ಸೋಮವಾರ, ಜೂನ್ 27, 2022
28 °C

ಪ್ರಸ್ತುತ: ಜರಿತೆ ಮತ್ತು ಆಸ್ಟ್ರೇಲಿಯಾ ವೈದ್ಯೆ

ಡಿ.ಎ. ಶಂಕರ್ Updated:

ಅಕ್ಷರ ಗಾತ್ರ : | |

Prajavani

ಮಹಾಭಾರತದಲ್ಲಿ ಬರುವ ಜರಿತೆ ಪಕ್ಷಿಯ ಕಥೆಯಾಗಲಿ, ಆಸ್ಟ್ರೇಲಿಯಾದ ಆಸ್ಪತ್ರೆಯಲ್ಲಿ ಸಿಕ್ಕ ವೈದ್ಯೆಯ ಕಥೆಯಾಗಲಿ ಹೇಳುವುದು ಒಂದೇ ಸಾರವನ್ನು. ಹಾಗಾದರೆ ಲಿವ್‌ ಇನ್‌ ರಿಲೇಷನ್‌ನ ಹೊಸ ಸಾಮಾಜಿಕ ಸಂಬಂಧದ ಸಮಸ್ಯೆಗಳಿಗೆ ಪರಿಹಾರವಾದರೂ ಏನು?

ಕಾವ್ಯ ವಿಮರ್ಶೆಯಲ್ಲಿ ಹೇಗೆ ಮೊದಲು ಪಠ್ಯ, ಆಮೇಲೆ ವ್ಯಾಖ್ಯಾನವೋ ಹಾಗೆಯೇ ಇಲ್ಲಿಯೂ ಮೊದಲು ಕಥೆ, ಅನಂತರ ಪಾಠ, ಕಲಿಯುವುದು ಏನಾದರೂ ಇದ್ದರೆ!

ಕಥೆಯ ಹಿನ್ನೆಲೆ ಮಹಾಭಾರತದ ಆದಿಪರ್ವದಲ್ಲಿ ಬರುವ ಖಾಂಡವ ವನ ದಹನ ವೃತ್ತಾಂತ. ಈ ವೃತ್ತಾಂತ ಕಥೆಯ ಹೊರಮೈ: ಶ್ವೇತಕಿ ಎನ್ನುವ ಮಹಾಪರಾಕ್ರಮಿ ದೊರೆ ಒಬ್ಬನಿದ್ದ. ಅವನು ಮಾಡಿದ ಯಜ್ಞಯಾಗಾದಿಗಳಿಗೆ ಲೆಕ್ಕವೇ ಇರಲಿಲ್ಲ. ಆದರೆ, ಇವುಗಳಲ್ಲಿ ಭಾಗವಹಿಸಲು ಬಂದ ಋತ್ವಿಕರು, ಸದಾಕಾಲ ಯಾಗದಿಂದ ಏಳುತ್ತಿದ್ದ ಧೂಮದಿಂದಾಗಿ ತಮ್ಮ ಕಣ್ಣುಗಳ ಶಕ್ತಿಯನ್ನು ಕಳೆದುಕೊಂಡು ಯಾಗವನ್ನು ಪರಿತ್ಯಜಿಸಿದರು.

ರಾಜ ಹೆದರಲಿಲ್ಲ. ಅದಕ್ಕೆ ಬದಲಾಗಿ ನೂರು ವರ್ಷಗಳ ಪರಿಮಿತಿಯುಳ್ಳ ಮಹಾಯಾಗವನ್ನು ಮಾಡಲು ನಿಶ್ಚಯಿಸಿ, ಹೊಸ ಋತ್ವಿಜರನ್ನು ಹುಡುಕಲು ಪ್ರಾರಂಭಿದ. ಸಿಕ್ಕಿದವರು ಯಾರೂ ಒಪ್ಪಲಿಲ್ಲ. ಆಗ ರುದ್ರನನ್ನೇ ಯಾಜಕನನ್ನಾಗಿ ಮಾಡಿಕೊಳ್ಳಲು ಆತನನ್ನು ಒಲಿಸಿಕೊಂಡ. ರುದ್ರ ಪ್ರಸನ್ನನಾಗಿ, ‘ನೀನು ಬ್ರಹ್ಮಚರ್ಯದಿಂದಿದ್ದು ಹನ್ನೆರಡು ವರ್ಷ ಯಜ್ಞೇಶ್ವರನನ್ನು ಅವಿಚ್ಛಿನ್ನವಾಗಿ ಆಜ್ಯಧಾರೆಯಿಂದ ತೃಪ್ತಿಗೊಳಿಸಿದರೆ ಆಗ ಯಾಜಕನಾಗುತ್ತೇನೆ’ ಎಂದ.  ಶ್ವೇತಕಿ ಈ ಎಲ್ಲ ನಿಬಂಧನೆಗಳನ್ನು ಪೂರೈಸಿದ. ಈಶ್ವರ ತನ್ನ ಅಂಶಸಂಭೂತನಾದ ದುರ್ವಾಸನನ್ನು ಯಾಜಕನನ್ನಾಗಿ ನೇಮಿಸಿ, ದೊರೆಯ ಇಷ್ಟಾರ್ಥವನ್ನು ಪೂರೈಸಿದ. 

ಹನ್ನೆರಡು ವರ್ಷಗಳ ಕಾಲ ಅವಿಚ್ಛಿನ್ನವಾಗಿ ಆಜ್ಯಧಾರೆಯನ್ನು ಸವಿದ ಅಗ್ನಿಗೆ ಹಸಿವು ಇಂಗಿ ಹೋಗಿ, ಮಹಾ ಅಜೀರ್ಣ ಸಂಭವಿಸಿ, ಅಗ್ನಿಯ ಮುಖ ಬಿಳಿಚಿಕೊಂಡಿತು.  ಅಗ್ನಿಯ ಶಕ್ತಿ ಕುಂದುತ್ತಾ ಬಂತು. ಆತ ಅತ್ಯಂತ ದುಃಖಿತನಾಗಿ ಬ್ರಹ್ಮನ ಬಳಿ ತನ್ನ ಸಂಕಟವನ್ನು ತೋಡಿಕೊಂಡ. ಬ್ರಹ್ಮ, ‘ನಿನ್ನ ಪಚನಶಕ್ತಿ ಬರಬೇಕಾದರೆ ಇಡೀ ಖಾಂಡವ ವನವನ್ನು ದಹಿಸು. ಅಲ್ಲಿ ತುಂಬಿರುವ ದುಷ್ಟ ಜೀವಿಗಳ ಮೇದಸ್ಸನ್ನು ಸವಿ. ಆಗ ನಿನ್ನ ಅಜೀರ್ಣ ರೋಗ ನಿವಾರಣೆಯಾಗುತ್ತದೆ’ ಎಂದ.  ಖಾಂಡವ ವನವನ್ನು, ಅದರಲ್ಲಿದ್ದ ಎಲ್ಲ ಮೃಗ ಪಕ್ಷಿಗಳನ್ನು ನುಂಗಿ ನೊಣೆದ ಅಗ್ನಿ, ತನ್ನ ಕಾಯಿಲೆಯಿಂದ ಮುಕ್ತಿ ಪಡೆದ. 

ಈ ಕಾಯಿಲೆಯ ನಿವಾರಣೆಯ ಕಥೆ ಹೊರಮೈ ಕಥೆ. ಇದರ ಒಳಗೆ ಒಂದು ಒಳಮೈ ಕಥೆ ಇದೆ:

ಮಂದಪಾಲ ಎನ್ನುವನೊಬ್ಬ ಮಹಾ ತಪಸ್ವಿ. ಆದರೆ, ಮರಣಾನಂತರ ಅವನು ನಿರೀಕ್ಷಿಸಿದ್ದ ಯಾವ ಪುಣ್ಯಲೋಕವೂ ಅವನಿಗೆ ದಕ್ಕಲಿಲ್ಲ. ಇದಕ್ಕೆ ಕಾರಣ ವಿಚಾರಿಸಿದಾಗ, ‘ನೀನು ಪಿತೃ ಋಣ ತೀರಿಸಿಲ್ಲ, ನೀನು ಸಂತಾನವಂತನಾಗಿಲ್ಲ, ಅದಕ್ಕೆ ಈ ಭಾಗ್ಯ ನಿನಗಿಲ್ಲ’ ಎನ್ನುವ ಉತ್ತರ ಬಂತು. ಮಂದಪಾಲ ಅತ್ಯಲ್ಪ ಕಾಲದಲ್ಲಿ ಸಂತಾನ ಪಡೆಯುವುದು ಹೇಗೆ ಎಂದು ಚಿಂತಿಸಿ, ‘ಪಕ್ಷಿಗಳು ಬಹು ಪ್ರಸವಿಗಳು, ಹಾಗೇ ಶೀಘ್ರ ಪ್ರಸವಿಗಳು’ ಎಂದು ಸ್ಮರಿಸಿಕೊಂಡು ತನ್ನ ತಪಶ್ಶಕ್ತಿಯಿಂದ ಪಕ್ಷಿ ರೂಪವನ್ನು ಪಡೆದ. ಅನಂತರ ಜರಿತ ಎನ್ನುವ ಸುಂದರ ಪಕ್ಷಿಯೊಂದಿಗೆ ಜೊತೆಯಾಗಿ, ಸಹ-ಜೀವನ ನಡೆಸಿದ. ಶೀಘ್ರದಲ್ಲೇ ಅವಳಿಂದ ನಾಲ್ಕು ಮಕ್ಕಳನ್ನು ಪಡೆದ.

ಮಂದಪಾಲ ಬ್ರಹ್ಮಜ್ಞಾನಿಯೇನೋ ಹೌದು. ಆದರೆ, ಪಕ್ಷಿ ರೂಪ ಪಡೆದುಕೊಂಡ ನಂತರ ಅವನಲ್ಲಿ ಪಕ್ಷಿ ಪ್ರಪಂಚದ ಗುಣದೋಷಗಳು ಉಳಿದುಕೊಂಡಿದ್ದವು. ಹಾಗಾಗಿ, ಸುಮಾರು ಕಾಲ ಜರಿತಳೊಂದಿಗೆ ಸಂಸಾರ ಸುಖ ಅನುಭವಿಸಿದ ಮೇಲೂ ಅವನಲ್ಲಿ ಪಕ್ಷಿ ಗುಣ ಉಳಿಯಿತು. ಅವನು ಲಸಿತೆ ಎನ್ನುವ ಸುಂದರ ಹಕ್ಕಿಯನ್ನು ಕಂಡು, ಜರಿತೆಯನ್ನು ತ್ಯಜಿಸಿ, ಅವಳ ಜೊತೆ ಹೊರಟು ಹೋದ.

ಪರಿತ್ಯಜಿತೆಯಾದ ಜರಿತೆ ಚಿಂತಾಕ್ರಾಂತಳಾದಳು. ಏಕಾಂಗಿತನ ಅವಳನ್ನು ಕಾಡ ತೊಡಗಿತು. ಅದರ ಜೊತೆಗೆ ಮಕ್ಕಳನ್ನು ತಾನೊಬ್ಬಳೇ ನಿಂತು ಕಾಪಾಡ ಬೇಕಾಯಿತು. ‘ಗಂಡ ಬಿಟ್ಟು ಹೋದ, ಬೇರೆ ಗೆಳತಿಯನ್ನು ಸೇರಿದ. ಆದರೆ ನಾನೂ ಹಾಗೇ ಮಾಡಿದರೆ ನನ್ನಲ್ಲಿ ಹುಟ್ಟಿದ ನನ್ನ ಮಕ್ಕಳ ಗತಿ ಏನು?  ನಾನೂ ಅವುಗಳನ್ನು ಬಿಟ್ಟು ಹೋದರೆ ಅವು ಅನಾಥವಾಗುತ್ತವೆ’ ಎಂದುಕೊಂಡು ಇನ್ನೂ ಅಂಡರೂಪದಲ್ಲಿದ್ದ ಮಕ್ಕಳನ್ನು, ಪಕ್ಷಿ ಪ್ರಪಂಚಕ್ಕೆ ಅನುಗುಣವಾಗಿ ಮರಿ ಮಾಡಿ, ಅವುಗಳನ್ನು ಪೋಷಿಸಿ ಬೆಳೆಸಿದಳು. ಇದೇ ಕಾಲದಲ್ಲಿ ಖಾಂಡವ ವನ ದಹನ ನಡೆದಿದ್ದು. ಅಗ್ನಿಜ್ವಾಲೆ ಭಯಂಕರವಾಗಿ ಹತ್ತೂ ದಿಕ್ಕುಗಳಲ್ಲಿ ಪ್ರಜ್ವಲಿಸಿ ಸಿಕ್ಕಿದ್ದೆಲ್ಲವನ್ನೂ ನುಂಗಿ ನೊಣೆಯಿತು. 

ಬೆಂಕಿ ವ್ಯಾಪಕವಾಗಿ, ಭಯಂಕರವಾಗಿ ಹಬ್ಬಿ ತಮ್ಮತ್ತಲೇ ಬರುತ್ತಿರುವುದನ್ನು ಕಂಡು ಆ ನಾಲ್ಕು ಪುಟ್ಟ ಮರಿಗಳೂ ಅವುಗಳ ತಾಯಿಯೂ ಭಯದಿಂದ ವಿಹ್ವಲಗೊಂಡವು. ನುಗ್ಗಿ ಬರುತ್ತಿರುವ ಜ್ವಾಲೆಗಳಿಂದ ತಪ್ಪಿಸಿಕೊಳ್ಳುವ ಮಾರ್ಗವೇ ಅವುಗಳಿಗೆ ಗೋಚರವಾಗಲಿಲ್ಲ. ತಾಯಿ ಜರಿತೆ, ‘ಈ ಅಗ್ನಿಯಿಂದ ತಪ್ಪಿಸಿಕೊಂಡು ಹೋಗಲು ನೀವು ಸಮರ್ಥರಾಗಿಲ್ಲ. ನನಗಾದರೂ ನಾಲ್ವರನ್ನೂ ಎತ್ತಿಕೊಂಡು ಹೋಗುವಷ್ಟು ಶಕ್ತಿಯಿಲ್ಲ. ನಿಮ್ಮೆಲ್ಲರ ಮೇಲೆ ನನ್ನ ರೆಕ್ಕೆಗಳನ್ನು ಪಸರಿಸಿ ಕುಳಿತು, ಜ್ವಾಲೆಗೆ ಸಿಕ್ಕಿ, ನಿಮ್ಮೊಡನೆ ನಾನು ಪ್ರಾಣ ತ್ಯಾಗ ಮಾಡುವುದಷ್ಟೇ ಉಳಿದ ದಾರಿ’ ಎಂದಿತು.  

ಮಕ್ಕಳು ತಾಯಿಯ ಮೇಲಣ ಪ್ರೀತಿಯಿಂದ, ‘ಅಮ್ಮ, ನೀನಿನ್ನೂ ಯುವತಿ, ಸುಂದರವಾಗಿದ್ದೀಯ, ನಮ್ಮ ಮೇಲಣ ವ್ಯಾಮೋಹವನ್ನು ಬಿಟ್ಟು, ನೀನು ನಿನ್ನ ಪತಿಯನ್ನು ಹುಡುಕಿ, ನಮ್ಮ ವಂಶ ಉದ್ಧಾರವಾಗುವ ಅನೇಕ ಪುತ್ರರನ್ನು ಪಡೆ’ ಎಂದವು. ಆದರೆ, ತಾಯಿಗೆ ಮಕ್ಕಳ ಮೇಲಣ ಪ್ರೀತಿ ಅತೀವವಾಗಿ, ಅದನ್ನು ಮಾಡಲಾಗದೆ ಅಳುತ್ತ ಕೂತಳು. ಕಡೆಗೆ ಗತ್ಯಂತರವಿಲ್ಲದೆ ಹೋದಳು. 

ಮಂದಪಾಲನಿಗೆ ಖಾಂಡವ ವನ ದಹನ ಸುದ್ದಿ ತಿಳಿದು, ಅವನು ಪುತ್ರ ವ್ಯಾಮೋಹದಿಂದ ಗೋಳಿಟ್ಟ. ಅವನಿಗೆ ಈಗ ಲಸಿತೆಯೊಂದಿಗೆ ಯಾವ ಸರಸ-ಸಲ್ಲಾಪ ಯಾವುದೂ ಬೇಡ. ಅಳುವೊಂದೇ ಅವನ ಸಂಗಾತಿ. ಇದನ್ನು ನೋಡಿ ಲಸಿತೆ, ಸವತಿ ಮಾತ್ಸರ್ಯದಿಂದ, ‘ಜರಿತೆಯನ್ನು ನೆನೆದು ನೀನು ಭ್ರಾಂತನಾಗಿರುವೆ. ನಿನಗೆ ನನ್ನ ಸವತಿಯಲ್ಲಿ ಇದ್ದಷ್ಟು ಪ್ರೇಮ-ವಿಶ್ವಾಸ ನನ್ನಲ್ಲಿ ಇಲ್ಲ. ನಾನಾದರೂ ದುಷ್ಟ ಪುರುಷನನ್ನು ಆಶ್ರಯಿಸಿದ ಅಪರಾಧಕ್ಕಾಗಿ ಏಕಾಂಗಿಯಾಗಿ ಕಾಡು ಅಲೆಯಬೇಕಾಗಿ ಬಂತು,’ ಎಂದು ದೂರಿದಳು. ಮಂದಪಾಲ ‘ನೀನು ಸ್ವತಂತ್ರಳು. ನಾನು ನನ್ನ ಮಕ್ಕಳ ಬಳಿ ಹೋಗುತ್ತೇನೆ’ ಎಂದು ಲಸಿತೆಯನ್ನು ತ್ಯಜಿಸಿ ಹೊರಟು ಹೋದ.

ಮಹಾಭಾರತದ ಈ ಕಥೆ ಸುಖಾಂತ್ಯವಾಗುತ್ತದೆ.  ಈ ಒಳ ಕಥೆಗಿರುವ, ನಮಗೆ ಪ್ರಸ್ತುತ ಎನ್ನಿಸುವ ಸಾಮಾಜಿಕ ಆಯಾಮವನ್ನು ಕುರಿತು ಯೋಚಿಸೋಣ.

***** 

ಕೆಲವು ವರ್ಷಗಳ ಹಿಂದೆ ಆಸ್ಟ್ರೇಲಿಯಾದ ಆಸ್ಪತ್ರೆಯೊಂದರಲ್ಲಿ, ನನ್ನ ಮೊಮ್ಮಗ ಹುಟ್ಟಿದ ಸಂದರ್ಭವೊಂದರಲ್ಲಿ, ವೈದ್ಯೆಯೊಬ್ಬಳ ಪರಿಚಯವಾಯಿತು. ಆಕೆಯ ಜೊತೆ ಲೋಕಾಭಿರಾಮವಾಗಿ ಮಾತನಾಡುತ್ತಿದ್ದೆ. ಆಕೆಯ ಬಗ್ಗೆ, ಆಕೆಯ ಸಂಸಾರದ ಬಗ್ಗೆ ಸಂಭಾಷಣೆ ನಡೆದು, ಅದರ ಬಗ್ಗೆ ಕೇಳಿದೆ. ಆಕೆ, ಬರವಣಿಗೆಯಲ್ಲಿ ಕಾಣಿಸಬಾರದ ಪದಗಳನ್ನು ತನ್ನ ಪೂರ್ವ ಸಹಜೀವನವಾಸಿಯ ಬಗ್ಗೆ ಬಳಸಿ, ‘ನನಗೆ ಇಬ್ಬರು ಮಕ್ಕಳಿದ್ದಾರೆ. ಆದರೆ, ನನ್ನನ್ನು ಬಿಟ್ಟು ಆತನೀಗ ಬೇರೊಬ್ಬಳ ಹಿಂದೆ ಹೋಗಿದ್ದಾನೆ. ನಾನು ಈಗ ಮಕ್ಕಳನ್ನು ಹೆತ್ತ ತಪ್ಪಿಗೆ ಅವನ್ನು ಪೋಷಿಸಿ, ಪಾಲಿಸಬೇಕು. ಜೀವನ ನಿರ್ವಹಣೆಗೆ ನಾನು ದುಡಿಯಬೇಕು. ಆತನ ಹಾಗೆ ನಾನೂ ಮಕ್ಕಳನ್ನು ಬಿಟ್ಟು ಹೋದರೆ ಅವುಗಳ ಗತಿ ಏನು’ ಎಂದು ಭಾರವಾದ ದನಿಯಲ್ಲಿ ವಿಷಾದದಿಂದ ನುಡಿದಳು. 

ಇಂಥ ವಿವಾಹೇತರ ಸಹ-ಜೀವನ ನಮ್ಮಲ್ಲೂ ಈಗ ದಟ್ಟವಾಗಿ ಕಾಣಬರುತ್ತಿದೆ.   ಲಿವ್‌ ಇನ್‌ ರಿಲೇಷನ್‌ ಮಹಾಭಾರತದ ಕಥೆಯ ಮಂದಪಾಲ, ಜರಿತೆ, ಲಸಿತೆಯಂಥವರ ಸಂಸಾರದ ಕಥೆಯಿಂದ ಕಾಣುತ್ತದೆ. 

ಈ ಸಂಬಂಧಗಳ ಕಥನದಲ್ಲಿ ತೀವ್ರವಾಗಿ ನೋವು ತಿನ್ನುವವರು, ವೈಯಕ್ತಿಕವಾಗಿ, ಸಾಮಾಜಿಕವಾಗಿ ಅತಿ ಕಠೋರ ಸಮಸ್ಯೆಗಳನ್ನು ಎದುರಿಸುವವರು ಸ್ತ್ರೀಯರು, ಪುರುಷರಲ್ಲ. ಮಂದಪಾಲನಂತೆ, ಒಬ್ಬಳನ್ನು ತ್ಯಜಿಸಿ, ಇನ್ನೊಬ್ಬಳ ಹಿಂದೆ ಸಾಗುವ ಪುರುಷರಿಗೆ ಭಾರೀ ಸಮಸ್ಯೆ ಇಲ್ಲ. ಇದ್ದರೂ ಅಪರೂಪ. ಇದು ಏನೇ ಇದ್ದರೂ, ಸಂಸಾರದ ಭಾರ, ಮಕ್ಕಳನ್ನು ಸಾಕಿ, ಪೋಷಿಸುವ ಭಾರ ಆಕೆಯ ಹೆಗಲ ಮೇಲೆ ಏರಿ ಕುಳಿತು ಬಿಡುತ್ತದೆ. ಇಂಥ ಭಾರ ಹೊತ್ತ ಮಹಿಳೆಗೆ ಸಾಮಾಜಿಕ ಸಾಂತ್ವನ ಹಾಗಿರಲಿ, ಯಾವ ಗೌರವವೂ  ಸುಲಭವಾಗಿ ದಕ್ಕುವುದಿಲ್ಲ.  

ಸೀತಾ ಪರಿತ್ಯಾಗವನ್ನೇ ನೆನಪಿಸಿಕೊಳ್ಳಿ. ಲವ, ಕುಶರನ್ನು ಸಾಕುವ, ಬೆಳೆಸುವ ಭಾರ ಸೀತೆಯ ಮೇಲೆ ಬೀಳುತ್ತದೆಯೇ ಹೊರತು ಶ್ರೀರಾಮನ ಮೇಲಲ್ಲ. ಸ್ವಾತಂತ್ರ್ಯ ಪುರುಷರಿಗೆ, ಜವಾಬ್ದಾರಿ ಸ್ತ್ರೀಗೆ!

ಇಂಥ ಪರಿತ್ಯಾಗ ಶಾಸ್ತ್ರೋಕ್ತವಾಗಿ ನಡೆದ ವಿವಾಹ ಸಂಬಂಧಗಳಲ್ಲಿ ಬರುವುದಿಲ್ಲ ಎಂದೇನೂ ಹೇಳುವಂತಿಲ್ಲ. ನಮ್ಮಲ್ಲಿ ಕಾಣುತ್ತಿರುವ ವಿವಾಹ ವಿಚ್ಛೇದನದ ಸಂಖ್ಯೆಗಳೇ ಇಂಥ ಪರಿತ್ಯಾಗಗಳ ಕಥೆಯನ್ನು ಹೇಳುತ್ತವೆ. ಗಂಡ ಹೆಂಡತಿಯನ್ನು ಬಿಟ್ಟಾಗ ಅಥವಾ ಹೆಂಡತಿ ಗಂಡನನ್ನು ಬಿಟ್ಟಾಗ, ಇವರ ಹಿಂದೆ ಒಂದು ಕೌಟುಂಬಿಕ ಆವರಣ ಇರುತ್ತದೆ. ಯಾರಾದರೂ ಒಬ್ಬರು ಪರಿತ್ಯಕ್ತ ವ್ಯಕ್ತಿಗೆ ಮಾನಸಿಕ ಆಸರೆಯನ್ನೂ ಸಾಧ್ಯವಾದರೆ ಆರ್ಥಿಕ ನೆರವನ್ನೂ ನೀಡಬಲ್ಲ ಸಾಧ್ಯತೆ ಇರುತ್ತದೆ. ವಿವಾಹೇತರ ಸಹಜೀವನ ಮುರಿದು ಬಿದ್ದಾಗ ಈ ಸಾಧ್ಯತೆಯೂ ಕಮರಿ ಹೋಗಿ, ವ್ಯಕ್ತಿಗಳು ಅಪಾರ ಯಾತನೆಗೆ ಗುರಿಯಾಗಿ ಅವರ ಹಾಗೂ ಸಮಾಜದ ಸ್ವಾಸ್ಥ್ಯ ಕದಡಿ ಹೋಗುವಂಥ ವಾತಾವರಣ ನಿರ್ಮಾಣವಾಗುತ್ತದೆ. ಇದು ವಿಷಾದನೀಯ, ಸರಿ ಮಾಡಬೇಕಾದದ್ದು ಎನ್ನಿಸಿದರೆ ತಪ್ಪೇನೂ ಇಲ್ಲ. ಇದು ಇಂದಿನ ಪರಿಸ್ಥಿತಿಯಲ್ಲಿ ಸಾಧ್ಯವೇ ಎನ್ನುವುದು ಬೇರೆಯೇ ಆದ ಸಾಮಾಜಿಕ ಪ್ರಶ್ನೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.