ಬುಧವಾರ, ಸೆಪ್ಟೆಂಬರ್ 29, 2021
21 °C

ತೂಗದ ಕಲೆಗಳ ತೊಟ್ಟಿಲುಖಾಲಿಯಾದ ಕಲಾವಿದರ ಬಟ್ಟಲು

ಜಿ.ಬಿ.ನಾಗರಾಜ್‌ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಸಂಸ್ಕೃತಿಯ ಉಳಿವಿಗೆ ಬದುಕನ್ನೇ ಸವೆಸುವ ಕಲಾವಿದರು ಬಹುದೊಡ್ಡ ಸಂಕಷ್ಟ ಎದುರಿಸುತ್ತಿದ್ದಾರೆ. ಜೀವನಕ್ಕೆ ಆಧಾರವಾಗಿದ್ದ ಕಲೆಯ ಕಲಿಕೆ ಹಾಗೂ ಪ್ರದರ್ಶನಕ್ಕೆ ಅಡ್ಡಿಯಾಗಿರುವ ಕೊರೊನಾ ಸೋಂಕು ಬಹುತೇಕರ ಬದುಕನ್ನು ಕಿತ್ತುಕೊಂಡಿದೆ.

ಕೊರೊನಾ ಸೋಂಕಿನ ಆತಂಕದಲ್ಲಿ ಅನುಷ್ಠಾನಗೊಂಡ ಲಾಕ್‌ಡೌನ್‌, ಕಲಾವಿದರನ್ನು ಇನ್ನೂ ದುಃಸ್ವಪ್ನವಾಗಿ ಕಾಡುತ್ತಿದೆ. ಸೋಂಕು ಹರಡುವ ಭೀತಿಯ ನಡುವೆಯೇ ಜನಜೀವನ ಸಹಜ ಸ್ಥಿತಿಗೆ ಮರಳಿದರೂ ಕಲಾವಿದರ ಬದುಕಲ್ಲಿ ಇನ್ನೂ ಬೆಳಕು ಕಾಣುತ್ತಿಲ್ಲ.

ಚಿತ್ರದುರ್ಗ ಜಿಲ್ಲೆ ಕಲೆಗಳ ತೊಟ್ಟಿಲು. ಜಾನಪದ, ಶಾಸ್ತ್ರೀಯ ಕಲೆಗಳ ನೆಲೆಬೀಡು. ಪ್ರತಿ ಹಳ್ಳಿಯಲ್ಲಿಯೂ ಹತ್ತಾರು ಕಲಾವಿದರು ಸಿಗುತ್ತಾರೆ. ಕಲೆಯನ್ನೇ ಉಸಿರಾಗಿಸಿಕೊಂಡವರಿಗೆ ಅನ್ನ ನೀಡುವ ವೃತ್ತಿಯೂ ಹೌದು. ಹೊರ ಜಿಲ್ಲೆ, ರಾಜ್ಯಗಳಿಗೂ ಕೋಟೆನಾಡಿನ ಕಲೆಯ ಕಂಪು ಪಸರಿಸಿದೆ. ಕೊರೊನಾ ಸೋಂಕು ಕಾಣಿಸಿಕೊಂಡ ಬಳಿಕ ಕಲೆಯ ಪ್ರದರ್ಶನದ ಅವಕಾಶವೇ ಮೊಟುಕುಗೊಂಡಿದೆ.

ವೃತ್ತಿ ರಂಗಭೂಮಿ, ಹವ್ಯಾಸಿ ರಂಗಭೂಮಿ ಎರಡೂ ಜಿಲ್ಲೆಯಲ್ಲಿ ಸಶಕ್ತವಾಗಿವೆ. ಮುರುಘಾ ಮಠದ ಜಮುರಾ ಕಲಾ ತಂಡ, ಸಾಣೇಹಳ್ಳಿಯ ಶಿವಸಂಚಾರದ ನಾಟಕಗಳಿಗೆ ರಾಜ್ಯದ ಹೊರಗೂ ಪ್ರೇಕ್ಷಕರಿದ್ದಾರೆ. ಶಾಸ್ತ್ರೀಯ ಸಂಗೀತ, ಶಾಸ್ತ್ರೀಯ ನೃತ್ಯ, ಜನಪದ ಕಲೆಗಳನ್ನು ಕಲಿಸುವ ಹಲವು ಸಂಸ್ಥೆಗಳು ಜಿಲ್ಲೆಯಲ್ಲಿವೆ. ಹೊಸ ಪೀಳಿಗೆಗೆ ಕಲೆಯನ್ನು ದಾಟಿಸುವ ಈ ಸಂಸ್ಥೆಗಳ 9 ತಿಂಗಳಿಂದ ಕಾರ್ಯ ಸ್ಥಗಿತಗೊಂಡಿದೆ. ನಿರ್ವಹಣೆಯ ಸಮಸ್ಯೆಯಿಂದ ಅನೇಕರು ಸಂಸ್ಥೆಗಳಿಗೆ ಬಾಗಿಲು ಹಾಕಿದ್ದಾರೆ.

‘ಸೋಮನಕುಣಿತ, ಕರಡಿ ಚಮ್ಮಾಳ, ವೀರಗಾಸೆ, ಡೊಳ್ಳುಕುಣಿತ, ಮರಗಾಲು ಕುಣಿತ, ಪಟ ಕುಣಿತ, ಖಾಸಾ ಬೇಡರ ಪಡೆ ಕುಣಿತ, ತಮಟೆ ವಾದ್ಯ, ವೀರಮಕ್ಕಳ ಕುಣಿತ ಸೇರಿ ಜಿಲ್ಲೆಯಲ್ಲಿ 66 ಜಾನಪದ ಕಲಾ ಪ್ರಕಾರಗಳಿವೆ. ಜಾತ್ರೆ, ಉತ್ಸವಗಳಿಗೆ ನಿರ್ಬಂಧ ಇರುವುದರಿಂದ ಕಲಾಪ್ರದರ್ಶನಕ್ಕೆ ಅವಕಾಶ ಸಿಕ್ಕಿಲ್ಲ. ಧಾರ್ಮಿಕ ಸಮಾರಂಭದಲ್ಲಿ ಪಾಲ್ಗೊಳ್ಳುವ ಉರುಮೆ, ಕಹಳೆ ಕಲಾವಿದರಿಗೆ ಮಾತ್ರ ಒಂದಷ್ಟು ಕೆಲಸ ಸಿಗುತ್ತಿದೆ’ ಎನ್ನುತ್ತಾರೆ ಜಿಲ್ಲಾ ಜಾನಪದ ಕಲಾ ಮಂಡಳಿಯ ಕಾರ್ಯದರ್ಶಿ ಜಿ.ರಾಜಣ್ಣ.

ಕಿಂದರಿ ಜೋಗಿ ಕುಣಿತದ ಕಲಾವಿದರು ನಾಯಕನಹಟ್ಟಿ ಭಾಗದಲ್ಲಿ ಹೆಚ್ಚಾಗಿದ್ದಾರೆ. ಉರುಮೆ ವಾದ್ಯದ ತಂಡಗಳು ಪ್ರತಿ ಹಳ್ಳಿಯಲ್ಲೂ ಸಿಗುತ್ತವೆ. ಕೀಲುಕುದುರೆ ಕುಣಿತ, ಪಂಡರಿ ಭಜನೆ ತಂಡ, ಸೋಬಾನೆ ತಂಡಗಳಿಗೆ ಮದುವೆಯ ಸಂದರ್ಭದಲ್ಲಿ ಬೇಡಿಕೆ ಇತ್ತು. ಚಿಕ್ಕಜಾಜೂರು ಸಮೀಪದ ಸಾಸಲು ಗ್ರಾಮದಲ್ಲಿ ಸೂರ್ಯ ಮತ್ತು ಚಂದ್ರ ವಾದ್ಯ ತಂಡವಿದೆ. ಲವ– ಕುಶರನ್ನು ಪ್ರಚುರಪಡಿಸುವ ಕೊಂಡಮಾಮರು, ಅರ್ಜುನ ಬಗ್ಗೆ ಹೇಳುವ ಕಿಂದರಿಜೋಗಿಗಳು, ಗೊಂದಲಿಗರು, ಎಣ್ಣೆ ಜೋಗಿಗಳು ಕಣ್ಮರೆಯಾಗುವ ಆತಂಕ ಎದುರಾಗಿದೆ.

ಇತ್ತೀಚೆಗೆ ಸಾಂಸ್ಕೃತಿಕ ಕಲೆಗಳ ಪ್ರದರ್ಶನಕ್ಕೆ ಅವಕಾಶ ಸಿಕ್ಕಿದೆಯಾದರೂ ಪ್ರೇಕ್ಷಕರ ಕೊರತೆ ಕಾಡುತ್ತಿದೆ. ನಾಟಕ, ಕಲಾ ಪ್ರದರ್ಶನಗಳನ್ನು ವೀಕ್ಷಿಸಲು ಜನರು ಹಿಂದೇಟು ಹಾಕುತ್ತಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವಿಧಿಸಿದ ಷರತ್ತುಗಳನ್ನು ಪಾಲನೆ ಮಾಡುವುದು ಅಸಾಧ್ಯವಾಗಿದೆ. ಹೀಗಾಗಿ, ಅನೇಕರು ಕಲಾ ಪ್ರದರ್ಶನ ಆಯೋಜಿಸಲು ಸಾಧ್ಯವಾಗುತ್ತಿಲ್ಲ. ಕಲಾ ತರಬೇತಿ ನೀಡುವ ಸಂಸ್ಥೆಗಳಿಗೂ ಅವಕಾಶ ಸಿಕ್ಕಿಲ್ಲ.

‘ಬೆಂಗಳೂರು ಹಾಗೂ ಮೈಸೂರಿನಂತಹ ಮಹಾನಗರಗಳಲ್ಲಿ ಆನ್‌ಲೈನ್‌ ಕಲಿಕೆಗೆ ಜನರು ಒಗ್ಗಿಕೊಂಡಿದ್ದಾರೆ. ಚಿತ್ರದುರ್ಗದಂತಹ ಹಿಂದುಳಿದ ಜಿಲ್ಲೆಯಲ್ಲಿ ಆನ್‌ಲೈನ್‌ ಶಿಕ್ಷಣ ಹೊಸದು. ಹೀಗಾಗಿ, ಆಸಕ್ತರು ಕೂಡ ಕಲೆಯನ್ನು ಆನ್‌ಲೈನ್‌ ಮೂಲಕ ಕಲಿಯಲು ಮುಂದೆಬರುತ್ತಿಲ್ಲ’ ಎನ್ನುತ್ತಾರೆ ಅಂಜನಾ ನೃತ್ಯ ಕಲಾ ಕೇಂದ್ರದ ನಂದಿನಿ ಶಿವಪ್ರಕಾಶ್‌.

***

ಕಾರ್ಮಿಕರಾದ ಕಲಾವಿದರು

ಕೊಂಡ್ಲಹಳ್ಳಿ ಜಯಪ್ರಕಾಶ

ಮೊಳಕಾಲ್ಮುರು: ‘ಧಾರ್ಮಿಕ ಆಚರಣೆಗಳನ್ನೇ ಕದ್ದು ಮುಚ್ಚಿ ಮಾಡುವ ಪರಿಸ್ಥಿತಿ ಎದುರಾಗಿದೆ. ಇಂತಹ ಸಮಯದಲ್ಲಿ ನಮ್ಮನ್ನು ಕರೆದು ಯಾರು ನಾಟಕ ಆಡಿಸುತ್ತಾರೆ ಸ್ವಾಮಿ...’

ಇದು ತಾಲ್ಲೂಕಿನಲ್ಲಿ ಕಲಾವಿದರ ರೀತಿಯ ಕಲಾವಿದರ ಪ್ರಶ್ನೆ. ತಾಲ್ಲೂಕಿನಲ್ಲಿ ರಂಗಭೂಮಿ ಹಾಗೂ ನೃತ್ಯ, ಸಂಗೀತ, ರಸಮಂಜರಿ ಕಾರ್ಯಕ್ರಮಗಳ ಸಾವಿರಾರು ಕಲಾವಿದರು ಇದ್ದಾರೆ. ಸುಮಾರು ಹತ್ತು ತಿಂಗಳಿಂದ ಕಾಯಕವಿಲ್ಲದೇ ಸಮಸ್ಯೆಗೆ ಸಿಲುಕಿದ್ದಾರೆ.

‘ಕೊರೊನಾ ಸೋಂಕಿಗೂ ಮುನ್ನ ನಿತ್ಯವೂ ಸೇವೆ ಒದಗಿಸುತ್ತಿದ್ದೆವು. ಆದರೆ, ಈಗ ನಾವೇ ಏನಾದರೂ ಕಾರ್ಯಕ್ರಮ ಕೊಡಿ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಜನದಟ್ಟಣೆಗೆ ಸರ್ಕಾರ ನಿರ್ಬಂಧ ವಿಧಿಸಿರುವುದೇ ಮುಖ್ಯ ಕಾರಣ’ ಎನ್ನುತ್ತಾರೆ ಕಲಾವಿದ ಜಿ.ಪಿ.ಸುರೇಶ್.

‘ಕೋವಿಡ್‌ ಬಳಿಕ ಕಲಾವಿದರರು ಹೊಟ್ಟೆಪಾಡಿಗಾಗಿ ಸಿಕ್ಕ ಸಿಕ್ಕ ಉದ್ಯೋಗ ಮಾಡುತ್ತಿದ್ದಾರೆ. ಅಕ್ಷರಶಃ ಬದುಕು ಬೀದಿಗೆ ಬಿದ್ದಿದೆ. ಭವಿಷ್ಯ ಕತ್ತಲಾಗಿದೆ. ಅವಲಂಬಿತರನ್ನು ಹೇಗೆ ದಡ ಸೇರಿಸಬೇಕು ಎಂದು ಚಿಂತಿತರಾಗಿದ್ದಾರೆ. ಪರ್ಯಾಯವಾಗಿ ಕಟ್ಟಡ ನಿರ್ಮಾಣ, ಕೃಷಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ನೆರೆ ಜಿಲ್ಲೆಗಳಿಗೆ ಮೆಣಸಿನಕಾಯಿ ಬಿಡಿಸಲು ಅನೇಕರು ಹೋಗಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಅನುಮತಿ ಸಿಗುತ್ತಿಲ್ಲ’ ಎಂದು ಲೋಕೇಶ್ ಪಲ್ಲವಿ ಬೇಸರ ವ್ಯಕ್ತಪಡಿಸಿದರು.

ಜನಸಂಸ್ಥಾನ ಸಂಸ್ಥೆ ಕಾರ್ಯದರ್ಶಿ ವಿರೂಪಾಕ್ಷಪ್ಪ, ‘ಬೀದಿನಾಟಕ ಕಲಾವಿದರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಕೊರೊನಾ ಸ್ಥಿತಿಗತಿ, ಮುಂಜಾಗ್ರತೆ ಬಗ್ಗೆ ಬೀದಿ ನಾಟಕ ಮಾಡಿಸಿ ಬಳಸಿಕೊಳ್ಳಬಹುದಾಗಿತ್ತು. ಸಮಾಜ ಸುಧಾರಣೆ ನಾಟಕಗಳನ್ನು ಪ್ರಸ್ತುತ ಪಡಿಸುತ್ತಿದ್ದ ಕಲಾವಿದರು ಬದುಕಿನ ಸುಧಾರಣೆಗೆ ಹೆಣಗುತ್ತಿದ್ದಾರೆ’ ಎಂದರು.

ಬಡತನಕ್ಕೂ ಕಲಾವಿದರಿಗೂ ಬಿಡದ ನಂಟು

ವರದಿ: ಸುವರ್ಣಾ ಬಸವರಾಜ್‌

ಹಿರಿಯೂರು: ‘ರಂಗಭೂಮಿ, ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಕಲಾವಿದರಿಗೆ ಬಡತನದ ಜತಗಿನ ನಂಟು ಇನ್ನೂ ಬಿಡಿಸಿಕೊಳ್ಳಲಾಗುತ್ತಿಲ್ಲ...’

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿರುವ ಹಿರಿಯೂರಿನ ಏಕನಾಥೇಶ್ವರಿ ಸಂಗೀತ ವಿದ್ಯಾಲಯದ ಪ್ರಾಂಶುಪಾಲ, ಸಂಗೀತ ವಿದ್ವಾನ್ ಆರ್.ತಿಪ್ಪೇಸ್ವಾಮಿ ಅವರ ನೋವಿನ ಮಾತುಗಳಿವು.

‘ನನ್ನ ತಾತ ರಂಗದ ಮೇಲೆ ರಾಗಾ– ತಾನಾ– ಪಲ್ಲವಿ ಹಾಡುವ ಮೂಲಕ ದೊಡ್ಡ ಹೆಸರು ಮಾಡಿದ್ದರು. ಆದರೆ, ಸಂಸಾರ ನಿರ್ವಹಣೆಗೆ ಕೂಲಿ ಅನಿವಾರ್ಯವಾಗಿತ್ತು. ನನ್ನ ತಾಯಿಯೂ ಕೂಲಿಯಿಂದ ನಮ್ಮನ್ನೆಲ್ಲ ಸಾಕಿದ್ದರು. ನಾನು ವಾಚ್ ರಿಪೇರಿ ಜತೆಗೆ ಸಂಗೀತಾಭ್ಯಾಸ ಮಾಡುತ್ತ ಮನೆಗೆ ಒಂದಿಷ್ಟು ನೆರವು ನೀಡುತ್ತಿದ್ದೆ. ನಮ್ಮದು ಬಡತನದ ಜತೆಗೆ ಸದಾ ನೆಂಟಸ್ತನ’ ಎಂದು ತಮ್ಮ ಬದುಕಿನ ಪುಟಗಳನ್ನು ಅವರು ಬಿಚ್ಚಿಡುತ್ತಾರೆ.

‘ಲಾಕ್‌ಡೌನ್‌ಗೂ ಮೊದಲು 85 ವಿದ್ಯಾರ್ಥಿಗಳು ಸಂಗೀತ ಕಲಿಯುತ್ತಿದ್ದರು. ಲಾಕ್‌ಡೌನ್ ಕಾರಣಕ್ಕೆ ಶಾಲೆ ಬಂದ್ ಆಯಿತು. ನನ್ನ ಮಗ ವಾಚ್ ರಿಪೇರಿ ಮಾಡುವ ಮೂಲಕ ಸಂಸಾರದ ಭಾರ ಹೊತ್ತಿದ್ದಾನೆ’ ಎನ್ನುತ್ತಾರೆ ತಿಪ್ಪೇಸ್ವಾಮಿ.

‘ಡಿಸೆಂಬರ್ ಮೊದಲ ವಾರದಲ್ಲಿ ಸಂಗೀತ ಜೂನಿಯರ್, ಸೀನಿಯರ್ ಮತ್ತು ವಿದ್ವತ್ ಪರೀಕ್ಷೆ ತೆಗೆದು ಕೊಂಡಿದ್ದ ಐದು ಮಕ್ಕಳಿಗೆ ಕಲಿಸುತ್ತಿದ್ದೆ. ಜ. 1ರಿಂದ ಐದಾರು ಮಕ್ಕಳ ತಂಡ ಮಾಡಿ ಸಂಗೀತ ಕಲಿಸಬೇಕೆಂದಿದ್ದೇನೆ. ಸಂಗೀತ ಕಲಿಸದೆಯೇ ಶುಲ್ಕ ಕೊಡಿ ಎನ್ನುವುದು ಎಷ್ಟರಮಟ್ಟಿಗೆ ಸರಿ? ಕಷ್ಟವೋ– ನಷ್ಟವೋ ಸಂಗೀತವೇ ನನ್ನ ಸರ್ವಸ್ವ. ಐದಾರು ತಿಂಗಳಿಂದ ಕಲಾವಿದರಿಗೆ ಬರುವ ಮಾಸಾಶನ ಕೂಡ ಬಂದಿಲ್ಲ’ ಎನ್ನುತ್ತಾರೆ ತಿಪ್ಪೇಸ್ವಾಮಿ.

ಆನ್‌ಲೈನ್‌ ತರಗತಿಯೂ ಅಸಾಧ್ಯ

ಪ್ರದರ್ಶಕ ಕಲೆಗಳನ್ನು ಆನ್‌ಲೈನ್‌ ಮೂಲಕ ಕಲಿಯುವುದು ಸವಾಲೇ ಸರಿ. ಶಾಲಾ ತರಗತಿಗಳೂ ಆನ್‌ಲೈನ್‌ನಲ್ಲೇ ನಡೆಯುತ್ತಿರುವ ಕಾರಣಕ್ಕೆ ನೃತ್ಯ ಹಾಗೂ ಸಂಗೀತ ತರಗತಿಗಳಿಗೆ ಪೋಷಕರು
ಒಲವು ತೋರುತ್ತಿಲ್ಲ.

‘ಆರಂಭದ ಕೆಲ ದಿನ ಆನ್‌ಲೈನ್‌ ತರಗತಿ ನಡೆಸಿದೆವು. ನೃತ್ಯವನ್ನು ಆನ್‌ಲೈನ್‌ ಮೂಲಕ ಕಲಿಯುವುದು ಕೊಂಚ ತ್ರಾಸದಾಯಕ. ಎಷ್ಟೇ ಸ್ಪಷ್ಟವಾಗಿ ಹೇಳಿದರೂ ಮನಮುಟ್ಟುವಂತೆ ಕಲಿಸಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದ ಆನ್‌ಲೈನ್‌ ತರಗತಿ ಅರ್ಧಕ್ಕೆ ನಿಂತುಹೋಯಿತು’ ಎನ್ನುತ್ತಾರೆ ಅಂಜನಾ ನೃತ್ಯಕಲಾ ಕೇಂದ್ರದ ವಿದುಷಿ ನಂದಿನಿ ಶಿವಪ್ರಕಾಶ್.

ಆನ್‌ಲೈನ್ ತರಗತಿಗೆ ಬಹುತೇಕರು ನಿತ್ಯ ಎರಡು ಜಿ.ಬಿ. ಡೇಟಾ ಪ್ಯಾಕ್‌ ಅಳವಡಿಸಿಕೊಂಡಿದ್ದಾರೆ. ಶಿಕ್ಷಣ ಸಂಸ್ಥೆಗಳು ನಡೆಸುವ ತರಗತಿ ಹಾಗೂ ಸಂಗೀತ, ನೃತ್ಯ ತರಗತಿಗಳಿಗೆ ಇದು ಸಾಕಾಗುತ್ತಿಲ್ಲ. ಹೀಗಾಗಿ, ಅನೇಕರು ಕಲೆಯ ಕಲಿಕೆಯನ್ನು ಮೊಟಕುಗೊಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು