ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯುಗಾದಿ: ಕಾಲಚಕ್ರದ ಋತುಗಾನ

Last Updated 6 ಏಪ್ರಿಲ್ 2019, 11:16 IST
ಅಕ್ಷರ ಗಾತ್ರ

ಕಾಲವನ್ನು ಗೆಲ್ಲಬೇಕು. ಇದೇ ಬುದ್ಧಿವಂತನಾದ ಮನುಷ್ಯನ ನಿರಂತರ ಪ್ರಯತ್ನ. ಅವನ ಎಲ್ಲ ಚಟುವಟಿಕೆಗಳ ಹಿನ್ನೆಲೆಯಲ್ಲೂ ಅವನ ಈ ಮಹದಾಸೆಯೇ ಕಾಣಿಸುತ್ತಿರುತ್ತದೆ. ಇಷ್ಟಕ್ಕೂ ಕಾಲವನ್ನು ಗೆಲ್ಲುವುದಕ್ಕೆ ಸಾಧ್ಯವೆ?

ಸಾಧ್ಯ ಎನ್ನುತ್ತದೆ ನಮ್ಮ ಸಂಸ್ಕೃತಿ. ಹೇಗೆ ಸಾಧ್ಯ? ನಾವು ಕಾಲದ ಜೊತೆಗೆ ಒಂದಾಗಬೇಕು, ಅದರೊಂದಿಗೆ ನಿರಂತರ ಪಯಣಿಸುತ್ತಲೇ ಇರಬೇಕು. ಇದೇ ಕಾಲವನ್ನು ಗೆಲ್ಲುವ ಪರಿ ಎಂಬ ರಹಸ್ಯವನ್ನು ದಕ್ಕಿಸಿಕೊಂಡ ಪರಂಪರೆ, ಈ ಸೂಕ್ಷ್ಮವನ್ನು ಹಲವು ವಿಧಿ–ವಿಧಾನಗಳು ಮೂಲಕ ಮುಂದಿನ ಪೀಳಿಗೆಗೆ ರವಾನಿಸುತ್ತಲೇ ಬಂದಿದೆ. ನಮ್ಮ ಸಂಸ್ಕೃತಿಯ ಬಹುಪಾಲು ಹಬ್ಬಗಳು ಸಂಕೇತಿಸುವುದು ಕಾಲವನ್ನು ಗೆಲ್ಲುವ ಬಗೆಯನ್ನೇ. ಅದರಲ್ಲೂ ಯುಗಾದಿಹಬ್ಬವಂತೂ ಈ ಸಂಕೇತವನ್ನು ಘಂಟಾಘೋಷವಾಗಿ ಸಾರುತ್ತಿದೆ.

ಕಾಲ ಪ್ರತಿ ಕ್ಷಣವೂ ಈ ಜಗತ್ತನ್ನು ತಿನ್ನುತ್ತಲೇ ಇರುತ್ತದೆಯಂತೆ. ಜಗತ್ತನ್ನು ತಿನ್ನುವುದು ಎಂದರೆ ಅದನ್ನು ಇಲ್ಲವಾಗಿಸುವುದು ಎಂದರ್ಥ ತಾನೆ? ಕಾಲ ಹೀಗೆ ಜಗತ್ತನ್ನು ತಿನ್ನುವುದಾದರೂ ಏಕೆ? ಜಗತ್ತನ್ನು ಸೃಷ್ಟಿಸುವುದಕ್ಕಾಗಿಯೇ! ನಮಗೆ ಕೆಲಸ ಮಾಡಲು ಶಕ್ತಿ ಬೇಕು; ಶಕ್ತಿಗಾಗಿ ಅನ್ನ ಬೇಕಷ್ಟೆ. ಹೀಗೆಯೇ ಕಾಲದ ಕೆಲಸವೇ ಜಗತ್ತು. ಅದಕ್ಕೂ ಜಗತ್ತನ್ನು ಸೃಷ್ಟಿಸಲು ಶಕ್ತಿ ಬೇಕು, ಅನ್ನ ಬೇಕು. ಎಂದರೆ ಕಾಲದ ಕಾರ್ಯವೂ ಕಾರಣವೂ ಎರಡೂ ಕೂಡ ಜಗತ್ತೇ; ಕಾಲದ ‘ಇನ್‌ ಪುಟ್‌’ ಮತ್ತು ‘ಔಟ್‌ ಪುಟ್‌’ – ಎರಡೂ ಜಗತ್ತೇ. ಈ ಜಗತ್ತಿನಲ್ಲಿ ನಾವೂ ಇದ್ದೇವೆ – ನಾವು, ನೀವು ಕೂಡ ಜಗತ್ತೇ ಅಲ್ಲವೇ? ನಮಗೂ ಹುಟ್ಟಿದೆ, ಸಾವಿದೆ, ಮತ್ತೆ ಹುಟ್ಟಿದೆ – ಹೀಗೆ ಇದು ಚಕ್ರವಾಗಿ ಮುಂದುವರೆಯುತ್ತಲೇ ಇರುತ್ತದೆ. ಸಾವಿಗೆ ತುತ್ತಾದವರನ್ನು ‘ಕಾಲವಾದರು’ ಎಂದು ಹೇಳುವುದರ ಸ್ವಾರಸ್ಯವನ್ನು ಇಲ್ಲಿ ಮೆಲುಕು ಹಾಕಬಹುದು. ಸಾವಿನ ಒಡೆಯನಾದ ಯಮನಿಗಿರುವ ಹಲವು ಹೆಸರುಗಳಲ್ಲಿ ‘ಕಾಲ’ ಎನ್ನುವುದು ಕೂಡ ಒಂದು. ‘ತೊಟ್ಟಿಲುಗಳೆಷ್ಟು ಮಸಣಗಳಷ್ಟು ಧರೆಯೊಳಗೆ ತೊಟ್ಟಿಲಿಗೆ ಹಬ್ಬ ಮಸಣವು ತೇಗುತಿರಲು’ ಎನ್ನುವ ಕಗ್ಗದ ಮಾತು ಕಾಲದ ವೈಭವವನ್ನು ಸೊಗಸಾಗಿ ಧ್ವನಿಸುತ್ತಿದೆ.

ಕಾಲದ ಸೃಷ್ಟಿಕ್ರಿಯೆಯೂ ಸಂಹಾರಕ್ರಿಯೆಯೂ ಏಕಕಾಲದಲ್ಲಿ ನಡೆಯುತ್ತಿರುತ್ತದೆ. ಆದರೆ ಅದನ್ನು ನಮ್ಮ ಕಣ್ಣುಗಳು ಸುಲಭವಾಗಿ ಕಾಣಲಾರವು; ಬುದ್ಧಿಯು ಸುಲಭವಾಗಿ ಗ್ರಹಿಸುವುದಿಲ್ಲ. ಒಂದು ವೇಳೆ ನಮ್ಮ ಭಾವ–ಬುದ್ಧಿಗಳು ಈ ಸೃಷ್ಟಿ–ಸಂಹಾರಕ್ರಿಯೆಯ ಏಕಾವತಾರವನ್ನು ಗ್ರಹಿಸುವುದಕ್ಕೆ ಸಾಧ್ಯವಾದರೆ ಅದು ನಮ್ಮ ಪಾಲಿಗೆ ಹಬ್ಬವಲ್ಲದೆ ಮತ್ತೇನು? ಕಾಲವೇ ನಮ್ಮ ಬಗ್ಗೆ ಕರುಣೆ ತೋರಿ ಅಂಥ ಕೆಲವು ಸಂದರ್ಭಗಳನ್ನು ನಮಗಾಗಿ ಒದಗಿಸಿದೆ ಕೂಡ. ಹಗಲು–ರಾತ್ರಿ, ಋತುಗಳು, ಹುಟ್ಟ–ಸಾವು – ಇವೆಲ್ಲವೂ ಕಾಲಚಕ್ರದ ಕಾಣ್ಕೆಗಳೇ ಹೌದು. ಆದರೆ ಇವಾವುವೂ ನಿಲುಗಡೆಗಳಲ್ಲ, ನಿರಂತರ ಚಲನಶೀಲ ಕ್ರಿಯೆಗಳು ಎನ್ನುವುದನ್ನು ನಾವು ಮರೆಯಬಾರದು. ಈ ಅರಿವು ತುಂಬ ಮುಖ್ಯ. ಏಕೆಂದರೆ ಕತ್ತಲೆಯೇ ಶಾಶ್ವತವಾಗಿಬಿಟ್ಟರೆ ಆಗ ಮನಸ್ಸಿಗೆ ಕವಿಯುವ ಆಘಾತ, ದುಃಖಗಳೂ ಶಾಶ್ವತವೇ ಆಗುತ್ತವೆ. ಹೀಗಲ್ಲದೆ ಕತ್ತಲೆಯೂ ಒಂದು ಘಟ್ಟ, ಅದಾದ ಬಳಿಕ ಬೆಳಕು ಕೂಡ ಬರುತ್ತದೆ ಎನ್ನುವ ವಿಶ್ವಾಸವೇ ನಮ್ಮ ಜೀವನವನ್ನು ಸಹ್ಯವಾಗಿಸುವುದು. ಮಾತ್ರವಲ್ಲ, ಈ ಬೆಳಕು ಆದ ಮೇಲೆ ಮತ್ತೆ ಕತ್ತಲು, ಆಮೇಲೆ ಬೆಳಕು – ಹೀಗೆ ಸುತ್ತುತ್ತಲೇ ಇರುತ್ತದೆ ಎಂಬ ಅರಿವು ನಮ್ಮ ಜೀವನವನ್ನು ಸಹ್ಯವಷ್ಟೇ ಅಲ್ಲ, ಸುಂದರವನ್ನಾಗಿಸುತ್ತದೆ, ಸುಲಭವನ್ನಾಗಿಸುತ್ತದೆ, ಹಬ್ಬವನ್ನಾಗಿಸುತ್ತದೆ. ಇಂಥದೊಂದು ಅಪೂರ್ವ ಸಂದೇಶವನ್ನು ಗರ್ಭೀಕರಿಸಿಕೊಂಡಿರುವ ಹಬ್ಬವೇ ಯುಗಾದಿ.

ಹಗಲು–ರಾತ್ರಿಗಳ ಬದಲಾವಣೆಯನ್ನು ನಾವು ಸುಲಭವಾಗಿ ಗ್ರಹಿಸುತ್ತೇವೆ; ಅಂತೆಯೇ ಪ್ರಕೃತಿಯಲ್ಲಿ ನಡೆಯುವ ಇಂಥ ಕಾಲಪಲ್ಲಟಗಳ ಚಕ್ರವೇ ಋತುಗಳಲ್ಲಾಗುವ ವ್ಯತ್ಯಾಸ. (ನಾವು ಭಾರತೀಯರು ಅದೃಷ್ಟವಂತರು; ಆರು ಋತುಗಳು ಕೂಡ ನಮ್ಮ ಅನುಭವಕ್ಕೆ ಬರುತ್ತವೆ.) ಇಂಥ ಕಾಲಚಕ್ರದ ವಿರಾಟ್‌ ಚಲನವೇ ನಮ್ಮ ಯುಗಗಳ ಕಲ್ಪನೆಯಲ್ಲಿ ಕಾಣುವಂಥದ್ದು. ಕೃತಯುಗ, ತ್ರೇತಾಯುಗ, ದ್ವಾಪರಯುಗ ಮತ್ತು ಕಲಿಯುಗ; ಈ ನಾಲ್ಕು ಯುಗಗಳಲ್ಲಿ ಒಂದೊಂದು ಯುಗದ ಆಯುಷ್ಯ ಕೂಡ ಹತ್ತಾರು ಸಾವಿರ ವರ್ಷಗಳು; ಹೀಗೆಂದು ಇವು ಕೂಡ ಶಾಶ್ವತವಲ್ಲ; ನಾಲ್ಕು ಯುಗಗಳು ಕೂಡ ಸುತ್ತುತ್ತಲೇ ಇರುತ್ತವೆ; ಈ ಸುತ್ತಾಟವೇ ಮನ್ವಂತರಗಳು; ಈ ಮನ್ವಂತರಗಳೂ ಸುತ್ತಾಟ. ಎಂದರೆ ಬದಲಾವಣೆಯೊಂದೇ ಕಾಲಧರ್ಮ – ಎನ್ನುವ ಸಿದ್ಧಾಂತವನ್ನು ಕಾಲವೇ ಪ್ರಕಟಿಸುತ್ತಿರುತ್ತದೆ. ಹೀಗೆ ಪ್ರತಿಯೊಂದು ಸುತ್ತಾಟದಲ್ಲಿಯೇ ಇರುತ್ತದೆ ಎಂದರೆ ಸೃಷ್ಟಿಯ ವಿವರಗಳೆಲ್ಲವೂ ಸಾಪೇಕ್ಷವಾದಂಥವೇ ಹೌದು ಎಂದಾಯಿತು. ಈ ಸಾಪೇಕ್ಷವಾದುದರ ಮಧ್ಯೆ ಶಾಶ್ವತವಾದುದನ್ನು ದಕ್ಕಿಸಿಕೊಂಡರೆ ಆಗ ನಾವು ಕಾಲವನ್ನು ಗೆದ್ದಂತೆ ಆಗುತ್ತದೆಯಲ್ಲವೆ? ಹಾಗಾದರೆ ಹೀಗೆ ಶಾಶ್ವತವಾಗಿರುವುದು ಯಾವುದಾದರೂ ಇದೆಯೇ? ಇದೆ; ಅದೇ ಕಾಲ! ಕಾಲದ ಪ್ರತಿ ಹೆಜ್ಜೆಯಲ್ಲೂ ಸೃಷ್ಟಿ–ಲಯಗಳ ಸಂಗಮವೇ ಇರುವುದರಿಂದ, ಕಾಲದ ಯಾವ ಕ್ಷಣವೂ ಕೂಡ ಆರಂಭವೂ ಆಗಬಲ್ಲದು; ಮಾತ್ರವಲ್ಲ, ಈ ಆರಂಭವೇ ಶಾಶ್ವತವೂ ಹೌದು. ಏಕೆಂದರೆ ಕಾಲಚಕ್ರದ ಸುತ್ತಾಟವಂತೂ ನಿರಂತರ ಪ್ರಕ್ರಿಯೆ ಹೌದಷ್ಟೆ! ಎಂದರೆ ನಮ್ಮ ನಿತ್ಯಜೀವನದ ಯಾವ ಕ್ಷಣವೂ ಕೂಡ ‘ಯುಗದ ಆದಿ’ ಆಗಬಹುದು. ಈ ಮಹಾತತ್ತ್ವವನ್ನು ಹಬ್ಬವಾಗಿ ಕಂಡು ನಲಿಯುವ ದಿನವೇ ಯುಗಾದಿ.

ನಾವು ಉಸಿರಾಡುವ ಪ್ರತಿಯೊಂದು ಕ್ಷಣವೂ ಯುಗಾದಿಯೇ ಸರಿ. ಅದರೆ ನಮಗೆ ಅದರ ಎಚ್ಚರಿಕೆ ಇರುವುದಿಲ್ಲ. ಇದನ್ನು ನೆನಪಿಸುವ ಪರ್ವದಿನವೇ ಯುಗಾದಿ. ಯುಗದ ಆರಂಭದ ಬಗ್ಗೆ ಯಾಕಿಷ್ಟು ಸಂತೋಷ? ನಮಗೆ ಈ ಅನುಭವ ಸಹಜವೇ ಆಗಿದೆ. ಆದಿ ಎಂದರೆ ಅಲ್ಲಿ ಬೆಳವಣಿಗೆಗೆ ಅವಕಾಶ ಇರುತ್ತದೆ; ಆ ಬೆಳವಣಿಗೆಯಲ್ಲಿ ಶಕ್ತಿಯೂ ಕೂಡಿಕೊಳ್ಳುತ್ತದೆ. ಶಕ್ತಿಯು ಚಟುವಟಿಕೆಯನ್ನು ಪ್ರಚೋದಿಸುತ್ತದೆ; ಲವಲವಿಕೆಯಿಂದಲೇ ಸಂತೋಷ ಪಡುವ ಮನಸ್ಸು ಕೂಡ ಸಿದ್ಧವಾಗುತ್ತದೆ. ಹಾಗಾಗಿ ನಾವು ಯಾವುದನ್ನು ಕೊನೆಯ ಬಿಂದು ಎಂದುಕೊಳ್ಳುತ್ತವೆಯೋ ಅದು ವಾಸ್ತವವಾಗಿ ಆರಂಭದ ಬಿಂದುವೂ ಆಗಿರುತ್ತದೆ ಎಂಬ ವಿವೇಕವನ್ನು ಉಪದೇಶಿಸುವ ಹಬ್ಬವೇ ಯುಗಾದಿ ಎನಿಸಿಕೊಂಡಿದೆ. ‘Look at the Darkness, giving birth to the Sun' (ಕತ್ತಲೆಯನ್ನು ನೋಡು, ಬೆಳಕಿಗೆ ಜನ್ಮ ನೀಡುತ್ತಿದೆ) ಎಂದಿದ್ದಾನೆ ಖಲೀಲ್‌ ಗಿಬ್ರಾನ್‌. ಯುಗದ ಅಂತ್ಯ ಎನ್ನುವುದು ಕೂಡ ಯುಗಾರಂಭದ ಪೂರ್ವಸಿದ್ಧತೆಯೇ ಅಲ್ಲವೆ? ಇದನ್ನು ಋತುಗಳ ಬದಲಾವಣೆಯೂ ನಮಗೆ ಕಣ್ಣಿಗೆ ಕಟ್ಟುವಂತೆ ದರ್ಶನಮಾಡಿಸುತ್ತಿದೆ. ಮರಗಳ ಎಲೆಗಳೆಲ್ಲ ಉದುರಿ, ಇನ್ನೇನು ಅದು ಕಾಲಕ್ಕೆ ವಶವಾಯಿತು ಎನ್ನುವಷ್ಟರಲ್ಲಿ ಮತ್ತೆ ಅದೇ ಮರದಲ್ಲಿ ಹಸಿರು ಕಾಣಿಸಿಕೊಳ್ಳುತ್ತದೆ. ಹೀಗೆ ಪ್ರಕೃತಿಯು ಮತ್ತೆ ಜೀವ ಪಡೆದು, ನಳನಳಿಸುವ ಸಂಧಿಕಾಲವನ್ನೇ ಯುಗಾದಿಯ ಆಚರಣೆಗೆ ಆರಿಸಿಕೊಂಡದ್ದು ಕೇವಲ ಆಕಸ್ಮಿಕವಲ್ಲವಷ್ಟೆ.

ಭರ್ತೃಹರಿಯ ‘ವೈರಾಗ್ಯಶತಕ’ದಲ್ಲಿಯ ಪದ್ಯವೊಂದು ಕಾಲಮಹಿಮೆಯನ್ನು ಹೀಗೆ ವರ್ಣಿಸಿದೆ:

ಆದಿತ್ಯಸ್ಯ ಗತಾಗತೈರಹರಹಃ ಸಂಕ್ಷೀಯತೇ ಜೀವಿತಂ

ವ್ಯಾಪಾರೈರ್ಬಹುಕಾರ್ಯಭಾರಗುರುಭಿಃ ಕಾಲೋ‌ಪಿ ನ ಜ್ಞಾಯತೇ

ದೃಷ್ಟ್ವಾ ಜನ್ಮಜರಾವಿಪತ್ತಿಮರಣಂ ತ್ರಾಸಶ್ಚ ನೋತ್ಪದ್ಯತೇ

ಪೀತ್ವಾ ಮೋಹಮಯೀಂ ಪ್ರಮಾದಮದಿರಾಮ್ ಉನ್ಮತ್ತಭೂತಂ ಜಗತ್‌

ಇದರ ತಾತ್ಪರ್ಯ: ‘ಸೂರ್ಯನ ಉದಯಾಸ್ತಗಳಿಂದ ಕಾಲ ಕಳೆದು, ದಿನದಿನವೂ ಆಯುಸ್ಸು ಕ್ಷೀಣವಾಗುವುದು; ದೇಹ, ಆಸ್ತಿ–ಅಂತಸ್ತುಗಳನ್ನು ನೋಡಿಕೊಳ್ಳುತ್ತ ಹಲವು ರೀತಿಯ ಕಾರ್ಯಗಳನ್ನು ಮಾಡುತ್ತ ಕಾಲ ಕಳೆದುಹೋಗುತ್ತಿರುವುದೇ ತಿಳಿಯುವುದಿಲ್ಲ. ಹುಟ್ಟು–ಮುಪ್ಪು–ಸಾವುಗಳನ್ನು ಅಡಿಗಡಿಗೂ ನೋಡುತ್ತಿದ್ದರೂ ಭಯ ಹುಟ್ಟುವುದಿಲ್ಲ. ಏಕೆಂದರೆ ಮೋಹಮಯವಾದ ಅಜಾಗರೂಕತೆಯೆಂಬ ಮದ್ಯವನ್ನು ಕುಡಿದು, ಈ ಲೋಕದ ಜನರು ಉನ್ಮತ್ತರಂತಾಗಿದ್ದಾರೆ.’

ನಾವು ಯಾವುದನ್ನು ಹುಟ್ಟು ಎಂದುಕೊಳ್ಳುತ್ತಿದ್ದೇವೆಯೋ ಅದರಲ್ಲಿ ಸಾವು ಇದೆ; ನಾವು ಯಾವುದನ್ನು ಸಾವು ಎಂದುಕೊಳ್ಳುತ್ತಿದ್ದೇವೆಯೋ ಅದರಲ್ಲಿ ಹುಟ್ಟು ಇದೆ. ಹುಟ್ಟು–ಸಾವುಗಳ, ಎಂದರೆ ಕಾಲದ ಈ ಮರ್ಮ ತಿಳಿಯದಿದ್ದರೆ ನಾವು ಪ್ರತಿ ಕ್ಷಣವೂ ಏನನ್ನು ಪಡೆಯುತ್ತಿದ್ದೇವೆ ಮತ್ತು ಏನನ್ನು ಕಳೆದುಕೊಳ್ಳುತ್ತಿದ್ದೇವೆ ಎಂಬುದರ ಅರಿವೇ ನಮಗಾಗದು. ಯುಗಾದಿಯ ಪರ್ವದಿನ ನಮಗೆ ಅಂಥದೊಂದು ಅರಿವನ್ನು ಹೊತ್ತುತರುತ್ತಿರುವ ಕಾಲದ ಸಂದೇಶವಾಗಿದೆ. ಕಾಲದಲ್ಲಿ ಮರೆಯಾಗುವ ನಮ್ಮ ಜೀವನವನ್ನು ಕಾಲದಲ್ಲಿ ಹೇಗೆ ನೆಲೆಯಾಗಿಸಬೇಕೆಂಬ ಸಂಕಲ್ಪದಲ್ಲಿಯೇ ಕಾಲವನ್ನು ಗೆಲ್ಲುವ ಗುಟ್ಟು ಕೂಡ ಅಡಗಿದೆ ಎಂಬುದನ್ನು ಬೇಸಿಗೆಯಲ್ಲೂ ಚಿಗುರಿದ ಎಲೆಗಳ ತಂಪುಗಾಳಿ ಸೂಚಿಸುವಂತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT