ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಬಾಳ್ವೆ ಕನಸಿನ ಸ್ನೇಹ ಲೋಕ

Last Updated 24 ಜನವರಿ 2019, 20:00 IST
ಅಕ್ಷರ ಗಾತ್ರ

ಏರಿಯಾದ ಹುಡುಗರೆಲ್ಲ ಸೇರಿ ’ಪ್ರೆಂಡ್‌ಶಿಪ್‌ ಗ್ರೂಪ್‌‘ ಮಾಡಿಕೊಳ್ಳುವುದು ನಗರ ಬದುಕಿನ ಒಂದು ಸ್ಟೈಲ್‌ ಮಾತ್ರವಲ್ಲ. ಅದು ಯುವಕರ ಜೀವನಕ್ರಮ. ಜಾತಿ, ಧರ್ಮ, ಬಣ್ಣ ಮೀರಿ ಒಂದಾಗುವ ಇಂಥ ಕೆಲ ಯುವಕರ ಗ್ರೂಪ್‌ ಕಂಡಾಗ ಬಹುತ್ವದ ಬಗ್ಗೆ ಹೆಮ್ಮೆ ಮೂಡುತ್ತದೆ.

ಜಾಲಹಳ್ಳಿ ವ್ಹಿಲೇಜ್‌ ಪ್ರದೇಶದ ಈ ಯುವಕರು ಅಷ್ಟು ಓದಿದವರಲ್ಲ. ಗಾರೆ ಕೆಲಸ, ಶಾಮಿಯಾನ, ಪೆಂಡಾಲ್‌, ಶಾಪಿಂಗ್‌ ಮಾಲ್‌, ಶಾಲೆ, ಕಾಲೇಜುಗಳಲ್ಲಿ ಸಣ್ಣ ಪುಟ್ಟ ಬಿಸಿನೆಸ್‌ನಲ್ಲಿ ಸಹಾಯಕರಾಗಿದ್ದುಕೊಂಡವರು. ಅಷ್ಟರಿಂದಲೇ ಬದುಕನ್ನು ಶುರು ಮಾಡಿ ಬಹುದೊಡ್ಡ ಕನಸುಗಳತ್ತ ಮುಖ ಮಾಡಿದವರು.

ಇದೊಂದು ಇಪ್ಪತ್ತೈದು ಗೆಳೆಯರ ಗುಂಪು. ಗಣೇಶ್‌ ಎನ್ನುವ ಯುವಕ ಇವರನ್ನೆಲ್ಲ ಸ್ನೇಹ ಬಂಧದಲ್ಲಿ ಗಟ್ಟಿಯಾಗಿಸಲು ಏನಾದರೊಂದು ಹೊಸತು ಯೋಚಿಸುತ್ತಾರೆ. ಇವರ ಗುಂಪಿನಲ್ಲಿ ಯಾರದೇ ಜನ್ಮ ದಿನ (ಬರ್ತ್‌ಡೇ) ಇರಲಿ ಅವತ್ತು ಎಲ್ಲ ಸೇರಿ ಒಂದೆಡೆ ಶಾಮಿಯಾನಾ ಹಾಕಿ, ವೇದಿಕೆ ಅಲಂಕರಿಸಿ, ಪಟಾಕಿ ಸಿಡಿಸಿ ದೊಡ್ಡ ಕೇಕ್‌ ಕತ್ತರಿಸಿ ಸಂಭ್ರಮಿಸುತ್ತಾರೆ. ಬರ್ತ್‌ಡೇ ಬಾಯ್‌ಗೆ ಅವತ್ತು ಒಬ್ಬ ಸ್ನೇಹಿತ ಹೊಸ ಬಟ್ಟೆ ವ್ಯವಸ್ಥೆ ಮಾಡುತ್ತಾನೆ. ಮತ್ತೊಬ್ಬ ಪಟಾಕಿ, ಡೆಕೊರೇಷನ್‌ಗೆ ಬೇಕಾದ ವ್ಯವಸ್ಥೆ ಮಾಡಿದರೆ ಮಗದೊಬ್ಬ ಊಟದ ವ್ಯವಸ್ಥೆ ಮಾಡುತ್ತಾನೆ. ಏರಿಯಾದ ತಮ್ಮ ಗುರುತಿನ ಹಿರೀಕರನ್ನು ಕರೆಯಿಸಿ ಅಕ್ಕಪಕ್ಕದ ಜನರನ್ನು ಸೇರಿಸಿ, ಒಂದಷ್ಟು ಜನರಿಗೆ ಭರ್ಜರಿ ಊಟದ ವ್ಯವಸ್ಥೆಯನ್ನೂ ಮಾಡುತ್ತಾರೆ. ಅದು ವೆಜ್‌ ಇರಬಹುದು ಇಲ್ಲವೇ ನಾನ್‌ ವೆಜ್‌ ಇರಬಹುದು. ಒಂದಿಬ್ಬರು ಅವತ್ತಿಗೆ ಬೇಕಾದ ಮೆನ್ಯು ಫಿಕ್ಸ್‌ ಮಾಡುತ್ತಾರೆ.

ಯಾವುದೇ ಮದ್ಯಪಾನ, ಮಾದಕ ವಸ್ತು, ಸಿಗರೇಟ್‌.. ಈ ಗುಂಪಲ್ಲಿ ಅವಕ್ಕೆಲ್ಲ ಜಾಗವಿಲ್ಲ. ಕಳೆದ ಮಂಗಳವಾರ ರಾತ್ರಿ (ಜ. 22) ಅವತ್ತಿನ ಬರ್ತಡೇ ಬಾಯ್‌ ನಾಗೇಂದ್ರ. ’ಕೂಡಿ ಆಡುವ, ನಲಿಯುವ ಮತ್ತು ಏರಿಯಾಕ್ಕೆ ಮಾದರಿ ಎನ್ನುವಂಥ ಸಹಬಾಳ್ವೆ ಮೆರೆಯುವುದೇ ನಮ್ಮ ಬದುಕಿನ ಉದ್ದೇಶ‘ ಎಂದ ಬರ್ತ್‌ಡೇ ಬಾಯ್‌ ನಾಗೇಂದ್ರ ಮುಖದಲ್ಲಿ ಎಂಥ ಮಿಂಚಿತ್ತು.ಗಾರೆ ಕೆಲಸದ ಗತ್ತಿನ ಹುಡುಗನ ಮಾತಲ್ಲಿ ಎಷ್ಟು ಅರ್ಥವಿತ್ತು..

ನಿಮ್ಮ ಏರಿಯಾ, ಬಡಾವಣೆಯಲ್ಲಿ ನಡೆಯುವ ಯಾವುದೇ ವಿಶೇಷ ಕಾರ್ಯಕ್ರಮಗಳ ಬಗ್ಗೆ ಮೆಟ್ರೊಗೆ ಪುಟ್ಟದಾಗಿ ಬರೆದು ಕಳುಹಿಸಿ. ಜೊತೆಗೆ ಉತ್ತಮ ಚಿತ್ರಗಳಿರಲಿ.
ಸಂಪರ್ಕ: metropv@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT