ಗುರುವಾರ , ಮೇ 6, 2021
22 °C

ಬ್ರೋಕರ್ ಎಡವಟ್ಟು | ‘ಮದುವೆಯ ನಂತರವೂ ಒಂದು ಹುಡುಗಿ ನೋಡಲು ಹೋಗಿಬಿಟ್ಟೆ’

ಕೆ.ವಿ.ಸಂತೋಷ್ Updated:

ಅಕ್ಷರ ಗಾತ್ರ : | |

Prajavani

ಹೆಣ್ಣು ನೋಡಲು ಹೋದಾಗ ಹಲವಾರು ಜನರಿಗೆ ಹತ್ತು-ಹಲವು ಅನುಭವವಾಗಿರುತ್ತದೆ. ಅಂತಹದನ್ನು ನಾವು ಮರೆಯಲು ಸಾಧ್ಯವಾಗುವುದಿಲ್ಲ. ಅರೆಂಜ್ ಮ್ಯಾರೇಜ್ ಆಗುವ ಪ್ರತಿ ಕುಟುಂಬದಲ್ಲಿ ಹೆಣ್ಣು ನೋಡುವ ಒಂದು ಶಾಸ್ತ್ರವಂತೂ ಇದ್ದೇ ಇರುತ್ತದೆ. ಲವ್ ಕಮ್ ಅರೆಂಜ್ಡ್ ಆದರೂ ಹೆಣ್ಣು ನೋಡುವ ಶಾಸ್ತ್ರದ ಪಾಲನೆ ಬೇಕಾಗಿದೆ. ಒಪ್ಪಿಕೊಂಡು ಹೆಣ್ಣು ನೋಡುವ ಹಾಗೂ ಗಂಡು-ಹೆಣ್ಣು ನೋಡುವ ಸಂಪ್ರದಾಯವನ್ನು ಪಾಲಿಸಲೇಬೇಕು.

ಕೆಲವೊಮ್ಮೆ ಅವು ಕೂಡುತ್ತವೆ, ಮತ್ತೆ ಕೆಲವೊಮ್ಮೆ ಕೂಡದಿರಬಹುದು. ಎಲ್ಲರೂ ಮದುವೆಯ ಮುಂಚೆ ಮದುವೆಯಾಗಲು ಹೆಣ್ಣು ನೋಡಿದರೆ, ನಾನು ಮಾತ್ರ ಮದುವೆಯ ಮುಂಚೆ ಏಳೆಂಟು ಹುಡುಗಿಯರನ್ನು ನೋಡಿ, ಮದುವೆಯ ನಂತರ ಒಂದು ಹುಡುಗಿ ನೋಡಲು ಹೋಗಿಬಿಟ್ಟೆ. ಅಯ್ಯೋ ತಪ್ಪು ತಿಳಿಯಬೇಡಿ. ನನಗೆ ಗೊತ್ತಿಲ್ಲದೆಯೇ ನನ್ನನ್ನು ಹೆಣ್ಣು ನೋಡಲು ಕರೆದೊಯ್ದು ಹೆಣ್ಣು ತೋರಿಸಿಬಿಟ್ಟರು. ಅದು ಹೇಗಾಯಿತು ಹೇಳುವೆ.

ಮದುವೆಯ ವಯಸ್ಸು ಬಂದ ನಂತರ ಅಪ್ಪ-ಅಮ್ಮ, ಸ್ನೇಹಿತರು, ನನಗೆ ಹೆಣ್ಣು ಹುಡುಕುವ ಕೆಲಸವನ್ನು ಮಾಡುತ್ತಿದ್ದರು. ಕೆಲವು ವಿದ್ಯಾಭ್ಯಾಸ, ಜಾತಕ, ಉದ್ಯೋಗ... ಇತರ ಕಾರಣಗಳಿಂದ ಪ್ರಾಥಮಿಕ ಹಂತದಲ್ಲಿ ಸರಿಯಾಗದೇ ಮುಂದುವರಿಯುತ್ತಿರಲಿಲ್ಲ. ನಾನು ಕೆಲಸ ಮಾಡುತ್ತಿದ್ದ ಊರಿನಲ್ಲಿ ಮುಸ್ಲಿಂ ಸಮುದಾಯದ ಮದುವೆ ಬ್ರೋಕರ್ ಇದ್ದರು. ಅವರನ್ನು ನನ್ನ ಸ್ನೇಹಿತರೊಬ್ಬರು ಪರಿಚಯಿಸಿದರು. ಅವರಿಗೆ ಹಿಂದೂ ಧರ್ಮದ ಎಲ್ಲಾ ಜಾತಿ, ಜನಾಂಗದ, ಉಪಜಾತಿ, ಮನೆದೇವರು ಹೆಸರುಗಳನ್ನು ಕರತಲಾಮಲಕ ಮಾಡಿಕೊಂಡಿದ್ದರು. ಅವರು ಅದಾಗಲೇ 1000ಕ್ಕೂ ಅಧಿಕ ಮದುವೆ ಮಾಡಿಸಿದ್ದರಂತೆ.

ಅವರು ನನ್ನಲ್ಲಿಗೆ ಬಂದು ನನ್ನ ವಿವರವನ್ನು ಪಡೆದುಕೊಂಡು ಆನಂತರ ಅಡ್ವಾನ್ಸ್ ಎಂದು ₹500 ಪಡೆದುಕೊಂಡರು. ಪ್ರತಿ 15 ದಿನಕ್ಕೊಮ್ಮೆ ಬಂದು ಫೋಟೋಗಳನ್ನು ತೋರಿಸುತ್ತಿದ್ದರು. ಆದರೆ ಅವೆಲ್ಲವೂ ನನಗಿಂತ ವಯಸ್ಸಿನಲ್ಲಿ ದೊಡ್ಡವರು, ವೃತ್ತಿಯಲ್ಲಿ ಸರಿಹೊಂದದ ಹುಡುಗಿಯರನ್ನು ತಂದು ತೋರಿಸುತ್ತಿದ್ದರು. ಇದೇ ರೀತಿ ಪ್ರತಿ ಬಾರಿ ಬಂದಾಗಲೂ ₹300 ಪಡೆದುಕೊಂಡು ಹೋಗುತ್ತಿದ್ದರು. ಆದರೆ, ಎಂದಿಗೂ ನನಗೆ ಸರಿಹೊಂದುವ ಹೆಣ್ಣುಗಳನ್ನು ಅವರು ತರುತ್ತಿರಲಿಲ್ಲ. ಈ ವಿಚಾರ ನನ್ನ ತಂದೆಯ ಕಿವಿಗೆ ಬಿದ್ದು ಬ್ರೋಕರ್‌ನನ್ನು ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದರು. ಹಣವನ್ನು ಪಡೆದೂ ಸರಿಹೊಂದದ ಹೆಣ್ಣುಗಳನ್ನು ತೋರಿಸುತ್ತಿರುವ ಬಗ್ಗೆ ಬೇಜಾರು ಇತ್ತು.

ನಮ್ಮ ಕುಟುಂಬಕ್ಕೆ, ವಿದ್ಯಾಭ್ಯಾಸಕ್ಕೆ ಸರಿಹೊಂದುವ ಯುವತಿಯನ್ನು ತೋರಿಸಬೇಕೆಂದು ಬೇಡಿಕೊಂಡೆವು. ಅದೇ ಚಾಳಿ ಪುನಃ ಮುಂದುವರಿಸಿದಾಗ ನೀವು ನಮ್ಮಲ್ಲಿ ಬರುವುದು ಬೇಡ. ನಾವೇ ಹುಡುಕಿಕೊಳ್ಳುವುದಾಗಿ ಹೇಳಿ, ನಿಮ್ಮ ಸಹಾಯ ನಮಗೆ ಬೇಡ ಎಂದು ಖಡಾಖಂಡಿತವಾಗಿ ಹೇಳಿ ಕಳಿಸಿಬಿಟ್ಟೆವು. ಆನಂತರ ಅವನು ಮೂರು ತಿಂಗಳು ಪತ್ತೆಯಾಗಲಿಲ್ಲ. ಇಷ್ಟರಲ್ಲಿ ನಮ್ಮ ಸ್ನೇಹಿತರ ಸಹಾಯದಿಂದ ಮದುವೆಯೂ ಆಗಿಹೋಯಿತು. ಅದು ಬ್ರೋಕರ್‌ಗೆ ಗೊತ್ತಿರಲಿಲ್ಲ. ಮದುವೆ ಆಗಿ ಇಪ್ಪತ್ತು ದಿನಗಳ ನಂತರ, ನಾನು 30 ಕಿ.ಮೀ.ದೂರದ ಊರಿನಲ್ಲಿ ಕಾರ್ಯ ನಿಮಿತ್ತ ಹೋದಾಗ ಬಸ್ ನಿಲ್ದಾಣದಲ್ಲಿ ಸಿಕ್ಕರು. ಸಾರ್ ಹೇಗಿದ್ದೀರಾ? ಬಹಳ ದಿನವಾಯ್ತು ನೀವು ಸಿಗಲೇ ಇಲ್ಲ ಎಂದರು. ಉಭಯಕುಶಲೋಪರಿ ವಿಚಾರಿಸಿದರು. ನಾನು ನನ್ನ ಮದುವೆಯಾದ ವಿಚಾರ ಹೇಳಬಾರದು, ಹೇಳಿದರೆ ಬೇಜಾರಾಗುತ್ತಾರೆ ಎಂದುಕೊಂಡು ಹೇಳದೆ ಸುಮ್ಮನಿದ್ದೆ. ಆದರೆ, ಅವರ ತಲೆಯಲ್ಲಿ ನನಗೆ ಹೆಣ್ಣು ತೋರಿಸುವ ಆಲೋಚನೆ ಮೂಡಿ, ದೂರ ತೆರಳಿ ಯಾರಿಗೋ ಫೋನ್ ಮಾಡಿದರು. ಹತ್ತು ನಿಮಿಷ ಸಮಯವನ್ನು ಹಾಗೂ ಹೀಗೂ ಮಾಡಿ ತಳ್ಳಿ ‘ಸರ್ ಬನ್ನಿ ನಮ್ಮ ಸ್ನೇಹಿತರೊಬ್ಬರು ನಿಮ್ಮ ಜಾತಿಯವರಿದ್ದಾರೆ. ಅವರ ಮನೆಯಲ್ಲಿ 5 ನಿಮಿಷ ಕೆಲಸ ಇದೆ. ಹೋಗಿಬರೋಣ’ ಎಂದು ಕರೆದುಕೊಂಡು ಹೋದರು.

ಅವರ ಮನೆಗೆ ಹೋದಾಗ ನಾಲ್ಕೈದು ಹಿರಿಯರು ಹೊರಗಡೆ ನಿಂತುಕೊಂಡು ನಮ್ಮನ್ನು ಆತ್ಮೀಯವಾಗಿ ಸ್ವಾಗತಿಸಿದರು. ಮನೆಯ ಒಳಗಡೆ ಕರೆದುಕೊಂಡು ಹೋಗಿ ಕುಳ್ಳಿರಿಸಿ ನನ್ನ ಬಗ್ಗೆ, ನನ್ನ ವೃತ್ತಿ, ತಂದೆ-ತಾಯಿ, ಜಾತಿ, ಉಪಜಾತಿ ಎಲ್ಲವನ್ನೂ ಕೇಳಿದರು. ಇದು ಸಹಜ ಪ್ರಕ್ರಿಯೆ ಎಂದು ನಾನು ಸುಮ್ಮನಿದ್ದೆ. ಎರಡು ನಿಮಿಷ ಕಳೆದ ನಂತರ ಹುಡುಗಿಯನ್ನು ಕರೆದರು. ಹುಡುಗಿಯು ಅಂದವಾಗಿ ಸೀರೆಯುಟ್ಟು ಉಪ್ಪಿಟ್ಟು, ಕೇಸರಿಬಾತ್, ಸಿಹಿತಿನಿಸುಗಳನ್ನು ತಂದು ನನಗೆ ಕೊಟ್ಟ ತಕ್ಷಣ ನನಗೇ ಹೆಣ್ಣು ತೋರಿಸಲು ಕರೆದುಕೊಂಡು ಬಂದಿರುವುದು ಖಾತರಿಯಾಯಿತು. ತಕ್ಷಣವೇ ಗಾಬರಿಯಾಗಿ ಒಂದೇ ನಿಮಿಷದಲ್ಲಿ ಎದ್ದು ಹೊರಗಡೆ ಬಂದೆ. ಹುಡುಗಿಯ ತಂದೆಯನ್ನು, ಬ್ರೋಕರ್‌ನನ್ನು ಹೊರಗೆ ಕರೆದು ಇರುವ ವಿಚಾರವನ್ನು ತಿಳಿಸಿದೆ. ನನಗೆ 20 ದಿನಗಳ ಹಿಂದೆ ಮದುವೆಯಾಗಿರುವುದಾಗಿ ಹೇಳಿ ಫೋಟೊ ತೋರಿಸಿದೆ. ಹುಡುಗಿ, ಅವರ ತಾಯಿ, ಅವರ ಕುಟುಂಬದ ಸದಸ್ಯರು.. ಗಾಬರಿಯಿಂದ ಇದ್ದರು. ಇದು ನನ್ನ ತಪ್ಪು ಅಲ್ಲ. ಬ್ರೋಕರ್ ಮಾಡಿದ ಎಡವಟ್ಟು ಎಂದೆ. ನೀವು ಯಾವಾಗ ಮದುವೆಯಾದಿರಿ? ನನಗೆ ವಿಚಾರವೇ ಗೊತ್ತಾಗಲಿಲ್ಲ ಎಂದರು ಆ ಬ್ರೋಕರ್. ಮದುವೆಯಾದ ವಿಚಾರವನ್ನು ನಾನೂ ಹೇಳಲಿಲ್ಲ, ಅವರೂ ಕೇಳಲಿಲ್ಲ . ಹೆಣ್ಣು ತೋರಿಸಲು ಆ ಬ್ರೋಕರ್ ಹೇಳಿದ್ದರೆ ಈ ಅವಾಂತರ ಆಗುತ್ತಿರಲಿಲ್ಲ. ನೀವು ಎಲ್ಲಿ ಬರೋಲ್ಲ ಅಂತಿರಾ ಎಂದುಕೊಂಡು ನಾನು ವಿಚಾರ ಹೇಳಲಿಲ್ಲ ಎಂದರು ಆ ಬ್ರೋಕರ್.

ನಾಲ್ಕೈದು ನಿಮಿಷಗಳಲ್ಲಿ ಎಲ್ಲವೂ ಸರಿಯಾಯಿತು. ಅದಕ್ಕೆ ಆ ಹುಡುಗಿಯ ತಂದೆ ‘ನಿಮ್ಮ ತಮ್ಮ, ನಿಮ್ಮ ಬಂಧುಗಳಲ್ಲಿ ಉತ್ತಮ ವರನಿದ್ದರೆ ಹೇಳಿ’ ಎಂದರು. ಮಾಡಿರುವ ಕೇಸರಿಬಾತ್ ಆದರೂ ತಿನ್ನಿ ಎಂದು ಹೇಳಿದರು. ಆದರೆ ತಿನ್ನುವ ಮನಸ್ಸು ಬಾರದೆ ಬೈ ಎಂದು ಹೊರಗಡೆ ಬಂದೆ.

ಮನೆಗೆ ಹೋಗಿ ನನ್ನ ಹೆಂಡತಿಗೆ ಹೇಳಿದಾಗ ಆಗಿರುವ ಸನ್ನಿವೇಶವನ್ನು ನೆನೆದು ಎಲ್ಲರೂ ನಕ್ಕರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು