ಮಂಗಳವಾರ, ನವೆಂಬರ್ 19, 2019
26 °C

ಎಂಎಫ್‌ ಹೂಡಿಕೆ ಹೆಚ್ಚಲು ‘ಆಧಾರ್‌’

Published:
Updated:
Prajavani

ಆಧಾರ್‌ ಸಂಖ್ಯೆಯ ಮೂಲಕ ಗ್ರಾಹಕರ ಮಾಹಿತಿ ಪಡೆಯುವ (ಇ–ಕೆವೈಸಿ) ವ್ಯವಸ್ಥೆಯನ್ನು ಜಾರಿಗೆ ತಂದಿರುವುದರಿಂದ ಸಣ್ಣ ಪಟ್ಟಣಗಳಿಂದ ವ್ಯವಸ್ಥಿತ ಹೂಡಿಕೆ ಯೋಜನೆ (ಸಿಪ್‌) ಮೂಲಕ ಮ್ಯೂಚುವಲ್‌ ಫಂಡ್‌ ಕ್ಷೇತ್ರಕ್ಕೆ  ಹರಿದು ಬರುವ ಹೂಡಿಕೆಯ ಪ್ರಮಾಣವು ಗಮನಾರ್ಹವಾಗಿ ಹೆಚ್ಚಿದೆ.

2016–17ರಲ್ಲಿ ₹ 7,479 ಕೋಟಿ ಇದ್ದ ಹೂಡಿಕೆಯ ಪ್ರಮಾಣವು ಡಿಜಿಟಲ್‌ ವ್ಯವಸ್ಥೆ ಜಾರಿಗೆ ಬಂದ ಬಳಿಕ, 2019ರ ಮಾರ್ಚ್‌ ಅಂತ್ಯಕ್ಕೆ ₹ 2,73,580 ಕೋಟಿಗೆ ಹೆಚ್ಚಳವಾಗಿರುವುದು ಇದಕ್ಕೆ ನಿದರ್ಶನವಾಗಿದೆ. ಈ ಪ್ರಮಾಣವು ಇನ್ನಷ್ಟು ಹೆಚ್ಚಳವಾಗಿ, ಮುಂದಿನ ಒಂದು ದಶಕದಲ್ಲಿ ಮ್ಯೂಚುವಲ್‌ ಫಂಡ್‌ ಉದ್ದಿಮೆಯು ನಿರ್ವಹಿಸುವ ಸಂಪತ್ತಿನ ಒಟ್ಟಾರೆ ಮೊತ್ತವು (ಎಯುಎಂ) ₹ 100 ಲಕ್ಷ ಕೋಟಿ   ಗಡಿ ದಾಟುವ ನಿರೀಕ್ಷೆ ಇದೆ.

‘ದೇಶದೊಳಗೆ ಹೆಚ್ಚುತ್ತಿರುವ ಸ್ಮಾರ್ಟ್‌ಫೋನ್‌ ಹಾಗೂ ಇಂಟರ್‌ನೆಟ್‌ ಬಳಕೆಯ ಪ್ರಮಾಣ ಹಾಗೂ ‘ಆಧಾರ್‌’ ಸಂಖ್ಯೆಯು ಕೆವೈಸಿಗೆ ಬಳಕೆಯಾಗುತ್ತಿರುವ ಪ್ರಮಾಣ ಗಮನಿಸಿದರೆ, ಮುಂದಿನ ದಿನಗಳಲ್ಲಿ ಮ್ಯೂಚುವಲ್‌ ಫಂಡ್‌ ಕ್ಷೇತ್ರಕ್ಕೆ ದೊಡ್ಡ ಪ್ರಮಾಣದಲ್ಲಿ ಹೂಡಿಕೆದಾರರನ್ನು ಕರೆತರಲು ನಮಗೆ ಸಾಧ್ಯವಾಗಲಿದೆ. ವೈಯಕ್ತಿಕವಾಗಿ ಬಂದು ಹೂಡಿಕೆ ಮಾಡುವವರ ಸಂಖ್ಯೆ ನಿಧಾನಕ್ಕೆ ಕಡಿಮೆಯಾಗಿ, ಇಡೀ ವ್ಯವಹಾರವು ಡಿಜಿಟಲ್‌ ರೂಪದಲ್ಲಿ ನಡೆಯುವ ಸಾಧ್ಯತೆ ಗೋಚರಿಸುತ್ತಿದೆ. ದೊಡ್ಡ ಮತ್ತು ಸಣ್ಣ ನಗರಗಳಿಂದ ಸಮಾನ ರೀತಿಯಲ್ಲಿ ಈ ಕ್ಷೇತ್ರಕ್ಕೆ ಹಣ ಹರಿದುಬರಲಿದೆ’ ಎಂದು ಭಾರತೀಯ ಮ್ಯೂಚುವಲ್‌ ಫಂಡ್‌ಗಳ ಸಂಘದ (ಎಎಂಎಫ್‌ಐ) ಮುಖ್ಯ ಕಾರ್ಯನಿರ್ವಾಹಕ ಎನ್‌.ಎಸ್‌. ವೆಂಕಟೇಶ್‌ ಹೇಳುತ್ತಾರೆ.

‘ಆರ್ಥಿಕ ಸೇರ್ಪಡೆಯ ಮೂಲಕ ಗ್ರಾಮೀಣ ಜನರಲ್ಲೂ ಆರ್ಥಿಕ ಜಾಗೃತಿಯನ್ನು ಮೂಡಿಸುವ ಮೂಲಕ ಸರ್ಕಾರವು ಡಿಜಿಟಲೀಕರಣಕ್ಕೆ ಬಹುದೊಡ್ಡ ಕಾಣಿಕೆ ನೀಡಿದೆ. ‘ಇ–ಕೆವೈಸಿ’ಗೆ ಆಧಾರ್‌ ಅನ್ನು ಬಳಸುವ ಸರ್ಕಾರದ ಪ್ರಸ್ತಾವವು ಡಿಜಿಟಲ್‌ ವ್ಯವಹಾರವನ್ನು ಇನ್ನಷ್ಟು ಸರಳಗೊಳಿಸಿದೆ’ ಎಂದು ವೆಂಕಟೇಶ್‌ ಹೇಳುತ್ತಾರೆ.

ಮಧ್ಯವರ್ತಿಗಳ ಮೂಲಕ ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡುವವರ ಮೇಲೂ ಇಂಟರ್‌ನೆಟ್‌ ಭಾರಿ ಪ್ರಮಾಣದಲ್ಲಿ ಪರಿಣಾಮ ಬೀರಲು ಆರಂಭಿಸಿದೆ. ವಿಶೇಷವಾಗಿ, ಯಾವ ಫಂಡ್‌ ಆಯ್ಕೆ ಮಾಡಬೇಕು ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಲು ಹೆಚ್ಚಿನವರು ಸ್ಮಾರ್ಟ್‌ಫೋನ್‌, ಇಂಟರ್‌ನೆಟ್‌ ಬಳಕೆ ಮಾಡುತ್ತಾರೆ ಎಂದು ಎಎಂಎಫ್‌ಐ–ಬಿಸಿಜಿ ಸಿದ್ಧಪಡಿಸಿರುವ ಮುನ್ನೋಟ ವರದಿಯು ಹೇಳುತ್ತದೆ.

‘ಮ್ಯೂಚುವಲ್‌ ಫಂಡ್‌ ಸಂಸ್ಥೆಗಳು ಡಿಜಿಟಲ್‌ ವ್ಯವಸ್ಥೆಯ ಸದ್ಬಳಕೆ ಮಾಡಿಕೊಂಡು, ಮೂರು ಮತ್ತು ನಾಲ್ಕನೇ ಹಂತದ ಪಟ್ಟಣಗಳಲ್ಲಿ ಬಲಿಷ್ಠವಾದ ವಿತರಣಾ ಜಾಲ ಸ್ಥಾಪಿಸಿ ಒಳ್ಳೆಯ ಪಾಲುದಾರರ ಮೂಲಕ ತಮ್ಮ ಅಸ್ತಿತ್ವ ಸಾಬೀತುಪಡಿಸಿ ವಹಿವಾಟು ವಿಸ್ತರಿಸಿಕೊಳ್ಳುವುದು ಅಗತ್ಯ’ ಎಂದೂ ವರದಿಯಲ್ಲಿ ಹೇಳಲಾಗಿದೆ.

ಆನ್‌ಲೈನ್‌ ಮೂಲಕ ಯಾವುದೇ ಉತ್ಪನ್ನವನ್ನು ಖರೀದಿಸುವ ಪ್ರಮಾಣವು ಕಳೆದ ಮೂರು ವರ್ಷಗಳಲ್ಲಿ ಏಳು ಪಟ್ಟು ಏರಿಕೆಯಾಗಿದೆ. ಮ್ಯೂಚುವಲ್‌ ಫಂಡ್ಸ್‌ ವಹಿವಾಟಿನಲ್ಲೂ ಡಿಜಿಟಲ್‌ ಹೂಡಿಕೆಯ ಪ್ರಮಾಣ ಏರಿಕೆಯಾಗಿದೆ. ಪಟ್ಟಣ ಪ್ರದೇಶದ ಒಟ್ಟಾರೆ ಹೂಡಿಕೆದಾರರಲ್ಲಿ ಶೇ 60ರಷ್ಟು ಮಂದಿ ಡಿಜಿಟಲ್‌ ಮಾಧ್ಯಮದ ಸಹಾಯದಿಂದ ಉತ್ಪನ್ನಗಳ ಬಗ್ಗೆ ಮಾಹಿತಿ ಪಡೆಯುತ್ತಾರೆ. ಅವರಲ್ಲಿ ಶೇ 30ರಷ್ಟು ಮಂದಿ ಡಿಜಿಟಲ್‌ ಮಾಧ್ಯಮದಲ್ಲೇ ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆಯನ್ನೂ ಮಾಡುತ್ತಾರೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ.

ಹೂಡಿಕೆದಾರರ ಮೇಲೆ ಡಿಜಿಟಲ್‌ ಮಾಧ್ಯಮದ ಪರಿಣಾಮ ಹೆಚ್ಚುತ್ತಿದೆ ಎಂಬುದು ಸತ್ಯವಾಗಿದ್ದರೂ, ಸಣ್ಣ ಮತ್ತು ದೊಡ್ಡ ಪಟ್ಟಣಗಳು ಹಾಗೂ ಮೆಟ್ರೊ ನಗರಗಳ ಚಿಲ್ಲರೆ ಹೂಡಿಕೆದಾರರು ಈಗಲೂ ಸಲಹೆಗಳಿಗಾಗಿ ಮಧ್ಯವರ್ತಿಗಳನ್ನೇ ಅವಲಂಬಿಸುತ್ತಿದ್ದಾರೆ ಎಂದು ಎಎಂಎಫ್‌ಐ ಅಧ್ಯಯನ ವರದಿ ಉಲ್ಲೇಖಿಸಿದೆ.

(ಭಾರತೀಯ ಮ್ಯೂಚುವಲ್‌ ಫಂಡ್‌ಗಳ ಸಂಘದ ಮುನ್ನೋಟ ವರದಿ)

ಪ್ರತಿಕ್ರಿಯಿಸಿ (+)