ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ಜಲವರ್ಣದ ಮೋಡಿಕಾರ

Last Updated 29 ಅಕ್ಟೋಬರ್ 2020, 8:05 IST
ಅಕ್ಷರ ಗಾತ್ರ
ADVERTISEMENT
""
""
""
""

ಹಾವೇರಿ: ‘ಬೆಳೆಯುವ ಸಿರಿ ಮೊಳಕೆಯಲ್ಲಿ’ ಎಂಬಂತೆಗ್ರಾಮೀಣ ಪರಿಸರದಲ್ಲಿ ಬೆಳೆದ ಪರಶುರಾಮ ಲಮಾಣಿ ಅವರಿಗೆ ಬಾಲ್ಯದಿಂದಲೂ ಚಿತ್ರಕಲೆಯ ಬಗ್ಗೆ ಆಸಕ್ತಿಯಿತ್ತು. ಹಟ ಬಿಡದ ‘ಪರಶುರಾಮ’ನಂತೆ ಅವರು ನಿರಂತರ ಶ್ರಮದಿಂದ ಚಿತ್ರಕಲಾವಿದನಾಗಬೇಕು ಎಂಬ ಕನಸನ್ನು ನನಸು ಮಾಡಿಕೊಂಡಿದ್ದಾರೆ.

ಜಲವರ್ಣ, ಅಕ್ರೆಲಿಕ್‌ ವರ್ಣ ಮುಂತಾದಮಾಧ್ಯಮಗಳಲ್ಲಿ 100ಕ್ಕೂ ಹೆಚ್ಚು ಪೇಂಟಿಂಗ್ ರಚಿಸಿ, ಏಕವ್ಯಕ್ತಿ ಕಲಾ ಪ್ರದರ್ಶನ, ಸಮೂಹ ಕಲಾ ಪ್ರದರ್ಶನಗಳಲ್ಲಿಕಲಾರಸಿಕರಿಂದ ಸೈ ಎನಿಸಿಕೊಂಡಿದ್ದಾರೆ.

ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಗುಂಡೇನಹಳ್ಳಿ ಗ್ರಾಮದಲ್ಲಿ 30 ಮೇ 1994ರಂದು ಗಂಗವ್ವ ಶೇಖಪ್ಪ ಅವರ ಮಗನಾಗಿ ಪರಶುರಾಮ ಜನಿಸಿದರು.ಗ್ರಾಮೀಣ ಹಿನ್ನೆಲೆಯ ಮನೆಯಲ್ಲಿ ಕೃಷಿ ಮತ್ತು ಕೂಲಿಯೇ ಜೀವನೋಪಾಯವಾಗಿತ್ತು. ಕಡುಬಡತನದಲ್ಲಿ ಬೆಳೆದ ಪರಶುರಾಮ ಹಲವು ಅಡ್ಡಿ ಆತಂಕಗಳನ್ನು ಎದುರಿಸಿ, ಕುಂಚ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.

ಚಿತ್ರಕಲಾ ಶಿಕ್ಷಣ:ಪರಶುರಾಮ ಅವರು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಸ್ವಂತ ಊರಾದ ಗುಂಡೇನಹಳ್ಳಿಯಲ್ಲಿಯೇ ಮುಗಿಸಿ, ಪದವಿ ಪೂರ್ವ ಶಿಕ್ಷಣವನ್ನು ಹಾವೇರಿಯ ಎಸ್.ಜೆ.ಎಂ. ಕಾಲೇಜು ಹೊಸಮಠದಲ್ಲಿ ಕಲಾ ವಿಭಾಗದಲ್ಲಿ ಪೂರೈಸಿದರು. ಚಿತ್ರಕಲೆಯನ್ನು ಅಭ್ಯಸಿಸಬೇಕೆಂಬ ಹಂಬಲ ದಿನೇ ದಿನೇ ಹೆಚ್ಚಾಗತೊಡಗಿತು.

ಹೀಗಾಗಿ, ದಾವಣಗೆರೆಯ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಬಿ.ವಿ.ಎ. ಪದವಿ ಪಡೆದು, ಶಿಗ್ಗಾವಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ದೃಶ್ಯ ಕಲೆ ವಿಭಾಗದಲ್ಲಿ ಎಂ.ವಿ.ಎ. ವ್ಯಾಸಂಗ ಮಾಡಿದ್ದಾರೆ.ಕರ್ನಾಟಕ–ಗೋವಾ–ಮಹಾರಾಷ್ಟ್ರ ಮೂರು ರಾಜ್ಯಗಳ ಬುಡಕಟ್ಟು ಕಲೆಗಳ ಬಗ್ಗೆ ಸಮಗ್ರ ಅಧ್ಯಯನ ನಡೆಸಿ, ಪಿಎಚ್‌ಡಿ ಮಾಡುವ ಕನಸು ಹೊತ್ತಿದ್ದಾರೆ.

ಕುಂಚದ ಹೆಜ್ಜೆಗಳು...:ಬೆಂಗಳೂರು ಚಿತ್ರಸಂತೆ, ಮೈಸೂರು ಕಲಾ ಪ್ರದರ್ಶನ, ಶಿರಸಂಗಿ ಕಲಾ ಪ್ರದರ್ಶನ, 46ನೇ ಕರ್ನಾಟಕ ಲಲಿತಕಲಾ ಅಕಾಡೆಮಿಯ ವಾರ್ಷಿಕ ಕಲಾ ಪ್ರದರ್ಶನ, ಬೆಂಗಳೂರಿನಲ್ಲಿ ನಡೆದ ಸಾಂಪ್ರದಾಯಿಕ ಕಲಾ ಸ್ಪರ್ಧೆ ಜಿ.ಎ.ಎಫ್.ಎಕ್ಸ್ ಹಾಗೂ ದಾವಣಗೆರೆಯ ಚಿತ್ರೋತ್ಸವ ಕಲಾ ಪ್ರದರ್ಶನಗಳಲ್ಲಿ ಭಾಗವಹಿಸಿ ತಮ್ಮ ಛಾಪು ಮೂಡಿಸಿದ್ದಾರೆ. ಸಮೂಹ ಕಲಾ ಪ್ರದರ್ಶನಗಳಾದ ಧಾರವಾಡದಲ್ಲಿ ಕಲಾ ಪಯಣ, ಧಾರವಾಡದ ಜಿಲ್ಲಾ ಉತ್ಸವದ ಕಲಾ ಪ್ರದರ್ಶನ ಹಾಗೂ ಮಹಾರಾಷ್ಟ್ರದ ಮೀರಜ್‌ನಪಿಕಾಕ್ ಆರ್ಟ್‌ ಗ್ಯಾಲರಿಯಲ್ಲಿ ‘ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ’ ಮಾಡಿರುವುದು ಇವರ ಹೆಗ್ಗಳಿಕೆ.

ತರಹೇವಾರಿ ಪೇಂಟಿಂಗ್‌:‘ನಿಸರ್ಗ ಚಿತ್ರ, ಸಂಯೋಜನಾ ಚಿತ್ರ, ನೈಜ ಚಿತ್ರ, ಭಾವಚಿತ್ರ, ಸಾಂಪ್ರದಾಯಿಕ ಚಿತ್ರ ಹಾಗೂ ಹಸೆ ಚಿತ್ತಾರ ಎಂಬ ವಿಷಯಗಳಾಧಾರದ ಮೇಲೆ ಜಲವರ್ಣ, ಅಕ್ರೆಲಿಕ್‌ ವರ್ಣ, ಪೋಸ್ಟರ್ ವರ್ಣ ಹಾಗೂ ಮಿಶ್ರ ಮಾಧ್ಯಮದಿಂದ ನನ್ನ ಕಲಾಕೃತಿ ರೂಪುಗೊಂಡಿವೆ. ಜಲವರ್ಣವು ನನಗೆ ಅತ್ಯಂತ ಇಷ್ಟವಾದ ಮಾಧ್ಯಮವಾಗಿದ್ದರಿಂದ ಹೆಚ್ಚು ಕಲಾಕೃತಿಗಳು ಜನ್ಮತಾಳಿವೆ. ಕೆಲವು ಕಲಾಕೃತಿಗಳು ಭಾವಚಿತ್ರಗಳು ಲಮಾಣಿ ಜನಾಂಗದವರನ್ನು ಪ್ರತಿಬಿಂಬಿಸಿದರೆ, ಮತ್ತೆ ಕೆಲವು ಬಗೆ ಬಗೆಯ ವಯೋಮಾನದವರನ್ನು ಪ್ರತಿಬಿಂಬಿಸಿವೆ. ಸಂಯೋಜನಾ ಚಿತ್ರಗಳಲ್ಲಿ ಹಸಿವು, ಮಾನವನ ಜೀವನ ಶೈಲಿ ಅಂತರ್ಗತವಾಗಿವೆ’ ಎನ್ನುತ್ತಾರೆ ಕಲಾವಿದ ಪರಶುರಾಮ್‌.

ಹಸೆ ಚಿತ್ತಾರ:‘ಹಸೆ ಚಿತ್ತಾರ ಮೂಲತಃ ಜನಪದ ಕಲೆಯಾಗಿದ್ದು, ಚಾರಿತ್ರಿಕ ಹಿನ್ನೆಲೆ ಹೊಂದಿದೆ. ಸೂಕ್ಷ್ಮ ರೇಖೆಗಳ ಲಾಲಿತ್ಯವನ್ನು ಹಿಡಿದಿಡಲು ಪ್ರಯತ್ನಿಸಿದ್ದೇನೆ. ಆರಂಭದಲ್ಲಿ ಅನೇಕ ಅಡ್ಡಿ ಆತಂಕಗಳನ್ನು ಎದುರಿಸಿದೆ. ಕಲಾಪ್ರೇಮಿಗಳ ಪ್ರೋತ್ಸಾಹ, ಕಲಾರಸಿಕರ ಔದಾರ್ಯದಿಂದ ಕುಂಚದಲ್ಲಿ ಕೊಂಚ ಸಾಧನೆ ಮಾಡಲು ಸಾಧ್ಯವಾಗಿದೆ’ ಎಂದು ವಿನಮ್ರವಾಗಿ ನುಡಿಯುತ್ತಾರೆ.

ಪರಶುರಾಮ ಲಮಾಣಿ

ಕಲಾ ವಿಕಾಸ ಸಂಸ್ಥೆ:ಮಕ್ಕಳಿಗೆ ಚಿತ್ರಕಲಾ ಶಿಕ್ಷಣ, ಕಾರ್ಯಾಗಾರ, ಪ್ರದರ್ಶನ ಸೇರಿದಂತೆ ಕಲಾ ಚಟುವಟಿಕೆಗಳನ್ನು ನಡೆಸುವ ಸದುದ್ದೇಶದಿಂದ ‘ಕಲಾ ವಿಕಾಸ ಸಂಸ್ಥೆ’ ಹುಟ್ಟು ಹಾಕಿದ್ದಾರೆ. ಸಂಸ್ಥೆಯ ಉದ್ಘಾಟನಾ ಕಾರ್ಯಕ್ರಮ ಮತ್ತು ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಹಾವೇರಿಯ ಡಿ.ಸಿ.ಆಫೀಸ್‌ ರಸ್ತೆಯ ನಂದಿನಿ ಲೇಔಟ್‌ನಲ್ಲಿರುವ ಹಂಚಿನಮನಿ ಆರ್ಟ್‌ ಗ್ಯಾಲರಿಯಲ್ಲಿ ಅ.30ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ. ಮಾಹಿತಿಗೆ 97430 45755 ಸಂಪರ್ಕಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT