ಶನಿವಾರ, ಆಗಸ್ಟ್ 20, 2022
22 °C

ಆಗಸದ ಚುಕ್ಕಿಗಳ ಹಿಡಿಯಲು ಏಣಿ ನನ್ನೀ ಗಿಟಾರ್!

ಕನಕರಾಜ್ ಬಾಲಸುಬ್ರಮಣ್ಯಂ Updated:

ಅಕ್ಷರ ಗಾತ್ರ : | |

Prajavani

ಚಿಲಿ ದೇಶದ ಸಾಂಸ್ಕೃತಿಕ ನಾಯಕ ವಿಕ್ಟರ್‌ ಹಾರಾ. ಮಿಲಿಟರಿ ಅಧಿಕಾರಿಗಳು ಈ ಮಹಾನ್‌ ಕಲಾವಿದನನ್ನು ನಿರ್ದಯವಾಗಿ ಕೊಂದರು. ಗಿಟಾರ್ ನುಡಿಸುವಂತೆ ಆತನಿಗೆ ಹೇಳಲಾಯಿತು. ಗಿಟಾರ್ ಮುಟ್ಟಿದ್ದೇ ತಡ ಬೆರಳುಗಳನ್ನು ಕತ್ತರಿಸಿ ಹಾಕಲಾಯಿತು. ಕಿಂಚಿತ್ತೂ ವಿಚಲಿತನಾಗದೆ ಹಾಡುತ್ತಿದ್ದ ಆತನ ಮೇಲೆ ಬರೋಬ್ಬರಿ ನಲವತ್ತಾರು ಗುಂಡುಗಳನ್ನು ಹಾರಿಸಲಾಯಿತು...

‘ಕಸ್ಟೋಡಿಯಲ್ ವೈಲೆನ್ಸ್’ ಅಥವಾ ‘ಪೊಲೀಸ್ ದೌರ್ಜನ್ಯ’ ಎಂಬ ಪದಗಳು ಮತ್ತು ಅವುಗಳಿಗೆ ಸಂಬಂಧಿಸಿದ ಘಟನೆಗಳು ಕಳೆದ ಕೆಲ ತಿಂಗಳುಗಳಲ್ಲಿ ವಿಶ್ವದ ತುಂಬೆಲ್ಲ ನಾನಾ ಚರ್ಚೆ, ವಿವಾದ ಮತ್ತು ಹೋರಾಟಗಳನ್ನು ಹುಟ್ಟುಹಾಕಿವೆ. ಅಮೆರಿಕದಲ್ಲಿ ಇತ್ತೀಚೆಗೆ ನಡೆದ ಜಾರ್ಜ್ ಫ್ಲಾಯ್ಡ್‌ ಘಟನೆಯು ಜನಾಂಗೀಯ ತಾರತಮ್ಯದ ಹೋರಾಟಕ್ಕೆ ಹೊಸ ಸಾಧ್ಯತೆಗಳನ್ನೂ ನೀಡಿದೆ.

ವಿಕ್ಟೋರಿಯನ್ ಯುಗದ ಇಂಗ್ಲೆಂಡಿನಲ್ಲಿ ಹುಟ್ಟಿಕೊಂಡ ಈ ಪೊಲೀಸ್ ವ್ಯವಸ್ಥೆಯನ್ನು ಜಗತ್ತಿನ ಬಹುತೇಕ ಪ್ರಭುತ್ವಗಳು ತಮ್ಮ ಅಧಿಕಾರ ಬಲಪಡಿಸಲು ಉಪಯೋಗಿಸಿಕೊಂಡಿವೆ. ನ್ಯಾಯಾಲಯಗಳು ಅಪರಾಧ ನಿರ್ಣಯ ಮಾಡುವ ಪದ್ಧತಿ ಇದ್ದರೂ ಆಪಾದಿತರನ್ನು ಪೊಲೀಸ್ ವ್ಯವಸ್ಥೆಯೇ ತೀವ್ರವಾಗಿ ದಂಡಿಸಿದ ಉದಾಹರಣೆಗಳು ಪ್ರಪಂಚದೆಲ್ಲೆಡೆ ದಂಡಿಯಾಗಿವೆ.

ಪ್ರಭುತ್ವಗಳೇ ಮುಂದೆ ನಿಂತು ಪೊಲೀಸರ ಮೂಲಕ ಆಪಾದಿತರನ್ನು ತೀವ್ರವಾಗಿ ಹಿಂಸಿಸಿವೆ; ಸಾವಿರಾರು ಮಂದಿಯನ್ನು ಕೊಂದು ಹಾಕಿವೆ ಅಥವಾ ಅವರನ್ನು ಕಣ್ಮರೆಗೊಳಿಸಿವೆ. ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿದ ಬರಹಗಾರರು, ಕಲಾವಿದರ ಧ್ವನಿಯನ್ನೂ ಅಡಗಿಸಲಾಗಿದೆ. 1973ರಲ್ಲಿ ದಕ್ಷಿಣ ಅಮೆರಿಕದ ಚಿಲಿ ದೇಶದಲ್ಲಿ ನಡೆದ ಹತ್ಯಾಕಾಂಡವು ಪ್ರಭುತ್ವದ ಅಂತಹ ಪೈಶಾಚಿಕ ಮನೋಭಾವದ ಪ್ರತಿಬಿಂಬ. ಅದರಲ್ಲೂ ಮುಖ್ಯವಾಗಿ, ಸಂಗೀತಗಾರ ವಿಕ್ಟರ್ ಹಾರಾನ ಕಗ್ಗೊಲೆ ಎಂಥವರನ್ನೂ ತಲ್ಲಣಗೊಳಿಸುವಂಥದ್ದು. ‘ಪೊಲೀಸ್ ಸ್ಟೇಟ್’ ಪರಿಕಲ್ಪನೆ ಎಲ್ಲೆಡೆ ಹೆಚ್ಚುತ್ತಿರುವ ಈ ಹೊತ್ತಿನಲ್ಲಿ ಹಾರಾನನ್ನು ನೆನಪಿಸಿಕೊಳ್ಳಲೇಬೇಕು.

ಅಪ್ರತಿಮ ಕಲಾವಿದ ವಿಕ್ಟರ್ ಮನುಕುಲ ಕಂಡ ಮಹಾನ್ ಕ್ರಾಂತಿಕಾರಿ ಕವಿ, ಹಾಡುಗಾರ, ಸಂಗೀತಗಾರ ಮತ್ತು ನಾಟಕಕಾರ. ಪ್ರಭುತ್ವ ಒಡ್ಡಿದ ಯಾವ ಸವಾಲುಗಳಿಗೂ ಹೆದರದೆ, ನಿರಂತರವಾಗಿ ಬಡವರ ಪರವಾಗಿ ಹೋರಾಡಿದ ಈತ, ನಂಬಿದ ಸಿದ್ಧಾಂತಗಳಿಗೆ ಕೊನೆಯವರೆಗೂ ಬದ್ಧನಾಗಿಯೇ ಉಳಿದ. ತನ್ನ ದೇಶದ ಮಿಲಿಟರಿ ಮತ್ತು ಪೊಲೀಸ್ ಪಡೆಗಳಿಂದ ಬರೋಬ್ಬರಿ ನಲವತ್ತಾರು ಬಾರಿ ಗುಂಡಿಕ್ಕಿಸಿಕೊಂಡು ಹತ್ಯೆಗೀಡಾದ ಅಸೀಮ ಧೈರ್ಯದ ಕಲಾವಿದ. ಎರ್ನಾಸ್ಟೊ ಚೆಗುವರನಂತೆಯೇ ಛಲ ಬಿಡದ ಕ್ರಾಂತಿಯ ಮಿನುಗು ತಾರೆಯಾದವನು ಈತ. 

ವಿದ್ಯಾರ್ಥಿ ದೆಸೆಯಿಂದಲೂ ಶ್ರಮಿಕರ ಏಳಿಗೆಗಾಗಿ ಹೋರಾಡುತ್ತಿದ್ದ ವಿಕ್ಟರ್, ಆರಂಭದಲ್ಲಿ ನಾಟಕಗಳನ್ನು ಬರೆದು ನಿರ್ದೇಶಿಸಿ ನಟಿಸುತ್ತಿದ್ದ. ಯೂನಿವರ್ಸಿಟಿ ಆಫ್ ಚಿಲಿಯಲ್ಲಿ ನಾಟಕವನ್ನು ಅಭ್ಯಸಿಸಿ, ಅಲ್ಲೇ ಶಿಕ್ಷಕನಾಗಿ ನೇಮಕಗೊಂಡು ಬಡವರ ಬದುಕಿನ ಸಂಘರ್ಷಗಳನ್ನು ರಂಗದಲ್ಲಿ ತೋರುತ್ತಿದ್ದ; ತನ್ನ ತಾಯಿಯಿಂದ ಕಲಿತ ಜನಪದ ಸಂಗೀತಕ್ಕೆ ಕ್ರಮೇಣ ಮಾರುಹೋಗಿ ತನ್ನ ಗೆಳೆಯರೊಟ್ಟಿಗೆ ಶಾಸ್ತ್ರೀಯ ಸಂಗೀತದ ವಿರುದ್ಧವಾಗಿ ಜನಪದ ಸಂಗೀತವನ್ನು ಕಟ್ಟುವ ಬದ್ಧತೆಯಲ್ಲಿ Nueva Cancion ಎಂಬ ಹೊಸ ಆಂದೋಲನವನ್ನು ಶುರುಮಾಡಿದ್ದ. ಗಿಟಾರ್ ಮೂಲಕ ಹೊಸ ನಾದಗಳನ್ನು ನುಡಿಸತೊಡಗಿದ್ದ. ಚಿಲಿಯ ತುಂಬೆಲ್ಲ ಹರಡಿಕೊಂಡಿದ್ದ ಜನಸಾಮಾನ್ಯರ ಹಾಡುಗಳನ್ನು ಮುನ್ನೆಲೆಗೆ ತಂದು, ಗಿಟಾರ್ ನುಡಿಸುತ್ತಾ ಶ್ರಮಿಕ ವರ್ಗದ ಧ್ವನಿಯಾಗತೊಡಗಿದ್ದ.

‘ಸಿರಿವಂತರ, ಹೊಟ್ಟೆ ತುಂಬಿದವರ ತೇಗಿಗಾಗಲ್ಲ
ನನ್ನೀ ಗಿಟಾರ್
ಅವರ ತೆವಲಿನ ತೇಗಾಗಲು ಸಾಧ್ಯವೇ ಇಲ್ಲ!
ಇದೊಂದು ಏಣಿ!
ಆಗಸದ ಚುಕ್ಕಿಗಳ ಹಿಡಿಯಲು
ನಾವು ನಿರ್ಮಿಸುತ್ತಿರುವ ಹೊಸ ಹಾದಿ...’

ಎಂದು ಚಿಲಿ ದೇಶದ ತುಂಬೆಲ್ಲ ಮಾರ್ದನಿಸಿದ ಅವನ ಹಾಡುಗಳು ದಕ್ಷಿಣ ಅಮೆರಿಕ ಮಾತ್ರವಲ್ಲದೆ ಉತ್ತರ ಅಮೆರಿಕ ಮತ್ತು ರಷ್ಯಾದಲ್ಲೂ ಸಂಚಲನ ಉಂಟುಮಾಡಿ ಸಾವಿರಾರು ಜನರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿದ್ದವು. ಅವನ ಸಾಮಾಜಿಕ ಕಾಳಜಿಯ ಟ್ಯೂನ್‍ಗಳು ಜನರೆದೆಯಲ್ಲಿ ಹೊಸ ರಕ್ತ ಉಕ್ಕಿಸಿ ಕನಸುಗಳಿಗೆ ಬೀಜ ನೆಟ್ಟವು. ತನ್ನ ದೇಶದ ಅಪ್ರತಿಮ ಕವಿ ಪಾಬ್ಲೊ ನೆರೂಡನ ಪದ್ಯಗಳಿಗೆ ಜೀವ ತುಂಬಿ ಯುವಕರ ಎದೆಗಳಲ್ಲಿ ಸಂಚಲನ ತರುತ್ತಿದ್ದ ವಿಕ್ಟರ್, ಕಮ್ಯುನಿಸ್ಟ್ ಸಿದ್ಧಾಂತ ಮಾತ್ರವೇ ಈ ಅಸಮಾನ ಜಗತ್ತನ್ನು ಸರಿಪಡಿಸಲು ಇರುವ ಏಕೈಕ ರಹದಾರಿ ಎಂದು ಗಟ್ಟಿಯಾಗಿ ನಂಬಿದ್ದ.

1970ರಲ್ಲಿ ಚಿಲಿಯಲ್ಲಿ ನಡೆಯಲಿದ್ದ ಮೊದಲ ಚುನಾವಣೆಯಲ್ಲಿ ಮಾರ್ಕ್ಸಿಸ್ಟ್ ಪಕ್ಷದ ನಾಯಕ ಸಲ್ವದರ್ ಅಲಂದೆಯ ಪರವಾಗಿ ಪ್ರಚಾರ ನಡೆಸತೊಡಗಿದ. ಜನಸಾಮಾನ್ಯರ ನಡುವೆ ಜನಪ್ರಿಯವಾಗಿದ್ದ ಅವನ ಧ್ವನಿ, ಮಾರ್ಕ್ಸಿಸ್ಟ್ ಪಕ್ಷಗಳ ಒಕ್ಕೂಟದ ಸಾಂಸ್ಕೃತಿಕ ರೂಪವಾಗಿ ಹೊರಹೊಮ್ಮತೊಡಗಿತು. ಪ್ರಚಂಡ ಬಹುಮತದೊಂದಿಗೆ ಚಿಲಿಯ ಮೊದಲ ಚುನಾಯಿತ ಅಧ್ಯಕ್ಷರಾಗಿ ಅಲಂದೆ ಅಧಿಕಾರ ಸ್ವೀಕರಿಸಿದರು. ಅಧ್ಯಕ್ಷರಾದದ್ದೇ ಅವರು ಹಲವು ಕ್ಷಿಪ್ರ ಬದಲಾವಣೆಗಳನ್ನು ತರತೊಡಗಿದರು. ಅದುವರೆಗೂ ಇದ್ದ ಉತ್ತರ ಅಮೆರಿಕದ ಪರವಾದ ಚಿಲಿಯ ಕಾನೂನುಗಳನ್ನು ಅವರ ಸರ್ಕಾರ ತೆಗೆದುಹಾಕಿತು.

ಭೂಮಿಯನ್ನು ಎಲ್ಲರಿಗೂ ಸಮನಾಗಿ ಹಂಚಲಾಯಿತು. ಅಮೆರಿಕದ ಕ್ಯಾಪಿಟಲಿಸ್ಟ್ ಕಂಪನಿಗಳ ಒಡೆತನದಲ್ಲಿದ್ದ ಬಹುತೇಕ ಕಾರ್ಖಾನೆಗಳನ್ನು ‘ಚಿಲೀಕರಣ’ಗೊಳಿಸಲಾಯಿತು. ಈ ಕಾರಣಗಳಿಂದ ತಮ್ಮ ಬಂಡವಾಳ ಮತ್ತು ಸಂಪತ್ತು ಕಳೆದುಕೊಂಡ ಅಮೆರಿಕದ ಕಂಪನಿಗಳು ಚಿಲಿಯಲ್ಲಿ ಮಿಲಿಟರಿ ದಂಗೆಯನ್ನು ಹುಟ್ಟುಹಾಕಿದವು ಎನ್ನಲಾಗುತ್ತದೆ.

1973ರ ಸೆಪ್ಟೆಂಬರ್ 11ರಂದು ಮಿಲಿಟರಿ ಕಮಾಂಡೊ ಅಗಸ್ತೊ ಪಿನಾಚೆಯ ನೇತೃತ್ವದಲ್ಲಿ ಅಮೆರಿಕದ ಸೆಂಟ್ರಲ್‌ ಇಂಟೆಲಿಜನ್ಸ್‌ ಬ್ಯೂರೊ (ಸಿಐಎ) ನೆರವಿನೊಂದಿಗೆ, ಅಲಂದೆಯವರ ಸಮಾಜವಾದಿ ಸರ್ಕಾರವನ್ನು ವಿಸರ್ಜಿಸಿ, ದೇಶವನ್ನು ಮಿಲಿಟರಿ ಆಡಳಿತಕ್ಕೆ ಒಳಪಡಿಸಲಾಯಿತು. ಈ ಸಂದರ್ಭದಲ್ಲಿ ಅಲಂದೆ ನೇತೃತ್ವದ ಸರ್ಕಾರದ ಸಚಿವರು, ಮಾರ್ಕ್ಸಿಸ್ಟ್ ಪಕ್ಷದ ನಾಯಕರು, ಕಾರ್ಯಕರ್ತರು, ಕಮ್ಯುನಿಸ್ಟ್ ಒಲವುಳ್ಳ ಬರಹಗಾರರು ಮತ್ತು ಕಲಾವಿದರನ್ನು ಹುಡುಕಿ ಕೊಲ್ಲಲಾಯಿತು ಅಥವಾ ಜೈಲಿಗಟ್ಟಿ ಹಿಂಸಿಸಿ ಕಾಣೆಯಾಗಿಸಲಾಯಿತು. ಚಿಲಿಯ ರಾಜಧಾನಿ ಸಾಂಟಿಯಾಗೊ ತುಂಬಾ ಜೈಲ್ ಕ್ಯಾಂಪ್‍ಗಳನ್ನು ನಿರ್ಮಿಸಿ, ಸಾವಿರಾರು ಜನರನ್ನು ತುಂಬಿ ಅಸಾಧ್ಯ ಹಿಂಸೆ ನೀಡಲಾಯಿತು. ಚಿಲಿಯ ಅಂದಿನ ಮಿಲಿಟರಿ ಪ್ರಭುತ್ವದ ಹಿಂಸೆಯಲ್ಲಿ ನಲುಗಿದವರಲ್ಲಿ ಮುಖ್ಯವಾದವನು ವಿಕ್ಟರ್! ಆತನಿಗೆ ನೀಡಿದ ಮಿಲಿಟರಿ ಹಿಂಸೆಯು ಜಗತ್ತಿನ ಕಸ್ಟೋಡಿಯಲ್ ವೈಲೆನ್ಸ್ ಇತಿಹಾಸದಲ್ಲಿ ಎಂದೂ ಮರೆಯಲಾಗದಂಥದ್ದು.


ಸಾಂಟಿಯಾಗೊದಲ್ಲಿರುವ ವಿಕ್ಟರ್ ಹಾರಾ ಸ್ಮಾರಕ

ಮಿಲಿಟರಿ ದಂಗೆ ಆರಂಭವಾಗುತ್ತಿದ್ದರೂ ಧೃತಿಗೆಡದೆ ತಾನು ಕೆಲಸ ಮಾಡುತ್ತಿದ್ದ ವಿಶ್ವವಿದ್ಯಾಲಯಕ್ಕೆ ವಿಕ್ಟರ್ ಹೊರಟಾಗ, ಅವರ ಮೆಚ್ಚಿನ ನಾಯಕ ಅಲಂದೆ ಕೊನೆಯ ಭಾಷಣವನ್ನು ಮಾಡುತ್ತಿದ್ದರು. ಆಗ ಸರ್ಕಾರಿ ಕಟ್ಟಡಗಳ ಮೇಲೆ ಬಾಂಬ್ ಹಾಕಲಾಯಿತು. ಅಲಂದೆ ಭಾಷಣ ಮಾಡುತ್ತಿದ್ದಾಗಲೇ ಹತ್ಯೆಗೀಡಾದರು. ರಾಜಧಾನಿ ಸಾಂಟಿಯಾಗೊ ತುಂಬೆಲ್ಲ ದಾಳಿಯಿಟ್ಟ ಪೊಲೀಸ್ ಮತ್ತು ಮಿಲಿಟರಿ ಪಡೆಗಳು ಸಮಾಜವಾದಿ ಕಾರ್ಯಕರ್ತರನ್ನು, ಪ್ರಮುಖರನ್ನು ಬಂಧಿಸತೊಡಗಿದವು. ಕ್ರಾಂತಿಕಾರಿ ಹಾಡುಗಾರ ವಿಕ್ಟರ್, ಅವರ ಪಟ್ಟಿಯಲ್ಲಿದ್ದ ಮೊದಲ ಹೆಸರು. ಅವನನ್ನು ಹುಡುಕಿಕೊಂಡು ಯೂನಿವರ್ಸಿಟಿಗೆ ಬಂದ ಮಿಲಿಟರಿ ಅಧಿಕಾರಿಗಳು ಅವನೊಂದಿಗೆ ಹಲವರನ್ನು ಬಂಧಿಸಿ ಸ್ಟೇಡಿಯಂ ಒಂದರ ಕೋಣೆಗಳಲ್ಲಿ ತುಂಬಿದರು.

ಕುಡಿಯಲು ನೀರೂ ಕೊಡದೆ ಥರಾವರಿ ಹಿಂಸೆಗಳನ್ನು ನೀಡಿದರು. ಅಲ್ಲಿ ಬಂದಿಯಾಗಿದ್ದ ಸಂಗಾತಿಗಳಿಗೆ ಧೈರ್ಯ ತುಂಬಲು ವಿಕ್ಟರ್ ಜೋರು ಧ್ವನಿಯಲ್ಲಿ ಹಾಡುತ್ತಿದ್ದ. ಅವನೊಂದಿಗೆ ಸೇರಿಕೊಂಡು ಇನ್ನೂ ಕೆಲವರು ಹಾಡುತ್ತಿದ್ದರು. ಇದನ್ನು ಕಂಡು ವ್ಯಗ್ರರಾದ ಮಿಲಿಟರಿ ಅಧಿಕಾರಿಗಳು ಬಂಧಿತರನ್ನೆಲ್ಲ ಸ್ಟೇಡಿಯಂನಲ್ಲಿ ಕೂರಿಸಿ, ವಿಕ್ಟರ್‌ನನ್ನು ಸ್ಟೇಡಿಯಂನ ಕೇಂದ್ರಕ್ಕೆ ಕರೆತಂದರು. ಅಲ್ಲಿ ಮುಂದೆ ನಡೆಯುವುದನ್ನು ಫುಟ್‍ಬಾಲ್ ಪಂದ್ಯದಂತೆ ವೀಕ್ಷಿಸಬೇಕೆಂದು ಸ್ಟೇಡಿಯಂನಲ್ಲಿ ಕೂರಿಸಲಾಗಿದ್ದ ಬಂಧಿತರಿಗೆ ಆಜ್ಞಾಪಿಸಲಾಯಿತು.

ಹಾಡುತ್ತಾ ಗಿಟಾರ್ ನುಡಿಸುವಂತೆ ವಿಕ್ಟರ್‌ಗೆ ಹೇಳಲಾಯಿತು. ಆತ ಗಿಟಾರ್ ಮುಟ್ಟಿದ್ದೇ ತಡ ಬಂದೂಕಿನ ನಳಿಕೆಗಳಿಂದ ಅವನನ್ನು ತಿವಿಯಲಾಯಿತು. ಅವನು ಗಿಟಾರನ್ನು ಎತ್ತಿಕೊಂಡು ಸ್ಟೇಡಿಯಂನಲ್ಲಿರುವ ಬಂಧಿತರಿಗೆ ಧೈರ್ಯ ತುಂಬಲೆಂಬಂತೆ ನುಡಿಸತೊಡಗಿದ. ಅವನ ಕೈಗಳಿಗೆ ಬಂದೂಕುಗಳಿಂದ ಬಾರಿಸಲಾಯಿತು. ಕಿಂಚಿತ್ತೂ ವಿಚಲಿತನಾಗದೆ ಆತ ಗಿಟಾರ್ ನುಡಿಸುತ್ತಲೇ ಇದ್ದ; ರಕ್ತವ ಚೆಲ್ಲಿದರೂ ನಾ ಬಿಡೆ ಎಂಬಂತೆ. ಕೊನೆಗೆ ಗಿಟಾರ್ ನುಡಿಸುತ್ತಿದ್ದ ಅವನ ಬೆರಳುಗಳನ್ನು ಕತ್ತರಿಸಿ ಹಾಕಲಾಯಿತು. ಆತ ಅಂಜದೆ ಅಲ್ಲಿದ್ದ ಬಂಧಿತರನ್ನು ನೋಡುತ್ತಾ ಉದ್ವೇಗದಿಂದ ಹಾಡುತ್ತಿದ್ದ. ಬಂಧಿತರಲ್ಲಿ ಹಲವರು ಅವನ ಉಸಿರಿಗೆ ಉಸಿರಾಗಿ ಅಳುತ್ತಾ ಹಾಡತೊಡಗಿದರು.

ಇಡೀ ಸ್ಟೇಡಿಯಂ ವಿಕ್ಟರ್ ಹಾಡಿನಲ್ಲಿ ಕುಣಿಯತೊಡಗಿತು. ಬೆಂಕಿಯಲ್ಲಿ ಬಿದ್ದಂತಾದ ಮಿಲಿಟರಿ ಅಧಿಕಾರಿಗಳು ಕಿರುಚಿಕೊಂಡು ವಿಕ್ಟರ್‌ನತ್ತ ಮಷೀನ್‌ ಗನ್‍ಗಳನ್ನು ಗುರಿಯಾಗಿಸಿ ಗುಂಡುಗಳನ್ನು ಸಿಡಿಸತೊಡಗಿದರು. ಬರೋಬ್ಬರಿ ನಲವತ್ತಾರು ಗುಂಡುಗಳನ್ನು ಅವನಿಗೆ ಹೊಡೆದರು. ಅವನ ಜೊತೆ ಹಾಡುತ್ತಿದ್ದವರನ್ನೂ ಎಳೆದುತಂದು ಗುಂಡಿಟ್ಟು ಸಾಯಿಸಲಾಯಿತು. ಉಸಿರಿರುವವರೆಗೂ ತಾನು ನಂಬಿದ ಸಿದ್ಧಾಂತಕ್ಕೆ ಕಟಿಬದ್ಧನಾಗಿಯೇ ಇದ್ದ, ನಿರ್ಗತಿಕ ಶ್ರಮಿಕರ ಏಳಿಗೆಯೊಂದೇ ತನ್ನ ಬದುಕಿನ ಧ್ಯೇಯ ಎಂದು ನಂಬಿದ್ದ ವಿಕ್ಟರ್‌, ಅದಕ್ಕಾಗಿ ರಾಜಿ ಮಾಡಿಕೊಳ್ಳದೆ ಸತ್ತ ದಿಟ್ಟ ಕಲಾವಿದ. 

ಪ್ರಭುತ್ವದ ಹಿಂಸೆಯಲ್ಲಿ, ದೇಶದ ಮಿಲಿಟರಿ ಮತ್ತು ಪೊಲೀಸರು ನೀಡಿದ ಕಿರುಕುಳದಲ್ಲಿ ಸತ್ತರೂ ವಿಕ್ಟರ್ ಇಂದಿಗೂ ಕೋಟ್ಯಂತರ ಜನರ ಎದೆಗಳಲ್ಲಿ ಜೀವಂತ. ಸಾಮಾಜಿಕ ನ್ಯಾಯ ಮತ್ತು ಮಾನವ ಹಕ್ಕುಗಳ ಹೋರಾಟದ ಹೆಗ್ಗುರುತು ಆತ. ಪ್ರತಿವರ್ಷ ಚಿಲಿಯಲ್ಲಿ ಜಗತ್ತಿನ ನಾನಾ ಭಾಗಗಳ ಕಲಾವಿದರು ಒಟ್ಟುಗೂಡಿ ಅವನ ನೆನಪಿಗಾಗಿ ಹಾಡುತ್ತಾರೆ, ಗಿಟಾರ್ ನುಡಿಸುತ್ತಾರೆ. 1998ರಲ್ಲಿ ಬದಲಾದ ಚಿಲಿಯ ರಾಜಕೀಯ– ಸಾಮಾಜಿಕ ವ್ಯವಸ್ಥೆಯು ವಿಕ್ಟರ್‌ನನ್ನು ತಮ್ಮ ದೇಶದ ಸಾಂಸ್ಕೃತಿಕ ನಾಯಕ ಎಂದಿತು. ಅವನು ಕೊಲೆಯಾದ ಚಿಲಿ ಸ್ಟೇಡಿಯಂ ಹೆಸರನ್ನು ‘ವಿಕ್ಟರ್ ಹಾರಾ ಸ್ಟೇಡಿಯಂ’ ಎಂದು ಬದಲಿಸಲಾಯಿತು.

1973ರ ಸೆಪ್ಟೆಂಬರ್ 11ರಂದು ನಡೆದ ಸಾಮೂಹಿಕ ಕಗ್ಗೊಲೆಯ ವಿರುದ್ಧ ವಿಚಾರಣೆಗಳು ನಡೆದು ಈಚೆಗೆ 2018ರಲ್ಲಿ, ಘಟನೆ ನಡೆದ 46 ವರ್ಷಗಳ ನಂತರ, ವಿಕ್ಟರ್ ಮತ್ತಿತರರನ್ನು ಕೊಂದ ಮಿಲಿಟರಿ ಅಧಿಕಾರಿಗಳಿಗೆ ಶಿಕ್ಷೆ ವಿಧಿಸಿತು ಚಿಲಿಯ ನ್ಯಾಯಾಲಯ. ಹೀಗಿದ್ದರೂ ಈ ವರ್ಷದ ಜನವರಿಯಲ್ಲಿ ಆತನ ಸಮಾಧಿಯನ್ನು ಧ್ವಂಸಗೊಳಿಸಲು ಪ್ರಯತ್ನಿಸಿದ ಚಿಲಿಯ ಬಲಪಂಥೀಯ ಸಂಘಟನೆಗಳು ಆತನ ಸಮಾಧಿಯ ಮೇಲೆ ‘ಎಲ್ಲಿ ಹೋದವು ನಿನ್ನ ಬೆರಳುಗಳು ಕಾಮ್ರೇಡ್?! ಮತ್ತೆ ನುಡಿಸುವೆಯಾ ಗಿಟಾರ್?’ ಎಂದು ಬರೆದು ತಮ್ಮ ವಿಕೃತಿಯ ಅಸ್ತಿತ್ವವನ್ನು ದೃಢೀಕರಿಸಿಕೊಂಡವು.

ಪ್ರಭುತ್ವವೇ ಮುಂದೆ ನಿಂತು ನಡೆಸಿದ ‘ಕಸ್ಟೋಡಿಯಲ್ ವೈಲೆನ್ಸ್’ಗೆ ನೇರ ಸಾಕ್ಷಿಯಾಗಿ ಇಂದಿಗೂ ವಿಕ್ಟರ್ ನಿಂತಿದ್ದಾನೆ. ತನ್ನನ್ನು ಕೊಂದರೂ ಮುಂದಿನ ಪೀಳಿಗೆಗಳ ಕಣ್ಣುಗಳೊಳಗೆ ಆತ ಉದಯಿಸುತ್ತಲೇ ಇದ್ದಾನೆ. ವಿಕ್ಟರ್‌ನಂಥವರು ಮೂಡಿಸಿರುವ ಅರಿವು ಜೀವನದಿಯಾಗಿ ಹರಿಯುತ್ತಲೇ ಇದೆ; ಹಾಗೆಯೇ ಎಲ್ಲಾ ರಾಷ್ಟ್ರಗಳ ಪ್ರಭುತ್ವಗಳಿಗೆ ಆ ಅರಿವು ತೊಡಕಾಗಿಯೇ ಕಾಣುತ್ತಿರುತ್ತದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು