ಸೋಮವಾರ, ಜುಲೈ 13, 2020
29 °C

ನೀವಿನ್ನು ಹೊರಡಿ...

ಆಶಾ ಜಗದೀಶ್ Updated:

ಅಕ್ಷರ ಗಾತ್ರ : | |

ಬಿಮ್ಮನೆ ತುಂಬಿಕೊಂಡಂತಿರುವ ತೋಟ 
ಮೈದುಂಬಿ ನಿಂತ ಹೂಗಳ  
ಹೊಸ ಧಿಮಾಕು....
ನೋಡುವ ಮಂದಿಗೇಕೋ ಇರುಸು ಮುರುಸು
ಅವಳ ಕೈಯ ಮಾಲೆಯಾಗಲು
ತುದಿಗಾಲಲ್ಲಿ ತೊನೆಯುತ್ತಿಹ ಹೂಗಳು

 ಆರಿಸಿಕೊಳ್ಳುವ ಆಯ್ಕೆ ದುಂಬಿಗಳದೇ 
ಏಕಿರಬೇಕು ಯಾವಾಗಲೂ 
ನಾವೂ ಆರಿಸುತ್ತೇವೆ....

ಏಯ್ ದುಂಬಿಗಳೇ....
ಬನ್ನಿ ಸಾಲಾಗಿ...
ಇದೋ ಇಲ್ಲಿ ನಿಲ್ಲಿ
ಚೂರು ನಡೆಯಿರಿ....
ಇಂಪಾಗಿ ಗುಯ್ ಗುಟ್ಟಿರೊಮ್ಮೆ....
ಕಾಲೋ.... ಚೂರು ಕುಂಟು
ಅದೇನು ಮೀಸೆಯೋ ಸವೆದ ಕಸಬರಿಗೆಯೋ
ಅದೆಂಥ ಸ್ವರವಯ್ಯ ಕರ್ಕಶ ಕರ್ಣಕಠೋರ
ಸಾಕು ಮಾಡಿ..
ನಡೆಯಿರಿ ಮುಂದಕ್ಕೆ....
ಇನ್ನಷ್ಟು ದುಂಬಿಗಳಿವೆ ಸಾಲಿನಲ್ಲಿ...

 ನಮ್ಮದಿನ್ನು ಮುಂದೆ ಹೀಗೇ...
ನೇರಾ ಚುಚ್ಚು ಮಾತು
ನೋಯಿತೆಂದು ದೂರಲು ಉಸಿರ ತೆಗೆಯಬೇಡಿ
ನಾವು ಇಷ್ಟಲ್ಲಿಯವರೆಗೂ ಬಿಗಿಹಿಡಿದಿಟ್ಟಿರುವ
ಉಸಿರ ಸಾಲವನ್ನು ಮೊದಲು
ಚುಕ್ತಾ ಮಾಡಿ...

 ಸ್ವಯಂವರ ಏರ್ಪಡಿಸಿಕೊಂಡಿದ್ದಾಳವಳು 
ಅವನನ್ನು ಕರೆದು...  
ಇನ್ನಾರಿಗೋ ಆಸೆಪಟ್ಟು....
ಎದುರು ನಿಂತವನ ಕೊರಳಿಗೆ
ಮಾಲೆ ಇಳಿಸಲು ಮೀನಾಮೇಷ
ಎಣಿಸುತ್ತಿದ್ದಾಳೆ...
ನಾವು ಪುನರಪಿ ಹುಟ್ಟುತ್ತೇವೆ 
ಅವಳ ಕೈಯ ಬಾಡದ ಮಾಲೆಯಾಗಲು... 
ಇದನ್ನು ಕೇಳಲು ನೀವು ಯಾರಲ್ಲದಿದ್ದರೂ 
ಬೊಬ್ಬೆಹಾಕುತ್ತೀರೇಕೋ....

 ನೀವು ಸವಿದ ಹೂಗಳ ಸಂಖ್ಯೆ 
ನಿಮಗೆ ನೆನಪಿಲ್ಲದಿದ್ದರೂ 
ಅವಳ ಉಡುಗೆ ತೊಡುಗೆ  ನಡೆ ನುಡಿಯ 
ಬಗ್ಗೆ ಚಕಾರವೆತ್ತುತ್ತೀರಿ... 
ಅವಳ ಸೆರಗು ತುಡುಗು ಎನ್ನುತ್ತೀರಿ 
ನಿಮ್ಮ ಕೊಂಕು ಕೊಂಡಿಗಳೆಲ್ಲ ಸತ್ವ 
ಕಳೆದುಕೊಂಡಿವೆ 
ಹಿಸುಕಿ ಹಿಸುಕಿ ಕೈ ಕೆಂಪಾಗಿಸಿಕೊಳ್ಳಿರಷ್ಟೆ

 ಅವಳು ಸ್ವಯಂ ವರ ಕೂಟವನ್ನು  
ಮುಂದೂಡಿದ್ದಾಳೆ  
ಇಲ್ಲಿಯವರೆಗೂ ಅದೆಷ್ಟನೆ ಬಾರಿಯೋ 
ನಿಮಗೆ ಕಾಯುವುದಿದೆಯಷ್ಟೇ 
ಅವಳು ಅಭಿಸಾರಿಕೆ...

 ನಾವಂತೂ ದಿನಂಪ್ರತಿ ಹುಟ್ಟಿ 
ಪ್ರತಿದಿನ ಸಾಯುತ್ತೇವೆ.... 
ಅವಳ ಆಣತಿಯ ಮೇರೆಗೆ

 ನೀವಿನ್ನು  ಹೊರಡಿ 
ನಾಳೆ ಬನ್ನಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.