ಶುಕ್ರವಾರ, ಫೆಬ್ರವರಿ 26, 2021
29 °C

ಬೆಂಗಳೂರ ಪೋರಿಯ ಕರಾವಳಿ ಸಿನಿಮಾತು

ಮಹಮ್ಮದ್ ಶರೀಫ್‌ ಕಾಡುಮಠ Updated:

ಅಕ್ಷರ ಗಾತ್ರ : | |

ಕನ್ನಡ ರಾಜ್ಯೋತ್ಸವದಂದು ಬಿಡುಗಡೆಗೊಂಡು ಮಹಿಳಾ ಸಂವೇದನೆಯನ್ನು ಸೂಕ್ಷ್ಮವಾಗಿ ತೆರೆದಿಡಲು ಪ್ರಯತ್ನಿಸಿದ ಕರಾವಳಿಯ ಕುಂದಗನ್ನಡದ ಚಿತ್ರ ‘ಅಮ್ಮಚ್ಚಿಯೆಂಬ ನೆನಪು’. ಬರಹಗಾರ್ತಿ ವೈದೇಹಿಯವರ ಕಥೆಗಳ ದೃಶ್ಯರೂಪವಾಗಿದ್ದ ಈ ಚಿತ್ರದಲ್ಲಿ ಸೀತಾ ಎನ್ನುವ ಪುಟ್ಟ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡು ಪ್ರೇಕ್ಷಕರ ಮನತಲುಪಿದ ಪೋರಿ ದಿಯಾ ಪಾಲಕ್ಕಲ್.

ದಿಯಾ ಪಾಲಕ್ಕಲ್ ಬೆಂಗಳೂರಿನವಳು. ಬೆಂಗಳೂರು ನವ್ಕಿಸ್‌ ಎಜುಕೇಶನಲ್‌ ಸೆಂಟರ್‌ನಲ್ಲಿ 8ನೇ ತರಗತಿಯಲ್ಲಿ ಕಲಿಯುತ್ತಿರುವ ದಿಯಾಗೆ ಡಾನ್ಸ್ ಅಂದ್ರೆ ಇಷ್ಟ. ಈಕೆ ಭರತನಾಟ್ಯ ಕಲಾವಿದೆಯು ಹೌದು. ‘ವಿಜಯನಗರ ಬಿಂಬ ಡ್ರಾಮಾ ಸ್ಕೂಲ್‌ನಲ್ಲಿ ತರಬೇತಿಗೆ ಹೋಗುತ್ತಿದ್ದೆ. ‘ಅಮ್ಮಚ್ಚಿ...’ ಸಿನಿಮಾ ನಿರ್ದೇಶಕಿ ಚಂಪಾ ಶೆಟ್ಟಿ ಒಂದು ಬಾರಿ ಮುಖ್ಯ ಅತಿಥಿಯಾಗಿ ಅಲ್ಲಿಗೆ ಬಂದಿದ್ದರು. ನನ್ನ ಅಭಿನಯ ಕಂಡು ಸಿನಿಮಾಕ್ಕೆ ಆಯ್ಕೆ ಮಾಡಿದರು’ ಎಂದು ನೆನಪು ಮಾಡಿಕೊಳ್ಳುತ್ತಾಳೆ ದಿಯಾ. ‘ಅಮ್ಮಚ್ಚಿಯೆಂಬ ನೆನಪು’ ಚಿತ್ರತಂಡದ ಜತೆಗೆ ತುಂಬಾ ಖುಷಿಯಾಗಿ ಸಮಯ ಕಳೆದೆ. ಎಲ್ಲರೂ ಚೆನ್ನಾಗಿಮಾತಾಡಿಸುತ್ತಿದ್ದರು. ಶಾಲೆಯ ಕಾರ್ಯಕ್ರಮಗಳಲ್ಲೆಲ್ಲ ನಟಿಸುತ್ತಿದ್ದೆ. ಹೆಚ್ಚಾಗಿ ಡಾನ್ಸ್ ಮಾಡುತ್ತೇನೆ. ಎಲ್ಲರೂ ಫ್ರೆಂಡ್ಲಿಯಾಗಿ ಇದ್ದಿದ್ದರಿಂದ ಸಿನಿಮಾದಲ್ಲಿ ನಟಿಸಲು ಸುಲಭ ಆಯ್ತು’ ಎನ್ನುವುದು ದಿಯಾ ಅಭಿಪ್ರಾಯ.

ದಿಯಾ ಪಾಲಿಗೆ ಅಮ್ಮಚ್ಚಿಯೆಂಬ ನೆನಪು ನಾಲ್ಕನೇ ಚಿತ್ರ. ಜಾನ್‌ ಜಾನಿ ಜನಾರ್ದನ್‌ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಈ ಹುಡುಗಿ, ಬಳಿಕ ‘ಜಾನಿ ಜಾನಿ ಎಸ್‌ ಪಪ್ಪಾ’ ಮತ್ತು ‘ಭರ್ಜರಿ’ ಚಿತ್ರಗಳಲ್ಲಿಯೂ ಅಭಿನಯಿಸಿದ್ದಾಳೆ. ಕನ್ನಡದ ‘ಕಿನ್ನರಿ’ ಎಂಬ ಧಾರಾವಾಹಿಯಲ್ಲೂ ದಿಯಾ ಅಭಿನಯಿಸಿದ್ದಾಳೆ. ಅಲ್ಲದೆ ‘50’ ಎನ್ನುವ ಹೆಸರಿನ 30ನಿಮಿಷಗಳ ಕಿರುಚಿತ್ರವೊಂದರಲ್ಲಿ ಮುಖ್ಯ ಪಾತ್ರದಲ್ಲಿ ದಿಯಾ ಕಾಣಿಸಿಕೊಂಡಿದ್ದಾಳೆ. ತಾಯಿ ರಮ್ಯಾ ಕೂಡಾ ಕಿರುತೆರೆ ನಟಿಯಾಗಿದ್ದು, ಕಿರಿ ವಯಸ್ಸಿನಲ್ಲೇ ಮಗಳೂ ತಾಯಿಯ ಜಾಡು ಹಿಡಿದಿರುವುದು ವಿಶೇಷ.‌‘ಕುಂದಾಪುರ ಕನ್ನಡ ನನಗೆ ಗೊತ್ತಿಲ್ಲ. ಚಿತ್ರದ ಸಂಭಾಷಣೆಗಾಗಿ ಅಲ್ಪಸ್ವಲ್ಪ ಕಲಿತು ನಿರ್ವಹಿಸಿದೆ. ಚಿತ್ರದ ಬಗ್ಗೆ, ನನ್ನ ಅಭಿನಯದ ಬಗ್ಗೆ ಎಲ್ಲರಿಂದಲೂ ಒಳ್ಳೆಯ ಅಭಿಪ್ರಾಯ ಇದೆ. ನನ್ನ ಸ್ನೇಹಿತರೂ ಖುಷಿಪಟ್ಟಿದ್ದಾರೆ’ ಎನ್ನುತ್ತಾಳೆ ದಿಯಾ. ಮುಂದೆ ಫ್ಯಾಶನ್‌ ಡಿಸೈನರ್ ಆಗಬೇಕೆನ್ನುವುದು ದಿಯಾ ಕನಸು. ‘ರಕ್ಷಿತ್‌ ಶೆಟ್ಟಿ, ಯಶ್ ಫೇವರಿಟ್‌ ಹೀರೋಗಳು ಎನ್ನುವ ದಿಯಾಗೆ, ಹೀರೋಯಿನ್‌ಗಳಲ್ಲಿ ಯಾರೂ ಫೇವರಿಟ್‌ ಇಲ್ಲವಂತೆ. ನಟನೆಯ ಬಗ್ಗೆ ಮೊದಲಿನಿಂದಲೂ ಆಸಕ್ತಿ ಹೊಂದಿರುವ ದಿಯಾ ಸಿನಿ ಕ್ಷೇತ್ರದಲ್ಲಿ ಇನ್ನಷ್ಟು ಬೆಳೆಯುವ ನಿರೀಕ್ಷೆ ಇಟ್ಟುಕೊಂಡಿದ್ದಾಳೆ.

ತಮಿಳು ಧಾರಾವಾಹಿಯಲ್ಲಿ ದಿಯಾ

ತಮಿಳಿನ ಹೊಸ ಧಾರಾವಾಹಿಯೊಂದರ ಮಗಳ ಪಾತ್ರದಲ್ಲಿ ನಟಿಸುತ್ತಿದ್ದಾಳೆ ದಿಯಾ ಪಾಲಕ್ಕಲ್. ಡಿ. 10ರಿಂದ ತಮಿಳಿನ ಸನ್‌ ಟಿ.ವಿ. ಯಲ್ಲಿ ಪ್ರಸಾರವಾಗಲಿರುವ ‘ಲಕ್ಷ್ಮೀ ಸ್ಟೋರ್ಸ್‌’ ಎಂಬ ಧಾರಾವಾಹಿ ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲೂ ಪ್ರಸಾರಗೊಳ್ಳಲಿದೆ.

‘ಶಾಲೆಯ ದಿನಗಳ ನಡುವೆ ಸೀರಿಯಲ್‌ ನಟನೆ ಹೊಂದಿಸಿಕೊಂಡು ಹೋಗುತ್ತಿದ್ದೇನೆ. ಶೂಟಿಂಗ್ ಚೆನ್ನೈನಲ್ಲಿ ನಡೆಯುತ್ತಿದೆ. ಅನುಕೂಲವಾಗುವಂತೆ ರಜೆಯ ವೇಳೆ ಶೂಟಿಂಗ್‌ಗೆ ಹೋಗುತ್ತೇನೆ. ತಮಿಳು, ತೆಲುಗು ಭಾಷೆಗಳಲ್ಲಿ ಏಕಕಾಲದಲ್ಲಿ ಸೀರಿಯಲ್‌ ಸಿದ್ಧವಾಗುತ್ತಿದೆ. ಮಲಯಾಳಂಗೆ ಡಬ್ಬಿಂಗ್ ಮಾಡಲಾಗುತ್ತದೆ. ತಮಿಳು, ತೆಲುಗು ಭಾಷೆ ಗೊತ್ತಿಲ್ಲ ನನಗೆ. ಇತ್ತೀಚೆಗೆ ಕಲಿಯತೊಡಗಿದ್ದೇನೆ. ತಂಡದವರು ಸೆಟ್‌ನಲ್ಲಿ ಆತ್ಮೀಯತೆಯಿಂದ ಇದ್ದರೂ ಸ್ವಲ್ಪ ಮಟ್ಟಿಗೆ ಕಟ್ಟುನಿಟ್ಟಾಗಿಯೂ ಇರುತ್ತಾರೆ’ ಎನ್ನುತ್ತಾಳೆ ಈ ಪೋರಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು