ಬುಧವಾರ, ಆಗಸ್ಟ್ 17, 2022
26 °C

ಮಹಾರಾಷ್ಟ್ರದ ‘ಕನ್ನಡ ಮೇಷ್ಟ್ರು’

ಪ್ರವೀಣ ಕುಲಕರ್ಣಿ Updated:

ಅಕ್ಷರ ಗಾತ್ರ : | |

Prajavani

ಮಹಾರಾಷ್ಟ್ರದ ಈ ಮೇಷ್ಟ್ರು ‘ಗ್ಲೋಬಲ್‌ ಟೀಚರ್‌ ಪ್ರೈಜ್‌’ ಜತೆಗೆ ಗಳಿಸಿದ್ದು ಬರೋಬ್ಬರಿ 7.37 ಕೋಟಿ ರೂಪಾಯಿಯನ್ನು! ಜಗತ್ತಿನ ಶಿಕ್ಷಣ ಕ್ಷೇತ್ರದ ಕಣ್ಣು ಕುಕ್ಕಿಸುವ ಅವರ ಈ ಸಾಧನೆಗೆ ಕಾರಣವಾಗಿದ್ದು ಅವರ ಕನ್ನಡದ ಪಾಠಗಳು ಎಂದರೆ ನಂಬುವಿರಾ?

***

ನಮ್ಮ ವಿಜಯಪುರ ಜಿಲ್ಲೆಯ ಥೇಟ್‌ ಕನ್ನಡಿ ಬಿಂಬದಂತಿದೆ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆ. ಅಭಿವೃದ್ಧಿ ಕಾಣದ ಹಳ್ಳಿ, ಕನ್ನಡ–ಮರಾಠಿ ಮಿಶ್ರಭಾಷೆ ಮಾತನಾಡುವ ಜನ, ಒಮ್ಮೆ ಬರ, ಮಗದೊಮ್ಮೆ ಮಹಾಪೂರದ ಅಟಾಟೋಪಕ್ಕೆ ಸಿಕ್ಕಿ ನಲುಗಿ, ಸೊರಗಿದ ರೈತ... ಬರಿ ಇಂತಹದ್ದೇ ಬಿಂಬಗಳು. ಸೊಲ್ಲಾಪುರದ ಗಡಿಗ್ರಾಮಗಳಲ್ಲಿ ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸುವುದಕ್ಕಿಂತ ಹೊಲಕ್ಕೆ ಕರೆದೊಯ್ಯುವುದೇ ಹೆಚ್ಚು. ಮಹಾರಾಷ್ಟ್ರದ ಮಾಧಾ ತಾಲ್ಲೂಕಿನ ಪರಿಟೆವಾಡಿ ಕೂಡ ಅಂತಹದ್ದೇ ಸನ್ನಿವೇಶವಿದ್ದ ಒಂದು ಗಡಿಗ್ರಾಮ. ಆದರೆ, ಕಳೆದ 7–8 ವರ್ಷಗಳಲ್ಲಿ ಅಲ್ಲೊಂದು ಚಮತ್ಕಾರವೇ ನಡೆದಿದೆ!

ಚಾಕ್‌ಪೀಸ್‌ ಎಂಬ ಪುಟ್ಟ ‘ಮಾಯಾದಂಡ’ವನ್ನು ಹಿಡಿದುಬಂದು ‘ಆ’ ಚಮತ್ಕಾರಕ್ಕೆ ಕಾರಣರಾದವರು ರಂಜಿತ್‌ಸಿಂಹ ದಿಸಳೆ ಎಂಬ ಯುವ ಶಿಕ್ಷಕ. ಪರಿಟೆವಾಡಿ ಪ್ರಾಥಮಿಕ ಶಾಲೆಗೆ ಈ ಶಿಕ್ಷಕ ನೇಮಕಗೊಂಡು ಬಂದಾಗ ಮಕ್ಕಳ ಶಾಲಾ ಹಾಜರಾತಿಯ ಪ್ರಮಾಣ ಶೇ 2ರಷ್ಟಿತ್ತು. ಈಗ ಅದು ಪ್ರತಿಶತ ನೂರರಷ್ಟಕ್ಕೆ ಏರಿದೆ. ಅವರು ಮಾಡಿದ ಈ ಚಮತ್ಕಾರಕ್ಕಾಗಿ ‘ಗ್ಲೋಬಲ್‌ ಟೀಚರ್‌ ಪ್ರೈಜ್‌’ ಅವರನ್ನು ಹುಡುಕಿಕೊಂಡು ಬಂದಿದೆ. 32ರ ಹರೆಯದ ಈ ಮೇಷ್ಟ್ರ ಸಾಧನೆ ಈಗ ಜಾಗತಿಕ ಮಟ್ಟದಲ್ಲಿ ಸುದ್ದಿ.

ಪರಿಟೆವಾಡಿಯೂ ಸೇರಿದಂತೆ ಸೊಲ್ಲಾಪುರದ ಹಲವು ಗಡಿಗ್ರಾಮಗಳಲ್ಲಿ ಮನೆಭಾಷೆ ಕನ್ನಡವಾಗಿರುವ, ಮರಾಠಿ ಓದಲು, ಬರೆಯಲು ಬಾರದಿರುವ ಕುಟುಂಬಗಳು ಸಾವಿರಾರು ಸಂಖ್ಯೆಯಲ್ಲಿವೆ. ಅಂತಹ ಕುಟುಂಬಗಳ ಮಕ್ಕಳು ಶಾಲೆಯಿಂದ ಹೊರಗೆ ಉಳಿದಿರುವುದನ್ನು ಗಮನಿಸಿದ ದಿಸಳೆ ಮೇಷ್ಟ್ರು, ಅವರನ್ನು ಹೇಗಾದರೂ ಮಾಡಿ ಶಾಲೆಗೆ ಬರುವಂತೆ ಮಾಡಬೇಕಲ್ಲ ಎಂದು ಯೋಚಿಸಿದಾಗ ಹೊಳೆದದ್ದೇ ಮರಾಠಿ ಪಠ್ಯದ ಕನ್ನಡದ ಅನುವಾದಮಾಡಿಸಿ, ಅವರ ಕಲಿಕೆಯನ್ನು ಸುಲಭಗೊಳಿಸುವ ಯೋಜನೆ. ಇದರಿಂದ ಮಕ್ಕಳನ್ನು ಶಾಲೆಗೆ ಸೆಳೆಯುವುದು ಸುಲಭವಾಗಲಿದೆ ಎನ್ನುವುದು ಈ ಶಿಕ್ಷಕರ ಯೋಜನೆಯ ಹಿಂದಿದ್ದ ಕಳಕಳಿಯಾಗಿತ್ತು. ದಿಸಳೆ ಅವರು ಪಠ್ಯವನ್ನು ಮರುವಿನ್ಯಾಸಗೊಳಿಸಿ ಕನ್ನಡಕ್ಕೆ ರೂಪಾಂತರಗೊಳ್ಳುವಂತೆ ಮಾಡಿದ್ದಲ್ಲದೆ ಅದನ್ನು ಕ್ಯುಆರ್‌ ಕೋಡ್‌ಗೆ ಅಳವಡಿಸಿ, ಮೊಬೈಲ್‌ ಫೋನ್‌ನಲ್ಲಿ ಸಿಗುವಂತೆಯೂ ಮಾಡಿದರು.

ದಿಸಳೆ ಅವರು ಕನ್ನಡವನ್ನು ಬಲ್ಲವರು ಅಂದುಕೊಂಡು, ಅವರಿಗೆ ಕರೆಮಾಡಿ, ‘ಪ್ರಶಸ್ತಿ ಪಡೆದಿದ್ದಕ್ಕೆ ಶುಭಾಶಯಗಳು’ ಎಂದರೆ ‘ಸಮಝ್‌ ಮೆ ನಹೀ ಆತಾ (ನೀವು ಹೇಳುವುದೇನು ಗೊತ್ತಾಗುತ್ತಿಲ್ಲ)’ ಅನ್ನಬೇಕೇ?! ‘ನಿಮಗೆ ಕನ್ನಡ ಗೊತ್ತಿರದಿದ್ದರೆ ಶಾಲಾ ಪಠ್ಯವನ್ನು ಕನ್ನಡದಲ್ಲಿ ತಂದಿದ್ದು ಹೇಗೆ’ ಎಂಬ ಪ್ರಶ್ನೆಯನ್ನೂ (ಹಿಂದಿಯಲ್ಲಿ) ಅವರ ಮುಂದಿಡಬೇಕಾಯಿತು. ‘ಕನ್ನಡ–ಮರಾಠಿ ಎರಡೂ ಭಾಷೆಗಳನ್ನು ಬಲ್ಲ ಸ್ನೇಹಿತರಿಂದ ಒಂದರಿಂದ ನಾಲ್ಕನೇ ತರಗತಿವರೆಗಿನ ಪಠ್ಯವನ್ನು ರೂಪಾಂತರಿಸಿದ್ದೇನೆ. ಕೆಲವು ಬೋಧನೆಗಳನ್ನೂ ಚಿತ್ರೀಕರಿಸಿ ಕ್ಯುಆರ್‌ ಕೋಡ್‌ಗೆ ಅಳವಡಿಸಿದ್ದೇನೆ. ಭಾಷೆಯ ಕಾರಣದಿಂದ ಯಾವ ಮಗುವೂ ಶಾಲೆಯಿಂದ ಹೊರಗೆ ಉಳಿಯುವಂತೆ ಆಗಬಾರದು ಎನ್ನುವುದು ನನ್ನ ಅಭಿಲಾಷೆ...’ ಮೇಷ್ಟ್ರ ಈ ವಿವರಣೆ ಕೇಳುತ್ತಾ ಹೋದಂತೆ ಅವರ ಮೇಲೆ ಅಭಿಮಾನ ಮೂಡುತ್ತಾ ಹೋಯಿತು.

ಸೊಲ್ಲಾಪುರ ಜಿಲ್ಲೆಯ ಬಾರ್ಶಿ ಪಟ್ಟಣದ ದಿಸಳೆ ಅವರೂ ಈಗಿನ ಪೀಳಿಗೆಯ ಬಹುತೇಕರಂತೆ ಎಂಜಿನಿಯರ್‌ ಆಗುವ ಕನಸನ್ನೇ ಕಂಡವರು. ಸೀಟು ಸಿಗದಿದ್ದಾಗ ನಿರಾಸೆಯನ್ನೂ ಅನುಭವಿಸಿದವರು. ಆದರೆ, ಶಾಲಾ ಶಿಕ್ಷಕರಾಗಿದ್ದ ದಿಸಳೆ ಅವರ ತಂದೆ ಮಹಾದೇವ ಅವರು, ‘ಶಿಕ್ಷಕ ವೃತ್ತಿಯ ತರಬೇತಿಗೆ ಸೇರಿಕೋ’ ಎಂಬ ಸಲಹೆಯಿತ್ತರು. ತಂದೆಯ ಸಲಹೆಯಂತೆ ಶಿಕ್ಷಕ ವೃತ್ತಿಯ ತರಬೇತಿ ಪಡೆದ ದಿಸಳೆಯವರು ಜಿಲ್ಲಾ ಪಂಚಾಯಿತಿ ಪ್ರಾಥಮಿಕ ಶಾಲೆಗೆ ನೇಮಕಗೊಂಡು ಬಂದಿದ್ದು ಪರಿಟೆವಾಡಿಗೆ. ಶಿಕ್ಷಕರಾಗಿ ಇನ್ನೂ ಒಂದು ದಶಕ ಪೂರ್ಣಗೊಂಡಿಲ್ಲ. ಅಷ್ಟರಲ್ಲಿ ಅವರು ಇತಿಹಾಸವನ್ನೇ ನಿರ್ಮಿಸಿದ್ದಾರೆ.

ಇದನ್ನೂ ಓದಿ: ₹ 7.3 ಕೋಟಿ ಪ್ರಶಸ್ತಿ ಗೆದ್ದ ಭಾರತದ ಶಿಕ್ಷಕ, ಫೈನಲಿಸ್ಟ್‌ಗಳಿಗೂ ಅರ್ಧ

ಕ್ಯುಆರ್‌ ಕೋಡ್‌ನಲ್ಲಿ ಪಠ್ಯ ಅಳವಡಿಸುವ ಇವರ ಕ್ರಮ ಇಡೀ ದೇಶದಾದ್ಯಂತ ಶಿಕ್ಷಣತಜ್ಞರ ಗಮನ ಸೆಳೆದಿದೆ. ಮಹಾರಾಷ್ಟ್ರ ಸರ್ಕಾರವಂತೂ ಶಿಕ್ಷಣದ ಎಲ್ಲ ಹಂತದ ಪಠ್ಯಕ್ರಮಗಳನ್ನೂ ಈಗ ಕ್ಯುಆರ್‌ ಕೋಡ್‌ಗೆ ಅಳವಡಿಸಿದೆ. 2018ರಿಂದ ಎನ್‌ಸಿಇಆರ್‌ಟಿ ಸಹ ತನ್ನೆಲ್ಲ ಪಠ್ಯಗಳಿಗೆ ಕ್ಯುಆರ್‌ ಕೋಡ್‌ ಹಾಕುತ್ತಿದೆ. ಇದು ದಿಸಳೆ ಅವರ ಪ್ರಯೋಗಕ್ಕೆ ಸಿಕ್ಕ ಯಶಸ್ಸು. ‘ಪ್ರತಿಯೊಂದು ಮಗುವಿಗೂ ಭಿನ್ನ ಕಲಿಕಾ ಸಾಮರ್ಥ್ಯವಿರುತ್ತದೆ. ಆಯಾ ಮಗುವಿನ ಸಾಮರ್ಥ್ಯ ಗುರುತಿಸಿ ಕಲಿಕಾ ಕ್ರಮದಲ್ಲಿ ಕೆಲವೊಂದು ಮಾರ್ಪಾಡುಗಳನ್ನು ಮಾಡಿಕೊಳ್ಳುತ್ತೇನೆ. ಹಾಗೆಯೇ ಕೋಣೆಯೊಳಗಿನ ಶುಷ್ಕ ಪಾಠಗಳಿಗಿಂತ ಪ್ರಾಯೋಗಿಕ ಅನುಭವಕ್ಕೆ ಹೆಚ್ಚಿನ ಒತ್ತು ನೀಡುತ್ತೇನೆ. ಇದರಿಂದ ನನಗೆ ಅಚ್ಚರಿದಾಯಕ ಫಲಿತಾಂಶಗಳು ಸಿಕ್ಕಿವೆ’ ಎಂದು ಖುಷಿಯಿಂದ ಹೇಳಿದರು ದಿಸಳೆ.


ರಂಜಿತ್‌ಸಿಂಹ ದಿಸಳೆ

ಮನೆಯಲ್ಲೇ ಒಂದು ಪ್ರಯೋಗಾಲಯವನ್ನೂ ನಿರ್ಮಿಸಿಕೊಂಡಿರುವ ಅವರು, ಮಕ್ಕಳಿಗೆ ವಿಜ್ಞಾನದ ಚಮತ್ಕಾರಗಳನ್ನು ಮಾಡಿ ತೋರಿಸುವುದುಂಟು. ಕೆಲವು ಪ್ರಯೋಗಗಳ ವಿಡಿಯೊಗಳನ್ನೂ ಮಾಡಿರುವ ಅವರು, ಅವುಗಳನ್ನು ಸಹ ಮಕ್ಕಳು ಕ್ಯುಆರ್‌ ಕೋಡ್‌ ಬಳಸಿ, ವೀಕ್ಷಿಸುವಂತೆ ಮಾಡಿದ್ದಾರೆ.

‘ಶಿಕ್ಷಕರೇ ನಿಜವಾದ ಚೇಂಜ್‌ ಮೇಕರ್‌ಗಳು’ ಎನ್ನುವುದು ಈ ಮೇಷ್ಟ್ರ ದೃಢವಾದ ವಿಶ್ವಾಸ. ‘ಏಕೆಂದರೆ, ದೇಶದ ಭವಿಷ್ಯದ ಪೀಳಿಗೆಯನ್ನು ರೂಪಿಸುವವರು, ಅವರಲ್ಲಿ ವೈಚಾರಿಕ ಕಿಡಿಯನ್ನು ಹೊತ್ತಿಸುವವರು, ಸೃಜನಶೀಲ ಮನೋಭಾವವನ್ನು ಬೆಳೆಸಿಕೊಳ್ಳುವಲ್ಲಿ ನೆರವಾಗುವವರು ಶಿಕ್ಷಕರೇ’ ಎಂದು ಯಾವುದೇ ಸಂದಿಗ್ಧಕ್ಕೆ ಎಡೆ ಇಲ್ಲದಂತೆ ಅವರು ಹೇಳಿದರು.

‘ಗ್ಲೋಬಲ್‌ ಟೀಚರ್‌ ಪ್ರೈಜ್‌’ ಜತೆಗೆ ಬಂದ 7.37 ಕೋಟಿ ರೂಪಾಯಿಯಲ್ಲಿ ಅರ್ಧದಷ್ಟು ಮೊತ್ತವನ್ನು ಅಂತಿಮ ಸುತ್ತಿನ ಸ್ಪರ್ಧೆಗೆ ಆಯ್ಕೆಯಾಗಿದ್ದ ಇತರ ಒಂಬತ್ತು ಶಿಕ್ಷಕರಿಗೆ ಸಮಾನವಾಗಿ ಹಂಚಲು ಅವರು ನಿರ್ಧರಿಸಿದ್ದಾರೆ. ‘ಬಹುಮಾನದ ಅರ್ಧ ಮೊತ್ತವೆಂದರೆ 3.68 ಕೋಟಿ ರೂಪಾಯಿ. ಅಷ್ಟೊಂದು ದೊಡ್ಡ ಮೊತ್ತವನ್ನು ಬೇರೆಯವರಿಗೆ ಹೀಗೆ ಬಿಟ್ಟುಕೊಡುವುದು ಅಷ್ಟು ಸುಲಭವಲ್ಲ. ನೀವು ಕೊಟ್ಟಿದ್ದೇಕೆ’ ಎಂಬ ಪ್ರಶ್ನೆಯನ್ನು ಕೇಳಿದಾಗ, ದಿಸಳೆ ಒಮ್ಮೆ ನಸುನಕ್ಕರು.

‘ನನಗೆ ಪ್ರಶಸ್ತಿ ಬಂದಿದೆ ಎಂದರೆ ಅಂತಿಮ ಸುತ್ತಿನಲ್ಲಿದ್ದ ಉಳಿದ ಶಿಕ್ಷಕರಿಗಿಂತ ನಾನು ಉತ್ಕೃಷ್ಟ ಎಂದೇನಲ್ಲ. ಉಳಿದವರೂ ಅಷ್ಟೇ ಸಮರ್ಥರು. ಪ್ರಶಸ್ತಿ ನನಗೆ ಬಂದಿದೆ ಅಷ್ಟೆ. ಯಾವುದೇ ಕೆಲಸವನ್ನು ಒಬ್ಬನೇ ಮಾಡುವುದಕ್ಕಿಂತ ಒಟ್ಟಾಗಿ ಮಾಡಿದರೆ ಯಶಸ್ಸು ಕಟ್ಟಿಟ್ಟಬುತ್ತಿ. ಅವರು ಅಂದುಕೊಂಡಿದ್ದನ್ನು ಸಾಧಿಸಲು ಈ ಹಣ ನೆರವಾಗಬೇಕು ಎನ್ನುವುದು ನನ್ನ ಅಪೇಕ್ಷೆ. ಹಾಗೆಯೇ ಕೊಡುವುದರಲ್ಲಿ ಇರುವ ಖುಷಿ ಬೇರೆಯೇ ಅಲ್ಲವೇ’ ಎಂದು ಮರುಪ್ರಶ್ನೆ ಹಾಕಿದರು. ಹೌದು, ತಮ್ಮ ಈ ಮಾನವೀಯ ನಡೆಯ ಮೂಲಕ ಕೊಡುವುದರಲ್ಲಿ ಇರುವ ಖುಷಿಯ ಕುರಿತು ಜಗತ್ತಿಗೇ ಪಾಠ ಮಾಡಿದ್ದಾರೆ ಈ ಮೇಷ್ಟ್ರು.

ಪರಿಟೆವಾಡಿಯಲ್ಲಿ ದಿಸಳೆಯವರು ಬಂದಮೇಲೆ ಆ ಊರಿನಲ್ಲಿ ಹಲವು ಸಾಮಾಜಿಕ ಬದಲಾವಣೆಗಳೂ ಆಗಿವೆ. ಹೆಣ್ಣುಮಕ್ಕಳ ಶಿಕ್ಷಣದ ವಿಚಾರದಲ್ಲಿ ಈ ಊರು ಗಣನೀಯ ಪ್ರಗತಿಯನ್ನು ಕಂಡಿದೆ. ಬಾಲ್ಯ ವಿವಾಹಗಳಿಗೆ ಸಂಪೂರ್ಣ ತಡೆ ಬಿದ್ದಿದೆ. ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುವವರ ಪ್ರಮಾಣ ಹೆಚ್ಚಾಗಿದೆ. ಪದವಿ ವ್ಯಾಸಂಗಕ್ಕೆ ತೆರಳುವವರ ಸಂಖ್ಯೆಯೂ ಹೆಚ್ಚಾಗಿದೆ. ಶಿಕ್ಷಕರೊಬ್ಬರು ಮನಸ್ಸು ಮಾಡಿದರೆ ಸಮಾಜದಲ್ಲಿ ಏನೆಲ್ಲ ಬದಲಾವಣೆ ತರಲು ಸಾಧ್ಯ ಎನ್ನುವುದಕ್ಕೆ ಸಾಕ್ಷಿ ಇವರಾಗಿದ್ದಾರೆ.

ಅಂದಹಾಗೆ, ಮೈಕ್ರೊಸಾಫ್ಟ್‌ನ ಸಿಇಒ ಸತ್ಯ ನಾದೆಲ್ಲ ಅವರು ತಮ್ಮ ‘ಹಿಟ್‌ ರಿಫ್ರೆಶ್‌’ ಕೃತಿಯಲ್ಲೂ ದಿಸಳೆ ಕುರಿತು ಬರೆದಿದ್ದಾರೆ. ಪ್ರಶಸ್ತಿ ನೀಡಿರುವ ವರ್ಕಿ ಫೌಂಡೇಷನ್‌, ‘ದಿಸಳೆ ಅವರಂತಹ ಶಿಕ್ಷಕರು ಒಳ್ಳೆಯ ಸಮಾಜ ನಿರ್ಮಾಣಕ್ಕೆ ಕಾರಣರಾಗುತ್ತಿದ್ದಾರೆ’ ಎಂದು ಕೊಂಡಾಡಿದೆ. ಯುನೆಸ್ಕೊ ಸಹ ಈ ಮೇಷ್ಟ್ರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ‘ಸಮಾಜದಲ್ಲಿ ಬೇರೂರಿರುವ ಅಸಮಾನತೆ ಹೋಗಲಾಡಿಸಲು, ಎಲ್ಲರೂ ಆರ್ಥಿಕ ಪ್ರಗತಿ ಸಾಧಿಸಲು ಶ್ರಮಿಸುತ್ತಿರುವ ದಿಸಳೆ ಅವರಂತಹ ಶಿಕ್ಷಕರ ಕೈಯಲ್ಲಿ ಜಗತ್ತಿನ ಭವಿಷ್ಯ ಭದ್ರವಾಗಿದೆ’ ಎಂದು ಯುನೆಸ್ಕೊ ಅಭಿಮಾನದಿಂದ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು