ಗುರುವಾರ , ಜುಲೈ 7, 2022
23 °C

ಮತ್ತೆ ಹಾಡಾಗಿದೆ ಟ್ಯಾಗೋರರ ಮಳೆ ಸಂಗೀತ

ಯೋಗೀಂದ್ರ ಮರವಂತೆ Updated:

ಅಕ್ಷರ ಗಾತ್ರ : | |

ನೈಋತ್ಯ ಮಾರುತ ಬಂದು ತಿಂಗಳ ಮೇಲಾಗಿದೆ. ಮಳೆ ಸುರಿಯುವ ಊರಿರಲಿ, ಮಳೆ ಕಾಣದ ಬಂಜರಿರಲಿ ಜಗತ್ತಿನ ಯಾವ ದೇಶದ ಯಾವ ಮೂಲೆಗೆ ಹೋದರೂ ಅಲ್ಲೆಲ್ಲ, ಅಲ್ಲಿರುವವರನ್ನೆಲ್ಲ ತುಂಬಾ ಕಾಡಿದ ವಸ್ತು, ವಿಷಯ, ಪ್ರಕ್ರಿಯೆ, ಬದಲಾವಣೆ ಮಳೆಯೇ ಇರಬೇಕು. ಮಳೆ ಬರುವ ನಿಮಿತ್ತಕ್ಕೋ ಬಾರದಿರುವುದಕ್ಕೋ ಕವಿಗಳಿರಲಿ, ಕಥೆಗಾರರಿರಲಿ, ಬರಹಗಾರರಿರಲಿ, ಓದುಗರಿರಲಿ, ಅಕ್ಷರ ಪ್ರೇಮಿಗಳಿರಲಿ, ನಿರಕ್ಷರರಿರಲಿ ಎಲ್ಲರನ್ನೂ ಆವರಿಸುತ್ತದೆ ಅದು.

ಮಳೆಯನ್ನು ಅದಮ್ಯವಾಗಿ ಪ್ರೀತಿಸುವವರು ಮಳೆಗಾಗಿ ಹಂಬಲಿಸುವವರು ಇಂಥವರೇ ಆಗಿರಬೇಕೆಂದಿಲ್ಲ. ಮಳೆ ಸೃಜಿಸುವ ಸಂವಹನ, ತುಂಬುವ ಸ್ಫೂರ್ತಿಯೇ ಅಂತಹುದು. ಯಾರೊಂದಿಗೂ ಮಾತಾಡಬಲ್ಲದು; ಯಾರನ್ನೂ ಮಾತಾಡಿಸಬಲ್ಲದು; ಯಾರನ್ನೂ ಕಾಡಬಲ್ಲದು; ಯಾರೊಡನೆಯೂ ಹಾಡಬಲ್ಲದು. ಬಾಯಾರಿದವನಿಗೆ ಮಾತ್ರ ಜೀವ ನೀಡುವುದಲ್ಲ ಮಳೆ, ಮಳೆಗೆ ಒದ್ದೆ ಆಗುವ ಮನಸ್ಸಿದ್ದವರನ್ನೆಲ್ಲ ಹಿಡಿದು ಕಾಡಬಲ್ಲದು. ಕರಾವಳಿಯ ನನ್ನೂರಿನಂತಹ ಊರಿನಿಂದ ಐದು ಸಾವಿರ ಮೈಲು ದೂರದ ಬ್ರಿಟನ್ನಿನ ಬೇಸಿಗೆಯಲ್ಲಿ ಕುಳಿತವರೆದುರು ಆ ಮಳೆಯ ಕನವರಿಕೆಯೇ ಕುಣಿಯಬಹುದು.

ಮುಂಗಾರು ಮಳೆ ಭಾರತದ ಉದ್ದಗಲವನ್ನು ಹಂತಹಂತವಾಗಿ ತನ್ನ ತೆಕ್ಕೆಯಲ್ಲಿ ಸೆಳೆದುಕೊಳ್ಳುತ್ತಿರುವ ಈ ಹೊತ್ತಲ್ಲಿ ಮಳೆಯ ಲಹರಿಯಲ್ಲಿ ಮೋಡವನ್ನು, ಮಳೆಯನ್ನು, ಮುಂಗಾರನ್ನು ಜೀವಸದೃಶವಾಗಿ ದೇವಸ್ವರೂಪಿಯಾಗಿ ಕಾಲಾತೀತವಾಗಿ ಕಂಡವರು, ಕೊಂಡಾಡುವವರು ಕಣ್ಣ ಮುಂದೆ ಬರುತ್ತಾರೆ. ಇದು ಮಳೆಯ ಸಾಮರ್ಥ್ಯವೋ ಇಳೆಯ ಮಹಿಮೆಯೋ ಬಲ್ಲವರು ಹೇಳಬೇಕು. ಮಳೆಯ ಬಗ್ಗೆ ಮಾತಾಡದವರು, ಮಳೆಯ ಬಗ್ಗೆ ಕನಸು ಕಾಣದವರು, ಮಳೆಯನ್ನು ದೂಷಿಸದವರು, ಮಳೆಗೆ ಕರಗದವರನ್ನು ಹುಡುಕುವುದು ಕಷ್ಟ, ಹುಡುಕಿದರೂ ಸಿಗುವುದು ದುರ್ಲಭ. ಹಾಗಾಗಿಯೇ ಜಗತ್ತಿನ ಯಾವ ಭಾಗಕ್ಕೆ ಹೋದರೂ ಮಳೆ ಪ್ರೇಮಿಗಳು ಸಿಗುತ್ತಾರೆ. ಮತ್ತೆ ಮಳೆಯನ್ನು ಶಬ್ದ, ವಾಕ್ಯ, ಪುಸ್ತಕಗಳಲ್ಲಿ ಹುಡುಕ ಹೊರಟರೂ ಯಾವ ಭಾಷೆಯ ಕಾವ್ಯವನ್ನು ಅರಸುತ್ತ ಅನ್ವೇಷಿಸುತ್ತ ನಡೆದರೂ ಮಳೆಯ ಬಗೆಗಿನ ಕವನಗಳು, ಚಿತ್ರಣಗಳು ಸಾಲು ಸಾಲಾಗಿ ಸಿಗುತ್ತವೆ. ಮತ್ತೆ ಅಂತಹ ಕವನ, ಕಾವ್ಯ, ಸೊಲ್ಲು ಸಾಲುಗಳನ್ನು ಹುಡುಕಿ ಹುಡುಕಿ ಓದುವವರು ಮೈಮರೆಯುವವರು ಹಾತೊರೆಯುವವರು ಕೂಡ ಎಲ್ಲೆಲ್ಲೂ ಸಿಗುತ್ತಾರೆ. ಮಳೆ ಯಾಕೆ ಇಷ್ಟು ಕಾಡುತ್ತದೆ ಎನ್ನುವುದು ಮಳೆಯಷ್ಟೇ ಕಾಡುವ ಪ್ರಶ್ನೆ. ಕಪ್ಪು ಮೋಡಗಳ ಎದೆಯಿಂದ ಆಕಾಶವನ್ನು ಸೀಳಿ ಸುರಿಯುವ ಧಾರೆಗೋ, ಮಳೆಮಣ್ಣಿನ ಸ್ಪರ್ಶಕ್ಕೆ ಹಬ್ಬುವ ಗಂಧಕ್ಕೋ, ಗಂಟೆಗಟ್ಟಲೆ ದಿನಗಟ್ಟಲೆ ಬಿಡದೆ ಇಳಿದು ಬಸಿದು ಆವರಿಸುವ ಗುಂಗಿಗೋ, ಮಳೆ ಸಂಗೀತದೊಳಗಿನ ಗುಡುಗು, ಸಿಡಿಲು, ಗಾಳಿ, ಮರಗಳ ಹೊಯ್ದಾಟದ ಶ್ರುತಿ ಲಯ ಲಾಸ್ಯಕ್ಕೋ? ಅನುಭವಿಸಿದವರೇ ಕಾವ್ಯ ಬರೆದವರೇ ಹೇಳಬೇಕು ಅಥವಾ ಬರೆಯಿಸಿಕೊಂಡ ಮಳೆಯೇ ಚಿಟಪಟಿಸಬೇಕು.

ಮಳೆಗಾಲ ಮಹಾನ್ ಕವಿಗಳ ಮೆಚ್ಚಿನ ಮಾಸವೂ ಹೌದು. ಮೋಡಗಳನ್ನು ರಮಿಸಿ, ಒಲಿಸಿ, ಕಾವ್ಯದ ಮಳೆ ಸುರಿಸಿದ  ಹೆಗ್ಗಳಿಕೆ ಮುಂಗಾರಿನ ಮಾಸಕ್ಕೂ ಮತ್ತು ಆ ಮಾಸದ ಮೇಘರಾಶಿಗೂ ಜೊತೆಜೊತೆಗೆ ಸಲ್ಲುತ್ತದೆ. ಮಳೆಗಾಲವು  ಸೌಂದರ್ಯಪೂರ್ಣವೂ ರುದ್ರ-ರಮಣೀಯವೂ ಆಗಿ ತೋರುವ ದೇಶಗಳಲ್ಲಿ ಭಾರತಕ್ಕೆ ಮುಖ್ಯ ಸ್ಥಾನ. ಹಾಗಾಗಿ ಮಾನ್ಸೂನ್ ಕಾವ್ಯವನ್ನು ಬರೆದ ಮಹಾನ್ ಕವಿಗಳನ್ನು ಹುಡುಕಿ ನಾವೇನೂ ದೇಶಾಂತರ ಹೋಗಬೇಕಿಲ್ಲ. ಜಗತ್ತಿನ ಮಳೆಕಾವ್ಯದ ಅತಿರಥ ಮಹಾರಥರನ್ನೆಲ್ಲ ಒಂದೆಡೆ ಸೇರಿಸಿದರೆ ಬಹುಶಃ ಅವರೆಲ್ಲರಲ್ಲಿ ಎತ್ತರದ ಸ್ಥಾನ ಭಾರತೀಯ  ಸಾಹಿತಿಗಳಿಗೇ ಸಿಗಬೇಕೇನೋ. ಮೋಡ, ಮಳೆ ಮತ್ತು ಮಳೆಗಾಲಗಳನ್ನು ಮತ್ತೆ ಮತ್ತೆ ಬೇರೆ ಬೇರೆ ಕಣ್ಣಲ್ಲಿ ನೋಡುತ್ತಾ ಹೊಸ ಹೊಸ ಶಬ್ದ, ಕಲ್ಪನೆ, ಜೋಡಿಸುತ್ತ ಕಾವ್ಯ ಹೊಸೆದ ಭಾರತೀಯ ಕವಿಗಳು ಹಲವರು. ಅವರಲ್ಲಿ ನಮಗೆ ಇಷ್ಟವಾದ ಕವಿಗಳು ಯಾರೇ ಇದ್ದರೂ ಅಂತಹ ಕವಿಗಳ ಪಟ್ಟಿಯಲ್ಲಿ ಪೂರ್ವಜನೆನಿಸುವವನು ಮಹಾಕವಿ ಕಾಳಿದಾಸ; ಆತನ ಬಗ್ಗೆ ನುಡಿಗೌರವ ಸಲ್ಲಿಸದೆ ಬೇರೆ ಮಳೆಕವಿಗಳ ಬಗ್ಗೆ ಕುರಿತು ಹೇಳುವ ಹಾಗಿಲ್ಲ. 1600 ವರ್ಷಗಳ ಹಿಂದೆ ರಚಿಸಿದ್ದು ಎಂದು ಹೇಳಲಾಗುವ ಕಾಳಿದಾಸನ ‘ಮೇಘದೂತ’ ಕಾವ್ಯಾಸಕ್ತರನ್ನು ಇಂದಿಗೂ ಮುಂದಿಗೂ ಮೋಡ ಇರುವಾಗಲೂ ಇಲ್ಲದಾಗಲೂ ಮಳೆಗಾಲದ ಮೊದಲೂ ಆಮೇಲೂ ಮಳೆಗಾಲದೊಳಗೂ ಹೊರಗೂ ಕಾಡುತ್ತದೆ. ಭಾರತದ ಎಲ್ಲ ಭಾಷೆಗಳಿಗೂ, ಇಂಗ್ಲಿಷ್ ಭಾಷೆಗೂ ಮತ್ತೆ ಮತ್ತೆ ಮೇಘದೂತ ಅನುವಾದವಾಗಿದೆ. ಮೋಡ, ಮಳೆಯನ್ನು ಪ್ರೀತಿಸುವವರೆಲ್ಲ ಮುಂಗಾರು ಮಳೆಯನ್ನು ನೋಡಲೇಬೇಕು. ಮೋಡ ಮಳೆಗೆ ಹೊಸ ಕಲ್ಪನೆ ಕವಿತೆ ಬರೆಯುವವರೆಲ್ಲ ಕಾಳಿದಾಸನ ಮೇಘದೂತವನ್ನು ಓದಲೇಬೇಕು. ಕತೆಯಾಗಿ, ಕವನವಾಗಿ, ಹಾಡಾಗಿ, ಗೀತನಾಟಕವಾಗಿ, ಗದ್ಯವಾಗಿ, ಯಕ್ಷಗಾನವಾಗಿ ಮೇಘದೂತ ಜಗತ್ತಿನ ಮೂಲೆ ಮೂಲೆಯನ್ನು ತಲುಪಿದೆ. ಶಾಪಗ್ರಸ್ತನಾಗಿ ಅಂದಿನ ಭಾರತದಲ್ಲಿ ಅಲೆದಾಡುತ್ತಿದ್ದ ಯಕ್ಷನೊಬ್ಬ ತಲೆಯ ಮೇಲೆ ಸರಿದು ಹೋಗುವ ಮೋಡದ ಮೂಲಕ ಹಿಮಾಲಯದ ಕೈಲಾಸ ಪರ್ವತದಲ್ಲಿರುವ ತನ್ನ ಪತ್ನಿಗೆ ಸಂದೇಶ ಕಳುಹಿಸುವುದನ್ನು ಕಾಳಿದಾಸ 111 ಪಂಕ್ತಿಗಳ ಕವಿತೆಯಾಗಿಸಿದ್ದಾನೆ. ಕಲ್ಪನೆ, ಗ್ರಹಿಕೆ, ಕಾವ್ಯದ ದೃಷ್ಟಿಯಿಂದ ಶ್ರೇಷ್ಠ ಎಂದು ಶ್ಲಾಘಿಸಿಕೊಂಡ ಮೇಘದೂತ, ಮಳೆಗಾಲದ ಮೋಡಗಳಿಗೂ ಹೆಮ್ಮೆ ತರುವ  ಕಾವ್ಯ. ಎಲ್ಲೋ ಹುಟ್ಟುವ ಮಳೆಗಾಲದ ಮೋಡಗಳು ದಟ್ಟವಾಗಿ ಪರ್ವತಾಕಾರವಾಗಿ ಜೂನ್ ತಿಂಗಳ ಮೊದಲಿಗೆ ಮಳೆಯ ಸಂದೇಶವನ್ನು ಹೊತ್ತು ಭಾರತವನ್ನು ಪ್ರವೇಶಿಸುತ್ತವೆ. ಜೀವಜಗತ್ತೆಲ್ಲ ಕಾಯುವ, ಕಾತರಿಸುವ ಮೇಘಸಂದೇಶ ಮಳೆಯಾಗಿ ಸುರಿಯುತ್ತದೆ. ಕಾಳಿದಾಸನ ಕಾವ್ಯ ಇಂಗ್ಲಿಷ್ ಅನುವಾದದಲ್ಲಿ ‘ಕ್ಲೌಡ್ ಮೆಸೆಂಜರ್’ ಎಂಬ ಶಬ್ದಜೋಡಣೆಯನ್ನು, ಕಲ್ಪನೆಯನ್ನು ಹುಟ್ಟುಹಾಕಿದೆ.

ಹಲವು ಶತಮಾನಗಳ ಹಿಂದೆ ಕಾವ್ಯ ಕಟ್ಟಿದರೂ ಇಂದಿಗೂ ನೆನಪಿಗೆ ಬರುವ ಕಾಳಿದಾಸನ ಯುಗದ ನಂತರ ಮೋಡ ಮಳೆಯ ಕುರಿತು ಕವನ ಬರೆದವರು ಕತೆ– ಕಾದಂಬರಿಗಳಲ್ಲಿ ಮಳೆಯ ಚಿತ್ರಣ ನೀಡಿದ್ದಾರೆ. ಅವರೆಲ್ಲರ ನಡುವೆ ತೀವ್ರ ಮಳೆಪ್ರೇಮದ ಕವಿ ಎಂದು ಗುರುತಿಸಬಹುದಾದವರು ರವೀಂದ್ರನಾಥ ಟ್ಯಾಗೋರರು.  ಟ್ಯಾಗೋರರು ಬರೆದುದು ಒಂದಲ್ಲ, ಎರಡಲ್ಲ, ನಾಲ್ಕಲ್ಲ, ಎಂಟಲ್ಲ ಬಹಳಷ್ಟು ಮಳೆ ಕವಿತೆಗಳನ್ನು. ಟ್ಯಾಗೋರರ ಮಳೆಕವಿತೆಗಳು ಬಂಗಾಳದಲ್ಲಿ ಮಾತ್ರ ಮನೆ ಮಾತಲ್ಲ, ದೇಶದಾದ್ಯಂತ, ಜಗತ್ತಿನಾದ್ಯಂತ ಇಂದಿಗೂ ಓದಿಸಿಕೊಳ್ಳುತ್ತವೆ ಹಾಡಿಸಿಕೊಳ್ಳುತ್ತವೆ ನೆನಪಿಗೆ ಬರುತ್ತವೆ.

‘ಮೋಡಗಳು ತೇಲುತ್ತ ನನ್ನ ಜೀವನಕ್ಕೆ ಬರುತ್ತವೆ, ಮಳೆನೀರ ಹೊತ್ತೂ ಅಲ್ಲ ಬಿರುಗಾಳಿಯ ಜೊತೆಯಾಗಲೂ ಅಲ್ಲ, ನನ್ನ ಸೂರ್ಯಾಸ್ತದ ಬಾನಿಗೆ ಬಣ್ಣ ಹಚ್ಚಲು’ ಎಂದವರು ಟ್ಯಾಗೋರರು.

ಮಳೆಸಂಗೀತ ಎನ್ನುವ ಅವರ ಕವನ ಹೇಳುತ್ತದೆ-

ಮಳೆದಿನಗಳಲಿ   
ಮಳೆಯ ಚಿಟಪಟ ದನಿಯಾಗುವಾಗ   
ಹೇಳಲಸಾಧ್ಯ ನನ್ನ ಅನಿಸಿಕೆ  
ದಿಗ್ಭ್ರಮೆಯೂ ಆಗಿದೆ ಮನಸಿಗೆ.  

ಅನಿಸುತಿದೆ ಯಾರೋ ಬಿಟ್ಟು ಹೋದಂತೆ 
ನನ್ನ ಕರೆಕರೆದು
ಇರುಳಲಿ ತಟ್ಟಿ ಬಾಗಿಲ 
ಮಳೆದಿನಗಳಲಿ   
ಸ್ವರವಾಗಿದೆ ಮಳೆಯ ಚಿಟಪಟ. 

ಕರುಣೆ ಇರಲಿ ನನ್ನ ಬಗ್ಗೆ ಪ್ರಿಯೆ 
ಹೊತ್ತಿಸು ಬೆಳಕ ನನ್ನೆದೆಗೆ   
ಕಂಡಂತಾಯ್ತು ಯಾರದೋ ನೆರಳು 
ಅರೆನಿದ್ರೆಯ ಅರೆಎಚ್ಚರದ 
ನನ್ನ ಕಂಗಳಲೂ ತುಂಬಿದೆ ಅಳು
ಬಂದಂತನಿಸಿದೆ ಯಾರೋ ಇರುಳಲಿ 
ಮಳೆದಿನಗಳಲಿ   
ಮಳೆ ಚಿಟಪಟ ಸಂಗೀತವಾಗಿ  

ಟ್ಯಾಗೋರರ ಮಳೆಕವಿತೆಗಳೆಲ್ಲವೂ ಅವರ ದಿವ್ಯಪ್ರೇಮಿಯ (Soulmate) ಅನ್ವೇಷಣೆ, ನಿಸರ್ಗ ಮತ್ತು ಮನುಷ್ಯನ ನಡುವಿನ ಸಂಬಂಧದ ಮರುನಿರೂಪಣೆ ಎಂದಿದ್ದಾರೆ ವಿಮರ್ಶಕರು. ಮಳೆಗೂ ಪ್ರೇಮಕ್ಕೂ ಪ್ರಾಕೃತಿಕ ಸಹಜ ಸಂಬಂಧ. ಆ ಸಂಬಂಧ ಸಹಜವಾಗಿಯೇ ಟ್ಯಾಗೋರರ ಮಳೆಪದಗಳಲ್ಲೂ ಕಾಣುತ್ತದೆ. 1930ರಲ್ಲಿ ಟ್ಯಾಗೋರರು ರಷ್ಯಕ್ಕೆ ಭೇಟಿ ನೀಡಿದ್ದಾಗ ಅಲ್ಲಿನ ಕಾರ್ಮಿಕ ಒಕ್ಕೂಟಗಳ ಕಾರ್ಯಾಗಾರದಲ್ಲಿ ಎರಡು ಕವನಗಳನ್ನು ಓದಿದ್ದರು. ಅವುಗಳಲ್ಲಿ ಒಂದು ಕವನ ಮಳೆಯ ಬಗ್ಗೆ ಆಗಿತ್ತು. ತನ್ನ ಕವನವೊಂದನ್ನು ಪರಿಚಯಿಸುವಾಗ ಭಾರತದ ಚಿತ್ರಣವೊಂದನ್ನು ವಿದೇಶದ ಅಪರಿಚಿತರಿಗೆ ಮಾಡಿಸುವಾಗಿನ ಅವರ ಆಯ್ಕೆ ಅವರ ಮಳೆಪ್ರೀತಿಯನ್ನು ತೋರಿಸುತ್ತದೆ. ಬೆಂಗಾಲಿಯಲ್ಲಿ ‘ನಬಬರಷ’ ಎನ್ನುವ ಶೀರ್ಷಿಕೆಯ ಕವನ ‘ಹೊಸಮಳೆ’ಯ ಕುರಿತಾದದ್ದು. ಈ ಕವನವನ್ನು ವಾಚಿಸುವ ಮುನ್ನ ಟ್ಯಾಗೋರರು ರಷ್ಯನ್ ಸ್ನೇಹಿತರಿಗೆ ಕವನದ ಹಿನ್ನೆಲೆಯನ್ನೂ ನೀಡಿದ್ದರು. ಅಂದಿನ ಕೃಷಿಪ್ರಧಾನ ಭಾರತದಲ್ಲಿ ಬೇಸಿಗೆಯಲ್ಲಿ ಬೆಂದವರು ಮೋಡ ದಟ್ಟವಾಗುವುದಕ್ಕೆ ಕಾಯುವುದು, ಮೊದಲ ಮಳೆಗೆ ಪುಳಕಗೊಳ್ಳುವುದು, ಸ್ವತಃ ಟ್ಯಾಗೋರರ ಹೃದಯವೇ ನವಿಲಾಗಿ ನರ್ತಿಸುವುದು; ಭತ್ತದ ತೆನೆಗಳು ನಲಿದಾಡುವುದು, ನೀರಲ್ಲಿ ಹುದುಗಿದ ಕಪ್ಪೆಗಳು ಗೊಟರ್ ಸದ್ದು ಮಾಡುವುದು, ಮಳೆಯಲ್ಲಿ ನೆನೆದ ಬಾತುಕೋಳಿಗಳು ತಮ್ಮ ಗೂಡಿನಲ್ಲಿ ಮರಿಗಳ ಜೊತೆ ನಡುಗುವುದು ಹೀಗೆ ಮಣ್ಣಿನ ಹಾಗೂ ಮಣ್ಣಿನ ಮಕ್ಕಳ ಬದುಕಿನ ಚಿತ್ರಣವನ್ನು ಬರೆಯುತ್ತದೆ ‘ಹೊಸಮಳೆ’ ಕವನ. ‘ಗೀತಾಭಿತನ್’ ಎನ್ನುವ ಟ್ಯಾಗೋರರ ನಿಸರ್ಗದ ಹಾಡುಗಳ ಸಂಗ್ರಹವನ್ನು ಅವಲೋಕಿಸಿದರೆ ಅದರಲ್ಲಿ 115 ಮಳೆಗೀತೆಗಳಿವೆ, 69 ಹಾಡುಗಳು ವಸಂತದ ಬಗ್ಗೆ, 30 ಹಾಡುಗಳು ಶರತ್ಕಾಲದ ಬಗ್ಗೆ, 16 ಹಾಡುಗಳು ವೈಶಾಖದ ಕುರಿತು, 12 ಚಳಿಯ ಬಗ್ಗೆ ಮತ್ತೆ ಐದು ಹೇಮಂತ ಋತುವಿನ ಪಾಲಿಗೆ. ಇಲ್ಲಿಯೂ ಮಳೆಯ ಪ್ರೇಮಿ ಮಳೆಯ ಪಕ್ಷಪಾತಿ ಟ್ಯಾಗೋರರು.  

ಟ್ಯಾಗೋರರು ಜೀವನದ್ದುದ್ದಕ್ಕೂ ಬದುಕಿನ ಬೇರೆ ಬೇರೆ ಹಂತಗಳಲ್ಲಿ ಮಳೆ ಕವನಗಳನ್ನು ಬರೆದವರು. ಬದುಕಿರುವವರೆಗೂ ಅವರು ಮಳೆಹುಚ್ಚರೇ. ‘ಗೀತಾಂಜಲಿ’ ಸಂಕಲನದಲ್ಲಿನ ಒಂದು ಹಾಡು ಹೀಗೆನ್ನುತ್ತದೆ 

‘ಮೋಡಗಳ ಮೇಲೆ ಮೋಡಗಳು ಏರಿ ಕಪ್ಪೆನಿಸಿವೆ.   
ಓ ಪ್ರಿಯೆ ನನ್ನ ಯಾಕೆ ಕಾಯಿಸುವೆ   
ಬಾಗಿಲ ಹೊರಗೆ ಒಂಟಿಯಾಗಿ? 

ಈ ನಡುದಿನದ ಕೆಲಸದಲ್ಲಿ ನಿರತನಾಗಿರುವಾಗ 
ಗುಂಪಿನೊಳಗೆಲ್ಲೋ ಕರಗಿರುವಾಗ   
ಈ ಕರಾಳ ಒಂಟಿ ದಿನದಲ್ಲಿ 
ನೀನೇ ನನ್ನ ಭರವಸೆ  

 
ನೀನೆಲ್ಲಾದರೂ ಮುಖವೇ ತೋರದಿದ್ದರೆ 
ನನ್ನ ಪೂರ್ತಿಯಾಗಿ ಕಡೆಗಣಿಸಿದರೆ 
ಅರಿಯೆ ಹೇಗೆ ಕಳೆದೇನು ಈ ದೀರ್ಘ ಮಳೆಕ್ಷಣಗಳ

ನೋಡುತ್ತಲೇ ಇರುತ್ತೇನೆ ಆಗಸದ ದೂರದ  
ಕತ್ತಲೆಯ ಭಾರ    

ಮತ್ತೆ ನನ್ನೆದೆ ಅಲೆದಾಡುತ್ತ ಚೀರುತ್ತಿದೆ 
ಬೀಸುವ ಅಶಾಂತ ಗಾಳಿಯೊಡನೆ.’

ಮಳೆಗಾಲದಲ್ಲಿ ನೋಡುವ, ಕೇಳುವ, ಅನಿಸುವ, ಅನುಭವಿಸುವ ಕ್ಷಣಗಳೆಲ್ಲ ಟ್ಯಾಗೋರರ ಕವಿತೆಗಳಲ್ಲಿ ಬಂದು ಹೋಗುತ್ತವೆ. ಬಾಹ್ಯಜಗತ್ತಿನ ರೂಪಾಂತರಕ್ಕೆ ಒಳಮನಸಿನ ಸ್ಪಂದನ, ತೇವ, ಭಾರಗಳೂ ಅಕ್ಷರಗಳಾಗಿ ಪ್ರಕಟಗೊಳ್ಳುತ್ತವೆ. ಟ್ಯಾಗೋರರ ಕವನಗಳನ್ನು ಓದುವವರಿಗೆಲ್ಲ, ಇಂತಹದ್ದೇ ಓದಬೇಕು ಎಂದು ಗುರಿ ಇಟ್ಟು ಹುಡುಕದೆ ಇದ್ದರೂ ಮಳೆ ಕವಿತೆಗಳೇ ಹುಡುಕಿಕೊಂಡು ಬಂದಂತೆ ಓದಿಸಿಕೊಳ್ಳುತ್ತವೆ. ಆ ಸಾಲುಗಳಲ್ಲಿ, ಸಾಲುಗಳ ನಡುವಲ್ಲಿ ಪ್ರಕೃತಿ ಹಾಗೂ ಮಳೆ, ಕಾತರಿಸುವುದು, ಕಾಯುವುದು, ಒಂಟಿತನ ಹಾಗೂ ಪ್ರೇಮ ತಣ್ಣಗೆಯೂ ಬೆಚ್ಚಗೆಯೂ ಅವಿತಿವೆ. ಕವಿ ಇಲ್ಲಿ ಮಳೆಗಾಗಿ ಕಾಯುವುದೋ, ಒಂಟಿತನವೇ ಅವರನ್ನು ತಿನ್ನುವುದೋ ಅಥವಾ ಮಳೆಯಂತಹ ಹುಡುಗಿಯನ್ನು ನೆನೆದು ಬೇಯುವುದೋ ಎಂದೆಲ್ಲ ವಿಮರ್ಶಕರು ವಾದಿಸುತ್ತಾರೆ. ಮಳೆಗಾಲದ ಹೊತ್ತಿನಲ್ಲಿ ಪ್ರಾಕೃತಿಕ ಅವಘಡಗಳು ಬಾರದಿರಲಿ, ಮಳೆಯಲ್ಲಿ ಆಡುವ ಮಕ್ಕಳು ಕ್ಷೇಮವಾಗಿರಲಿ, ಬೇಗ ಮನೆ ಸೇರಲಿ ಎನ್ನುವ ಆಶಯದ ಕವಿತೆಯನ್ನೂ ಬರೆದಿದ್ದಾರೆ. ಬೆಂಗಾಲದ ಬಿಸಿಲಿನ ಬೇಗೆ, ಮಣ್ಣಿನ ಬಾಯಾರಿಕೆಗಳ ಮೇಲೆ ಹೊಯ್ದು ದಾಹ ತೀರಿಸು, ಮೊದಲ ಮಳೆಗೆ ದಿಗಂತದಲ್ಲಿ ತಯಾರಿ ನಡೆಸಿ ರೈತರಲ್ಲಿ ಉತ್ಸಾಹ ತುಂಬಿಸು ಎಂದೆಲ್ಲ ಹೇಳಿದ್ದಾರೆ. ಮಳೆಯ ಚಿಟಪಟದ ಮಧ್ಯೆ ಪುರಾತನ ಕವಿಯ ಮುಂಗಾರಿನ ವರ್ಣನೆಯ ಲಯ ಮನಸ್ಸಲ್ಲಿ ಹಾದುಹೋಗುತ್ತದೆ ಎಂದು ಕಾಳಿದಾಸನನ್ನೂ ತನ್ನ ಸಾಲುಗಳಲ್ಲಿ ನೆನೆದಿದ್ದಾರೆ. ಮಳೆಗಾಲದ ಕಾವ್ಯ ಧಾರೆ ಧಾರೆಯಾಗಿ ಭಾವಲಹರಿಯಾಗಿ ಹರಿದಿದೆ, ಮನದ ಹೊರೆ ಇಳಿಸಿದೆ.  

ಟ್ಯಾಗೋರರ ಮಳೆಪ್ರೇಮ ಬರೇ ಕವನದ ಸಾಲುಗಳಲ್ಲಿ ಮಾತ್ರ ಇಣುಕಿ ಮರೆಯಾಗುವಂತಹದ್ದಲ್ಲ. ಮಳೆಯ ಸ್ವಾಗತದ ನೆಪದಲ್ಲಿ ಶಾಂತಿನಿಕೇತನದಲ್ಲಿ ಅವರು ‘ಬರ್ಷ ಮಂಗಲ್’ ಎನ್ನುವ ಸಾಮಾಜಿಕ- ಸಾಂಸ್ಕೃತಿಕ ಹಬ್ಬವನ್ನು ಆಚರಿಸಲು ಶುರು ಮಾಡಿದರು. ಬಂಗಾಳ ವಿಭಜನೆ ಆದರೂ ಟ್ಯಾಗೋರರ ಕಲ್ಪನೆಯ ಕೂಸಾದ ‘ಬರ್ಷ ಮಂಗಲ್’ಅನ್ನು ಪಶ್ಚಿಮ ಬಂಗಾಲ ಮತ್ತು ಬಾಂಗ್ಲಾ ದೇಶಗಳೆರಡರಲ್ಲೂ ಈಗಲೂ ಪ್ರತಿವರ್ಷವೂ ಆಚರಿಸುತ್ತಾರೆ. ದಿನವಿಡೀ ಮಳೆಯನ್ನು ನೆನೆಸುವ, ನಮಿಸುವ ಹಾಡು, ನಾಟಕ, ಕುಣಿತ, ಗೊಂಬೆಯಾಟಗಳು ನಡೆಯುತ್ತವೆ. ಆಷಾಢ ತಿಂಗಳಲ್ಲಿ ಆಚರಿಸುವ ಈ ಹಬ್ಬ ಎರಡೂ ಕಡೆಯ ಬಂಗಾಳಿ ಜನರನ್ನು ಭಾವನಾತ್ಮಕವಾಗಿ ಜೋಡಿಸುತ್ತದೆ. ಬಂಗಾಳದ ಮನೆಮನೆಗಳಲ್ಲೂ ಆಲಿಸುವ ‘ರಬೀಂದ್ರ ಸಂಗೀತ’ದಲ್ಲೂ ಟ್ಯಾಗೋರರು ಬರೆದ ಮಳೆ ಪದಗಳು ಸೇರಿಕೊಂಡಿವೆ. ‘ಬರ್ಷ ಮಂಗಲ್’ನಂತಹ ಮಳೆ ನಮನ, ಮಳೆ ಚಿಂತನ ಬಂಗಾಳದಲ್ಲಿ ಮಾತ್ರವಲ್ಲದೆ ದೇಶದಾದ್ಯಂತ ನಡೆಯಬೇಕಾಗಿದೆ. ಮಳೆ ಮತ್ತು ಬರ ಜೋಡಿ ಶಬ್ದಗಳೇನೋ ಎನ್ನುವಷ್ಟು ಹತ್ತಿರವಾಗಿಬಿಟ್ಟಿರುವ ಇತ್ತೀಚಿನ ಕಾಲದಲ್ಲಿ ಟ್ಯಾಗೋರರು ಭಾವನಾತ್ಮಕವಾಗಿ ಕಾವ್ಯಾತ್ಮಕವಾಗಿ ಬರೆದ ಕವಿತೆಗಳು ವೈಚಾರಿಕ ನೆಲೆಯಲ್ಲೂ ನಮ್ಮನ್ನು ಕಾಡಬೇಕಾಗಿವೆ. ಅವರ ಕವನಗಳಲ್ಲಿ ನಿಚ್ಚಳವಾಗಿ ಕಾಣುವ ನಿಸರ್ಗ ಪ್ರೇಮ, ಮಳೆ ಪ್ರೀತಿ, ರಮ್ಯ ಕಾವ್ಯವೊಂದರ ಓದಿನ ಖುಷಿಗಷ್ಟೇ ಸೀಮಿತವಾಗದೆ ನಮ್ಮೊಳಗೇ ಒಂದು ಪ್ರಾಕೃತಿಕ ಎಚ್ಚರವನ್ನು ಹೊತ್ತಿಸಬೇಕಾಗಿದೆ.        

 ಟ್ಯಾಗೋರರು ತೀವ್ರವಾಗಿ ಪ್ರೀತಿಸಿದ ಮಳೆ ಮತ್ತೆ ಸುರಿಯುತ್ತಿದೆ. ಇಂತಹದೇ ಸಮಯಕ್ಕೆ ಹಿಂದೆಂದೋ  ಟ್ಯಾಗೋರರು ಸೃಷ್ಟಿಸಿದ ಕಲ್ಪನೆಗಳು, ಜೋಡಿಸಿದ ಪದಪುಂಜಗಳು, ಅವುಗಳ ಹಿಂದಿನ ಕಾವ್ಯ ಪ್ರೇಮ, ಒಂಟಿತನ, ಕಾತರ, ಇನ್ನೂ ಇಲ್ಲೇ ಎಲ್ಲೋ ತಂಗಾಳಿಯಾಗಿ ತೇಲುತ್ತಿವೆ. ಚಿಟಪಟ ಸ್ವರವಾಗಿ ಹಾಡುತ್ತಿವೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು