ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನ 70 ರ ಅನುಸಂಧಾನ : ವೈಯಕ್ತಿಕ ಸ್ವಾತಂತ್ರ್ಯದ ರಕ್ಷಣೆಯೇ ಗುರಿ

Last Updated 23 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಪ್ರಜಾತಂತ್ರ ವ್ಯವಸ್ಥೆಗೆ ಹೆಗ್ಗುರುತೊಂದು ಇದೆ. ಪ್ರಭುತ್ವದ ಪ್ರತೀ ಅಂಗವೂ– ಅಂದರೆ, ಕಾರ್ಯಾಂಗ, ನ್ಯಾಯಾಂಗ ಮತ್ತು ಶಾಸಕಾಂಗ – ಸಂವಿಧಾನ ನಿಗದಿ ಮಾಡಿರುವ ಮಿತಿಯನ್ನು ಮೀರುವಂತಿಲ್ಲ ಎಂಬುದೇ ಆ ಹೆಗ್ಗುರುತು. ದೇಶದ ನೆಲೆಗಟ್ಟಿನ ರೂಪದಲ್ಲಿ ಇರುವ ಸಂವಿಧಾನವು ಎರಡು ಉದ್ದೇಶಗಳನ್ನು ಈಡೇರಿಸುವ ಗುರಿ ಹೊಂದಿದೆ ಎಂಬುದು ಅದನ್ನು ಓದಿದಾಗ ಗೊತ್ತಾಗುತ್ತದೆ. ಮೊದಲನೆಯದು, ಸಂವಿಧಾನಕ್ಕೆ ಸಂಬಂಧಿಸಿದ ಸಂವಾದಗಳಲ್ಲಿ ವ್ಯಕ್ತಿಯನ್ನು ಕೇಂದ್ರವಾಗಿ ಇರಿಸಿಕೊಳ್ಳುವುದು. ಎರಡನೆಯದು, ಸಂವಿಧಾನದಲ್ಲಿ ಹೇಳಿರುವ ನಿಯಮಗಳ ಮೂಲಕ ಆ ಪುಟ್ಟ ಮಾನವನಿಗೆ ರಕ್ಷಣೆ ಒದಗಿಸುವುದು.

ಆದರೆ, ಕಾನೂನಿನ ಅನುಷ್ಠಾನ ಹಾಗೂ ತನ್ನೆಲ್ಲ ಪ್ರಜೆಗಳನ್ನು ಒಂದೇ ಬಗೆಯಲ್ಲಿ ಕಾಣಬೇಕಿರುವ ಹೊಣೆ ಕೂಡ ಸಂವಿಧಾನದ ಮೇಲಿದೆ. ಹಾಗಾಗಿ, 1949ರ ನವೆಂಬರ್‌ 26ರಂದು ಅಂಗೀಕಾರ ಪಡೆದುಕೊಂಡ ನಮ್ಮ ಸಂವಿಧಾನದ ಇತಿಹಾಸ ಅಂದರೆ, ವೈಯಕ್ತಿಕ ಸ್ವಾತಂತ್ರ್ಯವನ್ನು ರಕ್ಷಿಸುವ ಸಾಂವಿಧಾನಿಕ ಗುರಿ ಹಾಗೂ ಎಲ್ಲರ ಜೀವನಮಟ್ಟವನ್ನು ಸುಧಾರಿಸುವ ಆಡಳಿತದ ಗುರಿಗಳ ನಡುವಿನ ಸಂಘರ್ಷವೂ ಹೌದು. ಹಾಗಾಗಿ, ನಮ್ಮ ಪ್ರಜಾತಂತ್ರದ ಪ್ರಬುದ್ಧತೆಯನ್ನು ಒರೆಗೆ ಹಚ್ಚುವಾಗ ನಮ್ಮ ಸಮಾಜದ ಒಳಗೆ ಹತ್ತಾರು ಕಡೆಗಳಿಂದ ಪ್ರವೇಶಿಸುವ ಈ ಎರಡು ವಿರುದ್ಧಾತ್ಮಕ ಶಕ್ತಿಗಳನ್ನು ಸಮತೋಲನದಿಂದ ನೋಡುವ ಕೆಲಸವೂ ಆಗಬೇಕಾಗುತ್ತದೆ. ಚುನಾವಣಾ ಅನಿವಾರ್ಯಗಳು ಒಮ್ಮೊಮ್ಮೆ ತಮ್ಮ ಶಕ್ತಿ ತೋರಿಸಿದರೆ, ಕೆಲವು ಸಂದರ್ಭಗಳಲ್ಲಿ ವ್ಯಕ್ತಿಗಳ ಮಹತ್ವಾಕಾಂಕ್ಷೆಗಳು ಸಮಾಜದಲ್ಲಿ ತಲ್ಲಣ ಸೃಷ್ಟಿಸುತ್ತವೆ. ನ್ಯಾಯಾಂಗ ನೀಡುವ ಪರಿಪೂರ್ಣವಲ್ಲದ ಕೆಲವು ತೀರ್ಮಾನಗಳು ಸಾಂವಿಧಾನಿಕ ತತ್ವಗಳ ಮೇಲೆ ಪ್ರಭಾವ ಬೀರುತ್ತವೆ. ಕೆಲವು ಸಂದರ್ಭಗಳಲ್ಲಿ, ಕೆಲವು ವ್ಯಕ್ತಿಗಳ ವೈಯಕ್ತಿಕ ಸಿದ್ಧಾಂತಗಳು ಕಾನೂನಿನ ಪರಿಣಾಮಕಾರಿ ಅನುಷ್ಠಾನದಲ್ಲಿ ಒತ್ತಡ ಸೃಷ್ಟಿಸುತ್ತವೆ.

ಈ ಮೇಲಿನ ಅಂಶಗಳ ಆಧಾರದಲ್ಲಿ ನಾವು, ಕಳೆದ ಅರ್ಧ ಶತಮಾನಕ್ಕೂ ಹೆಚ್ಚಿನ ಅವಧಿಯಲ್ಲಿ ನಮ್ಮ ಸಂವಿಧಾನ ಕ್ರಿಯಾರೂಪದಲ್ಲಿ ಹೇಗೆ ವಿಕಸನ ಹೊಂದಿದೆ ಎಂಬುದನ್ನು ಪರಿಶೀಲಿಸಬೇಕು. ಆ ಮೂಲಕ ಸಂವಿಧಾನ ಎದುರಿಸುತ್ತಿರುವ ನಿಜವಾದ ಅಪಾಯಗಳನ್ನು ಅರ್ಥ ಮಾಡಿಕೊಳ್ಳಬೇಕು. ಇವನ್ನು ಅರ್ಥ ಮಾಡಿಕೊಂಡರೆ ನಮಗೆ ಸಾಂವಿಧಾನಿಕ ಆಡಳಿತದ ಸಂಕೀರ್ಣತೆಗಳು ಗೊತ್ತಾಗುತ್ತವೆ.

ನಮ್ಮ ಸಂವಿಧಾನದ ಆದಿಯಿಂದ ಅಂತ್ಯದವರೆಗೆ ಕಾಣುವ ಎಳೆ ‘ಇತಿಮಿತಿಯ ಆಡಳಿತ’. ಸಂವಿಧಾನ ನೀಡಿರುವ ಎಲ್ಲ ಅಧಿಕಾರಗಳಿಗೂ ಮಿತಿ ಇದೆ– ಅಂದರೆ, ಯಾವುದನ್ನು ಮಾಡಬಹುದು, ಯಾವುದನ್ನು ಮಾಡಬಾರದು ಎಂಬುದನ್ನು ನಿರ್ದಿಷ್ಟವಾಗಿ ಹೇಳಲಾಗಿದೆ. ಆ ಮೂಲಕ ಯಾವುದೇ ಅಧಿಕಾರದ ದುರ್ಬಳಕೆ ಆಗದಂತೆ ನೋಡಿ ಕೊಳ್ಳಲಾಗಿದೆ. ಅಧಿಕಾರದ ದುರ್ಬಳಕೆ ಆಗಬಹುದು ಎಂಬುದನ್ನು ಮೊದಲೇ ಗುರುತಿಸುವ ಯತ್ನ ನಡೆಸಿ, ಹಾಗೆ ಆಗದಂತೆ ತಡೆಯುವ ವ್ಯವಸ್ಥೆ ಸೃಷ್ಟಿಸಿದ ನಮ್ಮ ಸಂವಿಧಾನ ವಿಶ್ವದ ಅತ್ಯಂತ ದೀರ್ಘ ಸಂವಿಧಾನ ಆಗಿರುವುದು ಆಶ್ಚರ್ಯಕರ ಸಂಗತಿಯೇನೂ ಅಲ್ಲ. ಹಾಗಾಗಿ, ಸಂವಿಧಾನದ ಆಶಯಗಳು ಯಶಸ್ವಿಯಾಗಿ ಕ್ರಿಯಾರೂಪಕ್ಕೆ ಬರಬೇಕು ಎಂದಾದರೆ ಸಂವಿಧಾನವೇ ಹೇಳಿರುವ ಮಿತಿಗಳನ್ನು ಜಾಗರೂಕವಾಗಿ ಪಾಲಿಸಬೇಕಾಗುತ್ತದೆ– ಆ ಪಾಲಿಸುವಿಕೆಯ ಫಲಿತಾಂಶ ಅಷ್ಟೇನೂ ಹಿತಾನುಭವ ನೀಡದಿದ್ದರೂ ಇದಕ್ಕೆ ಒಂದು ಉದಾಹರಣೆಯನ್ನು ನೀಡಬಹುದು. ಅಸಾಮಾನ್ಯ ಸಂದರ್ಭಗಳಲ್ಲಿ –ಅಂದರೆ ತುರ್ತು ಪರಿಸ್ಥಿತಿಯಂತಹ ಸಂದರ್ಭಗಳಲ್ಲಿ– ನಿರ್ಣಯ ಕೈಗೊಳ್ಳುವ ವಿಚಾರದಲ್ಲಿ ಕಾರ್ಯಾಂಗಕ್ಕೆ ವ್ಯಾಪಕ ಅಧಿಕಾರ ನೀಡಲಾಗಿದೆ. ಆದರೆ, ಸಾಂವಿಧಾನಿಕ ಪರಿಶೀಲನೆ/ ಪರಾಮರ್ಶೆಯಿಂದಲೂ ಹೊರತಾಗಿ ಇರುವಂತೆ ಈ ಅಧಿಕಾರವನ್ನು ನೀಡುವುದು ಸರಿಯಲ್ಲ.

ಅತ್ಯಂತ ಸಂಕೀರ್ಣವಾದ ಪ್ರಕರಣಗಳ ಮೂಲಕ ರೂಪುಗೊಳ್ಳುವ ಕಾನೂನುಗಳು ಎಲ್ಲ ಸಂದರ್ಭಗಳಲ್ಲೂ ಅನ್ವಯಿಸಲು ಆಗುವಂತೆ ಇರುವುದಿಲ್ಲ. ಇದಕ್ಕೆ ನಿದರ್ಶನವಾಗಿ, ಕಾನೂನು ಪ್ರಕ್ರಿಯೆ ಪಾಲಿಸದೆ, ನ್ಯಾಯಾಂಗದ ಪರಿಶೀಲನೆಗೂ ಒಳಪಡದ ರೀತಿಯಲ್ಲಿ ವ್ಯಕ್ತಿಯ ಜೀವಿಸುವ ಹಕ್ಕನ್ನು ಅಮಾನತಿನಲ್ಲಿ ಇರಿಸಬಹುದು ಎಂಬುದನ್ನು ಎತ್ತಿ ಹಿಡಿದ ‘ಎಡಿಎಂ ಜಬಲ್ಪುರ’ದಂತಹ ಪ್ರಕರಣಗಳು ಇವೆ. (ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪು, 2017ರಲ್ಲಿ ಅಸಿಂಧುವಾಯಿತು)

ಹಾಗಾಗಿ, ಸಂವಿಧಾನದ ಅಡಿಯಲ್ಲಿ ವ್ಯಕ್ತಿಯೊಬ್ಬ ಹೊಂದಿರುವ ಸ್ಥಾನ ಏನು ಎಂಬುದನ್ನು ಗಮನಿಸುವುದು ಮುಖ್ಯ. ವ್ಯಕ್ತಿಯ ಸ್ಥಾನ ನಿರ್ವಾತದಲ್ಲಿ ಇರುವ ವಸ್ತುವೊಂದರಂತೆ ಅಲ್ಲ. ಹಕ್ಕುಗಳು ಮತ್ತು ಕರ್ತವ್ಯಗಳನ್ನು ಸಂಗೀತದ ರಾಗಗಳೆಂದು ಭಾವಿಸಿದರೆ, ಆ ರಾಗಗಳ ಜೊತೆ ಮಿಳಿತವಾಗಿರುವ ಒಂದು ಸ್ವರದಂತೆ ಆ ವ್ಯಕ್ತಿಯ ಸ್ಥಾನ. ಸಂವಿಧಾನದ ಪ್ರಕಾರ, ವ್ಯಕ್ತಿಯೊಬ್ಬನ ಸ್ಥಾನವು ಸಮಷ್ಟಿಯಿಂದ ಪ್ರತ್ಯೇಕಿಸಲಾಗದು. ವ್ಯಕ್ತಿಗಳಿಂದ ಒಟ್ಟು ಸಮಾಜದ ಸೃಷ್ಟಿ, ಒಟ್ಟು ಸಮಾಜದ ಅಸ್ತಿತ್ವದಿಂದಾಗಿ ಪ್ರತಿ ವ್ಯಕ್ತಿಗೂ ತನ್ನದೇ ಆದ ಸ್ಥಾನ ಲಭ್ಯ ಎನ್ನುವ ತತ್ವ ಸಂವಿಧಾನದ್ದು. ಬಹುಶಃ, ನಮ್ಮ ಸಂವಿಧಾನ ಸಾಧಿಸಲು ಬಯಸಿದ್ದು ಈ ಸಮತೋಲನದ ಗುರಿಯನ್ನು. ಇಂದಿಗೂ ನಮ್ಮ ಸಾಂವಿಧಾನಿಕ ಸಂಕಥನಗಳಲ್ಲಿ ವ್ಯಾಪಿಸಿಕೊಂಡಿರುವುದು ಈ ಎಳೆಯೇ.

ನಮ್ಮ ನ್ಯಾಯಾಂಗ ಮುತ್ಸದ್ಧಿಯಂತೆ ವರ್ತಿಸಿದ ಪ್ರಕರಣವೊಂದರ ಉದಾಹರಣೆ ಬೇಕು ಎಂದಾದರೆ, 1973ರಲ್ಲಿ ಪ್ರಕಟವಾದ ‘ಕೇಶವಾನಂದ ಭಾರತಿ’ ತೀರ್ಪನ್ನು ಗಮನಿಸಬೇಕು. ಅದರಲ್ಲಿ, ಸಂವಿಧಾನಕ್ಕೆ ತಿದ್ದುಪಡಿಗೆ ತರುವ ಸಂಸತ್ತಿನ ಅಧಿಕಾರದ ಬಗ್ಗೆ ಸುಪ್ರೀಂ ಕೋರ್ಟ್‌ನ 13 ಜನ ನ್ಯಾಯಮೂರ್ತಿಗಳು ಪರ್ಯಾಲೋಚನೆ ನಡೆಸಿದರು. ಈ ಪ್ರಕರಣದಲ್ಲಿ ಒಂದೆಡೆ, ಸಂಸದೀಯ ಬಹುಮತದ ಮೂಲಕ ವ್ಯಕ್ತವಾಗಿದ್ದ ಸಾಮೂಹಿಕ ಹಿತಾಸಕ್ತಿಯು ಸಂವಿಧಾನದ ಪಠ್ಯವನ್ನು ತನಗೆ ಬೇಕಾದಂತೆ ತಿದ್ದುವ ಅಧಿಕಾರಕ್ಕಾಗಿ ಹಾತೊರೆಯುತ್ತಿತ್ತು. ಇನ್ನೊಂದೆಡೆ, ‘ಸಾಮಾನ್ಯ ಪ್ರಜೆ’ ಕ್ರೂರ ಬಹುಸಂಖ್ಯಾತವಾದದಿಂದ ತನಗೆ ರಕ್ಷಣೆ ಬೇಕು ಎಂದು ಬಯಸುತ್ತಿದ್ದ.

ಎಲ್ಲ ವಿಧಗಳಲ್ಲೂ ಬಹುತ್ವವನ್ನು ಹೊಂದಿರುವ ನಮ್ಮಂತಹ ದೇಶವನ್ನು ಸಂಸತ್ತಿನಲ್ಲಿ ಹೊಂದಿರುವ ಸಂಖ್ಯಾಬಲದ ಆಧಾರವೊಂದರಲ್ಲೇ ಆಳುವುದು ಕಷ್ಟ. ಇದನ್ನು ಗುರುತಿಸಿದ ಸುಪ್ರೀಂ ಕೋರ್ಟ್‌, ಈಗ ನಾವು ಕರೆಯುವ ‘ಮೂಲ ಸ್ವರೂಪ’ದ ತತ್ವವನ್ನು ರೂಪಿಸಿತು. ಬಹುಸಂಖ್ಯಾತವಾದದ ಸಂಸತ್ತು ತನ್ನ ಅಧಿಕಾರ ಚಲಾಯಿಸಿ, ಸಂವಿಧಾನದ ಪಠ್ಯವನ್ನು ತನಗೆ ಬೇಕಾದಂತೆ ಬದಲಾಯಿಸಲು ಸಾಧ್ಯವಾಗದಂತೆ ಮಾಡಿತು ಈ ತತ್ವ. ಇದರ ಹಿಂದೆ ಇದ್ದ ಪ್ರೇರಕ ಶಕ್ತಿ – ಅಧಿಕಾರ ಪ್ರಜಾತಾಂತ್ರಿಕವಾಗಿರಬೇಕು, ಅಧಿಕಾರವು ಸಂಸತ್ತಿನ ಯಾವುದೇ ಒಂದು ‘ಮನೆ’ಯಲ್ಲಿ ಕೇಂದ್ರೀಕೃತವಾಗಬಾರದು, ಅಧಿಕಾರವು ಸಂವಿಧಾನದಲ್ಲೇ ಕೇಂದ್ರೀಕೃತವಾಗಿರಬೇಕು. ಸಾಂವಿಧಾನಿಕ ತತ್ವಗಳು ಸಂವಿಧಾನದ ಕಪ್ಪು ಅಕ್ಷರಗಳಲ್ಲಿ ಮಾತ್ರ ಕುಳಿತಿಲ್ಲ, ಅವುಗಳನ್ನು ಮೀರಿಯೂ ಆ ತತ್ವಗಳು ಇವೆ ಎಂಬುದನ್ನು ಗಟ್ಟಿಯಾಗಿ ಹೇಳುವ ಯತ್ನ ಅದಾಗಿತ್ತು.

ಸಮಷ್ಟಿಯ ಹಕ್ಕುಗಳು ಹಾಗೂ ವೈಯಕ್ತಿಕ ಹಕ್ಕುಗಳನ್ನು ಒಗ್ಗೂಡಿಸಿ ಸಮಾಜವನ್ನು ಒಂದಾಗಿ ಇರಿಸುವ ಉದ್ದೇಶಕ್ಕೆ ಪೂರಕವಾಗಿ ಇದೆ ಈ ತತ್ವ. ಬಹುವಿಧದ ದನಿಗಳಿಗೆ ಜಾಗ ಕೊಡುವ ಏಕೈಕ ಮಾರ್ಗ ಬಹುಶಃ ಇದೇ ಆಗಿತ್ತು.

ಈ ಹಿಂದೆಯೂ ಆಗಿರುವಂತೆ ದೇಶ ಇಂದು ಕೂಡ ಬಹುಸಂಖ್ಯಾತವಾದದ ಒತ್ತಡವನ್ನು ದೇಶ ಅನುಭವಿಸುತ್ತಿದೆ. ಸಂಸತ್ತು ಸಾರ್ವಭೌಮ, ಆ ಸಾರ್ವಭೌಮತ್ವಕ್ಕೆ ಮಿತಿಗಳು ಇಲ್ಲ, ಎಂದು ಹೇಳುವುದು ತಪ್ಪು. ಸಾಂವಿಧಾನಿಕ ಗುರಿ ಹಾಗೂ ನಿರೀಕ್ಷೆಗಳನ್ನು ಹಾಳುಗೆಡವಲು ನಡೆದ ಹಸಿ ಪ್ರಯತ್ನಗಳನ್ನು ಕಂಡು, ಸಂಸತ್ತಿಗೆ ಅಂಥದ್ದೊಂದು ಸಾರ್ವಭೌಮತ್ವ ನೀಡಬಾರದು. ಅಧಿಕಾರವನ್ನು ಕೇಂದ್ರೀಕರಿಸುವ ಹಲವು ಪ್ರಯತ್ನಗಳನ್ನು ನಾವು ಇಂದು ನೋಡುತ್ತಿದ್ದೇವೆ. ರಾಷ್ಟ್ರೀಯ ಹಿತಾಸಕ್ತಿಗಳ ಹೆಸರಿನಲ್ಲಿ ಅಧಿಕಾರದ ಮಿತಿ ಮೀರುವಿಕೆಯನ್ನು ಸಹಜವೆಂಬಂತೆ ಕಾಣುವ ಯತ್ನವನ್ನೂ ನೋಡುತ್ತಿದ್ದೇವೆ. ಗುರಿ ತಲುಪಿದರೆ ಸಾಕು, ಅದಕ್ಕೆ ಬಳಸುವ ಮಾರ್ಗ ಏನು ಬೇಕಿದ್ದರೂ ಆಗಿರಬಹುದು ಎಂಬುದನ್ನು ಸಮರ್ಥಿಸಿಕೊಳ್ಳುವ ಧೋರಣೆಯನ್ನೂ ಕಾಣುತ್ತಿದ್ದೇವೆ. ಆದರೆ, ಇವೆಲ್ಲ ಸಂವಿಧಾನದ ಆಶಯಗಳಿಗೆ ಪೂರಕವಾಗಿ ಇಲ್ಲ. ಜಿಗುಟು ಸ್ವಭಾವದ ಪ್ರಕ್ರಿಯೆಗಳನ್ನು ಗೌರವಿಸುವುದು ಟೊಳ್ಳು ಎಂದು ಕಾಣಿಸಿದರೂ, ಅದು ವಾಸ್ತವದಲ್ಲಿ ಸಂವಿಧಾನದಲ್ಲಿ ಅಡಕವಾಗಿರುವ ಸುರಕ್ಷತಾ ಕ್ರಮಗಳನ್ನು ಕಾಪಿಟ್ಟುಕೊಳ್ಳುವ ಅಗತ್ಯ ಕ್ರಮ.

ಅಷ್ಟಕ್ಕೂ ಸಂವಿಧಾನ ಅಂದರೆ, ಮುದ್ರಿತ ಪುಟಗಳ ಒಂದು ಗುಚ್ಛ ಮಾತ್ರ. ಆ ಸಂವಿಧಾನವನ್ನು ಪಾಲಿಸುವವರು, ಕ್ರಿಯಾರೂಪಕ್ಕೆ ತರುವವರು ಎಷ್ಟು ಒಳ್ಳೆಯವರೋ, ಸಂವಿಧಾನ ಕೂಡ ಅಷ್ಟೇ ಒಳ್ಳೆಯದು. ಸಂವಿಧಾನ ಒಂದು ಜೀವಂತ ಪಠ್ಯ ಎಂದು ನಾವು ಹೇಳಿದಾಗಲೆಲ್ಲ ಅದರ ಪರಿಪಾಲಕರಿಗೆ – ಅದರಲ್ಲಿನ ಮೌಲ್ಯಗಳಿಗೆ ಗೌರವ ಸಲ್ಲಿಸಿ, ಅವುಗಳನ್ನು ಪಾಲಿಸುವವರಿಗೆ – ಗೌರವ ಸಲ್ಲಿಸಿದಂತೆ ಆಗುತ್ತದೆ. ವರ್ತಮಾನದಲ್ಲಿ ಬದುಕುತ್ತಿರುವಾಗ, ವರ್ತಮಾನವನ್ನು ಅಳೆಯುವುದು ಸಾಧ್ಯವಾಗಲಿಕ್ಕಿಲ್ಲ. ಆದರೆ, ವರ್ತಮಾನ ಎಂಬುದು ಮುಂದೊಂದು ದಿನ ‘ಭೂತಕಾಲ’ ಆಗುತ್ತದೆ. ಆಗ, ಇಂದಿನ ವರ್ತಮಾನವನ್ನು ವಸ್ತುನಿಷ್ಠ ಮೌಲ್ಯಗಳ ಆಧಾರದಲ್ಲಿ ವಿಮರ್ಶಿಸಬಹುದು. ಹಾಗೆ ವಿಮರ್ಶಿಸಲು ನಮಗೆ ನಮ್ಮ ಸಂವಿಧಾನಕ್ಕಿಂತ ಮಿಗಿಲಾದದ್ದು ಏನೂ ಇಲ್ಲ.

(ಲೇಖಕ ಸುಪ್ರೀಂ ಕೋರ್ಟ್‌ನಲ್ಲಿ ಹಿರಿಯ ವಕೀಲ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT