ್ಕಾರ ಜೋಗಿ ಬಂದು ಬಾಗಿ ಬಾಗಿ ನೋಡುತ್ತಾನೆ
ಅಕ್ಕಿ ನೀಡಲೇನತ್ತೆ ಜೋಳ ನೀಡಲೇ
ಅಕ್ಕಿನಾದ್ರೂ ನೀನೇ ನೀಡು ಜೋಳನಾದ್ರೂ ನೀನೇ ನೀಡು
ನಡೆಯೋ ಜೋಗಿ ನಿನ್ನರಮನೆಗೆ”
ಸಣ್ಣ ಹುಡುಗಿ ಐಶು ಡ್ಯಾನ್ಸ್ ಮಾಡ್ತಾ ಮಾಡ್ತಾ ದೊಡ್ಡವಳಾಗಿ, ಅವನು ಬಾ ಬಾ ಎಂದು ಕರೆಯುತ್ತಿದ್ದಂತೆ ಅವನ ಹಿಂದೆ ಹಿಂದೆಯೇ ನಡೆದು ಮಾಯವಾಗಿಬಿಟ್ಟಳು.
ಭಯದಿಂದ “ಏ ಐಶೂ ಹೋಗಬೇಡೇ” ಎಂದು ಚೀರಿದಳು ಸರೋಜ, ಆದರೆ ದನಿ ಹೊರಡಲೇ ಇಲ್ಲ.
ಗಂಟಲಾರಿ ಹೋಗಿತ್ತು. ನೀರು ನೀರು ಎಂದು ಕನವರಿಸಿದಳು.
ಕಣ್ಣು ತೆರೆದರೆ ಐಶು ಕಾಣಲಿಲ್ಲ. ಹಾಗೇ ತೆವಳುತ್ತ ಹೋಗಿ ಚೊಂಬಿನ ನೀರನ್ನು ಗಟಗಟನೆ ಕುಡಿದಳು. ಕಣ್ಣು ಬಿಟ್ಟಿದ್ದಳೋ ಮುಚ್ಚಿದ್ದಳೋ ! ಗೋಡೆಗೊರಗಿ ಕೂತಿದ್ದನ್ನು ನೋಡಲಾರದೆ ಇರುಳೆಂಬ ಇರುಳೂ ಸರಸರನೆ ಸರಿದೇ ಹೋಯ್ತು.

ಸರೋಜಾ ಮಂಕಾಗಿಬಿಟ್ಟಳು. ಕೇರಿಯಲ್ಲೆಲ್ಲ ಐಶ್ವರ್ಯ ನಾಪತ್ತೆಯಾಗಿದ್ದಾಳೆಂಬ ಸುದ್ದಿ ರಾತ್ರಿ ಬೆಳಗಾಗುವುದರಲ್ಲಿ ಹಬ್ಬಿಬಿಟ್ಟಿತು.
ವಾರ ಕಳೆಯುತ್ತಿದ್ದಂತೆ ಸರೋಜ ತನ್ನ ಪಾಡಿಗೆ ತಾನು ಎಂದಿನಂತೆ ಕೆಲಸಕ್ಕೆ ಹೋಗತೊಡಗಿದಳು. ತಿಂಗಳುಗಳೇ ಕಳೆದವು. ಮಗಳು ಮಾಯ್ಕಾರ ಜೋಗಿಯ ಹಿಂದೆ ನಡೆದೇ ಬಿಟ್ಟಳು ,ಕೊನೆಗೂ ತನಗವಳನ್ನು ತಡೆದು ನಿಲ್ಲಿಸಲಾಗಲಿಲ್ಲ ಎಂಬುದನ್ನು ಒಡಲಲ್ಲಿಟ್ಟುಕೊಂಡು ಮೂಕಳಾಗಿಬಿಟ್ಟಳು.
“ಸರೋಜಾ ಬೇಕಾದರೆ ಇವನ್ನೆಲ್ಲ ತಗಂಡ್ಹೋಗೆ” ಎಂದು ಭಟ್ರಮ್ಮ ಮಗಳು ಬಿಟ್ಟು ಹೋದ ಹಾಳು ಮೂಳುಗಳೆಲ್ಲವನ್ನು ತಂದು ಹಾಕಿದರು. ಅವನ್ನೆಲ್ಲ ನೋಡುತ್ತಿದ್ದಂತೆ ಸರೋಜಳ ಪಿತ್ತ ನೆತ್ತೆಗೇರಿತು. ಒಂದೂ ಮಾತನಾಡದೇ ಅವನ್ನೆಲ್ಲ ಅಲ್ಲೇ ಇದ್ದ ಬಟ್ಟೆಯಲ್ಲಿ ಗಂಟು ಕಟ್ಟಿ ಅವರ ತೋಟದ ಬಾವಿಗೆ ಬೀಸಿ ಎಸೆದಳು, ಆದರೆ ಅವಳ ಒಡಲುರಿ ತಣ್ಣಗಾಗಲಿಲ್ಲ.

ಹುಲಿಗ್ಯಮ್ಮನ ಗುಡ್ಡದಲ್ಲಿ ಅಂದು ಹಬ್ಬ. ಎಡೆ ಹಾಕುವವರೆಲ್ಲ ಹಾಕುತ್ತಿದ್ದರು. ಪ್ರತಿವರ್ಷವೂ ಚೈತ್ರ ಮಾಸದಲ್ಲಿ ಯುಗಾದಿಯಾಗಿ ನಾಲ್ಕು ದಿನಗಳ ನಂತರ ಬರುವ ಈ ಹಬ್ಬದ ಆಚರಣೆಗೆ ಕೇರಿಗೆ ಬೇರೆ ಬೇರೆ ಊರಿನಿಂದ ನೆಂಟರಿಷ್ಟರು ಬರುತ್ತಿದ್ದರು. ಮಧ್ಯಾಹ್ನದ ಸುಡು ಬಿಸಿಲಿನಲ್ಲಿ ಹುಲಿಗ್ಯಮ್ಮನನ್ನು ಆವಾಹಿಸಿದ ಗುಂಡುಕಲ್ಲನ್ನು ಪಡಲಿಗೆಯಲ್ಲಿಟ್ಟು ತಲೆಯ ಮೇಲೆ ಹೊತ್ತು ಕೇರಿಯ ಗಂಡಸೊಬ್ಬನು ಗುರುವ ಬಾರಿಸುವ ಡೋಲಿನ ಲಯಕ್ಕನುಗುಣವಾಗಿ ಕುಣಿಯುವುದು ಪದ್ದತಿ.
ಹಾಗೆ ಕುಣಿಯುವ ಗಂಡು ದೇಹದೊಳಗೆ ಹುಲಿಗ್ಯಮ್ಮ ದೇವಿ ಬಂದು ಸೇರುತ್ತಿದ್ದಳೆಂಬ ನಂಬಿಕೆ.
ಪ್ರತಿವರ್ಷದಂತೆ ಮನೆಯಲ್ಲೇ ಮಾಡಿದ ಭಕ್ಷ್ಯ ಗಳನ್ನು ಬುಟ್ಟಿಯಲ್ಲಿಟ್ಟು ತಂದು ಕುಡಿ ಬಾಳೆಲೆಗಳಲ್ಲಿ ಎಡೆ ಹಾಕಿದ್ದರು.
ಮಧ್ಯಾಹ್ನವಾಗುತ್ತಿದ್ದಂತೆ ಬಿರುಬಿಸಿಲಿನ ದಗೆಗೆ ಬಳ ಬಳ ಎಂದು ಸುರಿಯುವ ಬೆವರನ್ನು ಲಕ್ಷಿಸದೆ ಬೋಳು ಗುಡ್ಡದಲ್ಲಿ ಭಕ್ತಿ ಭಾವದಿಂದ ಕೈ ಮುಗಿದು ನಿಂತ ಸಮಯ..
ಇನ್ನೇನು ಕಾರ್ಯಗಳೆಲ್ಲ ಮುಗಿದು ಪಡಲಿಗೆ ತಲೆಯ ಮೇಲೆ ಹೊತ್ತು ಕುಣಿಯಬೇಕೆನ್ನುವಷ್ಟರಲ್ಲಿ ಆಕಾಶ ಒಮ್ಮಿಂದೊಮ್ಮೆಗೆ ಕಪ್ಪು ಹೂಡಿ ಗುಡುಗು ಸಿಡಿಲುಗಳು ಶುರುವಾದವು. ಬೇಗ ಮುಗಿಸಿ ಮಳೆ ಬರ್ತಿದೆ ಎಂದು ಗುಜುಗುಜು ಶುರುವಾಯ್ತು.
ಡಮ್ಮ ಡಮ್ಮ ಎಂದು ಗುರುವ ಲಯಬದ್ಧ ವಾಗಿ ಡೋಲು ಬಡಿಯತೊಡಗಿದ.
ಎಲ್ಲಿದ್ದಳೋ ಏನೋ ಐಶ್ವರ್ಯ! ಜನರ ನಡುವಿನಿಂದ ನುಗ್ಗಿ ಬಂದು ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಪಡಲಿಗೆ ಕಸಿದುಕೊಂಡು ಕುಣಿಯತೊಡಗಿದಳು.
ಕೆಂಪನೆಯ ಚೂಡೀದಾರ ಹಾಕಿ ಸೊಂಟಕ್ಕೆ ಕಪ್ಪು ವೇಲನ್ನು ಕಟ್ಟಿದ್ದಳು. ಹಣೆಗೆ ಡಾಳಾಗಿ ಕುಂಕುಮ ಕೆನ್ನೆಗೆ ಅರಿಶಿನ ಮೆತ್ತಿಕೊಂಡಿದ್ದಳು.
ಒಂದು ಕ್ಷಣ.. ಎಲ್ಲರೂ ತಟಸ್ಥರಾಗಿ ನಿಂತುಬಿಟ್ಟರು. ಗುಡುಗು ಸಿಡಿಲುಗಳೇ ಅವಳಿಗೆ ಸಾಥ್ ಕೊಡುತ್ತಿದ್ದಾವೋ ಎಂಬಂತೆ!
ದೊಡ್ಡ ದೊಡ್ಡ ಮಳೆಹನಿಗಳು ಒಮ್ಮೆಲೇ ಸುರಿಯತೊಡಗಿದವು.
ಗುರುವ ಡೋಲನ್ನೂ ಎಸೆದು ಯಾವಾಗಲೋ ಓಡಿಹೋಗಿದ್ದ.
ಸಾಕ್ಷಾತ್ ಹುಲಿಗ್ಯಮ್ಮನನ್ನು ಆವಾಹಿಸಿದ ಅಲಂಕೃತವಾದ ಕಲ್ಲುಗುಂಡನ್ನು ತನ್ನೊಳಗಿರಿಸಿಕೊಂಡ ಪಡಲಿಗೆಯನ್ನು ಕಿತ್ತುಕೊಂಡು ಮೈ ಮೇಲೆ ಬಂದಂತೆ ಕುಣಿಯುವ ಐಶ್ವರ್ಯಳನ್ನು , ಹುಲಿಗ್ಯಮ್ಮನನ್ನು ಅವರವರ ಪಾಡಿಗೆಬಿಟ್ಟು
ಮತ್ತಲ್ಲಿ ನಿಂತರೆ ತಮಗೇನಾಗುವುದೋ ಎಂದು ಸೇರಿದ ಭಕ್ತರೆಲ್ಲರೂ ದಿಕ್ಕಾಪಾಲಾಗಿ ಚದುರಿಹೋಗಿದ್ದರು.
ಇದ್ಯಾವುದನ್ನೂ ಲೆಕ್ಕಿಸದೆ ಐಶ್ವರ್ಯ ಕುಣಿಯುತ್ತಲೇ ಇದ್ದಳು. ಸರೋಜಳಿಗೆ ತಾನು ಮಳೆಯಲ್ಲಿ ತೋಯುತ್ತಿದ್ದೇನೆಂಬ ಪ್ರಜ್ಞೆ ಇಲ್ಲದಂತೆ ನಿಂತೇ ಇದ್ದಳು.
ಬೋರೆಂದು ಸುರಿಯುವ ಮಳೆಯಲ್ಲಿ ಸಾಕ್ಷಾತ್ ಹುಲಿಗೆಮ್ಮನೇ ಕುಣಿಯುತ್ತಿದ್ದಾಳೆನ್ನಿಸಿತು.
ತಕ್ಷಣ ಇಲ್ಲದ ಮೊಬೈಲನ್ನು ಇದ್ದಂತೆ ಎರಡೂ ಕೈಯ ಹೆಬ್ಬೆರಳು ತೋರುಬೆರಳುಗಳಿಂದ ಅಡ್ಡಡ್ಡವಾಗಿ ಹಿಡಿದು ವೀಡಿಯೋ ಮಾಡತೊಡಗಿದಳು.
ಐಶ್ವರ್ಯ ಕುಣಿಯುತ್ತಿದ್ದಳು. ಕುಣಿತಕ್ಕೆ ಸರಿಯಾಗಿ ಹನಿಹನಿಯಾಗಿ ಒಸರುತ್ತಿದ್ದ ರಕ್ತ ಕ್ರಮೇಣ ರಕ್ತದುಂಡೆಗಳಾಗಿ
ಭೂಮಿಗೆ ಬಿದ್ದು ನೀರಿನೊಂದಿಗೆ ಸೇರಿ ರಕ್ತದೋಕುಳಿಯಾಗಿ ಸರೋಜಳ ಕಾಲಿನತ್ತ ಹರಿದು ಬರತೊಡಗಿತು.
ತನ್ನ ಸನ್ನಿಧಾನದಲ್ಲಿ ಅಂಡ ಒಡೆದು ಪಿಂಡ ಜಾರಿ ಸೃಷ್ಟಿಕ್ರಿಯೆಯೊಂದಕ್ಕೆ ಭಂಗ ಬಂತೆಂದೋ ಏನೋ ಪಡಲಿಗೆಯೊಳಗಿನ ಹುಲಿಗ್ಯಮ್ಮ ಐಶ್ವರ್ಯಳ ಕೈಯಿಂದ ಜಾರಿ ದೂರ ಹೋಗಿ ಬಿದ್ದಳು!
ಆದರೆ ಐಶ್ವರ್ಯಳ ಕುಣಿತ ನಿಲ್ಲಲಿಲ್ಲ. ಮತ್ತಷ್ಟು ಜೋರಾಗಿ ಕುಣಿಯತೊಡಗಿದಳು.
ಸರೋಜ ಮಾತ್ರ ತಾನೆಂಬ ಅರಿವಿಲ್ಲದೆ ವೀಡಿಯೋ ಮಾಡುತ್ತಲೇ ಇದ್ದಳು..

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.