ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೂರ್ತ ಸೌಂದರ್ಯಕ್ಕೆ ಅನಂತಭಾವ

Last Updated 4 ಜನವರಿ 2020, 19:30 IST
ಅಕ್ಷರ ಗಾತ್ರ
ADVERTISEMENT
""
""

ಮಹಾಕವಿ ಕಾಳಿದಾಸ ಯಕ್ಷನೋರ್ವನ ವಿರಹಶೃಂಗಾರವನ್ನು ತನ್ನ ಕಾವ್ಯದ ವಸ್ತುವನ್ನಾಗಿಸಿಕೊಂಡ ರೀತಿ ಅಮೋಘ. ಅವನ ಮೇಘದೂತದಲ್ಲಿ ಮೋಡಗಳು ವಿರಹಿಗಳ ನಡುವಿನ ಸಂವಹನ ಮಾಧ್ಯಮಗಳಾಗಿ ಪ್ರೇಮಸಂದೇಶ ನೀಡಿದವು. ಅಸ್ಪಷ್ಟ ಆಕಾರದಿಂದ ಕೂಡಿದ ಚಲಿಸುವ ಮೋಡಗಳು ಇಲ್ಲಿ ಅಮೃತ ಪ್ರೇಮದ ದ್ಯೋತಕ. ಶೃಂಗಾರ ಚಿತ್ರಣದ ಮುಖ್ಯ ಆಕರ್ಷಣೆಗಳು ಈ ಮೋಡಗಳು. ಕಾವ್ಯಕ್ಕೆ ‘ಮೇಘದೂತ’ವೆಂದು ಹೆಸರಿಸುವ ಮಟ್ಟಿಗೆ ಮೋಡಗಳ ಪಾತ್ರ ಆತ್ಯಂತಿಕ. ಅಲ್ಲಿಗೆ ಕವಿ ಪ್ರತಿಭೆಗೆ ದಕ್ಕಿದ ಅಮೂರ್ತ ಕಲ್ಪನೆಯೊಂದು ಕಾವ್ಯದ ಸಂದರ್ಭವನ್ನು ಆಪ್ಯಾಯಮಾನವಾಗಿಸಿತು ಎಂದರೆ ಅತಿಶಯವಲ್ಲ.

ನವ್ಯಕಲೆಯಲ್ಲಿ ‘ಅಮೂರ್ತ’ದ ಪ್ರಪಂಚ ಬಲು ವಿಸ್ತಾರ. ಅದರ ಗ್ರಹಿಕೆ-ನಿರೂಪಣೆಗಳಿಗೆ ಹಲವು ಆಯಾಮಗಳು. ನೋಡುಗನ ನೋಟಕ್ಕೆ ಹಲವು ಸಾಧ್ಯತೆಗಳನ್ನು ಒದಗಿಸುವ ಅಮೂರ್ತವು ನಿರ್ದಿಷ್ಟ ರೂಪ-ಆಕಾರವಿಲ್ಲದ ಅಸ್ಪಷ್ಟ ಆಕೃತಿಗಳಲ್ಲಿ ರಚಿಸಲ್ಪಡುವ ಕಲೆ. ಅದರ ವಿಷಯ, ಧ್ವನಿಗಳೂ ಕೂಡ ಅಸ್ಪಷ್ಟ. ನಾಟಕ ಕಲೆಯಲ್ಲಿ ಅಸಂಗತ ನಾಟಕವಿದ್ದಂತೆ. ಕತೆ, ವಸ್ತು, ಪಾತ್ರ-ಹೀಗೆ ಏನೇ ಇದ್ದರೂ ಅಸ್ಪಷ್ಟ. ಹೀಗಿದ್ದರೂ ಈ ಅಮೂರ್ತ ಕಲೆ ತನ್ನದೇ ಆದ ಸಹಜ ನಿರೂಪಣೆಯಿಂದ ಸಮುದಾಯದ ಅನೇಕ ಸಂಗತಿಗಳಲ್ಲಿ ಹಾಯ್ದು ಹೋಗಬಲ್ಲದು. ಉದ್ದೇಶಿತ ಸಂದೇಶ ನೀಡಬಲ್ಲದು. ಈ ಕಲೆ ಸೌಂದರ್ಯದ ನೆಲೆಯಲ್ಲಿ ಸೃಜಿತವಾದಾಗ್ಯೂ ಕೊನೆಗೊಮ್ಮೆ ಸಹೃದಯನ ಭಾವಕ್ಕೆ ಮುಕ್ತವಾಗಿ ತೆರೆದುಕೊಳ್ಳುವ ಮೌಲ್ಯ ಹೊಂದಿರುವುದು ಗಮನಾರ್ಹ.

ಕಲಾವಿದನ ಉತ್ಕಟ ಭಾವಗಳು ವೇಗದ ಅಭಿವ್ಯಕ್ತಿ ಪಡೆದಾಗ ಅಮೂರ್ತ ಕಲೆ ಸಹಜವಾಗಿಯೇ ರೂಪಗೊಳ್ಳುತ್ತದೆ. ಇದರ ಅಪ್ರಜ್ಞಾಪೂರ್ವಕ ಅಭಿವ್ಯಕ್ತಿಯಲ್ಲಿ ಸಂಕೀರ್ಣತೆ ಹಾಗೂ ನಿಖರತೆಗಳ ಗೋಜಿಲ್ಲ.

ಲೇಖಕರೇ ರಚಿಸಿದ ಅಮೂರ್ತ ಕಲಾಕೃತಿಗಳು

ಅಂತರಂಗದ ಭಾವಗಳೇ ಹೆಚ್ಚು ವಿಸ್ತಾರವಾಗುವ ಈ ಅಭಿವ್ಯಕ್ತಿಯಲ್ಲಿ ಬಣ್ಣಗಳದ್ದೇ ಪ್ರಧಾನ ಪಾತ್ರ. ಆಡಂಬರದ ಅತಿರೇಕಗಳಾಗಲೀ ನಿಯೋಜಿತ ವ್ಯಾಕರಣದ ಹೆಣಿಕೆಯಾಗಲೀ ಈ ಅಮೂರ್ತಕ್ಕಿಲ್ಲ. ಅಂತೆಯೇ, ಯಾವುದೇ ಸಂಪ್ರದಾಯಿಕ ಕಟ್ಟಳೆಗೆ ಅಂಟಿಕೊಳ್ಳದೆ ಚಲನಶೀಲವಾಗಿ ದೇಶ-ಕಾಲಗಳೆಂಬ ಸಂದರ್ಭಗಳಲ್ಲಿಯೂ ಸ್ಥಾಯಿಯಾದುದು.

ಲೋಕದ ವಿಷಯಗಳನ್ನು ಯಥಾವತ್ತಾಗಿ ರೂಪಿಸದೆ, ಇದಮಿಥ್ಯಂ-ಎಂದು ಒಂದೇ ಗತಿಗೆ ನಿಲ್ಲಿಸದೆ ಅನಂತಭಾವಗಳಿಗೆ ಎಡೆಮಾಡಿಕೊಡುವ ಅಮೂರ್ತಕಲೆಯು ಬಹುತ್ವದ ಆಶಯಕ್ಕೆ ತೆರೆದುಕೊಳ್ಳುವಂತಹದ್ದು. ಅಂತೆಯೇ ಇದು ಸಮಕಾಲೀನದಲ್ಲಿ ನವ್ಯಕಲೆಯಾಗಿ ಹೆಚ್ಚು ಜನಪ್ರಿಯ.

ಭಾವಮುದ್ರತಾ ಪಂಥ (Impressionism) ಹಾಗೂ ಪಿಕಾಸೊನ ಘನಾಕೃತಿ ಪಂಥದ (cubism) ಕೆಲ ಅಂಶಗಳನ್ನು ಒಳಗೊಳ್ಳುತ್ತಲೇ ಅಮೂರ್ತ ಕಲೆ ಕಾಲಕ್ರಮೇಣ ಅವುಗಳಿಂದ ಹೊರಬಂದು, ತನ್ನದೇ ಆದ ಹೊಸಹಾದಿ ಹಿಡಿಯಿತು. ಮೊದಮೊದಲು ಅಷ್ಟೊಂದು ಜನರ ಮೆಚ್ಚುಗೆ ಪಡೆಯಲಿಲ್ಲ. ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ಪ್ಯಾರೀಸ್‌ನಲ್ಲಿ ಕಲೆಯ ಕುರಿತಾಗಿ ಹಲವಾರು ಪ್ರದರ್ಶನಗಳು, ಚಚೆ೯, ವಿಮರ್ಶೆಗಳು ನಡೆದವು. ಪರಿಣಾಮವಾಗಿ ಅಂದು ನವ್ಯಕಲೆಯಾಗಿ ರೂಪತಳೆದು ಜನಪ್ರಿಯವಾಯಿತು. ವಿಮರ್ಶಕರ ಅರ್ಥ, ಗ್ರಹಿಕೆಗಳು ಈ ಕಲೆಗೆ ಹೊಸ ಭಾಷ್ಯ ಬರೆದವು. ಇದರಿಂದಾಗಿ ಅಸ್ಪಷ್ಟ ಕಲೆಯೊಂದು ಸ್ಪಷ್ಟರೂಪ ಪಡೆಯಿತು.

ಲೇಖಕರೇ ರಚಿಸಿದ ಅಮೂರ್ತ ಕಲಾಕೃತಿಗಳು

ಕಲಾವಿದನ ಅಂತಃಶಕ್ತಿಯ ಆಂತರ್ಯದಲ್ಲಿ ಬಣ್ಣಗಳು ವಿಶೇಷ ಅರ್ಥವನ್ನು ಪಡೆದು ಕಲಾತ್ಮಕವಾಗಿ ಪ್ರಕಟಗೊಳ್ಳುತ್ತವೆ. ಅಲ್ಲದೆ, ಕೆಲವು ಸಂಕೇತಗಳಲ್ಲಿ ವ್ಯಾಪಕ ಅರ್ಥವನ್ನು ಹಿಡಿದಿಡುತ್ತವೆ -ಎಂದು ಅಮೂರ್ತ ಕಲೆಯ ಜನಕ ಎಂದೇ ಹೆಸರಾದ ರಷ್ಯಾದ ಪ್ರಮುಖ ಕಲಾವಿದ, ವಿಮರ್ಶಕ ವ್ಯಾಲಿಸ್ ಕ್ಯಾಂಡಿನ್ ಸ್ಕಿ ತನ್ನ ಅಭಿಪ್ರಾಯವನ್ನು ಮೊದಲು ಪ್ರಕಟಿಸಿದ. ಅವನ ವಿಚಾರ ಸರಣಿಯಲ್ಲಿ ಅಮೂರ್ತವು ಸಂಗೀತದ ಆಲಾಪಗಳಿಗೆ ಆರೋಪಿತ (ಹೋಲಿಕೆ)ವಾಗಿದೆ. ಲಯ, ತಾಳಗಳ ಏರಿಳಿತಗಳಂತೆ ಬಣ್ಣಗಳ ಹೊಯ್ದಾಟ ಹಾಗೂ ಅವುಗಳ ನಿರೂಪಣೆಗಳು ಸ್ವಚ್ಛಂದವಾದ ಸೌಂದರ್ಯದ ಅನುಭೂತಿಗೆ ಕೊಂಡೊಯ್ಯುತ್ತವೆ. ಕ್ಯಾಂಡಿನ್ ಸ್ಕಿಯ ಈ ಅಭಿಪ್ರಾಯವು ಅಂದು ಕ್ರಾಂತಿಕಾರಿಯಾಗಿದ್ದರೂ ಎಲ್ಲರೂ ಒಪ್ಪುವಂತಿತ್ತು. ಅಂತೆಯೇ ರಷ್ಯಾ ಮಾತ್ರವಲ್ಲದೇ ಯುರೋಪಿನ ಹಾಲೆಂಡ್, ಫ್ರಾನ್ಸ್ ಮುಂತಾದ ಕಡೆಗಳಲ್ಲಿ ಹಬ್ಬಿತು.

ಸಮಕಾಲೀನದಲ್ಲಿ ಅಮೂರ್ತಕಲೆಯು ಅನೇಕ ವಿಷಯಗಳನ್ನು ಒಳಗೊಳ್ಳುತ್ತಿದೆ. ನಿಸರ್ಗ ಚಿತ್ರಣದಲ್ಲಿ ಬೀಸುವ ಗಾಳಿಯಲ್ಲಿ ಅರಣ್ಯದ ದೃಶ್ಯ, ಜ್ವಾಲಾಮುಖಿ, ಅಗ್ನಿದುರಂತ, ಹರಿಯುವ ನದಿ, ಜಲಪಾತ -ಹೀಗೆ ಅನೇಕ ನಿಸರ್ಗದ ಘಟನೆಗಳನ್ನು ಸುಲಭದಲ್ಲಿ ಅಮೂರ್ತವಾಗಿ ಚಿತ್ರಿಸಬಹುದು. ಇಂದಿನ ರಾಜಕೀಯ, ಸಾಮಾಜಿಕ, ಘಟನಾವಳಿಗಳನ್ನು ಈ ಕಲೆಯಲ್ಲಿ ಕೆಲವೇ ಸಂಕೇತಗಳ ಮುಖೇನ ರಚಿಸಬಹುದು. ಯುದ್ಧ, ಶಾಂತಿ -ಮುಂತಾದ ವಿಷಯಗಳನ್ನು ಈ ಕಲೆಯಲ್ಲಿ ತರುವುದು ಸುಲಭಸಾಧ್ಯ. ಹಲವಾರು ಕತೆ -ಕಾದಂಬರಿಯ ಒಟ್ಟುಗ್ರಹಿಕೆಯ ದ್ಯೋತಕವಾಗಿ, ಅವುಗಳ ಆಶಯಕ್ಕೆ ತಕ್ಕಂತೆ ಅಮೂರ್ತವನ್ನು ಬಳಸಿಕೊಳ್ಳಬಹುದು. ಅಷ್ಟೇ ಅಲ್ಲದೆ ಭಾವಗೀತೆಗಳ ಆಂತರ್ಯದ ಭಾವಗಳಿಗೆ ಒಂದು ಬಗೆಯ ದೃಶ್ಯಭಾಷೆಯನ್ನು ಈ ಅಮೂರ್ತ ಕಲೆ ಒದಗಿಸಬಲ್ಲದು.

ಚಲಿಸುವ ಮೋಡಗಳಲ್ಲಿ, ಭೋರ್ಗರೆಯುವ ಕಡಲ ಅಲೆಗಳಲ್ಲಿ, ಪರ್ವತ, ಗಿರಿ-ಬೆಟ್ಟಗಳಲ್ಲಿ ರಚಿತವಾದ ಬಣ್ಣ-ವಿನ್ಯಾಸಗಳಲ್ಲಿ ಸಹಜವಾಗಿಯೇ ಆಕಾರಮುಕ್ತವಾದ ಸೌಂದರ್ಯವನ್ನು ಕಾಣಬಹುದು. ಇದು ನಿಸರ್ಗ ನಿರ್ಮಿತಿಯಲ್ಲಿ ಕಾಣಸಿಗುವ ಅಮೂರ್ತ ಕಲೆ!

ಅಮೂರ್ತ ಕಲೆಯು ಒಮ್ಮೊಮ್ಮೆ ಅದೆಷ್ಟೇ ವಿಷಯಕ್ಕೆ ಸೀಮಿತವಾಗಿ ರೂಪ ಪಡೆದರೂ ಶೀರ್ಷಿಕೆಗಳ ಅಡಿಯಲ್ಲಿ ಗುರುತಿಸಲ್ಪಟ್ಟರೂ ಅದು ತನ್ನ ಸರಳ -ಸಹಜ ರೂಪಗಳಿಂದ ವಿಷಯಾತೀತ. ಶೀರ್ಷಿಕೆಗೇನೇ ಒಂದು ಬಗೆಯ ಮೌಲ್ಯ ತಂದುಕೊಡುವಷ್ಟರ ಮಟ್ಟಿಗೆ ಅಮೂರ್ತವು ಅನಿರ್ವಚನೀಯ.

ಅಮೂರ್ತದ ಕುರಿತು ಗಹನವಾಗಿ ಹೇಳುವುದಾದರೆ, ಇದು ಅಲ್ಲಮನ ಬಯಲು-ಶೂನ್ಯ ಭಾವಗಳಲ್ಲಿ ಅಡಗಿರುವ ಪೂರ್ಣತೆಯ ತತ್ವದಂತೆ. ಶರೀಫ್ ಸಾಹೇಬರ ಅಡಿ, ಗಣ, ಪ್ರಾಸಕೆ ನಿಲುಕದ ಪದದಂತೆ. ನೋಡುಗನ ಭಾವವನ್ನು ವಿಸ್ತಾರದ ನೆಲೆಗೆ ಕೊಂಡೊಯ್ಯಬಲ್ಲದು. ಅಣುವನ್ನು ಮಹತ್ತಾಗಿಸುವ ಮತ್ತು ಮಹತ್ತರವಾದುದನ್ನು ಅಣುರೂಪ (ಸೂತ್ರರೂಪ)ದಲ್ಲಿ ಹಿಡಿದಿಡುವ ಪ್ರಕ್ರಿಯೆಯಲ್ಲಿ ಅಮೂರ್ತದ್ದು ಸಿಂಹಪಾಲು. ಅಲ್ಲಿ ಸೌಂದರ್ಯದ ಸ್ಫುರಣವೂ ಸಹಜ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT