ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಲೆಗಳು ನಡೆಯಲಿ ಎಂದೇ ಕಾದು ಕುಳಿತಿರುತ್ತೀರಾ? ಪೊಲೀಸರ ಕಾರ್ಯವೈಖರಿಗೆ ನ್ಯಾಯಾಲಯ ಅಸಮಾಧಾನ

Last Updated 27 ಏಪ್ರಿಲ್ 2018, 11:14 IST
ಅಕ್ಷರ ಗಾತ್ರ

ಬೆಂಗಳೂರು: ಶುಕ್ರವಾರ ಸಿವಿಲ್ ವ್ಯಾಜ್ಯವೊಂದರ ವಿಚಾರಣೆ ವೇಳೆ ಇಲಾಖೆಯ ಕಾರ್ಯವೈಖರಿಗೆ ನ್ಯಾಯಮೂರ್ತಿ ಆರ್.ಎಸ್.ಚೌಹಾಣ್ ಅವರಿದ್ದ ಏಕಸದಸ್ಯ ನ್ಯಾಯಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

'ಇತ್ತೀಚೆಗೆ ಸಿವಿಲ್ ವ್ಯಾಜ್ಯಗಳ ಸಂಬಂಧವಾಗಿಯೇ ಕೊಲೆಗಳು ನಡೆಯುತ್ತಿವೆ. ಆದರೆ ಪೊಲೀಸರು ಮಾತ್ರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕೊಲೆಗಳು ನಡೆಯಲಿ ಎಂದೇ ಕಾದು ಕುಳಿತಿರುತ್ತೀರಾ' ಎಂದು ನ್ಯಾಯಪೀಠ ಅಸಮಾಧಾನ ಹೊರಹಾಕಿದೆ.

'ಪೊಲೀಸರ ವಿರುದ್ಧ ಹೈಕೋರ್ಟ್ ನಲ್ಲಿ ಪ್ರತಿದಿನ ರಿಟ್ ಅರ್ಜಿ ದಾಖಲಾಗುತ್ತಿವೆ. ಪೊಲೀಸರು ಇಂತಹ ಪ್ರಕರಣಗಳ ತನಿಖೆಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಇತ್ತೀಚೆಗೆ ಬಹುತೇಕ ಪ್ರಕರಣಗಳಲ್ಲಿ ಪೊಲೀಸರಿಂದ ಸೂಕ್ತ ತನಿಖೆಗಳೇ ನಡೆಯುತ್ತಿಲ್ಲ' ಎಂದು ತರಾಟೆಗೆ ತೆಗೆದುಕೊಂಡಿದೆ.

'ಕರ್ನಾಟಕ ದೇಶದಲ್ಲೇ ಉತ್ತಮ ಆಡಳಿತ ವ್ಯವಸ್ಥೆಯ ರಾಜ್ಯವಾಗಿರಬೇಕು. ಆದರೆ ಪೊಲೀಸರ ಇತ್ತೀಚಿನ ಕಾರ್ಯವೈಖರಿ ಗಮನಿಸಿದರೆ ಬಿಹಾರ ಹಾಗೂ ಜಾರ್ಖಂಡ್ ರಾಜ್ಯಗಳೊಂದಿಗೆ ಕರ್ನಾಟಕ ಪೊಲೀಸರು ಸ್ಪರ್ಧಿಸುತ್ತಿರುವಂತೆ ಕಾಣುತ್ತಿದೆ' ಎಂದು ನ್ಯಾಯಪೀಠ ಬೇಸರ ವ್ಯಕ್ತಪಡಿಸಿದೆ.

‘ಪ್ರಕರಣದಲ್ಲಿ ಸೋದರನಿಂದಲೇ ಜೀವ ಬೆದರಿಕೆ ಇದ್ದು, ಈ ಸಂಬಂಧ ಅರ್ಜಿದಾರರು ಪೊಲೀಸರಿಗೆ 2014ರಲ್ಲೇ ದೂರು ನೀಡಿದ್ದಾರೆ. ಆದರೆ ಪೊಲೀಸರು ಕೇವಲ ಎಫ್ಐಆರ್ ದಾಖಲಿಸಿ ಸುಮ್ಮನಾಗಿದ್ದಾರೆ. ಪೊಲೀಸರ ಪ್ರತಿ ತನಿಖೆ ತಾರ್ಕಿಕ ಅಂತ್ಯ ಕಾಣಬೇಕು. ಕರ್ತವ್ಯಲೋಪ ಎಸಗುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಿ' ಎಂದು ಕೋರ್ಟ್‌ಗೆ ಖುದ್ದು ಹಾಜರಿದ್ದ ಐಜಿಪಿ ದಯಾನಂದ್ ಅವರಿಗೆ ಸೂಚನೆ ನೀಡಿದೆ.

ಅರ್ಜಿದಾರರು ನೀಡಿರುವ ದೂರಿನ ಆಧಾರದಲ್ಲಿ ಆರೋಪಿಯ ಮೇಲೆ ಎಫ್‌ಐಆರ್ ದಾಖಲಿಸಿ, ಪ್ರಕರಣದ ಸಂಬಂಧ ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ಮುಂದಿನ ವಿಚಾರಣೆ ವೇಳೆ ವರದಿ ಸಲ್ಲಿಸುವಂತೆ ಸೂಚಿಸಿ ವಿಚಾರಣೆ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT