ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಯೊಂದು ಅಭಿವ್ಯಕ್ತಿಯೂ ಕಾವ್ಯವೇ... ಕವಿ ಮೂಡ್ನಾಕೂಡು ಅವರೊಂದಿಗೆ ಸಂದರ್ಶನ

Last Updated 25 ಮಾರ್ಚ್ 2023, 23:00 IST
ಅಕ್ಷರ ಗಾತ್ರ

ಆಧುನಿಕ ಕನ್ನಡ ಸಾಹಿತ್ಯಕ್ಕೆ ಕಾವ್ಯದ ಮೂಲಕ ದಲಿತ ಪ್ರಜ್ಞೆಯನ್ನು ತುಂಬಿದ, ಬೌದ್ಧ ಅರಿವನ್ನೂ ಹರಿಸಿದ ನಮ್ಮ ನಡುವಿನ ಮಹತ್ವದ ಕವಿ ಮೂಡ್ನಾಕೂಡು ಚಿನ್ನಸ್ವಾಮಿ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿರುವ ಅವರೊಂದಿಗೆ ಒಂದು ಮುಖಾಮುಖಿ.

ನಮಸ್ಕಾರ ಸರ್. ಮೊದಲಿಗೆ ಶುಭಾಶಯಗಳು ನಿಮಗೆ. ಅವಕಾಶವಂಚಿತ ಸಮುದಾಯದಿಂದ ಬಂದ ನೀವು ಅಂಬೇಡ್ಕರ್ ತೋರಿದ ಅಕ್ಷರದ ಬೆಳಕಿನಲ್ಲಿ ಬೆಳೆದು ಸತತವಾಗಿ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿರುವ ಹೊತ್ತಲ್ಲಿ ನಿಮ್ಮ ವೈಚಾರಿಕ ಪ್ರಬಂಧ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಾಗ ಏನನಿಸಿತು?

ಥ್ಯಾಂಕ್ಸ್ ದಾದಾಪೀರ್. ಸಂತೋಷ ಆಯ್ತು. ನನ್ನೊಳಗಿನ ಮಾಯದ ಗಾಯಕ್ಕೆ ಒಂದು ಹೂವಿನಿಂದ ನೇವರಿಸಿದ ಹಾಗಾಯ್ತು. ನೋವೇ ಸ್ಥಾಯಿಯಾದ ನನ್ನ ಸಾಹಿತ್ಯಕ್ಕೆ ಸಿಕ್ಕ ಪುರಸ್ಕಾರವಾಗಿ ನನಗೆ ಸಹಜವಾಗಿ ಖುಷಿಕೊಟ್ಟಿತು.

ನೀವು ಬರೆಯಬೇಕು ಎಂದುಕೊಂಡಾಗ ಇದ್ದ ಅವಕಾಶಗಳ ಬಗ್ಗೆ ಹೇಳಬಹುದಾ? ನೀವು ಬರೆದ ಮೊದಲ ಕವಿತೆ ಯಾವುದು? ನಿಮ್ಮನ್ನು ಬರೆಯುವಂತೆ ಮಾಡಿದ ಘಟನೆಯನ್ನು ನೆನಪಿಸಿಕೊಳ್ಳಬಹುದಾ?

ನಾನು ಮೊದಲು ಪದ್ಯ ಬರೆದಿದ್ದು ಎಸ್ಸೆಸ್ಸೆಲ್ಸಿಯಲ್ಲಿ. ಆಮೇಲೆ ಪಿಯು, ಡಿಗ್ರಿ ಅವಧಿಯಲ್ಲಿ ಕಾಲೇಜು ಮ್ಯಾಗಝಿನ್ನುಗಳಲ್ಲಿ ಒಂದಷ್ಟು ಪ್ರಕಟ ಆಗಿದ್ದವು. ಅವೆಲ್ಲ ಚಿಕ್ಕಪುಟ್ಟ ಬರಹಗಳು. ಬರವಣಿಗೆಯ ತುಡಿತ ನನ್ನೊಳಗೆ ಸದಾ ಇತ್ತು. 1984ರಲ್ಲಿ ಹುಬ್ಬಳ್ಳಿಯ ಆಫೀಸ್‌ನಲ್ಲಿದ್ದೆ. ಆಗ ನಮ್ಮ ಕಾಲದ ಒಂದು ದೊಡ್ಡ ವಿದ್ಯಮಾನವೇ ಆಗಿದ್ದ ಇಂದಿರಾಗಾಂಧಿ ಹತ್ಯೆ ಆಗಿತ್ತು. ಅಂದು ರಾತ್ರಿ ಮನೆಗೆ ಬಂದು ಧಾರವಾಡ ಆಕಾಶವಾಣಿಯಲ್ಲಿ ಶ್ರದ್ಧಾಂಜಲಿ ಪದ್ಯಗಳನ್ನು ಕೇಳ್ತಾ ಇದ್ದೆ. ನನಗ್ಯಾಕೋ ಆ ಕವಿತೆಗಳು ಅಷ್ಟು ತೃಪ್ತಿ ಕೊಡಲಿಲ್ಲ. ಅದಕ್ಕೆ ನಾನೊಂದು ಪದ್ಯ ಬರೆದೆ. ‘ಪ್ರಿಯದರ್ಶಿನಿಗೊಂದು ಶ್ರದ್ಧಾಂಜಲಿ’ ಅಂತ ಅದರ ಹೆಸರು. ನಾನು ಈಗ ಹಿಂತಿರುಗಿ ನೋಡಿದಾಗ ಅದೇ ನನ್ನ ಮೊದಲ ಕವಿತೆ ಎಂದು ಹೇಳಬಹುದೇನೋ. ಮರುದಿನವೇ ಪಾಟೀಲ ಪುಟ್ಟಪ್ಪನವರ ವಿಶ್ವವಾಣಿಯಲ್ಲಿ ಆ ಕವಿತೆ ಪ್ರಕಟ ಆಯ್ತು. ಆಗ ನಾನು ಬಿ.ಸಿ. ಸ್ವಾಮಿ ಅನ್ನುವ ಹೆಸರಿನಿಂದ ಬರೀತಾ ಇದ್ದೆ (ಇದನ್ನು ಬಹಳ ಕಡೆ ಹೇಳಿದ್ದೀನಿ. ಕ್ಷಮೆ ಇರಲಿ). ಅದಾದ ಮೇಲೆ ನಾನು ಬರೆದ ಕವಿತೆಗಳು ಪತ್ರಿಕೆಗಳಲ್ಲಿ ಪ್ರಕಟವಾಗತೊಡಗಿದವು. ನಾನು ಮೂಲತಃ ವಾಣಿಜ್ಯಶಾಸ್ತ್ರದ ಹಿನ್ನೆಲೆಯವನು. ಮೊದಮೊದಲಿಗೆ ನನ್ನಿಂದ ಇದೆಲ್ಲಾ ಸಾಧ್ಯವಾ ಎಂಬ ಹಿಂಜರಿಕೆ ಇತ್ತು. ಕನ್ನಡದಲ್ಲಿ ಎಂ.ಎ ಮಾಡಿದ ಮೇಲೆ ಆ ಹಿಂಜರಿಕೆ ಹೋಯ್ತು. ಒಂದಷ್ಟು ಕಾಲ ಆದ ಮೇಲೆ ಸ್ನೇಹಿತರ ಒತ್ತಾಯದ ಮೇರೆಗೆ ನನ್ನ ಮೊದಲ ಕವನ ಸಂಕಲನ ‘ಕೊಂಡಿಗಳು ಮತ್ತು ಮುಳ್ಳುಬೇಲಿಗಳು’ ಸಂಕಲನ ಪ್ರಕಟ ಆಯ್ತು.

ದಲಿತ ಬಂಡಾಯ ಸಾಹಿತ್ಯ ಚಳವಳಿಯ ಸತ್ವಪೂರ್ಣ ದನಿ ಅಂತಲೇ ನಿಮ್ಮನ್ನು ಗುರುತಿಸುತ್ತಾರೆ. ಈಗ ಚಳವಳಿಗಳಿಲ್ಲದ ಕಾಲ. ಆದರೆ ಹಿಂದಿನ ದಿನಗಳಿಗಿಂತಲೂ ಎಲ್ಲಾ ರೀತಿಯ ಹಿಂಸೆಗಳು ಹೆಚ್ಚುತ್ತಿರುವ ಅತ್ಯಂತ ಸಂಕೀರ್ಣ ಕಾಲಘಟ್ಟವನ್ನು ಹೇಗೆ ನೋಡಬಯಸುತ್ತೀರಿ?

ದಲಿತ ಬಂಡಾಯ ಸಂದರ್ಭದಲ್ಲಿ ಚಳವಳಿ ಮತ್ತು ಸಾಹಿತ್ಯ ಒಂದಕ್ಕೊಂದು ಪೂರಕವಾಗಿದ್ದವು. ಆದರೆ ಈಗ ಅದರ ಅಗತ್ಯ ಇದೆಯಾ ಅನ್ನೋದು ಪ್ರಶ್ನೆ! ಏಕೆಂದರೆ ಭಾರತದಲ್ಲಿ ಹುಟ್ಟುವ ಚಳವಳಿಗಳನ್ನು ಸೋಲಿಸುವ ಶಕ್ತಿ ಜಾತಿವ್ಯವಸ್ಥೆಗಿದೆ. ಜ್ಯೋತಿಬಾ ಫುಲೆ, ಅಂಬೇಡ್ಕರ್, ಬಸವಣ್ಣ, ಪೆರಿಯಾರ್, ನಾರಾಯಣ ಗುರುಗಳಂಥ ಮಹಾಪುರುಷರು ಹುಟ್ಟು ಹಾಕಿದ ಕ್ರಾಂತಿಯನ್ನು ಸೋಲಿಸಿ ಜಾತಿ ವ್ಯವಸ್ಥೆ ಅಟ್ಟಹಾಸ ಮೆರೆಯುತ್ತಿದೆ. ಬುದ್ಧನಿಗೂ ಹಿಂದಿನ ಕಾಲದಿಂದ ಜಾತಿ ವ್ಯವಸ್ಥೆ ಒಂದು ವಿಷ ಸರ್ಪದಂತೆ ಕಾಡುತ್ತಿದೆ. ಬುದ್ಧನನ್ನೇ ಬುಡಮೇಲು ಮಾಡಿದ ದೈತ್ಯ ಶಕ್ತಿ ಅದಕ್ಕಿದೆ. ಈಗಂತೂ ಎರಡು ಯುವಮನಸ್ಸುಗಳು ಪರಸ್ಪರ ಪ್ರೀತಿಸಲಾರದಷ್ಟು ವ್ಯವಸ್ಥೆ ಕೆಟ್ಟಿದೆ. ಸ್ವತಃ ಹೆತ್ತವರೇ ಅವರನ್ನು ಕೊಲ್ಲಲು ಸುಪಾರಿ ಕೊಡುವ ಹಂತಕ್ಕೆ ಸಮಾಜ ಬಂದು ನಿಂತಿದೆ. ರೈತ ಚಳವಳಿ, ಮಹಿಳಾ ಚಳವಳಿ ಮತ್ತೆ ಮತ್ತೆ ಸೋಲುತ್ತಿರುವ ಈ ಹೊತ್ತಿನಲ್ಲಿ ಪ್ರತಿಯೊಬ್ಬ ಲೇಖಕನೂ ಸಹ ಚಳವಳಿಯೋಪಾದಿಯಲ್ಲಿ ಬರೆಯಬೇಕಾದ ತುರ್ತು ಇಂದಿಗಿದೆ. ಈಗಿರುವ ಒತ್ತಾಯದ ಮೌನವನ್ನು ಮುರಿದು ಮಾತಾಡಬೇಕು. ಇಂದಿನ ಭಾರತದಲ್ಲಿ ಮಾನವೀಯತೆಯ ಕೊರತೆ ಹೆಚ್ಚುತ್ತಿರುವುದು ಢಾಳಾಗಿ ಗೋಚರಿಸುತ್ತಾ ಇದೆ. ಭಾರತವನ್ನು ಇಲ್ಲಿರುವ ಹಲವು ಧರ್ಮಗಳ, ಜಾತಿಗಳ ಹಿನ್ನಲೆಯಲ್ಲಿ ಸಮಾಜ ಶಾಸ್ತ್ರೀಯ ನೆಲೆಗಟ್ಟಿನಿಂದ ನೋಡಿದಾಗಲೇ ಇದರ ಸಂಕೀರ್ಣತೆ ನಮಗೆ ಅರ್ಥ ಆಗತ್ತೆ. ಇದೆಲ್ಲದಕ್ಕೆ ಕಾರಣ ಎಂದರೆ ನಮ್ಮ ಮಕ್ಕಳಿಗೆ ಸಂವಿಧಾನದ ಆಶಯಗಳ ಪ್ರಕಾರ ಶಿಕ್ಷಣ ದೊರೆಯದಿರುವುದು. ಅಂದರೆ ಸಮಾನತೆ, ಸೋದರತೆ ಆಧಾರದಲ್ಲಿ. ಹಾಗಾದಾಗ ಮಾತ್ರ ಅಂಬೇಡ್ಕರ್ ಹೇಳಿದ ಜಾತಿ ವಿನಾಶ ಮತ್ತು ಗಾಂಧಿ ಹೇಳಿದ ಅಸ್ಪೃಶ್ಯತೆ ನಿವಾರಣೆಯನ್ನು ಸಾಧ್ಯವಾಗಿಸಬಹುದು. ಜಾತಿಯನ್ನು ತಾರತಮ್ಯ ನೀತಿಯ ಅಡಿಯಲ್ಲಿ ತರಲು ನಮ್ಮಿಂದ ಇಂದಿಗೂ ಸಾಧ್ಯವಾಗಿಲ್ಲ. ಅಮೆರಿಕಾದ ಸಿಯಾಟಲ್ ಕೌಂಟಿಯಲ್ಲಿ ಅದು ಈಗ ಸಾಧ್ಯವಾಗಿದೆ. ಅಸಹನೆ ಮತ್ತು ಅದರ ಪರಿಣಾಮವಾಗಿ ಉತ್ಪನ್ನವಾಗುವ ಹಿಂಸೆ ಹೆಚ್ಚುತ್ತಿರುವ ಕಾಲದಲ್ಲಿ ಜಾತಿ ವಿನಾಶ ಮತ್ತು ಅಸ್ಪೃಶ್ಯತೆ ನಿವಾರಣೆಯೇ ಉತ್ತರ.

2011ರಲ್ಲಿ ಕೊಪ್ಪಳದಲ್ಲಿ ನಡೆದ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷರಾಗಿದ್ದಿರಿ. ‘ಔಟ್‌ಲುಕ್ ಇಂಗ್ಲಿಷ್ ವಾರಪತ್ರಿಕೆ ತನ್ನ ಏಪ್ರಿಲ್ 2021ರ ಅಂಬೇಡ್ಕರ್ ವಿಶೇಷ ಸಂಚಿಕೆಗಾಗಿ ನಡೆಸಿದ ಸಮೀಕ್ಷೆಯಲ್ಲಿ 'ಭಾರತವನ್ನು ಪುನರ್ನಿರ್ಮಾಣ ಮಾಡುವ 50 ದಲಿತ ಸಾಧಕರ ಪಟ್ಟಿ'ಯಲ್ಲಿ ನಿಮ್ಮ ಹೆಸರಿತ್ತು. ಅಲ್ಲದೇ ಕರ್ನಾಟಕ ವಿಚಾರವಾದಿ ವೇದಿಕೆಯ 2021ನೇ ಸಾಲಿನ ಪೆರಿಯಾರ್ ಪ್ರಶಸ್ತಿ ನಿಮಗೆ ಸಂದಿದೆ. ಸಾಮಾಜಿಕ ಬದಲಾವಣೆಗಾಗಿನ ನಿಮ್ಮ ತುಡಿತ ನಿಮ್ಮ ಸಾಹಿತ್ಯ ಪ್ರಯಾಣವನ್ನು ದಣಿವಿಲ್ಲದೆ ಮಾಡುತ್ತಾ ಬಂದಿದ್ದೀರಿ. ಅಮೃತಕಾಲದಲ್ಲಿ ಹೆಚ್ಚುತ್ತಿರುವ ಉರಿ ನಂಜುಗಳ ಹೊತ್ತಲ್ಲಿ ಇಂದಿನ ಯುವ ತಲೆಮಾರಿಗೆ ಅಂಬೇಡ್ಕರ್, ಗಾಂಧಿ, ಬುದ್ಧ ಎಲ್ಲರೂ ತಲುಪುತ್ತಿದ್ದಾರೆಯೇ? ಆ ವ್ಯವಸ್ಥೆ ಆಗುತ್ತಿದೆಯೇ? ಅಥವಾ ಅದು ಪ್ರತಿಯೊಬ್ಬ ವ್ಯಕ್ತಿಯೇ ಹುಡುಕಿಕೊಳ್ಳಬೇಕಾದ ಏಕಲವ್ಯ ಮಾದರಿಯ ಪ್ರಯಾಣವೇ?

ನೀವು ಹೇಳಿದ ಹೆಸರುಗಳು ಪ್ರಭುತ್ವಕ್ಕೆ ಪಥ್ಯವಾಗಬೇಕಲ್ಲವೆ? ಅವರ ಹೆಸರಿನಲ್ಲಿ ಕೇವಲ ಕೆಲವು ನೀತಿ ಪಾಠಗಳನ್ನು ಹೇಳಿದರೆ ಸಾಲದು. ಏಕಲವ್ಯ ಮಾದರಿ ಸರಿ, ಆದರೆ ಅದು ಎಲ್ಲರಿಗೂ ಸಾಧ್ಯ ಆಗಲಿಕ್ಕಿಲ್ಲ. ಹಾಗಾಗಿ ನಾನು ಮತ್ತೆ ಶಿಕ್ಷಣದ ಮಹತ್ವಕ್ಕೆ ವಾಪಾಸ್ ಬರ್ತೀನಿ. ಪ್ರತಿಯೊಬ್ಬ ಮಗುವನ್ನು ಜಾತ್ಯತೀತವಾಗಿ ಬೆಳೆಯುವಂತೆ ಮಾಡುವುದು ಶಿಕ್ಷಕರ ಕರ್ತವ್ಯ. ಅದಕ್ಕೆ ಸರಿಯಾದ ವ್ಯವಸ್ಥೆಯನ್ನು ರೂಪಿಸುವುದು ಸರ್ಕಾರದ ಕರ್ತವ್ಯ. ಆಮೇಲೆ ನೀವು ಹೇಳಿದ ಅಮೃತಕಾಲದ ಉರಿ, ನಂಜು, ದ್ವೇಷ, ಅಸಹನೆ, ಹಿಂಸೆ, ಸುಳ್ಳುಗಳು ಜಾಸ್ತಿ ಕಾಲ ನಿಲ್ಲುವುದಿಲ್ಲ. ಸುಳ್ಳು ಜನರಿಗೆ ಒಂದಲ್ಲ ಒಂದು ದಿನ ತಿಳಿಯುತ್ತದೆ. ಸ್ವಾತಂತ್ರ‍್ಯ, ಜಾತ್ಯತೀತತೆ, ಸಮಾನತೆ, ಭ್ರಾತೃತ್ವಗಳನ್ನು ಮೂಲದ್ರವ್ಯವಾಗಿಸಿಕೊಳ್ಳದ ಶಿಕ್ಷಣದಿಂದ ಏನೂ ಪ್ರಯೋಜನವಾಗುವುದಿಲ್ಲ.

ಕನ್ನಡದ ಈ ಹೊತ್ತಿನ ದಲಿತ ಸಂವೇದಿ ಕಥೆಗಳು ಅಥವಾ ದಲಿತ ಕಥನಗಳು ಇಂದಿನ ಹೊಸ ಯುಗದಲ್ಲಿನ ಹೊಸ ರೂಪದಲ್ಲಿ ಆಗುತ್ತಿರುವ ಶೋಷಣೆಯನ್ನು ಹಿಡಿಯುವಲ್ಲಿ ಯುವತಲೆಮಾರಿನ ಲೇಖಕರು ಸಫಲರಾಗಿದ್ದಾರೆ ಎಂದು ಅನಿಸುತ್ತದೆಯೇ?

ನಮ್ಮ ಕಾಲದಲ್ಲಿ ದಲಿತ ಬಂಡಾಯ ಚಳವಳಿ ಸಮಾಜಕ್ಕೆ ಔಷಧಿಯೋಪಾದಿಯಾಗಿ ಬಂದಿತು. ಇಡೀ ಜಗತ್ತಿನ ಕಣ್ಣು ತೆರೆಸಿತು. ಈವತ್ತು ಬರೀತಾ ಇರುವ ದಲಿತ ಕಥನಕಾರರಾಗಿರಲಿ, ನಾಟಕಕಾರರಾಗಿರಲಿ ಅಥವಾ ದಲಿತ ಕವಿಗಳಾಗಿರಲಿ ಅವರು ಸಮರ್ಥವಾಗಿಯೇ ಅಭಿವ್ಯಕ್ತಿಸುತ್ತಾ ಇದ್ದಾರೆ. ಆದರೆ ಅವೆಲ್ಲೋ ಬರಿ ಕಲೆಯ ಚೌಕಟ್ಟುಗಳಲ್ಲೇ ಬಂದಿಯಾಗಿ ಉಳಿದುಬಿಡುತ್ತಿವೆ ಅನಿಸುತ್ತದೆ. ಆ ಕಲಾಕೃತಿಗಳಿಗೆ ಸಮಾಜವನ್ನು ಬದಲಿಸುವ ಮಹತ್ತರವಾದದ್ದು ಏನೋ ದಕ್ಕುತ್ತಿಲ್ಲ. ಅದು ಕಾಲದ ಚಮತ್ಕಾರವೂ ಆಗಿರಬಹುದು.

ಕವಿತೆ, ಕತೆ, ನಾಟಕ, ಪ್ರಬಂಧ, ಸಂಪಾದನೆ ಹೀಗೆ ಹಲವಾರು ಪ್ರಕಾರಗಳಲ್ಲಿ ನಿಮ್ಮ ನಲವತ್ತಕ್ಕೂ ಹೆಚ್ಚು ಕೃತಿಗಳು ಪ್ರಕಟವಾಗಿವೆ. ‘ಹೊಳೆದದ್ದು ಈ ಹಾದಿಗೆ’ ಅಥವಾ ‘ಈ ಹಾದಿಗೆ ಈ ಹೊಳಹಿನ ಯಾತ್ರೆ’ ಅಂತ ನಿಮಗೆ ತಿಳಿಯುವ ಕ್ಷಣ ಯಾವುದು? ಅಥವಾ ನೀವು ಮೊದಲೇ ಪ್ರಕಾರ ನಿರ್ಧರಿಸಿಕೊಂಡು ಬರೆಯುತ್ತಿರಾ? ಅಥವಾ ಇವೆರಡರ ನಡುವಿನ ಜೋಕಾಲಿ ಜೀಕುವಿಕೆಯ ಮಾದರಿಯೇ?

ಕವಿತೆಯನ್ನು ಅದು ತಾನಾಗೇ ಬಂದಾಗ ಮಾತ್ರ ಬರೆಯೋಕೆ ಸಾಧ್ಯ. ಒತ್ತಡದಲ್ಲಿ ಕವಿತೆ ಹುಟ್ಟುವುದಿಲ್ಲ. ಆದರೆ ಲೇಖನಗಳನ್ನ ಬರೆಯುವಾಗ ಒಳಗಿನ ಮತ್ತು ಹೊರಗಿನ ಒತ್ತಡ ಎರಡೂ ಇರುತ್ತೆ. ಹೊರಗಿನ ಒತ್ತಡ ಅಂದರೆ ಪತ್ರಿಕೆಗಳು ಅಥವಾ ಇತರರು ಲೇಖನ ಬೇಕು ಎಂದಾಗ ಬರೆಯುವುದು. ಆದರೆ ನಾನು ಸುಧಾ ವಾರಪತ್ರಿಕೆಗೆ ಬರೆದ ಲೇಖನಗಳ ಸಂಗ್ರಹ ‘ಬಹುತ್ವ ಭಾರತ ಮತ್ತು ಬೌದ್ಧ ತಾತ್ವಿಕತೆ’ ಮಾತ್ರ ಸಂಪೂರ್ಣ ಒಳಗಿನ ಒತ್ತಡದಿಂದಲೇ ಬರೆದಿದ್ದು. ತುಂಬಾ ಧ್ಯಾನಿಸಿ ಬರೆದ ಕಾರಣವಾಗಿಯೇ ಅದಕ್ಕೆ ಅಷ್ಟೊಂದು ಮನ್ನಣೆ ಸಿಕ್ಕಿತು ಅನಿಸಿದೆ. ಕಥೆಗಳು ಮಾತ್ರ ಮತ್ತೆ ಮತ್ತೆ ಕಾಡುವ ನನ್ನ ಹಳ್ಳಿಯ ಪರಿಸರ ಜೀವನದ ಅಚ್ಚಳಿಯದೆ ಕೂತ ಚಿತ್ರಳಿಂದಾಗಿ ಬಂದವು.

ನೀವು ನಾಟಕಗಳನ್ನು ಕೂಡ ಬರೆದಿರಿ. ನಿಮ್ಮನ್ನು ರಂಗಭೂಮಿಯ ಕಡೆಗೆ ಸೆಳೆದಿದ್ದು ಯಾವುದು?

ನಾನು ಮೈಸೂರಿಗೆ ಹೋದಾಗ ಪ್ರಸನ್ನ ಅವರ ಸ್ನೇಹ ಉಂಟಾಯಿತು. ಅವರಾಗ ರಂಗಾಯಣದ ನಿರ್ದೇಶಕರಾಗಿದ್ದರು. ಬಹುರೂಪಿ ಉತ್ಸವದ ಮೊದಲ ಆವೃತ್ತಿಗೆ ನನಗೆ ನಾಟಕ ಬರೆದು ನಿರ್ದೇಶಿಸುವಂತೆ ಹೇಳಿದರು. ಸಾಮಾಜಿಕ ನ್ಯಾಯ ಅದರ ಥೀಮ್ ಆಗಿತ್ತು. ಹಾಗಾಗಿ ನಾನು ಪಂಪನಿಂದ ಹಿಡಿದು ಸಿದ್ದಲಿಂಗಯ್ಯ ಅವರತನಕ ಇದ್ದ ಪ್ರತಿಭಟನಾತ್ಮಕ ಕಾವ್ಯಭಾಗಗಳನ್ನು ತೆಗೆದುಕೊಂಡು ಅದೊಂದು ನೃತ್ಯರೂಪಕವಾಗಿಸಿ ‘ಬಹುರೂಪಿ’ ಹೆಸರಿನಲ್ಲೇ ರಂಗಾಯಣದ ರೆಪರ್ಟರಿಗೆ ನಿರ್ದೇಶಿಸಿದೆ. ಅದು ಯಶಸ್ವಿಯೂ ಆಯಿತು. ಅನೇಕ ಬೀದಿನಾಟಕಗಳನ್ನೂ ಬರೆದೆ. ಕೆಂಡಮಂಡಲ ಅನ್ನುವ ನಾಟಕವನ್ನೂ ಬರೆದೆ. ಎರಡು ನಾಟಕ ಮುಗಿಸುವ ಹೊತ್ತಿಗೆ ದಣಿವು ಎನಿಸಿ ಆ ಕ್ಷೇತ್ರ ಬಿಟ್ಟೆ.

ನಿಮ್ಮ ವೃತ್ತಿ ನಿಮ್ಮ ಬರವಣಿಗೆಗೆ ಸಹಾಯ ಮಾಡಿತೇ? ಯಾವ ರೀತಿ? ಇಲ್ಲವಾದರೆ ನಿಮ್ಮೊಳಗೂ ಬೇರೆ ವೃತ್ತಿಗಳನ್ನು ಮಾಡಿಕೊಂಡು ಬರೆಯುತ್ತಿರುವ ನಮ್ಮ ಹಾಗೆ ಎರಡು ಲೋಕಗಳು ಇದ್ದವೇ? ಎರಡನ್ನೂ ನೀವು ಹೇಗೆ ತೂಗಿಸುತ್ತಿದ್ದಿರಿ?

ಪ್ರತಿಯೊಬ್ಬ ಮನುಷ್ಯನಲ್ಲೂ ಖಾಸಗಿ ಜೀವನ ಮತ್ತು ಸಾರ್ವಜನಿಕ ಜೀವನ ಅಂತ ಇರುತ್ತೆ. ಇದೊಂದು ತರಹ ಅಂತರಂಗ ಬಹಿರಂಗಗಳ ಪ್ರತಿರೂಪದ ಹಾಗೆ! ಹೊಟ್ಟೆಪಾಡಿಗಾಗಿ ನಾವು ವೃತ್ತಿ ಮಾಡುತ್ತಿದ್ದರೂ ನಮ್ಮೊಳಗೇ ಒಂದು ಕಾಳಜಿ, ಕಲೆ, ಸೃಜನಶೀಲತೆ, ಮಮಕಾರ, ತುಡಿತ ಇರುತ್ತದೆ. ಅದು ನಮ್ಮೊಳಗೆ ಇರುವ ಅದೆಷ್ಟೋ ಲೋಕಗಳಲ್ಲಿ ಸದಾ ಸಂಚಾರ ಮಾಡುತ್ತಾ ಇರುತ್ತದೆ. ಅದೇ ನನ್ನ ಬರವಣಿಗೆಯಾಗಿ ಮೂಡಿದೆ. ಅದಕ್ಕೆ ಜೀವಸತ್ವವಾಗಿ ಸಿಕ್ಕಿದ್ದು ಅಂಬೇಡ್ಕರ್, ಬಸವಣ್ಣ ಮತ್ತು ಬುದ್ಧ ತೋರಿದ ಬೆಳಕು. ಕೈಹಿಡಿದಿದ್ದು ಕಲೆ. ನನ್ನ ಭಾಷೆ. ನನ್ನ ಚಾಮರಾಜನಗರದ ಭಾಷೆಯಿಂದ ಜೀವಪೋಷಕತೆಯನ್ನು ಪಡೆದುಕೊಂಡಿರುವೆ. ಮಂಟೇಸ್ವಾಮಿ, ಮಹದೇಶ್ವರ ಕಾವ್ಯ ನನ್ನನ್ನು ಪ್ರಭಾವಿಸಿವೆ. ಹೀಗೆ ನನ್ನೊಳಗಿನ ಖಾಸಗಿ ವ್ಯಕ್ತಿ ನನ್ನಿಂದ ಇಷ್ಟೆಲ್ಲಾ ಮಾಡಿಸುತ್ತಿದ್ದಾನೆ.

ನಿಮ್ಮನ್ನು ಆಳವಾಗಿ ಪ್ರಭಾವಿಸಿದ ಬರಹಗಾರರು ಅಥವಾ ವ್ಯಕ್ತಿಗಳು ಯಾರು?

ನನ್ನ ತಾಯಿ ಗೌರಮ್ಮ. ಅವರು ರೂಪಕಗಳಲ್ಲೇ ಮಾತಾಡ್ತಿದ್ರು. ಮಾತು ಮಾತಿಗೂ ಒಂದು ಗಾದೆ ಹೇಳೋರು. ನಮಮ್ಮ ಕೇವಲ ನಾಲ್ಕನೇ ಕ್ಲಾಸ್ ಓದಿದ್ದಾದ್ರೂ ಆ ಜನಪದರ ಜೀವನವೇ ಹೇಗೆ ಕಾವ್ಯಾತ್ಮಕವಾಗಿತ್ತು ಅನ್ನೋದು ನನ್ನ ತಾಯಿಯಿಂದಾಗಿ ನನಗೆ ಕಾಣಿಸಿತು.

ಯುವ ಬರಹಗಾರರಿಗೆ ಎದುರಾಗುವ ಸಮಸ್ಯೆಯೆಂದರೆ ತಾವು ಓದಿಕೊಂಡ ಸಾಹಿತ್ಯ ಪರಂಪರೆಯ ಪೂರ್ವಸೂರಿಗಳ ಪ್ರಭಾವಳಿಯಿಂದ, ಶೈಲಿಯಿಂದ ಪ್ರಜ್ಞಾಪೂರ್ವಕವಾಗಿ ಬಿಡಿಸಿಕೊಳ್ಳುವ ಸವಾಲು. ಇದು ನಿಮಗೂ ಎದುರಾಗಿತ್ತೆ? ನೀವು ಇಂತಹ ಸವಾಲನ್ನು ಹೇಗೆ ನಿಭಾಯಿಸಿದಿರಿ?

ನಾನು ಅಕಾಡೆಮಿಕ್ ಹಿನ್ನೆಲೆಯಿಂದ ಬಂದವನಲ್ಲ. ನಾನು ನವ್ಯ ಅಥವಾ ನವ್ಯೋತ್ತರ ಸಾಹಿತ್ಯ ಓದುವಾಗ ಅಲ್ಲಿ ನನಗೆ ನನ್ನ ಬರವಣಿಗೆಗೆ ಹೊಳಹುಗಳು, ಕವಲುಗಳು, ಕಿಡಿಗಳು, ಟಿಸಿಲುಗಳು ಕಾಣಿಸಿಕೊಳ್ಳುತ್ತಿದ್ದವು. ಅವುಗಳನ್ನು ಹಿಡಿಯಲು ನನಗೆ ಸಾಧ್ಯ ಆಗ್ತಾ ಇತ್ತು ಮತ್ತು ನನ್ನದೇ ಶೈಲಿ ನನಗೆ ಸಿಕ್ಕಿತು. ಹಲವು ವಿಮರ್ಶಕರು ಅದನ್ನು ಗುರುತಿಸಿದ್ದಾರೆ.

‘ಕಲೆಗಾಗಿ ಕಲೆ’ ಎನ್ನವ ವಿಚಾರವನ್ನು ನೀವು ಒಪ್ಪುತ್ತೀರಾ?

ನನಗೆ ‘ಕಲೆಗಾಗಿ ಕಲೆ’ ಎನ್ನುವುದರಲ್ಲಿ ನಂಬಿಕೆಯಿಲ್ಲ. ‘ಬದುಕಿಗಾಗಿ ಕಲೆ’ ಎಂಬುದನ್ನು ಹೆಚ್ಚು ನಂಬುತ್ತೇನೆ

ನಿಮ್ಮ ಕವಿತೆಗಳು ಭಾರತೀಯ ಭಾಷೆಗಳಷ್ಟೇ ಅಲ್ಲದೆ ಇಂಗ್ಲಿಷ್, ಸ್ಪ್ಯಾನಿಷ್, ಫ್ರೆಂಚ್ ಸೇರಿದಂತೆ ಹಲವಾರು ಭಾಷೆಗಳಿಗೆ ಅನುವಾದಗೊಂಡಿವೆ. ಹಾಗೆ ಅನುವಾದಗೊಂಡ ಕವಿತೆಗಳನ್ನು ಅಲ್ಲಿನ ಜನ ಹೇಗೆ ಸ್ವೀಕರಿಸಿದ್ದಾರೆ? ಹಾಗೆಯೇ ‘ನಾನೊಂದು ಮರವಾಗಿದ್ದರೆ’, ‘ಎಲುಬಿನ ಹಂದರದೊಳಗೆ’ ಮಕ್ಕಳ ಬಾಯಲ್ಲಿ ಸದಾ ಇರುವ ಪದ್ಯಗಳು. ಆ ಪದ್ಯಗಳು ನನ್ನ ಅರಿವನ್ನು ತಿದ್ದಿದ ಪದ್ಯಗಳು ಕೂಡ. ಥ್ಯಾಂಕ್ಸ್ ನಿಮಗೆ. ಈ ರೀತಿ ಯಾವುದೋ ಮಗು ನಿಮಗೆ ಬಂದು ಆ ಕವಿತೆಯ ಬಗ್ಗೆ ಮಾತನಾಡಿದ ಅನುಭವ ಇದ್ದರೆ ಹೇಳಿ.

ಕಾವ್ಯ ಭಾಷಾತೀತವಾಗಿ, ಸೀಮಾತೀತವಾಗಿ ಎಲ್ಲರನ್ನು ತಟ್ಟುತ್ತದೆ. ಸೌತ್ ಅಮೆರಿಕದಲ್ಲಿ ಸ್ಪ್ಯಾನಿಷ್ ಭಾಷೆಯ ಜನರೇ ಇದ್ದ ಒಂದು ಕಾವ್ಯಗೋಷ್ಠಿಯಲ್ಲಿ ನಾನು ‘ನಾನೊಂದು ಮರವಾಗಿದ್ದರೆ’ ಕವಿತೆಯನ್ನು ಕನ್ನಡದಲ್ಲಿಯೇ ಓದುತ್ತಿದ್ದೆ. ಸ್ಪ್ಯಾನಿಷ್‌ನಲ್ಲಿ ನನ್ನ ಅನುವಾದಕಿ ರೊವೀನಾ ಹಿಲ್ ಓದುತ್ತಿದ್ದರು. ಗೋಷ್ಠಿಯ ನಂತರ ಕೇಳುಗರು ಬಂದು ವಿಷಣ್ಣ ಭಾವದಿಂದ ‘ನಾವು ನಿಮ್ಮನ್ನು ಮುಟ್ಟಬಹುದೇ’ ಎಂದು ಕೇಳುತ್ತಿದ್ದರು ಮತ್ತು ಮುಟ್ಟಿ ಪ್ರೀತಿಯಿಂದ ತಬ್ಬಿಕೊಳ್ಳುತ್ತಿದ್ದರು. ಇದು ಮೆರಿಡಾ ವಿಶ್ವವಿದ್ಯಾಲಯದಲ್ಲಿ ಆದ ಘಟನೆ. ಕೆಲವು ಸಮಾರಂಭಗಳಲ್ಲಿ ಪೋಷಕರು ತಮ್ಮ ಮಕ್ಕಳನ್ನು ಕರೆದುಕೊಂಡು ಬಂದು ‘ಇವನಿಗೆ ಪದ್ಯ ಇಷ್ಟ ಆಗಿದೆ. ನಿಮ್ಮತ್ರ ಮಾತಾಡೋದಕ್ಕೆ ಹಿಂಜರಿತ ಇದಾನೆ’ ಎಂದು ಪರಿಚಯಿಸಿದ್ದಾರೆ. ಶಾಲಾ ಮೇಷ್ಟ್ರುಗಳು ಮಕ್ಕಳ ಹತ್ತಿರ ಫೋನಿನಲ್ಲಿ ಮಾತಾಡಿಸಿದ್ದಾರೆ. ಇವೆಲ್ಲಾ ಯಾವ ಪ್ರಶಸ್ತಿಗಿಂತಲೂ ಕಡಿಮೆಯೇನಲ್ಲ ಎನಿಸಿವೆ.

ಇಂದು ಅತೀವ ಸ್ಪರ್ಧೆಗಳ ಕಾಲದಲ್ಲಿ ನಾವಿದ್ದೇವೆ? ಸ್ಪರ್ಧೆಗಳು ಸರ್ವರಿಗೂ ಮುಕ್ತ ಅವಕಾಶಗಳ ಬಾಗಿಲನ್ನು ತೆರೆಯುತ್ತಿವೆ. ಅದೇ ಹೊತ್ತಿನಲ್ಲಿ ಸ್ಪರ್ಧೆಯ ವೇಗದಲ್ಲಿ ಒಳಗಿನಿಂದ ಹುಟ್ಟಬೇಕಾದ, ಕಲೆಯ ಸತ್ವದಿಂದ ಮೈದಳೆಯಬೇಕಾದದ್ದು ಕಳೆದುಹೋಗುತ್ತಿದೆಯೇನೋ ಎಂದು ಕೂಡ ಅನಿಸುತ್ತದೆ. ಯುವ ತಲೆಮಾರು ಕೂಡ ಗೊಂದಲದಲ್ಲಿದೆ. ಇದರ ನಡುವೆ ಸ್ಪರ್ಧೆಗಳು ನಿಗದಿ ಮಾಡುವ ಮೊತ್ತದ ನಡುವೆಯೇ ಮದುವೆ ಮುಯ್ಯಿಯ ತರಹದ ಸ್ಪರ್ಧೆ ಇದೆ. ಈ ಸ್ಪರ್ಧೆ, ಪ್ರಶಸ್ತಿಗಳನ್ನು ನೀವು ಹೇಗೆ ನೋಡುತ್ತೀರಿ?

ಸ್ಪರ್ಧೆ ಒಂದು ಮಟ್ಟದವರೆಗೂ ಒಳ್ಳೆಯದೇ. ಅದು ಯುವಕರಲ್ಲಿ ಬರೆಯುವಂತೆ ಪ್ರೇರೇಪಣೆ ನೀಡುತ್ತದೆ. ಆದರೆ, ಸ್ಪರ್ಧೆ ಆಯೋಜಿಸುತ್ತಿರುವವರ ನಡುವೆಯೇ ಏರ್ಪಡುತ್ತಿರುವ ಸ್ಪರ್ಧೆ ಅಪಾಯಕಾರಿ. ಅಲ್ಲಿ ಬರವಣಿಗೆ ಮುಖ್ಯವಾಗದೆ ಅದನ್ನು ತಮ್ಮ ಬ್ರಾಂಡಿಗೆ ಬಂಡವಾಳವಾಗಿ ನೋಡುವ ನಿಲುವುಗಳು ಗೋಚರಿಸತೊಡಗಿದಾಗ ಕಿರಿಕಿರಿಯೆನಿಸುತ್ತದೆ. ಬರವಣಿಗೆ ಕೇವಲ ಪ್ರಚಾರ ಸಾಮಗ್ರಿ ಆಗಬಾರದು. ಧಾವಂತದಲ್ಲಿ ಬಹಳಷ್ಟು ಕಳೆದುಹೋಗಿಯೇ ಹೋಗುತ್ತದೆ. ಧಾವಂತದಿಂದ ತಮ್ಮ ಬರಹವನ್ನು ಉಳಿಸಿಕೊಳ್ಳಬೇಕಾದ್ದು ಲೇಖಕರಿಗಿರಬೇಕಾದ ಎಚ್ಚರ.

ಈ ಹೊತ್ತಿನ ತಲ್ಲಣಗಳನ್ನು ಹೇಳಲು ನಮಗೆ ಶಕ್ತವಾದ ಭಾಷೆ ಇದೆ ಎಂದು ನಿಮಗನಿಸುತ್ತದೆಯೇ?

ಭಾಷೆ ಒಂದು ನದಿಯ ಹಾಗೆ. ಅದಕ್ಕೊಂದು ಚಲನಶಕ್ತಿ ಇದೆ. ಅದು ತನ್ನನ್ನು ತಾನು ವಿಸ್ತರಿಸಿಕೊಂಡು ಬೆಳೆಯುತ್ತಿರುತ್ತದೆ. ಮಾತೃಭಾಷೆಯಲ್ಲಿ ಬರೆಯುವ ಲೇಖಕನಿಗೆ ಎಂಥದೇ ತಲ್ಲಣದ ಅಭಿವ್ಯಕ್ತಿ ಖಂಡಿತಾ ಸಾಧ್ಯ. ಅದಕ್ಕೆ ಲೇಖಕ ತನ್ನ ಗಮನಶಕ್ತಿಯನ್ನು ಹರಿತಗೊಳಿಸಿಕೊಳ್ಳುತ್ತಿರಬೇಕು.

ಇವತ್ತಿನ ವಿಮರ್ಶೆಯ ಬಗ್ಗೆ ನಿಮಗೆ ಏನನಿಸತ್ತೆ? ನಿಮ್ಮ ಕೃತಿಗಳಿಗೆ ಸಲ್ಲಬೇಕಾದ ವಿಮರ್ಶೆ ಆಗಿದೆ ಎಂದು ನಿಮಗೆ ಖುಷಿ ಇದೆಯೇ? ಮಾರ್ಕ್ವೆಜ್ ಮುಂತಾದ ಲೇಖಕರು ಕೂಡ ತಮ್ಮ ಕೃತಿಗಳಿಗೆ ಬಂದ ವಿಮರ್ಶೆ ಕುರಿತು ಅಸಮಾಧಾನ ಹೊಂದಿದ್ದರು.

ನನ್ನ ಸಾಹಿತ್ಯ ಕುರಿತು ಅನೇಕರು ಬರೆದಿದ್ದಾರೆ. ಎರಡು ಮೂರು ಕೃತಿಗಳು ಬಂದಿವೆ. ಆ ವಿಷಯವಾಗಿ ನನಗೆ ಖುಷಿ ಇದೆ. ಅತೃಪ್ತಿಯೇನಿಲ್ಲ. ಅದನ್ನು ಮೀರಿ ಹೇಳುವುದಾದರೆ ನಾನು ವಿಮರ್ಶೆಗೆ ಅಷ್ಟು ತಲೆಕೆಡಿಸಿಕೊಳ್ಳುವುದಿಲ್ಲ. ನನ್ನ ಬರಹ ಹೃದಯವಂತರಾಗಿರುವ ಎಲ್ಲರನ್ನೂ ತಟ್ಟುತ್ತದೆ ಎನ್ನುವ ಆತ್ಮವಿಶ್ವಾಸ ನನಗಿದೆ. ಭೂಮಂಡಲದ ಈ ಕಡೆಯ ವ್ಯಕ್ತಿ ಮತ್ತೊಂದು ಕಡೆಯ ವ್ಯಕ್ತಿಗೆ ಕಾವ್ಯದ ಮೂಲಕ ತಲುಪುತ್ತಾನೆ ಮತ್ತು ಅದು ಅವನಿಗೆ ತಟ್ಟುತ್ತದೆ ಎನ್ನುವುದೇ ಸೋಜಿಗವೆನಿಸುತ್ತದೆ ನನಗೆ!

ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರಿಗೆ ಕಾವ್ಯಮೀಮಾಂಸೆಗೆ ಮತ್ತು ಪುತಿನ ಅವರಿಗೆ ಪ್ರಬಂಧಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿತ್ತು. ನಿಮಗೂ ಕೂಡ ಗದ್ಯ ಕೃತಿಗೆ ಪ್ರಶಸ್ತಿ ಸಂದಿದೆ. ನಿಮಗೆ, ಓದುಗರಿಗೆ ಅನಿಸುವಂತೆ ಕಾವ್ಯಕ್ಕೆ ಸಲ್ಲಬೇಕಿತ್ತು ಎನಿಸುತ್ತಿರುತ್ತಿದೆಯೇ?

ಜಗತ್ತಿನಲ್ಲಿ ತೀವ್ರವಾದ ಸಂವೇದನೆಗಳೆಲ್ಲವೂ ಕಾವ್ಯವೇ ದಾದಾಪೀರ್! ಪಾಲಿ ಸಾಹಿತ್ಯ ಅಂದರೆ ಬೌದ್ಧ ಸಾಹಿತ್ಯ ಕಾವ್ಯವೇ. ಹಾಗಾಗಿ ನನಗೆ ಕಾವ್ಯಕ್ಕೆ ಬಂದಿದ್ದರೆ ಆಗುವಷ್ಟೇ ಖುಷಿಯಾಗಿದೆ.

ನಿಮ್ಮ ಮುಂದಿನ ಯೋಜನೆಗಳೇನು?

‘ಸಂವಾದ’ ಪತ್ರಿಕೆಗೆ ಬರೆಯುತ್ತಿದ್ದ ಬೌದ್ಧ ಧರ್ಮದ ಸರಳವಾದ ನಿರೂಪಣೆ ಇರುವ ಸುಮಾರು 50 ಲೇಖನಗಳನ್ನೊಳಗೊಂಡ 'ಧಮ್ಮಯಾನ' ಅನ್ನುವ ಕೃತಿ ಅಚ್ಚಾಗಬೇಕಿದೆ. ಮತ್ತು ಒಂದು ಪ್ರವಾಸಕಥನವನ್ನು ಪ್ರಕಟಿಸಬೇಕೆನ್ನುವ ಯೋಜನೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT