ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಥೆಕೂಟ: ಭಾವದ ಒಲುಮೆಗೆ ಭಾಷೆಯ ಗಂಧ

Last Updated 23 ಜೂನ್ 2022, 5:32 IST
ಅಕ್ಷರ ಗಾತ್ರ

ಸಹಜವಾಗಿ ನೋಡಿದರೆ ಸಾಹಿತ್ಯ ಎಲ್ಲರನ್ನೂ ತನ್ನ ಒಳಗೆ ಬಿಟ್ಟುಕೊಳ್ಳುವದಿಲ್ಲ. ಅದು ಅದರ ಜಂಭವಲ್ಲ. ಮಡಿವಂತಿಕೆ. ಸಿರಿವಂತಿಕೆ ಕೂಡ. ಹಾಗಂದ್ರೆ ಅದು ತನಗೆ ತಾನೇ ಹಾಕಿಕೊಂಡ ನೀತಿ ನಿಯಮಗಳು ಎಂದರ್ಥ. ಇದನ್ನೇ ನಾನು ಕಟ್ಟು ಪಾಡು, ರೀತಿ ರಿವಾಜು ಅಂದರೆ ಇದು ಕೆಲವು ಸಂಕುಚಿತ ನೋಟದತ್ತ ವಾಲುವ ಅನಾಹುತ ಇದೆ. ಇದೇ ಈ ಸಾಹಿತ್ಯದ ಒಳಮನದ ಮರ್ಯಾದೆ. ಅದಾ ಘನತೆ. ಅಂತರ್ಚೇತನ. ಈ ಧೋರಣೆ ಸಂಗೀತ, ಕಲೆಗಳೇ ಮೊದಲಾದ ಎಲ್ಲಾ ಸಾಂಸ್ಕೃತಿಕ ಶಕ್ತಿಗೂ ಹಾಗೆಯೇ ಅನ್ವಯವಾಗುತ್ತದೆ. ಏಕೆಂದರೆ ಅವು ಎಲ್ಲಾ ಹಾಗೆಯೇ ಇದೆ. ಆದುದರಿಂದ ಆ ಮಹಾ ಲೋಕದ ಒಳ ಪ್ರವೇಶ, ಅಲ್ಲಿನ ಚಲನೆ, ಅರಿವು, ಎಲ್ಲಾ ದಾಟಿದ ಮೇಲೆ ಕಾಣುವ ಅದರ ಸತ್ವ ಒಂದು ವಿಶೇಷ ಅನುಭೂತಿಯನ್ನು ಕೊಡುವುದು. ಇದೇ ನಿಜವಾದ ಮರ್ಯಾದೆ. ಅದರ ನೈಜತನ. ಇದನ್ನು ನಾನು ಮಡಿವಂತ ತನ ಎಂಬ ವಿಶಾಲ ಅರ್ಥದಲ್ಲಿ ಹೇಳಿದ್ದು. ಹೀಗಾಗಿ ಸಾಹಿತ್ಯ ಎನ್ನುವುದು ತನ್ನನ್ನು ಒಪ್ಪಿದವರಿಗೆಲ್ಲ ಸಿಗುವುದಿಲ್ಲ. ಹಾಗಂತ ಪ್ರಾಮಾಣಿಕವಾಗಿ ಒಪ್ಪಿಸಿಕೊಂಡವರಿಗೆ ಸಿಗುವುದು ಖಂಡಿತಾ. ಅದನ್ನು ಅರಿತು ನಡೆದರೆ, ನಡೆಸಿದರೆ ಹೊಸ ಹುಟ್ಟುಗಳ ಪ್ರವೇಶ, ಪ್ರತಿಭಾ ಅನಾವರಣ ಸಾಧ್ಯ.

ಈ ಪಥಸೂತ್ರವೇ ಸಾಹಿತ್ಯದ ಒಂದು ಸಶಕ್ತ ಮಾಧ್ಯಮವಾದ, ವಿಭಾಗವಾದ ಕಥೆಗೂ ಜೀವಾಳ. ಈ ವಿಚಾರವನ್ನು ಅರಿಯುವ ಬಗೆ ಹೇಗೆ? ನಡೆವ ಕ್ರಮ ಎಂತು? ಇದನ್ನು ಹೇಳುವವರು ಯಾರು? ಕುತೂಹಲದಿಂದ ಕೇಳುವವರು ಯಾರು? ಇದರ ಹಿನ್ನೆಲೆ ಹೇಗಿದೆ? ವರ್ತಮಾನದ ಸ್ಪಂದನೆ ಹೇಗೆ? ಮುಂಧೋರಣೆಯನ್ನು ಚಿತ್ರಿಸುವುದು ಹೇಗೆ? ಎಲ್ಲಕ್ಕೂ ರತ್ನಪ್ರಾಯವಾಗಿ ಸಕಾರಾತ್ಮಕ ಸಾಮಾಜಿಕ ಸಂದೇಶ ಏನು? ಇದೆಲ್ಲವುದರ ಉತ್ತರವೇ ಕಥೆಕೂಟ ಎಂಬ ವಾಟ್ಸ್‌ಆ್ಯಪ್ ಬಳಗ.

ಮೇಲ್ನೋಟಕ್ಕೆ ಒಂದು ವಾಟ್ಸ್‌ಆ್ಯಪ್ ಕೂಟಕ್ಕೆ ಇಷ್ಟು ಶಕ್ತಿಯೇ ಎಂದು ಅನುಮಾನ ಕಾಡದೇ ಬಿಡದು. ಹೌದು ಎಂದು ನಾನು ದೃಢವಾಗಿ ಹೇಳುವುದು ಇದರೊಂದಿಗಿನ ನನ್ನ ಒಡನಾಟ ಹಾಗೂ ಅನುಭವದ ವಾಸ್ತವ ಪ್ರಜ್ಞೆಯಿಂದ.

ಸಂಸ್ಥಾಪಕರು ಅನುಗಾಲದ ಸ್ನೇಹಿತರು ಹಾಗೂ ಅಪ್ಪಟ ಸಾಹಿತಿಗಳಾದ ಉಪ್ಪಿನಂಗಡಿ ಮೂಲದ ಗಿರೀಶ್ ರಾವ್ ಹಾಗೂ ಗೋಪಾಲಕೃಷ್ಣರು. ಬಾಲ್ಯದಲ್ಲಿ ಹೀಗಿದ್ದವರು ಕಥಾಲೋಕದಲ್ಲಿ , ಸಾಹಿತ್ಯದ ವಲಯದಲ್ಲಿ ಜೋಗಿ ಹಾಗೂ ಗೋಪಾಲಕೃಷ್ಣ ಕುಂಟಿನಿ ಎಂದೇ ಸ್ಥಿರವಾಗಿ ಚಿರಪರಿಚಿತರಾದವರು. ಅವರ ಪ್ರಾಂಜಲ ಕಳಕಳಿಯಿಂದ ಈ ಕಥೆಕೂಟದ ಉಗಮವಾಯಿತು. ಕೇವಲ ಆರೇ ವರ್ಷಗಳ ಹಿಂದೆ. ಇದು ಈಗ ಇತಿಹಾಸ.

ಶಿಸ್ತು ಇಲ್ಲಿ ಸ್ವಾತಂತ್ರ್ಯದ ವ್ಯಾಪ್ತಿಯಲ್ಲಿ. ಸ್ವೇಚ್ಛೆಗೆ ಕಡಿವಾಣ ಅವರವರೇ ಅರಿತುಕೊಂಡು ವ್ಯವಹರಿಸುವ ಹಾಗೆ ವಾತಾವರಣವಿರುತ್ತದೆ. ಸಂದೇಶಗಳನ್ನು ಅಥವಾ ಅಭಿಮತಗಳನ್ನು ಹಾಕುವಾಗ ಎಮೋಜಿ ಬಳಸುವುದು ನಿಷೇಧ. ಕಾರಣ ಅಕ್ಷರಗಳು ಹೇಳುವ ಭಾವ ಮತ್ತು ಆಸಕ್ತಿಯ ಮಧುರಾನುಭವವನ್ನು ಕಳಕೊಳ್ಳದೇ ಇರಲು. ಎಲ್ಲರೂ ನಿಷ್ಠೆಯಿಂದ ಪಾಲಿಸುವುದು ಪ್ರೀತಿಯಿಂದ.

ಹಿರಿಯರು ಕಿರಿಯರು ಒಟ್ಟೊಟ್ಟಿಗೆ ಕಥೆ ಬರೆಯುತ್ತಾರೆ. ನೇರಾ ನೇರ ಟೀಕೆ ಟಿಪ್ಪಣಿಗೆ ಕೊರಳೊಡ್ಡುತ್ತಾರೆ. ಪ್ರಬುದ್ಧ, ಲಘು ಪ್ರತಿಕ್ರಿಯೆಗಳೂ ಸಹಜ. ಆದಾಗ್ಯೂ ಎಲ್ಲವೂ ಶಿಕ್ಷಣವೇ. ಪ್ರತಿಕ್ರಿಯೆಯನ್ನೇ ಕೊಡದಿದ್ದರೆ ಅಡ್ಮಿನ್ ಚುರುಕು ಮುಟ್ಟಿಸುವುದು ಖಚಿತ. ಒಮ್ಮೊಮ್ಮೆ ವೈಯಕ್ತಿಕ ಅಪಕ್ವ ವಿಮರ್ಶೆ ಬಂದಾಗ ಹಿರಿಯ ಸದಸ್ಯರು ಸರಿಪಡಿಸುತ್ತಾರೆ. ಅಥವಾ ಅವರಿಗೇ ನೇರ ಹೇಳುತ್ತಾರೆ. ಅಥವಾ ಒಮ್ಮೆಲೇ ಮೌನ ವಹಿಸಿ ಅಪಕ್ವ ನಿಲುವನ್ನು ಸರಳವಾಗಿ ಅಳಿಸಿ ಬಿಡುತ್ತಾರೆ. ಹೀಗಿದ್ದೂ ಕಥೆಗಳ ಒಳ ನೋಟ, ತಿರುವುಗಳ ಮಹತ್ವ, ಅನ್ಯ ಕತೆಗಳ ಕಾಲ ದೇಶಗಳೊಡನೆ ಹೋಲಿಕೆ, ಇತ್ಯಾದಿಗಳನ್ನು ಹೇಳುತ್ತಾ, ತಿಳಿಸುತ್ತಾ, ಮೌಲ್ಯ ವರ್ಧನೆಗೆ ಕೂಟದ ಶ್ರಮವಂತೂ ಇದ್ದೇ ಇರುತ್ತದೆ.

ಕಥೆಕೂಟದ ಚಲನಶೀಲತೆಯ ಇನ್ನೊಂದು ಅಂಶ ಕಥಾ ಸರಣಿಯ ಆಯೋಜನೆ. ಅದು ಒಂದು ಮೂಲ ವಾಕ್ಯದ ಮೂಲಕ ಆಗಬಹುದು. ಅಥವಾ ಋತು ಆಧಾರ ವಾಗಿರಬಹುದು. ಮಳೆಗಾಲ, ಚಳಿಗಾಲ, ಬೇಸಿಗೆಯೂ ಕಥೆಯ ವಸ್ತುವಾಗಬಹುದು. ಬರೆಯದೇ ಹಿಂದುಳಿಯುವ ಯುವಕರಿಗೆ ಬೆಚ್ಚಗಿನ ಚಾಟಿ ಇದ್ದರೆ, ಪ್ರಯತ್ನ ಶೀಲರನ್ನು ಧಾರಾಳ ಪ್ರೋತ್ಸಾಹಿಸುತ್ತ ಎಂದೂ ದಂತಭಗ್ನತೆ ನೋವಿಗೆ ಈಡಾಗದ ಕಾಳಜಿ ಇದ್ದೇ ಇದೆ. ಅದರ ಪರಿಣಾಮವೇ ಅದೆಷ್ಟೋ ಹೊಸ ಪೀಳಿಗೆಯವರ ಕಥೆಗಳು ಚೊಚ್ಚಲ ಪುಸ್ತಕಗಳಾದವು. ಹಾಗೂ ವ್ಯಾಪಕ ವಿಮರ್ಶೆ ಗಳಿಂದ ಸಾರಸ್ವತ ಲೋಕದಲ್ಲಿ ಭರವಸೆ ಮೂಡಿಸುವಲ್ಲಿಯೂ ಸಾಧ್ಯವಾದವು.

ವರ್ಷಕ್ಕೊಮ್ಮೆ ಎರಡು ದಿನಗಳ ಸಮಾವೇಶ ವೆನ್ನುವುದು ಒಂದು ಸ್ಮರಣೀಯ ಅನುಭವ ನೀಡುವುದು. ಇಲ್ಲಿ ಸರಸವಿದೆ. ಕಥೆಯ ಸುತ್ತವೇ ಹರಿವ ಚಿಂತನೆಗಳಿದೆ. ಕಾವ್ಯದ ಬೇರೆ ಬೇರೆ ಮಜಲುಗಳ ಮೇಲೆ ಅಶು ಚಿಂತನೆ ಗಳೂ, ಸಿದ್ಧತೆಯ ಯೋಚನೆಗಳೂ, ಸವಾಲು - ಪ್ರತಿ ಸವಾಲುಗಳು ಧಾರಾಳ ಇದೆ. ಸ್ಪರ್ಧೆಗಳೂ ಸಹ ಇಲ್ಲಿ ಸಮಯ ಮಿತಿಯಲ್ಲಿಯೇ ನಡೆಯುತ್ತವೆ. ಇದಕ್ಕೆಲ್ಲ ಸಾಂಸ್ಥಿಕ ಮಾದರಿಯಲ್ಲಿ ಸಾರ ಸಂಗ್ರಹವೂ, ಗುರಿ ಗಮನ ನಿರ್ದೇಶನವೂ ಅಂತಿಮವಾಗಿ ಲಭ್ಯವಿರುತ್ತದೆ. ಇದೆಲ್ಲ ಕೂಟದ ಹಿರಿಯರಿಂದ ಅಥವಾ ಅರ್ಹರಿಂದ ನೆರವೇರುತ್ತದೆ.

ಇಷ್ಟಾದರೂ ಕೂಟದಿಂದ ಹೊರ ಹೋಗುವವರೂ ಇದ್ದಾರೆ. ಸ್ವಲ್ಪಕಾಲ ಸಕ್ರಿಯನಾಗಲಾರೆ ಎಂದು ವಿನಂತಿಸುವವರೂ ಇದ್ದಾರೆ. ಆಮೇಲೆ ಪುನಃ ಬಂದು ಸೇರುವವರೂ ಇದ್ದಾರೆ. ಎಲ್ಲಾ ವ್ಯವಸ್ಥೆ ಯಲ್ಲಿರುವ ಸಹಜ ಲೋಪವಿದು. ಕಾಲದ ಗುಣವೂ ಹೌದು. ಹಾಗಿದ್ದೂ ಇಲ್ಲಿನ ಮೂಲ ವಿನ್ಯಾಸ, ಧೋರಣೆ ಅಭಾದಿತ. ವ್ಯಕ್ತಿಯನ್ನು ಮೀರಿದ ವಿಷಯ ವಿಚಾರಗಳೇ ಲಕ್ಷ್ಯ.

ಆದುದರಿಂದಲೇ ಕಥೆಕೂಟ ಎಂದರೆ ವ್ಯಕ್ತವಾಗಿಯೂ, ಮೌನವಾಗಿಯೂ, ಸಾಮರ್ಥ್ಯವಂತರ ಹಾಗೂ ಈ ಕ್ಷೇತ್ರದ ವಿದ್ಯಾರ್ಥಿಗಳ ಮನದ ಮೌನದ ಶೃಂಖಲೆ ಹರಿದೊಗೆದು ಅಕ್ಷರ ರೂಪದಲ್ಲಿ ದಿವ್ಯ ತೇಜದಿಂದ ಪ್ರಕಾಶಿಸುವ ಕೂಟ. ಬಿಡಿ ಬಿಡಿಯಾದ ಭಾವದ ಒಲುಮೆಯ ತಂತುಗಳಿಗೆ ಭಾಷೆಯ ಗಂಧ ಲೇಪಿಸಿ ಸಂಸ್ಕರಿಸುವ ಕುಟುಂಬ. ಪುಟ್ಟ ಪುಟ್ಟ ಹೆಜ್ಜೆಗಳನ್ನು ಧೀರ, ದಿಟ್ಟ ಚರಿತ್ರೆಯನ್ನಾಗಿಸುವ ಕಥಾಯೋಗದ ನಿರ್ಮಲ ನೆಲೆ.

ಲೇಖಕರು: ಸೆಲ್ಕೋ-ಇಂಡಿಯಾ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT