ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಷಧಾರೆಯ ಹಾದಿಯಲ್ಲಿ

Last Updated 23 ಮೇ 2020, 19:30 IST
ಅಕ್ಷರ ಗಾತ್ರ

ನಮಗೀಗ ದೊರಕಿರುವ ಸಾವಿರಾರು ಶಾಸನಗಳಲ್ಲಾಗಲಿ, ನೂರಾರು ಹಳಗನ್ನಡ ಕಾವ್ಯಗಳಲ್ಲಾಗಲಿ ಮಳೆಯ ವಿವರಗಳು ಕಡಿಮೆ. ಆದರೆ, ಜಾನಪದ ಜಗತ್ತಿನಲ್ಲಿ ಮಳೆಯನ್ನು ಕುರಿತಾಗಿ ಕಥೆ, ಕಥನ, ನಂಬಿಕೆ, ಆಚರಣೆ, ಸಂಪ್ರದಾಯ ಮತ್ತು ಗಾದೆಗಳು ಅಷ್ಟೇ ವಿಪುಲವಾಗಿರುತ್ತದೆ. ಹೀಗೇಕೆ ಎಂಬುದಕ್ಕೆ ವ್ಯಾಖ್ಯಾನ ಬೇಕಿಲ್ಲ. ಶಾಸನಗಳೂ, ಕಾವ್ಯಗಳೂ ಬಹುಮಟ್ಟಿಗೆ ಅರಮನೆಗೆ ಸಂಬಂಧಪಟ್ಟವು. ಹಾಗೆ ನೋಡಿಕೊಂಡರೆ ಅರಮನೆಯ ಚಟುವಟಿಕೆಗಳಿಗೆ ಮಳೆ ತೊಂದರೆಯನ್ನೇ ಕೊಟ್ಟಿರುವುದುಂಟು.

ಆಯುಧಗಳನ್ನು ಹರಿತ ಮಾಡುವಂತಿಲ್ಲ. ಯುದ್ಧ ಪ್ರಯಾಣ ಕೈಗೊಳ್ಳುವಂತಿಲ್ಲ, ಇದರೊಂದಿಗೆ ರಾಜರು‘ನಾನಾ ವಿಧದ’ ಬೇಟೆಗೆ ಹೊರಡುವಂತಿಲ್ಲ! ಹೀಗಾಗಿ ಅರಮನೆಯ ಕಥನ ಕಾವ್ಯಗಳು ಮಳೆಯ ಆಗಮನ ಕುರಿತು ಹೆಚ್ಚು ಮಾತನಾಡುವುದಿಲ್ಲ. ಹೆಚ್ಚೆಂದರೆ ಋತುಮಾನ ಸಂದರ್ಭ ಬಂದಾಗ ಅದರ ವಿವರ ಹಾದು ಹೋಗುತ್ತದಷ್ಟೆ. ಮಳೆಯಿಲ್ಲದೆ ಜನಪದರ ಬದುಕೇ ಇಲ್ಲ. ಶತಮಾನಗಳಿಂದ ಭಾರತದ ಲಕ್ಷಾಂತರ ಹಳ್ಳಿಗಳು ನೀರನ್ನೇ ನಂಬಿಕೊಂಡು ಬಂದಿವೆ. ಈ ಮಳೆಯ ನೆರವಿನಿಂದ ಒದಗುವ ಜಲಸಮೃದ್ಧಿ, ಧಾನ್ಯ ಸಮೃದ್ಧಿ ಮಾತ್ರ ನಿರಾತಂಕವಾಗಿ ಸಾಗಿಬರುವುದು ಪಟ್ಟಣಗಳ ಕಡೆಗೆ ಎಂಬುದು ಎಲ್ಲ ಕಾಲದ ಸಂಗತಿ.

‘ಭತ್ತ ಬಿತ್ತಿ ಅನ್ನ ಕಾಣೆ

ಹತ್ತಿ ಬಿತ್ತಿ ಬಟ್ಟೆ ಕಾಣೆ

ಕಟ್ಟೊ ಗುಡಿಗೆ ಕಲ್ಲು ಹೊತ್ತು ದೇವರ ಕಾಣೆ’

ಎಂಬುದು ಗ್ರಾಮೀಣರ ಸ್ಥಿತಿ-ಗತಿ. ಇಷ್ಟಾಗಿ ಬದುಕಿರುವವರೆಗೆ ಮಳೆರಾಯನ ನಿರಂತರ ನಿರೀಕ್ಷೆಯಲ್ಲಿ ತನ್ನದೇ ಕಾಯಕ, ಕಲೆ, ಪದ ಇವನ್ನು ರೂಢಿಸಿಕೊಂಡು ತಮ್ಮನ್ನು ಆಳುವ ರಾಜರು, ಮಂತ್ರಿಗಳು ಯಾರು ಎಂಬುದನ್ನೇ ಅರಿಯದೆ ತಮ್ಮ ಪಾಡಿಗೆ ತಾವು ಸರಳ ಬದುಕಿನ ಹಿರಿಯರಾಗಿ ಬದುಕುತ್ತಿದ್ದ ರೈತರು ಇಂದು ಆಧುನಿಕ ಜಗತ್ತಿನ ಎದುರು ನಿಲ್ಲಲಾರದೆ ತತ್ತರಿಸಿ ಬೀಳುತ್ತಿದ್ದಾರೆ.

ಈ ಮೇಲಿನ ಸಂಗತಿ ಏನೇ ಇರಲಿ. ಇದೀಗ ಬೇಸಿಗೆಯ ದಿನಗಳ ಕಡೆ ಹಾಯುತ್ತ, ಜಾಗತಿಕ ರೋಗ ಬಾಧೆ ಎದುರಾಗುತ್ತ ಅದರ ನಡುವೆ ವರ್ಷಋತು ಕಾಲಿಡುತ್ತಿದೆ. ಪ್ರಕೃತಿಯದೇ ಒಂದು ಭಾಗ ರೋಗಬಾಧೆ. ಮನುಷ್ಯ ತಾನೇ ತನ್ನದೇ ಅವಾಂತರಗಳಿಂದ ಸೃಷ್ಟಿಸಿಕೊಳ್ಳುವ ರೋಗಗಳಿಂದ ಅಷ್ಟು ಭಯ ಪಡಲಾರ. ಆದರೆ ಪ್ರಕೃತಿಯೇ ಹುಟ್ಟಿ ಹಾಕುವ ಸಾರ್ವತ್ರಿಕ ಸಾಂಕ್ರಮಿಕ ರೋಗದೆದುರು ನಿಲ್ಲಲಾರ! ಸಾವು, ಸಂಕಟ ತನಗಲ್ಲ, ಅದೇನಿದ್ದರೂ ಇತರರಿಗೆ ಮಾತ್ರ. ನನ್ನ ಘನತೆ, ಸಾಮರ್ಥ್ಯ, ಸಂಪತ್ತಿನ ಎದುರು ಮತ್ತೊಬ್ಬರು ನಿಲುವುದುಂಟೇ ಎನ್ನುವ ಶ್ರೀಮಂತ ಮನುಷ್ಯ ಜಗತ್ತು ಬಾಯಿ ಮುಚ್ಚಿಕೊಂಡು ಕೂತಿದೆ.

ಮುಗ್ಧ ಪ್ರಾಣಿಗಳು, ಪಕ್ಷಿಗಳು ನಿರಾತಂಕವಾಗಿ ಓಡಾಡುತ್ತಿವೆ. ಬಹುಪಾಲು ಪಟ್ಟಣಗಳಿಗೇ ಸೀಮಿತವಾಗಿರುವ ಈ ಹೊತ್ತಿನ ರೋಗದ ಭಯವೇನೂ ಇಲ್ಲದ ಗ್ರಾಮೀಣ ರೈತರು ಮಳೆಯನ್ನು ನಿರೀಕ್ಷಿಸುತ್ತಿದ್ದಾರೆ. ರೈತರು ಮಳೆಯೊಡನೆ ಆಡುವ ಜೂಜು ಇದೆಯಲ್ಲ ಅದು ಅತ್ಯಂತ ಕಠಿಣವಾದದ್ದು. ಈ ಹಿನ್ನೆಲೆಯಲ್ಲೇ ಜನಪದರು ಕಾಲಕಾಲದ ಮಳೆಗಳಿಗೆಲ್ಲ ಒಂದೊಂದು ಹೆಸರಿಟ್ಟು ಅದಕ್ಕೆ ಹತ್ತಾರು ಗುಣಕಥನ ವಿಶೇಷಗಳನ್ನು ಗಂಟು ಹಾಕಿದ್ದಾರೆ.

ಈಗಾಗಲೇ ಹೇಳಿದಂತೆ ಸಂಸ್ಕೃತ, ಕನ್ನಡ ಕಾವ್ಯ ಸಂದರ್ಭಗಳಲ್ಲಿ ಮಳೆಯ ಪ್ರಸ್ತಾಪ ಬಂದದ್ದು ಕಡಿಮೆ. ಆದರೆ, ಮಾಹಿತಿಗಳಿವೆ. ಈ ಮಾಹಿತಿಗಳು ಮತ್ತು ಜನಪದ ಜಗತ್ತಿನಲ್ಲಿರುವ ಅಸಂಖ್ಯಾತ ಕಥನ, ನಂಬಿಕೆ, ಆಚರಣೆ, ಗಾದೆ ಮತ್ತು ಹೇಳಿಕೆಗಳನ್ನು ಸಂಗ್ರಹಿಸಿದರೆ ಅದೇ ಒಂದು ವಿಶ್ವಕೋಶವಾದೀತು. ಶಿಷ್ಟ ಪರಂಪರೆಯ ಮತ್ತು ಜನಪದರು ಎಲ್ಲಾ ಪ್ರಾಕೃತಿಕ ಸಂಗತಿಗಳಿಗೂ ಒಂದೊಂದು ರೂಪ, ಸ್ವರೂಪ ಕಲ್ಪಿಸಿದಂತೆ ಮಳೆಗೂ ಒಂದು ವ್ಯಕ್ತಿತ್ವವನ್ನು ಸೃಷ್ಟಿಸಿರುತ್ತಾರೆ.

ಮಳೆಯ ಪ್ರಸ್ತಾಪ ಋಗ್ವೇದ, ಯಜುರ್ವೇದಗಳಿಂದಲೇ ಆರಂಭವಾಗುತ್ತದೆ. ಋಗ್ವೇದವು ಮಳೆಯನ್ನು ಸಕಲ ಭೂಮಂಡಲದ ಪ್ರಭು, ಅನ್ನದಾತ, ವಿದ್ಯುತ್‍ರೂಪಿ, ಸಕಲ ಚರಾಚರಗಳನ್ನು ಮುನ್ನಡೆಸುವ ಶಕ್ತಿ ಎಂದು ಹೇಳುತ್ತದೆ. ಯಜುರ್ವೇದವೂ ನಭೋಮಂಡಲದಿಂದ ಮಳೆಯನ್ನು ಇಳೆಗೆ ತರಲು ನಾನಾ ಆಚರಣೆಗಳನ್ನು ಕೈಕೊಳ್ಳಬಹುದೆನ್ನುತ್ತದೆ. ಇದರಲ್ಲಿ ಮುಖ್ಯವಾದುದು ಯಜ್ಞಯಾಗಾದಿಗಳು. ಇದೇ ಯಜ್ಞಯಾಗಾದಿಗಳ ತದ್ಭವ ರೂಪದಂತೆ ಈ ಹೊತ್ತು ಮಳೆಯನ್ನು ಆಹ್ವಾನಿಸಲು ಗ್ರಾಮಗಳಲ್ಲಿ ಯಜ್ಞಕುಂಡ ಅಥವ ಕೊಂಡ (ಯಜ್ಞ> ಜನ್ನ> ಜನಿಗೆಯ) ಕೋಣ, ಕುರಿಯ ಬಲಿ ಮೂಲಕ ಗ್ರಾಮದೇವತೆಯನ್ನು ಪ್ರಾರ್ಥಿಸಿ ಈ ವರ್ಷ ಎಷ್ಟು ಖಂಡುಗ ಮಳೆ, ಅದೆಷ್ಟು ಖಂಡುಗ ಗಾಳಿ ಸುಳಿಯಬಹುದೆಂದು ಭವಿಷ್ಯ ಕೇಳುತ್ತಾರೆ.

ಆಧುನಿಕ ಶಿಕ್ಷಣ ದೊರಕುವ ಮೂರ್ನಾಲ್ಕು ದಶಕಗಳ ಹಿಂದಕ್ಕೆ ನೋಡುವುದಾದರೆ ಗ್ರಾಮೀಣರು ತಮ್ಮ ಮಕ್ಕಳ ಭವಿಷ್ಯ ಕುರಿತು ಪಂಚಾಂಗ ನೋಡಿಸಿದ್ದೇ ಇಲ್ಲ. ಯಾಕೆಂದರೆ ಪ್ರತಿಯೊಂದು ಸಮೂಹಕ್ಕೂ ಅವರವರದೇ ಆದ ಕುಲಕಸುಬು ಇದ್ದೇ ಇತ್ತಲ್ಲ. ಹಾಗಾಗಿ ಉದ್ಯೋಗದ ಚಿಂತೆ ಇರಲಿಲ್ಲ. ಈ ಎಲ್ಲಾ ಗ್ರಾಮೀಣ ಕಸುಬುಗಳ ಮೂಲ ಬೇಸಾಯವೇ. ವ್ಯವಸಾಯದ ಜೀವನಾಡಿ ಎಂದರೆ ಮಳೆಯೇ. ಈ ಮಳೆಯನ್ನು ಕುರಿತೇ ಜನಪದರು ತಲೆ ಕೆಡಿಸಿಕೊಂಡು ಊರ ಗುಡಿಯ ಪೂಜಾರಿಯ ಪಂಚಾಂಗ ಮೊರೆ ಹೋಗುತ್ತಿದ್ದರು. ಇಲ್ಲವೇ ಎಲ್ಲಾ ದೇವತೆಗಳ ಎಡ, ಬಲ ಹಸ್ತದ ಪ್ರಸಾದ ಕೇಳುತ್ತಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಮೀಣರ ಬದುಕು, ಭವಿಷ್ಯ ಆ ಪ್ರದೇಶದ ರಾಜನನ್ನು ಖಂಡಿತ ಅವಲಂಭಿಸಿರಲಿಲ್ಲ.

ಇತ್ತ ಅರಮನೆಯವರ ಕೃತ್ಯವೇನಿದ್ದರೂ ತಾವು ಸಾಕಿದ್ದ ಸೈನ್ಯಕ್ಕೆ, ಅರಮನೆಗೆ, ಯುದ್ಧ ನಿರ್ವಹಣೆಗೆ ಧಾನ್ಯ ಬೆಳೆಯುವ ರೈತರನ್ನೇ ಸುಲಿಯುವುದೇ ಆಗಿದ್ದಿತು. ಈ ಕಾರಣಕ್ಕೇ ಜನಪದರು ಎಂದೂ ಯಾವ ಚಕ್ರವರ್ತಿಯನ್ನೂ, ಮಹಾರಾಜನನ್ನೂ ನೆನೆದಂತೆಯೇ ತೋರುವುದಿಲ್ಲ. ಅಮೋಘವರ್ಷ ನೃಪತುಂಗ, ವಿಷ್ಣುವರ್ಧನ, ಕೃಷ್ಣದೇವರಾಯಾದಿಗಳು ಜನಪದರ ನೆನಪಿನ ಪುಸ್ತಕದಲ್ಲಿ ದಾಖಲಾದಂತಿಲ್ಲ! ಅವರು ಹಾಕಿಸಿದ ಶಾಸನ ವಿಚಾರಗಳಂತೂ ಹಳ್ಳಿಯವರಿಗೆ ಪರಿಚಯವೇ ಇದ್ದಂತಿಲ್ಲ!

ರಾಜನ ಆಗಮನಕ್ಕಿಂತ, ಆಕಾಶದಿಂದ ಒಂದೆರಡು ತುಂತುರು ಹನಿ ಇಳಿದರೂ ಹಳ್ಳಿಯ ಒಕ್ಕಲುತನದ ಕೇರಿಗಳಲ್ಲಿ ಸಂಭ್ರಮವೋ ಸಂಭ್ರಮ! ಇಂದ್ರನು ಇದೀಗ ಮಳೆಯನ್ನು ಕರುಣಿಸಿದನೆಂದೇ ನಂಬಿಕೆ. ವೇದಗಳಲ್ಲೂ, ಹಳೆಯ ಕಾವ್ಯಗಳಲ್ಲೂ ಎಲ್ಲಾ ದೇವತೆಗಳ ರಾಜನಾದ ಇಂದ್ರನನ್ನು ಮಳೆಯ ದೇವತೆ ಎಂದು ಹೆಸರಿಸಲಾಗಿದೆ. ಜನಪದರೂ ಇವನನ್ನು ಮಳೆಯ ರಾಜನೆಂದು ಅಂಗೀಕರಿಸಿದ್ದಾರೆ. ಶಿಷ್ಟ ಅಥವಾ ಕಲಿತ ಜನರಂತೆ ಜನಪದರಿಗೆ ದೇವಾನುದೇವತೆಗಳನ್ನು ಕಂಡರೆ ಅಷ್ಟಾಗಿ ಭಯವಿಲ್ಲ. ಎಲ್ಲಾ ದೈವಗಳನ್ನು ತಮ್ಮ ಊರು, ಕೇರಿಗೆ ತಂದು ಬೇಕು ಬೇಕಾದಂತೆ ಕಥೆಗಳನ್ನು ಕಟ್ಟಿಬಿಡುತ್ತಾರೆ. ಹೀಗಾಗಿ ಮಳೆಯ ಅದಿದೇವತೆಯಾದ ಇಂದ್ರನು ಭೂಮಿಯತ್ತ ಸರಿಯಾದ ಸಮಯಕ್ಕೆ ಕಣ್ಣು ಹರಿಸುವುದು ತಡವಾದರೆ, ಇವನು ತನ್ನ ರೂಢಿಗತದಂತೆ ಯಾವ ಹೆಂಗಸಿನ ಮೇಲೆ ಕಣ್ಣು ಹಾಯಿಸಿಕೊಂಡು ಹೋಗಿರಬಹುದೆಂದು ಜನಪದರು ಪದ ಹಾಡಿಬಿಡುತ್ತಾರೆ.

‘ಸೂಳೇಯ ಮನೆಗೋದೋನು ಮಳೆರಾಯ ಬರಲಿಲ್ಲ, ಸಾಲ್ಯದಚ್ಚಡದೋನೆ ಸಳಿಗಾಳಿಯ ಇಂದಲ ದೇವ | ಸೂಳೇಯ ಮನೆಬಿಟ್ಟು ಹೊರಡಾನೆ | ಲೋಕಮ್ಯಾಲೆ | ಬಾಳೆಯೊಣಗಿ ಬಾಯ ಬಿಡುತಾವೆ’ ಎಂಬೀ ಬಗೆಯ ಜನಪದ ತ್ರಿಪದಿಗಳು ಕರ್ನಾಟಕದಾದ್ಯಂತ ವ್ಯಾಪಕವಾಗಿ ಕೇಳಿಬರುತ್ತವೆ. ಹೀಗೆ ಮಳೆ ಇಳಿಯುವುದು ತಡವಾದರೆ ಜನ ಕೈಗೊಳ್ಳುವ ಆಚರಣೆಗಳಿಗೆ ಲೆಕ್ಕವಿಲ್ಲ. ಗುಡಿ ಗುಂಡಾರಗಳ ಪೂಜಾರಿಗಳು ನಡೆಸುವ ಪರ್ಜನ್ಯ ಜಪದಿಂದ ಹಿಡಿದು, ಜನಪದರು ಹಾದಿಬೀದಿಗಳಲ್ಲಿ ಕೈಗೊಳ್ಳುವ ವಿವಿಧ ನಂಬಿಕೆ, ಆಚರಣೆಗಳು ಮಳೆ ಬರುವವರೆಗೂ ಸಾಗುತ್ತಲೇ ಇರುತ್ತವೆ. ಕಪ್ಪೆ, ಕತ್ತೆಯ ಮೆರವಣಿಗೆಯಿಂದ ಹಿಡಿದು, ಜೋಕುಮಾರನ ಆರಾಧನೆಯವರೆಗೂ ತಮ್ಮ ತಿಳಿವಳಿಕೆಗೆ ನಿಲುಕುವಷ್ಟು ವಿಧಿ ವಿಧಾನಗಳು ಜರುಗುತ್ತವೆ. ಇದರಲ್ಲಿ ಜೋಕುಮಾರನ ಹಾಡು, ಕಥೆ ಮತ್ತು ಆಚರಣೆ ಜತೆಗೆ ಉತ್ತರ ದೇವಿಯ ಜನಪದ ಕಥನ ಕರ್ನಾಟಕದಾದ್ಯಂತ ಪ್ರಸಿದ್ಧವಾದುದು. ಉತ್ತರೆ ಮಳೆಯಾಗಿ ಹರಿದು ಹೋಗುವ ಹೆಣ್ಣು ಉತ್ತರೆಯ ಕಥೆ, ನಾನಾ ಪಾಠಾಂತರಗಳಲ್ಲಿ ಹಾಡಲ್ಪಡುವ ದಾರುಣ ಕಥನ.

ಬದುಕಿರುವವರೆಗೆ ಎಲ್ಲರಿಗೂ ಸಲ್ಲುವ, ಒಂದು ಹಂತದಲ್ಲಿ ಯಾರಿಗೂ ಸಲ್ಲದೇ ಹೋಗುವ ವೇಶ್ಯೆಯರು ಮತ್ತು ಅವರ ಜಲಪ್ರೀತಿಯ ಕಥೆಗಳೂ ಕರ್ನಾಟಕದಲ್ಲಿ ಪ್ರಚಲಿತವಿರುತ್ತವೆ. ಅನೇಕಾನೇಕ ವೇಶ್ಯೆಯರು ಕೆರೆ, ಬಾವಿ, ತಟಾಕಗಳನ್ನು ನಿರ್ಮಿಸಿ ತಮಗೆ ಅಪಕಾರವೆಸಗಿದ ಜನ ಸಮೂಹಕ್ಕೆ ಉಪಕಾರಗೈದ ದಾಖಲೆಗಳು ಈ ಹೊತ್ತಿನ ಜಗತ್ತಿಗೆ ಗೊತ್ತಾಗಬೇಕಿದೆ. ಮಳೆ ಬರುವುದು, ಹೋಗುವುದೆಲ್ಲ ಭೂಮಂಡಲದ ಭವಿಷ್ಯವನ್ನೇ ಆಧರಿಸಿರುವ ಕಾರಣಕ್ಕೆ ಕಾಲಾನುಕಾಲದಿಂದ ಕವಿಗಳು ಮಳೆಯ ಸ್ವರೂಪ, ಸೌಂದರ್ಯ, ರೌದ್ರತೆ ಇದು ಹೇಗಿದ್ದರೂ ಗಂತವ್ಯದಲ್ಲಿ ಅದರ ಪರಮ ಪ್ರಯೋಜನವನ್ನೇ ಅರಿತು ತಮ್ಮ ಸೃಜನಶೀಲ ಶಕ್ತಿಗೆ ತಕ್ಕಂತೆ ಕೃತಿಗಳಲ್ಲಿ ಪ್ರಸ್ತಾಪಿಸಿರುತ್ತಾರೆ.

ಸದ್ಯಕ್ಕೆ ಕನ್ನಡ ನವೋದಯ ಕವಿಗಳಲ್ಲೇ ಗಮನಿಸುವುದಾದರೆ ಕಡೆಂಗೋಡ್ಲು ಶಂಕರಭಟ್ಟರ ‘ಕಾರ್ಗಾಲದ ವೈಭವ’ ಪ್ರಸಿದ್ಧ ಕವನವಾಗಿರುತ್ತದೆ. ಇದು ಆಕಾಶದಿಂದ ಇಳೆಗಿಳಿಯುವ ವರ್ಷಧಾರೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಅದೇ ಬಗೆಯ ಲಯ, ಕುಣಿತ, ಮಣಿತ, ಗುಡುಗು, ಮಿಂಚುಗಳೊಡನೆ ಮಳೆಯ ಬಿರುಸನ್ನು ಹೇಳುತ್ತದೆ. ಈ ಕ್ರಮದಲ್ಲೇ ಕುವೆಂಪು ಮೊದಲಾಗಿ ಎಲ್ಲಾ ನವೋದಯ ಕವಿಗಳೂ ವರ್ಷಧಾರೆ ಕುರಿತು ಪದ್ಯ ರಚಿಸುತ್ತಾ ಬಂದರೆ ನವ್ಯರು ಮಾತ್ರ ತಮ್ಮ ಅಂತಃಪ್ರಕೃತಿಯ ವಿವರಗಳನ್ನೇ ಧ್ಯಾನಿಸುತ್ತ ಕೂತವರಾಗಿ, ಪ್ರಾಕೃತಿಕ ಸೌಂದರ್ಯ, ಸ್ವರೂಪ, ವಿದ್ಯಮಾನಗಳ ಕಡೆಗೆ ಹೆಚ್ಚು ಗಮನಹರಿಸಲಿಲ್ಲ.

ನವ್ಯ, ನವೋದಯದ ನಡುವೆ ಎಲ್ಲಕಾಲಕ್ಕೂ ವರಕವಿಯಾಗಿಯೇ ಉಳಿದಿರುವ ಬೇಂದ್ರೆಯವರು ಶ್ರಾವಣಮಾಸದ ಹಿರಿಮೆಯನ್ನು ಹೇಳುತ್ತ ಅಲ್ಲೇ ವರ್ಷಧಾರೆಯ ಗರಿಮೆಯನ್ನು ಹಾಡುತ್ತಾರೆ. ಕಡಲ ಹಾಸಿನಲ್ಲೂ, ಬೆಟ್ಟಗುಡ್ಡಗಳ ಮೇಲೂ ನರ್ತಿಸಿ, ಲಾಸ್ಯಮಯವಾಗಿ ಇಳಿಯುವ ಮಳೆ ಅದೆಷ್ಟು ಸುಂದರವೋ ಅಷ್ಟೇ ಭಯಂಕರ. ಅದು ದಶಕಂಠ ರಾವಣನ ಪ್ರತಿರೂಪ, ಭೈರವದೇಹಿ. ಎಂಥ ರೂಪದಲ್ಲೇ ಮಳೆ ಭೂಮಿಯತ್ತ ಬಿದ್ದರೂ ಅದನ್ನು ಈ ನೆಲ ತನಗೆ ಅಭ್ಯಂಗವಾಗಿಸಿಕೊಂಡುಬಿಡುತ್ತದೆ. ಬೇಂದ್ರೆಯವರು ಈ ಕ್ರಿಯೆಯನ್ನು ಪೂಜೆಯ ಸ್ಥಾನಕ್ಕೆ ಏರಿಸಿ ಇದರ ಕೈಂಕರ್ಯದಿಂದಲೇ ಭೂಮಿಯ ಸಾರ್ವಕಾಲಿಕ ಕ್ಷೇಮ ಎನ್ನುತ್ತಾರೆ.

‘ಗುಡ್ಡ ಗುಡ್ಡ ಸ್ಥಾವರಲಿಂಗ

ಅವಕ ಅಭ್ಯಂಗ

ಎರಿತಾವನ್ನಹಾಂಗ

ಕೂಡ್ಯಾವ ಮೋಡ

ಸುತ್ತೆಲ್ಲ ನೋಡನೋಡ’ ಎಂಬುದು ಪದ್ಯದ ಸುಪ್ರಸಿದ್ಧ ವಾಕ್ಯಖಂಡ.

ಮಳೆಯ ಪ್ರಾಮುಖ್ಯತೆಯನ್ನು ಕನ್ನಡವೇ ಅಲ್ಲದೆ ಎಲ್ಲಾ ಭಾಷೆಯ ಕವಿಗಳೂ ಅರಿತಿದ್ದರೆನ್ನುವಲ್ಲಿಯೇ ಭಾರತದ ಕವಿ ಕುಲಗುರು ಕಾಳಿದಾಸ ತನ್ನ ಜಗತ್ಪ್ರಸಿದ್ಧ ನಾಟಕ ‘ಅಭಿಜ್ಞಾನ ಶಾಕುಂತಲ’ ಕೃತಿಯ ಭರತ ವಾಕ್ಯದಲ್ಲಿ, ‘ಈ ಭೂಮಿಗೆ ನಿರಂತರ ಮಳೆ ಬರುತ್ತಿರಲಿ, ಅರಸರು ಜನ ಹಿತವನ್ನು ನೆರವೇರಿಸುವಂಥವರಾಗಲಿ, ಮತ್ತೆ ತನಗೆ ಈ ಭೂಮಿಯಲ್ಲಿ ಇನ್ನೊಂದು ಜನ್ಮ ಬೇಡ, ಈ ಒಂದು ಜನ್ಮಕ್ಕೇ ಮುಕ್ತಿ ದೊರಕುವಂತಾಗಲಿ’ ಎಂದಿದ್ದಾನೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT