ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಂಡರ್ ಕಿಡ್ಸ್

ಸಕ್ಕರೆ ಕಡ್ಡಿ
Last Updated 13 ನವೆಂಬರ್ 2018, 20:32 IST
ಅಕ್ಷರ ಗಾತ್ರ

ಶಿಯಾ ಖೋಡೆ
ಧಾರಾವಾಡದ 14 ವರ್ಷದ ಬಾಲಕಿ ಶಿಯಾ ಖೋಡೆ ವಿದ್ಯುತ್‌ಗೆ ಬಲಿಯಾಗುತ್ತಿದ್ದ ತನ್ನ ಕಿರಿಯ ಸಹೋದರರನ್ನು ರಕ್ಷಿಸಿದ ಕಥೆ ಇದು. ಶಿಯಾ ಬೇಸಿಗೆ ರಜೆ ಕಳೆಯಲು ಹುಬ್ಬಳ್ಳಿಯಲ್ಲಿರುವ ತನ್ನ ಚಿಕ್ಕಪ್ಪನ ಮನೆಗೆ ಹೋಗಿದ್ದರು. 2015ರ ಏಪ್ರಿಲ್‌ ತಿಂಗಳ ಒಂದು ದಿನ ಮನೆಯ ಮಹಡಿಯ ಮೇಲೆ ತನ್ನ ಸಹೋದರರ ಜತೆ ಆಟವಾಡುತ್ತಿದ್ದಳು. ಮಹಡಿಯ ಮೇಲೆ ವಿದ್ಯುತ್ ವೈರ್ ಹಾದು ಹೋಗಿತ್ತು. ಅದು ಮಹಡಿಯಲ್ಲಿರುವ ಕಬ್ಬಿಣದ ಗ್ರೀಲ್‌ಗೆ ತಾಗಿಕೊಂಡಿತ್ತು. ಆಟವಾಡುತ್ತಿರುವಾಗ ಶಿಯಾಳ ಕಿರಿಯ ಸಹೋದರ ಆ ಕಬ್ಬಿಣದ ಗ್ರೀಲ್ ಅನ್ನು ಹಿಡಿದುಕೊಂಡು ಬಿಟ್ಟ! ಇದನ್ನು ಗಮನಿಸಿದ ಶಿಯಾ ಕೂಡಲೇ ಅವನ ಅಂಗಿಯನ್ನು ಹಿಡಿದು ತನ್ನೆಡೆಗೆ ಜೋರಾಗಿ ಬರಸೆಳೆದುಕೊಂಡು ಬಿಟ್ಟಳು, ಪ್ರಜ್ಞೆತಪ್ಪಿದ್ದ ಸಹೋದರರನ್ನು ಕಂಡು ಜೋರಾಗಿ ಕೂಗಿಕೊಂಡಾಗ ಸ್ಥಳೀಯ ನೆರವಿಗೆ ದಾವಿಸಿದರು. ತಕ್ಷಣಕ್ಕೆ ಆ ಬಾಲಕನನ್ನು ಆಸ್ಪತ್ರೆ ದಾಖಲಿಸಿದ್ದರಿಂದ ಆ ಬಾಲಕ ಪ್ರಾಣಾಪಾಯದಿಂದ ಪಾರಾಯಿತು. ಒಂದು ವೇಳೆ ಶಿಯಾ ಸಹೋದರನನ್ನು ಮುಟ್ಟಿದ್ದರೆ ಇಬ್ಬರಿಗೂ ವಿದ್ಯತ್ ಪ್ರವಹಿಸುತ್ತಿತ್ತು. ಇದನ್ನು ಅರಿತಿದ್ದ ಶಿಯಾ ಬಾಲಕನ ಅಂಗಿ ಹಿಡಿದು ಅವನನ್ನು ರಕ್ಷಣೆ ಮಾಡಿದಳು. ಶಿಯಾಳ ಮುಂದಾಲೋಚನೆ ಮತ್ತು ಸಾಹಸಕ್ಕೆ ಕೇಂದ್ರ ಸರ್ಕಾರ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿದೆ.

***
ಕೌಟಿಲ್ಯ ಪಂಡಿತ್
ಹರಿಯಾಣದ ಪಂಚಕುಲದಲ್ಲಿರುವ ಭುವನ್ ವಿದ್ಯಾಲಯದಲ್ಲಿ ಓದುತ್ತಿರುವ ಕೌಟಿಲ್ಯ ಪಂಡಿತ್ ಗೂಗಲ್ ಬಾಯ್ ಎಂದೇ ಖ್ಯಾತಿಯಾಗಿದ್ದಾನೆ. ಜಾಗತಿಕ ಪ್ರಚಲಿತ ಘಟನೆಗಳ ಬಗ್ಗೆ ಕೌಟಿಲ್ಯ ಸಂಪೂರ್ಣವಾಗಿ ತಿಳಿದುಕೊಂಡಿದ್ದಾನೆ. ಗೂಗಲ್ ಹುಡುಕುವ ಬದಲು ಕೌಟಿಲ್ಯನನ್ನು ಕೇಳಿ ಎಂದು ಇವನ ತಿಳಿದವರು ಹೇಳುತ್ತಾರೆ. 213 ದೇಶಗಳ ಮಾಹಿತಿ ಮತ್ತು ಅಂಕಿ ಅಂಶಗಳು, ಮಂಗಳ ಗ್ರಹ ಸೇರಿದಂತೆ ಸೌರಮಾನದ ಸಮಗ್ರ ಮಾಹಿತಿ, ಗಣಿತ, ವಿಜ್ಞಾನ, ರಾಜಕೀಯ, ಬಾರತೀಯ ಇತಿಹಾಸದ ಬಗ್ಗೆಯೂ ಇವನಿಗೆ ಗೊತ್ತು. ಕೌಟಿಲ್ಯನ ಐಕ್ಯೂ ಮಟ್ಟ 150ರಷ್ಟಿದೆ. 11 ವರ್ಷದ ಕೌಟಿಲ್ಯ ಖಗೋಳ ವಿಜ್ಞಾನದಲ್ಲಿ ಸಾಧನೆ ಮಾಡಬೇಕು ಎಂಬ ಕನಸನ್ನು ಹೊಂದಿದ್ದಾನೆ. ಅಗಾದ ನೆನಪಿನ ಶಕ್ತಿ ಹೊಂದಿರುವ ಕೌಟಿಲ್ಯನಿಗೆ ಹಲವಾರು ಪ್ರಶಸ್ತಿಗಳು ಬಂದಿವೆ.


***
ತೃಪ್ತ್‌ರಾಜ್ ಪಾಂಡ್ಯಾ
ಹನ್ನೆರಡು ವರ್ಷದ ತೃಪ್ತಿರಾಜ್ ಪಾಂಡ್ಯಾ ಅಸಾದಾರಣ ಪ್ರತಿಭೆ. ಸರಿಯಾಗಿ ಮಾತು ಬಾರದ ವಯಸ್ಸಿನಲ್ಲಿ ತಬಲ ನುಡಿಸಲು ಪ್ರಾರಂಭಿಸಿದ್ದ! ತೃಪ್ತಿರಾಜ್ ಪಾಂಡ್ಯ ಪ್ರಸ್ತುತ ದೇಶದ ಅತಿ ಕಿರಿಯ ತಬಲ ಮಾಸ್ಟರ್‌! ಪ್ರಾರಂಭದಲ್ಲಿ ತನ್ನ ಪುಟ್ಟ ಕೈಗಳಿಂದ ತಬಲದ ಮೇಲೆ ಪಟ್ ಪಟ್‌ ಎಂದು ಬಾರಿಸುತ್ತ ಆಸಕ್ತಿ ಬೆಳೆಸಿಕೊಂಡು, ನಾಲ್ಕು ವರ್ಷ ತುಂಬುವುದರೊಳಗೆ ತಬಲ ಮಾಸ್ಟರ್ ಆದ. ಇದು ಸಾಧ್ಯವಾಗಿದ್ದು ಕಲಿಕೆಯ ಆಸಕ್ತಿಯಿಂದ . ತೃಪ್ತಿರಾಜ್‌ಗೆ ಆರು ವರ್ಷ ತುಂಬಿದಾಗ ವಿಶ್ವದ ಅತೀ ಕಿರಿಯ ತಬಲ ಮಾಸ್ಟರ್ ಎಂದು ಗಿನ್ನೆಸ್ ದಾಖಲೆಯ ಪುಟ ಸೇರಿದ. ಸಂಗೀತಾ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂಬ ಕನಸು ಕಂಡಿರುವ ತೃಪ್ತಿರಾಜ್‌ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಹಲವಾರು ಸಂಗೀತ ಕಛೇರಿಗಳನ್ನು ನಡೆಸಿಕೊಟ್ಟು ಸಂಗೀತಾಭಿಮಾನಿಗಳ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.


***
ಸೌಗತ್ ಬಿಸ್ತಾ
ನೇಪಾಳದ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿರುವ ಸೌಗತ್ ಬಿಸ್ತಾ ವಿಶ್ವದ ಅತಿಕಿರಿಯ ಸಿನಿಮಾ ನಿರ್ದೇಶಕ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ. 11 ವರ್ಷದ ಸೌಗತ್ ಬಿಸ್ತಾ ಪ್ರಸ್ತುತ ಸಿನಿಮಾದ ತಾಂತ್ರಿಕಮಟ್ಟುಗಳನ್ನು ಕಲಿಯುತ್ತಿದ್ದಾನೆ. ಸೌಗತ್ ಬಿಸ್ತಾ 2014ರಲ್ಲಿ ’ಲವ್ ಯೂ ಬಾಬಾ’ ಎಂಬ ಸಿನಿಮಾವನ್ನು ನಿರ್ದೇಶನ ಮಾಡಿದ್ದ. ಆಗ ಅವನಿಗೆ ಕೇವಲ 7 ವರ್ಷಗಳು ಮಾತ್ರ. ಈ ಸಿನಿಮಾ ವಿಶ್ವದಾದ್ಯಂತ ತೆರೆಕಂಡು ಪ್ರೇಕ್ಷಕರು ಮತ್ತು ಸಿನಿಮಾ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಕನ್ನಡದ ಮಾಸ್ಟರ್ ಕಿಶನ್ ದಾಖಲೆಯನ್ನು ಸೌಗತ್ ಬಿಸ್ತಾ ಮುರಿದಿದ್ದಾನೆ. ಮಾಸ್ಟರ್ ಕಿಶನ್ 2006ರಲ್ಲಿ ಪುಟ್‌ಪಾತ್ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಆಗ ಅವರಿಗೆ 9 ವರ್ಷಗಳು. ನೇಪಾಳ ಸಿನಿಮಾರಂಗದಲ್ಲಿ ಹಿರಿದಾದ ಸಾಧನೆ ಮಾಡಬೇಕು ಎಂಬ ಗುರಿಯನ್ನು ಸೌಗತ್ ಬಿಸ್ತಾ ಹೊಂದಿದ್ದಾನೆ.

****
ಅಕ ಮ್ಯಾಹೀಮ್...
ಆಸ್ಟ್ರೇಲಿಯಾದ ಅಕ ಮ್ಯಾಹೀಮ್ ಅತಿ ಕಿರಿಯ ವಯಸ್ಸಿಗೆ ವಸ್ತ್ರ ವಿನ್ಯಾಸದಲ್ಲಿ ಹೆಸರು ಮಾಡಿರುವ ಬಾಲಕಿ. ಮ್ಯಾಹೀಮ್ ನಾಲ್ಕು ವರ್ಷದವಳಿದ್ದಾಗ ವಸ್ತ್ರ ವಿನ್ಯಾಸ ಮಾಡಲು ಕಲಿತದ್ದು. ಗೊಂಬೆಗಳಿಗೆ ಬಟ್ಟೆ ವಿನ್ಯಾಸ ಮಾಡುವುದರಿಂದ
ಮ್ಯಾಹೀಮ್‌ಳಾ ಫ್ಯಾಶನ್‌ ಡಿಸೈನಿಂಗ್ ಪಯಣ ಆರಂಭವಾಯಿತು ಎಂದು ಅವಳ ಪೋಷಕರು ಹೇಳುತ್ತಾರೆ. ಮಕ್ಕಳಿಗಾಗಿ ವಿಶೇಷ ಉಡುಪುಗಳನ್ನು ಮ್ಯಾಹೀಮ್ ವಿನ್ಯಾಸ ಮಾಡುತ್ತಿದ್ದಾರೆ. ಮ್ಯಾಹೀಮ್ ವಿನ್ಯಾಸಿತ ವಸ್ತ್ರಗಳು ಹಲವಾರು
ಅಂತರರಾಷ್ಟ್ರೀಯ ಮಕ್ಕಳ ಫ್ಯಾಶನ್‌ ಶೋ ಕಾರ್ಯಕ್ರಮಗಳಲ್ಲಿ ಪ್ರದರ್ಶನಗೊಂಡಿವೆ. 9 ವರ್ಷದ ಮ್ಯಾಹೀಮ್ ವಿನ್ಯಾಸದ ಉಡುಪುಗಳಿಗೆ ಆಸ್ಟ್ರೇಲಿಯಾದಲ್ಲಿ ಹೆಚ್ಚು ಬೇಡಿಕೆ ಇದೆ. ವಿವಿಧ ಬಟ್ಟೆ ತಯಾರಿಕ ಕಂಪೆನಿಗಳು ಮ್ಯಾಹೀಮ್ ವಿನ್ಯಸಾದ ಹಕ್ಕುಗಳನ್ನು ಪಡೆದುಕೊಳ್ಳಲು ಕ್ಯೂ ನಿಲ್ಲುತ್ತಾರೆ ಎಂದು ಸಿಡ್ನಿ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

(ಮಾಹಿತಿ: ಪೃಥ್ವಿರಾಜ್ ಎಂ.ಎಚ್, ಜಗದೀಶ್ ಅಂಗಡಿ)

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT