ಗುರುವಾರ , ನವೆಂಬರ್ 21, 2019
27 °C

ರಾಥ್ವಾ ವರ್ಣವೈಭವ

Published:
Updated:
Prajavani

ಭಾರತದ ಸಾಂಸ್ಕೃತಿಕ ಇತಿಹಾಸದಲ್ಲಿ ಆದಿವಾಸಿ, ಬುಡಕಟ್ಟು ಜನಾಂಗಗಳ ಕಲೆಗೆ ತನ್ನದೇ ಆದ ಸ್ಥಾನ ಇದೆ. ಅಂತಹ ಒಂದು ಸಾಂಸ್ಕೃತಿಕ ವೈಭವಕ್ಕೆ ಸಾಕ್ಷಿಯಾಗುವ ಬುಡಕಟ್ಟು ಎಂದರೆ ಗುಜರಾತಿನ ರಾಥ್ವಾ ಸಮುದಾಯ.

ಭಿಲ್ಲಾ ಬುಡಕಟ್ಟಿನ ಉಪ ಪಂಗಡವಾದ ರಾಥ್ವಾ ಸಂಸ್ಕೃತಿಯು ಐತಿಹಾಸಿಕ ಮತ್ತು ಪುರಾಣ ಹಿನ್ನೆಲೆಯ ವರ್ಣರಂಜಿತ ಹಬ್ಬಗಳು, ಆಚರಣೆಗಳು, ಸಂಗೀತ ಕೂಟಗಳಿಗೆ ಹೆಸರುವಾಸಿ. ಈ ಸಮುದಾಯದ ಚಿತ್ರಕಲೆಯದ್ದೂ ಒಂದು ದೊಡ್ಡ ಪರಂಪರೆ. ಪಿಥೋರಾ ಎಂದು ಕರೆಯಿಸಿಕೊಳ್ಳುವ ಈ ಸಾಂಪ್ರದಾಯಿಕ ಕಲೆ ಕಣ್ಮನ ಸೆಳೆಯುತ್ತದೆ.

ಮುಖ್ಯ ಆರಾಧ್ಯ ದೈವವಾದ ಬಾಬಾ ಪಿಥೋರಾನಿಂದ ವರವನ್ನು ಪಡೆಯಲು ಮತ್ತು ತಮ್ಮ ಹರಕೆಗಳನ್ನು ಪೂರೈಸಲು ಮಾಡಿದ ಆಚರಣೆಯ ಭಾಗವೇ ಈ ಚಿತ್ರಕಲೆ ಎಂದು ಹೇಳಲಾಗುತ್ತದೆ. ಇದೊಂದು ಗ್ರಾಮೀಣ ಚಿತ್ರಕಲೆಯಾಗಿದ್ದು, ಪ್ರತಿಯೊಂದು ರಾಥ್ವಾಗಳ ಮನೆ ಗೋಡೆಯ ಮೇಲೆ ಈ ಕಲೆಯನ್ನು ಕಾಣಬಹುದು. ಕಷ್ಟದ ಸಮಯದಲ್ಲಿ ಮನೆಯ ಮಾಲೀಕ ಬಾಬಾ ಪಿಥೋರಾನ ಹೆಸರಿನಲ್ಲಿ ಹರಕೆ ಹೋರುತ್ತಾನೆ. ಹರಕೆ ಹೊತ್ತ ಎರಡರಿಂದ ಮೂರು ವರ್ಷದೊಳಗೆ ಅದನ್ನು ತೀರಿಸುವ ಆಚರಣೆಯೇ ಪಿಥೋರಾ ಚಿತ್ರ ರಚನೆ.

ಮನೆಯ ಮಾಲೀಕನನ್ನು ‘ಘರ್ಧಾನಿ’ ಎನ್ನಲಾಗುತ್ತದೆ. ಘರ್ಧಾನಿ ಹರಕೆ ಹೊರುತ್ತಾನೆ. ಅದನ್ನು ತೀರಿಸುವ ಸಮಯ ಬಂದಾಗ ಗ್ರಾಮದ ‘ಬದ್ವಾ’ ಹೆಸರಿನ ಪ್ರಧಾನ ಅರ್ಚಕರ ಬಳಿಗೆ ತೆರಳುತ್ತಾನೆ. ಅಲ್ಲಿ ಅವರ ಮಾರ್ಗದರ್ಶನ ಮೇರೆಗೆ ಪಿಥೋರಾ ಆಚರಣೆಗೆ ಚಾಲನೆ ದೊರೆಯುತ್ತದೆ. ಬದ್ವಾ ಪೂರ್ವಜರಿಂದ ಸಾಂಪ್ರದಾಯಿಕ ಕೌಶಲ ಪಡೆದಿರುತ್ತಾನೆ. ಅದರ ಆಧಾರದ ಮೇಲೆ ಪಿಥೋರಾ ಚಿತ್ರಿಸಲು ಮಾರ್ಗದರ್ಶನ ಮಾಡುತ್ತಾನೆ. ಬದ್ವಾ ಮತ್ತು ಘರ್ಧಾನಿಯ ಭೇಟಿಯ ನಂತರ ‘ಲಖರಾ’ ಎಂದು ಕರೆಯುವ ಪಿಥೋರಾ ಚಿತ್ರಿಸುವ ವ್ಯಕ್ತಿಯನ್ನು ಆಹ್ವಾನಿಸಿ ಆತನೊಂದಿಗೆ ಹರಕೆಯ ವಿವರಗಳನ್ನು ಚರ್ಚಿಸಲಾಗುತ್ತದೆ.

ಬದ್ವಾ, ಘರ್ಧಾನಿ ಹಾಗೂ ಲಖರಾ ಮೂರೂ ಜನ ಒಟ್ಟಾಗಿ ಪಿಥೋರಾ ಆಚರಣೆಯ ದಿನವನ್ನು ನಿರ್ಧರಿಸುತ್ತಾರೆ. ಪಿಥೋರಾ ಚಿತ್ರ ರಚನೆಯ ನಂತರ ಹರಕೆ ತೀರುತ್ತದೆ. ಕೊನೆಯ ಹಳ್ಳಿಯ ಜನರೊಂದಿಗೆ ಭೋಜನ ಕೂಟ ನೆರವೇರುತ್ತದೆ. ಪಿಥೋರಾ ಚಿತ್ರ ರಚನೆಯ ಸಂಪನ್ನತೆಯಿಂದ ತಮ್ಮ ಕಷ್ಟಗಳು ದೂರವಾಗುತ್ತವೆ ಎಂಬ ನಂಬಿಕೆ ರಾಥ್ವಾಗಳಲ್ಲಿ ಇದೆ.

ಪಿಥೋರಾ ಒಂದು ಆಕರ್ಷಕ ಸಾಂಪ್ರದಾಯಿಕ ಚಿತ್ರಕಲೆ. ಬಾಬಾ ಪಿಥೋರಾ ಹಾಗೂ ದೇವಿ ಪಿಥೋರಿಯರ ವಿವಾಹವೇ ಪಿಥೋರಾ ವರ್ಣಚಿತ್ರದ ಪ್ರಮುಖ ಪರಿಕಲ್ಪನೆ. ಬ್ರಹ್ಮಾಂಡವನ್ನು ಪ್ರತಿನಿಧಿಸುವ ಸೂರ್ಯ, ಚಂದ್ರ, ನಕ್ಷತ್ರ, ಪ್ರಾಣಿ, ಪಕ್ಷಿ, ಗಿಡ–ಮರ ವರ್ಣಚಿತ್ರದಲ್ಲಿ ಸ್ಥಾನ ಪಡೆದಿವೆ. ಬಾಬಾ ಪಿಥೋರಾನ ಪ್ರಮುಖ ವಾಹನ ಕುದುರೆಗೂ ಅಲ್ಲಿ ಜಾಗವಿದೆ. ಜೊತೆಗೆ ಹಸು, ಮೇಕೆಗಳು ಸಹ ಪ್ರಾತಿನಿಧಿಕ ಪ್ರಾಣಿಗಳಾಗಿವೆ. ಪರಿಸರ ಹಾಗೂ ಪ್ರಾಣಿ ರಕ್ಷಣೆಯ ತಾತ್ವಿಕ ಹಿನ್ನೆಲೆಯಲ್ಲಿ ಪಿಥೋರಾ ಚಿತ್ರವು ರೂಪ ತಾಳುತ್ತದೆ.

ಮೊದಲು ಗೋಡೆಯ ಆಯ್ಕೆ ನಡೆಯುತ್ತದೆ. ಸಾಮಾನ್ಯವಾಗಿ ಮನೆಯ ಹಜಾರದ ಮೂರು ಗೊಡೆಗಳನ್ನು (ಪ್ರವೇಶ ಬಾಗಿಲಿಗೆ ಎದುರಾದ ಗೋಡೆ ಮತ್ತು ಅದರ ಅಕ್ಕಪಕ್ಕದ ಎರಡು ಗೋಡೆಗಳು) ಚಿತ್ರ ರಚನೆಗೆ ಆಯ್ಕೆ ಮಾಡಲಾಗುತ್ತದೆ. ಗೋಡೆಯನ್ನು ಸುಣ್ಣ, ಸಗಣಿ ಮತ್ತು ಗಂಜಲದಿಂದ ಸಮತಟ್ಟಾಗಿ ಮಾಡಿಕೊಳ್ಳಲಾಗುತ್ತದೆ. ಈ ಕಾರ್ಯವನ್ನು ಮನೆಯ ಅವಿವಾಹಿತ ಯುವತಿಯರು/ ಬಾಲಕಿಯರು ಮಾಡುತ್ತಾರೆ. ಅವರು ಹೀಗೆ ಮಾಡುವುದರಿಂದ ಬೇಗನೇ ವಿವಾಹವಾಗುತ್ತದೆ ಎಂಬ ನಂಬಿಕೆ ಅವರದ್ದು.

ಹಿನ್ನೆಲೆಗೆ ಸುಣ್ಣ ಬಳಿಯಲಾಗುತ್ತದೆ. ಪಿಥೋರಾ ವರ್ಣಚಿತ್ರದ ಸಾಂಪ್ರದಾಯಿಕ ಗಾತ್ರ 11 x 8 ಅಡಿಗಳು. ಚಿತ್ರ ರಚನೆಗೆ ಸಂಪೂರ್ಣವಾಗಿ ನೈಸರ್ಗಿಕ ಬಣ್ಣಗಳನ್ನು ಬಳಸುತ್ತಿರುವುದು ವಿಶೇಷ. ಎಲೆಗಳು, ಕಾಯಿಗಳು, ಬೇರುಗಳು, ಹೂಗಳಿಂದ ನೈಸರ್ಗಿಕ ಬಣ್ಣಗಳ ಪುಡಿ ತಯಾರಿಸಿಕೊಂಡಿರುತ್ತಾರೆ. ಹೀಗೆ ತಯಾರಿಸಿದ ಬಣ್ಣಗಳಿಗೆ ‘ಮಹುದಾ’ ಎಂಬ ಸ್ಥಳೀಯ ಮದ್ಯವನ್ನು ಹಾಲಿನೊಂದಿಗೆ ಬೆರೆಸಿ ಬಣ್ಣ ತಯಾರಿಸಿ ಬಳಸುತ್ತಾರೆ. ವಿವಿಧ ಬಣ್ಣಗಳನ್ನು ಒಟ್ಟಾಗಿ ಬೆರೆಸಿ ಆಕರ್ಷಕ ಬಣ್ಣಗಳನ್ನು ಸೃಜಿಸಿಕೊಳ್ಳುತ್ತಾರೆ. ಚಿತ್ರ ರಚನೆಯಲ್ಲಿ ಹಳದಿ, ಹಸಿರು, ನೀಲಿ, ಕಿತ್ತಳೆ, ಕೆಂಪು, ಕಪ್ಪು ಮತ್ತು ಬಿಳಿ ಬಣ್ಣಗಳನ್ನು ಬಳಸಲಾಗುತ್ತದೆ.

ನಿಗದಿತ ದಿನದಂದು ಬೆಳಿಗ್ಗೆ ಘರ್ಧಾನಿಯ ಮನೆಯವರೆಲ್ಲರೂ ವಾದ್ಯಗಳೊಂದಿಗೆ ಬದ್ವಾ ಹಾಗೂ ಲಖರಾ ಅವರ ಮನೆಗೆ ತೆರಳಿ ಅವರನ್ನು ಕರೆತರುತ್ತಾರೆ. ಕುಟುಂಬದವರೆಲ್ಲರೂ ಪೂಜೆ ಸಲ್ಲಿಸಿದ ನಂತರ ಬದ್ವಾ ಬಾಬಾ ಪಿಥೋರಾನ ಸಾಧನೆಗಳನ್ನು ತಿಳಿಸುವ ಹಾಡನ್ನು ಹೇಳುತ್ತಾ ಹೋಗುತ್ತಾನೆ.

ಲಖರಾ ಹಾಡಿಗೆ ತಕ್ಕಂತೆ ಚಿತ್ರ ರಚಿಸುತ್ತಾ ಹೋಗುತ್ತಾನೆ. ರಾಥ್ವಾಗಳ ಸಂಪ್ರದಾಯದ ಪ್ರಕಾರ ಚಿತ್ರ ರಚನೆಯ ಸಮಯದಲ್ಲಿ ಮಹಿಳೆಯರು ಭಾಗವಹಿಸುವಂತಿಲ್ಲ. ಇಲ್ಲಿ ಪುರುಷ ಪ್ರಾಧಾನ್ಯ ಎದ್ದು ಕಾಣುತ್ತದೆ.

ಚಿತ್ರ ರಚನೆಯು ಸಂಜೆಯವರೆಗೂ ನಡೆಯುತ್ತದೆ. ರಚನೆ ಪೂರ್ಣಗೊಂಡ ನಂತರ ಪೂಜಾಕೈಂಕರ್ಯಗಳು ನೆರವೇರುತ್ತವೆ. ಬಾಬಾ ಪಿಥೋರಾನನ್ನು ಆಹ್ವಾನಿಸಿ ಆತನಿಗೆ ಮಾಂಸಾಹಾರವನ್ನು ನೈವೇದ್ಯವಾಗಿ ಸಲ್ಲಿಸಲಾಗುತ್ತದೆ. ರಾತ್ರಿ ವೇಳೆಗೆ ಇಡೀ ಗ್ರಾಮದ ಸಮುದಾಯವರೆಲ್ಲರಿಗೂ ಭೋಜನ ವ್ಯವಸ್ಥೆ ಇರುತ್ತದೆ.

ಪಿಥೋರಾದಲ್ಲಿ ಏನಿರುತ್ತದೆ?

ಪಿಥೋರಾ ವರ್ಣಚಿತ್ರವು ಪ್ರಮುಖವಾಗಿ ಸಮುದಾಯದ ಪುರಾಣಗಳನ್ನು ಪ್ರತಿನಿಧಿಸುತ್ತದೆ. ಚಿತ್ರದಲ್ಲಿ ಕಾಣಿಸಿಕೊಳ್ಳುವ ಮುಖ್ಯ ದೇವತೆಗಳೆಂದರೆ ಬಾಬಾ ಗನೆಹ್ (ಗಣೇಶ), ಬಾಬಾ ಇಂದ್ (ಇಂದ್ರ), ಬಾಬಾ ಪಿಥೋರಾ, ಪಿಥೋರಿ ರಾಣಿ, ರಾಣಿ ಕಾಜಲ್, ಬಾರ್ ಮಾಥಾ ಧನಿ ರಾಜಾಭೋಜ್ ಮತ್ತು ಕುದುರೆ. ಇವುಗಳ ಜೊತೆಗೆ ಅವರ ಕುಟುಂಬದ ಪೂರ್ವಜರು ಅಲ್ಲಿರುತ್ತಾರೆ. ದೈನಂದಿನ ಮಾನವ ಚಟುವಟಿಕೆಗಳು, ಪ್ರಾಣಿ- ಪಕ್ಷಿಗಳನ್ನು ಈ ಚಿತ್ರಗಳಲ್ಲಿ ಕಾಣಬಹುದು. ಪಿಥೋರಾ ಚಿತ್ರಗಳಲ್ಲಿ ಪ್ರಕೃತಿಗೆ ಪ್ರಥಮ ಆದ್ಯತೆ ನೀಡಿರುವುದು ಅವರ ಪರಿಸರ ಪ್ರಜ್ಞೆಯನ್ನು ತೋರಿಸುತ್ತದೆ.

ರಾಥ್ವಾ ಜನಾಂಗವು ಹಸು ಮತ್ತು ಎಮ್ಮೆಗಳನ್ನು ಪವಿತ್ರ ಪ್ರಾಣಿಗಳೆಂದು ಪರಿಗಣಿಸುತ್ತಾರೆ. ಹಾಗಾಗಿ ಇವೂ ಚಿತ್ರದಲ್ಲಿ ಪ್ರತಿಬಿಂಬಿತವಾಗುತ್ತವೆ. ಶಕ್ತಿ, ಧರ್ಮ ಮತ್ತು ದೇವತೆಗಳ ವಾಹನದ ಸಂಕೇತವಾಗಿ ಸಿಂಹವು ಸ್ಥಾನ ಪಡೆದಿದೆ. ಹುಲಿಯನ್ನು ರಕ್ಷಕನಾಗಿ ಚಿತ್ರಿಸಲಾಗುತ್ತದೆ. ಸಿಂಹ ಮತ್ತು ಹುಲಿಗಳನ್ನು ಆಕಾಶ ದ್ವಾರದ ಮೇಲೆ ಚಿತ್ರಿಸಲಾಗುತ್ತದೆ. ಏಕೆಂದರೆ ಇವು ಎಲ್ಲರನ್ನೂ ರಕ್ಷಿಸುತ್ತವೆ ಎಂಬ ನಂಬಿಕೆ ರಾಥ್ವಾಗಳದ್ದು.

ಸಾಂಪ್ರದಾಯಿಕ ಆಚರಣೆಗಳಲ್ಲಿ ಒಂಟೆಯೂ ಮಹತ್ವದ್ದು. ಹಾಗಾಗಿ ಇದೂ ಸಹ ಪಿಥೋರಾದಲ್ಲಿ ಸ್ಥಾನ ಪಡೆದಿದೆ. ಜಿಂಕೆಗಳನ್ನು ಸೌಂದರ್ಯ, ಮುಗ್ಧತೆ, ಪ್ರಾಮಾಣಿಕತೆಯ ಸಂಕೇತ ಎಂದು ರಾಥ್ವಾಗಳು ನಂಬಿದ್ದಾರೆ. ಪ್ರಾಣಿಗಳ ತ್ಯಾಗ ಬಲಿದಾನದ ಸಂಕೇತವಾಗಿ ಕೋಳಿ ಆಯ್ಕೆಯಾಗಿದೆ. ನವಿಲು ದೇವತೆಗಳ ವಾಹನವಾಗಿ ಕಾಣಸಿಗುತ್ತದೆ. ಬಾಬಾ ಪಿಥೋರಾನಿಗೆ ಜನ್ಮ ನೀಡಿದ ರಾಣಿ ಕೋಯಲ್‍ಳ ನೆನಪಿನಲ್ಲಿ ಕೋಗಿಲೆ ಸಾಂಕೇತಿಕವಾಗಿ ನಿರೂಪಣೆಯಾಗಿದೆ. ರಾಥ್ವಾಗಳು ಪ್ರಾಣಿ, ಪಕ್ಷಿ ಪ್ರಿಯರಾಗಿದ್ದು, ಅವುಗಳನ್ನು ತಮ್ಮ ಮನೆಯ ಸದಸ್ಯರಂತೆ ನೋಡಿಕೊಳ್ಳುತ್ತಿದ್ದರು ಎಂಬುದಕ್ಕೆ ಇಲ್ಲಿ ಚಿತ್ರಿತವಾಗುವ ಪ್ರಾಣಿ, ಪಕ್ಷಿಗಳೇ ಸಾಕ್ಷಿ.

ತಾಳೆ ಜಾತಿಯ ತಾಡ್ ಮರವು ರಾಥ್ವಾಗಳಿಗೆ ಬಹಳ ಇಷ್ಟವಾದ ಮರ. ತಾಡ್ ಮರದ ತಡ್ಕಲಿ ಎಂಬ ಚಿಕ್ಕ ಹಣ್ಣುಗಳು ತಿನ್ನಲು ತುಂಬಾ ಸೊಗಸಾಗಿರುತ್ತವೆ.

ರಾಥ್ವಾಗಳು ತಾಡ್ ಮರದಿಂದ ನೀರಾ ತಯಾರಿಸುತ್ತಾರೆ. ಇದು ತುಂಬಾ ಆರೋಗ್ಯಕರ ಪಾನೀಯ. ಜೊತೆಗೆ ತಾಡ್ ಮರದಿಂದ ಮದ್ಯವನ್ನೂ ತಯಾರಿಸುತ್ತಾರೆ. ಇದರ ಎಲೆಗಳನ್ನು ಮನೆಗಳ ಚಾವಣಿಗೆ ಮತ್ತು ಗೋಡೆಗೆ ಬಳಸುತ್ತಾರೆ. ಹಾಗಾಗಿ ತಾಡ್ ಮರವು ಪಿಥೋರಾದಲ್ಲಿ ವಿಶೇಷವಾಗಿ ಕಾಣಿಸಿಕೊಳ್ಳುತ್ತದೆ. ಮನೆ ನಿರ್ಮಾಣದಲ್ಲಿ ಬಿದಿರನ್ನು ಹೆಚ್ಚು ಬಳಸುವುದರಿಂದ ಬಿದಿರೂ ಅಲ್ಲಿ ಸ್ಥಾನ ಪಡೆದಿದೆ.

ಹಿಂದೆ ಚಿತ್ರ ರಚನೆಗೆ ತಾವೇ ತಯಾರಿಸಿದ ನೈಸರ್ಗಿಕ ಬಣ್ಣಗಳನ್ನು ಬಳಸುತ್ತಿದ್ದರು. ಬಿದಿರಿನ ಕಟ್ಟಿಗೆಯಿಂದ ತಾವೇ ಬ್ರಷ್ ತಯಾರಿಸಿಕೊಳ್ಳುತ್ತಿದ್ದರು. ಆದರೆ, ಇಂದು ಬಹುತೇಕವಾಗಿ ಮಾರುಕಟ್ಟೆಯಲ್ಲಿ ದೊರೆಯುವ ರಾಸಾಯನಿಕ ಬಣ್ಣ ಹಾಗೂ ಬ್ರಷ್‍ಗಳನ್ನು ಬಳಸುತ್ತಾರೆ. ಪಿಥೋರಾ ಸಂಪೂರ್ಣವಾಗಿ ನಂಬಿಕೆಗಳ ಆಚರಣೆ ಆಗಿರುವುದರಿಂದ ಅದನ್ನು ವಾಣಿಜ್ಯದ ನೆಲೆಯಲ್ಲಿ ನೋಡುವುದು ರಾಥ್ವಾಗಳಿಗೆ ಇಷ್ಟವಿಲ್ಲ.

ಪ್ರತಿಕ್ರಿಯಿಸಿ (+)