ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಾರನ ಪ್ರಶ್ನೆ (ಭಾನುವಾರದ ವಿಶೇಷ)

ಅಕ್ಷರ ಗಾತ್ರ

ಬುದ್ಧರು ಕೇಳಿದ ಹತ್ತು ಪ್ರಶ್ನೆಗಳಿಗೆ ಬಾಲಕ ಸೋಪಾಕನು ನೀಡಿರುವ ಉತ್ತರಗಳು ’ಕುಮಾರ ಪನ್ಹ‘ ಎಂದೇ ಪ್ರಸಿದ್ಧವಾಗಿದೆ. ಕನ್ನಡದಲ್ಲಿ ‘ಆಸೆಯೇ ದುಃಖಕ್ಕೆ ಕಾರಣ’ ಎಂಬ ಪ್ರಸಿದ್ಧ ಸರಳ ಹೇಳಿಕೆಯೊಂದಿದೆ. ಅದು ಸಮರ್ಪಕವಾದುದಲ್ಲ. ಪಾಲಿಯ ತನ್ಹಾ ಎಂಬ ಪದಕ್ಕೆ ಆಸೆ ಸಂವಾದಿಯಲ್ಲ.

‘ಖುದ್ದಕ ನಿಕಾಯ’ ಎನ್ನುವುದು ತ್ರಿಪಿಟಕಗಳಲ್ಲಿ ಸಂಗ್ರಹವಾಗಿರುವ ಒಂದು ಗ್ರಂಥ. ಅದರಲ್ಲಿ ಬರುವ ‘ಕುಮಾರ ಪನ್ಹ ಸುತ್ತ’ದಲ್ಲಿ ಬುದ್ಧ ಮಕ್ಕಳಿಗೆ ಧರ್ಮವನ್ನು ಕಲಿಸುವ ಬೋಧನಾ ವಿಧಾನ ಕುತೂಹಲಕಾರಿಯಾಗಿದೆ. ಒಂದು ಯಾವುದು, ಎರಡು ಯಾವುದು ಎಂಬ ಪ್ರಶ್ನೆಗಳಿಗೆ ಸರಿಯಾದ ಉತ್ತರ ಕೊಡಲು ಇಡೀ ಬೌದ್ಧಧರ್ಮದ ಸಾರವನ್ನು ಕರಗತ ಮಾಡಿಕೊಂಡಿರಬೇಕಾಗುತ್ತದೆ. ಆ ಕಥೆ ಹೀಗಿದೆ.

ಸೋಪಾಕ ಅಸ್ಪೃಶ್ಯ ಜಾತಿಗೆ ಸೇರಿದ ಒಬ್ಬ ಬಾಲಕ. ವಾಡಿಕೆಯಂತೆ ಅವನ ತಂದೆ- ತಾಯಿ ಊರಿನ ಹೊರಗೆ ವಾಸಿಸುತ್ತಿದ್ದರು. ಊರನ್ನು ಸ್ವಚ್ಛಗೊಳಿಸುವುದು, ಸತ್ತ ಪ್ರಾಣಿಗಳನ್ನು ಹೊರಗೆ ಸಾಗಿಸುವುದು, ಅವುಗಳ ಚರ್ಮ ಸುಲಿದು ಚಪ್ಪಲಿಗಳನ್ನು ತಯಾರಿಸುವುದು ಮುಂತಾದ ಕೆಲಸಗಳನ್ನು ಮಾಡಿ ಜೀವನ ಸಾಗಿಸುತ್ತಿದ್ದರು.

ಸೋಪಾಕನಿಗೆ ಏಳು ವರ್ಷವಾಗಿದ್ದಾಗ ಇದ್ದಕ್ಕಿದ್ದಂತೆ ಅವನ ತಂದೆ ಸಾವಿಗೀಡಾದನು. ಕೆಲವು ದಿನಗಳ ನಂತರ ಅವನ ತಾಯಿ ಬೇರೊಬ್ಬನನ್ನು ಮದುವೆಯಾದಳು. ಆ ಮಲತಂದೆಗೆ ಸೋಪಾಕನನ್ನು ಕಂಡರೆ ಅಸೂಯೆ. ತನ್ನ ಹೆಂಡತಿಯು ಮಗನ ಕಡೆಗೆ ಹೆಚ್ಚು ಗಮನ ಕೊಡುತ್ತಿರುವುದನ್ನು ಸಹಿಸಲಾಗದೆ ಆ ಹುಡುಗನನ್ನು ದಿನವೂ ಹೊಡೆದು ಬಡಿದು ಚಿತ್ರಹಿಂಸೆ ಕೊಡುತ್ತಿದ್ದ. ತಾಯಿ ತುಂಬಾ ನೊಂದುಕೊಳ್ಳುತ್ತಿದ್ದಳು. ಆದರೆ, ಅಸಹಾಯಕಳಾಗಿದ್ದಳು.

ಮಲತಂದೆಗೆ ಇವನನ್ನು ಶಾಶ್ವತವಾಗಿ ಇಲ್ಲವಾಗಿಸಿಬಿಡಬೇಕೆನಿಸಿತು. ಒಂದು ದಿನ ಸೋಪಾಕನನ್ನು ಹತ್ತಿರ ಕರೆದು ‘ಊರ ಹೊರಗೆ ಸುತ್ತಾಡಿಕೊಂಡು ಬರೋಣ ಬಾ’ ಎಂದ. ಹುಡುಗನಿಗೆ ಆಶ್ಚರ್ಯವಾಗಿ ನನ್ನ ಮಲತಂದೆ ಬದಲಾಗಿದ್ದಾನೆ ಎಂದು ಸಂತೋಷದಿಂದ ಜೊತೆಗೂಡಿ ಹೊರಟ. ಆದರೆ ಆ ದುಷ್ಟ, ಬಾಲಕನನ್ನು ಊರ ಹೊರಗಿನ ಸ್ಮಶಾನಕ್ಕೆ ಕರೆದೊಯ್ದು ವಿಕಾರವಾಗಿ ಬಿದ್ದಿದ್ದ ಒಂದು ಹೆಣಕ್ಕೆ ಕಟ್ಟಿಹಾಕಿ ಹೊರಟುಬಿಟ್ಟ. ಹುಡುಗ ಹೆದರಿದ, ಊಳಿಡುತ್ತಿದ್ದ ತೋಳಗಳು ತನ್ನನ್ನು ತಿನ್ನಬಹುದೆಂದು ಭಾವಿಸಿ ಭಯಭೀತನಾಗಿ ಕಿರುಚುತ್ತಾ ರಾತ್ರಿಯನ್ನು ಕಳೆದ.

ಅವನ ಆಕ್ರಂದನವನ್ನು ಕೇಳಿ ಯಾರೋ ಪುಣ್ಯಾತ್ಮರು ಅಪೂರ್ವವಾದ ಬೆಳಕನ್ನು ಪಸರಿಸುತ್ತಾ ಹತ್ತಿರ ಬರುತ್ತಿರುವಂತೆ ಕಾಣಿಸಿತು. ಬ್ರಾಹ್ಮೀಮುಹೂರ್ತವನ್ನು ಬೌದ್ಧರು ‘ಮಹಾಕರುಣಾಸಮಾಪತ್ತಿ ಕಾಲ’ ಎಂದು ಕರೆಯುತ್ತಾರೆ. ಆ ಸಮಯದಲ್ಲಿ ಬುದ್ಧ ಲೋಕವನ್ನು ಅವಲೋಕಿಸುತ್ತಾರೆ ಎಂಬ ಪ್ರತೀತಿ ಇದೆ.ಬುದ್ಧ ಸೋಪಾಕನ ದುರ್ದೆಸೆಯನ್ನು ಕಂಡು ಅಲ್ಲಿಗೆ ಧಾವಿಸಿರುತ್ತಾರೆ. ಬಾಲಕನಿಗೆ ಮರುಜೀವ ಬಂದಂತಾಗುತ್ತದೆ. ಅಕ್ಕರೆಯಿಂದ ಮೈದಡವಿ ‘ಜೇತವನಕ್ಕೆ ಬರುವೆಯಾ’ ಎಂದು ಕರೆಯುತ್ತಾರೆ. ಬಾಲಕ ಹಿಂಬಾಲಿಸುತ್ತಾನೆ.

ಜೇತವನಕ್ಕೆ ಬಂದಮೇಲೆ ಹರ್ಷಚಿತ್ತನಾಗಿದ್ದ ಸೋಪಾಕನನ್ನು ನೋಡಿ ಬುದ್ದರು, ‘ನೀನು ನಿನ್ನ ಮುಂದಿನ ಜೀವನವನ್ನು ಭಿಕ್ಕುವಾಗಿ ಕಳೆಯಲು ಇಚ್ಛಿಸುವೆಯಾ?’ ಎಂದು ಕೇಳುತ್ತಾರೆ. ಅವನು ಆಗಲಿ ಎನ್ನುತ್ತಾನೆ. ಬುದ್ಧ ಧಮ್ಮೋಪದೇಶವನ್ನು ನೀಡಿದ ನಂತರ ಏಳು ವರ್ಷದ ಬಾಲಕನಿಗೆ ಜ್ಞಾನೋದಯವಾಗುತ್ತದೆ. ಅತ್ಯಂತ ಕಿರಿಯ ವಯಸ್ಸಿನಲ್ಲಿಯೆ ಅರಹಂತನೆನಿಸಿಕೊಳ್ಳುತ್ತಾನೆ.

ಮುಂದೊಮ್ಮೆ ಬುದ್ಧರು ಕೇಳಿದ ಹತ್ತು ಪ್ರಶ್ನೆಗಳಿಗೆ ಬಾಲಕ ಸೋಪಾಕನು ಈ ಕೆಳಗಿನಂತೆ ಉತ್ತರಿಸುತ್ತಾನೆ. ಇದು ಕುಮಾರ ಪನ್ಹ ಎಂದು ಪ್ರಸಿದ್ಧವಾಗಿದೆ.

1. ಯಾವುದು ಒಂದು?

ಎಲ್ಲ ಜೀವಿಗಳು ತಮ್ಮ ಜೀವರಕ್ಷಣೆಗಾಗಿ ಅವಲಂಬಿಸಿರುವ ಆಹಾರ.

2. ಯಾವುದು ಎರಡು?

ಜೀವಿಗಳು ನಾಮ ಮತ್ತು ರೂಪ ಎಂಬ ಎರಡರಿಂದ ಸೃಷ್ಟಿಯಾಗಿವೆ.

3. ಯಾವುದು ಮೂರು?

ಧಮ್ಮದ ಮೂರು ಆಧಾರ ಸ್ತಂಭಗಳಾದ ಅನಿಚ್ಛ, ದುಃಖ, ಅನತ್ತ.

4. ಯಾವುದು ನಾಲ್ಕು?

ಮನುಷ್ಯರನ್ನು ಋಜುಮಾರ್ಗದಲ್ಲಿ ಕೊಂಡೊಯ್ಯುವ ನಾಲ್ಕು ಆರ್ಯಸತ್ಯಗಳು.

5. ಯಾವುದು ಐದು?

ರೂಪ, ವೇದನೆ, ಗ್ರಹಿಕೆ, ಸಂಖಾರ ಮತ್ತು ಪ್ರಜ್ಞೆಗಳೆಂಬ ಪಂಚಸ್ಕಂದಗಳು.

6. ಯಾವುದು ಆರು?

ಬಾಹ್ಯಲೋಕದ ಅರಿವು ಮೂಡಿಸುವ ಪಂಚೇಂದ್ರಿಯಗಳು ಮತ್ತು ಮನಸ್ಸು

7. ಯಾವುದು ಏಳು?

ಭಿಕ್ಕುಗಳು ತಮ್ಮ ಸಾಧನೆಯ ಹಾದಿಯಲ್ಲಿ ಅಳವಡಿಸಿಕೊಳ್ಳಬೇಕಾದ ಸಪ್ತ ಬೋಧಿ ಅಂಗಗಳು

8. ಯಾವುದು ಎಂಟು?

ನಿಬ್ಬಾಣಕ್ಕೆ ದಾರಿ ತೋರುವ ಅಷ್ಟಾಂಗಿಕ ಮಾರ್ಗ

9. ಯಾವುದು ಒಂಬತ್ತು?

ಜೀವಿಗಳ ಅಸ್ತಿತ್ವವಿರುವ ಒಂಬತ್ತು ಲೋಕಗಳು

10. ಯಾವುದು ಹತ್ತು?

ಅರಹಂತ ಪದವಿಗೇರಿಸುವ ದಶಪಾರಮಿಗಳು

ಮೇಲ್ನೋಟಕ್ಕೆ ಇವು ಸರಳವಾದ ಉತ್ತರಗಳಂತೆ ಕಂಡರೂ ಇಡೀ ಬೌದ್ಧಧರ್ಮದ ಸಾರಸತ್ವವೇ ಈ ಉತ್ತರಗಳಲ್ಲಿ ಅಡಗಿದೆ. ಅವುಗಳನ್ನು ಸಂಕ್ಷಿಪ್ತವಾಗಿ ಹೀಗೆ ವಿವರಿಸಬಹುದು.

1. ಆಹಾರ: ಜೀವರಕ್ಷಣೆಗಾಗಿ ಬುದ್ಧ ನಾಲ್ಕು ರೀತಿಯ ಆಹಾರವನ್ನು ಕುರಿತು ಹೇಳುತ್ತಾರೆ. ಎಲ್ಲ ಜೀವಿಗಳೂ ಅವಲಂಬಿಸಿರುವ ಭೌತಿಕ ಆಹಾರ. ಜೊತೆಗೆ ಸಂಪರ್ಕ, ಮನೋಸಂಚೇತನ (ಗ್ರಹಿಕೆ) ಮತ್ತು ಪ್ರಜ್ಞೆ. ಸಂಪರ್ಕ ಇಂದ್ರಿಯಗಳಿಗೆ ಸಂಬಂಧಿಸಿದ್ದು (ಕಣ್ಣಿಗೆ ಆಕೃತಿ, ಕಿವಿಗೆ ಶಬ್ದ, ಮೂಗಿಗೆ ವಾಸನೆ ಇತ್ಯಾದಿ).

2. ನಾಮ, ರೂಪ: ಎಂದರೆ ಮನಸ್ಸು ಮತ್ತು ಶರೀರ. ಅವು ಒಂದಕ್ಕೊಂದು ಪೂರಕವಾಗಿ ಒಂದು ಯಂತ್ರದಂತೆ ಜೀವಿಯು ಚಲಿಸುತ್ತದೆ. ಅದೊಂದು ಸೋಜಿಗ. ಮನಸ್ಸಿಗೆ ಭೌತಿಕ ಜಗತ್ತಿನಲ್ಲಿ ತನ್ನಷ್ಟಕ್ಕೆ ತಾನೇ ವ್ಯಕ್ತವಾಗುವ ಶಕ್ತಿಯಿಲ್ಲ. ತಿನ್ನುವುದು, ಕುಡಿಯುವುದು, ನುಡಿಯುವುದಾಗಲೀ ಅಥವಾ ಚಲಿಸುವುದಾಗಲೀ ತನಗೆ ಸಾಧ್ಯವಿಲ್ಲ. ಅದು ಆಗುವುದು ಶರೀರದ ಮೂಲಕವೆ. ಈ ದೇಹವು ಮನಸ್ಸಿನ ನಿಯಂತ್ರಣದಲ್ಲಿದ್ದು ಅದರ ಆಜ್ಞಾಪಾಲನೆ ಮಾಡುತ್ತದೆ. ಮನಸ್ಸಿಗೆ ತಿನ್ನಬೇಕು, ನುಡಿಯಬೇಕು, ಚಲಿಸಬೇಕು ಎನಿಸಿದಾಗ ಅದನ್ನು ಶರೀರ ಮಾಡುತ್ತದೆ. ಶರೀರದ ವಾಂಛೆಗಳನ್ನು ಮನಸ್ಸು ಸಂವೇದಿಸಿ ಅವುಗಳನ್ನು ಕಾರ್ಯರೂಪಕ್ಕೆ ತರಲು ನಿರ್ದೇಶನ ನೀಡುತ್ತದೆ. ಹೀಗೆ ಒಂದು ಇನ್ನೊಂದನ್ನು ಅವಲಂಬಿಸಿಯೇ ಬದುಕು ಸಾಗುತ್ತದೆ.

3. ಅನಿಚ್ಛ, ದುಃಖ ಮತ್ತು ಅನತ್ತ: ಅಶಾಶ್ವತತೆ, ದುಃಖ ಮತ್ತು ಅನಾತ್ಮ ಇವು ಬೌದ್ಧಧರ್ಮದ ಮೂರು ಮುಖ್ಯ ಲಕ್ಷಣಗಳು. ಇವು ಎಷ್ಟು ಅನನ್ಯವಾಗಿವೆ ಎಂದರೆ ಜಗತ್ತಿನ ಬೇರೆ ಯಾವ ಧರ್ಮವೂ ಈ ಮೂರು ವಿಷಯಗಳನ್ನು ಒಪ್ಪಿಕೊಳ್ಳಲಾರವು. ಯಾಕೆಂದರೆ ಇವುಗಳು ಅವರು ನಂಬಿದ ಧಾರ್ಮಿಕ ತತ್ತ್ವಗಳಿಗೆ ವಿರುದ್ಧವಾಗಿವೆ.

ಅಶಾಶ್ವತತೆ ಒಂದು ವೈಜ್ಞಾನಿಕ ತತ್ತ್ವ. ಬದಲಾಗುವುದು ಪ್ರಕೃತಿ ನಿಯಮ. ಹಾಗೆಯೆ ನಶಿಸುವುದು ಕೂಡ. ಯಾವುದು ಉತ್ಪತ್ತಿಯಾಗುತ್ತದೋ ಅದು ಕ್ಷಯವಾಗಲೇಬೇಕು. ಹುಟ್ಟಿದ ಎಲ್ಲಾ ಜೀವರಾಶಿಗಳೂ ಬದಲಾವಣೆ ಹೊಂದುತ್ತವೆ. ಅದೇ ಬೆಳವಣಿಗೆ. ಏರುಮುಖವಾಗಿ ಬೆಳೆದು ಒಂದು ಹಂತದಿಂದ ಇಳಿಮುಖವಾಗುತ್ತಾ ಕೊನೆಗೆ ನಶಿಸುತ್ತವೆ. ಇತರ ಧರ್ಮಗಳು ದೇವರ ಅಸ್ತಿತ್ವವನ್ನೆ ಆಧರಿಸಿರುವುದರಿಂದ ದೇವರು ಶಾಶ್ವತ ಎಂದು ಒಪ್ಪಿಕೊಂಡುಬಿಟ್ಟಿವೆ. ದೇವರು ಬದಲಾಗುವುದೇ ಇಲ್ಲ. ಆದ್ದರಿಂದ ಕ್ಷಯಿಸುವ ಮಾತೇ ಇಲ್ಲ. ಹೀಗೆ ಒಂದೊಂದು ಧರ್ಮದಲ್ಲಿಯೂ ಒಂದೊಂದು ಕಲ್ಪಿತ ಕಥೆಗಳಿವೆ. ಆದರೆ ಬುದ್ಧ ‘ನಾನು ಪ್ರತ್ಯಕ್ಷ ಅನುಭವದ ಮಾತುಗಳನ್ನು ಹೇಳುತ್ತೇನೆ’ ಎನ್ನುತ್ತಾರೆ. ಪ್ರಕೃತಿಯನ್ನು ಸೂಕ್ಷ್ಮವಾಗಿ ಗಮನಿಸುವ ಮೂಲಕ ಅಂತಹ ಸತ್ಯಗಳು ಹೊಳೆದಿವೆ.

ದುಃಖ ಎಂಬ ಪದವೇ ನೇತ್ಯಾತ್ಮಕ ಅರ್ಥವನ್ನು ವ್ಯಂಜಿಸುತ್ತದೆ ಮತ್ತು ಅನಾಕರ್ಷಕವಾಗಿದೆ. ಈ ಪದ ಕಿವಿಗೆ ಬಿದ್ದ ಕೂಡಲೇ ಸಂಪ್ರದಾಯಸ್ಥರು ದೇವರನ್ನು ನೆನಪು ಮಾಡಿಕೊಂಡು; ಬೇಡ ಬೇಡ ಎಂದು ಕೆನ್ನೆ ತಟ್ಟಿಕೊಳ್ಳುತ್ತಾರೆ. ಇದೇನು ಧರ್ಮವನ್ನು ಬೆಳೆಸಲು ಸಹಕಾರಿಯೆ? ಎಂದು ಮೂಗು ಮುರಿಯುತ್ತಾರೆ.

ಆದರೆ ವಾಸ್ತವದಲ್ಲಿ ಯಾರೇ ಒಬ್ಬ ವ್ಯಕ್ತಿ ಬಡವ, ಶ್ರೀಮಂತ ಎಂಬ ವ್ಯತ್ಯಾಸವಿಲ್ಲದೆ ಅಧಿಕಾರ, ಅಂತಸ್ತುಗಳ ಪರಿವೆ ಇಲ್ಲದೆ ತನ್ನ ಅಂತರಂಗವನ್ನು ಕೆದಕಿ ಒಳಗನ್ನು ತಿಳಿಯಲಿಚ್ಛಿಸಿದರೆ ಅವನಿಗೆ ಕಾಣುವುದು ಅತೃಪ್ತಿಯೆ. ಬಯಕೆಯನ್ನು ಈಡೇರಿಸುವುದು ತೃಪ್ತಿ. ಬಯಕೆಯನ್ನು ಹತ್ತಿಕ್ಕುವುದೇ ಅತೃಪ್ತಿ. ಅತೃಪ್ತಿ ಒಂದು ಯಾತನೆ. ಅತೃಪ್ತಿ ದುಃಖದ ಆರಂಭಿಕ ಘಟ್ಟ. ಅದು ಯಾತನೆಯಾಗಿ ಮುಂದುವರಿದು ದುಃಖವಾಗುತ್ತದೆ. ಈ ಕಾರಣದಿಂದಲೇ ಬೌದ್ಧಧರ್ಮ ನಿರಾಶಾವಾದವನ್ನು ಹೇಳುತ್ತದೆ ಎಂದು ಟೀಕಿಸುವವರೂ ಇದ್ದಾರೆ. ಅದು ತಪ್ಪು ತಿಳಿವಳಿಕೆ. ಕತ್ತಲು ಒಂದು ಸ್ಥಾಯಿಯಾದ ಸ್ಥಿತಿ. ಸೂರ್ಯಕಿರಣದ ಪ್ರವೇಶದಿಂದ ಅದು ದೂರಾಗುತ್ತದೆ. ಹಾಗೆಯೆ ದುಃಖವನ್ನು ಕುರಿತು ಚಿಂತಿಸುವುದೆಂದರೆ ಅದು ಬೆಳಕನ್ನು ಹುಡುಕುವುದು ಮತ್ತು ಹರಡುವುದೇ ಆಗಿದೆ.

ಯಾವುದೇ ಒಂದು ವಸ್ತುವು ತಂತಾನೆ ಸ್ವಯಂ ಅಸ್ತಿತ್ವವನ್ನು ಪಡೆದುಕೊಳ್ಳುವುದಿಲ್ಲ. ಎರಡು ಅಥವಾ ಹೆಚ್ಚು ವಸ್ತುಗಳ ಸಂಯೋಜನೆಯಿಂದಲೇ ಉಂಟಾಗುತ್ತವೆ. ಆದ್ದರಿಂದ ಆತ್ಮ ಎನ್ನುವುದಿಲ್ಲ. ಇದು ಆತ್ಮದ ನಿರಾಕರಣೆಗೆ ಬುದ್ಧ ಕೊಡುವ ಸ್ಥೂಲವಾದ ಕಾರಣ. ಇದು ವೈಜ್ಞಾನಿಕ ಸತ್ಯ. ಮಿಕ್ಕೆಲ್ಲ ಧರ್ಮಗಳ ಬೆನ್ನೆಲುಬು ಆತ್ಮವೇ ಆಗಿದೆ. ಆತ್ಮಕ್ಕೆ ಸಾವಿಲ್ಲ, ಅದು ಶಾಶ್ವತವಾದದ್ದು. ಸೆಮೆಟಿಕ್ ಧರ್ಮಗಳಲ್ಲಿ ಈ ಆತ್ಮಗಳು ಮರಣಾನಂತರ ಸ್ವರ್ಗಕ್ಕೋ ನರಕಕ್ಕೋ ಹೋಗುತ್ತವೆ.

ಹಿಂದೂ ಧರ್ಮದಲ್ಲಿ ಸುತ್ತಿ ಬಳಸಿ ಬೇರೆ ಬೇರೆ ಜನ್ಮಗಳ ತಂಗುದಾಣಗಳಲ್ಲಿ ಆಯಸ್ಸು ಕಳೆದು ಕೊನೆಯಲ್ಲಿ ಸ್ವರ್ಗ ಅಥವಾ ನರಕ ಸೇರಿಕೊಳ್ಳುತ್ತವೆ. ಬುದ್ಧನ ಪ್ರಕಾರ, ದೇವರು ಇಲ್ಲ. ಆತ್ಮವೂ ಇಲ್ಲ. ಶಾಶ್ವತ ಅನ್ನುವುದು ಇಲ್ಲವೇ ಇಲ್ಲ; ಸಾಲದೆಂಬಂತೆ ದುಃಖವಿದೆ ಎಂಬ ಥಿಯರಿ ಇಟ್ಟುಕೊಂಡು, ನೈತಿಕತೆಯ ತಳಹದಿ ಮೇಲೆ ಮನುಷ್ಯ ಕೇಂದ್ರಿತವಾದ ಒಂದು ಧರ್ಮವನ್ನೆ ಕಟ್ಟಿಬಿಟ್ಟಿದ್ದಾನೆ!

4. ನಾಲ್ಕು ಆರ್ಯಸತ್ಯಗಳು: ದುಃಖ, ದುಃಖ ಸಮುದಯ (ಕಾರಣ), ದುಃಖ ನಿರೋಧ ಮತ್ತು ದುಃಖ ನಿರೋಧ ಮಾರ್ಗ.

ಮೊದಲು ದುಃಖದ ಇರುವನ್ನು ಅರಿಯಬೇಕು. ಹುಟ್ಟು ದುಃಖ, ಮುಪ್ಪು ದುಃಖ, ರೋಗವು ದುಃಖ, ಮರಣವು ದುಃಖ. ಯಾತನೆ, ನೋವು, ಸಂಕಟ, ಖಿನ್ನತೆ ಇವೆಲ್ಲವೂ ದುಃಖವೆ. ಅಪ್ರಿಯರೊಡನೆ ಇರುವುದು ದುಃಖ, ಪ್ರಿಯರಾದವರನ್ನು ಅಗಲುವುದು ದುಃಖ, ಬಯಸಿದ್ದು ಸಿಗದಿದ್ದಾಗ ದುಃಖ. ಬೇಡವಾದದ್ದು ಬಂದರೆ ದುಃಖ. ನೆರೆ ಕೆನ್ನೆಗೆ, ತೆರೆ ಗಲ್ಲಕೆ, ಶರೀರ ಗೂಡು ಹೋಗುವುದು; ಹಲ್ಲು ಹೋಗಿ, ಬೆನ್ನು ಬಾಗಿ ಅನ್ಯರಿಗೆ ಹೊರೆಯಾಗುವುದು; ಕಾಲಮೇಲೆ ಕೈಯನೂರಿ ಕೋಲು ಹಿಡಿಯುವುದು ಮುಪ್ಪು. ಅದು ದುಃಖವಲ್ಲದೆ ಇನ್ನೇನು? ಈ ದೇಹ ರೋಗಗಳಿಗೆ ತುತ್ತಾಗುತ್ತದೆ, ಅದು ಯಾರಿಗೂ ಇಷ್ಟವಾಗುವುದಿಲ್ಲ. ಇಷ್ಟವಾಗದಿರುವುದನ್ನು ಪಡೆದುಕೊಳ್ಳುವುದು ದುಃಖವೆ. ನೋವು, ಅದು ಮಾನಸಿಕವಾಗಿರಬಹುದು ಅಥವಾ ದೈಹಿಕವಾಗಿರಬಹುದು. ಅವೆಲ್ಲವೂ ದುಃಖ.

ದುಃಖಕ್ಕೆ ಕಾರಣವಿದೆ. ಕನ್ನಡದಲ್ಲಿ ‘ಆಸೆಯೇ ದುಃಖಕ್ಕೆ ಕಾರಣ’ ಎಂಬ ಪ್ರಸಿದ್ಧ ಸರಳ ಹೇಳಿಕೆಯೊಂದಿದೆ. ಅದು ಸಮರ್ಪಕವಾದುದಲ್ಲ. ಪಾಲಿಯ ತನ್ಹಾ ಎಂಬ ಪದಕ್ಕೆ ಆಸೆ ಸಂವಾದಿಯಲ್ಲ. ಇಂಗ್ಲಿಷಿನ craving ಪದ ಸ್ವಲ್ಪ ಹತ್ತಿರದ ಅರ್ಥ ಕೊಡಬಹುದೇನೊ. ದುರಾಶೆಯೆ (ಅಥವಾ ತೃಷ್ಣೆ) ದುಃಖಕ್ಕೆ ಕಾರಣ ಎಂದಿಟ್ಟುಕೊಳ್ಳೋಣ.

ಮೂರು ರೀತಿಯ ತೃಷ್ಣೆಗಳಿವೆ. ಕಾಮ ತೃಷ್ಣೆ, ಭವ ತೃಷ್ಣೆ ಮತ್ತು ವಿಭವ ತೃಷ್ಣೆ. ಕಾಮ ತೃಷ್ಣೆ ಎಂದರೆ ಬಯಕೆಗಳಿಗೆ ಜೋತುಬೀಳುವುದು. ಇನ್ನೂ ಬೇಕು ಎಂಬ ಹಳಹಳಿಕೆ. ಅದರಿಂದ ಮೋಹ ಹುಟ್ಟುತ್ತದೆ. ಲೋಭ ಹೆಚ್ಚುತ್ತದೆ. ಅದು ಮನುಷ್ಯನ ದುರ್ಗತಿಗೆ ಕಾರಣ. ಭವ ತೃಷ್ಣೆ ಎಂದರೆ ಇಹದ ಜೀವನದಲ್ಲಿ ವಿಭಿನ್ನ ಸ್ಥಿತಿಗಳಿಗೆ ಆಸೆಪಡುವುದು. ಶ್ರೀಮಂತನಾಗಬೇಕು, ದೊಡ್ಡ ಅಧಿಕಾರಿಯಾಗಬೇಕು, ಕೀರ್ತಿ ಪಡೆಯಬೇಕು ಮುಂತಾದ ಭವದ ಬಯಕೆಗಳು. ವಿಭವ ತೃಷ್ಣೆ ಎಂದರೆ ಜೀವನಕ್ಕೆ ವಿಮುಖನಾಗುವುದು, ಹತಾಶರಾಗುವುದು, ಯಾವ ಪ್ರಯತ್ನವನ್ನೂ ಮಾಡದೆ ಹಿಂದೆ ಸರಿಯುವುದು.

ಮೂರನೆಯ ಆರ್ಯಸತ್ಯ ದುಃಖ ನಿರೋಧ. ದುಃಖಕ್ಕೆ ಕಾರಣವನ್ನು ತಿಳಿದುಕೊಂಡ ಮೇಲೆ ದುಃಖ ನಿರೋಧ (cessation) ಸಾಧ್ಯವಿದೆ. ಅಜ್ಞಾನ ಮತ್ತು ದುರಾಶೆಗಳನ್ನು ನಿವಾರಿಸಿಕೊಂಡರೆ ದುಃಖ ತಾನಾಗಿಯೆ ದೂರವಾಗುತ್ತದೆ.

ನಾಲ್ಕನೆಯ ಆರ್ಯಸತ್ಯ ದುಃಖ ನಿರೋಧ ಮಾರ್ಗ ಅಥವಾ ಅಷ್ಟಾಂಗ ಮಾರ್ಗ. ಇದನ್ನು ಮಧ್ಯಮಮಾರ್ಗವೆಂತಲೂ ಕರೆಯಲಾಗುತ್ತದೆ. ವಿವರ ಎಂಟನೆಯ ಪ್ರಶ್ನೆಯಲ್ಲಿದೆ.

5. ಪಂಚಸ್ಕಂದಗಳು: ಜೀವಿಗಳನ್ನು ಸಂಸಾರ ಬಂಧನಕ್ಕೆ ಜೋತುಬೀಳುವಂತೆ ಮಾಡುತ್ತವೆ. ರೂಪ ಸ್ಕಂದವು ಶರೀರವನ್ನು, ಉಳಿದ ನಾಲ್ಕು ಸ್ಕಂದಗಳು ಮನಸ್ಸನ್ನು ಕುರಿತು ಚರ್ಚಿಸುತ್ತವೆ. ದೃಷ್ಟಿಲಭ್ಯವಲ್ಲದ ನಾಮವನ್ನು ಪ್ರತಿನಿಧಿಸುವ ಗುಂಪುಗಳು ನಾಲ್ಕು; ವೇದನೆ, ಗ್ರಹಿಕೆ, ಸಂಖಾರ (ಮನೋನಿರ್ಮಾಣಗಳು) ಮತ್ತು ಪ್ರಜ್ಞೆ.

6. ಆರು ಇಂದ್ರಿಯಗಳು: ಬೌದ್ಧರು ಆರು ಇಂದ್ರಿಯಗಳನ್ನು ಗುರುತಿಸುತ್ತಾರೆ. ಕಣ್ಣು, ಕಿವಿ, ಮೂಗು, ನಾಲಗೆ, ಶರೀರ ಮತ್ತು ಮನಸ್ಸು. ಬಹಿರಾಯತನಗಳಾದ ಇಂದ್ರಿಯಗೋಚರ ಲಕ್ಷಣಗಳು ಆರು; ನೋಟ, ಶಬ್ದ, ವಾಸನೆ, ರುಚಿ, ಸ್ಪರ್ಶ ಮತ್ತು ಆಲೋಚನೆಗಳು.

7. ಏಳು ಸಂಬೋಧಿ ಅಂಗಗಳು: ಭಿಕ್ಕುವಿಗೆ ಬೋಧಿ ಜ್ಞಾನ ಪ್ರಾಪ್ತಿಯಾಗಬೇಕಾದರೆ ಈ ಏಳು ಬೋಧಿ ಅಂಗಗಳಲ್ಲಿ ಧ್ಯಾನಸ್ಥನಾಗಿ ತಂಗಬೇಕು. ಅವುಗಳು ಮನೋಮಗ್ನತೆ (ಸತಿ), ಸತ್ಯಾನ್ವೇಷಣೆ, ಪ್ರಯತ್ನ, ಪರಮಾನಂದ, ಪ್ರಸನ್ನತೆ, ಸಮಾಧಿ, ಸಮಚಿತ್ತತೆ.

8. ಅಷ್ಠಾಂಗಮಾರ್ಗಗಳು: ಅವು ಹೀಗಿವೆ. 1. ಸಮ್ಮಾ ದಿಟ್ಟಿ ಅಂದರೆ ಸರಿಯಾದ ದೃಷ್ಟಿ 2. ಸಮ್ಮಾ ಸಂಕಲ್ಪ 3. ಸಮ್ಮಾ ಮಾತು 4. ಸಮ್ಮಾ ಕರ್ಮ 5. ಸಮ್ಮಾ ಉದ್ಯೋಗ 6. ಸಮ್ಮಾ ಪ್ರಯತ್ನ 7. ಸಮ್ಮಾ ಎಚ್ಚರ 8. ಸಮ್ಮಾ ಸಮಾಧಿ.

9. ಒಂಬತ್ತು ಲೋಕಗಳು: ರೂಪ ಮತ್ತು ಗ್ರಹಿಕೆ ಇರುವ, ಇಲ್ಲದಿರುವ; ಅರೂಪ ಮತ್ತು ಗ್ರಹಿಕೆ ಇರುವ, ಇಲ್ಲದಿರುವ ಜೀವಿಗಳಿಗೆ ಸಂಬಂಧಿಸಿದ ಒಂಬತ್ತು ಲೋಕಗಳನ್ನು ಬುದ್ಧರು ವಿವರಿಸಿದ್ದಾರೆ.

10. ದಶಪಾರಮಿಗಳು: ಪಾರಮಿ ಎಂದರೆ ಶ್ರೇಷ್ಠವಾದದ್ದು, ಯಾವುದೇ ಒಂದು ಗುಣದ ಪರಮೋಚ್ಛ ಸ್ಥಿತಿ. ಅದಕ್ಕೆ ದುಃಖದಿಂದ ಪಾರುಮಾಡುವ ಶಕ್ತಿಯಿದೆ. ಚರಿಯ ಪಿಟಕವು ಹತ್ತು ಪಾರಮಿಗಳನ್ನು ಕುರಿತು ಹೇಳುತ್ತದೆ. ಅವುಗಳೆಂದರೆ ದಾನ, ಶೀಲ, ನಿಷ್ಕಾಮ, ಪ್ರಜ್ಞೆ, ಪ್ರಯತ್ನ, ತಾಳ್ಮೆ, ಸತ್ಯ, ದೃಢತೆ, ಮೈತ್ರಿ ಮತ್ತು ಸಮಚಿತ್ತ. ಬೋಧಿಸತ್ವ ಈ ಹತ್ತೂ ಪಾರಮಿತಗಳಲ್ಲಿ ಪರಿಪೂರ್ಣನಾದಾಗ ಮಾತ್ರ ಬುದ್ಧತ್ವ ಪ್ರಾಪ್ತಿಯಾಗುತ್ತದೆ.

ತ್ರಿಪಿಟಕಗಳೆಂದರೆ ಮೂರು ಬುಟ್ಟಿಗಳು. ವಿನಯ, ಸುತ್ತ ಮತ್ತು ಅಭಿದಮ್ಮ. ಜನಸಾಮಾನ್ಯರಿಗಾಗಿ ಬೋಧಿಸಲ್ಪಟ್ಟಿರುವ ಸುತ್ತ ಪಿಟಕದ ಬಹುತೇಕ ಅಂಶಗಳು ಈ ಹತ್ತು ಪ್ರಶ್ನೆಗಳಲ್ಲಿ ಅಡಕವಾಗಿರುವುದು ಸೋಜಿಗವೆನಿಸುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT