ಶನಿವಾರ, ಜೂನ್ 19, 2021
27 °C

ನಿತ್ಯೋತ್ಸವ: ಕನ್ನಡ ಭಾವಗೀತೆಗಳಿಗೇ 'ಟ್ರೆಂಡ್‌ಸೆಟ್ಟರ್‌'

ಬಿ.ಆರ್‌. ಲಕ್ಷ್ಮಣರಾವ್‌ Updated:

ಅಕ್ಷರ ಗಾತ್ರ : | |

prajavani

ಕನ್ನಡದಲ್ಲಿ ಸುಗಮ ಸಂಗೀತಕ್ಕೆ ಕಾಳಿಂಗರಾಯರು ಮತ್ತು ಬಾಳಪ್ಪ ಹುಕ್ಕೇರಿ ಅವರನ್ನು ನಾವು ಆದ್ಯಪ್ರವರ್ತಕರು ಎಂದು ಕರೆಯುತ್ತೇವೆ. ಇವರಿಬ್ಬರೂ ಆ ಕಾಲದಲ್ಲಿ ಹಳ್ಳಿಹಳ್ಳಿಗೆ ಹೋಗಿ  ಹಾಡುಗಳನ್ನು ಹಾಡಿ ತತ್ವಪದ, ಜಾನಪದ ಅಲ್ಲದೆ ಕವಿಗೀತೆಗಳನ್ನು ಜನಪ್ರಿಯಗೊಳಿಸಿದವರು. ಕನ್ನಡದಲ್ಲಿ ಭಾವಗೀತೆಗಳೆಂದು ಮುಖ್ಯವಾಗಿ ಕವಿಗೀತೆಗಳನ್ನೇ ಕರೆಯುತ್ತೇವೆ. ಆ ಬಳಿಕ ಅದನ್ನು ಸತ್ವಯುತವಾಗಿ ಮುಂದುವರಿಸಿದವರು ಮೈಸೂರು ಅನಂತಸ್ವಾಮಿಯವರು.  ಈ ಭಾವಗೀತೆಗಳ ಸುಗಮಸಂಗೀತ ಕ್ಷೇತ್ರಕ್ಕೆ ಬಹುದೊಡ್ಡ ತಿರುವನ್ನು ಕೊಟ್ಟವರು ಕೆ.ಎಸ್‌.ನಿಸಾರ್‌ ಅಹ್ಮದ್‌. ಮೊಟ್ಟಮೊದಲ ಭಾವಗೀತೆಗಳ ಧ್ವನಿಸುರುಳಿಯನ್ನು ಕನ್ನಡಕ್ಕೆ ತಂದವರು ನಿಸಾರ್‌ ಅಹ್ಮದ್‌. ಅದೇ ಅವರ ’ನಿತ್ಯೋತ್ಸವ.‘ 

’ನಿತ್ಯೋತ್ಸವ‘ ಕನ್ನಡ ಭಾವಗೀತೆಗಳಿಗೇ ಒಂದು ಟ್ರೆಂಡ್‌ಸೆಟ್ಟರ್‌. ಅದು ಹೊಸ ರೀತಿಯ ಕವಿತೆಗಳ ನುಡಿಗಟ್ಟುಗಳೂ ಆಗಿದ್ದವು. ಮೊದಲು ಕಾರ್ಯಕ್ರಮಗಳಲ್ಲಿ ಮಾತ್ರ ಕೇಳಿಸಿಕೊಳ್ಳುತ್ತಿದ್ದ ಭಾವಗೀತೆಗಳು ಈ ಕ್ಯಾಸೆಟ್‌ ಕ್ರಾಂತಿಯಿಂದಾಗಿ ಮನೆಮನೆಗಳಿಗೆ ತಲುಪಲು ಸಾಧ್ಯವಾಯಿತು. ಇದು ನಿಸಾರ್‌ ಅಹ್ಮದ್‌ ಅವರು ಸುಗಮ ಸಂಗೀತ ಕ್ಷೇತ್ರಕ್ಕೆ ಕೊಟ್ಟ ಹೊಸ ಆಯಾಮ, ಹೊಸ ತಿರುವು. ಆ ಬಳಿಕ ಕನ್ನಡದಲ್ಲಿ ಇದು ದೊಡ್ಡ ಆಂದೋಲನವಾಗಿ ಬಂತು. ಆಗ ನಮ್ಮನ್ನೆಲ್ಲ ’ಕ್ಯಾಸೆಟ್‌ಕವಿ‘ಗಳು ಎಂದೇ ಕರೆಯುತ್ತಿದ್ದರು.

ನಾನು ವೈಯಕ್ತಿಕವಾಗಿ ನಿಸಾರ್‌ ಅಹ್ಮದ್‌ ಅವರ ಕಾವ್ಯದಿಂದ ಪ್ರಭಾವಿತನಾದವನು. ಅವರ ಕಾವ್ಯದಲ್ಲಿ ಇದ್ದಂತಹ ಆಧುನಿಕ ನುಡಿಗಟ್ಟುಗಳು, ಹಾಸ್ಯಲೇಪನ, ವಿಡಂಬನೆ, ಲಯ, ಪ್ರಾಸ ಮತ್ತು ಹೊಸ ಭಾಷಾಪ್ರಯೋಗ ಎಲ್ಲವೂ ನನ್ನ ಮತ್ತು ಸಮಕಾಲೀನರ ಮೇಲೆ ತುಂಬಾ ಪ್ರಭಾವ ಬೀರಿದವು. ಕೆ.ಎಸ್‌.ನ., ಬೇಂದ್ರೆ, ಕುವೆಂಪು, ಅಡಿಗರ ಭಾವಗೀತೆಗಳಿಗಿದ್ದ ಶೈಲಿ ಬಿಟ್ಟು ಹೊಸ ದಾರಿಯನ್ನು ಹಿಡಿದವರು ನಿಸಾರ್‌.

ನಿತ್ಯೋತ್ಸವ ಎನ್ನುವ ಹಾಡೇ ಒಂದು ರೀತಿಯಲ್ಲಿ ಅಜರಾಮರ. ರಾಜ್ಯಕ್ಕೆ ಒಂದು ಅಧಿಕೃತ ನಾಡಗೀತೆಯನ್ನು ರೂಪಿಸುವ ಪ್ರಸ್ತಾಪ ಬಂದಾಗ ನಿತ್ಯೋತ್ಸವವೂ ಪರಿಗಣನೆಯಲ್ಲಿತ್ತು. ಅವರಿಗೆ ‘ನಿತ್ಯೋತ್ಸವದ ಕವಿ’ ಎಂದೇ ಹೆಸರು ಬಂತು. ಅದು ಈಗಲೂ ನಾಡಗೀತೆಗೆ ಸಂವಾದಿಯೇ. ನವ್ಯಕಾವ್ಯ ಕ್ಷೇತ್ರದಲ್ಲಿ ಅವರು ಹೇಗೆ ಪ್ರಭಾವ ಬೀರಿದರೋ ಅದೇ ರೀತಿ ಭಾವಗೀತೆಗಳಲ್ಲೂ ಅವರ ಪ್ರಭಾವ ದಟ್ಟವಾಯಿತು. ನಾನು. ಎಚ್ಚೆಸ್ವಿ ಎಲ್ಲರೂ ಮುಂದೆ ಭಾವಗೀತೆಗಳನ್ನು ಬರೆದವರು. ನಾವೆಲ್ಲ ಆ ಕ್ಷೇತ್ರಕ್ಕೆ ಬರಲು ಕಾರಣರಾದವರು ನಿಸಾರ್‌ ಅಹ್ಮದ್‌ ಮತ್ತು ಎನ್‌.ಎಸ್.ಲಕ್ಷ್ಮೀನಾರಾಯಣ ಭಟ್ಟರು.

ಭಾವಗೀತೆಗಳ ಈ ಧ್ವನಿಸುರುಳಿ ಟ್ರೆಂಡ್‌ ಆ ಬಳಿಕ ಎಷ್ಟು ಬೆಳೆಯಿತೆಂದರೆ, ನಮ್ಮ ಎಲ್ಲ ಶ್ರೇಷ್ಠ ಕವಿಗಳ ಭಾವಗೀತೆಗಳು ಧ್ವನಿಸುರುಳಿಗಳ ಮೂಲಕ ಮನೆಮನೆಗೆ ತಲುಪಲು ಕಾರಣವಾಯಿತು. ನಿತ್ಯೋತ್ಸವ ಧ್ವನಿಸುರುಳಿ ಬಂದ ಬಳಿಕ‌ ಕುವೆಂಪು, ಬೇಂದ್ರೆ, ಅಡಿಗ, ಲಕ್ಷ್ಮೀನಾರಾಯಣ ಭಟ್ಟ, ಜಿ.ಎಸ್‌.ಶಿವರುದ್ರಪ್ಪ ಎಲ್ಲರ ಭಾವಗೀತೆಗಳೂ ಧ್ವನಿಸುರುಳಿ ಮೂಲಕ ಬಂತು. ಅದನ್ನು ಆಗುಮಾಡಿದವರು ಮೈಸೂರು ಅನಂತಸ್ವಾಮಿ ಮತ್ತು ಸಿ.ಅಶ್ವಥ್‌.

ನವ್ಯಕವಿತೆಯ ರೂಪದಲ್ಲಿದ್ದ ನಿಸಾರ್‌ ಅವರ ’ಕುರಿಗಳು ಸಾರ್‌ ಕುರಿಗಳು ಸಾರ್‌‘ ಕೂಡಾ ಹಾಡಾಗಿ ಜನಪ್ರಿಯವಾಗಿದ್ದು ವಿಶೇಷ. ಎಂಎಸ್‌ಐಎಲ್ ಯುವಜನರಿಗೆ  ಭಾವಗೀತೆಗಳ ಸ್ಪರ್ಧೆ ಮಾಡಿದಾಗ ಅವರು ಅದಕ್ಕೆ ’ನಿತ್ಯೋತ್ಸವ‘ ಎಂದೇ ಹೆಸರಿಟ್ಟಿದ್ದರು. ಒಟ್ಟಿನಲ್ಲಿ ಕನ್ನಡದಲ್ಲಿ ಭಾವಗೀತೆ ಮತ್ತು ಸುಗಮಗೀತೆಗಳ ಒಂದು ಹೊಸ ಟ್ರೆಂಡ್‌ಅನ್ನು ಹುಟ್ಟುಹಾಕಿದವರು ನಿಸ್ಸಂಶಯವಾಗಿ ನಿಸಾರ್‌ ಅಹ್ಮದ್‌ ಅವರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು