ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಯಿದೋಣಿ | ನರ್ತನದ ಬೆನ್ನು ಹತ್ತಿ...

Last Updated 3 ಏಪ್ರಿಲ್ 2020, 2:18 IST
ಅಕ್ಷರ ಗಾತ್ರ

ನನ್ನ ಅಣ್ಣ ಸಣ್ಣ ವಯಸ್ಸಿನಲ್ಲಿಯೇ ತೀರಿಕೊಂಡ. ಹಾಗಾಗಿ, ಒಬ್ಬನೇ ಮಗನ ರೀತಿಯಲ್ಲಿ ಬೆಳೆದೆ. ಅಪ್ಪ ನಾಟಿವೈದ್ಯರಾಗಿದ್ದರು. 8. 9ನೇ ತರಗತಿಗಾಗಿ ನಾನು ಮಂಗಳೂರಿಗೆ ಹೋದೆ. ಖಾಸಗಿಯಾಗಿ ಎಸ್‌ಎಸ್‌ಎಲ್‌ಸಿ ಮಾಡಿದೆ. ಅಂತರ್ಮುಖಿಯಾಗಿದ್ದ ನನಗೆ ಓದು ಖುಷಿಕೊಡುತ್ತಿತ್ತು. ಸಣ್ಣದರಿಂದಲೇ ನೃತ್ಯ ನನಗೆ ಇಷ್ಟ. ನಮ್ಮ ಹಳ್ಳಿಯಲ್ಲಿ ಯಕ್ಷಗಾನ ಪ್ರದರ್ಶನ ಇದ್ದಾಗಲೆಲ್ಲ ರಾತ್ರಿಯಿಡೀ ಕೂತು ನೋಡುತ್ತಿದ್ದೆ. ಸ್ತ್ರೀವೇಷಗಳ ಬಗ್ಗೆ ನನಗೆ ಹೆಚ್ಚಿನ ಆಸಕ್ತಿ ಇತ್ತಾದರೂ ಅಂತಹ ಪಾತ್ರ ಮಾಡಬೇಕು ಎಂದು ಅನಿಸಿದ್ದಿಲ್ಲ. ಭರತನಾಟ್ಯದ ಬಗ್ಗೆ ತಿಳಿದಾಗಿನಿಂದ, ಭರತನಾಟ್ಯ ಕಲಿಯಬೇಕು ಎಂಬ ಆಸೆ ಮೊಳೆದಿತ್ತು.

ಆದರೆ, ನೃತ್ಯವನ್ನು ಕಲಿಸುವವರು ಯಾರೂ ಇರಲಿಲ್ಲ. ನಾನು ನರ್ತಕನಾಗಬೇಕು ಎಂದು ಹೇಳಿದ್ದು ಅಪ್ಪ–ಅಮ್ಮನಲ್ಲಿ ಅಂತಹ ಖುಷಿಯನ್ನೇನೂ ಮೂಡಿಸಲಿಲ್ಲ. ಶಿಕ್ಷಕ ಶಿಕ್ಷಣ ತರಬೇತಿಗೆ ಸೇರುವಂತೆ ಅವರು ಒತ್ತಾಯಿಸಿದರು. ನಾನು ಹುಟ್ಟಿದ್ದು 1933ರಲ್ಲಿ. ಆ ದಿನಗಳಲ್ಲಿ ಹೆತ್ತವರ ಮಾತನ್ನು ಪ್ರಶ್ನಿಸುವ ಪ್ರವೃತ್ತಿಯೇ ಇರಲಿಲ್ಲ. ನಾನು ಶಿಕ್ಷಕ ತರಬೇತಿ ಮುಗಿಸಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕನೂ ಆದೆ. ನಿವೃತ್ತಿಯ ಮುಂಚಿನ 40 ವರ್ಷ ಶಿಕ್ಷಕನಾಗಿಯೇ ಇದ್ದೆ. ಮೊದಲ ನೃತ್ಯಗುರು ಸಿಕ್ಕಿದ್ದು ನನಗೆ 25 ವರ್ಷ ದಾಟಿದ ಬಳಿಕವೇ. 1957ರಲ್ಲಿ ‘ನಾಟ್ಯ ನಿಕೇತನ’ವನ್ನು ಆರಂಭಿಸಿದೆ. ನೆರವು ನೀಡುವುದಾಗಿ ಗುರುಗಳೂ ಹೇಳಿದ್ದರು. ಆದರೆ, ಸದಾ ಕೆಲಸದಲ್ಲಿ ವ್ಯಸ್ತವಾಗಿರುತ್ತಿದ್ದ ಅವರು ನನ್ನಲ್ಲಿಗೆ ಬಂದು ನೆರವು ನೀಡಲು ಸಾಧ್ಯವಾಗಲಿಲ್ಲ. ನಾನು ಕಲಿತಿದ್ದ ಭರತನಾಟ್ಯವು ಶಾಲೆ ನಡೆಸಲು ಬೇಕಾದಷ್ಟು ಶುದ್ಧ ಶಾಸ್ತ್ರೀಯವೂ ಆಗಿರಲಿಲ್ಲ.

ನಾನು ಕಲಿಯಲೇಬೇಕಿದೆ ಎಂಬುದು ಅರಿವಾಯಿತು. ಗುರುವಿಗಾಗಿ ಹುಡುಕಾಡಿ, ಪಂದನಲ್ಲೂರು ಭರತನಾಟ್ಯ ಅಭ್ಯಸಿಸಲು ಆರಂಭಿಸಿದೆ. ನಾನು ಹೆಚ್ಚು ಹಣವನ್ನೇನೂ ಮಾಡಿಲ್ಲ. ಕಲಿಯುವ ಆಸಕ್ತಿಯಿಂದ ಬಂದ ಯಾರನ್ನೂ ಹಣ ಇಲ್ಲ ಎಂಬ ಕಾರಣಕ್ಕೆ ಹಿಂದಕ್ಕೆ ಕಳಿಸಿಲ್ಲ. ಶಿಷ್ಯಂದಿರೆಲ್ಲರೂ ನಮ್ಮ ಮನೆಯನ್ನು ಗುರುಕುಲ ಎಂದೇ ಭಾವಿಸಿದ್ದರು. ಒಂದೊಂದು ದಿನ ನನ್ನ ಹೆಂಡತಿ 20–30 ಮಂದಿಗೆ ಅಡುಗೆ ಮಾಡಬೇಕಾಗುತ್ತಿತ್ತು. ಅವರೆಲ್ಲ ಅವಳನ್ನು ಅನ್ನಪೂರ್ಣೆ ಎಂದೇ ಕರೆಯುತ್ತಿದ್ದರು. ನನ್ನ ಮೂರೂ ಮಕ್ಕಳು ಈಗ ಸಂಸಾರಸ್ಥರು. ಮಗಳು ನನ್ನ ದಾರಿ ತುಳಿದಿದ್ದಾಳೆ. ನೃತ್ಯ ಸಂಯೋಜನೆ ಮತ್ತು ಭರತನಾಟ್ಯ ಕಲಿಯುತ್ತಿದ್ದಾಳೆ. ಶಾಲಾ ಶಿಕ್ಷಕ ವೃತ್ತಿಗೆ ಹಲವು ಬಾರಿ ನಾನು ರಾಜೀನಾಮೆ ನೀಡಿದ್ದೆ.

ಆದರೆ, ವಿದ್ಯಾರ್ಥಿಗಳಿಗೆ ನನ್ನ ಪಾಠ ಇಷ್ಟ ಎಂಬ ಕಾರಣಕ್ಕೆ ಅವರು ರಾಜೀನಾಮೆ ಅಂಗೀಕರಿಸಲೇ ಇಲ್ಲ. ಈಗ, ನಿವೃತ್ತಿಯಾಗಿ 20 ವರ್ಷಗಳಿಂದ ನಾನು ಪೂರ್ಣಾವಧಿ ನೃತ್ಯ ಗುರುವಾಗಿದ್ದೇನೆ. ನಾನು ತರಬೇತಿ ಕೊಟ್ಟ ನರ್ತಕರೇ ನನ್ನ ಅತಿದೊಡ್ಡ ಸಂಪತ್ತು ಎಂದು ಸದಾ ಭಾವಿಸಿದ್ದೇನೆ. ಅವರಲ್ಲಿ ಕೆಲವರು ಖ್ಯಾತ ನೃತ್ಯಗುರುಗಳಾಗಿದ್ದಾರೆ. ನನ್ನ ಆರಂಭದ ದಿನಗಳಲ್ಲಿ ನೃತ್ಯಕ್ಕೆ ಅಂತಹ ಮನ್ನಣೆ ಇರಲಿಲ್ಲ. ಆದರೆ, ಇಂದು ನೃತ್ಯ ಕಲಿಯಲು ಬಯಸುವವರು ಚಿಂತಿಸುವ ಅಗತ್ಯ ಇಲ್ಲ. ಮೂಲೆಮೂಲೆಯಲ್ಲೂ ಈಗ ನೃತ್ಯ ಶಿಕ್ಷಕರಿದ್ದಾರೆ. ಸಮಯ ಕಳೆಯುವುದಕ್ಕಾಗಿ ನೃತ್ಯ ಕಲಿಯುವವರ ಸಂಖ್ಯೆಯೇ ಹೆಚ್ಚು ಎಂಬದು ನನ್ನ ಬೇಸರ. ಸಾಂಪ್ರದಾಯಿಕ ಕಲೆಯನ್ನು ತಿರುಚುವವರೂ ಇದ್ದಾರೆ. ಕಲೆಯನ್ನು ತಿರುಚಬೇಡಿ ಎಂಬುದಷ್ಟೇ ಅವರಲ್ಲಿ ನನ್ನ ಕಳಕಳಿಯ ವಿನಂತಿ.

***

‘ಬೀಯಿಂಗ್‌ ಯೂ’

‘ಬೀಯಿಂಗ್‌ ಯೂ’ ಬೆಂಗಳೂರು ಮೂಲದ ಡಿಜಿಟಲ್‌ ಮೀಡಿಯಾ ನವೋದ್ಯಮ ಕಂಪನಿ. 2017ರಲ್ಲಿ ಅಸ್ತಿತ್ವಕ್ಕೆ ಬಂದ ಈ ಕಂಪನಿ ಜನಸಾಮಾನ್ಯರು, ಅದರಲ್ಲೂ ಮಹಿಳೆ ಯರ ಯಶೋಗಾಥೆಗಳನ್ನು ಕಟ್ಟಿಕೊಡುತ್ತದೆ. ‘ಪ್ರಜಾವಾಣಿ’ಗಾಗಿ ಹಾಯಿದೋಣಿಯ ಈ ಕಥೆಗಳನ್ನು ‘ಬೀಯಿಂಗ್ ಯು’ ಕಟ್ಟಿಕೊಡುತ್ತಿದೆ...

ಇಮೇಲ್‌:beingyou17@gmail.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT