ಭಾನುವಾರ, ಮೇ 16, 2021
22 °C

ಪ್ರಪಂಚ ಎಂದೂ ಸರಿಯಾಗಿರುವುದಿಲ್ಲ; ಲೋಕದ ಡೊಂಕನು ತಿದ್ದುವ ಮುನ್ನ ಯೋಚಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಮ್ಮ ದೇಶದ ಮಹಾಪುರುಷರಲ್ಲಿ ಒಬ್ಬರು ಬಸವಣ್ಣನವರು; ಅವರು ಒಬ್ಬ ವ್ಯಕ್ತಿಯಲ್ಲ, ಒಂದು ಶಕ್ತಿ. ಅವರ ವ್ಯಕ್ತಿತ್ವವನ್ನೂ ಸಾಧನೆಯನ್ನೂ ಕುರಿತಂತೆ ಕನ್ನಡದಲ್ಲಿ ಹಲವಾರು ಕೃತಿಗಳು ಪ್ರಕಟವಾಗಿವೆ. ಅಂಥ ಪ್ರಧಾನ ಕೃತಿಗಳಲ್ಲಿ ಒಂದು ಎಂ. ಚಿದಾನಂದಮೂರ್ತಿ ಅವರು ರಚಿಸಿರುವ ‘ಬಸವಣ್ಣನವರು’. ಈ ಕೃತಿಯಲ್ಲಿ ಅವರು ಬಸವಣ್ಣನವರ ವ್ಯಕ್ತಿತ್ವದ ಬಹುಮುಖ ಆಯಾಮಗಳನ್ನು ವಿಶ್ಲೇಷಿಸಿದ್ದಾರೆ. ಅಲ್ಲಿಯ ಕೆಲವೊಂದು ಸಾಲುಗಳು ಹೀಗಿವೆ:

‘ಬಸವಣ್ಣನವರ ಜೀವನವೊಂದು ದೊಡ್ಡ ಹೋರಾಟದ ಕತೆ. ಈ ಹೋರಾಟವನ್ನು ಎರಡು ಮಟ್ಟಗಳಲ್ಲಿ ಗುರುತಿಸಬಹುದು. ಒಂದು – ಅವರು ಬಾಹ್ಯಜಗತ್ತಿನೊಡನೆ ಅಥವಾ ಪರಿಸರದೊಂದಿಗೆ ನಡಸಿದ ಹೋರಾಟ. ಇನ್ನೊಂದು – ಅವರು ಭಕ್ತಿಸಾಧನೆಯಲ್ಲಿ ತಮ್ಮಲ್ಲೇ ತಾವು, ತಮ್ಮೊಡನೆ ತಾವು ನಡೆಸಿದ ಹೋರಾಟ. ಈ ಎರಡು ಹೋರಾಟಗಳೂ ಅವರ ಜೀವನವನ್ನು ರೂಪಿಸಿವೆ ಮತ್ತು ಅವರ ವ್ಯಕ್ತಿತ್ವವನ್ನು ಕಡೆದಿವೆ.

ಪ್ರಪಂಚ ಎಂದೂ ಸರಿಯಾಗಿರುವುದಿಲ್ಲ. ಅಲ್ಲಿ ಒಳ್ಳೆಯದು ಉಂಟು, ಕೆಟ್ಟದ್ದು ಉಂಟು. ಜನರಲ್ಲಿ ಕಪಟ, ಆಡಂಬರ, ಅಹಂಕಾರ, ನಾನಾ ರೀತಿಯ ಸುಲಿಗೆ, ಅಸತ್ಯ, ಹಿಂಸಾಮನೋಭಾವ ಇವು ಎಂದೆಂದೂ ಇರತಕ್ಕುವೇ. ಇವುಗಳನ್ನು ಕಂಡು ಕೆಲವರು ಅವಕ್ಕೆ ಹೋಂದಿಕೊಳ್ಳುತ್ತಾರೆ. ಅಲ್ಲಿ ಯಾವ ಸಮಸ್ಯೆಯೂ ಇರುವುದಿಲ್ಲ. ಇನ್ನು ಕೆಲವರು ಅವುಗಳಿಂಧ ದೂರವಿರುತ್ತಾರೆ. ಅಲ್ಲಿಯೂ ಸಮಸ್ಯೆಗಳು ಕಡಮೆ. ಆದರೆ ಅವುಗಳನ್ನು ಪ್ರತಿಭಟಿಸಿ, ಕಿತ್ತುಹಾಕಬೇಕೆಂದು ಪ್ರಯತ್ನಸುವ ವ್ಯಕ್ತಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಬಸವಣ್ಣನವರು ಇವುಗಳನ್ನು ಹೇಗೆ ಎದುರಿಸಿದರು ಎನ್ನುವ ಕತೆ ಸ್ಪಷ್ಟವಾಗಿಯೇ ಇದೆ.

ಹೊರಗಿನ ಜಗತ್ತಿನಷ್ಟೇ ಭಯಂಕರ ಒಳಗಿನ ಜಗತ್ತು. ಮನಸ್ಸು ನಾವು ಹೇಳಿದಂತೆ ಕೇಳುವುದಿಲ್ಲ. ಅದರ ಸ್ವಭಾವವೇ ಚಂಚಲ. ಅದರ ಬಯಕೆಗಳು ಅಪಾರ. ಅದರೊಡನೆ ಹೋರಾಡಿ, ಅದನ್ನು ಅಂಕೆಯಲ್ಲಿಟ್ಟುಕೊಂಡು, ಅದರ ಗತಿಯನ್ನು ನಮ್ಮ ಆದರ್ಶದತ್ತ ಒಯ್ಯುವುದು ಕಷ್ಟ. ಬಸವಣ್ಣನವರ ಈ ಆಂತರಂಗಿಕ ಹೋರಾಟದ ಕತೆ ಅವರ ವಚನಗಳಲ್ಲಿ ಸ್ಪಷ್ಟವಾಗಿ ರೂಪಿತವಾಗಿದೆ.

ಬಸವಣ್ಣನವರ ಸಾಧನೆ ಅವರ ಬಾಲ್ಯದಿಂದಲೇ ಆರಂಭವಾಗಿದ್ದರೂ ಅದು ನಿರ್ದಿಷ್ಟ ಗುರಿಯೊಡನೆ ಆರಂಭವಾಗಿದ್ದು ಕಪ್ಪಡಿ ಸಂಗಮದಲ್ಲೇ ಎಂದು ಕಾಣುತ್ತದೆ. ಮುಂದೆ ತಮ್ಮ ಜೀವನದ ಹಂಬಲವಾದ ಪರಮಾತ್ಮನ ಸಾಕ್ಷಾತ್ಕಾರವಾಗುವ ತನಕ ಆಪಾರವಾದ ಮಾನಸಿಕ ಯಾತನೆಯನ್ನೂ ಏಳುಬೀಳುಗಳನ್ನೂ ಅನುಭವಿಸಿದರು.

ಅವರು ತಮಗಿಂತ ಭಿನ್ನವಾಗಿರುವ ಲೋಕವನ್ನು ಎಷ್ಟು ತೀಕ್ಷ್ಣವಾಗಿ ಕಂಡು ಅದರ ಲೋಪದೋಷಗಳನ್ನು ಉಗ್ರವಾಗಿ ಖಂಡಿಸಿದರೋ, ತಮ್ಮ ಸ್ವಂತ ವಿಷಯದಲ್ಲೂ ಅಷ್ಟೇ ತೀಕ್ಷ್ಣವಾಗಿ ಪರೀಕ್ಷೆ ಮಾಡಿಕೊಂಡರು, ಅದನ್ನು ಉಗ್ರವಾಗಿ ಖಂಡಿಸಿದರು.

ಲೋಕದ ಡೊಂಕ ನೀವೇಕೆ ತಿದ್ದಿವಿರಿ?
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ;
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ;
ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ
ಕೂಡಲಸಂಗಮದೇವ
.

ನಾವು ಲೋಕವನ್ನು ತಿದ್ದುವ ಮೊದಲು ನಮ್ಮನ್ನು ನಾವು ಮೊದಲು ತಿದ್ದಿಕೊಳ್ಳಬೇಕು. ಬಸವಣ್ಣನವರು ಮಾಡಿದ್ದು ಇದನ್ನೇ.’

ಗ್ರಂಥಋಣ: ಡಾ. ಎಂ. ಚಿದಾನಂದಮೂರ್ತಿ ಅವರ ‘ಬಸವಣ್ಣನವರು’ (1970)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.