ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ದಿನಾಚರಣೆ ವಿಶೇಷ: ಚಿಣ್ಣರ ಚೆನ್ನರು

Last Updated 14 ನವೆಂಬರ್ 2021, 2:30 IST
ಅಕ್ಷರ ಗಾತ್ರ

ಅಭಿನಯದಲ್ಲಿ ಹಿತಾನುಭವ
ರತ್ನಪಕ್ಷಿ, ಪಂಜರಶಾಲೆ, ಅಳಿಲು ರಾಮಾಯಣ, ಅಲಿಬಾಬಾ– ನಲವತ್ತು ಕಳ್ಳರು ಸೇರಿದಂತೆ ಹತ್ತಾರು ನಾಟಕಗಳಲ್ಲಿ ಅಭಿನಯಿಸಿದ ಮೈಸೂರಿನ ಹಿತಾ ರಾಗ, ಶಾಸ್ತ್ರೀಯ ಸಂಗೀತ ಹಾಗೂ ಭರತನಾಟ್ಯದ ಭರವಸೆಯ ಕಲಾವಿದೆ.

ಬಿ.ಸುರೇಶ ಅವರ ‘ಪುಟ್ಟಕ್ಕನ ಹೈವೇ’ ಚಿತ್ರಕ್ಕೆ ಹಿತಾ ಆಯ್ಕೆಯಾದಾಗ ಅವಳಿಗೆ ಮೂರು ವರ್ಷವಷ್ಟೆ. ಆ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿಯೂ ಸಿಕ್ಕಿತು. ಗೋಕುಲ ಕೃಷ್ಣ, ‘ಇದೊಳ್ಳೆ ರಾಮಾಯಣ’ದಲ್ಲಿ ಹಿತಾಳದ್ದು ಗಮನ ಸಳೆಯುವ ಅಭಿನಯ.

ಓದಿನ ಜೊತೆಗೆ ರಂಗಭೂಮಿಯಲ್ಲಿ ಸದಾ ಸಕ್ರಿಯ. ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ರಾಷ್ಟ್ರೀಯ ನಾಟಕೋತ್ಸವದಲ್ಲೂ ನಾಟಕ ಪ್ರದರ್ಶನ ನೀಡಿದ್ದಾಳೆ. ಹಿತಾಳ ತಾಯಿ ಶಿಲ್ಪಾಮೂರ್ತಿ– ನ್ಯಾಯಾಲಯದಲ್ಲಿ ಶೀಘ್ರ ಲಿಪಿಕಾರ್ತಿ, ತಂದೆ ರಾಘವೇಂದ್ರ ರಾಜೇ ಅರಸ್‌ ರಂಗಭೂಮಿ, ಕಿರುತೆರೆ ನಟ. ಹಿತಾಗೆ ಚಾರಣದಲ್ಲೂ ವಿಶೇಷ ಆಸಕ್ತಿ– ಬರಪೋಲ್‍, ಕೆಮ್ಮಣ್ಣುಗುಂಡಿ, ಅಘನಾಶಿನಿ, ಎತ್ತಿನಭುಜ ಪ್ರವಾಸ ಮಾಡಿದ್ದಾಳೆ. ಭಾರತೀಯ ವಾಯುಸೇನೆ ಸೇರುವುದು ಈಕೆಯ ಚಿಕ್ಕಂದಿನ ಕನಸು.

***

ಮನಸೆಳೆಯುವ ಮೋಹನದಾಸ
ಮಹಾತ್ಮ ಗಾಂಧಿ ಬಾಲ್ಯ ಜೀವನ ಆಧರಿಸಿ ಪಿ.ಶೇಷಾದ್ರಿ ಅವರು ನಿರ್ದೇಶಿಸಿದ ಸಿನಿಮಾ ‘ಮೋಹನದಾಸ’ದಲ್ಲಿ, ಗಮನಸೆಳೆಯುವ ಅಭಿನಯ ನೀಡಿದ ಬಾಲಕ ಕಿಶೋರ ಪರಮ್‌ಸ್ವಾಮಿ.

‘ನನಗೆ ನಾಟಕ, ಹಾಡು ಎಂದರೆ ಇಷ್ಟ. ಅಮರಚಿತ್ರ ಕಥಾ ಪುಸ್ತಕದಲ್ಲಿ ಗಾಂಧಿ ಬಗ್ಗೆ ಓದಿದ್ದೆ ಅಷ್ಟೆ. ಸಿನಿಮಾದಲ್ಲಿ ಪಾತ್ರ ಮಾಡುವಾಗ ಗಾಂಧಿ ಮತ್ತಷ್ಟು ಇಷ್ಟವಾದರು. ಎಲ್ಲ ಮನುಷ್ಯರಂತೆ ಗಾಂಧಿ ತಪ್ಪು ಮಾಡಿದ್ದಾರೆ. ನಾವು ತಪ್ಪನ್ನು ಮುಚ್ಚಿಡುತ್ತೇವೆ. ಆದರೆ, ಗಾಂಧಿ ಸತ್ಯ ನುಡಿದರು. ಹೀಗಾಗಿ ಧೈರ್ಯವಾಗಿ ಬ್ರಿಟಿಷರನ್ನು ಎದುರಿಸಿದರು’ ಎಂದು ಈ ಪುಟಾಣಿ ಕಣ್ಣು ಮಿಟುಕಿಸುತ್ತಾ ಹೇಳುತ್ತಾನೆ.

ಪರಮ್‌ ತಾಯಿ ದೀಪಾ ರಂಗಭೂಮಿ ನಟಿ, ತಂದೆ ಎನ್‌.ರವಿಶಂಕರ್‌ ಲೇಖಕ. ‘ಮುಂದೆ ಏನಾಗಬೇಕೆಂದು ಕೊಂಡಿದ್ದೀಯ’ ಎಂದು ಪ್ರಶ್ನಿಸಿದರೆ, ‘ಒಳ್ಳೆಯ ಮನುಷ್ಯ ಆದರಷ್ಟೇ ಸಾಕು’ ಎಂದು ಉತ್ತರಿಸುತ್ತಾನೆ.

***

ತನುಶ್ರೀ ಯೋಗದ ಈ ಪರಿ
ಯೋಗ ಹಾಗೂ ನೃತ್ಯ ಪ್ರತಿಭೆಯ ಮೂಲಕ ಏಳು ದಾಖಲೆಗಳನ್ನು ನಿರ್ಮಿಸಿದ್ದಾಳೆ ಉಡುಪಿಯ ಪಿತ್ರೋಡಿಯ ಪೋರಿ ತನುಶ್ರೀ. ಸಂಧ್ಯಾ ಹಾಗೂ ಉದಯ್‌ ಕುಮಾರ್ ದಂಪತಿಯ ಪುತ್ರಿಯಾಗಿರುವ ತನುಶ್ರೀ ಪ್ರಸ್ತುತ ಉಡುಪಿಯ ಸೇಂಟ್ ಸಿಸಿಲಿಸ್ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದಾಳೆ.

2017ರ ನ.11ರಂದು ‘ನಿರಾಲಾಂಭ ಪೂರ್ಣ ಚಕ್ರಾಸನ’ ಭಂಗಿಯನ್ನು 1 ನಿಮಿಷಕ್ಕೆ 19 ಬಾರಿ ಪ್ರದರ್ಶಿಸಿ ಗೋಲ್ಡನ್ ಬುಕ್ ಆಫ್‌ ವರ್ಲ್ಡ್‌ ರೆಕಾರ್ಡ್‌ನಲ್ಲಿ ಖಾತೆ ತೆರೆದ ತನುಶ್ರೀ ಹಿಂದಿರುಗಿ ನೋಡಿಲ್ಲ.

2018ರಲ್ಲಿ ‘ಮೋಸ್ಟ್ ಫುಲ್ ಬಾಡಿ ರೆವಲ್ಯೂಷನ್ ಮೇಂಟೇನಿಂಗ್ ಎ ಚೆಸ್ಟ್‌ ಸ್ಟಾಂಡ್ ಪೊಸಿಷನ್’ ಭಂಗಿಯನ್ನು 1 ನಿಮಿಷದಲ್ಲಿ 42 ಬಾರಿ ಪ್ರದರ್ಶಿಸಿ ಗಿನ್ನೆಸ್‌ ವರ್ಲ್ಡ್‌ ರೆಕಾರ್ಡ್‌ ಮಾಡಿದ್ದಾಳೆ. ಅದೇ ವರ್ಷ ಇಟಲಿಯ ರೋಮ್‌ನಲ್ಲಿ ಯೋಗ ಸಾಧಕರೊಂದಿಗೆ ಯೋಗ ಪ್ರದರ್ಶನ ನೀಡಿದ್ದಾಳೆ. ಧನುರಾಸನ, ಚಕ್ರಾಸನದಲ್ಲೂ ದಾಖಲೆ ಬರೆದಿದ್ದಾಳೆ. 43.18 ನಿಮಿಷಗಳಲ್ಲಿ 245 ಯೋಗ ಭಂಗಿಗಳ ಪ್ರದರ್ಶಿಸಿ ಗಮನ ಸೆಳೆದಿದ್ದಾಳೆ ಈ ಪೋರಿ. ಮೂರರ ಪ್ರಾಯದಲ್ಲೇ ವೇದಿಕೆ ಮೇಲೆ ನೃತ್ಯ ಮಾಡಿ ಸೈ ಎನಿಸಿಕೊಂಡು ರಾಜ್ಯಮಟ್ಟದ ನೃತ್ಯ ಸ್ಪರ್ಧೆಗಳಲ್ಲಿ ಪ್ರಶಸ್ತಿ ಪಡೆದು, ಇದುವರೆಗೂ 425 ನೃತ್ಯ ಕಾರ್ಯಕ್ರಮಗಳನ್ನು ನೀಡಿ ನಾಟ್ಯಮಯೂರಿ ಬಿರುದು ಪಡೆದಿದ್ದಾಳೆ. ತುಳು ಸಾಹಿತ್ಯ ಅಕಾಡೆಮಿಯಿಂದ ವಿಶೇಷ ಬಾಲಪ್ರತಿಭೆ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಬಾಲಕಿಯ ಮುಡಿಗೇರಿದೆ.

***

ನೆನಪಿನ ಶಕ್ತಿಯ ಪೋರಿ
ಮೂರೂವರೆ ವರ್ಷದ ಪುಟಾಣಿ ಪ್ರತೀಕ್ಷಾ ಬಿರಾದಾರ. ಆದರೆ, ಅವಳು ಮಾತನಾಡಲು ನಿಂತರೆ ನೂರು ವರ್ಷದವರೂ ಬೆರಗಾಗಬೇಕು.

ರಾಷ್ಟ್ರಪತಿಗಳು, ಪ್ರಧಾನ ಮಂತ್ರಿಗಳು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಹೆಸರುಗಳನ್ನು ಪಟಪಟನೆ ಹೇಳುವ ಆಕೆ, ದೇಶದೆಲ್ಲ ರಾಜ್ಯಗಳ ರಾಜಧಾನಿಗಳ ಹೆಸರುಗಳನ್ನೂ ಹೇಳುತ್ತಾಳೆ.

‘ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌’, ‘ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ಸ್’ನಲ್ಲಿ ಅವಳ ಹೆಸರು ಸೇರ್ಪಡೆಯಾಗಿದೆ. ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಪರಸನಹಳ್ಳಿಯ ಶಾಂತಗೌಡ ಮತ್ತು ವಿದ್ಯಾಶ್ರೀ ಅವರ ಪುತ್ರಿ ಪ್ರತೀಕ್ಷಾಳ ನೆನಪಿನ ಶಕ್ತಿ ಅಗಾಧವಾಗಿದೆ. ಸ್ವಾತಂತ್ರ್ಯ ಭಾರತದ ವೀರ ಮಹಿಳೆಯರು, ಸಾಕುಪ್ರಾಣಿಗಳು, ಕಾಡು ಪ್ರಾಣಿಗಳು, ವಾಹನಗಳು, ಶರೀರದ ಭಾಗಗಳು, ಹೂವುಗಳು, ತರಕಾರಿಗಳು, ಹಣ್ಣುಗಳ ಹೆಸರು ಹೇಳುತ್ತಾಳೆ. ಮುಂದೆ ಜಿಲ್ಲಾಧಿಕಾರಿ ಆಗಬೇಕೆಂಬ ಆಸೆ ಹೊಂದಿದ್ದಾಳೆ.

***

ಹಸಿರು ಸೇನೆಯ ನಾಯಕಿ
ಪರಿಸರ ರಕ್ಷಣೆಗೆ ಪಣತೊಟ್ಟಿರುವ ನೂರಾರು ಸ್ವಯಂ ಸೇವಕರ ಜತೆಗೆ ತನ್ನೆರಡು ಪುಟ್ಟ ಕೈಗಳನ್ನು ಸೇರಿಸಬೇಕೆಂದು ಹಂಬಲಿಸಿ ಈ ಬಾಲಕಿ ಮಕ್ಕಳ ಸೈನ್ಯ ಕಟ್ಟಿಕೊಂಡು ಪ್ರಕೃತಿಗೆ ಹಸಿರು ಹೊದಿಕೆ ಹೊಲಿಯುತ್ತಿದ್ದಾಳೆ. ಮಂಗಳೂರಿನ ಜಪ್ಪಿನಮೊಗರು ನಿವಾಸಿ ಹನಿ ಎಚ್.ಆರ್., ಬಾಲ್ಯದಿಂದಲೇ ಪರಿಸರ ಕಾಳಜಿ ಹೊಂದಿದವಳು.

‘ಯಾಕಿಷ್ಟು ಸುಡುಬಿಸಿಲು’ ಎಂದು ಪ್ರಶ್ನಿಸಿದ ಹನಿಗೆ, ಪರಿಸರದ ಮೇಲೆ ಆಗುತ್ತಿರುವ ದೌರ್ಜನ್ಯದ ಬಗ್ಗೆ ಅಪ್ಪ–ಅಮ್ಮ ತಿಳಿಸಿದರು. ಆಗಿನಿಂದ ಪ್ರಕೃತಿ ಪೂರಕ ಕಾಯಕಕ್ಕೆ ಮುಂದಾಗಿರುವ ಈಕೆ, ಮೂರನೇ ತರಗತಿಯಲ್ಲಿರುವಾಗ ತನ್ನ ಪಾಕೆಟ್ ಮನಿಯಲ್ಲಿ ನರ್ಸರಿ ಗಿಡಗಳನ್ನು ಖರೀದಿಸಿ, ನೆರೆಹೊರೆಯವರಿಗೆ ಹಂಚಿದಳು. ಅಕ್ಕಪಕ್ಕದ ಮಕ್ಕಳನ್ನು ಸೇರಿಸಿ ‘ಗ್ರೀನ್ ವಾರಿಯರ್ಸ್‌’ ತಂಡ ಕಟ್ಟಿದಳು.

ಮಾಲಿನ್ಯರಹಿತ ದೀಪಾವಳಿ ಆಚರಿಸಲು ವಿನಂತಿಸಿದ ಈ ತಂಡವು ಮಣ್ಣಿನ ಹಣತೆ ಹಂಚಿತು. ಬಸ್‌ ನಿಲ್ದಾಣಕ್ಕೆ ಹೋಗಿ, ಪ್ಲಾಸ್ಟಿಕ್‌ ಬಾಟಲಿ, ಕವರ್‌ಗಳನ್ನು ಎಲ್ಲೆಂದರಲ್ಲಿ ಬಿಡಾಡಬೇಡಿ ಎಂದು ಪ್ರಯಾಣಿಕರ ಬಳಿ ಕೋರಿಕೊಂಡಿತು. ‘ಹಾರ್ದಿಕಾ, ಅನನ್ಯಾ, ಜಿತೇಶ್ ಇನ್ನೂ ಹಲವರು ಸೇರಿ ಈ ಬಾರಿ ಗಣೇಶ ಚತುರ್ಥಿಗೆ ಹಣ್ಣಿನ ಬೀಜ ಹಾಕಿ ಮಣ್ಣಿನ ಗಣೇಶ ಮಾಡಿದ್ದೆವು. ವಿಸರ್ಜಿತ ಗಣೇಶ ಗಿಡವಾಗಿ ಮೂಡಿಬರುತ್ತಾನೆ ಎಂಬುದು ನಮ್ಮ ಕಲ್ಪನೆಯಾಗಿತ್ತು’ ಎನ್ನುತ್ತಾಳೆ ಹನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT