ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಾರ್ತಿಸುಬ್ಬ’ ಪ್ರಶಸ್ತಿ ಪುರಸ್ಕೃತ ಶ್ರೀಧರ್: ಯಕ್ಷಸಿರಿ ಹೆಚ್ಚಿಸಿದ ಪ್ರಸಂಗಕರ್ತ

Last Updated 4 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ಒಂದು ಯಕ್ಷಗಾನ ಪ್ರದರ್ಶನವು ಯಶಸ್ವಿಯಾಗಿ ಸಂಪನ್ನವಾಗಬೇಕಾದರೆ ಅದರಲ್ಲಿ ಪ್ರಸಂಗ ಸಾಹಿತ್ಯದ ಪಾತ್ರ ಬಹಳ ದೊಡ್ಡದು. ಪ್ರಸಂಗ ಸಾಹಿತ್ಯವು ಯಕ್ಷಗಾನದ ಮುಖ್ಯ ಭಾಗವಾಗಿ, ಅದರ ಜೀವಾಳವಾಗಿ ರಂಗಭೂಮಿಯ ಆಧಾರ ಪಠ್ಯವಾಗಿದೆ. ಹಲವು ಶತಮಾನಗಳಿಂದ ಯಕ್ಷಗಾನದಲ್ಲಿ ಕೃತಿಗಳು ರಚಿತವಾಗುತ್ತಿದ್ದು ಇದರ ಹಿಂದೆ ನೂರಾರು ಪ್ರಸಂಗಕರ್ತರ ಮುಡಿಪು ಮತ್ತು ಶ್ರಮ ಅಡಕವಾಗಿದೆ. ಅವರಲ್ಲಿ ‘ಪಾರ್ತಿಸುಬ್ಬ’ ಪ್ರಶಸ್ತಿಗೆ ಭಾಜನರಾದ ಶ್ರೀಧರ್ ಡಿ.ಎಸ್. ಕೂಡ ಒಬ್ಬರು.

ಶ್ರೀಧರ್ ಅವರದ್ದು ಬಹುಮುಖ ಕಲಾ ವ್ಯಕ್ತಿತ್ವ. ಪ್ರಸಂಗಕರ್ತ, ಅರ್ಥಧಾರಿ, ಕಾದಂಬರಿಕಾರ, ಚಿಂತಕ, ವಾಗ್ಮಿ, ಲೇಖಕ ಹೀಗೆ ಹಲವು ನೆಗಳ್ತೆಗಳು ಅವರನ್ನು ಆವರಿಸಿವೆ. ಸುಮಾರು ಐದು ದಶಕಗಳ ನಿರಂತರ ಯಕ್ಷ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಕಾಣಿಸಿಕೊಂಡ ಹೆಗ್ಗಳಿಕೆ ಅವರದು. ಅವರ ಯಕ್ಷಸಾಹಿತ್ಯದ ಚಿಂತನೆಗಳು, ಆಯಾಮಗಳು ಮುಂದಿನ ತಲೆಮಾರಿಗೊಂದು ದಾರಿದೀವಿಗೆಯಾಗಿ ಕೈಹಿಡಿದು ನಡೆಸುತ್ತವೆ.

ಯಕ್ಷಗಾನದಲ್ಲಿ ಸಾವಿರಾರು ಪೌರಾಣಿಕ ಪ್ರಸಂಗಗಳು ಇವೆ. ಹೀಗಿರುವಾಗ ಮತ್ತೆ ಪ್ರಸಂಗಗಳನ್ನು ರಚಿಸುವುದು ಅನಿವಾರ್ಯವೇ ಎಂಬ ಪ್ರಶ್ನೆ ಸಹಜ. ಆದರೆ ಕಾಲಘಟ್ಟ ಬದಲಾದಂತೆ ದೃಷ್ಟಿಕೋನಗಳು, ಆಶಯಗಳು ಕೂಡ ಬದಲಾಗುತ್ತವೆ. ಇದು ಕಲೆಗಳಿಗೂ ಅನ್ವಯವಾಗುವ ಮಾತು. ಒಂದು ಕಾಲದಲ್ಲಿ ಒಂದೇ ಪ್ರಸಂಗ ರಾತ್ರಿ ಇಡೀ ಪ್ರಯೋಗವನ್ನು ಕಾಣುತ್ತಿತ್ತು. ಆದರೆ ಈಗ ಮೂರು ತಾಸಿನ ಆಖ್ಯಾನಗಳು ಹೆಚ್ಚು ಜನಪ್ರಿಯವಾಗುತ್ತಿವೆ. ಹಾಗಾಗಿಯೇ ಇದಕ್ಕೆ ಅನುಗುಣವಾಗಿ ರಂಗ ಪಠ್ಯಗಳನ್ನು ಸಿದ್ಧ ಮಾಡಿಕೊಳ್ಳಬೇಕಾಗುತ್ತದೆ. ಇಂತಹ ಅನೇಕ ಬದಲಾವಣೆಗಳನ್ನು ಪ್ರಜ್ಞಾಪೂರ್ವಕವಾಗಿ ಒಪ್ಪಿಕೊಂಡು ಅದಕ್ಕೆ ಸರಿಯಾಗಿ ಶ್ರೀಧರರು ತಮ್ಮ ಪ್ರಸಂಗಗಳನ್ನು ರಚಿಸಿದ್ದಾರೆ.

ಯಕ್ಷಗಾನ ಪ್ರಸಂಗಗಳಲ್ಲಿ ಹೆಚ್ಚಿನವು ‘ಕಾಳಗದಿಂದ-ಕಲ್ಯಾಣ’ ಅಥವಾ ‘ಕಲ್ಯಾಣಕ್ಕಾಗಿ ಕಾಳಗ’ ಎಂಬ ಮಾತು ಇದೆ. ಈ ಸಿದ್ಧಮಾದರಿಯ ಪ್ರಸಂಗಗಳಿಗಿಂತ ಭಿನ್ನವಾದ ರೀತಿಯಲ್ಲಿ ಪ್ರಸಂಗಗಳನ್ನು ರಚಿಸಬಹುದು ಎನ್ನುವುದಕ್ಕೆ ಶ್ರೀಧರರು ಉದಾಹರಣೆಯಾಗುತ್ತಾರೆ. ಶುಕ್ರಸಂಜೀವಿನಿ, ಗರುಡಪ್ರತಾಪ, ಕುವಲಯಾಶ್ವ, ಸುಧ್ಯುಮ್ನ, ಅಗಸ್ತ್ಯ, ಆದಿನಾರಾಯಣದರ್ಶನ, ಆಸ್ತೀಕ ಜನ್ಮ, ಫಲ್ಗುಣಿ ತೀರ್ಥ ಮಹಿಮೆ, ಕಬಂಧ ಮೋಕ್ಷ, ಸತ್ವ ಶೈಥಿಲ್ಯ ಇತ್ಯಾದಿ ಪ್ರಸಂಗಗಳನ್ನು ಬರೆದಿರುವ ಶ್ರೀಧರರು ಅಲ್ಲಿ ಬಳಸಿಕೊಂಡ ಕಥೆಗಳು ಬೇರೆ ಬೇರೆ ಪುರಾಣದ್ದಾಗಿವೆ.

ಪುರಾಣದ ಎಲ್ಲಾ ಕಥೆಗಳನ್ನೂ ಯಕ್ಷಗಾನಕ್ಕೆ ಹೊಂದಿಸಲು ಸಾಧ್ಯವಿಲ್ಲ. ಜೊತೆಗೆ ಕಥೆಗಳು ತೆಂಕು, ಬಡಗು ಎಂಬ ವಿಭಿನ್ನ ತಿಟ್ಟುಗಳಿಗೆ ಹೊಂದಿಕೆಯಾಗಬೇಕು. ಕಥೆಯನ್ನು ಆಯ್ಕೆ ಮಾಡುವಾಗ ರಂಗದ ದೃಷ್ಟಿಕೋನ ಬಹಳ ಪ್ರಧಾನವಾಗುತ್ತದೆ. ಇಲ್ಲಿ ಶ್ರೀಧರರು ಅನುಸರಿಸಿದ ಮಾನದಂಡಗಳು ಪ್ರಸಂಗಗಳಿಗೆ ಯಕ್ಷಗಾನೀಯತೆಯ ಆದ್ಯತೆಯನ್ನು ನೀಡುತ್ತವೆ.

ಶ್ರೀಧರರು, ಅವರ ಪ್ರಸಂಗಗಳಲ್ಲಿ ಪರಂಪರೆ ಮತ್ತು ಪ್ರಯೋಗಶೀಲತೆ ಎರಡನ್ನೂ ಸಮೀಕರಿಸಿದ್ದಾರೆ. ಮೂಲ ಪುರಾಣದ ಆಶಯಕ್ಕೆ ಭಂಗವಾಗದಂತೆ ರಂಗಕ್ಕೆ ಪೂರಕವಾಗುವಂತೆ ಹೊಸ ದೃಶ್ಯಗಳನ್ನು ತಂದಿರುವುದು ಗಮನಾರ್ಹ ಸಂಗತಿ. ‘ಸಮ್ರಾಟ ಮರುತ್ತ’ ಪ್ರಸಂಗದಲ್ಲಿ ಮರುತ್ತರಾಜನು ಸಿಂಧುವೀರ್ಯನ ಮಗಳನ್ನು ಮದುವೆಯಾಗುವಾಗ ತಂದೆ-ಮಗಳ ಜಿಜ್ಞಾಸೆಯ ಮೂಲಕ ಚಿತ್ರಪಟವನ್ನು ರಚಿಸಿ ಆಯ್ಕೆ ಮಾಡಿದ್ದು ಯಕ್ಷಗಾನದಲ್ಲಿ ನೂತನ ಸೃಷ್ಟಿ.

ಸ್ವತಃ ಶ್ರೀಧರ್ ತಾಳಮದ್ದಲೆಯ ಪ್ರಸಿದ್ಧ ಅರ್ಥಧಾರಿಗಳಾಗಿರುವ ಕಾರಣಕ್ಕೆ ರಂಗಕ್ಕೆ ಏನು ಬೇಕು ಎಂಬುದರ ಸ್ಪಷ್ಟತೆ ಅವರಲ್ಲಿದೆ. ಈ ಕಾರಣದಿಂದಲೇ ಪ್ರಸಂಗಗಳಲ್ಲಿ ತಾರ್ಕಿಕ ಜಿಜ್ಞಾಸೆಗಳು, ವಿಚಾರಮಂಡನೆಗಳು ಅನೂನವಾಗಿವೆ. ಯಕ್ಷ ಸಾಹಿತ್ಯವು ತನ್ನ ಘನತೆಯನ್ನು ಸಾದೃಶಗೊಳಿಸಿಕೊಂಡಿರುವುದು ಅದರ ಛಂದಸ್ಸಿನಿಂದ ಅಥವಾ ಮಟ್ಟಿನಿಂದ. ಛಂದಸ್ಸು ಕಡೆಗಣನೆಯಾದರೆ ಪ್ರಸಂಗ ಪೇಲವವಾಗಿ ಅದರ ಸೌಂದರ್ಯ ಮರೆಯುತ್ತದೆ.

ಯಕ್ಷಗಾನದ ಗಾಯನ ಪದ್ಧತಿಗೆ ಮಟ್ಟುಗಳಲ್ಲಿಯೇ ಪ್ರಸಂಗಗಳನ್ನು ರಚಿಸಿದಾಗ ಮಾತ್ರ ವಿವಿಧ ಭಾವಗಳು ಸ್ಫುರಣೆಯಾಗಿ ಯಕ್ಷಗಾನೀಯ ಆವರಣವನ್ನು ಕಟ್ಟಿಕೊಡುವುದಕ್ಕೆ ಸಾಧ್ಯವಾಗುತ್ತದೆ. ಸಿಮಂತೂರು ನಾರಾಯಣ ಶೆಟ್ಟರ ಮಾರ್ಗದರ್ಶನ ಹಾಗೂ ಪ್ರಭಾವಗಳನ್ನು ಶ್ರೀಧರ್ ಅವರ ಪ್ರಸಂಗದಲ್ಲಿಯೂ ಕಾಣಬಹುದು. ಇಲ್ಲಿಯವರೆಗೆ ಅವರು ಸುಮಾರು ನೂರಾ ಮೂವತ್ತು ಮಟ್ಟುಗಳನ್ನು (ಕಂದ, ವಾರ್ಧಕ, ಭಾಮಿನಿ, ವೃತ್ತ, ವಚನಗಳು, ಬೇಗಡೆ |ಏಕ, ಶಂಕರಾಭರಣ ರೂಪಕ ಇತ್ಯಾದಿ) ತಮ್ಮ ಪ್ರಸಂಗಗಳಲ್ಲಿ ಅಳವಡಿಸಿದ್ದಾರೆ.

ಶ್ರೀಧರರ ಪದ್ಯಗಳಲ್ಲಿ ಭಾವ ಮತ್ತು ರಸ ಸೃಷ್ಟಿಗಳು ಯಾವ ಅಡ್ಡಿಯೂ ಇಲ್ಲದೇ ಮೈದಳೆಯುತ್ತವೆ. ಉದಾಹರಣೆಗೆ ಶುಕ್ರ ಸಂಜೀವಿನಿ ಪ್ರಸಂಗದಲ್ಲಿ ಕಚನು ಮರಣ ಹೊಂದಿದ ಸುದ್ದಿ ಕೇಳಿ ‘ಅಯ್ಯೋ ಕೊಂದರೆ ಮುದ್ದು ಮೈಯ ತರಳನನ್ನು’ ಎನ್ನುವ ಪದ್ಯದ ಆಂತರ್ಯವನ್ನು ಗಮನಿಸಬಹುದು. ದೇವಯಾನಿಯ ಕಾಮನೆಗಳ ಸ್ವಾನುಭವಗಳು ಯಾವುದೇ ತಡೆಯಿಲ್ಲದೇ ಭಾವಧಾತುವಿನೊಂದಿಗೆ ಅಂಕುರಿಸುತ್ತವೆ. ಇಂತಹ ಸಾಕಷ್ಟು ರಚನೆಗಳು ಅವರ ಪ್ರಸಂಗಗಳ ಬತ್ತಳಿಕೆಯಲ್ಲಿ ಸ್ಫುಟವಾಗಿ ಬಿತ್ತರಗೊಂಡಿವೆ.

ಯಕ್ಷಕವಿಗಳ ಬಗ್ಗೆ ಒಂದು ತರದ ಅವಜ್ಞೆ ಯಕ್ಷಗಾನ ವಲಯದಲ್ಲಿದೆ. ಸ್ವತಃ ಒಬ್ಬ ಕವಿಯಾಗಿ ಶ್ರೀಧರರು ಹಿಂದಿನ ಯಕ್ಷಗಾನದ ಕವಿಗಳನ್ನು ಗುರುತಿಸುವ ಮಹತ್ತರ ಕೆಲಸವನ್ನು ಮಾಡಿದ್ದಾರೆ. ಹಳೆಯ ಪ್ರಸಂಗಕರ್ತರ ಬಗ್ಗೆ ಸಂಶೋಧನೆಗಳನ್ನು ನಡೆಸಿ ಅದನ್ನು ದಾಖಲಿಸುವ ಪ್ರಯತ್ನವನ್ನು ಮಾಡಿದ್ದಾರೆ. ಯಕ್ಷಗಾನ ರಂಗದಲ್ಲಿದ್ದುಕೊಂಡು ಕನ್ನಡ ಸಾಹಿತ್ಯರಂಗದಲ್ಲಿ ಸಾಹಿತ್ಯ ಕೃಷಿಯನ್ನು ಮಾಡಿದವರಲ್ಲಿ ಶ್ರೀಧರರು ಕೂಡ ಒಬ್ಬರು.

ಶ್ರೀಧರರ ಇತ್ತೀಚಿನ ’ಅಸರುಗುರು ಶುಕ್ರಾಚಾರ್ಯ’ ಎಂಬ ಕಾದಂಬರಿಯು ತುಂಬಾ ಜನಪ್ರಿಯವಾಗಿದೆ. ಶುಕ್ರನೆನ್ನುವ ಪಾತ್ರ ಒಂದು ಪುರಾಣಕ್ಕೆ ಸೀಮಿತವಾಗಿದೆ, ಮಹಾಭಾರತ, ರಾಮಾಯಣ ಹಾಗೂ ಹಲವು ಪುರಾಣಗಳಲ್ಲಿ ಬಂದು ಹೋಗುವ ಪಾತ್ರ. ಇಲ್ಲಿಯವರೆಗೆ ಶುಕ್ರನ ಜೀವನದ ಒಟ್ಟಂದವನ್ನು ತಿಳಿಸುವ ಯಾವ ಕಾದಂಬರಿಯೂ ಕನ್ನಡದಲ್ಲಿ ಇರಲಿಲ್ಲ (ಬಹುಶಃ ಬೇರೆ ಭಾಷೆಯಲ್ಲೂ). ಇಲ್ಲಿ ಶುಕ್ರನ ಜೀವನವನ್ನು ಸಾಕ್ಷೀಕರಿಸಿದ ರೀತಿ ಬಹಳ ಮೆಚ್ಚುಗೆಯನ್ನು ಪಡೆಯುತ್ತದೆ. ಶುಕ್ರನ ಸಾಧನೆಯು ಸಮಾಜದಲ್ಲಿ ಕಂಡ ಅತ್ಯುತ್ತಮ ಪ್ರತಿಭೆಗೆ ಸಿಗದ ಮನ್ನಣೆಯಂತೆ ತೋರಿ ಸಮಾಜಮುಖಿಯಾಗಿ ಬದುಕನ್ನು ಸಾಗಿಸಿದವನ ನಿಜ ಜೀವನದ ಕಷ್ಟ ಕಾರ್ಪಣ್ಯವನ್ನು ನೆನಪಿಸುವಂತೆ ಚಿತ್ರಿಸಿದ್ದಾರೆ.

ಯಕ್ಷಗಾನದ ಇಂತಹ ಬಹುಶ್ರುತ ವಿದ್ವಾಂಸರಿಗೆ ‘ಪಾರ್ತಿಸುಬ್ಬ’ ಪ್ರಶಸ್ತಿ ಅರ್ಹವಾಗಿಯೇ ಒಲಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT