ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಥೆ: ಜ್ಞಾನಸ್ನಾನ

ಸುಭಾಷ್‌ಚಂದ್ರನ್‌- ಕನ್ನಡಕ್ಕೆ: ಸುನೈಫ್‌
Published 17 ಫೆಬ್ರುವರಿ 2024, 23:43 IST
Last Updated 17 ಫೆಬ್ರುವರಿ 2024, 23:43 IST
ಅಕ್ಷರ ಗಾತ್ರ

This will be my last speech to you on the sacred banks of Sabarmati.
Possibly this may be the last words of my life here.
ಮಹಾತ್ಮಾ ಗಾಂಧಿ, ಸಬರಮತಿ, ಗುಜರಾತ್‌, 1930, ಮಾರ್ಚ್‌ 11

ಒಂದು

ಮುಂಜಾನೆ ಸಬರಮತಿಯ ಭ್ರಮಾತ್ಮಕ ಹದಬೆಚ್ಚಗಿನ ನೀರಿನಲ್ಲಿ ಮುಳುಗೆದ್ದು ಸೂರ್ಯನೆಡೆಗೆ ಮುಖ ಎತ್ತುವಾಗ, ವಿಠಲ್ ಲೀಲಾಧರನ ಒಳಗೆ ಚಿತ್ರಕಲಾವಿದನಾಗಿದ್ದ ಅಪ್ಪನ ಜೀವಕೋಶಗಳು ಮೈಕೊಡವಿ ಎದ್ದು ನಿಂತವು. ಪಶ್ಚಿಮದಲ್ಲಿ, ತಿರುಗುವ ಚರಕದ ಚಕ್ರದಂತೆ ಮೂಡಿ ಬರುತ್ತಿರುವ ಸೂರ್ಯ. ಈಗಷ್ಟೇ ಸ್ಪಷ್ಟವಾಗುತ್ತಿರುವ ಆಕಾಶದಲ್ಲಿ ಅಲ್ಲಲ್ಲಿ ಚದುರಿ ನಿಂತಿರುವ ಬಿಳಿಮೋಡಗಳ ಹತ್ತಿ ಚೂರುಗಳು. ಅವನ್ನೆಲ್ಲ ಹಾರಿ ಹಿಡಿದು, ತನ್ನ ಚರಕಕ್ಕೆ ಸಿಕ್ಕಿಸಿ, ಬೆಳಕಿನ ನೂಲುಗಳಾಗಿಸುತ್ತಿರುವ ಅಸಾಮಾನ್ಯನಾದ ಒಬ್ಬ ವ್ಯಕ್ತಿ.

ಆಕಾಶ ದೃಶ್ಯದ ಗಾಂಭೀರ್ಯ ತಾಳಲಾಗದೆ ಹದಿನಾರರ ಹುಡುಗನ ದೇಹ ರೋಮಾಂಚನಗೊಂಡಿತು.

ಅನಂತಕ್ಕೆ ಚಾಚಿಕೊಂಡಿದ್ದ ಸಬರಮತಿಯ ದಂಡೆಯಲ್ಲಿ ಒಂಟಿ ರಾತ್ರಿಗಾಗಿ ಡೇರೆ ಕಟ್ಟಿಕೊಂಡು ವಿಶ್ರಮಿಸುತ್ತಿದ್ದ ನೂರಾರು ಅಪರಿಚಿತರು ಆ ಹೊತ್ತಿಗಾಗಲೇ ನದಿಯ ಹಲವು ಕಡೆಗಳಲ್ಲಿ ತಮ್ಮ ನಿತ್ಯಕರ್ಮಗಳಿಗೆ ಇಳಿದಿದ್ದರು. ಹಿಂದಿನ ದಿನದ ಸಂಜೆಯ ಸಮ್ಮೇಳನ ಮುಗಿಸಿ ಮರಳಿ ಹೋಗದೆ ಅವರೆಲ್ಲ ಆಶ್ರಮದ ಆವರಣ ಮತ್ತು ನದೀತೀರದಲ್ಲಿ ನಿದ್ದೆಗಟ್ಟು ಕಾಯುತ್ತಿದ್ದರು. ಒದ್ದೆ ಮರಳಲ್ಲಿ ನಾಟಿದ್ದ ಮರದ ಕಂಬಗಳಿಗೆ ಹಳೆ ಬಟ್ಟೆಗಳನ್ನು ಹಾಸಿ ನಿರ್ಮಿಸಿದ್ದ ತಾತ್ಕಾಲಿಕ ಕುಟೀರಗಳೊಳಗಿಂದ, ಕಳೆದ ಸಾಯಂಕಾಲ ಪಂಡಿತ್‌ ಖರೇ ಹಾಡಿದ ರಾಂಧುನ್‌, ಮುಂಜಾನೆಯ ನಸುಗತ್ತಲೆಯಲ್ಲಿ ಈಗ ಹಲವು ಕೊರಳುಗಳಾಗಿ ಹರಿದು ಬರುತ್ತಿರುವುದನ್ನು ಕೇಳುತ್ತಾ ಲೀಲಾಧ ನದಿಯಿಂದ ದಡ ಹತ್ತಿದ.

ವಿಠ್ಠಲ್‌ ಲೀಲಾಧರ್ ಥಾಕ್ಕರ್‌ - ಆತನ ಪೂರ್ತಿ ಹೆಸರು. ಇವತ್ತು ಸಬರಮತಿಯ ಈ ಸಕ್ಕರೆ ಹರಳಿನಂತಾ ಮರಳ ನೆಲದಿಂದ ದಂಡಿಯ ಒರಟು ಉಪ್ಪು ಮರಳ ತನಕ ನಡೆಯಲಿರುವ ಎಪ್ಪತ್ತೊಂಭತ್ತು ಯಾತ್ರಿಕರಲ್ಲಿ ಅತ್ಯಂತ ಎಳೆಯ ಪಾದಗಳು ಅವನದ್ದೇ ಆಗಿದ್ದವು.

“ಅರವತ್ತರ ಬಾಪುವಿನಿಂದ ಹದಿನಾರರ ಲೀಲಾ ತನಕ.” ಕಳೆದ ರಾತ್ರಿ ಯಾತ್ರಿಕರ ಪಟ್ಟಿಯನ್ನು ಕ್ರಮಸಂಖ್ಯೆ ಸಹಿತ ಜೋರಾಗಿ ಓದುವಾಗ ಖರೇ ಹೇಳಿದ್ದರು. ಮಹಾತ್ಮನನ್ನು ಬಿಟ್ಟು ಹೇಳುವುದಾದರೆ ಇವತ್ತಿನ ಈ ಯಾತ್ರೆಯಲ್ಲಿ ಅತ್ಯಂತ ಹಿರಿಯರಾದ ಮೂವರಲ್ಲಿ ಆಶ್ರಮದ ಸಂಗೀತ ಅಧ್ಯಾಪಕರಾಗಿದ್ದ ಖರೇ ಕೂಡ ಒಬ್ಬರು – ವಯಸ್ಸು ನಲವತ್ತೆರಡು. ನೇಯ್ಗೆಗಾರ ನಲವತ್ತೈದರ ರಾಮ್ಜೀಭಾಯಿ ವಾಂಕರ್‌ ಮತ್ತು ಬಂಗಾಳದಲ್ಲಿ ಸರಕಾರಿ ಉದ್ಯೋಗ ತ್ಯಜಿಸಿ ಆಶ್ರಮ ಸೇರಿದ ನಲವತ್ತನಾಲ್ಕರ ದುರ್ಗೇಶ್‌ ಚಂದ್ರ ದಾಸ್‌ ಉಳಿದಿಬ್ಬರು. ರಾಮ್ಜೀಭಾಯಿ ವಾಂಕರ್‌ ಮತ್ತು ಅತ್ಯಂತ ಕಿರಿಯನಾದ ಲೀಲಾಧರ್‌ ನಡುವೆ ಹರಡಿಕೊಂಡಿವೆ. ಉಳಿದ ಪಾದಯಾತ್ರಿಕರ ಜನನ ದಿನಾಂಕಗಳು. ಬರಲಿರುವ ಇಪ್ಪತ್ತನಾಲ್ಕು ದಿನಗಳಲ್ಲಿ– ದಾರಿ ಮಧ್ಯೆ ಖಾಕಿ ಪಡೆಯೊಂದಿಗೆ ಮುಖಾಮುಖಿಯಾಗದಿದ್ದರೆ – ಇನ್ನೂರನಲ್ವತ್ತೊಂದು ಮೈಲಿ ನಡೆಯಲು ಶಕ್ತರಾಗಿರುವ ಎಪ್ಪತ್ತೊಂಬತ್ತು ಜೋಡಿ ಗಂಡು ಮಂಡಿಗಳು.

“ದಾರಿ ಮಧ್ಯೆ ಪೋಲೀಸರ ದಾಳಿ ಸಾಧ್ಯತೆಯಿರುವುದರಿಂದ ಬಾಪು ಮಹಿಳೆಯರನ್ನು ಸೇರಿಸಿಲ್ಲ.” ಪಂಡಿತ್‌ ಖರೇ ಆ ಆಯ್ಕೆಯ ಕಾರಣವನ್ನು ವಿವರಿಸಿದ್ದರು. “ಎಲ್ಲರನ್ನು ಜೈಲಿಗೆ ತಳ್ಳಿದರೆ ಕೆಲವರಿಗಾದರೂ ಕಾನೂನಿನ ದಾಕ್ಷಿಣ್ಯ ಸಿಗಲೆಂದು ಕೆಲವು ಹುಡುಗರನ್ನು ಬಾಪು ಜೊತೆಗೆ ಸೇರಿಸಿದ್ದಾರೆ!”

ಹಿಂಡಿದ ಟವೆಲನ್ನು ಕೊಡವಿಕೊಂಡು ಮುಖ ಎದೆಯನ್ನೆಲ್ಲ ಒರೆಸಿ ಲೀಲಾಧರ ನಡೆದ. ಫಾಲ್ಗುಣದಲ್ಲಿ ಹೂ ಬಿಡುವ ಮರಗಳನ್ನು ನೆರಳಾಗಿಯೂ ಸುಗಂಧವಾಗಿಯೂ ಆತ ಅನುಭವಿಸಿದ. ಬೆತ್ತಲೆಯೆದೆಗೆ ತಂಗಾಳಿ ಸೋಕಿದಾಗ ಅಕಾರಣವಾಗಿ ಪಂಡಿತ್‌ ಖರೇಯ ಲೀಲಾ ಎಂಬ ಕೂಗು ನೆನಪಾಗಿ ಅವನೊಳಗೆ ಮಮತೆ ಪುಟಿಯಿತು.

ಪಂಡಿತ್‌ ನಾರಾಯಣ ಮೊರೇಶ್ವರ ಖರೇ – ಮರದಿಂದ ಮಾಡಿದ ಗದೆಗೆ ತಂತಿ ಕಟ್ಟಿದರೆ ಹೇಗಿರುತ್ತದೆಯೋ ಹಾಗೆಯೇ ಕಾಣಿಸುತ್ತಿದ್ದ, ಸದಾಕಾಲ ತನ್ನ ಕೈಯಲ್ಲೇ ಇರುವ ಸಣ್ಣ ತಂಬೂರಿಯ ಉದ್ದ ಕೊರಳ ಮೇಲೆ ಆ ಹೆಸರನ್ನು ಪೂರ್ತಿಯಾಗಿ ಕೆತ್ತಿಸಿದ್ದಾರೆ. ಆದರೆ, ತನ್ನನ್ನು ಪರಿಚಯಸಿಕೊಳ್ಳುವಾಗ ಮಾತ್ರ ಖರೇ ಎಂದಷ್ಟೇ ಹೇಳಿಕೊಳ್ಳುತ್ತಿದ್ದರು.

ಉಳಿದವರನ್ನೂ ಖರೇ ಚುಟುಕಾಗಿ ಅಡ್ಡ ಹೆಸರಿನಿಂದ ಕರೆಯುತ್ತಿದ್ದರು. ಹಾಡುಗಾರನಾದ್ದರಿಂದಲೇ ಇರಬೇಕು, ಅವರು ಕೂಗಿನಲ್ಲಿ ಅನಗತ್ಯವಾದ ರಾಗವನ್ನೂ ಸೇರಿಸುತ್ತಿದ್ದರು. ಗುಜರಾತ್‌ ವಿಶ್ವವಿದ್ಯಾಲಯದಿಂದ ಬಿರುದು ಪಡೆದ ನಂತರ ಆಶ್ರಮ ಸೇರಿದ್ದ ಗಣಪತ್‌ ರಾವ್‌ ಗೋಡ್ಸೆ ಮಾತ್ರ ಖರೇ ಅಡ್ಡ ಹೆಸರು ಹಿಡಿದು ಕರೆಯುವುದನ್ನು ವಿರೋಧಿಸಿ ಪ್ರತಿಭಟಿಸಿದ.

“ಖರೇಜೀ,” ಆ ಯುವ ಅಧ್ಯಾಪಕ ಮರಾಠಿ ಸೊಗಡಿನ ಹಿಂದಿಯಲ್ಲಿ ಹೇಳಿದ, “ಗಣಪತ್‌ ರಾವ್‌ ಗೋಡ್ಸೆ ಅಂತ ಪೂರ್ತಿ ಹೆಸರು ಕರೆಯಲಾಗದಿದ್ದರೆ ನನ್ನನ್ನು ಗಣಪತ್‌ ಎಂದಾದರೂ ಕರೆಯಿರಿ. ದಯವಿಟ್ಟು ಗನ್‌ ಎಂದು ಮತ್ತಷ್ಟು ಕತ್ತರಿಸಬೇಡಿ!

ಆ ಇಂಗ್ಲೀಷ್‌ ಪದ ಬಾಪುವಿನ ಆಶ್ರಮದಲ್ಲಿ ಕೇಳುವಾಗ ಆ ಹೆಸರಿನ ಆಯುಧ ಸಿಡಿದಂತೆ ಭಾಸವಾಗುತ್ತದೆ!” ಅದರ ನಂತರ ಖರೇ ಗಣಪತ್‌ ರಾವ್‌ನನ್ನು ಮಾತ್ರ ಅಡ್ಡ ಹೆಸರಿನಿಂದ ಕರೆಯಲಿಲ್ಲ. ಅವರ ನಡುವಿನ ವೈಮನಸ್ಸು ಬಾಪುವಿನ ಕಿವಿಗೂ ಬಿದ್ದಿರಬೇಕು. ಅಲ್ಲದಿದ್ದರೆ ದಂಡಿ ಯಾತ್ರೆಯ ಕ್ರಮಸಂಖ್ಯೆಯಲ್ಲಿ ಪಂಡಿತ್‌ ಖರೇಗೆ ನಾಲ್ಕು ಮತ್ತು ಗಣಪತ್‌ ರಾವ್‌ಗೆ ಐದು ಕ್ರಮಸಂಖ್ಯೆಗಳು ಹೇಗೆ ಸಿಕ್ಕವು?

ಕತ್ತಲು ಕರಗಿ ಎದುರಲ್ಲಿ ಆಶ್ರಮ ಕಾಣತೊಡಗಿದಾಗ ನದಿ ತೀರದಲ್ಲಿ ಒಗೆಯುವ ತಾಳತಪ್ಪಿದ ಸದ್ದೂ ಕ್ಷೀಣಿಸತೊಡಗಿತ್ತು. ಸುತ್ತಲೂ ಚಿಗುರುತ್ತಿದ್ದ ಹಸಿರಿಗೆ ದನಿಯೂ ಇದೆಯೆಂಬಂತೆ ಹಕ್ಕಿಗಳ ಚಿಲಿಪಿಲಿಯನ್ನು ಆಸ್ವಾದಿಸುತ್ತಾ ಲೀಲಾಧರ ವೇಗವಾಗಿ ನಡೆದ. ಧನೀಚಿ ಮಹರ್ಷಿಯನ್ನು ಪ್ರತಿಷ್ಠಾಪಿಸಿದ್ದ ಪುಣ್ಯಕ್ಷೇತ್ರದ ದಾರಿ ಶುರುವಾಗುವಲ್ಲಿ ಕಡು ವೃದ್ದೆಯಾದ ಆಲದಮರವೊಂದಿತ್ತು. ಅದರ ತುದಿ ಹತ್ತಿದರೆ ಮರಗಳ ಮರೆ ದಾಟಿ ದಕ್ಷಿಣಕ್ಕೆ ಧನೀಚಿಯ ದೇವಾಲಯವೂ, ಉತ್ತರಕ್ಕೆ ಸಬರಮತಿ ಸೆಂಟ್ರಲ್‌ ಜೈಲೂ ಕಾಣಬಹುದು ಎಂದು ಕಾಕಾ ಕಾಲೋಲ್ಕರರ ಕಿರಿಯ ಮಗ ಬಾಲ್‌ ಅವನ ಬಳಿ ಹೇಳಿದ್ದ. ಬಾಪುವಿನ ಗೆಳೆಯ ವಲ್ಲಭ ಭಾಯಿ ಪಟೇಲ್‌ ಈಗ ಆ ಜೈಲಲ್ಲಿದ್ದಾರೆ ಎಂದೂ ಹೇಳಿದ್ದ.

ಲೀಲಾಧರ್‌ ಒಂದು ಕ್ಷಣ ಅಲ್ಲಿ ನಿಂತ. ಆ ಮರದ ತುಂಬ ನಸುಗಂಪು ಬಣ್ಣದ ಪುಟ್ಟ ಪುಟ್ಟ ಹಣ್ಣುಗಳಿಗಾಗಿ ಕಾದಾಡುತ್ತಿರುವ ಕೋತಿಗಳು ಮತ್ತು ಗಿಳಿಗಳು ತುಂಬಿದ್ದವು. ಬಹುಸಂಖ್ಯಾತರಾಗಿದ್ದ ಕೋತಿಗಳ ಎದುರು ಗಿಳಿಗಳು ಗೆಲ್ಲುವುದು ಅವುಗಳಿಗೆ ರೆಕ್ಕೆಗಳಿರುವುದರಿಂದಲೇ ಇರಬೇಕು. ಆದರೂ, ಒಂದು ದಿನ ಸ್ನಾನ ಮುಗಿಸಿ ಬರುವಾಗ ಮರದಡಿಯ ತರಗೆಲೆಗಳ ನಡುವೆ ರಕ್ತಸಿಕ್ತವಾಗಿದ್ದ ಗಿಳಿ ಗರಿಯೊಂದನ್ನು ಆತ ಕಂಡಿದ್ದ. ಕಳೆದ ವಾರ ಅದೇ ನೆರಳಡಿಯಲ್ಲಿ ಗಾಯಗೊಂಡು ಬಿದ್ದು ಒದ್ದಾಡುತ್ತಿದ್ದ ಗಿಳಿಮರಿಯೂ ಸಿಕ್ಕಿತ್ತು. ಕಪಿಮುಷ್ಠಿಯಿಂದ ಜಾರಿ ಬಿದ್ದ, ಗರಿಗಳಿಂದಾವೃತವಾದ ಒಂದು ಜೀವ. ಮುರಿದ ರೆಕ್ಕೆಗಳೂ, ಗಾಯಗೊಂಡ ಕಾಲುಗಳನ್ನೂ ತೋರಿಸಿದಾಗ ಬಾಪು ಕರಗಿದರು.

“ತನಗಿಂತ ಸಣ್ಣವರ ಮೇಲಿನ ಪರಾಕ್ರಮ!” ಒಂದು ದೀರ್ಘ ನಿಟ್ಟುಸಿರಿನೊಂದಿಗೆ ಬಾಪು ಹೇಳಿದರು, “ಪೂರ್ತಿ ಗುಣವಾಗುವ ತನಕ ನೀನೇ ಇದನ್ನು ನೋಡಿಕೊಳ್ಳಬೇಕು.” ಗಿಳಿಯನ್ನು ಮುದ್ದಿಸುವಾಗ ನಿನ್ನೆ ಸಂಜೆ ಇದೇ ಮರಳ ನೆಲದಲ್ಲಿ ಭೋರ್ಗರೆಯುತ್ತಿದ್ದ ಜನಸಾಗರದ ಮುಂದೆ ಜ್ವಲಿಸುತ್ತಿದ್ದ ಬಾಪು ಆಗಿರಲಿಲ್ಲ ಆತ.

“ಮಕ್ಕಳೊಂದಿಗೆ ಮಾತನಾಡುವಾಗ ಮಗುವಾಗುತ್ತಾರೆ.” ಕಾಲೋಲ್ಕರ್‌ ಸಾಹೇಬ್‌ ಬಾಪು ಆಶ್ರಮದಲ್ಲಿಲ್ಲದ ಒಂದು ದಿನ ಮಕ್ಕಳ ಬಳಿ ಹೇಳಿದ್ದರು, “ಮಹಿಳೆಯರೊಂದಿಗೆ ಮಾತನಾಡುವಾಗ ಹೆಣ್ಣು, ಭಿಕ್ಷುಕರೊಂದಿಗೆ ಮಾತನಾಡುವಾಗ ಭಿಕ್ಷುಕ, ಬಿಳಿಯರೊಂದಿಗೆ ಬಿಳಿಯ! ನಿಮಗೆ ಗೊತ್ತಾ, ಬಾಪು ನಮ್ಮ ಹಾಗೆ ದೇವರ ಬಳಿ ಪ್ರಾರ್ಥಿಸುವುದಿಲ್ಲ. ಅವರು ದೇವರೊಂದಿಗೆ ಸಂಭಾಷಣೆ ನಡೆಸುತ್ತಿರುತ್ತಾರೆ!”

ಎರಡು

ಪ್ರಾರ್ಥನೆಯೂ ಉಪಹಾರವೂ ಮುಗಿದ ನಂತರ ಖಾದಿ ಚೀಲವನ್ನು ಹೆಗಲಿಗೇರಿಸಿಕೊಂಡು ಲೀಲಾಧರ ಯಾತ್ರೆಗೆ ಸಿದ್ಧನಾದ. ಆಶ್ರಮದ ಅಂಗಳದಲ್ಲಿ ಅದಾಗಲೇ ತುಂಬಿ ಹರಿಯತೊಡಗಿದ್ದ ನಿದ್ದೆಗಣ್ಣುಗಳನ್ನೂ ಪಿಸಿರುಗಣ್ಣುಗಳನ್ನೂ ಕಷ್ಟಪಟ್ಟು ತಳ್ಳಿಕೊಂಡು ಮುಂದಕ್ಕೆ ಹೋಗಬೇಕಾಗಿ ಬಂತು. ಮಹಾದೇವ್‌ ದೇಸಾಯಿ ಮತ್ತೊಮ್ಮೆ ಕ್ರಮಸಂಖ್ಯೆಯನ್ನು ಜೋರಾಗಿ ಓದುತ್ತಾ ರೈಲು ಹಳಿಗಳಂತೆ ಪಾದಯಾತ್ರಿಕರನ್ನು ಎರಡು ಸಾಲುಗಳಾಗಿ ನಿಲ್ಲಿಸುತ್ತಿದ್ದರು. ಎರಡನೇ ನಂಬರಿನ ಪ್ಯಾರೇಲಾಲ್‌ ಮತ್ತು ಮೂರನೇ ನಂಬರಿನ ಛಗನ್‌ ಲಾಲ್‌ ಎಡ ಬಲದಲ್ಲಿ ಮೊದಲಿಗೆ, ಅವರ ಹಿಂದೆಯೇ ಪುನಃ ಎಡ ಬಲಗಳಲ್ಲಿ ನಾಲ್ಕನೇ ನಂಬರಿನ ಪಂಡಿತ್‌ ಖರೇ ಮತ್ತು ಐದನೇ ನಂಬರಿನ ಗಣಪತ್‌ ರಾವ್‌ ಗೋಡ್ಸೆ. ಆರನೇ ಸರದಿಯಲ್ಲಿದ್ದ ಲೀಲಾಧರನ ಬಲಗಡೆ ನಡೆಯುವುದು ಅವನಿಗಿಂತ ಎರಡೇ ವರ್ಷ ಹಿರಿಯವನಾಗಿದ್ದ ಬಡಪಾಯಿ ಹರಖ್‌ಜೀ. ಯಾತ್ರಾತಂಡದಲ್ಲಿರುವ ಮೂರೋ ನಾಲ್ಕೋ ಅಸ್ಪೃಶ್ಯ ಜಾತಿಯವರಲ್ಲಿ ಒಬ್ಬಾತನನ್ನು ತನ್ನ ಜೊತೆ
ಸೇರಿಸಿರುವುದರಲ್ಲಿ ಬಾಪುವಿಗೆ ಏನಾದರು ಉದ್ದೇಶ ಇರಬಹುದೇ ಎಂದು ಯೋಚಿಸಿದಾಗ ಅವನರಿಯದೆಯೇ ಹರಖ್‌ಜೀಯ ಕೈ ಹಿಡಿದು ಬಲವಾಗಿ ಎರಡು ಸಲ ಕುಲುಕಿದ; ಜೊತೆಗಿರುವೆ ಎಂಬಂತೆ.

ಚೆಲ್ಲಾಪಿಲ್ಲಿಯಾಗಿದ್ದ ಜನಸ್ತೋಮದ ಅಬ್ಬರ ಇದ್ದಕ್ಕಿದ್ದಂತೆ ಒಂದು ಕ್ಷಣ ಮೌನವಾಯಿತು. ನಂತರ ಅದು ಮಹಾತ್ಮನಿಗೆ ಜಯಘೋಷ ಕೂಗುವ ಒಂದೇ ದನಿಯಾಗಿ ಬದಲಾಯಿತು. ಹಿಂದೊಮ್ಮೆ, ಕಾಗದದಲ್ಲಿ ಸುತ್ತಿದ್ದ ಅಯಸ್ಕಾಂತವನ್ನು ಆಶ್ರಮದ ಅಂಗಳದಲ್ಲಿ ಉಜ್ಜಿದಾಗ ಅಲ್ಲಿಯ ತನಕ ಕಣ್ಣಿಗೆ ಕಾಣಿಸದಿದ್ದ ಕಪ್ಪಗಿನ ಕಬ್ಬಿಣದ ಪುಡಿ ಬಿಳಿಮರಳ ಒಳಗಿಂದ ಎದ್ದು ಬಂದು ಅದಕ್ಕೆ ಅಂಟಿಕೊಳ್ಳುತ್ತಿದ್ದದ್ದನ್ನು ಲೀಲಾಧರ ನೆನಪಿಸಿಕೊಂಡ. ಬಿಳಿ ಖಾದಿ ಬಟ್ಟೆ ಹೊದ್ದುಕೊಂಡಿರುವ ಈ ಬಡಕಲು ದೇಹದೊಳಗೂ ಅಂಥದ್ದೊಂದು ಅಯಸ್ಕಾಂತವಿದೆ; ಇಲ್ಲದಿದ್ದರೆ ಅದು ಹೇಗೆ ಸಹಸ್ರಾರು ಅಪರಿಚಿತ ಮನುಷ್ಯರು ಆತನೆಡೆಗೆ ಸೆಳೆಯಲ್ಪಡುತ್ತಾರೆ?

ಕಸ್ತೂರ್ಬಾ ತಾಯಿ ಬಾಪುವಿಗೆ ತಿಲಕವಿಡುವುದನ್ನೂ, ಮಹಾದೇವ್‌ ದೇಸಾಯಿ ಅಂಚಿನಲ್ಲಿ ಕಬ್ಬಿಣದ ತಗಡು ಸುತ್ತಿದ್ದ ಹೊಸ ಬೆತ್ತ ಬಾಪುವಿಗೆ ಉಡುಗೊರೆಯಾಗಿ ನೀಡುವುದನ್ನೂ ಪಾದಯಾತ್ರೆಗೆ ತಯಾರಾಗಿ ನಿಂತವರು ಕಾಣಲಾಗಲಿಲ್ಲ.

ಜನಸ್ತೋಮ ಅದಾಗಲೇ ಬಾಪುವನ್ನು ಮುತ್ತಿಕೊಂಡಾಗಿತ್ತು. ಹದಿಮೂರು ವರ್ಷ ಬದುಕಿದ ಸಬರಮತಿ ಆಶ್ರಮಕ್ಕೆ ತಾನಿನ್ನು ಮರಳಬೇಕೆಂದರೆ ಇಂಡಿಯಾ ಸ್ವತಂತ್ರಗೊಳ್ಳಬೇಕು ಎಂಬ ಪ್ರತಿಜ್ಞೆಯನ್ನು ನಿನ್ನೆಯಂತೆ ಇಂದೂ ಪುನರಾವರ್ತಿಸುವುದನ್ನು ಸಾಲಿನ ಕಡೆಯಲ್ಲಿದ್ದ ಇಬ್ಬರು, ಹರಿಭಾಯಿ ಮತ್ತು ಪುರತ ಕೇಳಿಸಿಕೊಂಡರು. ಅವರು ಅದನ್ನು ಮುಂದಕ್ಕೆ ದಾಟಿಸಿ ಎಲ್ಲ ಪಾದಯಾತ್ರಿಗಳಿಗೂ ತಲುಪಿಸಿದರು. “ಸೋತ ಮನುಷ್ಯನಾಗಿ ಈ ಆಶ್ರಮಕ್ಕೆ ಮರಳುವುದಕ್ಕಿಂತ…” ತನ್ನ ಬೆನ್ನ ಹಿಂದೆಯಿದ್ದ ಕಾಂತೀಲಾಲ್‌ ಗಾಂಧಿಯ–ಬಾಪುವಿನ ಮೊಮ್ಮಗನ – ಬಾಯಿಂದ ಮಾರ್ದನಿಗೊಂಡ ಆ ಮಾತನ್ನು ತನ್ನ ಮುಂದಿದ್ದ ರಸಿಕ್‌ ದೇಸಾಯಿಗೆ ಲೀಲಾಧರ್‌ ತಲುಪಿಸಿದ: “…ನನಗಿಷ್ಟ ದಾರಿ ಮಧ್ಯೆ ನಾಯಿಯಂತೆ ಸತ್ತು ಬೀಳುವುದು!”

ಪಾದಯಾತ್ರಿಕರ ಸಾಲಿನ ನಡುವಿನ ಸಣ್ಣ ದಾರಿಯಲ್ಲಿ ನಡೆದುಕೊಂಡು ಬಾಪು ಮುಂದಕ್ಕೆ ಬಂದರು. ಹೆಗಲಲ್ಲಿ ಎರಡೂ ಕಡೆ ನೇತುಹಾಕಿಕೊಂಡಿದ್ದ ಖಾದಿ ಚೀಲದ ಬಳ್ಳಿಗಳು ಎದೆಯಲ್ಲಿ ಗುಣಾಕಾರ ಚಿಹ್ನೆಯನ್ನು ಮೂಡಿಸಿತ್ತು. ತನ್ನ ಬಳಿಯಿಂದ ಹಾದು ಹೋಗುತ್ತಿದ್ದ ಬಾಪುವಿನ ಕಾಲುಗಳನ್ನು ಲೀಲಾಧರ ನೋಡಿದ. ಮೇಣದ ಪ್ರತಿಮೆಯಂತೆ ಆ ಕಾಲುಗಳು ಮಿಣುಗುತ್ತಿರುವುದಕ್ಕೆ ಕಾರಣ, ಯಾತ್ರೆಯ ತಯಾರಿಯೆಂದು ಕಳೆದ ಒಂದು ವಾರದಿಂದ ಮೀರಾ ಬೆಹನ್‌ ಹಚ್ಚುತ್ತಿದ್ದ ತುಪ್ಪವೆಂದು ಮೊದಲು ಭಾವಿಸಿದ. ತನ್ನ ತಲೆಯನ್ನು ಎಡಬಲಕ್ಕೆ ತಿರುಗಿಸಿಕೊಳ್ಳುತ್ತಾ ಮರುಕ್ಷಣವೇ ತನ್ನ ಅಭಿಪ್ರಾಯವನ್ನು ತಿದ್ದಿದ. ಅಲ್ಲ, ಆ ಪಾದಗಳಲ್ಲಿ ಮಿನುಗುತ್ತಿರುವುದು ಧೃಢನಿಶ್ಚಯ!

ಸಾಲಾಗಿ ನಿಂತಿದ್ದ ಕಿರಿಯ ಪಾದಯಾತ್ರಿಕರಿಗೆ ಮಹಾತ್ಮನನ್ನು ಬೀಳ್ಕೊಡಲು ಬಂದಿದ್ದ ಜನಸ್ತೋಮವೂ, ಮುಂದಿನ ದಿನಗಳಲ್ಲಿ ವಿಷಾದದಲ್ಲಿ ಮುಳುಗಲಿರುವ ಆಶ್ರಮವೂ ಈಗ ವಿಚಿತ್ರವಾದ ಯಾವುದೋ ರೈಲಾಫೀಸಿನಂತೆ ಅನ್ನಿಸಲು ಶುರುವಾಗಿತ್ತು. ಹೊರಡಲು ಸೀಟಿ ಹೊಡೆಯುತ್ತಿರುವ ಹಾಗೆ ಘೋಷಣೆಗಳೂ ದೇಶಭಕ್ತಿ ಗೀತೆಗಳೂ ಮೊಳಗಿದವು. ಯಾತ್ರಿಕರ ತುತ್ತ ತುದಿಯಲ್ಲಿ ಬಾಪು ರೈಲು ಇಂಜಿನ್ನಿನಂತೆ ಬಂದು ನಿಂತಾಗ ಅದೃಶ್ಯವಾದ ಶಕ್ತಿಯೊಂದು ತಮ್ಮನ್ನು ಮುಂದಕ್ಕೆಳೆಯುತ್ತಿರುವುದನ್ನು ಯುವಕರು ವಿಸ್ಮಯದಿಂದ ಗುರುತಿಸಿದರು.

ಲೀಲಾಧರ ಚೀಲದಿಂದ ತನ್ನ ನೋಟ್‌ ಪುಸ್ತಕ ತೆಗೆದ. ವಿಶ್ರಾಂತಿ ಸಮಯದಲ್ಲಿ ಯಾತ್ರೆಯ ವಿವರಗಳನ್ನು ದಿನಚರಿಯಾಗಿ ಬರೆದಿಡಬೇಕೆಂದು ಹಿಂದಿನ ದಿನ ಬಾಪು ಹೇಳಿದ್ದರು. ಹೆಗಲಲ್ಲಿ ನೇತುಹಾಕಿದ್ದ ಖಾದಿಚೀಲದಲ್ಲಿ ಹಲ್ಲುಜ್ಜಲು ಮತ್ತು ಸ್ನಾನಕ್ಕೆ ಬೇಕಾದ ಸಾಮಾಗ್ರಿಗಳು, ನೀರಿನ ಲೋಟ, ನೂಲಿನಿಂದ ಮೈ ಮುಚ್ಚಿದ್ದ ತಕಲಿ ಮತ್ತು ಒಂದು ಜೊತೆ ಖಾದಿ ಬಟ್ಟೆ ಬಿಟ್ಟರೆ ಎಲ್ಲರ ಬಳಿಯೂ ಇರುವ ಸಮಾನ ವಸ್ತು ಅದೊಂದೆ; ಒಂದು ನೋಟ್‌ ಪುಸ್ತಕ. ದಿನಚರಿಯ ಮೊದಲಕ್ಷರ ಬರೆಯುವ ಮುನ್ನವೇ ಲೀಲಾಧರ ಆಸ್ಥೆಯಿಂದ ಅದರ ಮೊದಲ ಪುಟದಲ್ಲಿ ಗುಜರಾತಿಯಲ್ಲಿ ಒಂದು ದೀರ್ಘವಾಕ್ಯ ಬರೆದ: “ದಾರಿ ಮಧ್ಯೆ ಸಾಯಬೇಕಾಗಿ ಬಂದರೂ ಸ್ವಾತಂತ್ರ್ಯದಿಂದ ಹಿಂದಡಿ ಇಡುವುದಲ್ಲವೆಂಬ ಧೃಢನಿಶ್ಚಯ. ಕಲ್ಲಿದ್ದಲಿನಂತೆ ಒಳಗಡೆ ಉರಿಯುತ್ತಿರುವ ವ್ಯಕ್ತಿಯೊಬ್ಬನಿಗೆ ಒಂದು ದೇಶವನ್ನೇ ಪೂರ್ತಿಯಾಗಿ ತನ್ನ ಹಿಂದೆ ಎಳೆದುಕೊಂಡು ಹೋಗಲು ಸಾಧ್ಯವಿದೆ!”

ಧೂಳು, ಅಳು ಮತ್ತು ಘೋಷಣೆಗಳ ಅಲೆ ಎದ್ದಿತು. ಮಹಾತ್ಮನ ಕಡೆಗೆ ಕೈ ಚಾಚಿ ಅಳುತ್ತಿರುವ ಮಹಿಳೆಯರನ್ನೂ, ಸ್ವಾತಂತ್ರ್ಯಕ್ಕಾಗಿ ಮುಷ್ಠಿ ಬಿಗಿ ಹಿಡಿದಿರುವ ಗಂಡಸರನ್ನೂ, ಅನಿಯಂತ್ರಿತವಾದ ಗದ್ದಲದಲ್ಲಿ ಆನಂದ ತುಂದಿಲರಾಗಿದ್ದ ವೃದ್ದರನ್ನೂ ಹಿಂದಿಕ್ಕಿ ಪಾದಯಾತ್ರೆ ಹೊರಟಿತು.

ದಂಡಿ ತಲುಪುವ ಮೊದಲು ದಾಟಬೇಕಿದ್ದ ಶುದ್ದಜಲಗಳಲ್ಲಿ ಮೊದಲನೆಯದು ಸಬರಮತಿಯೇ ಆಗಿತ್ತು. ವೇಗವಾಗಿ ಮುನ್ನೇರುತ್ತಿದ್ದ ನಾಯಕನ ಹಿಂದೆ ರಭಸದಿಂದ ನಡೆಯಬೇಕಾಗಿ ಬಂದಿದ್ದರಿಂದ, ಯಾತ್ರಾ ತಂಡಕ್ಕೂ ಹಲವು ದಿಕ್ಕುಗಳಿಂದ ಹರಿದು ಬಂದಿದ್ದ ಜನಸಾಗರಕ್ಕೂ ಮೊದಲ ಸೇತುವೆಯ ತನಕದ ಆರು ಕಿಲೋಮೀಟರ್‌ ನಡೆಯಲು ಕೇವಲ ಮುಕ್ಕಾಲು ಗಂಟೆ ಮಾತ್ರ ಹಿಡಿಯಿತು. ಬ್ರಿಟಿಷರು ಕಟ್ಟಿಸಿದ್ದ ಎಲ್ಲಿಸ್‌ ಸೇತುವೆಯ ಮೇಲೂ ಪಾದಯಾತ್ರೆಯನ್ನು ಕಾಣಲು ಜನಗಣಸಾಗರ ನೆರೆದಿತ್ತು. ಆ ದೃಶ್ಯ ಬಾಪುವಿನ ಮನಸ್ಸು ಬದಲಿಸಿತು ಎಂಬ ಗುಸುಗುಸು ಪಾದಯಾತ್ರೆಯ ಹಿಂದಿನ ಸಾಲಿನ ತನಕ ಹರಡಿತು. ಸೇತುವೆಯನ್ನೂ ಆ ಮೂಲಕ ಅಹಮದಾಬಾದ್‌ ನಗರವನ್ನೂ ಮುಟ್ಟದೆ, ಆ ಭಾಗದಲ್ಲಿ ಮೊಳಕಾಲ ತನಕ
ಹರಿಯುತ್ತಿದ್ದ ಸಬರಮತಿ ನದಿಗೆ ಇಳಿಯುವ ಮೊದಲು, ಕಸ್ತೂರ್ಬಾ ಸಹಿತ ಅಲ್ಲಿಯ ತನಕ ತಮ್ಮನ್ನು ಹಿಂಬಾಲಿಸುತ್ತಿದ್ದ ತಂಡವನ್ನು ಹಿಂದಿರುಗಿ ಹೋಗಲು ಆದೇಶಿಸಿದ್ದರು!

ನದಿ ದಂಡೆಯ ಮೂಲಕ ಕೆಳಗಿಳಿದ ಕಾಲಾಳುಗಳು ತೆಳ್ಳಗೆ ಹರಿಯುತ್ತಿದ್ದ ನದಿಗೆ ಇಳಿಯುವುದಕ್ಕಿಂತ ಮೊದಲು ದಂಡೆಯಲ್ಲೂ ಸೇತುವೆಯ ಮೇಲೂ ನೋಡುತ್ತಾ ನಿಂತಿದ್ದವರಿಗೆ ಕೆಲವು ಹೊಸ ಸಂಗತಿಗಳು ಕಾಣಿಸಿದವು. ನಜ್ಜುಗುಜ್ಜಾದ ಹಿತ್ತಾಳೆ ತಗಡಿನಂತೆ ಪ್ರಭಾತ ಬೆಳಕಿನಲ್ಲಿ ಮಿಂಚುತ್ತಿದ್ದ ಮರಳರಾಶಿಯ ಹಿನ್ನೆಲೆಯಲ್ಲಿ, ಮಹಾತ್ಮನ ಬೆನ್ನ ಹಿಂದೆಯೇ ನಡೆಯಲು ಹೆಣಗುತ್ತಿರುವ ಖಾದಿ ಟೊಪ್ಪಿ ಧರಿಸಿದ ಶ್ವೇತವಸ್ತ್ರಧಾರಿಗಳ ಹಿಂದೆ, ಚಕ್ರಕ್ಕೆ ಸಿಲುಕಿದ ಮೂರು ಪಟ್ಟು ದೊಡ್ಡದಾದ ತನ್ನ ನೆರಳನ್ನು ಬಟ್ಟೆತುಂಡಿನಂತೆ ಎಳೆದುಕೊಂಡು ಹೋಗುತ್ತಿರುವ, ಒಣಗಿದ ತಾಳೆಗರಿಗಳಿಂದ ಅರೆವೃತ್ತಾಕಾರದಲ್ಲಿ ಮಾಡು ಕಟ್ಟಿದ್ದ, ಒಂದು ಎತ್ತಿನ ಗಾಡಿಯಿದೆ. ಅದಕ್ಕೂ ಹಿಂದೆ ಧೂಳಿನಿಂದಾವೃತ್ತವಾಗಿದ್ದ ಒಂದು ಕುದುರೆಯೂ, ಅದರ ಜಿನಸಿನಲ್ಲಿ ಎಡಗೈಯಿಟ್ಟು ಜೊತೆಗೆ ನಡೆಯುತ್ತಿರುವ ಕುದುರೆ ಸವಾರನೂ ಇದ್ದಾನೆ.

ಎತ್ತಿನಗಾಡಿಯೊಳಗೆ ಏನಿದೆಯೆಂಬ ಪ್ರೇಕ್ಷಕರ ಆಕಾಂಕ್ಷೆಯೊಳಗಿನಿಂದ ಜನಿಸಿದಂತೆ, ಇಬ್ಬರು ಮೇಲಂಗಿ ಧರಿಸದ ಹುಡುಗರು ಮರಳರಾಶಿಯ ಮೇಲೆ ಮೂಡುತ್ತಿದ್ದ ಹೊಸ ಚಕ್ರಗುರುತುಗಳ ಹಿಂದೆ ಓಡಲು ತೊಡಗಿದರು. ಗಾಡಿ ನದಿನೀರಿಗೆ ಇನ್ನೇನು ಇಳಿಯಬೇಕೆನ್ನುವಷ್ಟರಲ್ಲಿ ಅದರ ಸೆಣಬಿನ ಚೀಲದ ಪರದೆಯನ್ನು ಹಿರಿಯ ಹುಡುಗ ಎತ್ತಿ ನೋಡಿದ. ಅದರಲ್ಲಿ ಅವನಿಗೆ ಪರಸ್ಪರ ಸಂಬಂಧವಿಲ್ಲದ ವಸ್ತಗಳು ಕಂಡವು. ಬಾಪುವಿನ ಪ್ರಿಯ ಬಾರ್ದೋಳಿ ಚರಕ, ಹೊಸ ತರದ ಒಂದು ಮಲ ವಿಸರ್ಜನೆ ಪೆಟ್ಟಿಗೆ, ಚರ್ಮದ ಹೊದಿಕೆ ಇದ್ದ ಮೂರೋ ನಾಲ್ಕೋ ಪುಸ್ತಕಗಳು ಮತ್ತು ಕೆಲವು ಕಾಗದ ಪತ್ರದ ಕಟ್ಟುಗಳು, ಎರಡು ಅಲ್ಯುಮಿನಿಯಂ ಬಕೆಟ್ಟುಗಳು, ನೆಲದಲ್ಲಿ ಕೂತು ಬರೆಯಬಹುದಾದಂತಹ ಕತ್ತರಿ ಕಾಲುಗಳ ಸಣ್ಣ ಮೇಜು, ಒಂದು ತಂಬೂರಿ… ಜೊತೆಗೆ, ತೂಗುತ್ತಿದ್ದ ಲೋಹ ಪಂಜರದೊಳಗೆ ಭಯದಿಂದ ಗಟ್ಟಿಯಾಗಿ ಹಿಡಿದುಕೊಂಡು ಕುಳಿತಿರುವ ಗಿಳಿಮರಿ.

ಗದರಿಸುತ್ತಿದ್ದ ಗಾಡಿಯವನಿಗೆ ಹೆದರಿ ಹುಡುಗ ತಿರುಗಿ ಓಡುವಾಗ ಜೊತೆಗಿದ್ದ ಕಿರಿಯವನ ಬಳಿ ಹೇಳಿದ, “ಬಾಪುವಿನ ಸಂಚಾರಿ ಆಫೀಸ್‌ ಕೋಣೆ ಅದು.”

ಮೂರು

ಯಾತ್ರೆಯ ಮೊದಲ ರಾತ್ರಿ.

ಅಸಲಾಲಿ ಗ್ರಾಮದಲ್ಲಿ ಹುಲ್ಲಿನ ಕುಟೀರದಲ್ಲಿ ಮಲಗಿದ್ದಾಗ ಲೀಲಾಧರ ಬಹಳ ಕಾಲದ ನಂತರ ತನ್ನಪ್ಪನ ಕನಸು ಕಂಡ. ಕನಸಲ್ಲೂ ಆತ ಅದೇ ಕುಟೀರದಲ್ಲಿ ಹೊದ್ದು ಮಲಗಿದ್ದ. ಆದರೆ, ಕನಸಲ್ಲಿ ಅವನ ಸಹಿತ ಎಲ್ಲರೂ ಸತ್ತು ಮಲಗಿದ್ದರೆಂದು ಮಾತ್ರ. ಬಿಳಿ ಬಟ್ಟೆ ಹೊದ್ದು ಮಲಗಿದ್ದ ಶವಗಳ ನಡುವೆ ತನ್ನ ಚಿತ್ರಹಲಗೆಯನ್ನು ಹಿಡಿದು ಗಾಬರಿಯಿಂದ ಎಲ್ಲ ಮುಖಗಳ ಪರದೆ ಸರಿಸಿ ಸೂಕ್ಷ್ಮವಾಗಿ ನೋಡುತ್ತಾ ನಡೆದ ಅಪ್ಪ ಕೊನೆಗೂ ಆತನನ್ನು ಗುರುತಿಸಿದ. ಗುಂಡೇಟು ತಿಂದ ಬಾಲತಲೆಯಲ್ಲಿ ಹೆಪ್ಪುಗಟ್ಟಿದ್ದ, ಸಾವು ಹರಿವು ನಿಲ್ಲಿಸಿದ್ದ ರಕ್ತದ ಮಡುವಿನಲ್ಲಿ ನಡುಗುತ್ತಿದ್ದ ತನ್ನ ಮುದಿ ಕೈಯನ್ನು ಇಟ್ಟ. “ಅವರ ಯಾಂತ್ರಿಕ ತುಪಾಕಿಗೆ ನೀನೂ ಬಲಿಯಾದೆಯೆಂದು ಬಾಪು ಹೇಳಿದರು ಕಂದಾ!” ಅಪ್ಪ ಬಿಕ್ಕಳಿಸಿದ.

ಕನಸು ಮುರಿದು ಎಚ್ಚರವಾದಾಗ ತಾನು ಸಹಿತ ಯಾರೂ ಸತ್ತಿಲ್ಲವೆಂದೂ, ತನ್ನ ತಲೆಗೆ ಗಾಯವೇನೂ ಆಗಿಲ್ಲವೆಂದೂ, ಕನಸಲ್ಲಿ ಬಂದಿದ್ದ ಅಪ್ಪ ನಾಲ್ಕೂವರೆ ವರ್ಷಗಳ ಹಿಂದೆಯೇ ಮಣ್ಣಾಗಿದ್ದನೆಂದೂ ತಿಳಿದಾಗ ಲೀಲಾಧರನ ಮುಖದ ಮೇಲೆ ಆ ಕತ್ತಲೆಯಲ್ಲಿ ಮೂರ್ಖ ನಗುವೊಂದು ಮೂಡಿತು. ಮಲಗುವ ಮೊದಲು ಹರಖ್‌ ಜೀ ಜೊತೆಗೆ ನಡೆಸಿದ ದೀರ್ಘ ಮಾತುಕತೆಯಿಂದಲೇ ತನ್ನ ಕನಸಿಗೆ ಕಿಡಿ ಹತ್ತಿದ್ದು ಎಂದೂ ಆತನಿಗೆ ಅರಿವಾಯಿತು. ಸತ್ಯಾಗ್ರಹ ಯಾತ್ರೆಯ ನಡುವೆ ಬಾಪುವನ್ನು ಅರೆಸ್ಟ್‌ ಮಾಡಬಹುದೆಂಬ ಗಾಳಿ ಸುದ್ದಿ ಶುರುವಿನಲ್ಲೇ ಹರಡಿತ್ತು. ವಿಶ್ರಾಂತಿ ಸಮಯದ ಮಾತುಕತೆಗಳಲ್ಲಿ, ಮಕ್ಕಳ ಕಲ್ಪನೆಗಳ ಅಲೆಯಲ್ಲಿ, ಆಪತ್ತಿನ ಸಾಧ್ಯತೆಗಳು ಮತ್ತಷ್ಟು ಹೆಚ್ಚಿತು. ಅಸಲಾಲಿ ಗ್ರಾಮದ ಸ್ವಾಗತ ಸಂಘದವರು ತಯಾರಿಸಿದ್ದ ಸರಳವಾದ ಊಟ ಮುಗಿಸಿ ಮಲಗುತ್ತಿದ್ದಾಗ, ಪಕ್ಕದ ಚಾಪೆಯಲ್ಲಿ ಮೂಲಂಗಿ ವಾಸನೆಯ ಬಾಯಿಯಲ್ಲಿ ಹರಖ್‌ ಜೀ ಹೇಳಿದ, “ಬಾಪುವನ್ನು ಅರೆಸ್ಟ್‌ ಮಾಡಿದರೆ ಬರ್ಮಾಕ್ಕೆ ಗಡೀಪಾರು ಮಾಡ್ತಾರೆ ಅಂತ ಹೇಳ್ತಿದ್ದಾರೆ.” ಸ್ವಗತಕ್ಕಿಂತಲೂ ಸಣ್ಣ ದನಿಯಲ್ಲಿ ಮತ್ತೆ ಮುಂದುವರಿಸಿದ, “ಅದಕ್ಕಾಗಿ ವಿಶೇಷ ರೈಲು ಗಾಡಿಯನ್ನೂ ಮಾಡಿಟ್ಟಿದ್ದಾರಂತೆ.”

ಆ ದೃಶ್ಯವನ್ನು ಲೀಲಾಧರ ಕಲ್ಪಿಸಿಕೊಳ್ಳುವ ಮೊದಲೇ ಅದಕ್ಕಿಂತಲು ಘೋರವಾದ ಇನ್ನೊಂದು ಸಂಗತಿಯನ್ನು ಹರಖ್‌ ಜೀ ಮರಣ ವಾರೆಂಟ್‌ ತರ ದಾಟಿಸಿದ, “ನೀನು ಕೇಳಿಸಿಕೊಂಡಿದ್ದೀಯಾ? ನಾವು ನಡೆದು ಹೋಗಲಿರುವ ದಾರಿಯಲ್ಲಿ ಸಿಗುವ ಚಂದ್ರಭಾಗ ನದಿಯ ಸೇತುವೆಯಲ್ಲಿ ನಿಮಿಷಕ್ಕೆ ನೂರು ಜನರಿಗೆ ಗುಂಡು ಹೊಡೆಯುವಂತಹ ಯಾಂತ್ರಿಕ ಬಂದೂಕನ್ನು ತಂದಿಟ್ಟಿದ್ದಾರಂತೆ.”

ತನ್ನನ್ನು ದುಸ್ವಪ್ನಕ್ಕೆ ತಳ್ಳಿ ಅವನ ಪ್ರಯಾಕ್ಕಿಂತ ಹಿರಿದಾದ ಗೊರಕೆಯಲ್ಲಿ ಮುಳುಗಿದ್ದ ಹರಖ್‌ ಜೀಯನ್ನು ಮುಟ್ಟಿ ನೋಡಿದ. ನಿದ್ದೆಯಲ್ಲಿ ಮುಟ್ಟಿದರೆ ಆತ ಬೆಚ್ಚಿ ಬೀಳುವುದಿಲ್ಲ. ಬಾಪು ಎಷ್ಟು ತೊಳೆದು ಶುದ್ದಿ ಮಾಡಿದರೂ ತಾನಿನ್ನೂ ಅಸ್ಪೃಶ್ಯನಾಗಿಯೇ ಉಳಿದಿದ್ದೇನೆಂಬ ಖೇದ ಹರಖ್‌ ಜೀಯ ಒಳಗೆ ಉಳಿದುಕೊಂಡಿತ್ತು. ಹರಖ್‌ ಎಂಬ ಹೆಸರಿನೊಂದಿಗೆ ಜೀ ಎಂದು ಸೇರಿಸಿದ್ದು ಕೂಡ ಬಾಪು. ಬಾಪು ಆ ಗೌರವಾಕ್ಷರ ಸೇರಿಸಿ ಕರೆಯುವ ಹದಿನೆಂಟರ ಇನ್ನೊಬ್ಬನೂ ಯಾತ್ರೆಯಲ್ಲಿದ್ದಾನೆ. ಗೋದ್ರಾದ ಹಿಂದುಳಿದವರ ಆಶ್ರಮದಿಂದ ಬಂದಿದ್ದ ರತ್ನಾಜೀ ಬೋರಿಯ. ರತ್ನಾಜಿಯ ಜೊತೆಗೆ ಹಗಲು ನಡೆಯಲೂ ರಾತ್ರಿ ಮಲಗಲೂ ಜೊತೆಗಾರ ಯಾರೆಂದು ತಿಳಿದಾಗ ಲೀಲಾಧರ್‌ ಮತ್ತೊಮ್ಮೆ ಪುಳಕಗೊಂಡ. ಎಪ್ಪತ್ತೆರಡನೇ ನಂಬರಿನ ರತ್ನಾಜೀ ಬೋರಿಯಾನನ್ನು ನಿದ್ದೆಯಲ್ಲಿ ತಾನರಿಯದೆ ತಬ್ಬಿ ಮಲಗಿರಬಹುದು, ಸದಾಕಾಲ ತಿಲಕವಿಟ್ಟುಕೊಂಡಿರುವ ಎಪ್ಪತ್ತಮೂರನೇ ನಂಬರಿನ ವಿಷ್ಣು ಶರ್ಮ.

ವಿಶ್ರಾಂತಿ ಕೇಂದ್ರದ ಉತ್ತರ ದಿಕ್ಕಿನಲ್ಲಿ ಪಂಡಿತ್‌ ಖರೇ ಈ ಅಪರಾತ್ರಿಯಲ್ಲೂ ತಂಬೂರಿ ಮೀಟಿ ವಿಷ್ಣು ಭಜನೆ ಹಾಡುತ್ತಿದ್ದಾರೆಂದು ಅನಿಸಿತು. ಬಹುಶಃ ಹಗಲು ಪೂರ್ತಿ ಕೇಳಿಸಿಕೊಂಡದ್ದು ಈಗ ಕಿವಿಯೊಳಗೆ ರಿಂಗಣಿಸುವುದೂ ಆಗಿರಬಹುದು. ನಡೆಯುವಾಗಲೂ ಮಲಗುವಾಗಲೂ ಖರೇ ತನ್ನ ಪಕ್ಕ ಇಲ್ಲದಿರುವುದಕ್ಕಾಗಿ ಲೀಲಾಧರ್‌ ಮೊದಲ ಬಾರಿಗೆ ಬೇಸರಗೊಂಡ. ಉಪ್ಪು ಸತ್ಯಾಗ್ರಹವೆಂದರೆ ಪರಸ್ಪರ ಹತ್ತಿರ ಇರುವವರು ನಗುತ್ತಾ ಹರಟುತ್ತಾ ನಡೆಯುವ ಪ್ರವಾಸ ಅಲ್ಲವೆಂದು ಬಾಪು ಮೊದಲೇ ಹೇಳಿದ್ದರಲ್ಲಿ ಎಲ್ಲವೂ ಅಡಕವಾಗಿತ್ತು. ಗಾಂಧಿ ಕುಟುಂಬದ ಮೂರು ತಲೆಮಾರಿನ ಕ್ರಮಸಂಖ್ಯೆಗಳು ಅದನ್ನು ಪುಷ್ಟೀಕರಿಸಿದವು. ಒಂದನೇ ನಂಬರಿನ ಬಾಪುವಿನ ಮಗ ಮಣಿಲಾಲ್‌ ಗಾಂಧಿಯ ಕ್ರಮಸಂಖ್ಯೆ ಎಪ್ಪತ್ತಾರು. ಮಣಿಲಾಲನ ಮಗ ಕಾಂತಿಲಾಲನ ನಂಬರ್‌ ಹದಿನಾಲ್ಕು.

ಯಾತ್ರೆಯಲ್ಲಿ ಸಿಕ್ಕ ಹೊಸ ಸಾಮೀಪ್ಯಗಳಂತೆ ಈ ಅಗಲಿಕೆಗಳೂ ಯಾದೃಚ್ಛಿಕವಲ್ಲ. ಲೀಲಾಧರ್‌ ಆಕಳಿಸಿದ. ಮೊದಲ ಹಗಲು ಏಗುತ್ತಾ ಹಿಂದಿಕ್ಕಿದ್ದರ ನೆನಪು ಅವನ ಸೊಂಟದ ಮೂಳೆಯಲ್ಲಿ ನೋವಾಗಿ ಮಿಂಚಿತು. ಹಿಂದಿನ ರಾತ್ರಿ ಮಲಗುವ ಮೊದಲೇ ಎಲ್ಲರಿಗೂ ನಡೆದು ಸವೆದಿದ್ದ ಪಾದಗಳಲ್ಲಿ ಎದ್ದಿದ್ದ ನಸುಹಳದಿ ಬೊಕ್ಕೆಗಳಿಗೆ ಹಚ್ಚಲೆಂದು ಕೊಬ್ಬರಿ ಎಣ್ಣೆ ಸಿಕ್ಕಿತ್ತು. ಪಾದಯಾತ್ರೆಯ ಸಂಘದಲ್ಲಿದ್ದ ದಕ್ಷಿಣದ ನಾಲ್ಕು ಜನ ಯುವಕರು ತಮ್ಮ ಚೀಲದಲ್ಲಿ ಹೆಚ್ಚುವರಿಯಾಗಿ ಇಟ್ಟುಕೊಂಡಿದ್ದು ಅದನ್ನೇ ಆಗಿತ್ತು. ತೆಂಗುಗಳ ನಾಡಿನಿಂದ ರೈಲುಗಾಡಿ ಹತ್ತಿ ಬಂದಿದ್ದ, ಪ್ರಭಾತ ಕಿರಣದಂತೆ ಹೊಳೆಯುವ ಕೊಬ್ಬರಿಯೆಣ್ಣೆ. ಸಾಲಾಗಿ ಹಾಸಿದ್ದ ಚಾಪೆಗಳ ಮೇಲೆ ಚಕ್ಕಲಮಕ್ಕಲ ಹಾಕಿ ಕೂತು ತಮ್ಮ ಬೊಕ್ಕೆಬಿದ್ದ ಕಾಲುಗಳ ಆರೈಕೆ ಮಾಡುತ್ತಿದ್ದವರ ನಡುವಿಗೆ ಪಂಜಿನ ಬೆಳಕು ಮತ್ತು ಬೆಂದ ತೆಂಗಿನ ಕಾಯಿಯ ಗಂಧದ ಕೊಬ್ಬರಿ ಎಣ್ಣೆಯೊಂದಿಗೆ ನಾಲ್ಕು ಯುವಕರು ಬಂದಾಗ ಅವರ ಊರು ಮತ್ತು ಭಾಷೆ ಉಳಿದವರ ಪಿಸುಮಾತಿನಲ್ಲಿ ತುಂಬಿತು.

“ಕೇರಲೀ”, ಎರಡೂ ಕಡೆ ಚಾಚಿದ್ದ ಬೊಗಸೆಗಳಿಗೆ ತೀರ್ಥದಂತೆ ಸ್ನೇಹಲೇಪನ ಸುರಿಯುತ್ತಿರುವ ನಾಲ್ಕು ಜನರನ್ನು ಯಾರೋ ಅವರ ನಾಡಿನ ಸರ್ವನಾಮದಲ್ಲಿ ಹಿಡಿದು ಕಟ್ಟಲು ಯತ್ನಿಸಿದರು. ಆಗ ಮತ್ಯಾರೋ ಅದನ್ನು ಭಾಷೆಯ ಹೆಸರಿನಲ್ಲಿ ತಿದ್ದಿ ಕೂಗಿ ನಕ್ಕರು. “ಮಲಯಾಲೀ!”

ಬಾಪು ಹೆಸರು ತಿಳಿಯದವರನ್ನು ಜಾತಿ ಹೆಸರಿಡಿದು ಕರೆಯುವುದನ್ನು ಆಶ್ರಮದೊಳಗೆ ಸಂಪೂರ್ಣವಾಗಿ ನಿಷೇಧಿಸಿದ್ದರು. ಜನರನ್ನು ಅವರ ಹೆಸರಿನಿಂದಲೇ ನೆನಪಿಟ್ಟುಕೊಳ್ಳಬೇಕು ಎಂಬುದು ಮೊದಲ ನಿಯಮ. ಇನ್ನು ಹೆಸರು ನೆನಪಾಗದೆ ನಾಲಗೆ ಕಟ್ಟಿದರೆ, ಆತನ ಉದ್ಯೋಗದ ಹೆಸರು; ಅದೂ ಸಾಧ್ಯವಾಗದಿದ್ದರೆ ಆತನ ಮಾತೃಭಾಷೆ ಅಥವಾ ಹುಟ್ಟೂರು. ನಿನ್ನೆ ಮಲಗುವ ಮೊದಲು, ಪಾದಯಾತ್ರಿಕರೆಲ್ಲರ ಹೆಸರುಗಳನ್ನು ಲೀಲಾಧರ ತನ್ನ ಡೈರಿಯಲ್ಲಿ ಬರೆದಿಟ್ಟ, ಅದರ ಕೆಳಗೆ ಇನ್ನೊಂದು ಪಟ್ಟಿಯನ್ನು ಸೇರಿಸಿದ, ಅವರ ಹುಟ್ಟೂರು ಬರೆಯಲು. ಸಂಖ್ಯಾಬಲದಲ್ಲಿ ಮೊದಲ ಸ್ಥಾನದಲ್ಲಿರುವ ಗುಜರಾತಿಗಳು ಮೊದಲಿಗೆ. ಬಾಪು ಮತ್ತು ತಾನು ಸಹಿತ ಒಟ್ಟು ಮೂವತ್ತಮೂರು ಜನರು. ನಂತರದ ಸ್ಥಾನದಲ್ಲಿ ಯೂಪಿ ಎಂದು ಕರೆಯಲ್ಪಡುವ ಯುನೈಟೆಡ್‌ ಪ್ರಾವೀನ್ಸ್ - ಏಳು ಜನರು. ಉತ್ಕಲ, ಸಿಂಧೂ, ವಂಗದೇಶ, ಆಂಧ್ರ, ಕರ್ನಾಟಕ, ತಮಿಳುನಾಡು, ಬಿಹಾರ ತಲಾ ಒಬ್ಬರಂತೆ ಸಮರ್ಪಿಸಿದಾಗ, ದಕ್ಷಿಣ ತುದಿಯ ಮಲಯಾಳಿಗಳು ನಾಲ್ಕು ಜನರು: ಕೃಷ್ಣನ್‌, ರಾಘವನ್‌, ಶಂಕರನ್‌, ಟೈಟಸ್.‌ ನಾಲ್ಕು ಜನರ ವಯಸ್ಸೂ ಇಪ್ಪತ್ತೈದು ಎಂಬುದು ಮೊದಲ ಕುತೂಹಲಕರ ಸಂಗತಿಯಾಗಿತ್ತು; ಈಗ ಚೇತೋಹಾರಿಯಾದ ದ್ರಾವಿಡ ಸುಗಂಧ ಪಸರಿಸುವ ಈ ಕೊಬ್ಬರಿ ಎಣ್ಣೆಯೂ.

ಕಬ್ಬು ಅರೆಯುವ ಹಾಗೆ ತೆಂಗುಗಳನ್ನು ಹಿಂಡಿ ಕೊಬ್ಬರಿ ಎಣ್ಣೆ ತಯಾರಿಸುವ ಬೃಹತ್‌ ಯಂತ್ರದ ಕನಸು ಕಾಣಲಿರುವ ಎರಡನೇ ನಿದ್ದೆಗಾಗಿ ಲೀಲಾಧರ ಕಣ್ಣು ಮುಚ್ಚಿದ. ಕನಸಿನ ವಿಚಿತ್ರ ಯಂತ್ರಕ್ಕೆ ಯಾತ್ರಾತಂಡದ ಗೊರಕೆಯ ಸದ್ದು ಸುಲಭ ಸಾಲವಾಗಿ ಸಿಕ್ಕಿತು. ನಂತರ ಆ ಸದ್ದು ಪಂಡಿತ್‌ ಖರೇಯ ತಂಬೂರಿ ನಾದದಂತೆ ತೆಳುವಾಗುತ್ತಾ ಬಂದಿತು. ಕೊನೆಗೆ ಅದೂ ಇಲ್ಲವಾಯಿತು. ಹಾಗೆ ಕಡಲ ಉಪ್ಪಿಗಾಗಿ ನಡೆಯುವ ಮೊದಲ ಹಗಲು ಮತ್ತು ಮೊದಲ ರಾತ್ರಿ ಕಳೆಯಿತು.

ನಾಲ್ಕು

ಅಸಹನೀಯವಾದ ಮಾರ್ಚ್‌ ತಿಂಗಳ ಧೂಳು ಮತ್ತು ಸೆಖೆ. ದೇಹಕ್ಕಪ್ಪಳಿಸಿದ ಧೂಳುಮಣ್ಣು ಮತ್ತು
ಹರಿಯುತ್ತಿರುವ ಬೆವರು ಬೆರೆತು ಉಂಟಾದ ಕೆಸರ ಕವಚವನ್ನು ಧರಿಸಿದ ಪಾದಯಾತ್ರಿಕರು, ಚಲಿಸುವ ಕೈಕಾಲುಗಳು ಮತ್ತು ರೆಪ್ಪೆ ಬಡಿಯುವ ಕಣ್ಣುಗಳ ಮಣ್ಣಿನ ಪ್ರತಿಮೆಗಳಂತೆ ನಡೆದರು. ಕೂದಲಿಲ್ಲದ ತಲೆಯ ಮೇಲೆ ಬಿಸಿಲ ಅಟ್ಟಹಾಸ ತಡೆಯಲು ಬಾಪು ಕರವಸ್ತ್ರದಿಂದ ತಲೆ ಮರೆಸುತ್ತಿದ್ದರು. ಅಜೀರ್ಣದ ಸಮಸ್ಯೆಯಿಂದ ಅವಾಗವಾಗ ಎತ್ತಿನಗಾಡಿಯಲ್ಲಿದ್ದ ತನ್ನ ಮಲವಿಸರ್ಜನೆ ಪೆಟ್ಟಿಗೆಯ ಸಹಾಯ ಪಡೆಯಬೇಕಾಗಿ ಬಂದಿದ್ದರೂ ಕೂಡ ಬಾಪು ಮಾತ್ರ ಯಾವಾಗಲೂ ಮುಂದೆಯೇ ಇರುತ್ತಿದ್ದರು; ಉಳಿದೆಲ್ಲರಿಗಿಂತ ವೇಗವಾಗಿ ಮತ್ತು ದೃಢವಾಗಿ.

ನಡೆದು ಹೋಗುವ ಗ್ರಾಮಗಳಲ್ಲೆಲ್ಲ, ಬಾಪುವಿನ ತಂಡವನ್ನು ಬರಮಾಡಿಕೊಳ್ಳಲು ಮತ್ತು ಅವರೊಂದಿಗೆ ಸ್ವಲ್ಪ ದೂರ ನಡೆಯಲು ಜನರು ಮುಗಿಬೀಳುತ್ತಿದ್ದರು. ಭಜನೆ, ಕೀರ್ತನೆ ಮತ್ತು ದೇಶಭಕ್ತಿಗೀತೆಗಳನ್ನು ಹಾಡಿಕೊಂಡು ಅವರು ಫಾಲ್ಗುಣ ಮಾಸದ ಕಾಠಿಣ್ಯವನ್ನು ಮುರಿದರು. ಊರ ಉಳ್ಳವರಿಂದ ಭೂರಿ ಭೋಜನದ ಸತ್ಕಾರ ಸಾಧ್ಯತೆಯನ್ನು ಮೊದಲೇ ಮನಗಂಡು ಅದನ್ನು ನಿರಾಕರಿಸಲಾಗಿತ್ತು. ಆದರೂ ಸ್ನೇಹಾದರಗಳು ಹಲವು ರೂಪಗಳಲ್ಲಿ ಪ್ರವಹಿಸಿದವು. ಯಾತ್ರೆಯ ಬಾಲದಲ್ಲಿ ಸಾಯಲು ಬಿದ್ದಿರುವಂತಾ ಎತ್ತುಗಳು ಎಳೆಯುತ್ತಿರುವ ಗಾಡಿಯನ್ನು ಕಂಡ ಕನಕಪುರದ ವ್ಯಾಪಾರಿಯೊಬ್ಬ ಬಾಪುವಿಗೆ ಮುಂದಿನ ಯಾತ್ರೆಗೆ ತನ್ನ ಮೋಟಾರು ವಾಹನವನ್ನೇ ಬಿಟ್ಟುಕೊಡಲು ಪ್ರಯತ್ನಿಸಿದ. ಆದರೆ, ತಾನು ಕನಿಕರ ತೋರಿಸಬೇಕಿರುವುದು ಬಡಕಲು ಎತ್ತುಗಳ ಮೇಲೋ, ನಡೆದು ದಣಿಯುತ್ತಿರುವ ಮಹಾತ್ಮನ ಮೇಲೋ ಎಂಬ ಗೊಂದಲದಲ್ಲಿ ಸಿಲುಕಿದ ಕುಬೇರ ಕೊನೆಗೆ ನಿರಾಸೆಗೊಳ್ಳಬೇಕಾಗಿ ಬಂತು.

“ಮಣ್ಣಾಗಿ ಹೋದ ಕೋಟಿಗಟ್ಟಲೆ ಜೀವಜಂತುಗಳನ್ನು ಕಾಲವು ಭೂಗರ್ಭದಲ್ಲಿ ಹಾಕಿ ಕುದಿಸಿ ತೆಗೆಯುವುದೇ ನೀವು ಪೆಟ್ರೋಲ್‌ ಎಂದು ಕರೆಯುವ ಶಿಲಾತೈಲ.” ಭಗವಂತನಷ್ಟು ಸುಂದರವಾದ ಮಂದಹಾಸದೊಂದಿಗೆ ಬಾಪು ಆ ಸಂಜೆಯ ಸಾರ್ವಜನಿಕ ಸಭೆಯಲ್ಲಿ ಧನಿಕನ ಹೆಸರೆತ್ತದೆ ಹೇಳಿದ ಮಾತನ್ನು ಲೀಲಾಧರ ತನ್ನ ಡೈರಿಯಲ್ಲಿ ಹತ್ತನೇ ದಿನದ ಭರತವಾಕ್ಯವಾಗಿ ಬರೆದ, “ಅದರ ಹಕ್ಕನ್ನು ಧಾರೆಯೆರೆದು ಒಬ್ಬ ಬಡಪಾಯಿ ಪಾದಯಾತ್ರಿಕನನ್ನು ಪ್ರಲೋಭಿಸದಿರಿ!”

ಆನಂದ್‌, ಕನಕಪುರ, ಕರೇಲಿ ದಾಟುವಷ್ಟರಲ್ಲಿ ಲೀಲಾಧರನ ಸೊಂಟದ ಮೂಳೆಯ ನೋವು ಮತ್ತು ಪಾದದ ಬಾವು ಹೆಚ್ಚಿತು. ಆತ ಎಲ್ಲರಿಗಿಂತ ಮುಂದೆ ಏನೇನೂ ಕೇಡಿಲ್ಲದೆ ನಡೆಯುತ್ತಿದ್ದ ಅರವತ್ತರ ವ್ಯಕ್ತಿಯೊಂದಿಗೆ ತುಲನೆ ಮಾಡಿ ತನ್ನ ನೋವನ್ನು ಶಮನಗೊಳಿಸಿದ. ಯಾತ್ರಿಕರ ಚೀಲದಲ್ಲಿದ್ದ ಹಲವು ತರದ ಮುಲಾಮುಗಳು ಅರ್ಧದಾರಿ ನಡೆಯುವಷ್ಟರಲ್ಲಿ ಮುಗಿದಿದ್ದವು. ಈಗ ಊಟಕ್ಕಿಂತ ಅಗತ್ಯವಾಗಿದ್ದ ವಸ್ತು ಕೂಡ ಅದೇ ಆಗಿತ್ತು. ನೆರಳಡಿಯಲ್ಲಿ ನಿರ್ಮಿಸಿದ್ದ ತಾತ್ಕಾಲಿಕ ವಿಶ್ರಾಂತಿ ಕೇಂದ್ರಗಳಲ್ಲಿ ವಿಶ್ರಮಿಸುವಾಗಲೂ ತಮ್ಮ ಕಾಲುಗಳು ನಡೆಯುತ್ತಲೇ ಇವೆ ಎಂಬ ವಿಚಿತ್ರ ಭ್ರಮೆ ಕೆಲವರನ್ನಾದರೂ ಆವರಿಸಿತ್ತು. ಇತಿಹಾಸದಲ್ಲಿ ಬಿಡಿ, ತಮ್ಮ ದಿನಚರಿ ಪುಸ್ತಕದಲ್ಲೂ ಬರೆದಿಡಲಾಗದ ಸುಖನೋವಿನ ಮಿಶ್ರಣವದು.ಕುಸಿಯುತ್ತಿರುವ ದೇಹವನ್ನು ಕೂಡ ಬೆನ್ನ ಹಿಂದೆ ಬಿಟ್ಟು ಮುನ್ನೇರುತ್ತಿರುವಂತ ವಿಭ್ರಾಂತಿ.

ಕಳೆದ ಸಂಜೆ ಜಂಬೂಸರದಲ್ಲಿ ನಡೆದ ಸಮ್ಮೇಳನದಲ್ಲಿ ಭಾಗವಹಿಸಲು ಮೋತಿಲಾಲ್‌ ನೆಹರು ಮತ್ತು ಸರೋಜಿನಿ ನಾಯ್ಡು ಬಂದದ್ದು ಪಾದಯಾತ್ರಿಕರ ನಡಿಗೆಯ ದಣಿವನ್ನು ಅರ್ಧದಷ್ಟು ನೀಗಿಸಿತ್ತು. ಧೂಳು ಮತ್ತು ಜನಸಾಗರದ ಬೋರ್ಗರೆತ ತಮ್ಮೊಳಗೆ ಸ್ಪರ್ಧೆಗೆ ಬಿದ್ದಿದ್ದ ಹೊತ್ತಲ್ಲಿ, ತನ್ನ ಆನಂದ ಭವನವನ್ನು ಕಾಂಗ್ರೆಸ್ಸಿಗೆ ದಾನ ಮಾಡುವುದಾಗಿ ಮೋತಿಲಾಲ್‌ ನೆಹರು ಘೋಷಿಸಿದಾಗ ಸಭೆಯು ಒಂದು ಕ್ಷಣ ನಿಶ್ಶಬ್ಧವಾದದ್ದು ಮತ್ತು ವಾತಾವರಣದಲ್ಲಿ ಹೊಗೆಯಂತೆ ನಿಂತಿದ್ದ ಒಣಧೂಳು ಬಿಸಿಲ ಝಳಕ್ಕೆ ಚಿನ್ನದ ಪುಡಿಯಂತೆ ಮಿನುಗಿದ್ದನ್ನು ಲೀಲಾಧರ ತನ್ನ ದಿನಚರಿ ಪುಸ್ತಕದಲ್ಲಿ ಬರೆದ. ಜಂಬೂಸಾರ ಮತ್ತು ಬಲೂಚಿಯ ನಡುವೆ, ದಾದರ್‌ ನದಿಯಿಂದ ಒಂದು ಕಿಲೋಮೀಟರ್‌ ಆಚೆಯಿರುವ ತಾಲ್ಲೂಕೊಂದರಲ್ಲಿ ತಮ್ಮ ಯಾತ್ರೆಯ ನಡುವೆ ಸಿಗುವ ಅಷ್ಟೂ ಊರುಗಳಲ್ಲಿ ಅತ್ಯಂತ ಹೆಚ್ಚು ಮುಸ್ಲಿಮರು ವಾಸ ಇರುವ ಪ್ರದೇಶವೆಂದು ಹಿಂದಿನ ದಿನ ಆಂಖಿಯಲ್ಲಿ ರಾತ್ರಿಯೂಟದ ನಂತರ ಕೈ ತೊಳೆಯುವಾಗ ರಮಣಿಕ್‌ ಲಾಲನ ಬಳಿ ಗುಟ್ಟಿನಲ್ಲೆಂಬಂತೆ ಗಣಪತ್‌ ರಾವ್‌ ಗೋಡ್ಸೆ ಹೇಳುವುದನ್ನು ಲೀಲಾಧರ ಕೇಳಿಸಿಕೊಂಡಿದ್ದ. ತೊಳೆದ ಪಾತ್ರದೊಂದಿಗೆ ಅಬ್ಬಾಸ್‌ ವರ್ತೇಜಿ ತಮ್ಮನ್ನು ಹಾದು ಹೋಗುವ ತನಕ ಕಾದು ನಿಂತು, ರಾತ್ರಿಗಿಂತಲೂ ಕತ್ತಲಾದ ದನಿಯಲ್ಲಿ ಗೋಡ್ಸೆ ಹೇಳಿದ: “ನಾವು ಒಟ್ಟು ಎಂಬತ್ತೊಂದು ಜನರಲ್ಲಿ ಇಬ್ಬರೇ ಮುಸ್ಲಿಮರು ಇರುವುದು. ಅಲ್ಲಿಯಾದರೆ ಮೂವರಿಗೆ ಒಬ್ಬ ಮುಸ್ಲಿಂ ಅಂತೆ.”

ಪಾದಯಾತ್ರಿಕರ ಸಂಖ್ಯೆ ಎಪ್ಪತ್ತೊಂಬತ್ತರಿಂದ ಎಂಬತ್ತೊಂದು ಆಗಿರುವುದನ್ನು ಲೀಲಾಧರ ತನ್ನ ಪುಸ್ತಕದಲ್ಲಿ ನಮೂದಿಸಿದ್ದ. ಕಾಲೋಲ್ಕರರ ಹಿರಿ ಮಗ ಶಂಕರ್‌ ಮತ್ತು ಹಿಂದೊಮ್ಮೆ ಕೊಲೆ ಆರೋಪದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಖರಗ್‌ ಬಹಾದ್ದೂರ್‌ ಸಿಂಗ್‌, ಬಾಪುವಿನ ಅಣತಿಯಂತೆ ಪಾದಯಾತ್ರೆಯ ಸಾಲಿನ ಕೊನೆಯಲ್ಲಿ ಸೇರಿಕೊಂಡಿದ್ದರು. ಕಿರಿಯ ಸದಸ್ಯರು ಭಯದಿಂದಲೇ ಕಾಣುತ್ತಿದ್ದ ಖರಗ್‌ ಸಿಂಗನೊಂದಿಗೂ ಗಣಪತ್‌ ರಾವ್ ನಗುತ್ತಲೇ ಮಾತನಾಡುತ್ತಿದ್ದ. ಆದರೆ, ಹದಿನೆಂಟನೇ ನಂಬರಿನ ಅಬ್ಬಾಸ್‌ ವರ್ತೇಜಿಗೂ ಇಪ್ಪತ್ತಾರನೇ ನಂಬರಿನ ದಾವೂದ್‌ ಭಾಯಿಗೂ ಮುಖ ತೋರಿಸುತ್ತಲೇ ಇರಲಿಲ್ಲ. ಕ್ರಮ ಸಂಖ್ಯೆ ತಪ್ಪಿಸಬಾರದೆಂಬ ಕಠಿಣ ನಿಯಮ ಇದ್ದರೂ ಕೂಡ, ಅವಕಾಶ ಸಿಕ್ಕಾಗಲೆಲ್ಲ ಆತ ರಮಣಿಕ್‌ ಲಾಲನ ಬಳಿ ಬಂದು ಗುಸುಗುಸು ಮಾತನಾಡುವುದನ್ನು ಕಾಣಬಹುದಿತ್ತು.

ಜಂಬೂಸರ ದಾಟಿ, ತಾವು ತಲುಪಬೇಕಿದ್ದ ಜಾಗದ ಹೆಸರು ಅನಗತ್ಯವಾದ ಉದ್ವೇಗದೊಂದಿಗೆ ಹಿಂದಿನ ರಾತ್ರಿಯೇ ಲೀಲಾಧರ ತನ್ನ ಡೈರಿಯಲ್ಲಿ ಬರೆದ:

ಅಮೋದ್.

ಹೀಗೆ ಹನ್ನೊಂದು ಹಗಲುಗಳನ್ನು ನಡೆದು ಸವೆಸಿದ ನಂತರ, ಇಪ್ಪತ್ತನಾಲ್ಕು ದಿನಗಳಷ್ಟು ದೀರ್ಘವಾದ ಯಾತ್ರೆಯ ಸರಿ ಮಧ್ಯದಲ್ಲಿ, ಡೈರಿಯ ಆ ದಿನದ ಪುಟದಲ್ಲಿ, ಬಾಪುವಿನ ಎಂಬತ್ತು ಸಹಯಾತ್ರಿಕರಲ್ಲಿ ತನಗೆ ಮಾತ್ರ ಅನುಭವಿಸಲು ಮತ್ತು ಬರೆದಿಡಲೆಂದು ಘಟನೆಯೊಂದು ಲೀಲಾಧರನನ್ನು ಹುಡುಕಿ ಬಂದಿತು.

ಅದರ ಮೊದಲೆರಡು ಸಾಲುಗಳು ಹೀಗಿದ್ದವು:

ಅದೊಂದು ಸೋಮವಾರದ ದಿನ; ಬಾಪು ಮೌನವೃತ ಕೈಗೊಳ್ಳುವ ದಿನ.

ಐದು

ಅಂದು ಮಧ್ಯಾಹ್ನ ರೈಲು ಹಳಿ ದಾಟುವಾಗ ಬಾಪುವಿನ ಬಲಗಾಲಿನ ಹೆಬ್ಬೆರಳಿಗೆ ಗಾಯವಾಗಿತ್ತು. ಮೌನವೃತದ ದಿನವಾಗಿದ್ದರಿಂದ ಯಾರಿಗೂ ಅದರ ಕುರಿತು ಗಾಯದ ಒಡೆಯನ ಬಳಿ ಕೇಳಿ ತಿಳಿದುಕೊಳ್ಳಲು ದಾರಿಯಿರಲಿಲ್ಲ. ದೊಡ್ಡದೊಂದು ಹತ್ತಿ ಫ್ಯಾಕ್ಟರಿಗೆ ಹೊಂದಿಕೊಂಡಂತಿದ್ದ ಮೈದಾನದಲ್ಲಿ ಆ ದಿನದ ಸಂಜೆಯ ಸಮ್ಮೇಳನ ಆಯೋಜಿಸಲಾಗಿತ್ತು. ಫ್ಯಾಕ್ಟರಿ ಧಣಿಯ ಕೋಣೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಬಾಪುವನ್ನು ಒಮ್ಮೆ ಹೋಗಿ ನೋಡಬೇಕೆಂಬ ಹಂಬಲ ಲೀಲಾಧರ ಒಳಗೆ ಇದ್ದಕ್ಕಿದ್ದಂತೆ ಉದಿಸಿತು. ಮಧ್ಯಾಹ್ನದ ಊಟದ ಪಾತ್ರೆಯಲ್ಲಿ ಬಾಕಿ ಉಳಿದದ್ದನ್ನು ಎಂದಿನಂತೆ ಎತ್ತಿನಗಾಡಿಯಲ್ಲಿದ್ದ ಗಿಳಿಮರಿಗೆ ಉಣಿಸಿದ ನಂತರ ಅಕಾರಣವಾಗಿ ಬಾಪುವಿನ ಗಾಯ ನೆನಪಿಗೆ ಬಂತು.

ಹತ್ತಿ ತುಂಬಿಸಿಟ್ಟಿದ್ದ ಗೋಣಿಚೀಲಗಳನ್ನು ಸಾಲಾಗಿ ಅಟ್ಟಿಯಿಟ್ಟಿದ್ದ ಓಣಿಯಲ್ಲಿ ಲೀಲಾಧರ ಒಬ್ಬಂಟಿಯಾಗಿ ನಡೆದ. ಮರದ ಹಲಗೆಯ ಮೇಲೆ ಬರೆದಿದ್ದ ಫ್ಯಾಕ್ಟರಿಯ ಹೆಸರಿನ ಕೆಳಗೆ ಮತ್ತೆ ಅದನ್ನು ಓದಿದ: ಅಮೋದ್.

ಆಫೀಸ್‌ ಎಂದು ಬರೆದಿದ್ದ ಬಾಗಿಲಿನ ಬಲಬದಿಯಲ್ಲಿದ್ದ ಒಂದು ಕಟ್ಟು ಒಣಗಿದ ಬೇರಿನಿಂದ ಪಸರಿಸುತ್ತಿದ್ದ ಅಪರಿಚಿತವೂ ಚೇತೋಹಾರಿಯೂ ಆದ ಸುಗಂಧ ಮೂಗಿನಲ್ಲಿ ಸುಖಕರವಾದ ಅನುಭವ ಸೃಷ್ಟಿಸುತ್ತಿರುವುದನ್ನು ಗಮನಿಸುತ್ತಲೇ ಆತ ಒಳಗಡಿಯಿಟ್ಟ. ಉದ್ದಗಿನ ಬಿಳಿ ಗಡ್ಡ ಮತ್ತು ತಲೆಯ ಮೇಲೊಂದು ಟೋಪಿ ಧರಿಸಿದ್ದ ಒಬ್ಬ ಮುದುಕ, ಮಂಚದಲ್ಲಿದ್ದ ಬಾಪುವಿನ ಕಾಲ ಕೆಳಗೆ ಸುಖಾಸನ ಹಾಕಿ ಕೂತಿದ್ದಾರೆ. ದಾರಿ ಬಹಳವೇ ಸವೆಸಿ ಬಂದಿದ್ದರಿಂದಲೋ ಅಥವಾ ತನ್ನ ಆರಾಧ್ಯ ವ್ಯಕ್ತಿಯನ್ನು ಅಷ್ಟು ಹತ್ತಿರದಿಂದ ಕಂಡ ಸಂಭ್ರಮದಿಂದಲೋ ಆ ನಾಟಿ ವೈದ್ಯನ ಬಟ್ಟೆಯೆಲ್ಲ ಬೆವರಿನಿಂದ ಒದ್ದೆಯಾಗಿತ್ತು. ಹತ್ತಿ ಫ್ಯಾಕ್ಟರಿಯ ಧಣಿಯಂತೆ ಕಾಣಿಸುತ್ತಿದ್ದ ವ್ಯಕ್ತಿಯೊಬ್ಬ ಪಕ್ಕದ ಕುರ್ಚಿಯ ಮೇಲೆ ಅರೆಕುಂಡೆಯಲ್ಲಿ ಕೂತಿದ್ದ.

“ಸುಬುಹಾನಲ್ಲಾಹ್!”‌ ತೆಳುಹಸಿರು ತಿಮಿರ ವೃತ್ತಗಳಿಂದ ಬಂಧಿತವಾಗಿದ್ದ ಕಣ್ಣಗುಡ್ಡೆಗಳನ್ನು ಒಮ್ಮೆ ಒಳ ಬಂದ ಬಾಲಕನ ಕಡೆಗೆ ತಿರುಗಿಸಿ, ಮುದುಕ ಸ್ವಗತವೆಂಬಂತೆ ಹೇಳಿದ: “ತಮ್ಮ ಈ ಗಾಯವನ್ನು ಗುಣಪಡಿಸಲಗದಿದ್ದರೆ, ನಾವು ಈ ಮಹಾನ್‌ ದೇಶದಲ್ಲಿ ಬದುಕಿ ಏನುಪಯೋಗ?”

ಅರಬ್ಬೀ ಕತೆಗಳಿಂದ ಇಳಿದು ಬಂದಂತೆ ಕಾಣಿಸುತ್ತಿದ್ದ ಆ ಮುದುಕನನ್ನು ಲೀಲಾಧರ ಇಡಿಯಾಗಿ ತನ್ನ ಮನಸ್ಸಿನೊಳಗೆ ಇಳಿಸಿಕೊಳ್ಳತೊಡಗಿದ. ಆತ ಬಾಪುವಿನ ಬಲಗಾಲನ್ನು ತನ್ನ ತೊಡೆಯ ಮೇಲಿಟ್ಟು ಅದರ ಸಣ್ಣ ಗಾಯವನ್ನು ಸೂಕ್ಷ್ಮವಾಗಿ ಪರೀಕ್ಷಿಸುತ್ತಿದ್ದಾನೆ. ಕಿಟಕಿ ಗಾಜಿನ ಮೂಲಕ ಹಾದು ಬಂದ ಸಂಜೆಯ ಬಿಸಿಲು ಮುದುಕನ ಗಡ್ಡ ಮತ್ತು ಬಾಪುವಿನ ಪಾದದ ಮೇಲೆ ಈ ಲೋಕದ್ದಲ್ಲದ ಬೆಳಕೆಂಬಂತೆ ಬಿದ್ದುಕೊಂಡಿತ್ತು.

ಎರೆಹುಳದಂತೆ ನರಗಳು ಎದ್ದಿದ್ದ ಮುದುಕನ ಹಣೆಯಲ್ಲಿ ಹನಿಯೊಡೆದ ಬೆವರು, ಆತನ ನೆರೆತ ಹುಬ್ಬುಗಳನ್ನೂ, ಬಿಳುಚಿದ ರೆಪ್ಪೆಗಳಿದ್ದ ಕಣ್ಣುಗಳನ್ನೂ ಬದಿಗೆ ಸರಿಸಿ, ಮುಖದಂಚಿನ ರೋಮಗಳ ಮೂಲಕ ಹರಿದು, ಉದ್ದನೆ ಗಡ್ಡದ ತುತ್ತತುದಿಯಲ್ಲಿ ಹನಿಗೂಡಿ ಅದರಲ್ಲಿ ಸೂರ್ಯ ಪ್ರತಿಫಲಿಸುತ್ತಿರುವುದನ್ನು ಲೀಲಾಧರ ಕಂಡ. ಒಂದು ನಿಮಿಷ ಗಡ್ಡದ ತುದಿಯಲ್ಲಿ ನಿಂತ ಆ ಬೆವರ ಹರಳು, ಬಾಪುವಿನ ಹೆಬ್ಬೆರಳ ಗಾಯದ ಮೇಲೆ ಒಂಟಿ ಹನಿಯಾಗಿ ಬಿದ್ದಿತು.

ಮಹಾತ್ಮನ ತುಟಿಗಳು ನೋವಿನಿಂದ ಓ ಎಂದು ಅರಳಿದವು; ಮರುಕ್ಷಣವೇ ತನ್ನ ಮೌನವೃತ ನೆನಪಾಗಿ ಅದು ಅನುಸ್ವಾರದಲ್ಲಿ ಮುಗಿಯಿತು. ಗಾಯದ ನೆತ್ತರಿನೊಂದಿಗೆ ಬೆರೆತ ಆ ಅಜ್ಞಾತ ವೈದ್ಯನ ಬೆವರಿನ ಉಪ್ಪನ್ನು, ಅದರ ನೋವನ್ನು, ಬಾಪು ಒಂದಕ್ಷರವಾಗಿಸಿದ್ದನ್ನು ಆ ತುಟಿಗಳಿಂದ ತರ್ಜುಮೆ ಮಾಡಿ ಲೀಲಾಧರ ಓದಿದ: “ಓಂ”

ಆರು

ಏಪ್ರಿಲ್‌ ಆರು.

ದಂಡಿ ಕಡಲತೀರ ಆ ದಿನ ಸೂರ್ಯನಿಗಿಂತ ಮೊದಲೇ ಎಚ್ಚರಗೊಂಡಿತ್ತು.

ಉಪ್ಪುಗೋರುವ ಮೊದಲು ಬಾಪು ಕಡಲಲ್ಲಿ ಸ್ನಾನಕ್ಕೆ ಇಳಿಯುತ್ತಾರೆಂದೂ ದೇಹ ಪೂರ್ತಿ ಮುಳುಗುವಂತಹ ಜಾಗ ಹುಡುಕುವಾಗ ಈಜು ಬರುವ ಇಬ್ಬರು ಯುವಕರು ಜೊತೆಗಿರಬೇಕೆಂದೂ ಹಿಂದಿನ ರಾತ್ರಿ ಮಲಗುವ ಮೊದಲು ಪಂಡಿತ್‌ ಖರೇ ಆಜ್ಞೆ ಹೊರಡಿಸಿದ್ದರು. ಕೈಯೆತ್ತಿದವರಿಂದ ಇಬ್ಬರನ್ನು ಖರೇ ಆಯ್ದುಕೊಂಡರು – ಹದಿನಾರರ ಲೀಲಾಧರ ಮತ್ತು ಹದಿನೆಂಟರ ಹರಖ್‌ ಜೀ. ಆದರೆ, ಮರುದಿನ ಮುಂಜಾನೆ ಕಡಲಸ್ನಾನಕ್ಕೆ ಇಳಿಯುವ ಮೊದಲು ಬಾಪೂ ಮೂರನೇಯ ಇನ್ನೊಬ್ಬನನ್ನೂ ಸೇರಿಸಿಕೊಂಡರು. ಅಬ್ಬಾಸ್‌ ವರ್ತೇಜಿ ಎಂಬ ಇಪ್ಪತ್ತರ ಯುವಕನನ್ನು ಕೈ ತೋರಿಸಿ ಕರೆದು ಖರೇಯೊಂದಿಗೆ ಹೇಳಿದರು: “ಮಕ್ಕಳೊಟ್ಟಿಗೆ ಒಬ್ಬ ಯುವಕ ಕೂಡ ಇರಲಿ.”

ಯಾತ್ರೆಯ ಆರಂಭದಲ್ಲಿ ಸಬರಮತಿಯಲ್ಲಿದ್ದ ಜನರಿಗಿಂತಲೂ ಅದೆಷ್ಟೋ ಪಟ್ಟು ಜನರು ದಂಡಿಯ ಕತ್ತಲ ಮರಳು ರಾಶಿಯಲ್ಲಿ ಅರ್ಧರಾತ್ರಿಯಿಂದಲೇ ಜಮಾಯಿಸತೊಡಗಿದ್ದರು. ದಡದ ಮರಳನ್ನೂ ಅದರಲ್ಲಿ ಮೆತ್ತಿರುವ ಉಪ್ಪನ್ನೂ ಜೊತೆಗೇ ಇರುವ ಬ್ರಿಟಿಷ್ ಪೋಲೀಸರ ಖಾಕಿಯನ್ನೂ ಸತ್ಯಾಗ್ರಹ ಅನುಯಾಯಿಗಳ ಬಿಳಿ ಖಾದಿಯನ್ನೂ ಸರಿಸುತ್ತಾ ದಾರಿ ಮಾಡಿಕೊಳ್ಳುತ್ತಾ ಅಬ್ಬಾಸನನ್ನು ಎಡಗೈಯಲ್ಲೂ ಲೀಲಾಧರನನ್ನು ಬಲಗೈಯಲ್ಲೂ ಹಿಡಿದುಕೊಂಡು ಬೆಳಗಾಗುತ್ತಿರುವ ಕತ್ತಲಲ್ಲಿ ಅಲೆಗಳ ಜೊತೆ ಸ್ನಾನಕ್ಕೆಂದು ಮಹಾತ್ಮ ನಡೆದರು. ಬಾಪುವಿನ ಲೋಟ ಮತ್ತು ಸ್ನಾನದ ನಂತರ ಬದಲಾಯಿಸಲು ಬೇಕಾದ ಬಟ್ಟೆಯನ್ನು ಹಿಡಿದುಕೊಂಡು ಹರಖ್ ಜೀ ಹಿಂದೆ ನಡೆದ. “ಭೂಮಿಗೆ ಬಂದು ಬೀಳುವ ಬಿಸಿಲಿನ ಜೊತೆಗೆ ಸೂರ್ಯನ ಬೆಂಕಿಯೂ ಇರುವ ಹಾಗೆ ಕಡಲ ನೀರಿನಲ್ಲಿರುವ ಉಪ್ಪು!” ನಡೆದು ಬಾತಿದ್ದ ತನ್ನ ಕಾಲುಗಳನ್ನು ಉಪ್ಪು ನೀರು ಉರಿಸುತ್ತಿದೆಯೆಂದು ಅರಿತ ಬಾಪು ಮಕ್ಕಳ ಜೊತೆ ಹೇಳಿದರು. ಆ ಮಾತನ್ನು ತನ್ನ ನೋಟ್ ಪುಸ್ತಕದಲ್ಲಿ ಬರೆದಿಡಲೆಂದು ಲೀಲಾಧರ ಮೂರು ಸಲ ಮನಸ್ಸಲ್ಲಿ ಪುನರಾವರ್ತಿಸಿದ. ನೋವು ತುಂಬಿದ ಪಾದಗಳಲ್ಲಿ ಮೂಡಿದ್ದ ಕಣ್ಣುಗಳೊಂದಿಗೆ ಮುಂದಕ್ಕೆ ನಡೆಯುವಾಗ ಕಡಲು ಮತ್ತು ಆಗಸದ ನಡುವಿನ ಗಡಿರೇಖೆ ಸೊಂಟ ಪಟ್ಟಿಯಂತೆ ಮೂಡುತ್ತಿರುವುದನ್ನು ಆತ ಗಮನಿಸಿದ. ಆಗ ಬಾಪು ಪುನಃ ಹೇಳಿದರು, ಈಗ ಸ್ವತಃ ತನ್ನೊಂದಿಗೇ ಸ್ವಗತವೆಂಬಂತೆ, “ಸೂರ್ಯ ಮುಳುಗದ ಸಾಮ್ರಾಜ್ಯದ ವಿರುದ್ಧ ಹೋರಾಡಲು ಉಪ್ಪನ್ನು ಯಾಕೆ ಆಯುಧವಾಗಿಸುತ್ತಿದ್ದೀರಿ ಎಂದು ಎಲ್ಲರೂ ಕೇಳುತ್ತಿದ್ದಾರೆ.”

“ನಾವೂ ಕೇಳಿಸಿಕೊಂಡೆವು ಬಾಪು.” ಅಬ್ಬಾಸ್ ಹೇಳಿದ.

“ನಮಗೂ ಅದೇ ಸಂಶಯ ಇತ್ತು.” ಲೀಲಾಧರ್ ಮಾತು ಸೇರಿಸಿದ. ಹಿಂದಿನಿಂದ ಹರಖ್ ಜೀ ಕಿವಿ ನಿಮಿರಿಸಿದ.

ಕಡಲಿನಷ್ಟು ಆಳವಾದ ಮೌನವೊಂದು ತಮ್ಮನ್ನು ಆವರಿಸಿಕೊಳ್ಳುತ್ತಿರುವುದು ಹುಡುಗರ ಅರಿವಿಗೆ ಬಂತು. ಅದನ್ನು ಮುರಿಯುತ್ತಾ ಮಂತ್ರಜಪದಂತೆ ಮಹಾತ್ಮನ ಮಾತುಗಳು ಹೊರಟವು, “ಜೀವೋ ಜೀವಸ್ಯ ಜೀವಾನಿ ಅಂತ ಒಂದು ಮಾತಿದೆ. ಜೀವ ಇರುವ ಪ್ರತಿಯೊಂದು ಕೂಡ ಇನ್ನೊಂದು ಜೀವವನ್ನು ಆಹಾರವಾಗಿಸಿ ಬದುಕುತ್ತದೆ ಎಂದು ಅದರ ಅರ್ಥ. ಸಸ್ಯಾಹಾರಿಗಳೂ ಮಾಂಸಾಹಾರಿಗಳೂ ಈ ವಿಷಯದಲ್ಲಿ ಸಮಾನರು. ಎರಡು ಬಗೆಯವರೂ ತಿನ್ನುವುದು ಇನ್ನೊಂದು ಜೀವವನ್ನು ಅಥವಾ ಇನ್ನೊಂದು ಜೀವದಿಂದ ತೆಗೆದ ಪದಾರ್ಥವನ್ನು. ಹುಲ್ಲು ತಿನ್ನುವ ಹಸುಗಳೂ ಕೂಡ ಅಗಿಯುವುದು ಇನ್ನೊಂದು ಜೀವವನ್ನೇ ಅಲ್ಲವೇ?”

“ನಿಜ ತಾನೇ!” ಅಬ್ಬಾಸನ ಆಶ್ಚರ್ಯ ಕತ್ತಲಲ್ಲಿ ಮಿಂಚಿತು. ಜೊತೆಗೆ ಲೀಲಾಧರ ಮತ್ತು ಹರಖ್‌ ಜೀ ಮನುಷ್ಯರು ತಿನ್ನುವ ಅಚೇತನ ವಸ್ತುಗಳನ್ನು ನೆನಪಿಸಿಕೊಂಡರು: ಕೊತ್ತಂಬರಿ, ಶುಂಠಿ, ಮೆಣಸು, ಮೊಸರು, ಮದ್ಯ, ಅನ್ನ, ಸಕ್ಕರೆ… ಎಲ್ಲವೂ ಸಸ್ಯ ಅಥವಾ ಪ್ರಾಣಿ ಮೂಲದಿಂದಲೇ ಬರುವಂತವು.

“ಆದರೆ, ಹಾಗಲ್ಲದ ಒಂದೇ ಒಂದು ಆಹಾರ ಪದಾರ್ಥ ಭೂಮಿಯ ಮೇಲಿದೆ.” ಬಾಪು ಗುರುವಿನ ಸ್ವರದಲ್ಲಿ ಹೇಳಿದರು, “ಈಗ ಊಹಿಸಲು ಕಷ್ಟ ಇಲ್ಲ ತಾನೇ?”

ಬಿಸಿಲಲ್ಲಿ ಬೆಂಕಿ ಎಂಬಂತೆ, ಮಕ್ಕಳ ಒಳಗೆ ಆ ಮಾತಿನ ಬೆಳಕು ಪ್ರವಹಿಸಿತು. “ಉಪ್ಪು!” ಮೂವರೂ ಒಂದೇ ದನಿಯಲ್ಲಿ ಹೇಳಿದರು.

ಮೊಣಕಾಲು ಮಡಚಿ ಕುಳಿತರೆ ತನ್ನ ಬಡಕಲು ದೇಹ ಪೂರ್ತಿಯಾಗಿ ಮುಳುಗುವಂತಹ ಜಾಗ ಸಿಕ್ಕಾಗ ಬಾಪು ನಿಂತರು. ಮಕ್ಕಳಿಂದ ಕೈಗಳನ್ನು ಬಿಡಿಸಿಕೊಳ್ಳುತ್ತಾ ಹೇಳಿದರು, “ಹೌದು, ಜೀವದಿಂದಲ್ಲದೆ ಸಿಗುವ ಒಂದೇ ಒಂದು ಆಹಾರ ವಸ್ತು, ಅದನ್ನು ನಿತ್ಯವೂ ಆಹಾರದಲ್ಲಿ ಬಳಸುವ ಒಂದೇ ಒಂದು ಜೀವಿ ಮಾತ್ರ ಭೂಮಿ ಮೇಲಿರುವುದು – ಮನುಷ್ಯರು. ಅದಿಲ್ಲದಿದ್ದರೆ ಅವನಿಗೆ ಜೀವವೂ ಇಲ್ಲ ಜೀವನವೂ ಇಲ್ಲ. ಆಗ ನಾನು ಹೇಳಿದ ಆ ಸಂಸ್ಕೃತ ಶ್ಲೋಕವನ್ನು ಮನುಷ್ಯ ಹೀಗೆ ಸುಳ್ಳಾಗಿಸಿದ. ಪ್ರಾಣಿಯಿಂದ ಮನುಷ್ಯನನ್ನು ಬೇರ್ಪಡಿಸಿ ಮೇಲೆತ್ತಿರುವುದು ಇದೊಂದೇ ಅಜೈವಿಕ ವಸ್ತು, ಏಕಾಂಗಿಯಾಗಿ.”

ಮುಳುಗುವ ಮೊದಲು ಬಾಪು ತಿರುಗಿ ನಿಂತು ಕೈಯೆತ್ತಿ ನಮಸ್ಕಾರ ಮಾಡಿದ್ದು ತನ್ನನ್ನು ನೋಡಿ ಎಂದು ಭಾವಿಸಿದ ಹರಖ್‌ ಜೀ ಗೊಂದಲಗೊಂಡ. ಅವನ ತಲೆಗೂ ಮೇಲೆ ಪೂರ್ವ ದಂಡಿಯ ಮರಳ ರಾಶಿಗೂ ಮೇಲೆ ಉದಿಸಲಿರುವ ಸೂರ್ಯನಿಗೆ ನಮಸ್ಕರಿಸುತ್ತಾ, ಮಾನವನ ಬದುಕಿನಾಳದಿಂದ ಸತ್ಯವನ್ನು ಹರಳುಗಟ್ಟಿಸಿ ಹೊರತೆಗೆಯುವವನಂತೆ ಮಹಾತ್ಮ ಈ ಮಾತನ್ನೂ ಸೇರಿಸಿದರು, “ಸ್ವಾತಂತ್ರ್ಯ ಹೋರಾಟಕ್ಕೆ ನಾವು ಉಪ್ಪನ್ನು ಜೋಡಿಸುವಾಗ ಅದಕ್ಕೆ ನಾವು ಅನುಲ್ಲಂಘನೀಯವಾದ ಮನುಷ್ಯತ್ವವನ್ನೂ ಸೇರಿಸುತ್ತಿದ್ದೇವೆ!”

ಕಡಲ ನೀರಿನ ಬಿಳುಚಿದ ಕತ್ತಲಲ್ಲಿ ಬಾಪು ಮುಳುಗಿ ಅಲೆಗಳೆದ್ದ ಜಾಗದಲ್ಲಿ ಸೂರ್ಯನ ಮೊದಲ ಕಿರಣಗಳು ಬಿದ್ದವು. ಅಲ್ಲಿ ಮನುಷ್ಯತ್ವ ಎಂಬ ಪದ ಬಿಳಿ ಪಾರಿವಾಳದಂತೆ ರೆಕ್ಕೆ ಬಡಿಯುವುದನ್ನು ಬದುಕು ಹಿಂದೂ ಮುಸ್ಲಿಂ ದಲಿತನೆಂದು ವೇಷ ತೊಡಿಸಿದ್ದ ಮೂರು ಜೀವಗಳು ಕಣ್ಣಲ್ಲಿ ತುಂಬಿಕೊಂಡರು.


ಏಳು

ಯಾತ್ರೆಯ ಕೊನೆಯ ರಾತ್ರಿ, ಇಪ್ಪತ್ತನಾಲ್ಕು ದಿನಗಳ ನಂತರ, ಲೀಲಾಧರ ವಿಠಲ ತನ್ನಪ್ಪನನ್ನು ಪುನಃ ಕನಸು ಕಂಡ. ಅಂದು ಹಗಲು ನಡೆದ ಉಪ್ಪು ಸಂಗ್ರಹಿಸುವ ಹೋರಾಟದ ಕುರಿತು ಬಾಯಾರಿದ ಗಂಟಲಲ್ಲಿ ಅಪ್ಪನಿಗೆ ವಿವರಿಸುತ್ತಿದ್ದ. ಬಾಪೂಜಿ ಬೊಗಸೆಯಲ್ಲಿ ಉಪ್ಪು ಹಿಡಿದು ಎದ್ದು ನಿಂತ ಕ್ಷಣ ಸರೋಜಿನಿ ನಾಯ್ಡು “ನಿಯಮ ಭಂಜಕನಿಗೆ ಜಯವಾಗಲಿ” ಎಂದು ಜೋರಾಗಿ ಘೋಷಣೆ ಕೂಗಿದ ಘಟನೆ ವಿವರಿಸುವಾಗ ಆ ಕನಸಲ್ಲೂ ಅವನ ಹೃದಯ ಕೊರಳಿಗೆ ಬಂದಿತ್ತು.ಕಡಲ ನೀರಿನಲ್ಲಿ ಅಪ್ಪನೊಂದಿಗೆ ಸ್ನಾನಕ್ಕೆ ಇಳಿಯುವುದಾಗಿಯೂ, ಮುಳುಗಲು ತಕ್ಕಷ್ಟು ನೀರಿರುವ ಕಡೆ ಅಪ್ಪ ತನ್ನನ್ನು ತಂದು ನಿಲ್ಲಿಸಿದ ಹಾಗೆಯೂ ಕನಸು ಕಂಡ. ಅಪ್ಪ ಈಗಲೂ ತನ್ನನ್ನು ಪುಟ್ಟ ಮಗುವೆಂದೇ ಭಾವಿಸಿರುವುದನ್ನು ತಿಳಿದು ಸಂಕೋಚಗೊಂಡ. ತನ್ನ ತೋಳಲ್ಲಿರುವ ಚೀಲ ಒದ್ದೆಯಾಗದಂತೆ ಅದನ್ನು ಮೇಲಕ್ಕೆ ಎತ್ತಿ ಹಿಡಿದುಕೊಂಡು ಅವನು ಕನಸಿನ
ಕಡಲಲ್ಲಿ ನಡೆದಾಡಿದ.

ಮೊದಲ ಸಲ ಮುಳುಗೇಳುವಾಗ ಅಪ್ಪ ಬಾಪುವಾಗಿ ರೂಪಾಂತರಗೊಂಡಿರುವುದನ್ನು ಗಮನಿಸಿದ ಲೀಲಾಧರ ಆಶ್ಚರ್ಯಗೊಂಡ. ಕಡಲಿನಿಂದ ಮರಳುವಾಗ ದಡದಲ್ಲಿ ಗುಡ್ಡೆಯಂತೆ ಕಂಡ ಉಪ್ಪಿನ ಸ್ತೂಪಗಳನ್ನು ತೋರಿಸುತ್ತಾ ಬಾಪು ಹೇಳಿದರು, “ನೋಡಿ, ಸಹಸ್ರಸ್ತನಿಯಾದ ಕಡಲು ತಾಯಿಯ ಮೊಲೆಹಾಲಿನಪುಡಿ.”

ಬಾಪುವಿನೊಂದಿಗೆ ಮತ್ತೊಮ್ಮೆ ಸಬರಮತಿ ಆಶ್ರಮದ ಉದ್ದನೆಯ ವರಾಂಡದಲ್ಲಿ ತಾನು ಕುಳಿತಿರುವುದು ಕಂಡಾಗ ಇಂಡಿಯಾ ಸ್ವತಂತ್ರಗೊಂಡಿತೆಂದು ಆನಂದದಿಂದ ನಿದ್ದೆಯಲ್ಲಿ ಜೋರಾಗಿ ನಕ್ಕ. ಪಾದಯಾತ್ರೆಯಲ್ಲಿ ವಿಶ್ರಮಿಸುವಾಗ ಕಾಲುಗಳು ಇನ್ನೂ ನಡೆಯುತ್ತಿರವಂತೆ ಅನಿಸುತ್ತಿದ್ದಾಗಿನ ಅನುಭವಕ್ಕಿಂತ ದೊಡ್ಡದಾದ ಅನುಭವ ಈಗ ಆಗುತ್ತಿತ್ತು. ತಾನು ಕಾಲಕ್ಕಿಂತ ಮುಂದೆ ನಡೆದು ಬಂದಿದ್ದೇನೆಂದು ಭಾವಿಸಿದ – ಅದೆಷ್ಟೋ ದಶಕಗಳ ಆಚೆಗೆ. ಬಾಲ್ಯದಲ್ಲಿ ಅಪ್ಪ ಮಾಡುತ್ತಿದ್ದ ಹಾಗೆ ಈಗ ಬಾಪು ಆತನ ನೋಟ್‌ ಪುಸ್ತಕ ನೋಡುತ್ತಾ ಅದರಲ್ಲಿ ಅಕ್ಷರ ತಪ್ಪುಗಳನ್ನು ಕೆಂಪು ಶಾಯಿಯ ಪೆನ್ನಿನಿಂದ ಗುರುತು ಮಾಡುತ್ತಿದ್ದರು. ದಾಟಿ ಬಂದ ದಾರಿಗಳಿಂದಲೂ ಹಾದು ಬಂದ ನದಿಗಳಿಂದಲೂ ಹೆಕ್ಕಿ ತಂದ ನುಣುಪು ಕಲ್ಲುಗಳ ಹಾಗೆ ಹೆಕ್ಕಿ ಬರೆದ ವಾಕ್ಯಗಳು ಆ ದಿನಚರಿ ಪುಸ್ತಕದಲ್ಲಿ ಪೂರ್ತಿ ತುಂಬಿದ್ದವು. ದಂಡಿ ತಲುಪಲು ತಾವು ಹಾದ ನದಿಗಳ ವಿವರಗಳೇ ಅದರಲ್ಲಿ ಹೆಚ್ಚಿನವು. ದಕ್ಷಿಣಕ್ಕೆ ಹೊರಟ ಯಾತ್ರೆಯಲ್ಲಿ ಪಾದಯಾತ್ರಿಕರು ಅಡ್ಡಲಾಗಿ ದಾಟಿದ ಪ್ರವಾಹಗಳು: ಮಹಿಸಾಗರ, ನರ್ಮದ, ಕಿಂ, ತಪತಿ… ಕನಕಪುರ ಕಳೆದು ರಾತ್ರಿ ಮಹಿಸಾಗರ ನದಿಗೆ ಇಳಿದು ಅದನ್ನು ದಾಟುವಾಗ ಫಾಲ್ಗುಣದ ಪೂರ್ಣಚಂದಿರನನ್ನು ಕಂಡು ಬರೆದಿದ್ದ ವಿವರವನ್ನು ಬಾಪು ಜೋರಾಗಿಯೇ ಓದಿದರು.

ಮೂರು ನಗರಗಳನ್ನು ದಾಟಿ ಅಮೋದ್‌ ಎಂಬ ಗ್ರಾಮದ ಹತ್ತಿ ಫ್ಯಾಕ್ಟರಿಯ ಆಫೀಸಲ್ಲಿ ಮಹಾತ್ಮನ ಗಾಯಕ್ಕೆ ಔಷಧ ಹಚ್ಚುತ್ತಿದ್ದ ವೃದ್ಧ ವೈದ್ಯನ ವಿವರಗಳನ್ನು ಬಾಪು ಓದಲು ಶುರು ಮಾಡಿದಾಗ ಆತನ ಹೃದಯ ಮಿಡಿತ ಅಸಾಧಾರಣವಾಗಿ ಏರಿತು. ಆಶ್ರಮದ ಅಂಗಳದಲ್ಲಿ ಗಡ್ಡಧಾರಿ ಮುದುಕರೂ ಅವರ ಹೆಂಗಸರೂ ಗುಂಪಾಗಿ ಕೂತಿರುವುದಾಗಿಯೂ ಬಾಪುವಿನ ಮಡಿಲಲ್ಲಿ ಈಗಲೂ ಗಾಯ ಆರದ ತನ್ನ ಗಿಳಿಮರಿ ಇರುವುದಾಗಿಯೂ ಕಂಡ. ಬಾಪು ಅದರ ಬೆನ್ನು ನೇವರಿಸುತ್ತಿದ್ದರು. ಅಂಗಳದಲ್ಲಿದ್ದ ಮನುಷ್ಯರು ತಮ್ಮ ಪಾದಯಾತ್ರೆ ಆರಂಭವಾಗುವಾಗ ಅಳುತ್ತಿದ್ದಂತೆ ಅಳುವುದನ್ನು ಕಂಡು ಆತ ಎದ್ದು ನಿಲ್ಲಲು ಯತ್ನಿಸಿದ. ಆಗ ಬಾಪು ಹೊದ್ದುಕೊಂಡಿದ್ದ ಬಟ್ಟೆಯ ಎದೆಭಾಗದಲ್ಲಿ ಬಿಸಿ ನೆತ್ತರು ಹರಡಲು ಶುರುವಾಯಿತು. ಅಲ್ಲಿ ತನ್ನ ಅಂಗೈಯಿಟ್ಟು ಖಿನ್ನನಾದ ಬಾಪು ಹೇಳಿದರು: “ಇನ್ನು ನನಗೆ ಮುಂದಕ್ಕೆ ನಡೆಯಲಾಗದೆ ಕಂದಾ, ನನ್ನ ಯಾತ್ರೆಗೆ ಅವರು ಪೂರ್ಣ ವಿರಾಮ ಹಾಕಿದರು!”

ಬಿಳಿಯ ಬಟ್ಟೆಯ ಮೇಲೆ ಯಾವುದೋ ಅಜ್ಞಾತ ದೇಶವೊಂದರ ಭೂಪಟ ಎದೆಭಾಗದಲ್ಲೆಂಬಂತೆ ಮೂಡಿ ಬಂದಿತು. ಆತ ಅದನ್ನು ಗಮನಿಸುತ್ತಿರುವಂತೆ ಕಾಣಲಿಲ್ಲ. ತನ್ನ ಪಾದಯಾತ್ರೆಯ ದಿನಚರಿ ಪುಸ್ತಕದಲ್ಲಿ ಅಮೋದ್‌ ಎಂಬ ಗ್ರಾಮದಲ್ಲಿ ನಡೆದ ಘಟನೆಯ ವಿವರಗಳನ್ನು ಓದಲು ತೊಡಗಿದರು. ನಡುವೆ ಮುಸ್ಲಿಂ ವೃದ್ಧ ಎಂಬ ಪದ ಕಂಡು ಅದಕ್ಕೆ ಅಡಿಗೆರೆ ಹಾಕಿ ಬಾಪು ಅವನ ಬಳಿ ಕೇಳಿದರು, “ಆತನಿಗೊಂದು ಹೆಸರಿರಲಿಲ್ಲವೇ?”

ಜನರನ್ನು ಜಾತಿ ಹೆಸರಿನಿಂದಲೂ ಮತದ ಹೆಸರಿನಿಂದಲೂ ಗುರುತಿಸುವುದೋ ಕರೆಯುವುದೋ ಕೂಡದೆಂಬ ಆಶ್ರಮದ ನಿಯಮವನ್ನು ತಾನು ತನ್ನ ದಿನಚರಿ ಪುಸ್ತಕದಲ್ಲಿ ಮೀರಿದ್ದು ನೆನೆದು ಲೀಲಾಧರನ ಅಪ್ರಾಪ್ತ ಹೃದಯ ಭಯದಿಂದ ಕಂಪಿಸಿತು.

ಭಯ ಹುಟ್ಟಿಸುವ ಪದಗಳ ಮುಂದೆ ಅಕಾರ ಸೇರಿಸಿ ಅಹಿಂಸೆ, ಅಸ್ತೇಯ, ಅಪರಿಗ್ರಹ ಮೊದಲಾದ ಅಭಯ ಪದಗಳನ್ನು ಸೃಷ್ಟಿಸಿದ ಮಹಾತ್ಮ, ಕಾಲಕ್ಕೆ ಮುಟ್ಟಲಾಗದ ದೃಢನಿಶ್ಚಯದಲ್ಲಿ ಮಿನುಗುವ ಬೆರಳುಗಳಿಂದ, ಅಮೋದಿನಲ್ಲಿ ತನ್ನ ಗಾಯ ವಾಸಿ ಮಾಡಿದ ಮನುಷ್ಯನನ್ನು ಬಣ್ಣಿಸಲು ಸಾರ್ವಕಾಲಿಕವಾದ ಆ ಪದ ಬರೆಯುವುದನ್ನು ವಿಠಲ ಲೀಲಾಧರ ಥಾಕ್ಕರ್ ಕನಸಿನಲ್ಲಿ ಸ್ಪಷ್ಟವಾಗಿ ಕಂಡ:

ಅಮೋದಿ.

ಟಿಪ್ಪಣಿ: ಈ ಕತೆಯ ಪಾತ್ರಗಳು ಮಹಾತ್ಮ ಗಾಂಧಿಯ ನೇತೃತ್ವದಲ್ಲಿ 1930 ಮಾರ್ಚ್‌ 12 ರಂದು ಸಬರಮತಿ ಆಶ್ರಮದಿಂದ ಹೊರಟು ಇಪ್ಪತ್ತೈದನೇ ದಿನ ದಂಡೀ ಕಡಲ ತಡಿಯಲ್ಲಿ ಕೊನೆಗೊಂಡ ಪ್ರಸಿದ್ದವಾದ ಉಪ್ಪು ಸತ್ಯಾಗ್ರಹದಲ್ಲಿ ಭಾಗವಹಿಸಿದ ವ್ಯಕ್ತಿಗಳಾಗಿದ್ದಾರೆ. ಹೆಸರು, ಪ್ರಾಯ, ಗಾಂಧೀಜಿ ಅವರಿಗೆ ನೀಡಿದ್ದ ಕ್ರಮಸಂಖ್ಯೆಗಳು, ಅವರು ದಾಟಿದ ಊರಿನ ಹೆಸರುಗಳು ಇತಿಹಾಸದ
ಪುಸ್ತಕಗಳಿಂದ ಹೆಕ್ಕಿದವು. ಅನುಭವಗಳು ಮತ್ತು ಅನುಭೂತಿಗಳು ಕತೆಗಾರನ ಕಲ್ಪನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT