ಗುರುವಾರ , ಏಪ್ರಿಲ್ 9, 2020
19 °C

ಕೃಷಿಕ ಬೇಡುವವನಾಗಬಾರದು, ಸದಾ ಸ್ವಾವಲಂಬಿಯಾಗಿರಬೇಕು: ಇದು ರೆಡ್ಡಿ ಮನದ ಮಾತು

ಗಾಣಧಾಳು ಶ್ರೀಕಂಠ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕೃಷಿಕ ಸಾವಯವ ಆದರೆ ಸಾಲದು; ಕೃಷಿಕರ ಜೀವನವೂ ಸಾವಯವ ಆಗಬೇಕು’– ಎಂದು ಪ್ರತಿಪಾದಿಸುತ್ತಾ, ಅದರಂತೆ ಬದುಕಿ ತೋರಿಸಿ, ಈಗ ಪರಲೋಕದತ್ತ ಪ್ರಯಾಣ ಬೆಳೆಸಿದ್ದರೆ ಸಾವಯವ ಕೃಷಿಕ ನಾಡೋಜ ವರ್ತೂರಿನ ಎಲ್. ನಾರಾಯಣರೆಡ್ಡಿ!

1997ರಲ್ಲಿ ನಾನು ಬೈಫ್‌ ಸಂಸ್ಥೆಯಲ್ಲಿದ್ದಾಗ, ಮೊದಲಬಾರಿಗೆ ನಾರಾಯಣರೆಡ್ಡಿಯವರನ್ನು ಭೇಟಿಯಾಗಿದ್ದೆ. ಮೊದಲ ಭೇಟಿಯಲ್ಲೇ ಅವರಿಂದ ಸಾವಯವ ಕೃಷಿ ಕುರಿತ ಉಪನ್ಯಾಸ ಕೇಳಿದ ಭಾಗ್ಯ ನನ್ನದು. ಸರಳ ವಿವರಣೆ, ದೃಷ್ಟಾಂತಗಳ ಉಲ್ಲೇಖ, ಹಳ್ಳಿ ಸೊಗಡಿನ ಮಾತುಗಳು ತುಂಬಾ ಆಕರ್ಷಿಸಿದವು. ಅದೇ ನನ್ನ ಕೃಷಿ ಬರವಣಿಗೆಗೂ ಸ್ಪೂರ್ತಿಯೂ ಆಯಿತು. ಇದಾದ ನಂತರ ಹಲವು ಕಾರ್ಯಕ್ರಮಗಳಲ್ಲಿ ಭೇಟಿಯಾಗಿದ್ದೇನೆ. ಅವರೊಂದಿಗೆ ಹಲವು ಕೃಷಿ ಕ್ಷೇತ್ರಗಳನ್ನು ಸುತ್ತಾಡಿದ್ದೇನೆ. ಕಾರ್ಯಾಗಾರಗಳಲ್ಲೂ ಭಾಗವಹಿಸಿದ್ದೇನೆ. ರೆಡ್ಡಿಯವರೊಂದಿಗಿನ ಒಡನಾಟ ಕೃಷಿ ಪುಸ್ತಕವೊಂದನ್ನು ಓದಿದಂತೆ.

ಸಾವಯವ ಕೃಷಿ ಕುರಿತು ಅವರು ಮಂಡಿಸಿದ್ದ ವಿಚಾರಗಳು ಕೇವಲ ಮಾತುಗಳಷ್ಟೇ ಆಗಿರಲಿಲ್ಲ. ಪ್ರತಿ ಮಾತಿಗೂ ಮಾದರಿಗಳನ್ನು ಒದಗಿಸುತ್ತಿದ್ದರು. ಆ ಮಾತುಗಳಲ್ಲಿ ಉತ್ಪ್ರೇಕ್ಷೆಗಳಿರುತ್ತಿರಲಿಲ್ಲ. ಅವೆಲ್ಲ ಅನುಭವದ ಮೂಸೆಯಿಂದ ಅರಳುತ್ತಿದ್ದ ನುಡಿಗಳಾಗಿದ್ದವು. ತಮ್ಮ ಪ್ರತಿ ಭಾಷಣದಲ್ಲೂ, ‘ನಾನು ಹೇಳಿದ್ದರ ಬಗ್ಗೆ ನಿಮಗೆ ಅನುಮಾನವಿದ್ದರೆ, ನಮ್ ಜಮೀನಿಗೆ ಬಂದು‌ ನೋಡಿ’ ಎಂದು ಆಹ್ವಾನ ನೀಡುತ್ತಿದ್ದರು. ಕೃಷಿ ಬಗ್ಗೆ ತುಂಬಾ ವೈಜ್ಞಾನಿಕವಾಗಿ ವಿಚಾರಗಳನ್ನು ಪ್ರತಿಪಾದಿಸುತ್ತಿದ್ದರು. ಅಷ್ಟೇ ಅಲ್ಲ, ಆರ್ಥಿಕ ಮತ್ತು ಸಾಮಾಜಿಕ ಆಯಾಮಗಳನ್ನು ತೆರೆದಿಡುತ್ತಿದ್ದರು. ಹೀಗಾಗಿಯೇ ಅವರು ಪ್ರತಿಪಾದಿಸುತ್ತಿದ್ದ ವಿಚಾರಗಳಿಗೆ ಅಧಿಕಾರಿಗಳಾಗಲಿ, ವಿಜ್ಞಾನಿಗಳಾಗಲಿ ಪ್ರತಿಕ್ರಿಯೆ ನೀಡುವಾಗ ತುಂಬಾ ಯೋಚಿಸುತ್ತಿದ್ದರು.

ಸಾವಯವ ಕೃಷಿ ನೀತಿಯ ಹಿಂದಿನ ಶಕ್ತಿ: ಕರ್ನಾಟಕದಲ್ಲಿ ಸಾವಯವ ಕೃಷಿ ಬೇರೂರಲು ಶ್ರಮ ಹಾಕಿದ ಪ್ರಮುಖರಲ್ಲಿ ರೆಡ್ಡಿಯವರು ಒಬ್ಬರು. ಆ ಕೃಷಿ ಪ್ರಚಾರಕ್ಕೆ ಚಳವಳಿ ರೂಪಕೊಟ್ಟು, ಕೃಷಿ ಸಂಘಟನೆಗಳಿಗೆ ಶಕ್ತಿ ತುಂಬಿದ್ದರು. ದೇಶದಲ್ಲೇ ಸಾವಯವ ಕೃಷಿ‌ ನೀತಿ ಅನುಷ್ಠಾನಗೊಳಿಸಿದ ಮೊದಲ ರಾಜ್ಯ ಕರ್ನಾಟಕ‌. ಈ ನೀತಿ ಅನುಷ್ಠಾನದ‌ ಹಿಂದೆ ರೆಡ್ಡಿಯವರ ಶ್ರಮವೂ ಇದೆ. ಸರ್ಕಾರದ ಯಾವುದೇ ಕೆಲಸಗಳಲ್ಲಿ ಭಾಗಿಯಾಗಿದ್ದರೂ, ಕೃಷಿ ವಿಚಾರದಲ್ಲಿ ಸರ್ಕಾರ ತಪ್ಪೆಸಗಿದ್ದು ಖಂಡರೆ, ಯಾವುದೇ ಮುಲಾಜಿಗೆ ಬೀಳದೇ ಅದನ್ನು ಖಂಡಿಸುತ್ತಿದ್ದರು.

ಅವರು ಕೃಷಿ ‍ಪ್ರೊಫೆಸರ್: ರೆಡ್ಡಿಯವರು ಓದಿದ್ದು ಕಡಿಮೆ. ಆದರೆ ವಿದೇಶದ ವಿವಿಗಳು, ಸಂಘಟನೆಗಳಿಗೆ ವಿಸಿಟಿಂಗ್ ಪ್ರೊಫೆಸರ್ ಆಗಿದ್ದರು. 1990ರಲ್ಲಿ ನೆದರ್ಲೆಂಡ್‌ನ ವೇಗ್ಹೇಂಗೆನ್ ವಿಶ್ವವಿದ್ಯಾಲಯ, 1992ರಲ್ಲಿ ಜರ್ಮನಿಯ ಗಾಟಿಂಗನ್ ವಿವಿ, ಅದೇ ವರ್ಷದಲ್ಲಿ ಬೆಲ್ಜಿಯಂನ 700 ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟಕ್ಕೆ ಭೇಟಿ ನೀಡಿ ಸಾವಯವ ಕೃಷಿ ಬಗ್ಗೆ ಉಪನ್ಯಾಸ ನೀಡಿದ್ದಾರೆ. 2000ನೇ ಇಸವಿಯಲ್ಲಿ ಫ್ರಾನ್ಸ್‌ನ ಲಿಯೋಪೋರ್ಡ್ ಪ್ರತಿಷ್ಠಾನ, 2001ರಲ್ಲಿ ಜರ್ಮನಿಯ ಗ್ರೌನ್ ಸಂಸ್ಥೆ, ರಿಯೋಟ್ರಾಂಕೊಗೆ ಭೇಟಿ ನೀಡಿದ್ದರು. 2010ರಲ್ಲಿ ಭವಿಷ್ಯಕ್ಕಗಿ ಕೌಟುಂಬಿಕ ಕೃಷಿ ವಿಚಾರ ಸಂಕಿರಣದಲ್ಲಿ ಭಾಗವಹಿಸಲು ನೆದರೆಲೆಂಡ್ಸ್‌ಗೆ ಭೇಟಿ ನೀಡಿದ್ದರು. ನಾಲ್ಕೈದು ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುತ್ತಿದ್ದ ಅವರು, ಇಂಗ್ಲಿಷ್‌ನಲ್ಲಿ ಸೊಗಸಾಗಿ ಬರೆಯುತ್ತಿದ್ದರು. ಲೀಸಾ ಎಂಬ ಇಂಗ್ಲಿಷ್ ಕೃಷಿ ಪತ್ರಿಕೆಗೆ ಸಾವಯವ ಕೃಷಿ ಕುರಿತು ಅಂಕಣ ಬರೆಯುತ್ತಿದ್ದರು.

ತರಬೇತಿ ಕೇಂದ್ರವಾದ ಕೃಷಿ ಭೂಮಿ: ‘ಕೃಷಿ ನಾಶವಾದರೆ ದೇಶ ನಾಶವಾಗುತ್ತೆ’ ಎಂದು ಪ್ರತಿಪಾದಿಸುತ್ತಿದ್ದ ರೆಡ್ಡಿಯವರು ತನ್ನ ಜಮೀನಿಗೆ ಭೇಟಿ ನೀಡುವವರಿಗೆ ಏಕಬೆಳೆ ಪದ್ಧತಿ ದುಷ್ಪರಿಣಾಮಗಳನ್ನು ಹೇಳುತ್ತಲೇ, ‘ಕೃಷಿಯಲ್ಲಿ ಉಪ‌ಕಸುಬುಗಳ ಮಹತ್ವ’ವನ್ನು ದೃಷ್ಟಾಂತಗಳೊಂದಿಗೆ ವಿವರಿಸುತ್ತಿದ್ದರು. ಕೃಷಿಕರಿಗೆ ಸೋಮಾರಿ ತನ ಬಿಟ್ಟುಬಿಡಿ. ಮೈಬಗ್ಗಿಸಿ ಜಮೀನಿನಲ್ಲಿ ದುಡಿಯಿರಿ. ಗಿಲೀಟಿನ ಬದುಕಿನಿಂದ ಕೃಷಿ ನಡೆಸುವುದು ಕಷ್ಟ ಎನ್ನುವುದನ್ನು ತಮ್ಮ ಪ್ರತಿ ಭಾಷಣದಲ್ಲೂ ದೃಷ್ಟಾಂತಗಳೊಂದಿಗೆ ವಿವರಿಸುತ್ತಿದ್ದರು.

ರೆಡ್ಡಿ ಅವರ ದೊಡ್ಡಬಳ್ಳಾಪುರದ ಕೃಷಿ ಭೂಮಿ ಒಂದು ರೀತಿ ಸಾವಯ ಕೃಷಿ ಮತ್ತು ಸಾವಯವ ಬದುಕಿನ ಪಾಠಶಾಲೆಯಾಗಿತ್ತು. ರಾಜ್ಯ, ರಾಷ್ಟ್ರ, ಮಾತ್ರವಲ್ಲ, ವಿದೇಶಿ ಯುವಕರು ಇವರ ಜಮೀನಿಗೆ ಬಂದು ವಾಸ್ತವ್ಯಹೂಡಿ ಸಾವಯವ ಕೃಷಿ ಕಲಿತು ಹೋಗುತ್ತಿದ್ದರು. ಇದಕ್ಕೆಂದೇ, ಜಮೀನಿನಲ್ಲಿ ‘ಪರಾಶರ ಕೃಷಿಕೇಂದ್ರ’ವನ್ನು ಕಟ್ಟಿದ್ದಾರೆ.

ಮಾದರಿಯಾದ ಬದುಕು: ಅನೇಕ ರೈತರಿಗೆ ರೆಡ್ಡಿಯವರ ಕೃಷಿ ಬದುಕು ಮಾದರಿಯಾಗಿದೆ. 'ಸಾವಯವ ಕೃಷಿ‌ ಮಾಡುತ್ತಿದ್ದ ನಮಗೆ ಅದನ್ನು ಚಳವಳಿ ರೂಪಕ್ಕೆ ಕೊಂಡಯ್ಯಬೇಕೆನಿಸಿದ್ದೇ ರೆಡ್ಡಿಯವರು ಮಾತುಗಳಿಂದ. ಅವರು ನನ್ನಂಥ ಸಾವಿರಾರು ಕೃಷಿಕರಿಗೆ ಸ್ಪೂರ್ತಿಯಾಗಿದ್ದಾರೆ‌. ಸಿನಿಮಾಕ್ಕೆ ರಾಜ್‌ಕುಮಾರ್ ನಟಸಾರ್ವಭಾಮರಾದರೆ, ರೆಡ್ಡಿಯವರು ಸಾವಯವ ಕೃಷಿಯ ಸಾರ್ವಭೌಮ' ಎಂದು‌ ನೆನಪಿಸಿ ಕೊಳ್ಳುತ್ತಾರೆ ಹಸಿರು ತೋಟ ರೂವಾರಿ, ಸಾವಯವ ಕೃಷಿಕ ಜಯರಾಮ್‌.

‘ಕೃಷಿಕ ಬೇಡುವಂತಾಗಬಾರದು. ಸ್ವಾಭಿಮಾನಿಯಾಗಬೇಕು. ಸ್ವಾವಲಂಬಿ ಬದುಕು ನಡೆಸಬೇಕು‌. ಗಿಲೀಟಿನ ಬದುಕು ರೈತರದ್ದಾಗಬಾರದು’ ಎಂದು ಅವರ ಉದ್ದೇಶ. ಹೀಗೆ ಪ್ರತಿಪಾದನೆ ಮಾಡುತ್ತಲೇ, ನರಳದೇ‌, ಕೊರಗದೇ ಈ ಮಣ್ಣಿಗೆ ವಿದಾಯ ಹೇಳಿದ್ದಾರೆ. 'ಸಾವಯವ ಕೃಷಿಕರ‌ ಬದುಕು ಹೆಮ್ಮೆಪಡುವಂತಿರಬೇಕು' ಎಂಬುದನ್ನು ಸಾಬೀತು ಮಾಡಿ ಈ ನೆಲದ ಕರ್ತವ್ಯ ಮುಗಿಸಿ ಹೊರಟಿದ್ದಾರೆ’ ಎಂದು ಸಾವಯವ ಕೃಷಿಕ, ರೆಡ್ಡಿಯವರ ಒಡನಾಡಿ ಶಿವನಾಪುರ ರಮೇಶ್ ಸ್ಮರಿಸುತ್ತಾರೆ.

–––

ಹೆಚ್ಚಿನ ಓದು

ಸಾವಯವ ಕೃಷಿಕ, ಮಾರ್ಗದರ್ಶಕ ನಾರಾಯಣ ರೆಡ್ಡಿ ಇನ್ನಿಲ್ಲ

ಸಾವಯವ ಗುರುಕುಲ, ಹೀಗಿದೆ ನೋಡಿ ನಾರಾಯಣರೆಡ್ಡಿ ಕಾಯಕ ಭೂಮಿ

ಮನದಾಳದ ಮಾತು, ಸಹಜ ಜೀವನಕ್ಕಾಗಿ ಹಳ್ಳಿಗಳಿಗೆ ಹಿಂತಿರುಗಿ

ಒಡನಾಡಿಯ ಬರಹ, ಕೃಷಿಯನ್ನು ನಂಬಿ ಶ್ರೀಮಂತನಾಗಬಹುದು ಎಂದು ತೋರಿಸಿಕೊಟ್ಟರು

ಒಡನಾಡಿಯ ಬರಹ, ಸ್ಮರಣೆಯೊಂದೇ ಸಾಲದು– ಅವರ ನಡೆದ ದಾರಿಯಲ್ಲಿ ನಡೆಯಬೇಕು

ಒಡನಾಡಿಯ ಬರಹ: ಕೃಷಿಕ ಬೇಡುವವನಾಗಬಾರದು, ಸದಾ ಸ್ವಾವಲಂಬಿಯಾಗಿರಬೇಕು: ಇದು ರೆಡ್ಡಿ ಮನದ ಮಾತು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)