ಗುರುವಾರ , ಜೂನ್ 4, 2020
27 °C

ಫಾರಿನ್‌ ಗಂಡ

ಜ್ಯೋತಿ ಎ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರಿನಲ್ಲಿ ಶಾಲಾ ಶಿಕ್ಷಕಿಯಾದ ರಮ್ಯಾಳ ವಿವಾಹವನ್ನು ನಿಶ್ಚಯಿಸಿದ ಸೋದರ ಮಾವ ಬ್ರೋಕರ್ ಆಗಿದ್ದ. ‘ವರ ಸಿಂಗಪುರದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್, ಕೈತುಂಬಾ ಸಂಬಳ; ಇಲ್ಲಿಯವರೇ, ಮನೆಯ ಕಡೆ ಚೆನ್ನಾಗಿದ್ದಾರೆ. ಆದಷ್ಟು ಬೇಗ ಮುಹೂರ್ತ ನಿಗದಿ ಮಾಡು’ ಎಂದು ರಮ್ಯಾಳ ಅಣ್ಣನಿಗೆ ಹೇಳಿದ ಮಾವ. ಸಾಲಸೋಲ ಮಾಡಿ ವರದಕ್ಷಿಣೆಯನ್ನೂ ಅಣಿಮಾಡಿಕೊಂಡ ಅಣ್ಣ, ತಂಗಿಯ ಮದುವೆಯನ್ನು ಪ್ರಶಾಂತನ ಜೊತೆ ನೆರವೇರಿಸಿ ಆನಂದಿಸಿದ. ಅವನ ಸಂತಸ ಬಹುಕಾಲ ಉಳಿಯಲಿಲ್ಲ.

ಹನಿಮೂನ್ ಮುಗಿಸಿದ ಪ್ರಶಾಂತ, ಅವಳನ್ನು ನಂತರ ಕರೆದೊಯ್ಯುವುದಾಗಿ ಹೇಳಿ ಸಿಂಗಪುರಕ್ಕೆ ಹೊರಟೇಬಿಟ್ಟ. ಚಾತಕ ಪಕ್ಷಿಯಂತೆ ಗಂಡನ ಹಾದಿಯನ್ನೇ ಕಾಯುತ್ತಿರುವ ರಮ್ಯಾ, ಭಾರತದಲ್ಲಿ ಅವನ ಮನೆಯ ಚಾಕರಿ ಮಾಡಿಕೊಂಡು ಕುಟುಂಬಸ್ಥರ ಹಿಂಸೆ, ಕಿರುಕುಳಕ್ಕೆ ಕಮರಿದ್ದಾಳೆ. ಅಲ್ಲಿ ಅವಳಿಗೆ ಇನ್ನಷ್ಟು ವರದಕ್ಷಿಣೆಗಾಗಿ ಒತ್ತಡದ ಜೊತೆ ಅವನಿಗೆ ಮತ್ತೊಂದು ಮದುವೆಯ ಒಳಸಂಚು ನಡೆಯುತ್ತಿದೆ. ಮರೆಯಾಗಿರುವ ತನ್ನ ಎನ್‍ಆರ್‌ಐ ಪತಿಗಾಗಿ ಆಕೆ ಪೊಲೀಸರ ಮೊರೆ ಹೋಗಿದ್ದಾಳೆ. ವಿದೇಶಿ ಕಾಂಚಾಣದ ಬಲದಿಂದಿರಬೇಕು, ಅವಳಿಗೆ ನ್ಯಾಯ ಮರೀಚಿಕೆಯಾಗಿದೆ. ರಾಷ್ಟ್ರೀಯ ಮಹಿಳಾ ಆಯೋಗದ ಎನ್‍ಆರ್‌ಐ ಘಟಕದಲ್ಲಿ ದೂರು ದಾಖಲಿಸಿರುವ ಆಕೆ ನ್ಯಾಯದ ನಿರೀಕ್ಷೆಯಲ್ಲಿದ್ದಾಳೆ.

ನಂಬಲರ್ಹವಲ್ಲದ ಭಾರತೀಯ ವರರೆಷ್ಟು?

ಇದು ರಮ್ಯಾಳೊಬ್ಬಳ ಕಥೆಯಲ್ಲ. ಅಮೆರಿಕ, ಬ್ರಿಟನ್‌ ಮೊದಲಾದ ದೇಶಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರನ್ನು ವಿವಾಹವಾದ ಯುವತಿಯರು ಬಗೆಬಗೆಯ ನೋವು, ಅನ್ಯಾಯ, ಹಿಂಸೆ, ಕಿರುಕುಳಗಳನ್ನು ಅನುಭವಿಸಿ, ನ್ಯಾಯಕ್ಕಾಗಿ ಆಗ್ರಹಿಸಿ ರಾಷ್ಟ್ರೀಯ ಮಹಿಳಾ ಆಯೋಗ ಮತ್ತು ವಿದೇಶಾಂಗ ಸಚಿವಾಲಯದ ಕದ ತಟ್ಟಿದ್ದಾರೆ. 2016ರ ಜನವರಿಯಿಂದ 2019ರ ಅಕ್ಟೋಬರ್‌ ನಡುವೆ ಅನಿವಾಸಿ ಭಾರತೀಯರ ವಿವಾಹಗಳಿಗೆ ಸಂಬಂಧಿಸಿದಂತೆ ಬರೋಬ್ಬರಿ 5,298 ದೂರುಗಳು ದಾಖಲಾಗಿರುವುದಾಗಿ ಇತ್ತೀಚೆಗೆ ಬಿಡುಗಡೆಯಾದ ವಿದೇಶಾಂಗ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯ ವರದಿ ಬಹಿರಂಗಗೊಳಿಸಿದೆ.

ಪಂಜಾಬ್‍ನಿಂದ ಅತಿಹೆಚ್ಚು ದೂರುಗಳು (763) ದಾಖಲಾಗಿವೆ.  ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಉತ್ತರಪ್ರದೇಶ (501), ಮಹಾರಾಷ್ಟ್ರ (468), ದೆಹಲಿ (436), ರಾಜಸ್ಥಾನ (371) ಮತ್ತು ಕರ್ನಾಟಕ (341) ರಾಜ್ಯಗಳಿವೆ.

ಆರ್ಥಿಕ ಜಾಗತೀಕರಣದ ಕಾಲಘಟ್ಟದಲ್ಲಿ ವೈವಾಹಿಕ ಸಂಬಂಧಗಳೂ ಜಾಗತೀಕರಣಗೊಂಡಿವೆ. ಕೆಲಕಾಲದ ಹಿಂದೆ ಭಾರತದ ಅನೇಕ ಕುಟುಂಬಗಳು ಉದ್ಯೋಗ ಅರಸಿ ವಿದೇಶಗಳಲ್ಲಿ ನೆಲೆನಿಂತವು. ಈಗಲೂ ಸಹಸ್ರಾರು ಭಾರತೀಯ ಯುವಕರು ಹೊಟ್ಟೆಹೊರೆಯಲು ಅಮೆರಿಕ, ಬ್ರಿಟನ್, ಜರ್ಮನಿ ಮುಂತಾದ ದೇಶಗಳಿಗೆ ವಲಸೆ ಹೋಗಿದ್ದಾರೆ. ಅವರ ಪೋಷಕರು ಭಾರತದಲ್ಲೇ ಇದ್ದಾರೆ.

ವಿದೇಶಗಳಲ್ಲಿ ನೆಲೆಸಿರುವ ಭಾರತೀಯ ಪ್ರಜೆಗಳನ್ನು ಸರಳವಾಗಿ ಅನಿವಾಸಿ ಭಾರತೀಯರೆಂದು (ಎನ್‍ಆರ್‌ಐ) ಕರೆಯಲಾಗುತ್ತದೆ. ಈ ಎನ್‍ಆರ್‌ಐ ಯುವಕರ ಕುಟುಂಬಸ್ಥರು ತಮ್ಮ ‘ಸಂಸ್ಕೃತಿ’ಯನ್ನು ಬಿಟ್ಟುಕೊಡಲಾರದೆ ಮಗನ ಮದುವೆಯ ಸಂದರ್ಭ ಬಂದಾಗ ‘ಭಾರತೀಯ ವಧು’ವಿನ ಅನ್ವೇಷಣೆ ನಡೆಸುತ್ತಾರೆ. ವಿದೇಶದಲ್ಲಿರುವ ವರ ‘ಹಣವಂತ’ನೆಂದೂ ಪರದೇಶದಲ್ಲಿ ತಮ್ಮ ಮಗಳು ಐಷಾರಾಮಿ ಜೀವನ ನಡೆಸಬಹುದೆಂಬ ಭ್ರಮೆಯಲ್ಲಿ ಹೆಣ್ಣು ಹೆತ್ತವರು ‘ಫಾರಿನ್ ಗಂಡಿ’ನ ವ್ಯಾಮೋಹಕ್ಕೆ ಬಲಿಯಾಗುತ್ತಾರೆ. ಅವುಗಳಲ್ಲಿ ಬಹಳಷ್ಟು ‘ಸುಖ ಸಂಸಾರ’ಗಳಾಗುವುದಿಲ್ಲ, ರೋದನೆ-ವೇದನೆಯಲ್ಲೇ ಅಂತ್ಯಗೊಳ್ಳುತ್ತವೆ.

ನಾಪತ್ತೆಯಾದ ಹನಿಮೂನ್ ಪತಿಗಳು

ಭಾರತದಲ್ಲಿ ಮಧುಚಂದ್ರ ಮುಗಿಸಿ ವಿದೇಶಕ್ಕೆ ತೆರಳಿದ ಪತಿ ತನಗಾಗಿ ಟಿಕೆಟ್ ಕಳಿಸುವನೆಂದು ಕಾದು ಕಂಗಾಲಾದ ಪತ್ನಿಯರೆಷ್ಟೋ! ಹಲವು ಪ್ರಕರಣಗಳಲ್ಲಿ ಗರ್ಭಿಣಿಯಾದ ಪತ್ನಿಯನ್ನು ಬಿಟ್ಟುಹೋದ ಪತಿ ಇಬ್ಬರನ್ನೂ ತ್ಯಜಿಸಿರುವುದಿದೆ. ವಿದೇಶದಲ್ಲಿರುವ ಗಂಡ ಒಮ್ಮೆಯೂ ತನ್ನ ಮಡದಿಯ ಜೊತೆ ಸಂಪರ್ಕವಿಟ್ಟುಕೊಂಡಿಲ್ಲದಾಗ ಅವಳಿಗೆ ಆತನನ್ನು ಪತ್ತೆ ಹಚ್ಚುವುದೇ ಕಠಿಣವಾಗುತ್ತದೆ.

ವಿವಾಹಿತೆಯಾದರೂ ಪತಿಯ ಬಗ್ಗೆ ಏನೊಂದೂ ಗೊತ್ತಿಲ್ಲ; ವಿಚ್ಛೇದನವಿಲ್ಲ, ಬೇರೆ ವಿವಾಹವೂ ಸಾಧ್ಯವಿಲ್ಲ; ಮಾನಸಿಕ ನೆಮ್ಮದಿಯಂತೂ ಇಲ್ಲವೇ ಇಲ್ಲ! ವರದಕ್ಷಿಣೆಗಾಗಿಯೋ ಪೋಷಕರ ಒತ್ತಾಯಕ್ಕಾಗಿಯೋ ವಿವಾಹವಾಗುವ ಎನ್‍ಆರ್‌ಐ ಪತಿ ವಿದೇಶದಲ್ಲಿ ಬೇರೆ ಸಂಸಾರ ಹೊಂದಿರುವ ಸಾಧ್ಯತೆಯೇ ಹೆಚ್ಚು.

ಕೆಲವೊಮ್ಮೆ ತನ್ನೊಡನೆ ಪತ್ನಿಯನ್ನು ಕರೆದೊಯ್ದು ಸಭ್ಯ ಎನಿಸಿಕೊಳ್ಳುವ ಎನ್‍ಆರ್‌ಐ ಪತಿ ವಿದೇಶಕ್ಕೆ ಹೋದ ಬಳಿಕ ತನ್ನ ಪೈಶಾಚಿಕ ಅವತಾರವೆತ್ತಿದ್ದೂ ಇದೆ. ತನ್ನ ನೆಲ, ನುಡಿ, ಬಂಧುಬಾಂಧವರೆಲ್ಲರನ್ನೂ ಬಿಟ್ಟು ಹೊಸ ಸಂಸ್ಕೃತಿಯುಳ್ಳ ಪರದೇಶಕ್ಕೆ ಕಾಲಿಟ್ಟ ಹೆಂಡತಿಗೆ ಅಲ್ಲಿನ ಪರಿಸರ, ಭಾಷೆ, ಜನ, ಕಾನೂನುಗಳು ಎಲ್ಲವೂ ಹೊಸದೇ. ಅವಳಿಗೆ ಅಕ್ಕರೆ ತೋರುವುದರ ಬದಲು ಮನೆಯಲ್ಲಿ ಕೂಡಿಹಾಕಿ ಅವಳಿಗೆ ದೈಹಿಕ ಹಾಗೂ ಮಾನಸಿಕವಾಗಿ ಹಿಂಸಿಸಿರುವ ಗಂಡಂದಿರೂ ಇದ್ದಾರೆ.

ಅವಳಿಗೆ ಆಹಾರ ನೀಡದೆ ಎಲ್ಲವನ್ನೂ ಲಾಕರ್‌ನಲ್ಲಿಟ್ಟು ಹೊರಹೋಗುವಂತಹ ದುಷ್ಟರಿದ್ದಾರೆಂದರೆ ಅತಿಶಯೋಕ್ತಿಯಲ್ಲ. ಎಷ್ಟೋ ಹೆಣ್ಣುಮಕ್ಕಳು ಈ ಹಿಂಸೆ ತಡೆಯಲಾರದೆ ಅಕ್ಕಪಕ್ಕದವರ ನೆರವಿನಿಂದ ಭಾರತದಲ್ಲಿರುವ ತಮ್ಮ ಪೋಷಕರನ್ನು ಸಂಪರ್ಕಿಸಿ, ಸ್ವದೇಶಕ್ಕೆ ಹಿಂದಿರುಗಿ ಕೇಸ್ ದಾಖಲಿಸಿದ ನಿದರ್ಶನಗಳಿವೆ. ಬಹುತೇಕ ವಿವಾಹಿತ ಮಹಿಳೆಯರು ಮೊದಲು ವಿದೇಶಕ್ಕೆ ತೆರಳುವುದು ಅವಲಂಬಿತರಾಗಿಯೇ. ಅವರಿಗೆ ಅಲ್ಲಿ ದುಡಿಮೆಯ ಅವಕಾಶ ಕಡಿಮೆಯೇ. ಅವರು ಆ ದೇಶಗಳಲ್ಲಿ ವಕೀಲರನ್ನು ನೇಮಿಸಿಕೊಂಡು ನ್ಯಾಯಾಲಯದಲ್ಲಿ ಹೋರಾಡುವುದನ್ನು ಊಹಿಸಲು ಅಸಾಧ್ಯ.

ಪತ್ನಿಗೆ ಕಾಡುವ ಅನಾಥಪ್ರಜ್ಞೆ

ಅಮೆರಿಕದ ನ್ಯೂಯಾರ್ಕ್‍ನಲ್ಲಿ ಸಂತೋಷ ನೌಕರಿಯಲ್ಲಿದ್ದ. ಹೈದರಾಬಾದ್‌ನ ವಿದ್ಯಾವಂತ ಯುವತಿ ಸವಿತಾ0ಳ ಜೊತೆ ಅವನ ವಿವಾಹವಾಯಿತು. ಒಂದು ತಿಂಗಳ ಅವಧಿಯನ್ನು ಅವನು ಮಡದಿಯೊಂದಿಗೆ ಭಾರತದಲ್ಲೇ ಕಳೆದ. ಅಮೆರಿಕಕ್ಕೆ ಹೋಗಿ ಟಿಕೆಟ್ ಕಳಿಸಿಕೊಡುವುದಾಗಿ ಪತ್ನಿಗೆ ತಿಳಿಸಿ ಅವನು ವಿಮಾನವೇರಿದ. ಹೇಳಿದಂತೆ ನಡೆದುಕೊಂಡ. ಸವಿತಾ ಉಲ್ಲಾಸದಿಂದ ಗಂಡನನ್ನು ಸೇರಲು ಹೊರಟಳು. ಆದರೆ, ನ್ಯೂಯಾರ್ಕ್ ವಿಮಾನ ನಿಲ್ದಾಣದಲ್ಲಿಳಿದು ಎಷ್ಟು ಕಾದರೂ ಪತಿ ಕಾಣಿಸಿಕೊಳ್ಳಲೇ ಇಲ್ಲ.

ಸಂತೋಷನನ್ನೇ ನಂಬಿ ಹೋಗಿದ್ದವಳಿಗೆ ಆತ ಸಂಪರ್ಕಕ್ಕೆ ದಕ್ಕುತ್ತಲೇ ಇಲ್ಲ! ಮಾಡುವುದೇನೀಗ? ಅವಳು ಆ ದೇಶದ ಪ್ರಜೆಯೂ ಅಲ್ಲ, ಅವಳಿಗೆ ಆಹ್ವಾನ ನೀಡಿದ ವ್ಯಕ್ತಿ ಕಾಣಿಸುತ್ತಿಲ್ಲ. ಅವಳ ಬಳಿ ಹೆಚ್ಚು ಹಣವಿಲ್ಲ. ತನ್ನದಲ್ಲದ ನೆಲದಲ್ಲಿ ಅವಳು ಅನಾಥಪ್ರಜ್ಞೆಯಿಂದ ಬಳಲುತ್ತಿದ್ದಾಳೆ. ಭಾರತದಲ್ಲಿದ್ದ ತನ್ನ ಪಾಲಕರಿಗೆ ಕರೆ ಮಾಡಿ, ಅಮೆರಿಕದ ಸ್ನೇಹಿತರ ಸಹಾಯ ಪಡೆದು ಸ್ವದೇಶಕ್ಕೆ ನಿರಾಶೆಯಲ್ಲಿ ಹಿಂದಿರುಗಿದಳು ಸವಿತಾ.

ಸಂತೋಷ ಈಗಾಗಲೇ ವಿವಾಹಿತನಾಗಿದ್ದು ತನ್ನ ಪೋಷಕರ ಒತ್ತಾಯಕ್ಕೆ ಮಣಿದು ಆಕೆಯನ್ನು ಕರೆಸಿಕೊಂಡಿದ್ದನೆಂದು ನಂತರ ತಿಳಿದುಬಂದಿತು. ಇಂತಹ ಸಾಂಸ್ಕೃತಿಕ ಪಲ್ಲಟಗಳು ಭಾರತದ ಹೆಣ್ಣುಮಕ್ಕಳ ಬದುಕನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿವೆ. ನೂರಾರು ಮಹಿಳೆಯರು ಕಣ್ಣೀರಲ್ಲಿ ಕೈತೊಳೆದರೂ ಬದುಕಿನಲ್ಲಿ ಮತ್ತೆ ಎದ್ದುನಿಲ್ಲುತ್ತಿದ್ದಾರೆ.

ಮಕ್ಕಳನ್ನು ಕಸಿದುಕೊಂಡು ಪತ್ನಿಯನ್ನು ಓಡಿಸಿರುವ ಎನ್‍ಆರ್‌ಐ ಪತಿಯರ ಸಂಖ್ಯೆಯೂ ದೊಡ್ಡದು. ಮಕ್ಕಳು ಯಾರ ಸುಪರ್ದಿಯಲ್ಲಿರಬೇಕು ಎನ್ನುವ ಪ್ರಶ್ನೆ ಉದ್ಭವಿಸಿದಾಗ ನ್ಯಾಯಾಲಯಗಳು ಮಧ್ಯ ಪ್ರವೇಶಿಸಿವೆ. ಬಹುತೇಕ ಎನ್‍ಆರ್‌ಐ ವಿವಾಹಿತ ಪತ್ನಿಯರು ಅನುಭವಿಸುವ ಕಿರುಕುಳ, ಹಿಂಸೆ, ದೌರ್ಜನ್ಯಗಳು ಕುಟುಂಬಗಳ ಧನದಾಹದಿಂದ. ಈಗಾಗಲೇ ಇರುವ ಪತಿಯ ಮತ್ತೊಂದು ವೈವಾಹಿಕ ಸಂಬಂಧದಿಂದಾಗಿ, ಒಲ್ಲದ ಒತ್ತಾಯದ ಮದುವೆಯಿಂದಾಗಿ ಮತ್ತು ಬಹಳ ಮುಖ್ಯವಾಗಿ ದೂರದ ದೇಶದಲ್ಲಿ ಪತ್ನಿ ಅಸಹಾಯಕಳೆಂಬ ಪತಿಯ ದುಷ್ಟ ಮಾನಸಿಕತೆಯಿಂದಾಗಿ ನಡೆಯುತ್ತವೆ.

ನೊಂದ ಮಹಿಳೆಯರ ಪರ ನಿಂತ ನ್ಯಾಯಾಂಗ

ವಿದೇಶಗಳಲ್ಲಿರುವ ವಿಚ್ಛೇದನದ ಸರಳ ಕಾನೂನುಗಳನ್ನು ದುರ್ಬಳಕೆ ಮಾಡಿಕೊಂಡು ಎನ್‍ಆರ್‌ಐ ಗಂಡಂದಿರು ತಮ್ಮ ಮಡದಿಯರಿಗೆ ಅನ್ಯಾಯ ಮಾಡಲು ಹೊರಟಾಗ ಪತ್ನಿಯರು ಭಾರತದ ನ್ಯಾಯಾಲಯಗಳ ಮೊರೆ ಹೋಗಿ ನ್ಯಾಯ ಪಡೆದಿದ್ದಾರೆ. ಎನ್‍ಆರ್‌ಐ ಪತಿಯರು ವಿದೇಶಗಳ ನ್ಯಾಯಾಲಯಗಳಲ್ಲಿ ಪತ್ನಿಯರಿಗೆ ತಿಳಿಯದಂತೆ ವಿಚ್ಛೇದನ ಪಡೆದಿರುವ ಉದಾಹರಣೆಗಳಿವೆ. ಅಂತಹ ಆದೇಶಗಳನ್ನು ಭಾರತದಲ್ಲಿ ಜಾರಿಗೊಳಿಸಲು ಸಾಧ್ಯವಿಲ್ಲ ಎಂದಿರುವ ನಮ್ಮ ನ್ಯಾಯಾಂಗ, ಭಾರತದ ನೆಲದಲ್ಲಿ ನಡೆದಿರುವ ವಿವಾಹಕ್ಕೆ ವಿದೇಶದ ನ್ಯಾಯಾಲಯದಲ್ಲಿ ವಿಚ್ಛೇದನ ಪಡೆಯಲು ಸಾಧ್ಯವಿಲ್ಲ; ಮದುವೆ ನೋಂದಣಿಯಾಗಿರುವ ಕಾಯ್ದೆಯ ನಿಬಂಧನೆಗಳಿಗೆ ವಿವಾಹಗಳು ಒಳಪಡುತ್ತವೆ ಹಾಗೂ ಮಕ್ಕಳ ಪಾಲನೆ-ಪೋಷಣೆಗೆ ಸಂಬಂಧಿಸಿದಂತೆ ತಾಯಿಯೊಡನೆ ಮಗು ಬೆಳೆಯಬೇಕು (ತಂದೆಯ ಹಕ್ಕನ್ನೂ ಗೌರವಿಸಿ), ಒಡಹುಟ್ಟಿದ ಮಕ್ಕಳನ್ನು ಬೇರ್ಪಡಿಸಲಾಗದು ಎಂಬುದಾಗಿ ಅನೇಕ ಮಹತ್ವದ ತೀರ್ಪುಗಳನ್ನಿತ್ತಿವೆ. ವಿದೇಶಗಳ ನ್ಯಾಯಾಲಯಗಳಲ್ಲಿ ಅಲೆದಾಡಲು ಹಣ ಬಲವಿರದೆ ಸೋತು ಸುಣ್ಣವಾಗಿರುವ ಮಧ್ಯಮ ವರ್ಗದ ಮಹಿಳೆಯರಿಗೆ ಇವು ತುಸು ನೆಮ್ಮದಿ ಕೊಟ್ಟಿವೆ.

ಬೆಳಕಾಗುವುದೇ ಹೊಸ ಶಾಸನ?

ಎನ್‍ಆರ್‌ಐ ವಿವಾಹಿತರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸೂಕ್ತ ಶಾಸನಗಳನ್ನು ರೂಪಿಸಬೇಕೆಂದು 2006ರಲ್ಲಿ ಸುಪ್ರೀಂ ಕೋರ್ಟ್‌ ಸರ್ಕಾರಕ್ಕೆ ನಿರ್ದೇಶನ ನೀಡಿತು. 2009ರಲ್ಲಿ ರಾಷ್ಟ್ರೀಯ ಮಹಿಳಾ ಆಯೋಗವನ್ನು ಸಮನ್ವಯ ಸಂಸ್ಥೆಯನ್ನಾಗಿ ನೇಮಕ ಮಾಡಿದ ಸರ್ಕಾರ ಎನ್‍ಆರ್‌ಐ ಘಟಕವನ್ನು ಪ್ರಾರಂಭಿಸಿತು. ಎನ್‍ಆರ್‌ಐ ವಿವಾಹಗಳಿಗೆ ಸಂಬಂಧಿಸಿದಂತೆ ಭಾರತ ಮತ್ತು ವಿದೇಶದಲ್ಲಿರುವ ಮಹಿಳೆಯರು ಇಲ್ಲ್ಲಿ ದೂರುಗಳನ್ನು ದಾಖಲಿಸಬಹುದು.

ಅಮೆರಿಕ, ಬ್ರಿಟನ್, ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಮಲೇಷ್ಯಾ, ಸಿಂಗಪುರ ಸೇರಿದಂತೆ ಗಲ್ಫ್ ದೇಶಗಳಲ್ಲಿ ವಿಚ್ಛೇದನ ಪ್ರಕರಣಗಳ ವಿಚಾರಣೆಗಳನ್ನು ಎದುರಿಸುತ್ತಿರುವ, ಧನ ಸಹಾಯದ ಅಗತ್ಯವುಳ್ಳ ಭಾರತದ ಮಹಿಳೆಯರಿಗೆ ಸರ್ಕಾರ ನೆರವು ಒದಗಿಸುವ ಯೋಜನೆಯನ್ನು 2007ರಲ್ಲಿ ಆರಂಭಿಸಿದೆ. 2019ರಲ್ಲಿ ಭಾರತ ಸರ್ಕಾರ ‘ಅನಿವಾಸಿ ಭಾರತೀಯರ ವಿವಾಹ ನೋಂದಣಿ ವಿಧೇಯಕ’ವನ್ನು ರಾಜ್ಯಸಭೆಯಲ್ಲಿ ಮಂಡಿಸಿ ಅದನ್ನು ಸಂಸದೀಯ ಸ್ಥಾಯಿ ಸಮಿತಿಗೆ ವರ್ಗಾಯಿಸಲಾಗಿತ್ತು. ಈಗ ಮಸೂದೆಗೆ ಸಮ್ಮತಿಸಿರುವ ಸಮಿತಿಯು ಸಂಸತ್ತಿನಲ್ಲಿ ತನ್ನ ವರದಿಯನ್ನು ಮುಂದಿಟ್ಟಿದೆ.

ಮಸೂದೆಯು ಶೀಘ್ರ ಕಾಯ್ದೆಯಾಗಬೇಕಿದೆ. ಈ ಮಸೂದೆಯ ಪ್ರಕಾರ ಮುಖ್ಯವಾಗಿ ಅನಿವಾಸಿ ಭಾರತೀಯರ ವಿವಾಹಗಳೆಲ್ಲವೂ ಮದುವೆಯಾದ 30 ದಿನಗಳೊಳಗಾಗಿ ವಿವಾಹ ಸ್ಥಳದ ವ್ಯಾಪ್ತಿಯಲ್ಲಿ ನೋಂದಣಿಯಾಗತಕ್ಕದ್ದು. ಪಾಸ್‍ಪೋರ್ಟ್ ಹಿಂಪಡೆಯಲು ಅಥವಾ ಮುಟ್ಟುಗೋಲು ಹಾಕಲು 1967ರ ಪಾಸ್‍ಪೋರ್ಟ್ ಕಾಯ್ದೆಗೆ ತಿದ್ದುಪಡಿ ಮಾಡುವುದು; ವಿದೇಶಾಂಗ ಸಚಿವಾಲಯದ ಮೂಲಕ ಕೋರ್ಟ್‍ನ ಸಮನ್ಸ್/ ವಾರಂಟ್ ಹೊರಡಿಸಿ ತಪ್ಪಿತಸ್ಥನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಕಾನೂನಾದ ಬಳಿಕವೂ ಇವೆಲ್ಲ ಎಷ್ಟರಮಟ್ಟಿಗೆ ಜಾರಿಗೆ ಬರುತ್ತವೆಯೋ ನೋಡಬೇಕು. ಏಕೆಂದರೆ ಭಾರತದಲ್ಲೇ ವಿಚ್ಛೇದಿತ ಮಹಿಳೆಯರಿಗೆ ಅಲ್ಪಮೊತ್ತದ ಜೀವನಾಂಶ ಮತ್ತು ಪರಿಹಾರ ಕಲ್ಪಿಸಲು ನೀಡಲಾಗುವ ಕೋರ್ಟ್ ಆದೇಶಗಳನ್ನು ಜಾರಿಗೊಳಿಸುವುದು ಸಾಹಸವೇ! ಆದರೂ ಈ ವಿಧೇಯಕ ಸ್ವಾಗತಾರ್ಹ. ಕತ್ತಲಲ್ಲಿ ಬದುಕುತ್ತಿರುವ ಸಹಸ್ರಾರು ಮಹಿಳೆಯರಿಗೆ ಆಶಾಕಿರಣವಾಗಬಲ್ಲದು. ಫಾರಿನ್‌ ಗಂಡನ ಮೋಹಕ್ಕೆ ಸಿಲುಕಿ ಹೆಣ್ಣುಹೆತ್ತವರ ಕುಟುಂಬಗಳು ವಂಚನೆಗೆ ಒಳಗಾಗದಂತೆ ತಡೆಯಲು ನೆರವಾಗಬಹುದು.

ಇಂತಹ ಅನ್ಯಾಯದ ವಿರುದ್ಧ ಹೋರಾಡಿ ತಮ್ಮ ಬದುಕನ್ನು ಹೊಸದಾಗಿ ನಿರ್ಮಿಸಿಕೊಂಡ ಹಲವು ಸಾಹಸಿ ಮಹಿಳೆಯರಿದ್ದಾರೆ. ಅವರಲ್ಲಿ  ಪಂಜಾಬಿನ ಪೊಲೀಸ್ ಅಧಿಕಾರಿಯೂ ಒಬ್ಬರು. ನಮ್ಮ ರಾಜ್ಯದಲ್ಲಿ ಚಿತ್ರರಂಗ ಸಹಿತ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಮಹಿಳೆಯರೂ ಇದ್ದಾರೆ. ಎನ್‍ಆರ್‌ಐ ವಿವಾಹಗಳಿಂದ ನೊಂದ ಮಹಿಳೆಯರು ಎದೆಗುಂದದೆ ಹೋರಾಟದ ಹಾದಿಯಲ್ಲಿ ಹೆಜ್ಜೆ ಹಾಕಬೇಕಿದೆ. ಕತ್ತಲು ಮುಗಿದ ಮೇಲೆ ಬೆಳಕು ಹರಿಯಲೇಬೇಕು. ಆದರೆ ಆ ಬೆಳಕನ್ನು ಕಾಣಲು ಕಣ್ಣು ಬಿಡಬೇಕಷ್ಟೇ! (ಲೇಖಕಿ ಭಾರತೀಯ ಮಹಿಳಾ ಒಕ್ಕೂಟದ ರಾಜ್ಯ ಅಧ್ಯಕ್ಷೆ. ಗೌಪ್ಯತೆ ಕಾಪಾಡುವ ದೃಷ್ಟಿಯಿಂದ ಲೇಖನದಲ್ಲಿ ವ್ಯಕ್ತಿಗಳು ಮತ್ತು ಊರುಗಳ ಹೆಸರುಗಳನ್ನು ಬದಲಿಸಲಾಗಿದೆ). 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು