ಬುಧವಾರ, ಮಾರ್ಚ್ 3, 2021
25 °C

ತೆರದ ಅಂಚೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶ್ವ ಹಾವುಗಳ ದಿನದ ಅಂಗವಾಗಿ ಕರ್ನಾಟಕ ದರ್ಶನದಲ್ಲಿ ಡಾ.ಶೇಷಾದ್ರಿ ಕೆ.ಎಸ್. ಅವರು ಬರೆದ ಲೇಖನವನ್ನು ಓದದೆ ಮುಂದಿನ ಪುಟವನ್ನು ತೆಗೆದೆ. ಕಾರಣ ಲೇಖನದಲ್ಲಿದ್ದ ಹಾವುಗಳ ಚಿತ್ರಗಳು. ಹಾವುಗಳೆಂದರೆ ನನಗೆ ಅಷ್ಟು ಭಯ. ಆದರೂ ಮನಸ್ಸು ಬಿಡಲಿಲ್ಲ, ಚಿತ್ರಗಳನ್ನು ನೋಡದೆ ಲೇಖನವನ್ನು ಓದಿದೆ. ‘ಹಾವುಗಳು ವಿಶ್ವದಾದ್ಯಂತ ಅಳಿವಿನಂಚಿನಲ್ಲಿವೆ’ ಎಂಬ ಸಂಗತಿ ಗಾಬರಿ ಮೂಡಿಸಿತು. ಇದಕ್ಕೆ ಮನುಷ್ಯ ಮತ್ತು ಅವನ ದುರಾಸೆ ಕಾರಣ ಎಂದು ತಿಳಿದಾಗ ಪಾಪಪ್ರಜ್ಞೆ ಮೂಡಿತು. ನಗರೀಕರಣದ ಹೆಸರಿನಲ್ಲಿ 'ಕಾಂಕ್ರೀಟ್ ಕಾಡು' ಸೃಷ್ಟಿಸಲು ಎಷ್ಟೋ ಎಕರೆಯಷ್ಟು ಅರಣ್ಯಗಳನ್ನು ನಾಶ ಮಾಡುತ್ತಿದ್ದೇವೆ. ಹಾವುಗಳಂತಹ ಜೀವರಾಶಿಗಳಿಗೆ ವಾಸಿಸಲು ಸ್ಥಳ ಇಲ್ಲದಂತ ಸ್ಥಿತಿ ನಿರ್ಮಾಣವಾಗುತ್ತಿದೆ. ಮಾನವ ಕುಲ ಅಸ್ತಿತ್ವದಲ್ಲಿರಲು ಪ್ರಾಣಿ ಸಂಕುಲವನ್ನು ಉಳಿಸಿಕೊಳ್ಳಬೇಕೆಂಬ ಸತ್ಯವನ್ನು ಅರ್ಥಮಾಡಿಕೊಳ್ಳಬೇಕಿದೆ.
-ಚಕ್ರವರ್ತಿ ಸಿದ್ಧಾರ್ಥ

ಹಾವನ್ನು ದ್ವೇಷಿಸುವುದಿಲ್ಲವೆಂದು ಜನರು ಅರಿತುಕೊಳ್ಳಬೇಕು. ಹಾವಿನ ದ್ವೇಷ ಹನ್ನೆರಡು ವರ್ಷ ಎಂಬುದು ಒಂದು ಭ್ರಮೆ ಅಷ್ಟೇ. ಹಾವಿನ ಕುರಿತು ‘ಕರ್ನಾಟಕ ದರ್ಶನ’ದಲ್ಲಿ ಇಷ್ಟೆಲ್ಲ ಮಾಹಿತಿ ಪ್ರಕಟಿಸಿದ್ದಕ್ಕೆ ಪತ್ರಿಕೆಗೆ ಅಭಿನಂದನೆಗಳು. ಇದೇ ರೀತಿ ಬೇರೆ ಬೇರೆ ಪ್ರಾಣಿಗಳ ಬಗ್ಗೆಯೂ ಮಾಹಿತಿ ಸಂಗ್ರಹಿಸಿ ಪ್ರಕಟಿಸಿದರೆ ಉತ್ತಮ.
- ಸಂತೋಷ ಜಾಬೀನ ಸುಲೇಪೇಟ, ಕಲಬುರ್ಗಿ ಜಿಲ್ಲೆ

‘ಹಾವುಗಳಿಗೆ ಹಾಯ್ ಹೇಳಿ’ ಲೇಖನ ಜನರ ಕಣ್ಣು ತೆರೆಸುವಂತಿದೆ. ಹಾವುಗಳೆಂದರೆ ಹೆದರಿ, ಅವುಗಳನ್ನು ಸಾಯಿಸುತ್ತಾರೆ. ಕೃಷಿಕ್ಷೇತ್ರದ ಅವಿಭಾಜ್ಯ ಅಂಗವೇ ಆಗಿರುವ ಹಾವುಗಳು ನಿಸರ್ಗದ ಆಹಾರ ಸರಪಳಿಯ ಪ್ರಮುಖ ಕೊಂಡಿಯಾಗಿವೆ. ಇಂತಹ ಲೇಖನಗಳು ಹೆಚ್ಚು ಪ್ರಕಟವಾದರೆ ಜನರಿಗೆ ಉಪಯುಕ್ತವಾಗುತ್ತದೆ. ಸಮಾಜದಲ್ಲಿ ಜಾಗೃತಿ ಮೂಡುತ್ತದೆ.
-ಡಾ. ಕೆ.ವಿ.ಸಂತೋಷ್, ಹೊಳಲ್ಕೆರೆ

ಕಾವಿಕಲೆಯ ಕುರಿತು ಸಮಗ್ರ ಮಾಹಿತಿ ದಾಖಲಿಸುವ ಅಗತ್ಯವಿದೆ. ಕೆಲವು ದೇವಸ್ಥಾನಗಳಲ್ಲಿ ಉಳಿದುಕೊಂಡಿರುವ ಈ ಕಲೆಯನ್ನು ರಕ್ಷಿಸುವ ಜವಾಬ್ದಾರಿ ನಮ್ಮ ಮೇಲಿದೆ. ಇಂಥ ಅಪರೂಪದ ವಿಷಯಗಳನ್ನು ವಿವರಿಸುತ್ತಾ ಕುಂದಾಪುರ ಪೇಟೆ ವೆಂಕಟರಮಣ ದೇವಸ್ಥಾನದ ಗೋಡೆಯ ಮೇಲಿರುವ ಶತಮಾನಗಳ ಹಿಂದಿನ ಕಾವಿಕಲೆಯ ಚಿತ್ರಗಳನ್ನು ಪರಿಚಯಿಸಿದ ಲೇಖಕಿ ಮೇಘಲಕ್ಷ್ಮಿ ಮರುವಾಳ ಅವರಿಗೆ ಧನ್ಯವಾದಗಳು.
-ಪಿ.ಜಯವಂತ ಪೈ, ಕುಂದಾಪುರ

ಕಾವಿ ಕಲೆಯ ಹೊಳಪು ಲೇಖನ, ಬಾಲ್ಯದಲ್ಲಿ ಮದುವೆ ಮನೆಯ ಗೋಡೆಗಳ ಮೇಲೆ ಚಿತ್ರಿಸುತ್ತಿದ ಹಸೆ ಕಲೆಯನ್ನು ಸ್ಮರಣೆಗೆ ತಂದಿತು. ಈ ತರಹದ ಕಲೆಗಳನ್ನು ಉಳಿಸಿ ಬೆಳೆಸಲು ನಾವೆಲ್ಲ ಪ್ರಯತ್ನ ಮಾಡಬೇಕು. ಹೊಸದಾಗಿ ನಿರ್ಮಿಸುವ ಮನೆಯಲ್ಲಿ ಕನಿಷ್ಠ ಒಂದು ಗೋಡೆಯಲ್ಲಿ ಈ ಕಲೆಯನ್ನು ಚಿತ್ರಿಸಿ ಮನೆಯ ಅಂದವನ್ನು ಹೆಚ್ಚಿಸಬೇಕು. 
-ಡಾ.ಉಮೇಶ್, ಅರಳಾಪುರ, ಮಂಡ್ಯ

ಕರ್ನಾಟಕ ದರ್ಶನ ಜಲೈ 9ರ ಸಂಚಿಕೆಯಲ್ಲಿ ಪ್ರಕಟವಾದ ’ಕಸವೆಂದರೆ ಕಾಸು’ ಲೇಖನ ಮಾಹಿತಿ ಪೂರ್ಣವಾಗಿದೆ. ಎಸ್‌ಎಲ್‌ಆರ್‌ಎಂ ಯಶೋಗಾಥೆ, ’ಕಸದಿಂದ ರಸ’ ತೆಗೆಯುವಂತಹ ವಿಧಾನವನ್ನು ಪರಿಚಯಸಿದೆ. ಇದೊಂದು ಉತ್ತಮ ಮಾದರಿ. ಇದರ ಜತೆಗೆ ಪರಿಸರ ಸ್ನೇಹ ಮನೆ ‘ಹಸಿರು–ಚಿಗುರು’ ಸೋಮಶೇಖರ್ ಮಂಜುಳ ದಂಪತಿ, ‘ಹಸಿರು –ಚಿಗುರು’ ಮೂಲಕ ತಮ್ಮ ಕನಸಿನ ಮನೆ ಹೇಗೆ ಇರಬೇಕು ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ. ಎರು ಮಡಿಯಲ್ಲಿ ಸಾವಯವ ತರಕಾರಿ ಬೆಳೆಯುವ ತಿಪಟೂರಿನ ಅಕ್ಷಯಕಲ್ಪ ಸಂಸ್ಥೆಯ ವಿಧಾನ ರೈತರಿಗೆ ಉಪಯೋಗವಾಗಿದೆ.
-ಬಿ ಎಸ್ ಮುಳ್ಳೂರ, ಹಲಗತ್ತಿ, ರಾಮದುರ್ಗ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.