ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವಸೇತು | ಭಜನೆಯ ಬಚ್ಚೆ ಸಾಹೇಬರು

Last Updated 9 ಜುಲೈ 2022, 20:15 IST
ಅಕ್ಷರ ಗಾತ್ರ

ಬಚ್ಚೆ ಸಾಹೇಬರದು ಯಾವುದೇ ಜಾತಿ ಧರ್ಮಕ್ಕೆ ಅಂಟಿಕೊಳ್ಳದ ಮನಸ್ಸು. ವಾರಕ್ಕೊಮ್ಮೆ ಶುಕ್ರವಾರದ ನಮಾಜ್ ತಪ್ಪಿದರೂ ಶನಿವಾರದ ಭಜನೆ ತಪ್ಪುತ್ತಿರಲಿಲ್ಲ. ತಂದೆಯ ಕಾಲದಿಂದಲೂ ಇದು ನಡೆದುಕೊಂಡು ಬಂದ ರೀತಿ ಎಂದು ಹೇಳುತ್ತಿದ್ದರು. ಹಿಂದೂ ಮುಸ್ಲಿಮರ ಹಬ್ಬಗಳನ್ನು ಸಮಾನವಾಗಿ ಸಂಭ್ರಮಿಸುತ್ತಿದ್ದ ಬಚ್ಚೆಸಾಹೇಬರು ಇಂದು ಬರೀ ನೆನಪು.

ನಮ್ಮೂರಿನ ವೀರಾಂಜನೇಯಸ್ವಾಮಿ ದೇವಸ್ಥಾನದ ಕಟ್ಟೆಯ ಮಧ್ಯದಲ್ಲಿದ್ದ ಅರಳಿ ಮರದಲ್ಲಿ ಅಳವಡಿಸಿದ್ದ ಧ್ವನಿವರ್ಧಕದಲ್ಲಿ ವಾರದ ಕೊನೆಯ ದಿನವಾದ ಶನಿವಾರ ಹೊಂಬಿಸಿಲು ಆವರಿಸಿ ಸಂಜೆ ಸೂರ್ಯ ಮುಳುಗುವ ಹೊತ್ತು. ‘ಆಕಾಶ ಭೂಮಿಗಳ ಒಂದು ಮಾಡಿ ನಿಂತ ನಿನ್ನ ಈ ಆಕಾರವೇನು’ ಎಂಬ ಹಾಡು ಇಂಪಾದ ದನಿಯಲ್ಲಿ ಬರುತ್ತಿದ್ದಂತೆ ಬಚ್ಚೆ ಸಾಹೇಬರ ಭಜನೆ ಪ್ರಾರಂಭವಾಯಿತೆಂದು ಮಕ್ಕಳಿಗಲ್ಲದೆ ಹಿರಿಯರಿಗೂ ಕೂಡ ಅರಿವಾಗುತ್ತಿತ್ತು.

ಬೃಹದಾಕಾರವಾಗಿ ಬೆಳೆದಿರುವ ಇಂದಿನ ಬೆಂಗಳೂರಿನ‌ ಹೃದಯ ಭಾಗದಲ್ಲಿರುವ ಮೂವತ್ತು ವರ್ಷಗಳ ಹಿಂದಿನ ಬಸವೇಶ್ವರನಗರದಲ್ಲಿ ಬಚ್ಚೆ ಸಾಹೇಬರು ಎಂದರೆ ಭಜನೆ ಬಚ್ಚೆ ಸಾಹೇಬರು ಎಂದೇ ಬಹಳ ಪ್ರಸಿದ್ಧಿಯಾಗಿದ್ದವರು‌. ಫಳ ಫಳ ಹೊಳೆಯುವ ಬಿಳಿಯದೊಂದು ಜುಬ್ಬಾ, ಷರಾಯಿ ತೊಟ್ಟು (ಊರಲ್ಲಿ ಬೇರೆ ಯಾರಿಗೂ ಇಲ್ಲದೆ ಬಚ್ಚೆ ಸಾಹೇಬರಿಗೆ ಮಾತ್ರ ಈ ಸ್ಟೈಲ್ ಬಟ್ಟೆ ಹೊಲಿದು ಕೊಡುತ್ತಿದ್ದ ನಮ್ಮೂರಿನ ದರ್ಜಿಗೆ ಒಂದು ಸಲಾಂ ಹೊಡೆಯಲೇಬೇಕು), ಕುತ್ತಿಗೆಗೊಂದು ಹಸಿರು ಬಣ್ಣದ ಮಫ್ಲರ್ ಸುತ್ತಿಕೊಂಡು, ತಲೆಗೊಂದು ಬೂದು ಬಣ್ಣದ ಟೋಪಿ ಹಾಕಿಕೊಂಡು ಸದಾ ಹಸನ್ಮುಖಿಯಾಗಿ ಓಡಾಡುತ್ತಿದ್ದವರು ಬಚ್ಚೆ ಸಾಹೇಬರು. ಬೆಳಗಿನ ಜಾವ ಊರೆಲ್ಲ ಒಂದು ಸುತ್ತು ಹಾಕಿ ಎದುರಿಗೆ ಸಿಗುವ ಜನರ ಕುಶಲೋಪರಿ ವಿಚಾರಿಸಿ ಬರುವುದು ಅವರ ದಿನನಿತ್ಯದ ಕೆಲಸಗಳಲ್ಲಿ ಒಂದಾಗಿತ್ತು.

ದೇವಳದ ಭಜನೆಯಲ್ಲಿ ಇವರ ಬಾಯಲ್ಲಿ ಲೀಲಾಜಾಲವಾಗಿ ಹರಿದಾಡುತ್ತಿದ್ದ ಭಜನೆಯ ಪದಗಳು, ದೇವರನಾಮ, ಭಕ್ತಿಗೀತೆಗಳು ಇವರನ್ನು ಕಂಡನೊಡನೆಯೇ ಊರಿನ ಜನರ ಬಾಯಲ್ಲಿ ಮೆಲುದನಿಯಲ್ಲಿ ಮೆಲ್ಲನೆ ಗುನುಗುತ್ತಿದ್ದವು. ಭಜನೆಯ ಸಮಯದಲ್ಲಿ ಚಕ್ಕಬಕ್ಕಳ ಹಾಕಿ ಕುಳಿತ ಬಚ್ಚೆಸಾಹೇಬರು, ಹಾರ್ಮೋನಿಯಂ ಪೆಟ್ಟಿಗೆ ಹಿಡಿದು ತೊಡೆಯ ಮೇಲೆ ಇಟ್ಟುಕೊಂಡು, ಕುಳಿತುಕೊಳ್ಳುವ ಭಂಗಿಯೇ, ಅವರು ಹಾಡಲು ಸಿದ್ಧವಾಗಿದ್ದಾರೆ ಎಂದು ಸಂಜ್ಞೆ ಕೊಡುವಂತಿತ್ತು. ಹಾರ್ಮೋನಿಯಂ ಮಣೆಯ ಮೇಲೆ ಸರಾಗವಾಗಿ ಹರಿದಾಡುವ ಕೈಬೆರಳುಗಳು, ಮೋಡಿ ಮಾಡುತ್ತ ನುಡಿಸುವ ಶ್ರುತಿಗೆ ಕಂಠ ಸರಿಯಾಗಿ ರಾಗವನ್ನು ಹೊಂದಿಸುತ್ತಿತ್ತು. ಇನ್ನು ಶನಿವಾರ ಬಂತೆಂದರೆ ಭಜನೆಗೆ ನಾನೇ ತಾಳ ಹಾಕುತ್ತಿದ್ದೆ‌. ಕೊನೆಯವರೆಗೂ ಇದ್ದರೆ ಬೊಗಸೆ ತುಂಬಾ ಪ್ರಸಾದ. ಬಚ್ಚೆ ಸಾಹೇಬರ ಬೊಗೆಸೆಯಲ್ಲಿಯ ಪ್ರಸಾದದಲ್ಲೂ ಪಾಲು ಸಿಗುತ್ತಿತ್ತು. ಇದರ ಜೊತೆಗೆ ಪೂಜಾರಪ್ಪ ಎಲೆ, ಅಡಿಕೆ, ಕಲ್ಲುಸಕ್ಕರೆ ಬಳುವಳಿಯಾಗಿ ನೀಡುತ್ತಿದ್ದರು.

ನಮ್ಮ ಗ್ರಾಮೀಣ ಸಂಸ್ಕೃತಿಗಳೊಂದಿಗೆ ಭಾವನಾತ್ಮಕ ಸಂಬಂಧವನ್ನು ತಳುಕು ಹಾಕಿಕೊಂಡಿರುವ ಸಂಗೀತ ವಾದ್ಯಗಳೆಂದರೆ ತಮಟೆ, ತಬಲ, ಕೊಳಲು, ನಗಾರಿ, ತಾಳ, ತಂಬೂರಿ, ಏಕತಾರಿ ಮತ್ತು ಹಾರ್ಮೋನಿಯಂ. ಭಜನೆ, ಕೀರ್ತನೆ, ನಾಟಕ ಏನೇ ಇರಲಿ, ಅಲ್ಲಿ ಹಾರ್ಮೋನಿಯಂ ಇಲ್ಲದೆ ಇದ್ದರೆ ಹೇಗೆ? ಜೊತೆಯಲ್ಲಿ ಬಚ್ಚೆ ಸಾಹೇಬರು ಕೂಡ. ‘ಎಲ್ಲಿ ಭಜನೆಯೋ ಅಲ್ಲಿ ಬಚ್ಚೆ ಸಾಹೇಬರು, ಎಲ್ಲಿ ಬಚ್ಚೆ ಸಾಹೇಬರೋ ಅಲ್ಲಿ ಭಜನೆ’ ಎನ್ನುವ ಮಾತು ಊರಿನವರ ಬಾಯಲ್ಲಿ ಸಾಮಾನ್ಯವಾಗಿತ್ತು. ರಾಮನವಮಿ ಹಬ್ಬದ ಸಮಯದಲ್ಲಿ ಒಂದು ವಾರದವರೆಗೂ ಬಚ್ಚೆ ಸಾಹೇಬರ ಹಾರ್ಮೋನಿಯಂ ತಪ್ಪದೆ ಪ್ರತಿದಿನ ಭಕ್ತರು ಭಜನೆಯಲ್ಲಿ ಪಾಲ್ಗೊಂಡು ಭಕ್ತಿಯ ಪರಾಕಾಷ್ಠೆಯಲ್ಲಿ ಮುಳುಗುವಂತೆ ಮಾಡುತ್ತಿತ್ತು. ಇದಕ್ಕೆ ತಿಮ್ಮರಾಯಪ್ಪನ ತಬಲ, ಅಲಮೇಲಮ್ಮನ ಪಿಟೀಲು, ವೆಂಕಟೇಶನ ಕೊಳಲು ಸಾಥ್ ನೀಡುತ್ತಿದ್ದವು. ಸಂಭ್ರಮದ ದೃಶ್ಯ ನೋಡಲು ನಮಗೆ ಎರಡು ಕಣ್ಣು ಸಾಲದಾಗಿದ್ದವು.

ಜಾತ್ರೆ ಸಮಯ ಹತ್ತಿರವಾಗುತ್ತಿದ್ದಂತೆ, ಪೌರಣಿಕ ನಾಟಕ ಆಡುವುದು ಇಂದಿಗೂ ಜೀವಂತವಾಗಿ ಉಳಿಸಿಕೊಂಡು ಬಂದಿರುವ ಕಲೆ. ಪಾತ್ರಗಳನ್ನು ಹಾಕುವ ಪಾತ್ರಧಾರಿಗಳಿಗೆ ನಾಟಕದ ಅಭ್ಯಾಸ ಮಾಡಿಸುವುದು, ನಾಟಕದ ಮೇಷ್ಟರಿಗೆ ದೊಡ್ಡ ಸವಾಲಿನ ಕೆಲಸ. ಆದರೆ ನಮ್ಮ ಬಚ್ಚೆ ಸಾಹೇಬರಿಗೆ ಈ ಕೆಲಸ ಕರಗತವಾಗಿತ್ತು. ದುರ್ಯೋಧನನ ಪಾತ್ರತ್ಗಾಗಿ ದೊಡ್ಡ ಜಟಾಪಟಿಯೇ ನಡೆದು ಹೋಗುತ್ತಿತ್ತು. ಎಲ್ಲರನ್ನೂ ಸಮಾಧಾನಗೊಳಿಸಿ ಅಭ್ಯಾಸದಲ್ಲಿ ನಿರತರಾಗಿಸುವ ಕಲೆಯನ್ನು ಬಚ್ಚೆ ಸಾಹೇಬರು ಬಹಳ ಚೆನ್ನಾಗಿ ಕಲಿತಿದ್ದರು. ‘ಈ ಬಾರಿ ನೀನು, ಮುಂದಿನ ಬಾರಿ ಅವನು’ ಎನ್ನುತ್ತ ಅವರವರ ದೇಹ, ಶಕ್ತಿಗೆ ಅನುಸಾರವಾಗಿ ತಕ್ಕಂತಹ ಪಾರ್ಟುಗಳನ್ನು ಅಭ್ಯಾಸ ಮಾಡಿಸುತ್ತಿದ್ದರು.

ನಾಟಕದ ತಾಲೀಮು ನಡೆಯವಾಗ ಕುತೂಹಲದಿಂದ ಸಂಘದ ಮನೆಯ ಕಿಟಕಿಯ ಸಂದಿಯಲ್ಲಿ ಇಣುಕಿ ನೋಡುತ್ತಿದ್ದ ನಮಗೆ, ‘ಯಾವನೋ ಅವನೋ ಬಗ್ಗಿ ಬಗ್ಗಿ ನೋಡುತ್ತಿರವುದು’ ಎಂದು ದುರ್ಯೋಧನ ಪಾರ್ಟು ಮಾಡುವ ಬೈಲಪ್ಪ ಗದರಿದರೆ, ‘ಮುಂದಿನ ಶುಕ್ರವಾರ ಜಾತ್ರೆದಿನ ಬಂದು ನೋಡ್ರೋ ಹುಡುಗರ’ ಎಂಬ ಪ್ರೀತಿ ತುಂಬಿದ ದನಿ ನಮ್ಮ ಬಚ್ಚೆ ಸಾಹೇಬರದಾಗಿತ್ತು. ಪೌರಾಣಿಕ ನಾಟಕದಲ್ಲಿ ಕೃಷ್ಣ, ಅರ್ಜುನ, ದುರ್ಯೋಧನ, ಭೀಮ, ಧರ್ಮರಾಯ, ನಕುಲ, ಸಹದೇವರಾಗಿ ಊರಿನ ಪ್ರಮುಖರು ಪಾತ್ರಧಾರಿಗಳಾಗುತ್ತಿದ್ದರು. ದ್ರೌಪದಿ ಪಾತ್ರದಲ್ಲಿ ನಮ್ಮೂರಿನ ರಂಗ ಸೀರೆ ಉಟ್ಟು, ಬಳೆ ತೊಟ್ಟು ವೇದಿಕೆಗೆ ಬಂದರೆ ಸಿಳ್ಳೆ, ಚಪ್ಪಾಳೆ ಮುಗಿಲು ಮುಟ್ಟುತ್ತಿದ್ದವು.

ಹಳ್ಳಿಯ ಮಸೀದಿಯಲ್ಲಿ, ಬೀದಿಯ ನಾಟಕದಲ್ಲಿ, ಊರೊಳಗಿನ ದೇವಸ್ಥಾನದಲ್ಲಿ, ಮನೆ ಮನೆಯಲ್ಲಿ ಓದಿಸುವ ಕಥೆಯಲ್ಲಿ, ಭಜನೆಯಲ್ಲಿ ಸದಾ ಬಚ್ಚೆ ಸಾಹೇಬರ ಜೊತೆಯಲ್ಲಿರುತ್ತಿತ್ತು ಹಾರ್ಮೋನಿಯಂ. ಬಚ್ಚೆ ಸಾಹೇಬರು ದೇಹವಾಗಿದ್ದರೆ ಹಾರ್ಮೋನಿಯಂ ಅವರ ಕೊನೆಯ ಕಾಲದವರೆಗೂ ಅವರ ಉಸಿರಾಗಿತ್ತು. ಭಜನೆ, ಕೀರ್ತನೆ, ನಾಟಕ ಅಷ್ಟೇ ಅಲ್ಲದೆ ಮೊಹರಂ ಹಬ್ಬದ ಸಂದರ್ಭದಲ್ಲಿ ಬಚ್ಚೆ ಸಾಹೇಬರು ಹಾರ್ಮೋನಿಯಂ ತೆಗೆದುಕೊಂಡು, ಪಂಜವನ್ನು ಕೂರಿಸುತ್ತಿದ್ದ ಮಂಟಪದಲ್ಲಿ ಕವ್ವಾಲಿ ಹಾಡಲು ಹೊರಡುತ್ತಿದ್ದರು. ‘ಸಾಧು ಮನುಷ್ಯ’ ಎಂಬ ಬಿರುದನ್ನು ನಮ್ಮ ಹಳ್ಳಿಯ ಜನರಿಂದ ಅವರು ಪಡೆದಿದ್ದರು.

ನಮ್ಮ‌ ಶಾಲೆಯ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯದಿನದ ಸಂದರ್ಭಗಳಲ್ಲಿ ಕೂಡ ಬಚ್ಚೆ ಸಾಹೇಬರ ಹಾರ್ಮೋನಿಯಂ ರಾಷ್ಟ್ರಗೀತೆ ಮತ್ತು ದೇಶಭಕ್ತಿ ಗೀತೆಗಳಿಗೆ ಜೊತೆಯಾಗುತ್ತಿತ್ತು. ಸಂಕ್ರಾತಿ ಹಬ್ಬ ಬಂತೆಂದರೆ ತಾವು ಸಾಕಿದ ಹಸುಗಳನ್ನು ಸಿಂಗರಿಸಿ, ನಮ್ಮೂರಿನ ಹನುಮ, ಕೃಷ್ಣ, ಗಣೇಶ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಪೂಜೆ ಮಾಡಿಸಿ ಅನಂತರ ಕಿಚ್ಚು ಹಾಯಿಸಿದಾಗ ಬಹಳ ಖುಷಿ ಪಡುತ್ತಿದ್ದರು ನಮ್ಮ ಬಚ್ಚೆ ಸಾಹೇಬರು.

ಭಜನೆ ಮಾತ್ರವಲ್ಲ, ಯಂತ್ರ, ತಂತ್ರ, ಮಂತ್ರಕ್ಕೂ ಪ್ರಸಿದ್ಧಿಯಾಗಿದ್ದರು ನಮ್ಮ ಬಚ್ಚೆ ಸಾಹೇಬರು. ನಾಲ್ಕು ಪೊರಕೆ ಕಡ್ಡಿ ಹಿಡಿದುಕೊಂಡು, ‘ಥೋಂ ಥೋಂ ತಡಿಕ‌ ಬದನೆ’ ಎಂದು ಹೇಳುತ್ತ, ಕಾಲಿನಿಂದ ತಲೆಯವರಿಗೆ ಒಂದೆರಡು ಸಲ ನಿಧಾನವಾಗಿ ಪೆಟ್ಟು ಕೊಟ್ಟು, ಮಂತ್ರದ ಗಾಳಿಯನ್ನು ನಿಧಾನವಾಗಿ ಮುಖದ ಮೇಲೆ ಉರುಬಿದರೆ, ಮಕ್ಕಳು ಅನುಭವಿಸುವ ತೊಂದರೆ ಎಲ್ಲ ಮಾಯ ಎಂಬ ನಂಬಿಕೆ ಸುತ್ತಮುತ್ತಲ ಜನರಲ್ಲಿತ್ತು. ಎಲೆ, ಅಡಿಕೆ ಅಷ್ಟೇ ಶುಲ್ಕ. ಹೆಚ್ಚೆಂದರೆ ಒಂದು ಕೊಡೆ ಮಾರ್ಕ್ ನಶ್ಯದ ಡಬ್ಬಿ.

ಬಚ್ಚೆ ಸಾಹೇಬರದು ಯಾವುದೇ ಜಾತಿ ಧರ್ಮಕ್ಕೆ ಅಂಟಿಕೊಳ್ಳದ ಮನಸ್ಸು. ವಾರಕ್ಕೊಮ್ಮೆ ಶುಕ್ರವಾರದ ನಮಾಜ್ ತಪ್ಪಿದರೂ ಶನಿವಾರದ ಭಜನೆ ತಪ್ಪುತ್ತಿರಲಿಲ್ಲ. ತಂದೆಯ ಕಾಲದಿಂದಲೂ ಇದು ನಡೆದುಕೊಂಡು ಬಂದ ರೀತಿ ಎಂದು ಹೇಳುತ್ತಿದ್ದರು. ಹಿಂದೂ ಮುಸ್ಲಿಮರ ಹಬ್ಬಗಳನ್ನು ಸಮಾನವಾಗಿ ಸಂಭ್ರಮಿಸುತ್ತಿದ್ದ ಬಚ್ಚೆಸಾಹೇಬರು ಇಂದು ಬರೀ ನೆನಪು. ದೇವಸ್ಥಾನದ ಭಜನೆಯು ಕೂಡ ಅವರ ಕಾಲಕ್ಕೆ ಮುಗಿಯಿತು. ಅವರ ಹಾರ್ಮೋನಿಯಂ ಯಾವ ಮೂಲೆಯಲ್ಲಿ ಬಿದ್ದಿದೆಯೋ ಅವರ ಮನೆಯ ಮಕ್ಕಳಿಗೂ ತಿಳಿದಿಲ್ಲ. ಯಾರದರೂ ಇಮಾಮ್ ಸಾಬಿಗೂ ಗೋಕುಲಾಷ್ಟಮಿಗೂ ಏನು ಸಂಬಂಧ ಎಂದು ನನ್ನನ್ನು ಕೇಳಿದರೆ ಮೈಸೂರು ರಸ್ತೆಯ ಮುಸ್ಲಿಮರ ಸ್ಮಶಾನದಲ್ಲಿ ಬಚ್ಚೆ ಸಾಹೇಬರ ಸಾಮರಸ್ಯದ ಸಮಾಧಿಯನ್ನು ಒಮ್ಮೆ ನೋಡಿ ಬನ್ನಿ ಎಂದು ಹೇಳುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT