ಸೂಜು ಮಲ್ಲಿಗೆಯ...‘ಅನನ್ಯ’

7

ಸೂಜು ಮಲ್ಲಿಗೆಯ...‘ಅನನ್ಯ’

Published:
Updated:
Deccan Herald

‘ಸೋಜುಗಾದ ಸೂಜು ಮಲ್ಲಿಗೆ, ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ...’ ಈ ಜನಪದ ಗೀತೆಯನ್ನು ಆಧುನಿಕ ಸಂಗೀತಕ್ಕೆ ಫ್ಯೂಜನ್ ಮಾಡಿದ ಹಾಡೊಂದು ಇತ್ತೀಚೆಗೆ ವ್ಯಾಟ್ಸ್‌ಆಪ್ ಸ್ಟೇಟಸ್‌ನಲ್ಲಿ, ಫೇಸ್‌ಬುಕ್ ಪುಟಗಳಲ್ಲಿ ವೈರಲ್‌ ಆಗಿತ್ತು. ಈ ಹಾಡಿನ ವಿಡಿಯೊ ಬಿಡುಗಡೆಯಾಗಿ ಆರು ವಾರಗಳಲ್ಲಿ 1.32 ಲಕ್ಷ ಮಂದಿ ವೀಕ್ಷಿಸಿದ್ದಾರೆ. ಫೇಸ್‌ಬುಕ್‌ನಲ್ಲಿ ಅದೆಷ್ಟು ಶೇರ್ ಆಗಿದೆಯೋ ಲೆಕ್ಕ ಇಲ್ಲ.

ಇದನ್ನು ಹಾಡಿದವರು ಮೈಸೂರಿನ ಗಾಯಕಿ ಅನನ್ಯ ಭಟ್. ಮನಸ್ಸು ಬಿಚ್ಚಿ ಸರಾಗವಾಗಿ ಹಾಡುವ ಇವರ ಶೈಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇಲ್ಲಿಯವರೆಗೆ ಸುಮಾರು 45 ರಿಂದ 50 ಚಿತ್ರಗೀತೆಗಳನ್ನು ಹಾಡಿರುವ ಅನನ್ಯಾ, ‘ರಾಮ ರಾಮ ರೇ’ ಸಿನಿಮಾದ ‘ನಮ್ಮ ಕಾಯೋ ದೇವನೆ’ ಹಾಡಿಗೆ ಫಿಲ್ಮ್‌ಫೇರ್ ಪ್ರಶಸ್ತಿ ಕೂಡ ಸಿಕ್ಕಿದೆ. ಹೊಸ ಶೈಲಿಯ ಸಂಗೀತ ವಿಡಿಯೂ ಜನಪ್ರಿಯಗೊಂಡ ಹಿನ್ನಲೆಯಲ್ಲಿ ‘ಕಾಮನಬಿಲ್ಲು’ ಅವರನ್ನು ಮಾತನಾಡಿಸಿದಾಗ, ಹೊಸ ಪ್ರಯೋಗ, ಅದರ ಪ್ರಾಮುಖ್ಯ, ಉದ್ದೇಶ.. ಎಲ್ಲದರ ಕುರಿತು ಇಲ್ಲಿ ಹಂಚಿಕೊಂಡಿದ್ದಾರೆ.

ಈ ಪ್ರಯೋಗ ಹುಟ್ಟಿದ್ದು ಹೇಗೆ?

ಅನೀಶ್ ಪೊನ್ನಣ್ಣ ಎಂಬ ಸೌಂಡ್ ಎಂಜಿನಿಯರ್ ಇದ್ದಾರೆ. ಅವರು ಚಿತ್ರಗೀತೆಗಳಲ್ಲದ ಹಾಡುಗಳನ್ನು ಹೊಸ ಗಾಯಕರಿಂದ ಹಾಡಿಸಿ, ವಿಡಿಯೊ ಮಾಡಿ ಯೂಟ್ಯೂಬ್‌ನಲ್ಲಿ ರಿಲೀಸ್‌ ಮಾಡುತ್ತಾರೆ. ಅಂಥದ್ದೊಂದು ಪ್ರಯೋಗಕ್ಕಾಗಿ ಅವರು ನನನ್ನು ಸಂಪರ್ಕಿಸಿದರು. ಹೀಗೆ ಈ ಹೊಸ ಪ್ರಯೋಗದ ಜರ್ನಿ ಶುರುವಾಯಿತು. ಈ ದೃಶ್ಯಗೀತೆಯ ಸರಣಿಯಲ್ಲಿ ನಾನು ಎರಡನೆಯವಳು. ‘ಶಾಲೆ’ ಎನ್ನುವ ಸ್ಟುಡಿಯೋದಲ್ಲಿ ಅನೀಶ್ ನೇತೃತ್ವದಲ್ಲೇ ಲೈವ್ ರೆಕಾರ್ಡ್ ವಿಡಿಯೊ ಸಿದ್ಧವಾಯಿತು.

ಫ್ಯೂಜನ್ ಮಾಡುವುದಕ್ಕೆ ಕಾರಣ?

ನಾನು ಹೆಚ್ಚಾಗಿ ಇಂಥ ಹಾಡು ಹಾಡುವುದಕ್ಕೆ ಇಷ್ಟ. ನನಗೆ ಇಂಥದ್ದೇ ಒಂದು ಬ್ಯಾಂಡ್ (ತಂಡ) ಮಾಡ್ಬೇಕು ಎಂಬ ಆಸೆ. ಬ್ಯಾಂಡ್ ಕಟ್ಟಿದ್ರೆ ಇದೇ ರೀತಿಯ ಫ್ಯೂಜನ್ ಮಾಡಬೇಕು ಅಂತ ಯೋಚಿಸ್ತಾ ಇದ್ದೆ. ಜಾನಪದ ಗೀತೆಗಳನ್ನು ಪಾಶ್ಚಾತ್ಯ ಸಂಗೀತದೊಂದಿಗೆ ಫ್ಯೂಜನ್ ಮಾಡಬೇಕು ಎಂಬುದು ನನ್ನ ಮತ್ತೊಂದು ಬಯಕೆ. ಅವೆಲ್ಲವನ್ನೂ ಈ ವಿಡಿಯೊದಿಂದಲೇ ಪ್ರಯೋಗ ಮಾಡೋಣ ಅಂತ ಹಾಡಿದೆ.

ಈ ಯೋಚನೆ ಏಕೆ ಬಂತು?

ಜಾನಪದ ಹಾಡುಗಳನ್ನು ಹೆಚ್ಚಾಗಿ ಏಕತಾರಿ ಅಥವಾ ತಂಬೂರಿಯ ಜತೆ ಹಾಡ್ತಾರೆ. ಕಂಸಾಳೆ ಅಥವಾ ಗೆಜ್ಜೆ ಕೂಡ ಇರುತ್ತದೆ. ಈ ರೀತಿ ಹಾಡುಗಾರಿಕೆ, ಸಂಗೀತದ ಸೊಗಡು ಇಷ್ಟಪಡುವವರಿಗೆ ಮಾತ್ರ ಈ ಹಾಡು ಇಷ್ಟ ಆಗುತ್ತದೆ. ಹಾಗಾಗಿ, ಇದನ್ನು ಸ್ವಲ್ಪ ಆಧುನಿಕಗೊಳಿಸಿದರೆ, ಯುವಸಮೂಹಕ್ಕೆ ತಲುಪಿಸಬಹುದು. ಅವರಿಗೂ ಜಾನಪದ ಹಾಡುಗಳ ಬಗ್ಗೆ ಪರಿಚಯಿಸಿದಂತಾಗುತ್ತದೆ ಎಂಬ ಉದ್ದೇಶದಿಂದ ಈ ಫ್ಯೂಜನ್ ಯೋಚನೆ ಮಾಡಿದೆ.

ಎದುರಾದ ಸವಾಲುಗಳೇನು ?

ಇದು ಒಂದು ಪ್ರಯೋಗ ಅಷ್ಟೆ. ಎಲ್ಲವೂ ಸರಿ ಇದೆ ಅನ್ನೋ ಭಾವನೆ ಇಲ್ಲ. ಇದು ಸ್ವಲ್ಪ ನಿಧಾನಗತಿಯ ಹಾಡು. ನಾನು ಇನ್ನೂ ಸ್ವಲ್ಪ ಮಾಧುರ್ಯ ಕೊಟ್ಟು ಹಾಡಿದೆ ಅಷ್ಟೇ. ಮಾದೇವನ ಮೇಲೆ ಹಾಡೋ ಭಕ್ತಿ ಗೀತೆ ಇದು. ಜಾನಪದದಲ್ಲಿ ಇದೇ ರಾಗ, ಇದೇ ತಾಳದಲ್ಲಿ ಹಾಡಬೇಕು ಅನ್ನೋ ಕಟ್ಟುನಿಟ್ಟು ಇಲ್ಲ. ಹಾಡು ತುಂಬಾ ಸಿಂಪಲ್ ಆಗಿರಬೇಕು ಎನ್ನುವುದು ನನ್ನ ಭಾವನೆ. ಹಾಗಾಗಿ ಎರಡು ವಾದ್ಯ ಬಳಸಿಕೊಂಡಿದ್ದೇನೆ. ನಾವು ಗುನುಗೋ ಹಾಡು ಯಾವಾಗಲೂ ಸಿಂಪಲ್ ಆಗಿ, ಮೆಲೋಡಿಯಸ್ ಆಗಿ ಇರುತ್ತೆ. ಇದೇ ದೃಷ್ಟಿಯಿಂದನೇ ಈ ಪ್ರಯೋಗ ಮಾಡಿದ್ದು.

ಫ್ಯೂಜನ್‌ಗಳು ಏಕೆ ಮುಖ್ಯ ಎನ್ನಿಸುತ್ತದೆ?

ಜಾನಪದ, ದಾಸರಪದದಂತಹ ಗೀತೆಗಳು ತುಂಬಾ ಸೆಲೆಕ್ಟಿವ್ ಜಾಗಗಳಲ್ಲಿ ಮಾತ್ರ ಕೇಳೋಕೆ ಸಿಗುತ್ತವೆ. ನಾವು ಇಂಥ ಪ್ರಯೋಗ ಮಾಡುವುದರಿಂದ, ಇವುಗಳನ್ನು ಜನಪ್ರಿಯಗೊಳಿಸಿ, ಮುಂದಿನ ಪೀಳಿಗೆಗೆ ಬಳುವಳಿಯಾಗಿ ಕೊಟ್ಟಂತಾಗುತ್ತದೆ. ಹಾಗಾಗಿ ನಾವು ಮತ್ತೆ ನಮ್ಮ ನೇಟಿವಿಟಿಗೆ ಮರಳಬೇಕು. ನಮ್ಮ ನೆಲೆಗೆ ವಾಪಾಸ್ಸು ಬರಬೇಕು. ಹಾಗಾಗಿ ಫ್ಯೂಜನ್ ಗಳು ಮುಖ್ಯವಾಗುತ್ತವೆ.

ಈ ಹೊಸ ಪ್ರಯೋಗದ ವಿಡಿಯೊಕ್ಕೆ ಪ್ರತಿಕ್ರಿಯೆ ಹೇಗಿತ್ತು?

ಕೆಲವರು ತುಂಬಾ ಇಷ್ಟಪಟ್ಟಿದಾರೆ. ಕೆಲವರು ಓ! ಈ ರೀತಿನೂ ಮಾಡಬಹುದಲ್ವಾ ಅಂತ ಆಶ್ಚರ್ಯ ಪಟ್ಟಿದ್ದಾರೆ. ಇನ್ನೂ ಕೆಲವರು, ಆ ವಾದ್ಯ ಬಳಸಬೇಕಿತ್ತು, ಹೀಗೆ ಮಾಡಬೇಕಿತ್ತು ಎಂದು ಸಲಹೆ ನೀಡಿದ್ದಾರೆ.

ನನಗೆ ಸಿನಿಮಾ ಹಾಡಿಗಾಗಿ ಪ್ರಶಸ್ತಿ ಬಂದರೂ, ಈ ವಿಡಿಯೊ ಕೊಟ್ಟ ಯಶಸ್ಸು ಇದೆಯಲ್ಲಾ, ಅದು ಪ್ರಶಸ್ತಿಗಿಂತ ದೊಡ್ಡದು. ಈ ಪ್ರಯತ್ನ ನನ್ನ ಜೀವನದ ತಿರುವು ಎಂದರೂ ತಪ್ಪಾಗುವುದಿಲ್ಲ. ಇದು ಇಷ್ಟು ಯಶಸ್ಸು ಗಳಿಸುತ್ತದೆ ಅಂತ ನಿರೀಕ್ಷೆ ಕೂಡ ಇರಲಿಲ್ಲ ನನಗೆ.

ನಿಮ್ಮ ಮುಂದಿನ ಯೋಜನೆಗಳು?

ಇನ್ನು ಎರಡು ತಿಂಗಳಲ್ಲಿ ಮತ್ತೊಂದು ಹಾಡಿನ ಮೂಲಕ ಬರ‍್ತಾ ಇದ್ದಿನಿ. ಸಿನಿಮಾ ಹಾಡುಗಳು ಇರುತ್ತದೆ. ಆದರೆ, ಈ ರೀತಿಯ ಪ್ರಯೋಗಗಳ ಬಗ್ಗೆಯೇ ನಾನು ಹೆಚ್ಚು ಗಮನಹರಿಸುತ್ತಿದ್ದೇನೆ. 

Tags: 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !