ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿತೆ ಏಕಾಂತ ಲೋಕಾಂತ

Last Updated 1 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ಇಂಗ್ಲಿಷ್ ಕವಿ ಆಡೆನ್ ತನ್ನ ಇನ್ ಮೊಮೊರಿ ಆಫ್ಡಬ್ಲ್ಯು. ಬಿ. ಯೇಟ್ಸ್ ಕವಿತೆಯಲ್ಲಿ ಹೇಳಿಕೊಂಡ:

... poetry makes nothing happen

... ... ... ... ... ... ...; it survives,

A way of happening, a mouth.

...... ಕವಿತೆಯಿಂದ ಏನೂ ಆಗುವುದಿಲ್ಲ, ಅದರಿಂ

ದೇನೂ ಹುಟ್ಟುವುದಿಲ್ಲ... ... ಬದುಕುಳಿದು ಅದು

ಹೇಗೊ ಬಾಳಿಕೊಂಡಿರುತ್ತೆ. ಆಗುತ್ತ ಇರುವೊಂದು

ಬಗೆ ತಾನು ಎಂಬಂತೆ; ನಾಲಿಗೆ, ಬಾಯೆಂಬಂತೆ.

ಕವಿತೆಯಿಂದ ಏನೂ ಆಗದೇ ಇರಬಹುದು. ಆದರೂ ಇರುತ್ತದೆ ಅದು, ಆಗುತ್ತಿರುತ್ತದೆ.

ಬೇಕು ಕವಿತೆ, ಆಗುತ್ತಿರಬೇಕು.

ಏನೂ ಹುಟ್ಟದೇಯಿರಬಹುದು ಅದರಿಂದ. ಆದರೆ ಅದಕ್ಕೆ ಒಂದು ಹುಟ್ಟು ಅನ್ನುವುದಿರುತ್ತದೆಯಲ್ಲವೆ?

ಆ ಹುಟ್ಟು ಆಗುವುದೆಲ್ಲಿ, ಯಾವುದರಿಂದ?

ಕವಿ ಬದುಕುವುದು, ಎಲ್ಲರಂತೆ, ಲೋಕಾಂತವಾಗಿ. ಕವಿತೆ ಹುಟ್ಟುವುದು, ಹೆಚ್ಚಾಗಿ, ಹಾಗೆ ಲೋಕಾಂತವಾಗಿ ಬದುಕುವ ಕವಿಯ ಮನಸ್ಸಿನ ಏಕಾಂತದ ಯಾವುದೋ ಮೂಲೆಯಲ್ಲಿ. ಏಕಾಂತದಲ್ಲಿ; ಏಕಾಂತದಿಂದ ಅಲ್ಲ.

ಆ ಏಕಾಂತ, ತಾನು ಸಲ್ಲಬೇಕಾದಲ್ಲಿ, ಲೋಕಾಂತ ಕಾಂತತೆಯಿಂದ ವಿದ್ಯುತ್ ಜಾಗರಗೊಂಡ ಏಕಾಂತವಾಗಬೇಕು.

ಏಕಾಂತ ಜಾಗೃತಗೊಳ್ಳಲು ಹವಣಿಸುವ ಪ್ರಜ್ಞೆ, ತಾಮ್ರದ ತಂತಿಯ ಸುರುಳಿ; ಲೋಕಾಂತ ಅದನ್ನು ಸುತ್ತುಗಟ್ಟಿರುವ ಅಯಸ್ಕಾಂತದ ಕೊಳವೆ. ಲೋಕಾಂತದ ಅಯಸ್ಕಾಂತ ಗಿರ‍್ರನೆ ತಿರುಗಿದಾಗ ಏಕಾಂತದ ತಂತಿಯಲ್ಲಿ ಲೋಕಾನುಕಂಪ ಮತ್ತು ಸ್ಪಂದಗಳ ವಿದ್ಯುಜ್ಜಾಗರ. ದೇವರಿಂದ ಭಕ್ತನು ಸ್ಪಂದಶಕ್ತಿ ಪಡೆದುಕೊಂಡಂತೆ, ಇದು. ಲೋಕಾಂತ, ದೇವರು. ಏಕಾಂತ, ಭಕ್ತ.

ಅಥವಾ, ಲೋಕಾಂತದ ಅಯಸ್ಕಾಂತವು ಜಡವಾಗಿದ್ದಲ್ಲಿ, ಏಕಾಂತ ತಾನು ಆ ಲೋಕಾಂತವನ್ನು ಸುತ್ತುವರಿದಿರುವ, ವಿದ್ಯುತ್ ಜಾಗರಗೊಂಡ ತಂತಿಸುರುಳಿ. ತನ್ನಲ್ಲಿನ ವಿದ್ಯುತ್ತಿನಿಂದ ಅಯಸ್ಕಾಂತವನ್ನು ಎಚ್ಚರಿಸಿ, ವಾಪಸು ಅಯಸ್ಕಾಂತದಿಂದ ಬಲಪಡೆದುಕೊಳ್ಳಬೇಕು ಅದು, ಗಿರ‍್ರನೆ ತಿರುಗಲು, ಆಡಲು ತೊಡಗಬೇಕು. ಯೋಗನಿದ್ರೆಯಲ್ಲಿರುವ ಭಗವಂತನನ್ನು ಭಕ್ತನು ತನ್ನ ಭಕ್ತಿಯಿಂದ ಎಚ್ಚರಿಸಿ, ಮರಳಿ ಆ ಭಗವಂತನಿಂದಲೆ ಸ್ಪಂದಶಕ್ತಿ ಪಡೆದುಕೊಂಡಂತೆ, ಇದು.

ಈ ಎರಡೂ ವಿದ್ಯಮಾನಗಳಲ್ಲಿ ಭಕ್ತ-ಏಕಾಂತ ಎಂಬ ಸುರುಳಿತಂತಿ ಲೋಕಾಂತ-ಅಯಸ್ಕಾಂತದಿಂದ ಸ್ಪಂದಶಕ್ತಿ ಪಡೆಯುವುದು ತನಗಾಗಿ ಅಲ್ಲ. ಬದಲು, ಆ ಸ್ಪಂದಶಕ್ತಿಯನ್ನು ಲೋಕದ ಒಳಿತಿಗೆ, ವಿಶ್ವ-ಬ್ರಹ್ಮಾಂಡದ ಒಳಿತಿಗೆ ವ್ಯಯಮಾಡಲೆಂದು, ಲೋಕಾಂತಕ್ಕೇ ಮರಳಿ ನೀಡಲೆಂದು - ಕೆರೆಯ ನೀರನು ಕೆರೆಗೆ ಚೆಲ್ಲುವಂತೆ.

ಕವಿತೆ ಹುಟ್ಟುವುದು ಏಕಾಂತಲೋಕಾಂತಗಳ ಮೈಥುನದ ಅಂಥ ವಿದ್ಯುಜ್ಜಾಗರದಿಂದ.

ಅಂಥ ಜಾಗರ ಮತ್ತು ಲೋಕಾಂತಭಕ್ತಿಯಿಲ್ಲದ ಆತ್ಮಲೀನ ಏಕಾಂತವು ಪಾತಕ, ಸಾವಿಗೆ ಸಮ.

ಮತ್ತು, ಏಕಾಂತಕ್ಕೆ ತಾವಿಲ್ಲದ ಜಾಗರ, ಅತಿ ಲೋಕಾಂತರತಿ ಪ್ರೇತಾತ್ಮಗಳ ಹಪಾಹಪಿತನಕ್ಕೆ ಸಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT