ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂಚದಲ್ಲಿ ಹೋರಾಟದ ಕಿಚ್ಚು

Last Updated 26 ನವೆಂಬರ್ 2018, 20:00 IST
ಅಕ್ಷರ ಗಾತ್ರ

ಮಿತ್ರರೆಲ್ಲ ಪಟಪ‍ಟನೆ ಮಾತನಾಡುವುದನ್ನು ಬೆರಗುಗಣ್ಣಿನಿಂದ ನೋಡುತ್ತಿದ್ದ ಚಂದ್ರು ಕನಸು ಅವರಿಗೆ ತಮ್ಮ ಅಂತರಾಳದ ಭಾವನೆಗಳನ್ನು ಮುಕ್ತವಾಗಿ ಮತ್ತು ವಿಭಿನ್ನವಾಗಿ ವ್ಯಕ್ತಪಡಿಸಬೇಕು ಎಂದೆನಿಸಿದಾಗ ಹೊಳೆದದ್ದೇ ಚಿತ್ರಕಲೆ.

ಡೊಡ್ಡಬಳ್ಳಾಪುರದವರಾದ ಚಂದ್ರು ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಬಿ.ಎ ಪತ್ರಿಕೋದ್ಯಮ, ಗ್ರಾಫಿಕ್‌, ಆ್ಯನಿಮೇಷನ್‌ ಮತ್ತು ವೆಬ್‌ ಡಿಸೈನಿಂಗ್‌ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ್ದಾರೆ.

ಗ್ರಾಫಿಕ್‌ ಕಲಿಯಲು ಬೆಂಗಳೂರಿಗೆ ಬಂದ ಅವರು ಚಿತ್ರಕಲೆಯ ಮೋಡಿಗೆ ಪರವಶರಾದರು. ಸಮಾಜಕ್ಕೆ ಹೇಳಬೇಕು ಎಂದುಕೊಂಡಿದ್ದನ್ನು, ಅಸಹಾಯಕರ ಧ್ವನಿಯನ್ನು ತಮ್ಮ ಚಿತ್ರಗಳ ಮೂಲಕ ವ್ಯಕ್ತಪಡಿಸುವ ಕೆಲಸದಲ್ಲಿ ನಿರತರಾದರು. ಅವರು ಕಲೆ ಮತ್ತು ಹೋರಾಟಕ್ಕಷ್ಟೇ ಸೀಮಿತವಾಗದೇ, ‘ಡ್ರೀಮ್‌ ಎ ಡ್ರೀಮ್‌’ ಮತ್ತು ‘ಗ್ರೀನ್‌ ವೈಟ್‌’ ಎನ್ನುವಸ್ವಯಂಸೇವಾ ಸಂಸ್ಥೆಗಳೊಂದಿಗೂ ಕೈ ಜೋಡಿಸಿ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಬಿಡುವಿನ ಸಮಯದಲ್ಲಿ ಬಡ ಮಕ್ಕಳಿಗೆ ಉಚಿತವಾಗಿ ಕಾರ್ಯಾಗಾರಗಳನ್ನು ಆಯೋಜಿಸುವುದು, ಕಲಾಕೃತಿ ಪ್ರದರ್ಶನ ಏರ್ಪಡಿಸಿ, ಅದರಿಂದ ಬಂದ ಹಣವನ್ನು ಬಡಮಕ್ಕಳಿಗೆ ವಿನಿಯೋಗಿಸುವುದರ ಮೂಲಕ ಸಮಾಜಕ್ಕೆ ಕೊಡುಗೆ ನೀಡುತ್ತಿದ್ದಾರೆ.

ಇತ್ತೀಚಿಗೆ ‘ದೀವಟಿಗೆ ಕಲಾಯಾನ’ ತಂಡದಿಂದ ವೆಂಕಟಪ್ಪ ಆರ್ಟ್‌ ಗ್ಯಾಲರಿಯಲ್ಲಿ ಚಿತ್ರಕಲಾ ಪ್ರದರ್ಶನ ಏರ್ಪಡಿಸಿ, ಅದರಿಂದ ಬಂದ ₹ 20 ಸಾವಿರ ಹಣವನ್ನು ಬಡ ಮಕ್ಕಳ ಚಿತ್ರಕಲಾ ಕಾರ್ಯಾಗಾರಕ್ಕೆ ವಿನಿಯೋಗಿಸಿದ್ದಾರೆ.

ಬೆಂಗಳೂರಿನ ಮಡಿವಾಳದಲ್ಲಿರುವ ಬಾಲಪರಾಧಿಗಳ ಪುನರ್ವಸತಿ ಕೇಂದ್ರಲ್ಲಿರುವ ಮಕ್ಕಳಿಗೆ ಬಿಡುವಿನ ಸಮಯದಲ್ಲಿ ಚಿತ್ರಕಲೆಯನ್ನು ಹೇಳಿಕೊಡುತ್ತಿದ್ದಾರೆ. ಇದರ ಫಲವಾಗಿ ಈ ಕೇಂದ್ರದ ಗೋಡೆಗಳ ಮೇಲೆ ಚಿತ್ರಕಲೆ ಅರಳಿದೆ. ‘ಈ ಕಲೆಯಿಂದ ಕೆಲವು ಮಕ್ಕಳು ಪ್ರೇರಣೆ ಪಡೆದಿದ್ದಾರೆ. ಕೆಲವರಿಗೆ ಕುಂಚ ಹಿಡಿಯುವುದು ಕರಗತವಾಗಿದೆ’ ಎಂದು ಸಂತೋಷ ಹಂಚಿಕೊಳ್ಳುತ್ತಾರೆ ಚಂದ್ರು.

ಸಮಾನ ಮನಸ್ಕರು ಸೇರಿಕೊಂಡು ‘ದೀವಟಿಗೆ’ ಎನ್ನುವ ಕೈ ಬರಹ ಪತ್ರಿಕೆಯನ್ನು ಹೊರತರುತ್ತಿದ್ದಾರೆ. ಇದರಲ್ಲೂ ಸಕ್ರಿಯವಾಗಿ ಅವರು ತೊಡಗಿಸಿಕೊಂಡಿದ್ದಾರೆ.

‘ಅರ್ಕಾವತಿ ನದಿ ಪುನಶ್ಚೇತನ ಹೋರಾಟ ವೃತ್ತಿ ಮತ್ತು ಬದುಕಿಗೆ ಪ್ರಮುಖ ತಿರುವು. ಆ ಸಮಯದಲ್ಲಿ ನನ್ನ ಸ್ನೇಹಿತರು ಈ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು. ನನಗೆ ಮಾತನಾಡಲು ಶಬ್ದಗಳೇ ಬರುತ್ತಿರಲಿಲ್ಲ ಆಗ ಸಹಾಯಕ್ಕೆ ಬಂದದ್ದೇ ಚಿತ್ರಕಲೆ’ ಎಂದು ಅವರ ಪಯಣ ಪ್ರಾರಂಭವಾದ ಬಗ್ಗೆ ಮೆಲುಕು ಹಾಕುತ್ತಾರೆ.

‘ಪದಗಳಿಗಾಗದರೆ ಮಿತಿ ಇದೆ ಆದರೆ ಕಲಾಕೃತಿಗೆ ಮಿತಿ ಎಂಬುದಿಲ್ಲ. ಪ್ರತಿ ಚಿತ್ರಗಳಲ್ಲೂ ಒಂದೊಂದು ಕತೆ ಇರುತ್ತದೆ. ಚಿತ್ರ ಬಿಡಿಸುವ ಮುನ್ನ, ಬರೆಯ ಬೇಕಾದ ವಿಷಯದ ಬಗ್ಗೆ ಅಧ್ಯಯನ ಮಾಡಿಯೇ ಬರೆಯುತ್ತೇನೆ’ ಎಂದು ತಮ್ಮ ಕಲಾಕೃತಿ ಅರಳುವ ಬಗ್ಗೆ ವಿವರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT