ಶುಕ್ರವಾರ, ಆಗಸ್ಟ್ 19, 2022
27 °C

ಕಾಡುವ ಟಿಪ್ಪುವಿನ ಸೇನಾನಿ ಬಹದ್ದೂರ್‌ ಖಾನ್‌ ನೆನಪು

ಎಸ್‌. ಸಂಪತ್‌ Updated:

ಅಕ್ಷರ ಗಾತ್ರ : | |

"He was tall, robust man, about 70 years age, with a white beard descending to his middle; and he was altogether one of those majestic figures which bring to the mind the idea of prophet"

– ಇದನ್ನು ಮೂರನೇ ಆಂಗ್ಲೊ–ಮೈಸೂರು ಯುದ್ಧದ ಸಂದರ್ಭದಲ್ಲಿ ಬ್ರಿಟಿಷ್‌ ಸೈನ್ಯದಲ್ಲಿದ್ದ ಸರ್‌  ಥಾಮಸ್‌ ಮನ್ರೊ ಬರೆದಿದ್ದು. 1791ರಲ್ಲಿ ಬ್ರಿಟಿಷ್‌ ಸೇನೆ ಬೆಂಗಳೂರಿಗೆ ಮುತ್ತಿಗೆ ಹಾಕಿದಾಗ, ಟಿಪ್ಪು ಸುಲ್ತಾನನ ಬೆಂಗಳೂರು ಕೋಟೆಯ ಕಿಲ್ಲೇದಾರನಾಗಿದ್ದ ಬಹದ್ದೂರ್‌ ಖಾನ್‌ನ ವ್ಯಕ್ತಿತ್ವವನ್ನು ಮನ್ರೊ ಅವರು ಈ ರೀತಿ ಬಣ್ಣಿಸಿದ್ದಾರೆ. (ಐಸಿಎಚ್‌ಆರ್‌ನ ಬೆಂಗಳೂರು ಪ್ರಾದೇಶಿಕ ಕೇಂದ್ರದ ಉಪ ನಿರ್ದೇಶಕರಾಗಿರುವ ಎಸ್‌.ಕೆ. ಅರುಣಿ ಅವರು ತಮ್ಮ ‘ಬೆಂಗಳೂರು ಪರಂಪರೆ’ ಕೃತಿಯಲ್ಲಿ ಇದನ್ನು ದಾಖಲಿಸಿದ್ದಾರೆ)

ಬಹದ್ದೂರ್‌ ಖಾನ್‌ನ ಬಗ್ಗೆ ಈಗ ನೆನಪಾಗಲು ಕಾರಣ ಇದೆ. ಕಳೆದ ವಾರ (ಜೂನ್‌ 5) ಬೆಂಗಳೂರಿನ ಉತ್ತರ ತಾಲ್ಲೂಕಿನ ಕಾಳತಮ್ಮನಹಳ್ಳಿಯಲ್ಲಿ ಟಿಪ್ಪು ಕಾಲದ ಕನ್ನಡ ಶಿಲಾಶಾಸನವೊಂದು ಬೆಳಕಿಗೆ ಬಂದಿದೆ. ಇದು ಟಿಪ್ಪು ಸುಲ್ತಾನನ ಕಾಲದಲ್ಲಿ ಬೆಂಗಳೂರು ಕೋಟೆಯ ಕಿಲ್ಲೇದಾರನಾದ ಬಹದ್ದೂರ್‌ ಖಾನನಿಗೆ ಸಂಬಂಧಿಸಿದ ಶಾಸನ. ಗ್ರಾಮದ ಅಶ್ವತ್ಥ ಕಟ್ಟೆಯಲ್ಲಿ ಅರ್ಧಕ್ಕೂ ಹೆಚ್ಚು ಭಾಗ ಹೂತುಹೋಗಿದ್ದ ಈ ಶಾಸನವನ್ನು ಇತಿಹಾಸ ಪ್ರೇಮಿಯೂ ಆದ ಬಿಎಂಟಿಸಿ ಚಾಲಕ ಕೆ.ಧನಪಾಲ್ ಅವರು ಪತ್ತೆ ಹಚ್ಚಿ ಬೆಳಕಿಗೆ ತಂದಿದ್ದಾರೆ. 

ಮೂರನೇ ಆಂಗ್ಲೊ–ಮೈಸೂರು ಯುದ್ಧದ ವೇಳೆ ಬ್ರಿಟಿಷರು ಬೆಂಗಳೂರಿಗೆ ಮುತ್ತಿಗೆ ಹಾಕಿದಾಗ, ಅವರ ವಿರುದ್ಧ ಮತ್ತು ಟಿಪ್ಪು ಪರವಾಗಿ ಮುಂಚೂಣಿಯಲ್ಲಿ ವೀರ ಸೇನಾನಿಯಾಗಿ ಹೋರಾಡಿ ಹತನಾದ ಕಿಲ್ಲೇದಾರ ಬಹದ್ದೂರ್‌ ಖಾನನ ಪ್ರಸ್ತಾಪ ಇದರಲ್ಲಿದೆ. ಬಹದ್ದೂರ್‌ ಖಾನನ ಬಗ್ಗೆ ಪ್ರಸ್ತಾಪ ಇರುವ ಮತ್ತು ಇಲ್ಲಿಯವರೆಗೆ ದೊರೆತಿರುವ ಏಕೈಕ ಶಿಲಾಶಾಸನ ಇದು ಎನ್ನುತ್ತಾರೆ ಇತಿಹಾಸಕಾರರು. 

ಥಾಮಸ್‌ ಮನ್ರೊ, ಬ್ರೌನ್‌ ಸೇರಿದಂತೆ ಕೆಲ ಬ್ರಿಟಿಷ್‌ ಲೇಖಕರು ಬರೆದಿರುವ ಆತ್ಮಕಥನ, ಪ್ರವಾಸ ಕಥನಗಳಲ್ಲಿ ಬಹದ್ದೂರ್‌ ಖಾನನ ಪ್ರಸ್ತಾಪ ಆಗಿದೆ. ಆದರೆ ಇಲ್ಲಿಯವರೆಗೆ ಸ್ಥಳೀಯವಾಗಿ ಆತನ ಅಸ್ತಿತ್ವವನ್ನು ಬಿಂಬಿಸುವ ಮತ್ತು ಗುರುತಿಸುವ ದಾಖಲೆಗಳು ದೊರೆತಿರಲಿಲ್ಲ. ಕಾಳತಮ್ಮನಹಳ್ಳಿಯ ಈ ಶಾಸನವು ಆ ಕೊರತೆಯನ್ನು ನೀಗಿಸಿದೆ. ಹಾಗಾಗಿ, ಬೆಂಗಳೂರಿನ ಇತಿಹಾಸದ ಬಗ್ಗೆ ಬೆಳಕು ಚೆಲ್ಲುವ ಶಾಸನಗಳಲ್ಲಿ ಇದೂ ಒಂದಾಗಿ ಮಹತ್ವ ಪಡೆದುಕೊಂಡಿದೆ. ಸ್ಥಳೀಯ ಇತಿಹಾಸ ತಿಳಿದುಕೊಳ್ಳಲು ಆಸಕ್ತಿ ಇರುವವರು, ವಿದ್ಯಾರ್ಥಿಗಳು, ಸಂಶೋಧನಾರ್ಥಿಗಳಿಗೆ, ವಿದ್ವಾಂಸರಿಗೆ ಬೆಂಗಳೂರಿನ ಇತಿಹಾಸದ ಬಗ್ಗೆ ಇನ್ನಷ್ಟು ಅಧ್ಯಯನ ನಡೆಸಲು ಈ ಶಾಸನ ಪ್ರೇರಣೆಯಾಗಲಿದೆ ಎಂಬುದು ಅವರ ಅಭಿಮತ. 

ಈ ಶಿಲಾಶಾಸನದ ಬಗ್ಗೆ...:

ಕಾಳತಮ್ಮನಹಳ್ಳಿಯ ಶಿಲಾಶಾಸನವು 7 ಅಡಿ ಎತ್ತರವಿದ್ದು, ಸುಮಾರು 2 ಅಡಿ ಅಗಲವಿದೆ. ಕಪ್ಪು ಶಿಲೆಯ ಮೇಲೆ ಕನ್ನಡ ಅಕ್ಷರಗಳಲ್ಲಿ ಕೆತ್ತಲಾಗಿದೆ. ಶಾಸನದ ಮೇಲ್ಭಾಗದಲ್ಲಿ ಶಿರಸ್ತ್ರಾಣಧಾರಿಯಾಗಿ, ಶಸ್ತ್ರಾಸ್ತ್ರ ಹಿಡಿದು ಬಹದ್ದೂರ್‌ ಖಾನನು ಕುದುರೆಯ ಮೇಲೆ ಕುಳಿತಿರುವ ರೇಖಾಚಿತ್ರವನ್ನು ಬಿಡಿಸಲಾಗಿದೆ. ಮುಂಭಾಗದಲ್ಲಿ ಛತ್ರಿಯನ್ನು ಕೆತ್ತಲಾಗಿದೆ. ಮೇಲ್ಭಾಗದಲ್ಲಿ ಸೂರ್ಯ, ಚಂದ್ರರನ್ನು ಕೆತ್ತಲಾಗಿದೆ. ಈ ಶಾಸನ ಪಾಠವನ್ನು ಲಿಪಿ ತಜ್ಞರೂ ಮತ್ತು ಇತಿಹಾಸಕಾರರೂ ಆದ ಪ್ರೊ.ಕೆ.ಆರ್.ನರಸಿಂಹನ್ ಮತ್ತು ಡಾ.ಪಿ.ವಿ.ಕೃಷ್ಣಮೂರ್ತಿ ಅವರು ಓದಿ ಅರ್ಥೈಸಿದ್ದಾರೆ. 

ಅದರಂತೆ, ದಾನ ಶಾಸನವಾಗಿರುವ ಇದು ಎಂಟು ಸಾಲುಗಳನ್ನು ಒಳಗೊಂಡಿದೆ; ಅವೆಂದರೆ–

1) ವಿರೋಧಿಕೃತ
2) ಸಂವತ್ಸರದ ಚೈ
3) ಯಿತ ಬ 10 ದಿನ
4) ಸ ಬೆಂಗಳೂರು ಕೊ
5) ಟೆ ವಳಗೆ ಕಂಡದ
6) ಡಿದಕೆ ಬಹದರ ಖಾ
7) ನ ವರಿಗೆ ಕಳತಮ
8) ನಹಳಿ ರತ್ತ ಕೊಡುಗೆ

ಕಿಲ್ಲೇದಾರ ಬಹದ್ದೂರ್ ಖಾನನು ಯುದ್ಧದಲ್ಲಿ ಹುತಾತ್ಮನಾದಾಗ, ನೀಡಲಾದ ದಾನ ಶಾಸನ ಇದಾಗಿದೆ. ಬೆಂಗಳೂರಿನ ಮೇಲೆ 1791ರ ಮಾರ್ಚ್‌ನಲ್ಲಿ ಬ್ರಿಟಿಷರು ಆಕ್ರಮಣ ಮಾಡಿದಾಗ 21 ದಿನಗಳ ಕಾಲ ಕೋಟೆಯನ್ನು ರಕ್ಷಿಸಿದ ಖಾನ್‌ ಅಂತಿಮವಾಗಿ 1791ರ ಮಾರ್ಚ್‌ 20ರಂದು ಹುತಾತ್ಮರಾಗುತ್ತಾನೆ.

ಬಹದ್ದೂರ್ ಖಾನನಿಗೆ ಕಾಳತಮ್ಮನಹಳ್ಳಿ ಗ್ರಾಮವನ್ನು 1791ರ ಏಪ್ರಿಲ್ 27ರಂದು (ಬುಧವಾರ) ರಕ್ತಕೊಡುಗೆಯಾಗಿ (ಹುತಾತ್ಮ ವೀರನ ಕುಟುಂಬದವರಿಗೆ ಕೊಡುವ ದಾನ) ನೀಡಿದ ಬಗ್ಗೆ ಶಾಸನದಲ್ಲಿ ಉಲ್ಲೇಖಿತವಾಗಿದೆ. ಖಾನ್‌ ಹುತಾತ್ಮನಾದ ತಿಂಗಳ ಬಳಿಕ ನೀಡಿದ ದಾನ ಶಾಸನ ಇದಾಗಿದೆ ಎನ್ನುತ್ತಾರೆ ಪ್ರೊ. ನರಸಿಂಹನ್‌. 

ಕಿಲ್ಲೇದಾರನನ್ನು ಸ್ಮರಿಸಿ ದಾನ ಶಾಸನ ನೀಡುವ ಮೂಲಕ ಆತನನ್ನು ಟಿಪ್ಪು ಗೌರವಿಸಿದ್ದ ವಿಚಾರ ಇತಿಹಾಸದ ಪುಟಗಳಲ್ಲಿ ದಾಖಲಾಗಲಿದೆ ಎಂದು ಅವರು ವಿವರಿಸುತ್ತಾರೆ.

ಯಾರಿದು ಬಹದ್ದೂರ್‌ ಖಾನ್‌?:

ಟಿಪ್ಪುಸುಲ್ತಾನನು ಕರ್ನಾಟಿಕ್‌ ಅಥವಾ ಆರ್ಕಾಟ್‌ ಪ್ರದೇಶದಲ್ಲಿ ಸೈನಿಕ ಕಾರ್ಯಾಚರಣೆ ನಡೆಸುವ ವೇಳೆಯಲ್ಲಿ, ಬಹದ್ದೂರ್‌ ಖಾನನನ್ನು ಕೃಷ್ಣಗಿರಿಯಿಂದ ಕರೆತಂದು, ಬೆಂಗಳೂರು ಕೋಟೆಯ ಕಿಲ್ಲೇದಾರನಾಗಿ ನೇಮಿಸುತ್ತಾನೆ. ಶ್ರೀರಂಗಪಟ್ಟಣಕ್ಕೆ ಮುತ್ತಿಗೆ ಹಾಕಿ ಟಿಪ್ಪುವನ್ನು ಮಣಿಸಲು ತುದಿಗಾಲಲ್ಲಿ ನಿಂತಿದ್ದ ಬ್ರಿಟಿಷ್‌ ಗವರ್ನರ್‌ ಜನರಲ್‌ ಕಾರ್ನವಾಲೀಸ್‌ನಿಗೆ ಬೆಂಗಳೂರಿನಲ್ಲಿ ಇದೇ ಬಹದ್ದೂರ್‌ ಖಾನ್‌ ಸಿಂಹಸ್ವಪ್ನವಾಗಿ ಕಾಡುತ್ತಾನೆ.

ಒಂದೆರಡು ದಿನಗಳಲ್ಲಿ ಬೆಂಗಳೂರು ಕೋಟೆಯವನ್ನು ವಶಪಡಿಸಿಕೊಂಡು ಶ್ರೀರಂಗಪಟ್ಟಣದತ್ತ ಹೆಜ್ಜೆ ಹಾಕಬೇಕೆಂದಿದ್ದ ಕಾರ್ನವಾಲೀಸ್‌ನನ್ನು ಬೆಂಗಳೂರಿನಲ್ಲಿಯೇ 21 ದಿನಗಳವರೆಗೆ ಯುದ್ಧದಲ್ಲಿ ತೊಡಗುವಂತೆ ಮಾಡಿದ್ದು ಪರಾಕ್ರಮಿಯಾದ ಬಹದ್ದೂರ್‌ ಖಾನ್‌ ಎನ್ನುತ್ತಾರೆ ಇತಿಹಾಸಕಾರ ಎಸ್‌.ಕೆ. ಅರುಣಿ.

ಬೆಂಗಳೂರು ಟಿಪ್ಪು ಸುಲ್ತಾನನ ಎರಡನೇ ಹಾಗೂ ಬಹುಮುಖ್ಯ ಕೋಟೆಯಾಗಿತ್ತು. ಹಾಗಾಗಿ ಇದನ್ನು ವಶಪಡಿಸಲು ಯೋಜನೆ ರೂಪಿಸಿದ್ದ ಕಾರ್ನವಾಲೀಸ್‌, ಸೇನೆಯೊಂದಿಗೆ ಬೆಂಗಳೂರು ಪೂರ್ವದ ಹೊರವಲಯವಾದ ಇಂದಿನ ಮಾವಳ್ಳಿ, ಹಲಸೂರುಗಳಲ್ಲಿ 1791ರ ಮಾರ್ಚ್‌ ಆರಂಭದಲ್ಲಿಯೇ ಬೀಡುಬಿಟ್ಟ. ಮಾರ್ಚ್‌ 4ರಂದು ಹಲಸೂರು ದ್ವಾರವನ್ನು (ಮಹಾನಗರ ಪಾಲಿಕೆ ಮುಂಭಾಗದ ದ್ವಾರ) ವಶಪಡಿಸಿಕೊಳ್ಳಲು ಬ್ರಿಟಿಷ್‌ ಸೈನ್ಯಕ್ಕೆ ಮೂರು ದಿನ ಬೇಕಾಯಿತು. 

ಈ ಅವಧಿಯಲ್ಲಿ ಬಹದ್ದೂರ್‌ ಖಾನ್‌ ನೇತೃತ್ವದ ಸೇನೆ ಬ್ರಿಟಿಷ್‌ ಸೇನೆಯ ಮೇಲೆ ಪಿರಂಗಿ ಗುಂಡುಗಳು, ತುಪಾಕಿಗಳನ್ನು ಸಿಡಿಸಿ ಎದುರಿಸುತ್ತದೆ. ಈ ವೇಳೆ ಬ್ರಿಟಿಷ್‌ ಸೇನೆಯ ಕರ್ನಲ್‌ ಮೂರ್‌ಹೌಸ್‌, ಕ್ಯಾಪ್ಟನ್‌ ಡೆಲನ್ಯ, ಕ್ಯಾಪ್ಟನ್‌ ಕೊನೌನ್‌ ಹಾಗೂ ಅನೇಕ ಸೈನಿಕರು ಅಸುನೀಗುತ್ತಾರೆ ಎಂದು ಅವರು ವಿವರಿಸುತ್ತಾರೆ.

ಪಟ್ಟು ಬಿಡದ ಬ್ರಿಟಿಷ್‌ ಸೇನೆ ಹಲಸೂರು ದ್ವಾರವನ್ನು ವಶಕ್ಕೆ ಪಡೆಯುತ್ತದೆ. ಬಹದ್ದೂರ್‌ ಖಾನ್‌ ಕೋಟೆಯನ್ನು ಭದ್ರಗೊಳಿಸಲು ಸಜ್ಜಾಗುತ್ತಾನೆ. ಕಿಲ್ಲೇದಾರನ ಬಳಿ ಕೊಟೆಯೊಳಗೆ ಎರಡು ಸಾವಿರ ಸೈನಿಕರಿರುತ್ತಾರೆ. ಅವರೊಂದಿಗೆ ಮಾರ್ಚ್‌ 7ರಿಂದ 21ರವರೆಗೆ, ಅಂದರೆ ಸುಮಾರು 15 ದಿನಗಳವರೆಗೆ ಸತತವಾಗಿ ಹೋರಾಡುತ್ತಾನೆ. ಬ್ರಿಟಿಷ್‌ ಪಡೆಯು ಕೋಟೆಯ ಮುಖ್ಯದ್ವಾರವಾದ ದೆಹಲಿ ದ್ವಾರದ (ಇಂದಿನ ಕೆ.ಆರ್‌.ಮಾರುಕಟ್ಟೆ ಬಳಿಯ ಕೋಟೆ) ಮೇಲೆ ಫಿರಂಗಿಗಳಿಂದ ದಾಳಿ ನಡೆಸುತ್ತದೆ. ಪ್ರತಿಯಾಗಿ ಕಿಲ್ಲೇದಾರನ ಸೈನ್ಯ ಕೂಡ ಅತ್ಯಾಧುನಿಕ ಫಿರಂಗಿಗಳಾದ ಚಿಮ್ಮುವ ರಾಕೆಟ್‌ ಮದ್ದಿನ ಅಸ್ತ್ರಗಳನ್ನು ಬಳಸಿ ಬ್ರಿಟಿಷ್‌ ಸೈನ್ಯದ ಮೇಲೆ ಪ್ರತಿದಾಳಿ ಮಾಡುತ್ತದೆ. ವಿಶ್ವದಲ್ಲಿಯೇ ಪ್ರಥಮ ಬಾರಿಗೆ ರಾಕೆಟ್‌ ಮದ್ದಿನ ಅಸ್ತ್ರಗಳ ಪ್ರಯೋಗ ಬೆಂಗಳೂರಿನಲ್ಲಿಯೇ ಆಗಿದ್ದು ಎಂಬುದು ಐತಿಹಾಸಿಕ ದಾಖಲೆಯಾಗಿದೆ ಎನ್ನುತ್ತಾರೆ ಅರುಣಿ. ಈ ಎಲ್ಲ ಮಾಹಿತಿಯನ್ನು ‘ಬೆಂಗಳೂರು ಪರಂಪರೆ’ ಸಂಶೋಧನಾ ಕೃತಿಯಲ್ಲಿ ದಾಖಲಿಸಿರುವುದಾಗಿ ಅವರು ಹೇಳುತ್ತಾರೆ. 

ಬ್ರಿಟಿಷರ ಕುತಂತ್ರ

ಬ್ರಿಟಿಷ್‌ ಸೈನ್ಯ ಕುತಂತ್ರದಿಂದ ಮಾರ್ಚ್‌ 20ರಂದು ಮಧ್ಯರಾತ್ರಿ ಕೋಟೆಯ ಗೋಡೆಯನ್ನು ಒಡೆದು ಒಳನುಗ್ಗಿ, ಫಿರಂಗಿಗಳ ಮೂಲಕ ದೆಹಲಿ ದ್ವಾರದ ಪಕ್ಕದ ಗೋಡೆಯನ್ನು ನಾಶಗೊಳಿಸುತ್ತದೆ. ತಕ್ಷಣವೇ ಬಹದ್ದೂರ್‌ ಖಾನ್‌ ನೇತೃತ್ವದ ಸೇನೆ ಪ್ರತಿದಾಳಿ ನಡೆಸುತ್ತದೆ. ಬೆಳಗ್ಗಿನ ಜಾವದವರೆಗೆ ನಡೆದ ಈ ಯುದ್ಧದಲ್ಲಿ ಬ್ರಿಟಿಷ್‌ ಸೈನಿಕ ಲ್ಯಾಲಿ ಹಾಗೂ ಸಂಗಡಿಗರು ಬಹದ್ದೂರ್‌ ಖಾನ್‌ ಮೇಲೆ ಎರಗುತ್ತಾರೆ. ಈ ವೇಳೆ ಕೈಯಲ್ಲಿ ಖಡ್ಗ ಹಿಡಿದು ವೈರಿಗಳ ಸದೆಬಡಿಯುತ್ತಲೇ ಕಿಲ್ಲೇದಾರ, ವೈರಿಗಳ ಗುಂಡಿಗೆ ಬಲಿಯಾಗುತ್ತಾನೆ. ಕಿಲ್ಲೇದಾರನ ಸಾವು ಖಚಿತವಾಗುತ್ತಿದ್ದಂತೆ ಬ್ರಿಟಿಷ್‌ ಸೇನೆ ವಿಜಯೋತ್ಸವ ಆಚರಿಸುತ್ತದೆ ಎಂದು ಅವರು ವಿವರಿಸುತ್ತಾರೆ.

ಬಹದ್ದೂರ್‌ ಖಾನನ ಶೌರ್ಯ, ಪರಾಕ್ರಮವನ್ನು ಗೌರವಿಸಿ ಬ್ರಿಟಿಷ್‌ ಸೇನೆಯು ಗೌರವಗಳೊಂದಿಗೆ ಕೋಟೆ ಆವರಣದಲ್ಲಿಯೇ ಕಿಲ್ಲೇದಾರನ ಅಂತ್ಯಕ್ರಿಯೆ ನೆರವೇರಿಸುತ್ತದೆ. ಬಹದ್ದೂರ್‌ ಖಾನನ ಹೆಸರಿನಲ್ಲಿ ಈಗಲೂ ಕೆ.ಆರ್‌. ಮಾರುಕಟ್ಟೆಯಲ್ಲಿ ದರ್ಗಾ ಇದೆ. ಅಲ್ಲಿಗೆ ನಿತ್ಯ ನೂರಾರು ಜನರು ಬಂದು ಪ್ರಾರ್ಥಿಸುತ್ತಾರೆ. 

ವೀರರಲ್ಲಿ ಗಮನಾರ್ಹ ಸ್ಥಾನ

ಬಹದ್ದೂರ್‌ ಖಾನನ ಶೌರ್ಯವನ್ನು ಕೊಂಡಾಡಿದ್ದ ಆಗಿನ ಬ್ರಿಟಿಷ್‌ ಲೆಫ್ಟಿನೆಂಟ್‌ ರೊಡ್ರಿಕ್‌ ಮೆಕೆಂಜಿ ಅವರು, ‘ನಮ್ಮ ಕಾಲದ ವೀರರಲ್ಲಿ ಬಹದ್ದೂರ್‌ ಖಾನ್‌ ಗಮನಾರ್ಹ ಸ್ಥಾನ ಪಡೆಯುತ್ತಾನೆ. ಗಂಭೀರ ಗಾಯಗಳಿಂದ ಆತ ಜೀವ ತ್ಯಜಿಸಿದ್ದಾನೆ’ ಎಂದು ದಾಖಲಿಸಿರುವುದಾಗಿ ಲೇಖಕಿ ಹಾಗೂ ಸಂಶೋಧಕಿ ಮೀರಾ ಅಯ್ಯರ್‌ ಅವರು ತಮ್ಮ ಲೇಖನವೊಂದರಲ್ಲಿ ಪ್ರಸ್ತಾಪಿಸಿದ್ದಾರೆ. 

ಬ್ರಿಟಿಷರು ಬೆಂಗಳೂರಿನ ಮೇಲೆ ಆಕ್ರಮಣ ಮಾಡಿದಾಗ ಟಿಪ್ಪುವಿನ ಲೆಕ್ಕಾಚಾರವೇ ಬೇರೆಯಾಗಿತ್ತು. ಕೆಲವೇ ದಿವಸಗಳಲ್ಲಿ ಬೆಂಗಳೂರು ಬ್ರಿಟಿಷರ ಕೈವಶವಾಗಬಹುದು, ನಂತರ ಬ್ರಿಟಿಷ್ ಸೈನ್ಯ ಶ್ರೀರಂಗಪಟ್ಟಣದ ಕಡೆಗೆ ಮುನ್ನಡೆಯಬಹುದು ಎಂದು ಯೋಚಿಸಿ, ಬ್ರಿಟಿಷ್ ಸೈನ್ಯವನ್ನು ತಡೆಯಲು ಟಿಪ್ಪು ಕೆಂಗೇರಿಯ ಬಳಿ ಬೀಡುಬಿಟ್ಟಿರುತ್ತಾನೆ. ಆದರೆ ಬಹದ್ದೂರ್ ಖಾನನು ಟಿಪ್ಪು ಮತ್ತು ಬ್ರಿಟಿಷರ ಲೆಕ್ಕಾಚಾರವನ್ನೇ ಬುಡಮೇಲು ಮಾಡಿ 21 ದಿನ ಹೋರಾಡುತ್ತಾನೆ. ಬಹುಶಃ ಟಿಪ್ಪುವು ಕೆಂಗೇರಿ ಸಮೀಪ ಬೀಡುಬಿಡದೆ ಸಕಾಲಕ್ಕೆ ಬಹದ್ದೂರ್ ಖಾನನ ನೆರವಿಗೆ ಧಾವಿಸಿದ್ದರೆ ಮೈಸೂರಿನ ಚರಿತ್ರೆ ಬೇರೆಯೇ ಆಗಿರುತ್ತಿತ್ತು ಎನಿಸುತ್ತದೆ ಎನ್ನುತ್ತಾರೆ ಇತಿಹಾಸ ಉಪನ್ಯಾಸಕ ಹಾಗೂ ಸಂಶೋಧಕ ಹಂ.ಗು.ರಾಜೇಶ್‌.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು