ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಕಲಿಸು ಗುರುವೇ ನೀ ಕಲಿಸು...

ಕೊರಾನಾ ಕಾಲದ ಪಾಠಗಳು
Last Updated 8 ಸೆಪ್ಟೆಂಬರ್ 2020, 6:51 IST
ಅಕ್ಷರ ಗಾತ್ರ

ಕೊರೊನಾ ಕಾಲಘಟ್ಟ ಹಲವರಿಗೆ ಹಲವು ರೀತಿಯ ಪಾಠಗಳನ್ನು ಕಲಿಸಿದೆ. ಬಹುತೇಕರ ಬದುಕನ್ನು ಕಸಿದಿದೆ; ಕೆಲವರ ಬದುಕನ್ನು ಹದಗೊಳಿಸಿದೆ. ಈ ಬಿಕ್ಕಟ್ಟಿನಿಂದ ಕಾರ್ಮಿಕ ವರ್ಗ ದಿಕ್ಕೆಟ್ಟು ಕುಳಿತಿದೆ, ಮಧ್ಯಮ ವರ್ಗದ ಜೀವನ ಹಳಿತಪ್ಪಿದೆ. ಶ್ರೀಮಂತ ವರ್ಗ ಪೇರಿಸಿದ ಹಣ ಕರಗಿಸುತ್ತಿದೆ. ಸಮಾಜದ ಸರ್ವ ಜನರ ಮೇಲೂ ವಿವಿಧ ಪರಿಣಾಮ–ಪ್ರಭಾವ ಬೀರಿರುವ ಕೊರೊನಾ ಆರೋಗ್ಯದ ಬಿಕ್ಕಟ್ಟಿನ ಜತೆಗೆ ಸಾಮಾಜಿಕ, ಆರ್ಥಿಕ ಬಿಕ್ಕಟ್ಟನ್ನೂ ತಂದೊಡ್ಡಿದೆ. ಇಂತಹ ದುರಿತ ಕಾಲದಲ್ಲಿ ಕಲಿತ ಪಾಠಗಳು ಹಲವರಿಗೆ ಜೀವನದ ಸತ್ಯದ ದರ್ಶನವಾಗಿ ಕಂಡಿವೆ. ಸಮಾಜದ ವಿವಿಧ ವಲಯದ ಜನರು ಕೋವಿಡ್‌ ಕಾಲದಲ್ಲಿ ತಾವು ಕಂಡುಕೊಂಡ ಇಂತಹ ಹೊಳವುಗಳನ್ನು ನಮಗೆ ದಾಟಿಸಿದ್ದಾರೆ.

ಮಂಜುನಾಥ ಎಲ್. ಬಡಿಗೇರ ರಂಗನಿರ್ದೇಶಕರು. ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲ್ಲೂಕು ಪಡ್ಪಿನಂಗಡಿಯಲ್ಲಿ ಕೆಲ ವರ್ಷಗಳಿಂದ ನೆಲೆ ನಿಂತಿದ್ದಾರೆ. ತಾವು ಕಂಡ ಕೋವಿಡ್‌ ಕಾಲವನ್ನು ನಿರೂಪಿಸಿದ್ದು ಹೀಗೆ...

‘ಕೊರೊನಾ ಲಾಕ್‌ಡೌನ್ ವೈಯಕ್ತಿಕವಾಗಿ ವಿಶೇಷ ಅನ್ನಿಸಲಿಲ್ಲ. ಒಂದು ತಿಂಗಳು ಕೆಲಸ ಇದ್ದರೆ ಮತ್ತೆ ಮೂರು ತಿಂಗಳು ಕೆಲಸ ಇಲ್ಲದ ನಮಗೆ ಈ ರೀತಿಯ ಬಿಕ್ಕಟ್ಟು ಹೊಸದಲ್ಲ. ಆದರೆ, ಇದು ದೀರ್ಘಕಾಲ ಮುಂದುವರಿದಿದ್ದು ಕಷ್ಟ ಆಯಿತು. ಇಷ್ಟು ಹೊತ್ತಿಗೆ ನಾನು 100 ಬಾರಿ ಬೆಂಗಳೂರಿಗೆ ಹೋಗಿ ನಾಟಕ ಆಡಿಸುತ್ತಿದ್ದೆ. ಅದು ಈ ಕಾಲದಲ್ಲಿ ಆಗಲಿಲ್ಲ’

‘ನಾನು ಬೆಂಗಳೂರು ಬಿಟ್ಟು ಹಳ್ಳಿಗೆ ಬಂದಿದ್ದು ಒಳ್ಳೆದಾಯಿತು ಎಂದು ಎಲ್ಲರೂ ಹೇಳುತ್ತಾರೆ. ಹಳ್ಳಿಯ ಮನೆಯ ಹಿತ್ತಿಲಿನಲ್ಲಿ ಬೆಳೆದ ಗೆಡ್ಡೆ–ಗೆಣಸು, ಅಕ್ಕಪಕ್ಕದ ಮನೆಯವರು ಕೊಡುವ ತರಕಾರಿ ಎಲ್ಲವೂ ಸಿಕ್ಕವು. ಹಣದ ಅವಶ್ಯಕತೆ ಹೆಚ್ಚಾಗಿ ಬರಲಿಲ್ಲ. ಹೊಟ್ಟೆಗೆ ಕಡಿಮೆಯಾಗಲಿಲ್ಲ; ಆದರೆ, ಕೆಲಸ ಇಲ್ಲದೆ ತಿನ್ನುವುದು ಸರಿ ಅನ್ನಿಸಲಿಲ್ಲ’ ಎಂದು ಬಡಿಗೇರ ಬೇಸರ ವ್ಯಕ್ತಪಡಿಸಿದರು.

‘ರಂಗಭೂಮಿ ಕ್ಷೇತ್ರದಲ್ಲಿನ ಈಗಿನ ಕಥೆ ನನಗೆ ತಿಳಿದಿಲ್ಲ. ಕೆಲವರು ಆನ್‌ಲೈನ್‌ನಲ್ಲಿ ರಂಗಭೂಮಿ ಪಾಠ ಮಾಡುತ್ತಿದ್ದಾರೆ. ನನ್ನ ಜಾಯಮಾನಕ್ಕೆ ಅದು ಒಗ್ಗಲ್ಲ. ಒಟ್ಟಾರೆ ಆರ್ಥಿಕವಾಗಿ ಸ್ವಲ್ಪ ಕಷ್ಟವಾಯಿತು. ಆದರೆ, ಮೊದಲೇ ಸರಳ ಜೀವನ ರೂಢಿಸಿಕೊಂಡಿದ್ದರಿಂದ ಇನ್ನೂ ಸರಳವಾಗಿ ಬದುಕುವುದು ಹೇಗೆ ಎಂಬುದನ್ನು ಕೊರೊನಾ ಕಾಲ ಕಲಿಸಿಕೊಟ್ಟಿತು’

‘ಮಕ್ಕಳು, ಮನೆ, ಸಂಸಾರದ ಜತೆ ಇಷ್ಟೊಂದು ದೀರ್ಘ ಕಾಲ ಕಳೆದಿರಲಿಲ್ಲ. ಈಗ ಮಕ್ಕಳ ಲಾಲನೆ–ಪಾಲನೆಯನ್ನೂ ಮಾಡುತ್ತಿದ್ದೇನೆ. ಮೊದಲು ಅಲ್ಪ–ಸ್ವಲ್ಪ ಅಡುಗೆ ಮಾಡುತ್ತಿದ್ದೆ; ಈಗ ಅದೇ ಪೂರ್ಣಾವಧಿ ಆಗಿದೆ’ ಎಂದು ಖುಷಿಯಿಂದಲೇ ಹೇಳಿಕೊಂಡರು.

‘ಲಾಕ್‌ಡೌನ್‌ ಸಮಯದಲ್ಲೇ ಬೆಂಗಳೂರಿನಲ್ಲಿದ್ದ ಅಮ್ಮನಿಗೆ ಕ್ಯಾನ್ಸರ್‌ ಕಾಣಿಸಿತು. ಚಿಕಿತ್ಸೆಗಾಗಿ ಲಾಕ್‌ಡೌನ್‌ ಸಮಯದಲ್ಲೇ ಹಲವು ಸಲ ಇಲ್ಲಿಂದ ಬೆಂಗಳೂರಿಗೆ ಓಡಾಡಿದೆ. ಬರೀ ರಂಗಭೂಮಿಗೆ ಜೋತುಬಿದ್ದರೆ ಜೀವನ ಸಾರ್ಥಕ ಅಗುವುದಿಲ್ಲ ಎಂಬ ಅಲೋಚನೆ ಬರುತ್ತಿದೆ. ರಂಗಭೂಮಿಯಿಂದ ಭೂ ರಂಗಭೂಮಿಗೆ ಹೊರಳಬೇಕು ಅನ್ನಿಸಿದೆ. ಕೃಷಿ ಕಾಯಕ ಕೈಗೊಳ್ಳುವುದಕ್ಕೆ ಮನಸ್ಸು ಹಾತೊರೆಯುತ್ತಿದೆ. ಭೂಮಿ ಕೊಟ್ಟಿದ್ದನ್ನು ತಿಂದುಕೊಂಡು ಬದುಕಿದರೆ ಸಾಕು ಎನಿಸುತ್ತಿದೆ’ ಎಂದು ತಮ್ಮ ಹೊಸ ಕನಸು ಹಂಚಿಕೊಂಡಿದರು.

‘ಈ ಸಮಯದಲ್ಲಿ ಸಾಕಷ್ಟು ಓದಬೇಕಿತ್ತು; ಬರೆಯಬೇಕಿತ್ತು. ಅದು ಆಗಲಿಲ್ಲ. ಅದೊಂದು ಬೇಸರವಿದೆ’ ಎಂಬ ಮಾತನ್ನೂ ಬಡಿಗೇರ ಸೇರಿಸಿದರು.

ಕಲಿಸಿದ, ಕಲಿಸಬೇಕಾದ ಪಾಠ:

ಇವರು ಮಂಗಳೂರಿನ ವೈದ್ಯ ಡಾ. ಶ್ರೀನಿವಾಸ ಕಕ್ಕಿಲ್ಲಾಯ. ಕೊರೊನಾ ಆರಂಭದಿಂದಲೂ ತಮ್ಮ ಫೇಸ್‌ಬುಕ್‌, ಪತ್ರಿಕಾ ಲೇಖನಗಳ ಮೂಲಕ ಸೋಂಕಿನ ನಿರ್ವಹಣೆ ಬಗ್ಗೆ ಹೇಳುತ್ತಾ ಬಂದಿದ್ದಾರೆ. ಇತರೆ ರೋಗಲಕ್ಷಣಗಳು ಇದ್ದವರಿಗೆ ಮಾತ್ರ ಚಿಕಿತ್ಸೆ ಕೊಡಿ; ಮಕ್ಕಳು ಹಾಗೂ ಹಿರಿಯರನ್ನು ಸುರಕ್ಷಿತವಾಗಿ ಮನೆಯಲ್ಲೇ ಇರಿಸಿ ಎಂದು ಸರ್ಕಾರಕ್ಕೆ ಸಲಹೆ ನೀಡುತ್ತಲೇ ಇದ್ದಾರೆ. ಆದರೆ, ಆಡಳಿತ ಯಂತ್ರ ಕುರುಡಾಗಿತ್ತು. ಆವಾಗ ಅವರು ಹೇಳಿದ್ದು, ಈಗ ನಿಜವಾಗುತ್ತಿದೆ. ಕೊರೊನಾ ಕಲಿಸಿದ ಹಾಗೂ ಕಲಿಸಬೇಕಾದ ಪಾಠದ ಬಗ್ಗೆ ಅವರು ಈಗ ಹೇಳಿದ್ದು ಹೀಗೆ. ಅವರ ಮಾತುಗಳಲ್ಲೇ ಕೇಳಿ.

‘ಕೊರೊನಾ ಲಾಕ್‌ಡೌನ್ ಕಲಿಸಿದ, ಕಲಿಸಬೇಕಾದ ಮೊದಲ ಪಾಠ ಎಂದರೆ ಆಡಳಿತದಲ್ಲಿರುವವರು ಬಲ್ಲವರಾಗಿರಬೇಕು ಅಥವಾ ಬಲ್ಲವರನ್ನು ಕೇಳಿ ವೈಜ್ಞಾನಿಕವಾಗಿ, ಸಾಕ್ಷ್ಯಾಧಾರಿತವಾಗಿ, ದೇಶಕ್ಕೆ ಒಳಿತಾದುದನ್ನು ಮಾಡುವವರಿರಬೇಕು; ವಿರೋಧ ಪಕ್ಷಗಳವರು, ಮಾಧ್ಯಮಗಳವರು ಕೂಡಾ ಬಲ್ಲವರಾಗಿದ್ದು, ಆಡಳಿತವನ್ನು ಪ್ರಶ್ನಿಸುವ ಧೈರ್ಯವುಳ್ಳವರಾಗಿರಬೇಕು’

‘ಎರಡನೆಯದು, ವೈದ್ಯರು ಮತ್ತು ವೈದ್ಯಕೀಯ ಸಂಘಟನೆಗಳು ವೈಜ್ಞಾನಿಕ ಮಾಹಿತಿಯನ್ನು ನಿರ್ಭಿಡೆಯಿಂದ ಸರ್ಕಾರಕ್ಕೆ ನೀಡಬೇಕು, ನಮ್ಮ ನಾಡಿಗೆ ಸೂಕ್ತವೆನಿಸುವ ಸಾಕ್ಷ್ಯಾಧಾರಿತ ಕ್ರಮಗಳ ಬಗ್ಗೆ ಒತ್ತಾಯಿಸಬೇಕು. ಮೂರನೆಯದು, ಜನಸಾಮಾನ್ಯರು ಕೂಡ ತಮ್ಮ ಸಾಮಾನ್ಯ ಪ್ರಜ್ಞೆ, ವಿವೇಚನೆಗಳನ್ನು ಬಳಸಿಕೊಳ್ಳಬೇಕು. ಸರ್ಕಾರ, ಮಾಧ್ಯಮಗಳು ಹೇಳುವುದನ್ನು ಒರೆಗೆ ಹಚ್ಚಿ ಪ್ರಶ್ನಿಸಬೇಕು; ತಮ್ಮ ನೆಂಟರಿಷ್ಟರು, ನೆರೆಹೊರೆಯವರು, ಸಹ ದೇಶವಾಸಿಗಳಿಗೆ ಕಳಂಕ ಹಚ್ಚಿ, ದ್ವೇಷ ಹರಡಿ, ದೂರವಿರಿಸುವ ಬದಲು ಸತ್ಯವೇನೆಂದು ಪರಾಂಬರಿಸಿಕೊಳ್ಳಬೇಕು; ತಮ್ಮ ಕಷ್ಟಗಳನ್ನು ಆಳುವವರಿಗೆ ತಲುಪಿಸಬೇಕು’

‘ವೈಜ್ಞಾನಿಕ ಮನೋವೃತ್ತಿ ಇಲ್ಲದಿದ್ದರೆ ಭೀತಿ, ಗೊಂದಲ, ಸಮಸ್ಯೆಗಳಾಗುತ್ತವೆ. ದಬ್ಬಾಳಿಕೆಗೂ, ಸೋಂಕಿಗಿಂತ ಬಹುಪಾಲು ಹೆಚ್ಚು ಕಷ್ಟಗಳಿಗೂ ಕಾರಣವಾಗುತ್ತದೆ. ಸತ್ಯದ ಹಾದಿ ತೊರೆದರೆ ಇತಿಹಾಸ ಕ್ಷಮಿಸದು ಎನ್ನುವುದು ಲಾಕ್‌ಡೌನ್‌ನಿಂದ ಕಲಿಯಬೇಕಾದ ಅತಿ ದೊಡ್ಡ ಪಾಠಗಳು’ ಎನ್ನುತ್ತಾರೆ ಅವರು.

‘ಆಯುರ್ವೇದ, ನಿದ್ರಾಹಾರದ ಮಹತ್ವ ಅರಿವಾಯಿತು’:

ಉಡುಪಿಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಸ್ವತಃ ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಅವರು ಕೊರೊನಾದಿಂದ ಕಂಡುಕೊಂಡ ದರ್ಶನವನ್ನು ಇಲ್ಲಿ ವಿವರಿಸಿದ್ದಾರೆ.

‘ಬಿಡುವಿಲ್ಲದ ಕಾರ್ಯಕ್ರಮ, ನಿರಂತರ ಸಂಚಾರದಿಂದ ಜೀವನ ಶೈಲಿ ಹಾಗೂ ಆಹಾರದ ಬಗ್ಗೆ ಕಾಳಜಿ ವಹಿಸಲು ಸಾಧ್ಯವಾಗಿರಲಿಲ್ಲ. ಲಾಕ್‌ಡೌನ್ ಕಾಲದಲ್ಲಿ ದೊರೆತ ವಿರಾಮದಿಂದ ಆರೋಗ್ಯಯುತ ಜೀವನ ಶೈಲಿ, ಆಹಾರ ಸೇವನೆ ಹಾಗೂ ನಿದ್ರೆಯ ಮಹತ್ವ ಬಗ್ಗೆ ಅರಿವಾಯಿತು’

‘ಬದಲಾದ ಕಾಲಘಟ್ಟದಲ್ಲಿ ಹಿನ್ನೆಲೆಗೆ ಸರಿದಿದ್ದ ಆಯುರ್ವೇದದ ಮಹತ್ವ ಅರಿವಾಗಿದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಮತ್ತೆ ಆಯುರ್ವೇದ ಔಷಧ, ಕಷಾಯ ಹಾಗೂ ಪ್ರಾಚೀನ ಆಹಾರ ಪದ್ಧತಿಯನ್ನು ರೂಢಿಸಿಕೊಂಡಿದ್ದೇನೆ. ಸ್ವತಃ ಕೊರೊನಾ ಸೋಂಕಿಗೆ ತುತ್ತಾದಾಗ ನಿದ್ರಾಹಾರದ ಮಹತ್ವ ಅರಿವಿಗೆ ಬಂತು. ಸೂರ್ಯಾಸ್ತಕ್ಕೂ ಮುನ್ನ ಆಹಾರ ಸೇವಿಸಿ ರಾತ್ರಿ ಬೇಗ ಮಲಗುವುದು ಹಾಗೂ ಬೆಳಿಗ್ಗೆ ಸೂರ್ಯ ಉದಯಕ್ಕೂ ಮುನ್ನ ಏಳುವುದರಿಂದ ದೇಹದಲ್ಲಿ ರೋಗ ಪ್ರತಿರೋಧಕ ಶಕ್ತಿ ಹೆಚ್ಚಾಗುವುದು ಅರಿವಿಗೆ ಬಂತು. ಸೋಂಕಿನಿಂದ ಬೇಗ ಚೇತರಿಸಿಕೊಳ್ಳಲು ಸಾಧ್ಯವಾಯಿತು. ನಿದ್ರಾಹಾರದ ಮಹತ್ವ ಎಲ್ಲರಿಗೂ ತಿಳಿಯಬೇಕಾದರೆ ‘ರಾತ್ರಿ 8 ರಿಂದ ಬೆಳಿಗ್ಗೆ 4ರ ಅವಧಿಯನ್ನು ರಾಷ್ಟ್ರೀಯ ವಿಶ್ರಾಂತಿ ಸಮಯ’ ಎಂದು ಸರ್ಕಾರ ಘೋಷಿಸಬೇಕು’ ಎನ್ನುತ್ತಾರೆ ಸ್ವಾಮೀಜಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT