ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಹುಲಿ ಮದುವೆಗೆ ಬಾಸಿಂಗ ಕಟ್ಟಿದವರು!

ರೋಚಕ ಅನುಭವ ನೀಡುವ ಈ ‘ಓಲ್ಡ್‌ ಹಂಟರ‍್ಸ್‌ ಟೇಲ್‌’ಗಳು ವಿಷಾದದ ನಿಟ್ಟುಸಿರಿಗೂ ಕಾರಣವಾಗುತ್ತವೆ
Last Updated 19 ಸೆಪ್ಟೆಂಬರ್ 2020, 6:54 IST
ಅಕ್ಷರ ಗಾತ್ರ

‘ತಾವು ಶ್ರೀ ಜಿ.ಟಿ. ನಾರಾಯಣರಾವ್‌ ಅವರೊಟ್ಟಿಗೆ ವಿಶ್ವಾಸಪೂರ್ವಕವಾಗಿ ಕಳುಹಿಸಿಕೊಟ್ಟ ‘ಬೇಟೆಯ ನೆನಪುಗಳು’ ಕೈಸೇರಿತು. ಅದಕ್ಕಾಗಿ ತಮಗೆ ಅನಂತ ವಂದನೆಗಳು. ಅದು ಕೈಸೇರಿದಾಗ ಎಂತಹ ಒಂದು ಅಮೂಲ್ಯ ಕೃತಿ ಕೈಸೇರಿದೆ ಎಂಬುದು ಅರಿವಾಗಲಿಲ್ಲ. ಸ್ವಲ್ಪ ಉದಾಸೀನವಾಗಿಯೇ ಓದಲು ಪ್ರಾರಂಭಿಸಿದೆ, ಅದೂ ಶ್ರೀ ನಾರಾಯಣರಾಯರು ನಿಮ್ಮ ವಿಚಾರವಾಗಿ ಕುತೂಹಲ ಹುಟ್ಟಿಸುವಂತೆ ಮಾತನಾಡಿದಾಗ. ಓದಲು ತೊಡಗಿದವನಿಗೆ ಎಂತಹ ಅದ್ಭುತ ರಸಾನುಭವ ಕಾದಿತ್ತು ಎಂದು ನಿಮಗೆ ನಾನು ಹೇಗೆ ವರ್ಣಿಸಲಿ!’

–ಕೆದಂಬಾಡಿ ಜತ್ತಪ್ಪ ರೈ ಅವರ ‘ಬೇಟೆಯ ನೆನಪುಗಳು’ ಕೃತಿಯನ್ನು ಓದಿದ ಕುವೆಂಪು ಅವರು ರೈಗಳಿಗೆ ಬರೆದ ಪತ್ರದ ಆರಂಭಿಕ ಸಾಲುಗಳಿವು. ಬೇಟೆಯ ನೆನಪುಗಳೇ ಹಾಗೆ. ಅಲ್ಲಿ ಪಡೆಯುವ ಪ್ರತೀ ಅನುಭವವೂ ರೋಚಕ. ವೀರರಸ ಉಕ್ಕಿಸುವ ಅಂತಹ ಕಾಡಿನ ಕಥೆಗಳನ್ನು ಕೇಳುತ್ತಾ (ಅಥವಾ ಓದುತ್ತಾ) ಕುಳಿತರೆ ಮೈನವಿರೇಳಿಸುತ್ತದೆ. ಆದ್ದರಿಂದಲೇ ಸಾಹಿತ್ಯ ಪ್ರಕಾರದಲ್ಲಿ ‘ಹಂಟರ‍್ಸ್‌ ಟೇಲ್ಸ್‌’ಗೆ ಎಲ್ಲಿಲ್ಲದ ಬೇಡಿಕೆ.

ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಪೂರ್ವದಲ್ಲಿ ದೇಶದ ಹಲವು ಭಾಗಗಳಲ್ಲಿ ‘ಮ್ಯಾನ್‌ ಈಟರ್‌’ಗಳ ಹಾವಳಿ ಮಿತಿಮೀರಿದಾಗ, ಬಂದೂಕು ಹಿಡಿದು ಅಂತಹ ನರಭಕ್ಷಕಗಳ ಬೇಟೆಗೆ ಹೊರಟವರಲ್ಲಿ ಸದಾ ಅಚ್ಚಳಿಯದೆ ಉಳಿಯುವಂತಹ ಎರಡು ಹೆಸರುಗಳೆಂದರೆ ಜಿಮ್‌ ಕಾರ್ಬೆಟ್‌ ಮತ್ತು ಕೆನೆತ್‌ ಆ್ಯಂಡರ್ಸನ್‌ ಅವರದು. ಬೇಟೆಯ ವೃತ್ತಿಯಿಂದ ‘ನಿವೃತ್ತ’ರಾದ ಮೇಲೆ ಅವರು, ಕಾಡಿನಲ್ಲಿ ತಾವು ಅನುಭವಿಸಿದ ರೋಚಕ ಅನುಭವಗಳನ್ನೆಲ್ಲ ದಾಖಲಿಸುತ್ತಾ ಹೋದರು. ಅವರ ಕೃತಿಗಳು ಜಗತ್ತಿನಾದ್ಯಂತ ಬಿಸಿ ಬಿಸಿ ಮಸಾಲೆ ದೋಸೆಗಳಂತೆ ಬಿಕರಿಯಾದವು; ಇಂದಿಗೂ ಅವರ ಕೃತಿಗಳು ಬೇಡಿಕೆ ಕಳೆದುಕೊಂಡಿಲ್ಲ. ಅಳಿದ ಮೇಲೂ ಅವರು ತಮ್ಮ ಕೃತಿಗಳ ಮೂಲಕ ಉಳಿದಿದ್ದಾರೆ. ಕಾರ್ಬೆಟ್‌ ಹಾಗೂ ಆ್ಯಂಡರ್ಸನ್‌ ಇಬ್ಬರ ಹಲವು ಕೃತಿಗಳ ಸಂಗ್ರಹವಾದ ಮಾಡಿರುವ ಪೂರ್ಣಚಂದ್ರ ತೇಜಸ್ವಿ ಅವರು ಮೂಲಕೃತಿಗಳ ಸೊಬಗನ್ನು ಯಥಾವತ್ತಾಗಿ ಕನ್ನಡಕ್ಕೆ ತಂದವರು.

ಬೇಟೆಯ ನೆನಪುಗಳಿಗೆ ಕುವೆಂಪು ಅವರಾದಿಯಾಗಿ ಹಲವು ಹಿರಿಯ ಸಾಹಿತಿಗಳು ಜತ್ತಪ್ಪ ರೈ ಅವರ ಬೆನ್ನುತಟ್ಟಿದ ಮೇಲೆ ‘ಈಡೊಂದು ಹುಲಿಯೆರಡು’ ಕೃತಿಯನ್ನೂ ಅವರು ಬರೆದರು. ಅದಕ್ಕೆ ಅಮೃತ ಸೋಮೇಶ್ವರ ಅವರು ಬರೆದ ಬೆನ್ನುಡಿಯ ಸಾಲುಗಳು ಇಲ್ಲಿ ಉಲ್ಲೇಖನೀಯ: ‘ಬೇಟೆಯೇ ಬೇಟವಾಗಿ ‘ಹುಲಿ ಮದುವೆಗೆ ಬಾಸಿಂಗ ಕಟ್ಟಿಸಿ, ಸೇಸೆ ತಳಿಸಿಕೊಂಡು ಹಂತಕಾರಿ ರೈಗಳು’ ಸಂದುಹೋದ ಸಾಹಸಾಲಂಕೃತ ಬದುಕಿನ ವೀರಬಂಟನಾಗಿ, ಆ ಬದುಕಿನ ಒಬ್ಬ ಜೀವಂತ ಐತಿಹಾಸಿಕ ವ್ಯಕ್ತಿಯಾಗಿ ನಮ್ಮ ನಡುವೆ ನಿಂತಿದ್ದಾರೆನಿಸುತ್ತದೆ. ಸಜೀವ ಚಿತ್ರವೂ ಅನುಭವ ಪಾಕದಿಂದ ಬಲಿಷ್ಠವೂ ಆದ ಈ ಬರವಣಿಗೆಯಲ್ಲಿ ವೀರ, ರೌದ್ರ, ಭಯಾನಕ, ಅದ್ಭುತ ರಸವ್ಯಂಜಕಗಳಾದ ಘಟನೆಗಳು ಮಾತ್ರವಲ್ಲ; ಕರುಣ, ಹಾಸ್ಯ, ಬೀಭತ್ಸಾದಿ ರಸಗಳ ಮಡುಗಳೂ ಅಲ್ಲಲ್ಲಿವೆ. ಶೃಂಗಾರವೂ ಇಲ್ಲದಿಲ್ಲ! ಅದೋ ವನರಾಜ ವ್ಯಾಘ್ರನ ಉಗ್ರಭವ್ಯ ಶೃಂಗಾರ.’

‘ಜತ್ತಪ್ಪ ರೈಗಳ ಕಥೆಗಳಲ್ಲಿ ಇರುವುದು ಬರಿಯ ಬೇಟೆಯ ವ್ಯಸನದ ಕ್ರೌರ್ಯದ ರಕ್ತರಂಜಿತ ಕಥನವಲ್ಲ; ನಾಲ್ಕೈದು ದಶಕಗಳ ಹಿಂದಿನ ತುಳುವ ಮಲೆನಾಡಿನ ಬದುಕಿನ ಜೀವಂತ ಚಿತ್ರಣ. ಒಂದು ಸೀಮೆಯ ಜನದ ನಡವಳಿಕೆಯನ್ನು ನಿಚ್ಚಳವಾಗಿ ಬಣ್ಣಿಸಿದ ಕುಂಚದ ಕುಶಲತೆ’ ಎನ್ನುವ ಸೋಮೇಶ್ವರರ ಮಾತು ಮರುಮಾತಿಲ್ಲದೆ ಒಪ್ಪುವಂತಹದ್ದು. ತುಳು ನಾಡಿನಾದ್ಯಂತ ‘ಬೇಟೆಗಾರ’ ರೈಗಳ ಖ್ಯಾತಿ ಹರಡಿದ್ದು, ಆ ಖ್ಯಾತಿಗೆ ತಕ್ಕಂತೆ ರೈಗಳು ಗುರಿ ತಪ್ಪದಂತೆ ಈಡು ಹೊಡೆಯುತ್ತಿದ್ದುದು, ಒಂಟಿ ಸಲಗದೊಂದಿಗೆ ಸರಸಕ್ಕೆ ಇಳಿದಿದ್ದು ಎಲ್ಲವನ್ನೂ ನೀವು ಕೃತಿಯಲ್ಲಿ ಓದಿಯೇ ಆನಂದಿಸಬೇಕು.

‘ಈಡೊಂದು ಹುಲಿಯೆರಡು’ ಕೃತಿಯ ಕೊನೆಯಲ್ಲಿ ‘ಬೇಟೆಯ ಜೀವನಕ್ಕೆ ಇತಿಶ್ರೀ’ ಎಂಬ ಅಧ್ಯಾಯವಿದೆ. ರೈಗಳು ಬೇಟೆಯನ್ನು ಶಾಶ್ವತವಾಗಿ ಬಿಟ್ಟುಕೊಟ್ಟ ಸಂದರ್ಭದ ಕಥೆಯದು. ಧರ್ಮಸ್ಥಳದ ಮಂಜಯ್ಯ ಹೆಗ್ಗಡೆ ಅವರಿಗೆ ಜಿಂಕೆ ಮರಿಯೊಂದನ್ನು ಒಪ್ಪಿಸಲು ಹೋಗುವ ರೈಗಳಿಗೆ ಹೆಗ್ಗಡೆ ಅವರು ಹೇಳಿದ ಮಾತುಗಳು ಅಂತಃಕರಣವನ್ನೇ ಕಲಕುವಂತಿವೆ: ‘ಸೃಷ್ಟಿಕರ್ತನು ತನ್ನ ಸೃಷ್ಟಿಗೆ ಯಾವುದು ಅನುಕೂಲತೆಯನ್ನು ಒದಗಿಸುತ್ತದೆಯೋ ಅದನ್ನೇ ಸೃಷ್ಟಿಸುತ್ತಾನೆ. ಬೇಡವಾದಾಗ ನಿವಾರಿಸುತ್ತಾನೆ. ಅದನ್ನು ಇಲ್ಲವಾಗಿಸುವುದು ಹುಲುಮಾನವರಾದ ನಮ್ಮ ಹಕ್ಕಲ್ಲ. ನಮ್ಮ ಸ್ವಾರ್ಥಕ್ಕಾಗಿ ನಾವು ವನ್ಯಮೃಗಗಳನ್ನು ನಿವಾರಿಸತೊಡಗಿದರೆ ನಾಳೆ ನೆರೆಕರೆಯ ಮನುಷ್ಯರೂ ನಮಗೆ ಕಾಲ್ತೊಡಕು ಎಂದು ಅವರನ್ನೂ ಕೊಲ್ಲಬೇಕಾದ ಸಮಯ ಬರಬಹುದು.’ ಹೆಗ್ಗಡೆ ಅವರ ಈ ಮಾತು ರೈಗಳನ್ನು ಎಷ್ಟೊಂದು ಪ್ರಭಾವಿಸಿತು ಎಂದರೆ ತಮ್ಮ ಜೀವಿತದ ಕೊನೆಯವರೆಗೆ ಅವರು ಮತ್ತೆಂದಿಗೂ ಬೇಟೆಗೆ ಹೋಗಲಿಲ್ಲ. ಈಡು ಹೊಡೆಯಲಿಲ್ಲ.

ಕಾರ್ಬೆಟ್‌ ಹೇಳುವ ‘ರುದ್ರಪ್ರಯಾಗದ ಭಯಾನಕ ನರಭಕ್ಷಕ’ನ ಕಥೆಯನ್ನು ಓದುತ್ತಾ ಹೋದರೆ, ಆ ನರಭಕ್ಷಕ ಎಲ್ಲಿ ನಮ್ಮ ಬೆನ್ನಹಿಂದೆಯೇ ಅಡಗಿದ್ದಾನೋ, ರಾತ್ರಿಯ ಹೊತ್ತು ಸದ್ದಿಲ್ಲದೆ ನಮ್ಮನ್ನು ಹಿಂಬಾಲಿಸಿಕೊಂಡು ಬರುತ್ತಾನೋ ಎಂದು ಮೈನಡುಕ ಉಂಟಾಗಬೇಕು. ಬಕೀಟುಗಟ್ಟಲೆ ಚಹಾ ಮಾಡಿಕೊಂಡು, ಮರದ ಮೇಲೊಂದು ಮಚಾನ ಕಟ್ಟಿಕೊಂಡು, ರಾತ್ರಿ ಪೂರಾ ಆ ನರಭಕ್ಷಕನಿಗೆ ಕಾರ್ಬೆಟ್‌ ಕಾದರೆ, ಅದರ ಮುನ್ಸೂಚನೆ ಪಡೆದು ಆ ಚಾಣಾಕ್ಷ ಚಿರತೆ, ನುರಿತ ಬೇಟೆಗಾರನನ್ನು ಯಾಮಾರಿಸುತ್ತಿದ್ದ ರೀತಿ ಸೋಜಿಗ ಉಂಟುಮಾಡುತ್ತದೆ. ಕಚಗುಳಿಯನ್ನೂ ಇಡುತ್ತದೆ. ಆದರೆ, ಅದೇ ಆ ನರಭಕ್ಷಕ ಓಡಾಡುವಾಗ ಆ ಕಾಡಿನಲ್ಲಿ ನಾವೂ ಇದ್ದಿದ್ದರೆ?

ಕಾರ್ಬೆಟ್‌ ಅವರ ಕಾರ್ಯಕ್ಷೇತ್ರ ಉತ್ತರ ಭಾರತವಾದರೆ ದಕ್ಷಿಣದಲ್ಲಿ ಅವರಂತಹದ್ದೇ ಪಾತ್ರವನ್ನು ನಿಭಾಯಿಸಿದವರು ಆ್ಯಂಡರ್ಸನ್‌. ಬೆಂಗಳೂರಿನಲ್ಲಿಯೇ ವಾಸವಾಗಿದ್ದ ಅವರು, ಕರ್ನಾಟಕ, ತಮಿಳುನಾಡು ಮತ್ತು ಆಂಧ್ರ ಪ್ರದೇಶದ ಕಾಡುಗಳಿಂದ ನಾಡಿಗೆ ಧಾವಿಸುತ್ತಿದ್ದ ‘ನರಭಕ್ಷಕ’ಗಳ ಹಾವಳಿಯನ್ನು ನಿವಾರಿಸಿದವರು. ಜಾಲಹಳ್ಳಿಯ ಕುರ್ಕನನ್ನು ಬೇಟೆಯಾಡಿದವರು ಅವರು. ಬೆಳ್ಳಂದೂರಿನ ನರಭಕ್ಷಕನನ್ನೂ ಇಲ್ಲವಾಗಿಸಿದವರು. ತಾಳವಾಡಿಯ ಮೂಕರಾಕ್ಷಸ, ವೈನಾಡಿನ ನರಭಕ್ಷಕ, ಪೆದ್ದಚೆರುವಿನ ರಾಕ್ಷಸ, ಲಕ್ಕವಳ್ಳಿಯ ಹೆಬ್ಬುಲಿ ಮೊದಲಾದವುಗಳ ಸದ್ದು ಅಡಗಿಸಿದವರು.

ಆಂಧ್ರಪ್ರದೇಶದ ಗುಂತಕಲ್‌ನಿಂದ ಪೂರ್ವದ ಕಡೆಗಿರುವ ದಿಗುವಮೆಟ್ಟ ಎಂಬಲ್ಲಿ ನರಭಕ್ಷಕ ಚಿರತೆಯನ್ನು ಕೊಂದ ಕಥೆಯನ್ನು ‘ದಿಗುವಮೆಟ್ಟದ ನರಭಕ್ಷಕ’ದಲ್ಲಿ ಆ್ಯಂಡರ್ಸನ್‌ ಅತ್ಯಂತ ರೋಚಕವಾಗಿ ವಿವರಿಸಿದ್ದಾರೆ. ಕಾಡಿನಲ್ಲಿದ್ದ ಟಿಬಿ ಬಳಿಯಲ್ಲಿ ಬ್ರಿಟಿಷ್‌ ಅಧಿಕಾರಿಯ ಸತ್ತ ನಾಯಿ ‘ಮಿಸ್‌ಛೀಪ್‌’ಗಾಗಿ ಮಾಡಿದ್ದ ಗೋರಿಗೆ ಪ್ಯಾರಿ ಎಂಬ ಹುಡುಗಿ ಹೂವಿಡಲು ಹೋಗುವುದು, ಅವಳನ್ನು ಚಿರತೆ ಹೊತ್ತೊಯ್ಯುವುದು, ಕೊನೆಗೆ ಆ್ಯಂಡರ್ಸನ್‌ ಉಪಾಯದಿಂದ ಆ ಚಿರತೆಯನ್ನು ಹೊಡೆಯುವುದು ಇದರ ಕಥೆ.

‘ಹಂಟರ‍್ಸ್‌ ಟೇಲ್‌’ಗಳಿಂದ ಪ್ರಭಾವಿತರಾದ ಓದುಗರ ದೊಡ್ಡ ಪಡೆಯೇ ಇದೆ. ಕಾರ್ಬೆಟ್‌ ಹಾಗೂ ಆ್ಯಂಡರ್ಸನ್‌ ಅವರ ಕಥೆಗಳಲ್ಲಿ ಬರುವ ತಾಣಗಳನ್ನು ಹುಡುಕಿಕೊಂಡು ಆ ಸ್ಥಳಗಳಿಗೆ ಹೋಗಿ ಬರುವ ಖಯಾಲಿ ಅವರದು. ಕೆಲವರು ಆ ಸ್ಥಳಗಳಲ್ಲೇ ಕುಳಿತು ಬೇಟೆಯ ಪ್ರಸಂಗಗಳನ್ನು ಮರು ಓದುವುದು, ಅದರ ಕುರಿತು ಚರ್ಚಿಸುವುದು – ಇಂತಹ ಪರಿಪಾಟವನ್ನೂ ಇಟ್ಟುಕೊಂಡಿದ್ದಾರೆ. ನನ್ನ ಗೆಳೆಯರ ತಂಡವೊಂದು ಹಾಗೆ ದಿಗುವಮೆಟ್ಟಕ್ಕೆ ಆ್ಯಂಡರ್ಸನ್‌ ಅವರಂತೆಯೇ ರೈಲಿನಲ್ಲಿಯೇ ಹೋಗಿದ್ದ ನೆನಪು. ‘ಮಿಸ್‌ಛೀಪ್‌’ ಗೋರಿಯನ್ನು ಕಂಡು, ಅಲ್ಲಿಯೇ ಜೀವ ಕಳೆದುಕೊಂಡ ಪ್ಯಾರಿಗಾಗಿ ಪುಷ್ಪನಮನ ಸಲ್ಲಿಸಿ ಬಂದಿದ್ದರಂತೆ.

ಬಾಂಗ್ಲಾದೇಶದಿಂದ ಇತ್ತೀಚೆಗೆ ಎಎಫ್‌ಪಿ ಸುದ್ದಿಸಂಸ್ಥೆ ಮಾಡಿದ ವರದಿಯ ವಿವರ ಮನದಂಗಳದಲ್ಲಿ ಇನ್ನೂ ಹಸಿರಾಗಿದೆ. ಸುಂದರಬನ್ಸ್‌ ಬಾಂಗ್ಲಾದೇಶದಲ್ಲೂ ಹರಡಿದೆ. ಅದರ ನೈಋತ್ಯ ಪ್ರದೇಶದಲ್ಲಿ ಜೇನು ಚೆನ್ನಾಗಿ ಸಿಗುತ್ತದೆ ಎಂದು ಬಹುತೇಕ ಸಂಗ್ರಹಕಾರರು ಅತ್ತ ಕಡೆಗೇ ಹೋಗುವುದು ರೂಢಿ. ಆದರೆ, ಅದೇ ಭಾಗದಲ್ಲಿ ನರಭಕ್ಷಕ ಹುಲಿಗಳು ಹೆಚ್ಚಾಗಿವೆ. 2001ರಿಂದ 2011ರ ಅವಧಿಯಲ್ಲಿ ಸುಮಾರು 50 ಹಳ್ಳಿಗಳಲ್ಲಿ ನರಭಕ್ಷಕಗಳು ನಡೆಸಿದ ದಾಳಿಗೆ 519 ವ್ಯಕ್ತಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಅವರ ಪತ್ನಿಯರೆಲ್ಲ ವಿಧವೆಯರಾಗಿ ಈಗ ನರಕಸದೃಶ ಬದುಕು ಸಾಗಿಸುವಂತಾಗಿದೆ.

ಜೇನು ಸಂಗ್ರಹಿಸಿಯೇ ಹೊಟ್ಟೆ ಹೊರೆಯುವ ಕುಟುಂಬಗಳು ಇವು. ಪತಿಯನ್ನು ಕಳೆದುಕೊಂಡ ಮಹಿಳೆಯರಿಗೆ ಜೀವನಾಧಾರವೇ ಇರುವುದಿಲ್ಲ. ಹುಲಿಗಳಿಗೆ ತುತ್ತಾಗುವ ಭೀತಿಯಿಂದ ಹಲವು ಕುಟುಂಬಗಳು ತಮ್ಮ ಮನೆತನದ ಜೇನು ಸಂಗ್ರಹ ವೃತ್ತಿಯಿಂದಲೇ ಈಗ ವಿಮುಖರಾಗಿದ್ದಾರೆ. ಅದರ ಬದಲು ಮೀನು ಹಿಡಿಯುವ ಕಾಯಕದಲ್ಲಿ ತೊಡಗಿದ್ದಾರೆ.

ಭಾರತದ ವಿವಿಧ ಪ್ರಾಂತ್ಯಗಳನ್ನು ಆಳುತ್ತಿದ್ದ ರಾಜರುಗಳು, ಬ್ರಿಟಿಷ್‌ ರಾಜ್ಯಭಾರದ ಅವಧಿಯಲ್ಲಿ ಅಲ್ಲಿನ ಅಧಿಕಾರಿಗಳು ತಮ್ಮ ವಿರಾಮದ ಅವಧಿಯಲ್ಲಿ ನಮ್ಮ ಕಾಡುಗಳಲ್ಲಿ ಬೇಟೆ ಆಡುತ್ತಿದ್ದುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಅದು ನಾಡಿನ ಜನರಿಗೆ ತೊಂದರೆ ಕೊಡುತ್ತಿದ್ದ ಪ್ರಾಣಿಗಳ ಹಾವಳಿ ತಪ್ಪಿಸಲಿಕ್ಕಲ್ಲ. ಮೃಗೀಯ ವಿನೋದಕ್ಕಾಗಿ. ಕೊಂದ ಪ್ರಾಣಿಗಳ ಮುಂದೆ ಸೊಕ್ಕಿನಿಂದ ನಿಂತು ಫೋಟೊ ತೆಗೆಸಿಕೊಳ್ಳುವ ಖಯಾಲಿಯೂ ಅವರಿಗಿತ್ತು. ಸ್ವಾತಂತ್ರ್ಯಾನಂತರ ಭಾರತದ ಕಾಡುಗಳಲ್ಲಿ ಬೇಟೆ ಆಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ; ಮಾತ್ರವಲ್ಲ ಅದೊಂದು ಶಿಕ್ಷಾರ್ಹ ಅಪರಾಧವೂ ಆಗಿದೆ. ಹೀಗಿದ್ದೂ ಕಳ್ಳಬೇಟೆಗಳ ಕುರಿತು ದೂರುಗಳು ಕೇಳಿಬರುತ್ತಲೇ ಇವೆ. ಹಾಗೆಯೇ ನರಭಕ್ಷಕಗಳ ಹಾವಳಿ ಕುರಿತು ಮೈಸೂರು ಹಾಗೂ ಬೆಳಗಾವಿ ಭಾಗಗಳಿಂದ ವರದಿಗಳು ಬರುತ್ತಲೇ ಇವೆ. ಮಾನವ–ಪ್ರಾಣಿ ಸಂಘರ್ಷಕ್ಕೆ ಕಾಡಿನ ನಾಶ ಹಾಗೂ ಹೆಚ್ಚಿದ ಅಭಿವೃದ್ಧಿ ಚಟುವಟಿಕೆಗಳೇ ಕಾರಣ ಎಂದೂ ಹೇಳಲಾಗುತ್ತಿದೆ.

ಬೇಟೆ ತ್ಯಜಿಸಿದಾಗ ರೈಗಳು ಹೇಳಿಕೊಂಡ ಈ ಕೆಳಗಿನ ಸಾಲು ಮಾತ್ರ ಮತ್ತೆ ಮತ್ತೆ ಪ್ರತಿಧ್ವನಿಸುತ್ತಲೇ ಇದೆ: ‘ತೃಣಮಂಮೇಲ್ವೇಣಕೆ ನೀರುಣಿಯಾಗಿಹ ಮೀನ್ಗೆ, ಬಾಧೆಗೈಯ್ಯದೆ– ಪೆರರಂ ತಣಿವ ಸುಜನರ್ಗೆ– ನಿಷ್ಕಾರಣ ವೈರಿಗಳಲ್ತೆ, ಕಿರಾತ ಧೀವರ ಪಿಶುನರ್‌.’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT