ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧುಮೇಹ: ಸದೃಢ ಆರೋಗ್ಯಕ್ಕಾಗಿ ನೇರಳೆ

Last Updated 11 ಜೂನ್ 2019, 7:08 IST
ಅಕ್ಷರ ಗಾತ್ರ

ಆಯುರ್ವೇದದಲ್ಲಿ ಉನ್ನತ ಸ್ಥಾನ ಪಡೆದಿರುವ ನೇರಳೆ ಹಣ್ಣು ಸದೃಢ ಆರೋಗ್ಯ ಕಾಪಾಡಿಕೊಳ್ಳಲು ಅತ್ಯುತ್ತಮವಾದುದು. ಹಲವು ಔಷಧೀಯ ಗುಣಗಳನ್ನು ಹೊಂದಿರುವ ಈ ಹಣ್ಣಿಗೆ ಇದೀಗ ಬಲು ಬೇಡಿಕೆ.

ನೇರಳೆ ವರ್ಷಕ್ಕೊಮ್ಮೆ ಸಿಗುವ ಅಪರೂಪದ ಹಣ್ಣು. ಮೇ, ಜೂನ್‌ ತಿಂಗಳಲ್ಲಿ ಮಾತ್ರ ಇದು ಲಭ್ಯವಿರುತ್ತದೆ. ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಕೆಯಿಲ್ಲದೆ ನೈಸರ್ಗಿಕವಾಗಿ ಬೆಳೆಯುವ, ಔಷಧೀಯ ಗುಣಗಳನ್ನು ಹೊಂದಿರುವ ಹಣ್ಣಿದು.

ನಾಯಿ ನೇರಳೆ, ಜಂಬು ನೇರಳೆ ಎಂಬ ಹೆಸರುಗಳಲ್ಲಿ ಈ ಹಣ್ಣು ಸಿಗಲಿದೆ. ನಾಯಿ ನೇರಳೆ ಮಲೆನಾಡಿನ ಭಾಗದಲ್ಲಿ ಸಿಗುವ ಚಿಕ್ಕ ಗಾತ್ರದ ಹಣ್ಣು. ಜಂಬು ನೇರಳೆ ಈಚೆಗೆ ಹೊರ ರಾಜ್ಯಗಳಿಂದಲೂ ನಮ್ಮಲ್ಲಿಗೆ ಬರುತ್ತಿರುವುದು ವಿಶೇಷ. ಗಾತ್ರದಲ್ಲಿ ದೊಡ್ಡದು. ಈ ಹಣ್ಣುಗಳ ಗಾತ್ರ, ರುಚಿಯಲ್ಲಿ ವ್ಯತ್ಯಾಸವಿದ್ದರೂ; ಔಷಧೀಯ ಗುಣ ಮಾತ್ರ ಒಂದೇ ಇರಲಿದೆ.

ನೇರಳೆಯ ಎಲೆ, ಕಾಯಿ, ತೊಗಟೆ, ಹಣ್ಣು, ಬೀಜ ಎಲ್ಲವೂ ಔಷಧೀಯ ಗುಣಗಳನ್ನು ಒಳಗೊಂಡಿವೆ ಎಂಬುದು ಆಯುರ್ವೇದ ತಜ್ಞರು, ಪಂಡಿತರ ಅಭಿಮತ. ನೇರಳೆ ಹಣ್ಣಿನ ಔಷಧೀಯ ಗುಣ, ಮಹತ್ವದ ಕುರಿತ ಜಾಗೃತಿ ಎಲ್ಲೆಡೆ ಹೆಚ್ಚಿದಂತೆ, ಹಣ್ಣಿಗೆ ಬೇಡಿಕೆಯೂ ಹೆಚ್ಚುತ್ತಿದೆ. ಇದರ ಪರಿಣಾಮ ಮಾರುಕಟ್ಟೆಯಲ್ಲಿ ಪ್ರಸ್ತುತ ಒಂದು ಕೆ.ಜಿ.ಹಣ್ಣಿಗೆ ₹ 200ರಿಂದ ₹ 240ರ ಧಾರಣೆಯಿದೆ. ತುಟ್ಟಿಯಿದ್ದರೂ ಹಣ್ಣು ಖರೀದಿಸಿ, ಸವಿಯುವವರ ಸಂಖ್ಯೆ ದಿನದಿಂದ ದಿನಕ್ಕೆ, ವರ್ಷದಿಂದ ವರ್ಷಕ್ಕೆ ಸಾಕಷ್ಟು ಹೆಚ್ಚುತ್ತಿದೆ.

ಬೇಡಿಕೆ ಹೆಚ್ಚಿದಂತೆ ರೈತರ ಜಮೀನಿನ ಬದುಗಳಲ್ಲಿ, ಹಳ್ಳದ ದಿಣ್ಣೆಯಲ್ಲಿ ನೈಸರ್ಗಿಕವಾಗಿ ಬೆಳೆಯುತ್ತಿದ್ದ ನೇರಳೆ ಇದೀಗ ಕೃಷಿ ಸ್ವರೂಪಕ್ಕೆ ತಿರುಗುತ್ತಿದೆ. ಸುತ್ತಮುತ್ತಲಿನ ಗ್ರಾಮಗಳ ಚಿಣ್ಣರು, ಯುವಕರು ತಂಡೋಪ ತಂಡವಾಗಿ ನೇರಳೆ ಹಣ್ಣಿನ ಮರದ ಬಳಿ ತೆರಳಿ, ಕೆಳಗೆ ಉದುರಿದ್ದ ಹಣ್ಣುಗಳನ್ನು ಆರಿಸಿಕೊಂಡು ಬಂದು ನೆರೆ ಹೊರೆಯವರಿಗೆ ಹಂಚಿ ತಿನ್ನುತ್ತಿದ್ದ ಚಿತ್ರಣ ಕಣ್ಮರೆಯಾಗಿದ್ದು, ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತಿದೆ.

ಔಷಧೀಯ ಗುಣಗಳ ಆಗರ..!

‘ಮಧುಮೇಹಕ್ಕೆ ತುತ್ತಾದವರು ನೇರಳೆ ಹಣ್ಣನ್ನು ಬೀಜದ ಜತೆ ತಿನ್ನುವುದರಿಂದ ಡಯಾಬಿಟಿಸ್ ನಿಯಂತ್ರಣದಲ್ಲಿರುತ್ತದೆ. ಬೀಜ ಸಮೇತ ಹಣ್ಣಿನ ಜ್ಯೂಸ್‌ ಮಾಡಿಕೊಂಡು ಕುಡಿದರೂ ಒಳ್ಳೆಯದು. ಸ್ವಲ್ಪ ಸಿಹಿ, ಸ್ವಲ್ಪ ವಗರಿನ ರುಚಿಯಿದ್ದರೂ; ಸೇವಿಸಬಹುದು. ರಕ್ತದಲ್ಲಿ ಹೆಚ್ಚಾದ ಸಕ್ಕರೆಯ ಪ್ರಮಾಣವನ್ನು ಇದು ನಿಯಂತ್ರಿಸಲಿದೆ’ ಎಂಬುದು ಆಯುರ್ವೇದ ಪಂಡಿತರ ಅಭಿಮತ.

‘ವರ್ಷಕ್ಕೊಮ್ಮೆ ಸಿಗುವ ಹಣ್ಣಿನ ಬೀಜಗಳನ್ನು ಸಂಗ್ರಹಿಸಿಟ್ಟುಕೊಳ್ಳಿ. ಚೆನ್ನಾಗಿ ತೊಳೆಯಿರಿ. ಒಣಗಿಸಿ. ಬೀಜಗಳನ್ನು ಪುಡಿ ಮಾಡಿಟ್ಟುಕೊಂಡು ಸ್ಟೀಲ್‌ ಬಾಕ್ಸ್‌ ಒಂದರಲ್ಲಿ ಸಂಗ್ರಹಿಸಿ. ಪ್ರತಿ ಮೂರು ದಿನಕ್ಕೊಮ್ಮೆ ಒಂದು ಗ್ಲಾಸ್ ನೀರಿಗೆ ಒಂದು ಚಮಚ ಈ ಪುಡಿಯನ್ನು ಮಿಶ್ರಣ ಮಾಡಿಕೊಂಡು ಕುಡಿದರೂ ಡಯಾಬಿಟಿಸ್‌ ನಿಯಂತ್ರಣದಲ್ಲಿರುತ್ತದೆ’ ಎನ್ನುತ್ತಾರೆ ಯೋಗ ವಿಸ್ಮಯ ಟ್ರಸ್ಟ್‌ನ ಆನಂದ್‌ಜಿ.

‘ನೇರಳೆ ಹಣ್ಣಿನಲ್ಲಿ ಹೇರಳವಾಗಿ ಪೊಟ್ಯಾಶಿಯಂ ಇದೆ. ಇದು ರಕ್ತದೊತ್ತಡ ನಿಯಂತ್ರಿಸಲಿದೆ. ರಕ್ತಹೀನತೆ ನಿವಾರಣೆಗೂ ರಾಮಬಾಣವಿದು. ಮಕ್ಕಳಿಗೆ, ಹೆಣ್ಮಕ್ಕಳಿಗೆ ಅಮೃತ ಸಮಾನ. ಪಿತ್ತ ದೋಷ ನಿವಾರಣೆಯಲ್ಲೂ ಈ ಹಣ್ಣು ಸೇವನೆ ಪ್ರಮುಖ ಪಾತ್ರ ವಹಿಸಲಿದೆ. ಕಿಡ್ನಿಯಲ್ಲಿನ ತೊಂದರೆ ನಿವಾರಣೆಗೆ
ಸಹಕಾರಿಯಾಗಲಿದೆ.’

‘ಕ್ಯಾನ್ಸರ್‌ ರೋಗಿಗಳಿಗೆ ನೇರಳೆ ಬೀಜ ಸಹಿತ ಹಣ್ಣಿನ ಜ್ಯೂಸ್‌ ಅತ್ಯುತ್ತಮವಾದುದು. ಹೃದಯ ಸಂಬಂಧಿ ರೋಗಕ್ಕೂ ಮದ್ದಾಗಲಿದೆ. ವಸಡಿನಲ್ಲಿನ ರಕ್ತಸ್ರಾವ ನಿಯಂತ್ರಣ, ಕರುಳು ಸ್ವಚ್ಛಗೊಳಿಸುವಿಕೆಗೆ, ಗಾಯ ವಾಸಿಯಾಗಲು ಇದು ಮದ್ದಾಗಿ ಕಾರ್ಯ ನಿರ್ವಹಿಸಲಿದೆ.’

‘ಕಬ್ಬಿಣಾಂಶ, ವಿಟಮಿನ್, ಕ್ಯಾಲ್ಶಿಯಂ ಈ ಹಣ್ಣಿನಲ್ಲಿ ಹೇರಳವಾಗಿದ್ದು, ಆಸ್ತಮಾ ರೋಗಿಗಳು ಅಡುಗೆ ಅರಿಷಿಣ, ಕಾಳು ಮೆಣಸು ಬೆರೆಸಿದ ನೇರಳೆ ಹಣ್ಣಿನ ಜ್ಯೂಸ್ ಕುಡಿದರೆ ಆರೋಗ್ಯ ಸುಧಾರಿಸಲಿದೆ. ರೋಗ ನಿರೋಧಕ ಶಕ್ತಿಯನ್ನು ನೇರಳೆ ಹೊಂದಿದೆ. ನೇರಳೆಯ ಜ್ಯೂಸ್‌ ರಕ್ತದ ಪ್ರತಿ ಕಣವನ್ನು ಶುದ್ಧೀಕರಿಸುವ ಸಾಮರ್ಥ್ಯವನ್ನು ಹೊಂದಿದೆ’ ಎನ್ನುತ್ತಾರೆ ಆನಂದ್‌ಜಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT