ಸೋಮವಾರ, ಮೇ 17, 2021
31 °C

ಯುವ ಮನಸು; ಹೊಸ ಕನಸು| ದೇಶ ಸುತ್ತಿ ರಂಗದ ಅಂತರಂಗ ಅರಿಯುವೆ

ದಿಶಾ ರಮೇಶ್, ರಂಗ ಗಾಯಕಿ Updated:

ಅಕ್ಷರ ಗಾತ್ರ : | |

Prajavani

ನನ್ನ ಪಾಲಿಗೆ ಹೊಸ ವರ್ಷವಷ್ಟೇ ಹೊಸತನವಲ್ಲ; ‘ನಟನ’ ರಂಗಶಾಲೆಯಲ್ಲಿರುವಾಗ ಪ್ರತಿಕ್ಷಣವೂ ಹೊಸತು. ಈಚೆಗಷ್ಟೇ ರಂಗಭೂಮಿಯಲ್ಲಿ ಸ್ನಾತಕೋತ್ತರ ಪದವಿ (ಎಂ.ಎ) ಮುಗಿಸಿದ್ದೇನೆ. ಇಷ್ಟು ವರ್ಷಗಳ ರಂಗಾನುಭವದ ಜೊತೆಗೆ ಈಗ ಪದವಿಯೂ ಕೈಯಲ್ಲಿರುವುದು ನನ್ನಲ್ಲಿ ಮತ್ತಷ್ಟು ಆತ್ಮವಿಶ್ವಾಸ ಹೆಚ್ಚಿಸಿದೆ.

ಹೊಸ ವರ್ಷದಲ್ಲಿ ‘ನಟನ’ದಲ್ಲಿ ಮತ್ತಷ್ಟು ಕ್ರಿಯಾತ್ಮಕವಾಗಿ ತೊಡಗಿಸಿಕೊಂಡು ಹೊಸ ತಲೆಮಾರಿನ ವಿವಿಧ ಕ್ಷೇತ್ರದ ಜನರನ್ನು ರಂಗಭೂಮಿಗೆ ಪರಿಚಯಿಸುವುದು ನನ್ನ ಕನಸು. ಗಾರೆ ಕೆಲಸದವರು, ಎಂಜಿನಿಯರ್‌ಗಳು ಹೀಗೆ ಭಿನ್ನ ಬಗೆಯ ಜನರನ್ನು ರಂಗಭೂಮಿ ಮೇಲೆ ನೋಡುವುದು ವಿಸ್ಮಯದ ಸಂಗತಿ. ಇಂಥವರಿಗೆ ನಿಜಜೀವನದ ವಿವಿಧ ಮಜಲುಗಳನ್ನು ಪರಿಚಯಿಸಿ ಅವುಗಳನ್ನು ರಂಗದ ಮೇಲೆ ಅಷ್ಟೇ ಸಹಜ ಮತ್ತು ತಾಜಾವಾಗಿ ಪ್ರಸ್ತುತಪಡಿಸುವಂತೆ ಹೇಳಿಕೊಡಬೇಕೆಂಬ ಕನಸಿದೆ.

ನಟನೆ, ರಂಗಸಂಗೀತದಲ್ಲಷ್ಟೇ ಅಲ್ಲ; ನೇಪಥ್ಯ ರಂಗದಲ್ಲೂ ತೊಡಗಿಸಿಕೊಂಡಿದ್ದೇನೆ. ಇದು ರಂಗಭೂಮಿಯಲ್ಲಿ ಸ್ವಾವಲಂಬಿಯಾಗುವ ನನ್ನ ಕನಸಿಗೆ ಬಲ ತುಂಬಿದೆ. ಎಂ.ಎ ಮುಗಿಯುವ ತನಕ ಸಿನಿಮಾ ನಟನೆ ಮುಂದೂಡಿದ್ದೆ. ಉತ್ತಮ ಕಥೆ ಸಿಕ್ಕಲ್ಲಿ ಖಂಡಿತಾ ಅಭಿನಯಿಸುವ ಯೋಜನೆ ಇದೆ. ಎಲ್ಲಕ್ಕಿಂತ ಮುಖ್ಯವಾಗಿ ಹೊಸ ವರ್ಷದಲ್ಲಿ ವಿವಿಧ ರಾಜ್ಯಗಳನ್ನು ಸುತ್ತಾಡಿ ಅಲ್ಲಿನ ರಂಗಭೂಮಿಯ ಅಂತರಂಗವನ್ನು ಅರಿಯುವ ಕನಸಿದೆ. ಆಯಾ ರಾಜ್ಯಗಳ ಸಮಗ್ರ ರಂಗಭೂಮಿ, ರಂಗ ಶಿಕ್ಷಣ, ಪ್ರೇಕ್ಷಕರ ಒಗ್ಗೂಡುವಿಕೆ, ಅಭಿರುಚಿ, ರಂಗ ಸಾಹಿತ್ಯ, ನಿರ್ದೇಶನ ಇತ್ಯಾದಿಗಳನ್ನು ಅರಿಯುವ ಕುತೂಹಲ ನನಗಿದೆ. ವಿವಿಧ ರಾಜ್ಯಗಳ ರಂಗಶಾಲೆಗಳ ಅಧ್ಯಯನವನ್ನು ಸೋಲೊ ಟ್ರಾವೆಲರ್ ಆಗಿ ತಿಳಿದುಕೊಳ್ಳುವ ಕನಸಿದೆ. ಈ ಬಗ್ಗೆ ಈಗಾಗಲೇ ಅಪ್ಪ–ಅಮ್ಮನಿಗೆ ತಿಳಿಸಿ, ಮನದಲ್ಲೇ ಯೋಜನೆ ರೂಪಿಸಿಕೊಳ್ಳುತ್ತಿರುವೆ.

ಅಮ್ಮ ಒಳ್ಳೆಯ ರಂಗ ಗಾಯಕಿ ಹೊಸ ವರ್ಷದಲ್ಲಾದರೂ ಅವರ ರಂಗಗೀತೆಗಳ ದಾಖಲೀಕರಣ ಮಾಡಿಕೊಳ್ಳಬೇಕೆಂಬ ಯೋಜನೆ ಇದೆ. ರಂಗ ಸಂಗೀತದಲ್ಲಿ ಬಳಕೆಯಾಗುವ ವಿವಿಧ ರಾಗಗಳನ್ನು ಮತ್ತಷ್ಟು ಅರಿಯಬೇಕಿದೆ. ಹಾಗೇ ಹೊಸ ನಾಟಕವೊಂದನ್ನು ನಿರ್ದೇಶಿಸಿ, ಅದಕ್ಕೆ ರಂಗ ಸಂಗೀತ ನೀಡುವ ಕನಸಿದೆ. ಇಷ್ಟು ವರ್ಷ ನಟನೆ, ಹಾಡುಗಾರಿಕೆ ಮೂಲಕವೇ ಸ್ಟೇಜ್‌ನಲ್ಲಿ ತೊಡಗಿಸಿಕೊಂಡಿರುವೆ. ಆದರೆ, ನನ್ನೊಳಗಿನ ದಿಶಾಗೆ ಸ್ಟೇಜ್ ಮೇಲೆ ನಿಂತು ಮಾತನಾಡುವ ಧೈರ್ಯ ಇನ್ನೂ ಬಂದಿಲ್ಲ. ಹೊಸ ವರ್ಷದಲ್ಲಿ ಆತ್ಮವಿಶ್ವಾಸದಿಂದ ಸ್ಟೇಜ್ ಮೇಲೆ ಮಾತನಾಡಬೇಕೆಂಬ ಕನಸಿದೆ.

ದಿಶಾ ರಮೇಶ್‌, ರಂಗ ಗಾಯಕಿ 

ನಿರೂಪಣೆ: ಮಂಜುಶ್ರೀ ಎಂ. ಕಡಕೋಳ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು