ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Pv Web Exclusive: ತೇಜಸ್ವಿ ನೆಪದಲ್ಲಿ...

Last Updated 14 ಸೆಪ್ಟೆಂಬರ್ 2020, 11:43 IST
ಅಕ್ಷರ ಗಾತ್ರ

ಕಳೆದ ವಾರ ಲೇಖಕ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಹುಟ್ಟುಹಬ್ಬದ (ಸೆ.8) ನೆಪದಲ್ಲಿ ಅವರ ಅಭಿಮಾನಿಗಳು, ಓದುಗರು ಫೇಸ್‌ಬುಕ್‌ನಲ್ಲಿ ಹತ್ತಾರು ಬಗೆಯಲ್ಲಿ ಅವರ ಬಗ್ಗೆ ಬರೆದುಕೊಂಡರು. ತೇಜಸ್ವಿ ವ್ಯಕ್ತಿತ್ವ, ಸಾಹಿತ್ಯ, ವಿಚಾರಧಾರೆ, ಕನ್ನಡ ಸಾಹಿತ್ಯ ಮತ್ತು ಚಿಂತನೆಯ ಮೇಲೆ ಅವರು ಮಾಡಿದ ಪ್ರಭಾವ,ಅವರೊಂದಿಗಿನ ಭೇಟಿ ಅದರಲ್ಲಿ ಸೇರಿತ್ತು. ಇದರೊಂದಿಗೆ ಅಲ್ಲಲ್ಲಿ ಅವರ ಸಾಹಿತ್ಯದ ಓದು ಸಡಗರ, ಸಂಭ್ರಮದಿಂದ ನಡೆದಿತ್ತು. ಲೇಖಕನೊಬ್ಬ ತನ್ನ ಕಾಲಮಾನವನ್ನೂ ದಾಟಿ ಜೀವಂತವಾಗಿರುವುದೆಂದರೆ ಇದೇ ಇರಬೇಕು. ಅದು ತೇಜಸ್ವಿ ಅವರಂತಹ ಲೇಖಕರ ವಿಷಯದಲ್ಲಿ ಮಾತ್ರ ಆಗುತ್ತಿರುವುದು ಕುತೂಹಲಕರವಾಗಿದೆ. ತೇಜಸ್ವಿ ಅವರ ಬಗ್ಗೆ ಸಂಭ್ರಮಗೊಳ್ಳಲು ಅವರ ಅನನ್ಯ ಸಾಹಿತ್ಯ ಮಾತ್ರ ಕಾರಣವೆ? ಅವರು ಬದುಕಿದ ರೀತಿಯಿಂದಾಗಿ ಇದು ಆಗುತ್ತದೆಯೇ? ಬಹುಶಃ ಈ ಎರಡೂ ಅಂಶಗಳು ಕಾರಣ ಎಂದು ಕಾಣುತ್ತದೆ. ಏಕೆಂದರೆ, ತೇಜಸ್ವಿ ಅವರ ರೀತಿ ಬದುಕಿ, ಬರೆಯುವುದು ಭಾರತದ ಸಂದರ್ಭದಲ್ಲಿ ಕನಸಿನ ಮಾತೇ ಸರಿ. ಕನಸು ಕಾಣುವುದು (ಅದು ಬಹುಪಾಲು ಅಸಂಭವ ಎಂದು ಗೊತ್ತಿದ್ದರೂ) ಎಲ್ಲರಿಗೂ ಇಷ್ಟವಾದ್ದರಿಂದ ತೇಜಸ್ವಿ ಬದುಕು–ಬರಹ ಯಾವತ್ತಿಗೂ ನಮಗೆ ಪ್ರಿಯವಾಗಿಯೇ ಉಳಿಯುತ್ತದೆ.

ವಿಜ್ಞಾನ, ಕಲೆಗಳಲ್ಲಿ ತೇಜಸ್ವಿ ಅವರಷ್ಟೇ ವಿಸ್ತಾರವಾದ ಆಸಕ್ತಿಯಿದ್ದ, ಪ್ರಯೋಗಗಳನ್ನು ಮಾಡಿದ, ಅಭಿಜಾತ ಕಾದಂಬರಿಗಳನ್ನು ಬರೆದ ಶಿವರಾಮ ಕಾರಂತರು ನಮ್ಮ ಅನೇಕ ಯುವ ಓದುಗರನ್ನು ಆಕರ್ಷಿಸಿದಂತಿಲ್ಲ. ತಮ್ಮ ಸಾಹಿತ್ಯ, ಆಧುನಿಕ ಚಿಂತನೆ, ಆಕರ್ಷಕ ಮಾತುಗಾರಿಕೆ, ವ್ಯಕ್ತಿತ್ವದಿಂದ ಕನ್ನಡಿಗರನ್ನು ಮಂತ್ರಮುಗ್ಧಗೊಳಿಸಿದ ಯು.ಆರ್‌. ಅನಂತಮೂರ್ತಿಯವರು ಕೂಡ ಹೊಸ ತಲೆಮಾರಿನ ಓದುಗರನ್ನು ತಮ್ಮತ್ತ ಸೆಳೆದಂತಿಲ್ಲ. ಲೇಖಕ, ಪತ್ರಕರ್ತ ಪಿ. ಲಂಕೇಶ್ ತಮ್ಮ ಬರವಣಿಗೆಯಿಂದ ಹಲವು ತಲೆಮಾರುಗಳನ್ನು ಪ್ರಭಾವಿಸಿದವರು ಮತ್ತು ರೂಪಿಸಿದವರು. ಅತ್ಯುತ್ತಮ ಗದ್ಯವನ್ನು ಸೃಷ್ಟಿಸಿದ ಕೆಲವೇ ಕೆಲವು ಕನ್ನಡ ಲೇಖಕರಲ್ಲಿ ಅವರೊಬ್ಬರು. ಅಂತಹ ಲಂಕೇಶರಿಗೆ ತೇಜಸ್ವಿ ಅವರಿಗೆ ಇರುವ ದೊಡ್ಡ ‘ಅಭಿಮಾನಿ ಸಮೂಹ’ ಹೊಸ ತಲೆಮಾರಿನಲ್ಲಿ ಹುಟ್ಟಿಕೊಂಡಂತಿಲ್ಲ. ಹೊಸ ಪೀಳಿಗೆಯ ಓದುಗರು ತೇಜಸ್ವಿ ಸಾಹಿತ್ಯದತ್ತ ಆಕರ್ಷಿತರಾಗಿದ್ದಾರೆ ಎಂದೊಡನೆ ಅವರೆಲ್ಲರೂ ಈ ದೊಡ್ಡ ಲೇಖಕನ ಎಲ್ಲ ಬರವಣಿಗೆಗಳನ್ನು ಓದಿ ಸವಿದಿದ್ದಾರೆ, ಅವರ ವಿಚಾರಗಳನ್ನು ಪರಿಪಾಲನೆ ಮಾಡಲು ತುದಿಗಾಲಿನಲ್ಲಿ ನಿಂತಿದ್ದಾರೆ ಎಂದು ನಾವು ಭಾವಿಸುವ ಅಗತ್ಯವೇನಿಲ್ಲ!

ಕನ್ನಡದಂತಹ ಭಾಷೆಯಲ್ಲಿ ಬರಹಗಾರನೊಬ್ಬನಿಗೆ ಸದಾ ಓದುಗ ಅಭಿಮಾನಿಗಳು ಹುಟ್ಟಿಕೊಳ್ಳುತ್ತಲೇ ಇರುವುದು ಸಮಾಧಾನ ತರುವ ವಿಷಯವೇ. ಕಾಲಕ್ಕೆ ತಕ್ಕಂತೆ ಲೇಖಕರಿಗೆ ಅವರ ಬರವಣಿಗೆಯ ಶಕ್ತಿಯನ್ನು ಅವಲಂಬಿಸಿ ಅಭಿಮಾನ ವ್ಯಕ್ತವಾಗುತ್ತ ಇರುತ್ತದೆ. ಈ ಹಿಂದೆ ಬೇಂದ್ರೆ, ಕುವೆಂಪು, ಕಾರಂತ, ಅನಕೃ, ತರಾಸು, ನಿರಂಜನ, ಬೀಚಿ ಈ ಬಗೆಯ ಅಭಿಮಾನಿಗಳನ್ನು ಹೊಂದಿದ್ದ ಲೇಖಕರಾಗಿದ್ದರು. ತಮಗೆ ಪ್ರಿಯರಾದ ಲೇಖಕರ ಬರವಣಿಗೆಯನ್ನು ಮಾತ್ರ ಅಭಿಮಾನಿಗಳು ಓದುತ್ತಿರಲಿಲ್ಲ, ಅವರ ಮಾತು, ಕ್ರಿಯೆಗಳನ್ನೂ ಅವರು ಗಮನಿಸುತ್ತಿದ್ದರು. ತಮಗೆ ಇಷ್ಟವಾದ ಲೇಖಕರ ಮಾತು–ಕೃತಿ-ಬದುಕು ಅಭಿಮಾನಿಗಳ ತೆರೆದ ಕಣ್ಣು–ಕಿವಿಗಳಿಂದ ಎಂದೂ ತಪ್ಪಿಸಿಕೊಳ್ಳುತ್ತಿರಲಿಲ್ಲ. ಕನ್ನಡದ ಸಂದರ್ಭದಲ್ಲಿ ಲೇಖಕರ ಬರವಣಿಗೆ ಮಾತ್ರವಲ್ಲ ಅವರ ಎಲ್ಲ ಕ್ರಿಯೆಗಳು ಲೆಕ್ಕಕ್ಕೆ ಬರುತ್ತವೆ.

ಕನ್ನಡ ಪುಸ್ತಕಗಳನ್ನು ಯಾರೂ ಓದುತ್ತಿಲ್ಲ, ಯಾರಿಗೂ ಕನ್ನಡ ಸಾಹಿತ್ಯ ಬೇಕಾಗಿಲ್ಲ ಎನ್ನುವ ಹೊತ್ತಿನಲ್ಲಿ ತೇಜಸ್ವಿ ಅವರ ಸಾಹಿತ್ಯಕ್ಕೆ ಓದುಗರು ಹುಟ್ಟಿಕೊಳ್ಳುತ್ತಿರುವುದು ಹೊಸ ನಿರೀಕ್ಷೆಗಳನ್ನು ಮೂಡಿಸುವಂತಿದೆ. ಹಾಗೆ ಓದಲು ಶುರುಮಾಡಿದವರು ಕನ್ನಡದ ಬೇರೆ ಲೇಖಕರತ್ತ ದಾಟಿಕೊಳ್ಳಬಹುದು ಎಂಬ ಭರವಸೆಯನ್ನು ಇದು ಕೊಡುವಂತಿದೆ. ಎಸ್.ಎಲ್‌. ಭೈರಪ್ಪ, ಜಯಂತ ಕಾಯ್ಕಿಣಿ, ರವಿ ಬೆಳಗೆರೆ, ವಸುಧೇಂದ್ರ ಅವರಂತಹ ಲೇಖಕರು ತಮ್ಮ ಬರವಣಿಗೆಯಿಂದ ಕನ್ನಡ ಸಾಹಿತ್ಯದತ್ತ ಜನರು ತಿರುಗಿ ನೋಡುವಂತೆ, ಅದರಲ್ಲಿ ಜನರು ಆಸಕ್ತರಾಗುವಂತೆ, ಕುತೂಹಲಗೊಳ್ಳುವಂತೆ ಮಾಡಿದ್ದಾರೆ. ಹಾಗೆ ಜನರನ್ನು ಸೆಳೆವಂತೆ ಬರೆಯುವ ಲೇಖಕರೂ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿದ್ದಾರೆ.

ತೇಜಸ್ವಿ ತರಹದ ದೊಡ್ಡ ಲೇಖಕರ ಸಾಂಸ್ಕೃತಿಕ ಬಿಂಬಗಳು ಅಥವ ಹೆಗ್ಗುರುತುಗಳು ಭಾಷೆಗೆ ಸಂಬಂಧಿಸಿದಂತೆ ಬಹು ಮುಖ್ಯವಾದ ಅಂಶವನ್ನು ನಮಗೆ ತೋರುತ್ತವೆ. ಭಾಷೆ ತನ್ನ ಕ್ರಿಯಾಶೀಲತೆಯ ಎತ್ತರವನ್ನು ಮುಟ್ಟಿದ್ದರ ಸ್ಪಷ್ಟ ದಾಖಲೆ ಈ ಹಗ್ಗುರುತುಗಳು. ಬೇಂದ್ರೆ, ಕುವೆಂಪು, ಮಾಸ್ತಿ, ಕಾರಂತ, ಡಿವಿಜಿ, ಗೋಪಾಲಕೃಷ್ಣ ಅಡಿಗ, ಕೆ.ಎಸ್‌. ನರಸಿಂಹಸ್ವಾಮಿ, ದಿನಕರ ದೇಸಾಯಿ, ಯಶವಂತ ಚಿತ್ತಾಲ, ಬೆಸಗರಹಳ್ಳಿ ರಾಮಣ್ಣ, ನಿಸಾರ್‌ ಅಹಮದ್‌, ಗಿರೀಶ ಕಾರ್ನಾಡ, ಕೆ.ವಿ. ತಿರುಮಲೇಶ್‌, ದೇವನೂರ ಮಹಾದೇವರಂತಹ ಹೆಗ್ಗುರುತುಗಳನ್ನು ಜೊತೆಗಿಟ್ಟುಕೊಂಡೇ ಕನ್ನಡ ಓದುಗರು ಮುಂದಕ್ಕೆ ಹೋಗಬೇಕಾಗುತ್ತದೆ. ಹಾಗೆ ಹೋದರೆ ಮಾತ್ರ ಭಾಷೆ ಜೀವಂತವಾಗಿ ಉಳಿಯುವುದು ಸಾಧ್ಯ. ಈಗಿನ ಫೇಸ್‌ಬುಕ್‌, ವಾಟ್ಸ್‌ಆ್ಯಪ್‌, ಟ್ವಿಟರ್‌ ಯುಗದಲ್ಲಿ ಅಂತಹ ಹೆಗ್ಗುರುತುಗಳನ್ನು ಹೊಸ ಓದುಗರು ಆಗಾಗ ನೆನೆಯುತ್ತಾರೆ ಎಂಬುದು ಮಹತ್ತ್ವದ ಅಂಶ. ಕೆಲವರನ್ನು ಮಾತ್ರ ಅವರು ನೆನೆಯುತ್ತಾರೆ ಎಂಬುದೂ ದಾಖಲೆಗೆ, ಚಿಂತನೆಗೆ ಅರ್ಹವಾದ ವಿಚಾರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT