ಬುಧವಾರ, ಜೂನ್ 16, 2021
22 °C

ಕೋವಿಡ್‌ ಕಾಲದ ಕಲಾ ಅಭಿವ್ಯಕ್ತಿ

ಆರ್.ಎಚ್.ಕುಲಕರ್ಣಿ Updated:

ಅಕ್ಷರ ಗಾತ್ರ : | |

prajavani

ಕೋವಿಡ್‌–19ನಿಂದಾಗಿ ಮಾರ್ಚ್‌ ತಿಂಗಳಲ್ಲಿ ಲಾಕ್‌ಡೌನ್ ಘೋಷಣೆಯಾಗ ಪ್ರಾಯಶಃ ಬಹುತೇಕರ ಮನದಲ್ಲಿ ಇದೇನು ಕೆಲವೇ ದಿನಗಳಲ್ಲಿ ಮುಗಿದು ಹೋಗಲಿದೆ ಎಂಬ ಭಾವನೆಯೇ ಇತ್ತು. ಆದರೆ, ದಿನ ಕಳೆದಂತೆ ಅದರ ನೈಜ ಮುಖದ ಅನಾವರಣವಾದಾಗ ಕಲಾವಿದರ ಮೇಲೂ ಸಾಕಷ್ಟು ಪ್ರಭಾವ ಬೀರತೋಡಗಿತು. ಗ್ಯಾಲರಿಗಳಲ್ಲಿ ಚಿತ್ರಕಲಾ ಪ್ರದರ್ಶನ ಏರ್ಪಡಿಸಲು ಕಲಾವಿದರು ಉತ್ಸಾಹದಿಂದ ನಿರ್ಧರಿಸಿದ್ದರು. ಆದರೆ, ಎಲ್ಲ ಪ್ರದರ್ಶನಗಳು ಏಕಾಏಕಿ ರದ್ದಾದವು.

ದೇಶದ ಮುಂಚೂಣಿ ಕಲಾ ಗ್ಯಾಲರಿಗಳಾದ ಮುಂಬೈನ ಸರ್ ಜಹಾಂಗೀರ್, ಪಂಡೋಲ್, ಕ್ರಿಮ್ಸನ್, ಸಿಮ್ರೋಜಾ ಮೊದಲಾದವು ದಿಢೀರ್‌ ಬಾಗಿಲು ಹಾಕಿಬಿಟ್ಟವು. ಅದೇ ರೀತಿಯಾಗಿ ನವದೆಹಲಿ, ಕೋಲ್ಕತ್ತ, ಚೆನ್ನೈನ ಮುಂಚೂಣಿ ಗ್ಯಾಲರಿಗಳೆಲ್ಲವೂ ಸ್ತಬ್ಧವಾದವು. ಬೆಂಗಳೂರಿನಲ್ಲಿ ಚಿತ್ರಕಲಾ ಪರಿಷತ್ತಿನ ಗ್ಯಾಲರಿಗಳು ಯಾವಾಗಲೂ ಕಲಾವಿದರ, ಚಿತ್ರ ಪ್ರದರ್ಶನಗಳಿಂದ ತುಂಬಿ ತುಳುಕುತ್ತಿದ್ದವು. ಇಡೀ ಪರಿಷತ್ತಿನ ಕ್ಯಾಂಪಸ್‌ನಲ್ಲಿ ಹೊಸ ಜೀವಕಳೆ ಇರುತ್ತಿತ್ತು. ಆದರೆ, ಕಳೆದ ನಾಲ್ಕು ತಿಂಗಳಿಂದ ಯಾವ ಚಟುವಟಿಕೆಗಳನ್ನೂ ಮಾಡಲಾಗದೆ ನೀರವ ಮೌನ ಆವರಿಸಿದೆ.

ಮೊದಲೆರಡು ತಿಂಗಳು ಹೇಗೋ ಏನೋ ಕಳೆದುಹೋದವು. ಹೊಸದಾರಿಗಳ ಶೋಧನೆ ಆಗಲಿಲ್ಲ. ಲಲಿತಕಲಾ ಅಕಾಡೆಮಿ, ಶಿಲ್ಪಕಲಾ ಅಕಾಡೆಮಿಗಳು ಹಲವು ಕಲಾವಿದರಿಗೆ ಆಹಾರದ ಕಿಟ್ ಹಾಗೂ ₹ 2 ಸಾವಿರ ನೀಡಿದವು. ಆದರೆ, ದೊಡ್ಡ ಸಂಸಾರಗಳಿಗೆ ಇದರಿಂದ ಎಷ್ಟು ಪ್ರಯೋಜನ ಆದೀತು? ಇದೇ ಸಂದರ್ಭದಲ್ಲಿ ಕಲಾವಿದರು ಕಂಡುಕೊಂಡ ಪರ್ಯಾಯ ಮಾರ್ಗ ಆನ್‌ಲೈನ್ ಪ್ರದರ್ಶನ. ವೈಯಕ್ತಿಕ ಕಲಾಕೃತಿಗಳನ್ನು ಆನ್‌ಲೈನ್‌ನಲ್ಲಿ ಎಲ್ಲರೊಡನೆ ಹಂಚಿಕೊಳ್ಳಲು ಪ್ರಾರಂಭಿಸಿದರು.

ಡಿಜಿಟಲ್ ಯುಗಕ್ಕೆ ಜೈ ಎನ್ನಲೇಬೇಕು. ಆನ್‌ಲೈನ್‌ನಲ್ಲಿ ಹಲವಾರು ಅಪ್ಲಿಕೇಷನ್‌ಗಳ ಪೈಪೋಟಿ, ಮೇಲಾಟಗಳನ್ನು ಗಮನಿಸಬಹುದು. ಫೇಸ್‌ಬುಕ್ ಸಹ ಕಲಾಕೃತಿಗಳ ಪ್ರದರ್ಶನಕ್ಕೆ ವೇದಿಕೆಯಾಯಿತು. ಕ್ರಮೇಣ ಫೇಸ್‌ಬುಕ್ ಲೈವ್‌ಗಳು ಶುರುವಾದವು. ಅಲ್ಲದೆ, ಆನ್‌ಲೈನ್‌ ಚಿತ್ರಕಲಾ ಸ್ಪರ್ಧೆಗಳನ್ನು ಏರ್ಪಡಿಸಿ, ಪ್ರಮಾಣಪತ್ರ ನೀಡುವ ಪರಿಪಾಟವೂ ಆರಂಭವಾಯಿತು.

ವಾರಾಣಸಿ, ಜೈಪುರ, ಕೋಲ್ಕತ್ತ, ದೆಹಲಿ, ಲಖನೌ, ಹೈದರಾಬಾದ್, ಬೆಂಗಳೂರು, ಪುಣೆ ಹೀಗೆ ಹಲವಾರು ನಗರಗಳ ಕಲಾವಿದರಲ್ಲಿ ಸ್ವಯಂ ಜಾಗೃತಿಯಿಂದ ಕಲಾ ಚಟುವಟಿಕೆಗಳು ನಡೆಯಲಾರಂಭಿಸಿದವು. ಕಲಾ ಗ್ಯಾಲರಿಗಳಿಗೆ ಪರ್ಯಾಯವಾದ ವರ್ಚ್ಯುವಲ್ ಗ್ಯಾಲರಿ, ಕಲಾವಿದರ ನೇರ ಸಂದರ್ಶನ, ಚರ್ಚೆ, ಕಲಾಕೃತಿಗಳ ಕುರಿತು ವಿಮರ್ಶೆ... ಹೀಗೆ ಕಲಾವಿದ, ಕೋವಿಡ್ ಸಂದರ್ಭದಲ್ಲಿ ತನ್ನ ಅಭಿವ್ಯಕ್ತಿಯನ್ನು ಹೊಸ ಆಯಾಮದೊಂದಿಗೆ ಪ್ರಾರಂಭಿಸಿದ.

ಆನ್‌ಲೈನ್‌ ಕಲಾಪ್ರದರ್ಶನಕ್ಕೆ ಬಹುತೇಕ ಎಲ್ಲ ಕಲಾವಿದರು ಈ ಸಂದರ್ಭದಲ್ಲಿ ಹೊಂದಿಕೊಂಡಿದ್ದಾರೆ. ತಾಂತ್ರಿಕತೆಯನ್ನು ತಿಳಿದಿದ್ದಾರೆ. ಲ್ಯಾಪ್‌ಟಾಪ್‌ ಅಥವಾ ಸ್ಮಾರ್ಟ್‌ಫೋನ್‌ನಲ್ಲಿಯೇ ಎಲ್ಲ ಕೆಲಸ ಮುಗಿದು ಹೋಗುತ್ತದೆ. ವಿಶೇಷವಾಗಿ ಯುವ ಕಲಾವಿದರಿಗೆ ಇದೊಂದು ಬಹುದೊಡ್ದ ಅವಕಾಶ. ನಮ್ಮ ಬೆಂಗಳೂರಿನಲ್ಲಿಯೇ ಇರುವ ಹಿರಿಯ ಕಲಾವಿದರಾದ ಎಸ್.ಜಿ.ವಾಸುದೇವ, ಚಿ.ಸು. ಕೃಷ್ಣಸೆಟ್ಟಿ, ಗುರುದಾಸ ಶೆಣೈ, ರವಿ ಕಾಶಿ ಮೊದಲಾದವರು ತಮ್ಮ ಕಲಾಕೃತಿಗಳ ಕುರಿತು ಆನ್‌ಲೈನ್‌ನಲ್ಲಿ ಚರ್ಚಿಸಿದ್ದಾರೆ ಮತ್ತು ಪ್ರದರ್ಶಿಸಿದ್ದಾರೆ.

ಇನ್ನು ಯುವ ಕಲಾವಿದರ ಹಲವಾರು ಗುಂಪುಗಳು ದಿನವೂ ಒಂದಲ್ಲ ಒಂದು ಚಟುವಟಿಕೆಯನ್ನು ಕೈಗೊಳ್ಳುತ್ತಿವೆ. ಕಲಾವಿದ ಬಿ.ಎಸ್.ಅಶೋಕ ಇದುವರೆಗೂ ಸುಮಾರು 60 ಜನ ಕಲಾವಿದರ ಆನ್‌ಲೈನ್‌ ಪ್ರದರ್ಶನದ ವ್ಯವಸ್ಥೆ ಮಾಡಿ, ಮುಕ್ತವಾದ ಕಲಾ ಚರ್ಚೆಗೆ ಅವಕಾಶ ಕಲ್ಪಿಸಿದ್ದಾರೆ. ಹೀಗೆ ಹಲವಾರು ಕಲಾವಿದರು ನಿತ್ಯ ನಿರಂತರವಾಗಿ ಕಲಾ ಪ್ರಸರಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಕಲಾನಿರಂತರ ಸಂಸ್ಥೆಯವರು ಕೂಡ ಹಲವಾರು ಆನ್‌ಲೈನ್‌ ಕಲಾ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ.

ಆನ್‌ಲೈನ್‌ನಲ್ಲಿ ವಾರ್ಷಿಕ ಕಲಾಪ್ರದರ್ಶನ, ವರ್ಚ್ಯುವಲ್‌ ಗ್ಯಾಲರಿಗಳಲ್ಲಿ ಪ್ರದರ್ಶಿಸುವ ಅವಕಾಶ ಹಾಗೂ ಆರೋಗ್ಯಕರ ಸ್ಪರ್ಧೆಯು ಈ ಸಂದರ್ಭದ ಹೊಸ ಬೆಳವಣಿಗೆ. ಕಲಾಕೃತಿಗಳ ಮಾರಾಟದಿಂದಲೇ ಹಲವಾರು ಕಲಾವಿದರು ತಮ್ಮ ಜೀವನ ಕಟ್ಟಿಕೊಂಡಿದ್ದಾರೆ. ಯಾವುದೇ ಕಟ್ಟುಪಾಡುಗಳಿಗೆ ಜೋತುಬೀಳದೆ ಮತ್ತು ಯಾವುದೇ ನೌಕರಿಯ ಬೆನ್ನು ಹತ್ತದೇ, ಕೇವಲ ಕಲಾಕೃತಿಗಳನ್ನು ರಚಿಸುವುದು, ನಿಯಮಿತವಾಗಿ ಪ್ರದರ್ಶನಗಳನ್ನು ಮಾಡುವುದು ಅವರ ಕಾರ್ಯವೈಖರಿ. ಕೋವಿಡ್ ಸಂದರ್ಭದಲ್ಲಿ ಪ್ರದರ್ಶನಗಳಂತೂ ಸಾಧ್ಯವೇ ಇಲ್ಲ.

ಆನ್‌ಲೈನ್‌ನಲ್ಲಿ, ದೇಶದ ಪ್ರತಿಷ್ಠಿತ ಗ್ಯಾಲರಿಗಳ ವೆಬ್‌ಸೈಟ್‌ನಲ್ಲಿ ತಮ್ಮ ಕಲಾಕೃತಿಗಳನ್ನು ಪ್ರಚುರಪಡಿಸುವುದು ಕಲಾವಿದರ ಮೊದಲನೆಯ ಕೆಲಸ. ಕಲಾಸಕ್ತರಿಗೆ ಕಲಾಕೃತಿ ಇಷ್ಟವಾದಲ್ಲಿ ಕಲಾವಿದರೊಂದಿಗೆ ಚರ್ಚಿಸಿ ಖರೀದಿ ಮಾಡುತ್ತಾರೆ. ಹಾಗೆಂದ ಮಾತ್ರಕ್ಕೆ ಇಂದು ದೊಡ್ಡಮಟ್ಟದ ಕೊಳ್ಳುವ ಸಂಪ್ರದಾಯವಿದೆ ಎಂದಲ್ಲ. ಇಡೀ ಜಗತ್ತಿನ ಕಲಾ ಮಾರುಕಟ್ಟೆ ಇಂದು ಬಹಳ ದಯನೀಯ ಸ್ಥಿತಿಯಲ್ಲಿದೆ.

ಆನ್‌ಲೈನ್‌ ಕಲಾ ವಹಿವಾಟು ಒಂದು ತಾತ್ಕಾಲಿಕ ತಾಣವೆನ್ನಬಹುದು. ನೈಜವಾಗಿ ಕಲಾಕೃತಿಯನ್ನು ನೋಡಿ ಅದರ ಸೌಂದರ್ಯವನ್ನು ಸವಿಯುವ ಆ ಅನುಭವವೇ ಬೇರೆಯದು. ಆದರೆ, ಇಂದಿನ ಪರಿಸ್ಥಿತಿಯಲ್ಲಿ ಆನ್‌ಲೈನ್‌ ಅನಿವಾರ್ಯ. ಅನಿವಾರ್ಯವನ್ನು ಅವಕಾಶವನ್ನಾಗಿ ಪರಿವರ್ತಿಸಿಕೊಂಡು ಹೊಸ ಆಯಾಮದೊಡನೆ ಮುನ್ನಡೆಯುವುದೇ ಜೀವನ ಸಂಕಲ್ಪವಾಗಬೇಕಲ್ಲವೇ? ಕೋವಿಡ್‌ನಿಂದ ಬೇಗ ಮುಕ್ತಿ ದೊರೆತಷ್ಟೂ ಬಡ ಕಲಾವಿದರು ಹೊಸದಾಗಿ ಬದುಕು ಕಟ್ಟಿಕೊಳ್ಳುವ ಪ್ರಯತ್ನ ಮಾಡಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು