ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಜಿಟಲ್ ಲೋಕದಲ್ಲಿ ಅರಳಿದೆ 'ಅಲರ್' ಕನ್ನಡ - ಆಂಗ್ಲ ನಿಘಂಟು

ಕನ್ನಡದ ಸೇವಕರು | ಸದ್ದು ಮಾಡದ ಸಾಧಕ - ವಿ.ಕೃಷ್ಣ
Last Updated 1 ನವೆಂಬರ್ 2020, 4:46 IST
ಅಕ್ಷರ ಗಾತ್ರ

ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಬರೇ ಮಾತಿನಿಂದಲೇ ಕನ್ನಡ ಸೇವಕರು ಎಂದು ಗುರುತಿಸಲ್ಪಡುವವರದು ಒಂದು ವರ್ಗ. ಆದರೆ, ಮಹತ್ಸಾಧನೆಯೊಂದನ್ನು ಮಾಡಿದರೂ ಪ್ರಚಾರದ ಚಿಂತೆ ಬಿಟ್ಟು, ಕನ್ನಡಿಗರಿಗೆ ಅದರಿಂದಾಗುತ್ತಿರುವ ಪ್ರಯೋಜನದಲ್ಲೇ ಸಾರ್ಥಕ್ಯ ಕಾಣುತ್ತಿರುವವರದು ಮತ್ತೊಂದು ವರ್ಗ. ಎರಡನೇ ವರ್ಗಕ್ಕೆ ಸೇರಿದವರು ಮೂಲತಃ ಮೈಸೂರಿನ, ಈಗ ಬೆಂಗಳೂರಿನಲ್ಲಿ ನೆಲೆಸಿರುವ ಕನ್ನಡ ಸೇವಕ ವಿ.ಕೃಷ್ಣ.

ಪದಕೋಶ ಎಂದಾಗ ನಮಗೆ ಫಕ್ಕನೇ ನೆನಪಾಗುವುದು ಕನ್ನಡ ಸೇವಕ ರೆ.ಕಿಟೆಲ್ ಹೆಸರು. 1894ರಲ್ಲಿ ಸಮಗ್ರವಾದ ಇಂಗ್ಲಿಷ್-ಕನ್ನಡ ನಿಘಂಟಿನ ಮೂಲಕ ಕನ್ನಡ ಭಾಷೆಯ ಬೆಳವಣಿಗೆಯಲ್ಲಿ ಮಹತ್ವದ ಕೊಡುಗೆ ನೀಡಿದವರು. ಅಂಥದ್ದೇ ಮಹತ್ಸಾಧನೆಯೊಂದರ ಪ್ರಯೋಜನ ಸದ್ದಿಲ್ಲದೇ ಈಗ ಅಂತರಜಾಲದಲ್ಲಿರುವ ಎಲ್ಲ ಕನ್ನಡಿಗರಿಗೆ ದೊರೆತಿದೆ. ಅದುವೇ ಕನ್ನಡದಿಂದ ಇಂಗ್ಲಿಷಿಗೆ ಅನುವಾದ ಮಾಡಲು ನೆರವಾಗುವ ಕನ್ನಡ-ಇಂಗ್ಲಿಷ್ ನಿಘಂಟು.

ಕಿಟೆಲ್ ಪದಕೋಶಕ್ಕಿಂತಲೂ ಹೆಚ್ಚು ಅಂದರೆ ಸುಮಾರು 1.50 ಲಕ್ಷಕ್ಕಿಂತಲೂ ಹೆಚ್ಚು ಪದಗಳು, ಸುಮಾರು ಎರಡುವರೆ ಲಕ್ಷದಷ್ಟು ವಿಭಿನ್ನ ಆಯಾಮಗಳ ಇಂಗ್ಲಿಷ್ ವಿವರಣೆಯೊಂದಿಗೆ ಈ ಆನ್‌ಲೈನ್ ನಿಘಂಟು ಕನ್ನಡಿಗರೆಲ್ಲರಿಗೆ ಉಚಿತವಾಗಿ ಅಂತರಜಾಲದಲ್ಲಿ ಉಪಯೋಗಕ್ಕೆ ಲಭ್ಯವಿದೆ. ಇದು 2015ರಲ್ಲಿ ಪುಸ್ತಕರೂಪದಲ್ಲಿಯೂ ಪ್ರಕಟವಾಗಿದ್ದು, ಗಾತ್ರ, ವ್ಯಾಪ್ತಿ, ಪದಗಳ ಸಂಖ್ಯೆ - ಹೀಗೆ ಎಲ್ಲ ರೀತಿಯಲ್ಲೂ ಕಿಟೆಲ್ ಪದಕೋಶವನ್ನು ಮೀರಿ ನಿಲ್ಲುತ್ತದೆ. ಈ ಪದಕೋಶಕ್ಕೆ ಇನ್ನೊಂದು ಹೆಗ್ಗಳಿಕೆಯಿದೆ. ಒಂದುವರೆ ಲಕ್ಷಕ್ಕೂ ಹೆಚ್ಚು ಪದಗಳ ಅರ್ಥ ವಿವರಣೆಯು ಕನ್ನಡಿಗರಿಗೆ ಕೊಡುಗೆಯಾಗಿ ದೊರೆತಿದ್ದು ಒಬ್ಬ ವ್ಯಕ್ತಿಯ ನಿಸ್ವಾರ್ಥ ಪರಿಶ್ರಮದಿಂದ.

ವಾಣಿಜ್ಯ ಪದವೀಧರರೊಬ್ಬರು ಕನ್ನಡಾಂಬೆಯ ಮೌನ ಸೇವಕರಾಗಿದ್ದುಕೊಂಡು ಈ ಅಮೂಲ್ಯ ಪದಪ್ರಪಂಚವನ್ನು ಕನ್ನಡಿಗರ ಮುಂದೆ ತೆರೆದಿಟ್ಟಿದ್ದಾರೆ. ಕನ್ನಡ ಪದಗಳಿಗೆ ಸಮದಂಡಿಯಾದ ಆಂಗ್ಲ ಪದಗಳು, ಸಾಂದರ್ಭಿಕ ವಿವರಣೆಗಳನ್ನು ನೀಡುತ್ತಾ, ಆಂಗ್ಲ ಸೇರಿದಂತೆ ಬೇರೆ ಭಾಷೆಗಳಿಗೆ ತರ್ಜುಮೆಯಾಗಿ ಕನ್ನಡ ಸಾಹಿತ್ಯ ಲೋಕದ ವ್ಯಾಪ್ತಿ ವಿಸ್ತಾರವಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇವರ ಹೆಸರು ವಿ.ಕೃಷ್ಣ. ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ದುಡಿಯುತ್ತಲೇ, ಬಿಡುವಿನ ವೇಳೆಯೆಲ್ಲವನ್ನೂ ಕನ್ನಡದ ಕೈಂಕರ್ಯಕ್ಕೆ ತೊಡಗಿಸಿದವರು ಅವರು.

ಪದಗಳ ವ್ಯಾಪ್ತಿ, ವಿಸ್ತಾರವನ್ನು ಆಳವಾಗಿ ಅಭ್ಯಸಿಸಿ, ವಿಭಿನ್ನ ಸಂದರ್ಭಗಳ ಬಳಕೆಯನ್ನು ಕಲೆ ಹಾಕಿ, ಸುಮಾರು 30 ವರ್ಷಗಳ ಪರಿಶ್ರಮದ ಫಲವಾಗಿ ರೂಪುಗೊಂಡಿದ್ದೇ 'ಅಲರ್' ಎಂಬ ಈ ನಿಘಂಟು. ಅಲರ್ ಪದದ ಅರ್ಥವೇ ಅರಳುವುದು. ಕನ್ನಡ ಅಂತರಜಾಲ ಲೋಕದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ https://alar.ink/ ಪದಪ್ರಪಂಚವೊಂದು ಅರಳಿ ನಿಂತಿದೆ. ಇದನ್ನು ಡಿಜಿಟಲ್ ರೂಪಕ್ಕೆ ತರುವಲ್ಲಿ ನೆರವಾಗಿದ್ದು ಜೆರೋಡಾ ಎಂಬ ತಂತ್ರಜ್ಞಾನ ಸಂಸ್ಥೆ. ಇದು ಮೂಲತಃ ಸ್ಟಾಕ್ ಬ್ರೋಕರೇಜ್, ಟೆಕ್ ಸಂಸ್ಥೆ. ಆದರೆ ಇದರ ಸಿಟಿಒ ಆಗಿರುವ ಕೈಲಾಶ್ ನಂದ್ ಒಬ್ಬ ಭಾಷಾ ಪ್ರೇಮಿ. ಅವರೀಗಾಗಲೇ ಮಲಯಾಳಂ ನಿಘಂಟನ್ನು ಸಂಗ್ರಹಿಸಿ ಅಂತರಜಾಲದಲ್ಲಿ ಮುಕ್ತವಾಗಿ ಹಂಚಿದ್ದಾರೆ. ಅವರ ಕನ್ನಡದ ಮೇಲಿನ ಪ್ರೀತಿಯೇ ಅಲರ್ ಅರಳಲು ಕಾರಣವಾಯಿತು.

ಈ ತಾಣದಲ್ಲಿ ನಮಗೆ ಬೇಕಾದ ಕನ್ನಡ ಪದವನ್ನು ಟೈಪ್ ಮಾಡಿ, ಅದರ ಆಂಗ್ಲ ರೂಪವನ್ನು, ವಿವರಣೆಯನ್ನು ನೋಡಬಹುದು. ಇದು ಮುಕ್ತ ಜ್ಞಾನಕೋಶ. 1970ರಲ್ಲಿ ಹವ್ಯಾಸಿಯಾಗಿ ಈ ಪದವರಳಿಸುವ ಕಾಯಕಕ್ಕೆ ಕೈಹಚ್ಚಿದ ಬೆಂಗಳೂರಿನ ವಿ.ಕೃಷ್ಣ ಅವರು, ಒಂದು ವಿಶ್ವವಿದ್ಯಾಲಯದಂಥ ಸಂಸ್ಥೆಗಳು ಮಾಡಲೇಬೇಕಾಗಿದ್ದ ಕನ್ನಡದ ಕಾಯಕವನ್ನು ಒಬ್ಬರೇ ಮಾಡಿ ತೋರಿಸಿದ್ದಾರೆ.

ಓದಿದ್ದು ಕನ್ನಡ ಮಾಧ್ಯಮದಲ್ಲಿ. ಬೆಂಗಳೂರಿನಲ್ಲಿ ಬಂದು ಉದ್ಯೋಗಕ್ಕೆ ಸೇರಿದಾಗ ಸಂವಹನ ಭಾಷೆ ಆಂಗ್ಲ. ಆಂಗ್ಲ ಪದಭಂಡಾರ ವರ್ಧನೆಗಾಗಿ ಅವರ ಅಂದಿನ ಬಾಸ್ ನೀಡಿದ್ದ ಸಲಹೆಯಿಂದ ಪ್ರೇರಣೆಗೊಂಡ ವಿ.ಕೃಷ್ಣ ಅವರು ಬಿಡುವಾದಾಗಲೆಲ್ಲಾ ಪದಗಳನ್ನು ಕಲೆಹಾಕುತ್ತಾ, ಅದರ ಅರ್ಥ ವಿವರಣೆ ಹುಡುಕುತ್ತಾ ಹೋದರು. ಅದರ ಫಲ ಇಂದು ಲಕ್ಷಾಂತರ ಪದಗಳುಳ್ಳ ಅಲರ್ ನಿಘಂಟು.

ಆದರೆ, ನಿಘಂಟು ಎಂಬುದು ನಿಂತ ನೀರಾಗದು. ಕಾಲಕಾಲಕ್ಕೆ ಪರಿಷ್ಕರಣೆಯಾಗುತ್ತಾ ಹೋಗಬೇಕು. ಅದನ್ನು ಪರಿಷ್ಕರಿಸುವ ಕಾರ್ಯಕ್ಕೆ ಯಾರಾದರೂ ಮುಂದೆ ಬಂದರೆ ಸಹಕಾರ ನೀಡಲು ಸಿದ್ಧ ಎನ್ನುತ್ತಾರೆ ಕೃಷ್ಣ. ಇದು ಕನ್ನಡಿಗರಿಗೆ ತುಂಬ ಪ್ರಯೋಜನಕಾರಿಯಾಗಿದೆ ಎಂಬುದರಲ್ಲೇ ತೃಪ್ತಿ ಕಂಡವರು ಅವರು.

ಅನುವಾದಕರೂ ಆಗಿರುವ ಕೃಷ್ಣ, ಅಭಿವ್ಯಕ್ತಿ ಸ್ವಾತಂತ್ರ್ಯ, ಸಂಸ್ಕೃತಕ್ಕಾಗಿ ಹೋರಾಟ, ಇಂದ್ರ ಜಾಲ ಮುಂತಾದ ಹಲವಾರು ಅನುವಾದಿತ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಕನ್ನಡ-ಇಂಗ್ಲಿಷ್ ನಿಘಂಟನ್ನು ಕರ್ನಾಟಕ ಸಾಹಿತ್ಯ ಪರಿಷತ್ತು (ಕನ್ನಡ ಸಾಹಿತ್ಯ ಪರಿಷತ್ ಅಲ್ಲ) ಮೂರು ಸಂಪುಟಗಳಲ್ಲಿ ಹೊರತಂದಿದೆ. ಅದು ಈಗ ಮುಕ್ತ ಜ್ಞಾನಕೋಶದ ರೂಪದಲ್ಲಿ ಅಂತರಜಾಲದಲ್ಲಿ ಲಭ್ಯವಿದೆ. ಇದಲ್ಲದೆ, ಕುಮಾರವ್ಯಾಸ ಭಾರತದ ಪದ ವಿವರಣ ಕೋಶದ ಕೆಲಸದಲ್ಲಿ ತೊಡಗಿದ್ದಾರೆ.

ಕನ್ನಡಕ್ಕಾಗಿ ಕೈಯೆತ್ತುವ ಘೋಷಣೆಗಳು ಕೇಳಿಬಂದಾಗಲೆಲ್ಲ ನಮಗೆ ಇಂಥ ನಿಜದ ಕಟ್ಟಾಳುಗಳ ನೆನಪು ಆಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT