ಗುರುವಾರ , ಜನವರಿ 28, 2021
16 °C
ಸಂದರ್ಶನ

ಸಂಚಿ ಬಿಚ್ಚಿದ ಸಿದ್ದಲಿಂಗಯ್ಯ!

ರವೀಂದ್ರ ಭಟ್ಟ Updated:

ಅಕ್ಷರ ಗಾತ್ರ : | |

Prajavani

ಬಿಎಂಶ್ರೀ ಪ್ರತಿಷ್ಠಾನದಿಂದ ಇಂದು ‘ಶ್ರೀ’ ಪ್ರಶಸ್ತಿಗೆ ಭಾಜನರಾಗಲಿರುವ ಕವಿ, ವಿಮರ್ಶಕ, ವಿದ್ವಾಂಸ ಸಿದ್ದಲಿಂಗಯ್ಯನವರು 90 ವರ್ಷಗಳ ಸಾರ್ಥಕ ಬದುಕನ್ನೂ ಪೂರೈಸಿದವರು. ಅವರು ಬಿಚ್ಚಿದ ನೆನಪಿನ ಈ ‘ಸಂಚಿ’ಯಲ್ಲಿ ರಸಗವಳವೇ ತುಂಬಿದೆ.

ಆಗಷ್ಟೇ ಕುವೆಂಪು ಅವರಿಗೆ ರಾಷ್ಟ್ರಕವಿ ಎಂಬ ಬಿರುದು ನೀಡಲಾಗಿತ್ತು. ಮೈಸೂರು, ಶಿವಮೊಗ್ಗ ಮತ್ತು ಬೆಂಗಳೂರಿನಿಂದ ಸುಮಾರು 50 ಮಂದಿ ಧಾರವಾಡಕ್ಕೆ ಹೋಗಿ ದ.ರಾ.ಬೇಂದ್ರೆ ಅವರನ್ನು ಕಂಡು ಶಿವಮೊಗ್ಗದಲ್ಲಿ ನಡೆಯುವ ಕುವೆಂಪು ಅಭಿನಂದನಾ ಸಮಾರಂಭಕ್ಕೆ ತಾವು ಬರಬೇಕು ಹಾಗೂ ಅಭಿನಂದನಾ ಭಾಷಣ ಮಾಡಬೇಕು ಎಂದು ವಿನಂತಿಸಿಕೊಂಡರು. ‘ಬರ್ತೀನೋ ಬರ್ತೀನಿ, ಅವರು ದೊಡ್ಡ ಕವಿ’ ಎಂದು ಹೊಗಳಿದ ಬೇಂದ್ರೆ ಬಂದು ಅಭಿನಂದನಾ ಭಾಷಣ ಮಾಡಿದರು. ‘ಕುವೆಂಪು ಅವರು ರಾಷ್ಟ್ರಕವಿ. ಬಹಳ ಹೆಮ್ಮೆ ಆಗುತ್ತದೆ. ನನ್ನ ಪರವಾಗಿ, ಧಾರವಾಡದ ಪರವಾಗಿ, ಇಡೀ ಕರ್ನಾಟಕದ ಪರವಾಗಿ ಅವರಿಗೆ ಅಭಿನಂದನೆಗಳು’ ಎಂದು ಬೇಂದ್ರೆ ಹೇಳಿದಾಗ ಸುಮಾರು 5 ನಿಮಿಷ ಜೋರಾದ ಕರತಾಡನ. ಬೇಂದ್ರೆ ಅಷ್ಟಕ್ಕೇ ನಿಲ್ಲಿಸಲಿಲ್ಲ. ‘ಹೀಗಂದೆ ಅಂತ ಏನೇನೋ ತಿಳಕಬೇಡಿ, ಅವರು ರಾಷ್ಟ್ರಕವಿ ಆದರೆ ನಾನು ಅರಾಷ್ಟ್ರಕವಿ ಅಲ್ಲ. ತಿಳಕೊಬೇಕು, ಸರ್ಕಾರ ಒಬ್ಬರಿಗೆ ಮಾತ್ರ ರಾಷ್ಟ್ರಕವಿ ಅಂತ ಕೊಡಬಹುದು. ಅದನ್ನು ಕೊಟ್ಟಿದ್ದಾರೆ’ ಎಂದರು.

***

ಬೇಂದ್ರೆ ಅವರ ಕಾವ್ಯನಾಮ ‘ಅಂಬಿಕಾತನಯದತ್ತ’ ಎನ್ನುವುದು ಎಲ್ಲರಿಗೂ ಗೊತ್ತು. ಅವರ ಅತ್ಯಂತ ಪ್ರಸಿದ್ಧ ಕವನ ‘ಬೆಳಗು’ ಕವಿತೆಗೆ ಅವರು ಬಳಸಿದ ಕಾವ್ಯನಾಮ ‘ಸದಾಶಿವ ಜಂಗಮ’ ಎಂದು. ಆ ಕವಿತೆಯ ಬಗ್ಗೆ ಅಷ್ಟೊಂದು ಹಿಂಜರಿಕೆ ಅವರಲ್ಲಿ ಇತ್ತು. ಆರು ವರ್ಷದ ನಂತರ ಮಾಸ್ತಿ ಅವರು ಆ ಕವಿತೆಯನ್ನು ಓದಿ ಅದೊಂದು ಅದ್ಭುತ ಕವಿತೆ ಎಂದ ಮೇಲೆ ಅದನ್ನು ತಮ್ಮ ಹೆಸರಿನಲ್ಲಿಯೇ ಬೇಂದ್ರೆ ಪ್ರಕಟಿಸಿದರು.

ಕುವೆಂಪು ರಾಮಾಯಣ ದರ್ಶನಂ ಬರೆದ ಮೇಲೆ ವಿರಾಟ ದರ್ಶನಂ ಬರೆದರು. ಅದರಲ್ಲಿ ಕುವೆಂಪು ಮುಂದೆ ಆದಿಕವಿ ಬಂದು ನಿಂತು ‘ನಾನು ಬೇರೆಯಲ್ಲ, ನೀನು ಬೇರೆಯಲ್ಲ. ಮೂಲ ಕವಿತೆ ಎನ್ನುವುದು ನನ್ನಲ್ಲಿ ಆರಂಭವಾಯಿತು. ಈಗ ನಿನ್ನಲ್ಲಿ ಬಂದಿದೆ’ ಎಂದು ಹೇಳಿದ. ಇದೇ ಮಾತನ್ನು ಬೇಂದ್ರೆ ಅವರು ‘ಕನ್ನಡದ ಅಶರೀರವಾಣಿಯು ಸಾವಿರ ಬಾಯಿಗಳಲ್ಲಿ ತನ್ನ ಕನಸನ್ನು ಕನ್ನಡಿಸುತ್ತಿದೆ. ಅದರಲ್ಲಿ ನನ್ನದೂ ಒಂದು ಎಂಬುದು ನನ್ನ ಧನ್ಯತೆ’ ಎಂದು ಹೇಳಿದ್ದರು.

ಮೈಸೂರು ಮಹಾರಾಜ ಕಾಲೇಜಿನಲ್ಲಿ ಪುರುಷೋತ್ತಮ್ ಎಂಬ ತತ್ವಶಾಸ್ತ್ರ ಪ್ರಾಧ್ಯಾಪಕರೊಬ್ಬರು ಇದ್ದರು. ಥ್ರೀಪೀಸ್ ಸೂಟ್ ಹಾಕಿಕೊಂಡು ಬರೋರು. ಮಹಾರಾಜ ಕಾಲೇಜಿನ ಗ್ಯಾಲರಿಯಲ್ಲಿ ಠೀವಿಯಿಂದ ಬರುವ ಅವರು ‘ಭಗದ್ಗೀತೆ ಯಾವಾಗ ಹುಟ್ಟಿತು ಎಂದು ಗೊತ್ತೇನು?’ ಎಂದು ಕೇಳೋರು. ‘ಕುರುಕ್ಷೇತ್ರದಲ್ಲಿ ಭಗವದ್ಗೀತೆ ಹುಟ್ಟಿತು ಎಂದು ನೀವು ಭಾವಿಸಿರಬಹುದು. ಅಲ್ಲ ನೀವು ತಪ್ಪು ತಿಳಿದಿದ್ದೀರಿ. ಮಹಮ್ಮದ್ ಪೈಗಂಬರ್ ಅವರನ್ನು ಅವರ ಜಾಗದಿಂದ ಹೊಡೆದು ಹೊರಕ್ಕೆ ಹಾಕಿದಾಗ ಗೀತೆ ಹುಟ್ಟಿತು. ಏಸುವನ್ನು ಶಿಲುಬೆಗೆ ಏರಿಸಿದಾಗ ‘ಅವರನ್ನು ಕ್ಷಮಿಸು ದೇವರೆ, ಅವರಿಗೆ ತಾವು ಏನು ಮಾಡುತ್ತಿದ್ದೇವೆ ಎಂಬುದು ಗೊತ್ತಿಲ್ಲ’ ಎಂದು ಹೇಳಿದಾಗ ಗೀತೆ ಹುಟ್ಟಿತು. ಸಂಘರ್ಷ ಕಾಲದಲ್ಲಿ ಬೆಳಕನ್ನು ನೀಡುವುದು ಗೀತೆ. ಬೆಳಕಿನ ಪ್ರವಾಹ ಅದು’ ಎಂದು ಹೇಳುತ್ತಿದ್ದರು.

***

ನವೋದಯ ಕಾಲದಲ್ಲಿ ವಿಮರ್ಶೆ ಅಂದರೆ ಕೊಂಚ ಕೊಂಕು ಇತ್ತು. ವಿ.ಕೃ.ಗೋಕಾಕರು ಕುವೆಂಪು ಅವರನ್ನು ‘ಪುಟ್ಟ ಅಪ್ಪ’ ಎನ್ನುತ್ತಿದ್ದರು. ಅದೇ ರೀತಿ ಕುವೆಂಪು ಅವರು ಗೋಕಾಕರನ್ನು ‘ಗೋ–ಕಾಕ’ ಎನ್ನುತ್ತಿದ್ದರು.

***

ಕನ್ನಡದ ಖ್ಯಾತ ಕವಿ, ವಿಮರ್ಶಕ ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ ಅವರ ನೆನಪಿನ ಬುತ್ತಿ ಇವು. ಅವರ ಸಂಚಿಯಲ್ಲಿ ಇಂತಹ ಹಲವಾರು ತಾಂಬೂಲಗಳಿವೆ. ಕೇಳುತ್ತಾ ಕುಳಿತರೆ ಅದೊಂದು ರಸಗವಳ. ಸಿದ್ದಲಿಂಗಯ್ಯ ಕವಿಯಾಗಿ, ವಿಮರ್ಶಕರಾಗಿ ಪ್ರಖ್ಯಾತರು. ಆಡಳಿತಗಾರರಾಗಿಯೂ ಅವರು ಹೆಸರು ಮಾಡಿದ್ದಾರೆ. ವಯಸ್ಸು ಅವರನ್ನು ಬಾಗಿಸಿಲ್ಲ. ಮಾಗಿಸಿದೆ. 70ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಅವರು ಈಗ ತಮ್ಮ 90ರ ಹರೆಯದಲ್ಲಿಯೂ ಛಂದಸ್ಸಿನ ಕುರಿತು ಪುಸ್ತಕ ಬರೆಯುತ್ತಿದ್ದಾರೆ. ವೃದ್ಧಾಪ್ಯದ ಕಾರಣದಿಂದ ಕಣ್ಣು ಕೊಂಚ ಮಸುಕಾಗಿದೆ. ‘ನನಗೀಗ ಓದು ಕುರುಡು. ಅದಕ್ಕೆ ಹಿಂದೆ ಓದಿದ್ದನ್ನೇ ಚರ್ವಣ ಮಾಡುತ್ತಿದ್ದೇನೆ’ ಎಂದು ಅವರು ಹೇಳುತ್ತಾರೆ.

‘ಪ್ರಜಾವಾಣಿ’ಯ ‘ಭಾನುವಾರದ ಪುರವಣಿ’ ಜೊತೆಗೆ ಮಾತನಾಡುತ್ತಾ ಅವರು ತಮ್ಮ ಬದುಕಿನ ಪುಟಗಳನ್ನು ನೆನಪಿಸಿಕೊಂಡರು. ತಾವು ಕವಿಯಾಗಿದ್ದು, ಅಧ್ಯಾಪಕರಾಗಿದ್ದು, ಪ್ರಾಧ್ಯಾಪಕರಾಗಿದ್ದು, ಪ್ರಾಚಾರ್ಯರಾಗಿದ್ದು, ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕರಾಗಿದ್ದು ಹಾಗೂ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು ಎಲ್ಲವನ್ನೂ ಹೇಳಿಕೊಂಡರು. ತಮ್ಮ ಸುಖ ದುಃಖದ ಬುತ್ತಿಯನ್ನು ಬಿಚ್ಚಿದರು. ತಮ್ಮ ಎಲ್ಲ ಸಾಧನೆಗೆ ತಾವು ಅಧ್ಯಾಪಕರಾಗಿ ಗಳಿಸಿದ ಅನುಭವವೇ ಕಾರಣ ಎನ್ನುವುದು ಅವರ ನಂಬಿಕೆ. ಗುರು ಎಂದರೆ ವೃಕ್ಷದ ಹಾಗೆ ಇರಬೇಕು. ವೃಕ್ಷ ಬೇರನ್ನು ಭೂಮಿಯ ಆಳಕ್ಕೆ ಬಿಡುತ್ತದೆ. ಹೂವು ಹಣ್ಣು ಕಾಯಿ ಎಲ್ಲ ಆಕಾಶದಲ್ಲಿ ಇರುತ್ತವೆ. ಬೆಳೆದು ದೊಡ್ಡದಾದ ಮರದ ಕೊಂಬೆಯನ್ನು ಕಡಿದು ಅದರಿಂದಲೇ ಕುರ್ಚಿ ಮಾಡಿಕೊಂಡು ಅದೇ ಮರದ ಕೆಳಗೆ ವ್ಯಕ್ತಿಯೊಬ್ಬ ಕುಳಿತರೆ ಆ ಮರ ಅವನನ್ನು ಹೊರಕ್ಕೆ ನೂಕುವುದಿಲ್ಲ. ನೆರಳನ್ನು ನೀಡುತ್ತದೆ. ಹಾಗೆಯೇ ಗುರು ಕೂಡ. ಈಗ ಗುರುಗಳೆಲ್ಲಾ ಮೇಷ್ಟ್ರಾಗಿದ್ದಾರೆ ಎಂಬ ವಿಷಾದ ಅವರಿಗೆ.


–ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ

ಛಂದಸ್ಸಿನ ಒಲವು ಹುಟ್ಟಿದ ಪರಿ ವಿವರಿಸಿದ್ದು ಹೀಗೆ. ‘ ನಮ್ಮ ಊರು ತುಮಕೂರು ಜಿಲ್ಲೆ ಬೆಳ್ಳಾವೆ. ಅಲ್ಲಿ ನಮ್ಮ ಮನೆ ದೊಡ್ಡದು. ನಾನು 6–7 ವರ್ಷದ ಹುಡುಗನಾಗಿದ್ದಾಗ ಮನೆಯ ಆವರಣದಲ್ಲಿರುವ ತೆಂಗಿನ ಮರದ ಕೆಳಗೆ ತಗಡು ತೆಗೆದುಕೊಂಡು ಬಡಿಯುತ್ತಿದ್ದೆ. ಅದನ್ನು ನೋಡಿ ನಮ್ಮ ತಾತ ನನ್ನ ಅಮ್ಮನನ್ನು ಕರೆದು ‘ನಿನ್ನ ಮಗ ಡ್ರಂ ಮಾಸ್ಟರ್ ಆಗ್ತಾನೆ ನೋಡು’ ಎಂದು ತಮಾಷೆ ಮಾಡುತ್ತಿದ್ದರು. ಅಲ್ಲಿಂದ ತುಮಕೂರಿಗೆ ಬಂದ ಮೇಲೆ ಅಲ್ಲಿ ರಾಜಾ ಟಾಕೀಸ್ ಅಂತ ಇತ್ತು. ಟಾಂಗಾದಲ್ಲಿ ಸಿನೆಮಾ ಪ್ರಚಾರ ಮಾಡೋರು. ಸಿನಿಮಾ ಆರಂಭಕ್ಕೆ ಮುನ್ನ ವಾದ್ಯ ನುಡಿಸೋರು. ಅದೆಲ್ಲ ವಿಸ್ಮಯ ನನಗೆ. ಅದೇ ವಿಸ್ಮಯ ನನ್ನ ಛಂದಸ್ಸಿನ ಕಡೆಗೆ ವಾಲಿಸಿತು’ ಎಂದು ಅವರು ನೆನಪಿಸಿಕೊಳ್ಳತ್ತಾರೆ.

‘ಕಾವ್ಯಕ್ಕಿಂತ ನನಗೆ ಬದುಕು ಮುಖ್ಯ. ಬದುಕು ಎನ್ನುವುದು ಅಕ್ಷಯ ಪಾತ್ರೆ. ಕುವೆಂಪು, ಪುರುಷೋತ್ತಮ್, ವೆಂಕಟರಾಮಯ್ಯ ಮುಂತಾದ ಗುರುಗಳು ನನ್ನನ್ನು ಬೆಳೆಸಿದರು. ಆಗೆಲ್ಲ ಗುರುಗಳ ನಾಲಿಗೆಯಲ್ಲಿ ಸರಸ್ವತಿ ನೆಲೆಸಿದ್ದಳು. ಅದು ಬೆಂಕಿಯಲ್ಲ. ಬೆಳಕು. ಗುರು ಬೆಳಕನ್ನೂ ನೀಡುತ್ತಾನೆ, ಶಕ್ತಿಯನ್ನೂ ನೀಡುತ್ತಾನೆ’ ಎಂದು ತಮ್ಮ ಗುರುಗಳನ್ನು ನೆನಪಿಸಿಕೊಂಡರು. ಬೆಳೆಯುತ್ತಾ, ಬೆಳೆಸುತ್ತಾ ಹೋಗುವವನು ಗುರು. ಬೆಳೆಸುವ ಬೆಳಕು ದೊಡ್ಡದು. ಬೆಳಕಿನ ಬುಡದಲ್ಲಿ ಕತ್ತಲೆ ಇರುತ್ತದೆ ಆದರೆ ಜ್ಞಾನದ ಬುಡಕ್ಕೂ ಕತ್ತಲು ಇಲ್ಲ. ತುದಿಗೂ ಕತ್ತಲು ಇಲ್ಲ. ಮೇಲೆ ಕೆಳಗೆ ಎಲ್ಲೂ ಕತ್ತಲು ಇಲ್ಲ. ಎಲ್ಲ ಕಡೆ ಜ್ಞಾನ ಇರುತ್ತದೆ. ಅದು ಜ್ಞಾನದ ಶಕ್ತಿ. ಈಗ ಜ್ಞಾನ ಗ್ರಂಥಾಲಯದಲ್ಲಿ ಇದೆ ಎನ್ನುವ ಹಾಗೆ ಆಗಿದೆ. ‘ನಾನೂ ಶಿಕ್ಷಕನಾಗಿದ್ದೆ. ಶಿಷ್ಯರು ತಪ್ಪು ಮಾಡಿದಾಗ ಕಪಾಳಕ್ಕೆ ಹೊಡೆದಿದ್ದೇನೆ. ಒಳ್ಳೆಯದು ಮಾಡಿದಾಗ ಬೆನ್ನುತಟ್ಟಿದ್ದೇನೆ. ಅಧ್ಯಾಪಕನಿಗೆ ಸಿಟ್ಟು ಇದ್ದರೆ ತಪ್ಪಲ್ಲ. ದ್ವೇಷ ಇರಬಾರದು ಅಷ್ಟೆ’ ಎಂದು ಗುಟ್ಟು ಬಿಚ್ಚಿಟ್ಟರು.

‘ಕುವೆಂಪು, ಬೇಂದ್ರೆ, ಪುತಿನ ಹೀಗೆ ಆಗಿನ ಕಾಲದ ಎಲ್ಲ ಸಾಹಿತಿಗಳ ಜೊತೆಗೂ ನನ್ನ ಸಂಪರ್ಕ ಚೆನ್ನಾಗಿತ್ತು. ಅವರಿಗೆ ನನ್ನ ಮೇಲೆ ಪ್ರೀತಿ ಇತ್ತು. ಅಷ್ಟು ಹೇಳಿದರೆ ಸಾಕು. ಅಯ್ಯೋ ಅವರು ನನಗೆ ಬೇಕಾದವರು, ಬಹಳ ಬೇಕಾದವರು ಎಂದೆಲ್ಲಾ ಹೇಳಿದರೆ ಅದು ಬರೀ ಢೋಂಗಿ ಅಷ್ಟೆ, ಠೇಂಕಾರ ಆಗುತ್ತದೆ. ಅವರ ಪ್ರೀತಿ ಸಿಕ್ಕಿತ್ತು ಎಂದು ಹೆಮ್ಮೆ ಪಡಬೇಕು ಅಷ್ಟೆ’ ಎಂದು ಹೇಳಿದರು. ನಾನು ಇಂಟರ್ ಮೀಡಿಯೇಟ್ ನಲ್ಲಿ ಇದ್ದಾಗ ನನ್ನ ಕವಿತೆಯೊಂದು ‘ಪ್ರಬುದ್ಧ ಕರ್ನಾಟಕದಲ್ಲಿ ಪ್ರಕಟವಾಯಿತು. ಎಷ್ಟು ಸಂತೋಷವಾಯಿತು ಎಂದರೆ ಅದೊಂದು ರೋಮಾಂಚನ ಅನುಭವ ಎಂದು ತಮ್ಮ ಮೊದಲ ಕವನದ ಪ್ರಕಟಣೆಯ ರೋಮಾಂಚನವನ್ನು ಮತ್ತೆ ಅನುಭವಿಸಿದರು.

ವಯಸ್ಸು 90 ಆದರೂ ಇನ್ನೂ ಲವಲವಿಕೆ ಇದೆ. ಅದರ ಗುಟ್ಟೇನು ಎಂದು ಕೇಳಿದರೆ ‘ಒಂದು ಕಲ್ಲನ್ನು ನೀರಿಗೆ ಎಸೆದರೆ ನೀರು ಕಲಕಿ ಹೋಗುತ್ತದೆ. ಅದೇ ಸಮುದ್ರಕ್ಕೆ ಕಲ್ಲು ಎಸೆದರೆ ಗೊತ್ತೇ ಆಗುವುದಿಲ್ಲ. ಆನೆ ಹೋದರೂ ಸಮುದ್ರಕ್ಕೆ ಏನೂ ಆಗುವುದಿಲ್ಲ. ನಮ್ಮ ಮನಸ್ಸನ್ನು ಸಮುದ್ರವನ್ನಾಗಿ ಮಾಡಿಕೊಂಡರೆ ಯಾವ ಸಮಸ್ಯೆಯೂ ಬರಲ್ಲ. ಎಲ್ಲ ಅನಿಷ್ಟಗಳನ್ನು ದೂರ ಮಾಡಿದರೆ ಕೊರೊನಾ ಕೂಡ ಬರಲ್ಲ’ ಎಂದು ಮಾತು ಮುಗಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು