ಬುಧವಾರ, ಮಾರ್ಚ್ 3, 2021
19 °C

ಸಾಧನೆ ಮೆರೆದ ಕೃಷ್ಣರೆಡ್ಡಿ

ಸಿ.ಎಸ್.ನಿರ್ವಾಣ ಸಿದ್ದಯ್ಯ Updated:

ಅಕ್ಷರ ಗಾತ್ರ : | |

Deccan Herald

ನನ್ಗೆ ನೆನಪಿರುವಂತೆ ಐದು ವರ್ಷದ ತನಕ ಎರಡು ಕಾಲುಗಳು ಚನ್ನಾಗಿಯೇ ಇದ್ದವು. ಪೋಲಿಯೊ ಬಂದು ಎರಡು ಕಾಲುಗಳ ಬಲ ಕಳೆದ್ಕೊಂಡೆ. ನಮ್ಮೂರು ಚಳ್ಳಕೆರೆ ತಾಲ್ಲೂಕಿನ ಮಲ್ಲೂರಹಳ್ಳಿ.

ಆಗ ಪೋಲಿಯೊಗೆ ಬಳ್ಳಾರಿ ಅಸತ್ರೆಯಲ್ಲಿ ಮಾತ್ರ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಅಲ್ಲಿಗೆ ಹೋದಾಗ ‘ಎಲೆಕ್ಟ್ರಿಕ್‌ ಶಾಕ್’ ಕೊಟ್ಟರೆ ಶೇಕಡಾ 25ರಷ್ಟು ಸರಿ ಹೋಗಬಹುದು ಎಂದು ಡಾಕ್ಟರ್ ಹೇಳಿದ್ದರಂತೆ. ಅಪ್ಪನಿಗೆ ಈ ಬಗ್ಗೆ ಅರಿವು ಇರಲಿಲ್ಲ. ಎಲೆಕ್ಟ್ರಿಕ್‌ ಶಾಕ್ ಅಂದ್ರೆ ವಿದ್ಯುತ್‍ನಿಂದ ಕೊಡ್ತಾರೆ ಅಂತ ಹೆದರಿ ಚಿಕಿತ್ಸೆ ಕೊಡಿಸಲಿಲ್ಲ.

ಏಕಾಂಗಿಯಾಗಿ ಮನೆಯ ಮೂಲೆಯಲ್ಲಿ ದಿನ ಕಳೆಯುತ್ತಿದ್ದ ನನ್ಗೆ ಬದುಕಿನ ಬಗ್ಗೆ ಬೇಸಾರವೊಂದು ಇಣುಕಿತ್ತು. ಎಲ್ಲರಂತೆ ನನ್ನ ಜೀವನ ಏಕಿಲ್ಲ ಎಂಬ ಸಂಕಟ ಕಾಡುತ್ತಿತ್ತು.  ಇದರಿಂದ ಪಾರಾಗಲು ಶಾಲೆಗೆ ಹೋಗಬೇಕೆಂದು ತೀರ್ಮಾನಿಸಿದೆ. ಮನೆ ಎದುರಿಗಿದ್ದ ಶಾಲೆಗೆ ನನ್ನನ್ನು ಅಪ್ಪ ಸೇರಿಸಿದರು. ನಿತ್ಯ ಅವರೇ ನನ್ನನ್ನು ಎತ್ತುಕೊಂಡು ಶಾಲೆಯಲ್ಲಿಕೂರಿಸುತ್ತಿದ್ದರು.

ಅಪ್ಪ ಕೂಲಿಗೆ ಹೋದಾಗ ಶಾಲೆಯ ಗೆಳೆಯರೇ ಬಂದು ಎತ್ತಿಕೊಂಡು ಹೋಗುತ್ತಿದ್ದರು. ಗೆಳೆಯರ ಸಹಕಾರ ಮತ್ತು ಉಪಧ್ಯಾಯರ ಪ್ರೀತಿಯಿಂದ ಏಳನೇಯ ತರಗತಿಯ ತನಕ ನನ್ನ ವಿದ್ಯಾಭ್ಯಾಸ ನಡೆಯಿತ್ತು. ಆದರೆ ಪ್ರೌಢಶಾಲೆಗೆ ನನ್ನೂರಿನಿಂದ ಏಳು ಕಿ.ಮೀ. ದೂರದಲ್ಲಿರುವ ನಾಯಕನಹಟ್ಟಿಗೆ ಹೋಗಬೇಕಾಗಿತ್ತು. ಹೇಗಾದರೂ ಸರಿ ಓದಲೇಬೇಕೆಂದು ನಿರ್ಧರಿಸಿ ನಾಯಕನಹಟ್ಟಿಯಲ್ಲಿದ್ದ ಪ್ರೌಢಶಾಲೆಗೆ ಸೇರಿದೆ.

ಬೆಳಿಗ್ಗೆ ಅರು ಗಂಟೆಗೆ ಬಸ್ಸು ಬರುತ್ತಿತ್ತು. ಕಂಡಕ್ಟರ್ ಒಳ್ಳೆಯವನು ಇದ್ದ. ನನ್ನನ್ನು ಮಗುತರ ಹೊತ್ತುಕೊಂಡು ಹೋಗಿ ಬಸ್ಸಿನಲ್ಲಿ ಕೂರಿಸುತ್ತಿದ್ದ. ನಾಯಕನಹಟ್ಟಿ ಬಸ್ಸು ನಿಲ್ದಾಣದಲ್ಲಿ ಇಳಿದು ನೆಲದ ಮೇಲೆ ತೆವಳಿಕೊಂಡು ಶಾಲೆಗೆ ಹೋಗುತ್ತಿದ್ದೆ. ವಾಹನಗಳ ಓಡಾಟ, ಹಸು- ದನಗಳ ನುಗ್ಗಾಟ ಇವುಗಳ ಮಧ್ಯ ನೆಲದಲ್ಲಿ ತೆವಳುವಾಗ ಮನಸ್ಸು ಸೊರಗಿ ಹೋಗುತ್ತಿತ್ತು. ಅದರಲ್ಲೂ ನೆಲದಲ್ಲಿ ತೆವಳುವಾಗ ಚಿಕ್ಕ ಚಿಕ್ಕ ಕಲ್ಲುಗಳು ಚರ್ಮಕ್ಕೆ ತಾಗಿ ನೋವಾದಾಗ ಮನಸ್ಸು ಮುದುರಿ ಹೋಗುತ್ತಿತ್ತು. ಶಾಲೆನೂ ಬೇಡ ಈ ಜೀವನನೂ ಬೇಡ ಎನಿಸುತ್ತಿತ್ತು.

ಆದರೆ ಕಲಿಯುವ ಹುಮ್ಮಸ್ಸು, ಕೆಚ್ಚು, ಆ ಇಲ್ಲ ನೋವುಗಳನ್ನು ಗೆಲ್ಲಿಸುತ್ತಿತ್ತು. ನನ್ನ ಒದ್ದಾಟ ನೋಡಿದ ಕಾಂಪೌಂಡ್ ಒಬ್ಬರು ಉಚಿತವಾಗಿ ಕೊಠಡಿಯೊಂದನ್ನು ನೀಡಿದರು.

ಎಸ್.ಎಸ್.ಎಲ್.ಸಿ ಯನ್ನು ಪ್ರಥಮ ಶ್ರೇಣಿಯಲ್ಲಿ ಪಾಸು ಮಾಡಿದೆ. ಮೂರು ವರ್ಷಗಳು ಪಟ್ಟ ಬವಣೆಗಳು, ಸುರಿಸಿದ ಕಣ್ಣೀರುಗಳು, ನೋವಿನಿಂದ ತತ್ತರಿಸಿದ ಘಳಿಗೆಗಳಿಗೆ ಇದು ಚೇತನವಾಯಿತ್ತು. ಕಾಲೇಜು ಹಲವು ಕಾರಣಗಳಿಂದ ನನಗೆ ಮುಚ್ಚಿದ ಬಾಗಿಲಾಯಿತ್ತು.

ಗೆಳೆಯರೆಲ್ಲ ಸೇರಿಕೊಂಡು ಕೆರೆಯಲ್ಲಿ ಈಜುತ್ತಿದ್ದರು. ದಡದಲ್ಲಿ ಕೂತ್ತಿದ್ದ ನನಗೆ ಅವರು ಈಜುತ್ತಿದ್ದ ಪರಿ, ಅವರು ಆಟವಾಡುತ್ತಿದ್ದ ಹಿಗ್ಗು, ಅವರ ಮನಸ್ಸಿನ ಉಲ್ಲಾಸಗಳನ್ನು ನೋಡಿ ನನ್ನನ್ನೇ ನಾನು ಮರೆತು ಬಿಟ್ಟೆ. ನನ್ಗೆ ಕಾಲು ಇಲ್ಲ ಎಂಬ ವಾಸ್ತವಿಕತೆಯನ್ನು ಮರೆತು ಕೆರೆಗೆ ಬಿದ್ದು ಬಿಟ್ಟೆ. ಗೆಳೆಯ ಅಬ್ಬುಲ್ ಗಫಾರ್ ನನ್ನ ಬದುಕಿಸಿದ. ಅವನ ಬಳಿ ಕಣ್ಣಿನಲ್ಲಿ ನೀರು ತುಂಬಿಕೊಂಡು ಈಜುವ ಆಸೆ ಇದೆ ಕಾಣೋ ಎಂದು ಹೇಳಿದೆ. ಆಗ ಅವನು ಸೊಂಟಕ್ಕೆ ಹಗ್ಗ ಕಟ್ಟಿ ಈಜುವುದನ್ನು ಕಲಿಸಿದ. ಅದೇ ನನ್ನ ಬದುಕಿನ ಸಾಧನೆಗೆ ಮೆಟ್ಟಲು.

1975ರಲ್ಲಿ ದೈಹಿಕ ಅಂಗವಿಕಲ ಸಂಸ್ಥೆಯು ಅಂಗವಿಕಲರಿಗೆ ವಿವಿಧ ತರಬೇತಿಯನ್ನು ಹಮ್ಮಿಕೊಂಡಿತ್ತು. ನಾನು ಆ ತರಬೇತಿಗೆ ಸೇರಿದೆ. ದಿನಕ್ಕೆ ಒಂದು ಹೊತ್ತಿನ ಊಟ ಕೊಟ್ಟು ಎರಡು ರೂಪಾಯಿ ಸಂಬಳ ನೀಡುತ್ತಿದ್ದರು. ನಿಜಕ್ಕೂ ಈ ಕೆಲಸದಿಂದ ನನ್ನಲ್ಲಿ ಹೊಸ ಹುರುಪು ಪುಟಿಯಿತ್ತು. ಬದುಕು ಯಾರ ಮೇಲೂ ಅವಲಂಬಿತವಾಗಲಿಲ್ಲ ಎನ್ನುವ ನೆಮ್ಮದಿ ಒಡಲಲ್ಲಿ ಉದಯವಾಯಿತ್ತು. ಇದೇ ಸಂಸ್ಥೆಯಿಂದ ಬಾಂಬೆಗೆ ತರಬೇತಿಗಾಗಿ ಹೊದೇವು. ಅಲ್ಲಿ ಈಜು ಸ್ಪರ್ಧೆ ಇತ್ತು.

ವೃತ್ತಿ ನಿರತ ತರಬೇತಿದಾರರಿಂದ ನನ್ಗೆ ಯಾವುದೇ ತರಬೇತಿ ಇರಲಿಲ್ಲ. ಅದರೂ ಒಂದು ಕೈ ನೋಡೋಣವೆಂದು ಈಜುವ ಸ್ಪರ್ಧೆಗೆ ಇಳಿದೆ. ತೃತೀಯ ಬಹುಮಾನವನ್ನು ಗಳಿಸಿದೆ. ಅಂದು ನಾನು ಈಜುವುದನ್ನು ನೋಡಿದ ಬಾಂಬೆಯ ಪ್ರಸಿದ್ದ ಈಜುಪಟು ಮುರುಳಿ ಕಾರ್ತಿಕ್ ಅವರು ಪ್ರೋತ್ಸಾಹದ ಮಾತುಗಳನ್ನು ಹೇಳಿದರು. ನನ್ನ ಬದುಕಿನಲ್ಲಿ ಅವರ ಮಾತುಗಳು ಈಜುವ ಬಗ್ಗೆ ನೂರೆಂಟು ಕನಸುಗಳ ಗರಿಯನ್ನು ಬಿಚ್ಚಿಸಿತ್ತು.

ಆದರೆ ಈ ಸಂಸ್ಥೆ ಬಾಗಿಲು ಹಾಕಿತ್ತು. ಏನು ಮಾಡಬೇಕೆಂದು ತೋಚದೇ ಮತ್ತೆ ಊರಿಗೆ ಹೋದೆ. ಕೈಯಲ್ಲಿ ಕೆಲಸವಿಲ್ಲ. ಮುಂದಿನ ಬದುಕು ಹೇಗೆಂಬ ಕತ್ತಲೆ, ಸಹಿಸಲು ಸಾಧ್ಯವಾಗದೇ ಅತ್ಮಹತ್ಯೆಗೆ ಪ್ರಯತ್ನ ಪಟ್ಟೆ. ಆದರೆ ದೇವರು ನನ್ನ ಉಳಿಸಿದ. ಮತ್ತೆ ಸಂಸ್ಥೆಯು ಪ್ರಾರಂಭವಾಯಿತ್ತು. ನನ್ನನ್ನು ಕೆಲಸಕ್ಕೆ ಕರೆದ್ರು. ಪುಣೆಯಲ್ಲಿ ಆ ವರ್ಷ ರಾಷ್ಟ್ರೀಯ ಅಂಗವಿಕಲ ಕ್ರೀಡಾ ಕೂಟವನ್ನು ಅಯೋಜಿಸಲಾಗಿತ್ತು. ಈಜುವ ಸ್ಪರ್ಧೆಯಲ್ಲಿ ಭಾಗವಹಿಸಿ ಎರಡು ಚಿನ್ನವನ್ನು, ಗುಂಡು ಎಸೆತದಲ್ಲಿ ದ್ವಿತೀಯ ಬಹುಮಾನ ಪಡೆದೆ.  ಇವು ನನ್ನ ಬದುಕಿನ ಅವಿಸ್ಮರಣೀಯ ಕ್ಷಣಗಳು.

ಎಚ್.ಎ.ಎಲ್.ನಿಂದ ಕೆಲಸಕ್ಕಾಗಿ ಮೂರು ಬಾರಿ ಸಂದರ್ಶನ ಬಂತು. ಎಲ್ಲ ಪಾಸು ಅಗುತ್ತಿತ್ತು. ಆದರೆ ಮಡಿಕಲ್‍ನಲ್ಲಿ ಅನುತೀರ್ಣವಾಗುತ್ತಿದ್ದೆ. ಅದಕ್ಕೆ ಡಾಕ್ಟರ್ ಕೊಡುತ್ತಿದ್ದ ಕಾರಣ, ಹೆಚ್ಚು ಹೊತ್ತುಗಳ ಕಾಲ ಇವರು ಕೆಲಸ ಮಾಡಲಾರರು ಎಂದು.

ಕೊನೆಯ ಬಾರಿ ರಾಜು ಮಹೇಂದ್ರ ಎನ್ನುವರು ಒಂದು ಅವಕಾಶ ಕೊಟ್ಟು ನೋಡೋಣ. ಕೆಲಸ ಮಾಡಲ್ಲ ಅಂದರೆ ತೆಗೆದು ಬಿಡೋಣ ಎಂದು ಕೆಲಸಕ್ಕೆ ತೆಗೆದು ಕೊಂಡರು. ಈ ಕೆಲಸವನ್ನು ಸವಾಲಾಗಿ ತೆಗೆದು ಕೊಂಡೆ. ನಿರಂತರವಾಗಿ ಕೆಲಸ ಮಾಡುತ್ತ ಹೋದೆ. ಹನ್ನೇರಡು ಗಂಟೆಗಳ ಕಾಲ ಕೆಲಸ ಮಾಡಿದೆ. ಇಡೀ ಅಧಿಕಾರಿ ವರ್ಗ ಅಚ್ಚರಿಗೊಂಡಿತ್ತು. 1991ರಲ್ಲಿ ರಾಷ್ಟ್ರೀಯ ಸಮರ್ಥ ಅಂಗವಿಕಲ ನೌಕರ ಪ್ರಶಸ್ತಿ ನನಗೆ ಬಂತು.

ಬದುಕು ಎಂದಿಗೂ ಬಾಳಲಾರದಷ್ಟು ಹೊರೆಯಾಗಿರುವುದಿಲ್ಲ. ಹೇಗೆ ಇದ್ದರೂ ಸುಂದರವಾಗಿ ಬಾಳಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು