ಬುಧವಾರ, ಫೆಬ್ರವರಿ 24, 2021
24 °C

ಕಾವ್ಯಾನಂದ ಎನ್ನುವ ಕನ್ನಡದ ದೀಪ

ರಘುನಾಥ ಚ.ಹ. Updated:

ಅಕ್ಷರ ಗಾತ್ರ : | |

ಕನ್ನಡ ಕಾವ್ಯಲೋಕದಲ್ಲಿ ಸಿದ್ಧಲಿಂಗಯ್ಯ ಹೆಸರಿನ ಇಬ್ಬರು ಕವಿಗಳಿರುವುದರಿಂದ ಇವರ ನಡುವೆ ಸಿದ್ಧಯ್ಯ ಪುರಾಣಿಕರ ಹೆಸರೂ ಸೇರಿಕೊಂಡು ಗೊಂದಲ ಉಂಟಾಗುತ್ತದೆ. ಆ ಕಾರಣದಿಂದಾಗಿ ಸಿದ್ಧಯ್ಯ ಪುರಾಣಿಕ ಎನ್ನುವುದಕ್ಕಿಂತಲೂ ‘ಕಾವ್ಯಾನಂದ’ ಎನ್ನುವ ಹೆಸರೇ ಹೆಚ್ಚು ಜನಪ್ರಿಯ ಹಾಗೂ ಆಪ್ತ. ಹೆಸರಿನಲ್ಲಷ್ಟೇ ಗೊಂದಲ; ಕಾವ್ಯಾನಂದರ ರಚನೆಗಳು ರಸಬಾಳೆ ಹಣ್ಣಿನಂತಹವು. ಕಾವ್ಯದ ಜೊತೆಗೆ ಆನಂದದ ರಸಾನುಭೂತಿಯನ್ನೂ ಹೆಸರಿನಲ್ಲಿ ಮಾತ್ರವಲ್ಲದೆ ಕೃತಿಯಲ್ಲಿಯೂ ಕಾಣಿಸುವುದು ಪುರಾಣಿಕರ ಸಾಹಿತ್ಯದ ವಿಶೇಷ. ‘ನಿನ್ನಾತ್ಮವಾನಂದ; ನನ್ನಾತ್ಮ ಕಾವ್ಯ. ಇಂತು ಕಾವ್ಯಾನಂದ ನಾನು ಸುಶ್ರಾವ್ಯ’ ಎನ್ನುವುದು ‘ಕಾವ್ಯದೇವಿ’ಯೊಂದಿಗೆ ಅವರ ಬಿನ್ನಹ. ಕಾವ್ಯಾನಂದ ಎನ್ನುವುದು ಅವರ ಕಾವ್ಯನಾಮವಷ್ಟೇ ಅಲ್ಲ; ಸಹೃದಯರ ಮೆಚ್ಚುಗೆಯ ಉದ್ಗಾರವೂ ಹೌದು.

ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಸಿದ್ಧಯ್ಯ ಪುರಾಣಿಕರದು ವಿಶಿಷ್ಟ ಸಾಧನೆ. ಅವರ ಸಾಧನೆ ಮುಖ್ಯವಾಗಿ ಎರಡು ಬಗೆಯದು. ಮೊದಲನೆಯದು, ಆಡಳಿತಗಾರನಾಗಿ ಕನ್ನಡ ಕಟ್ಟುವ ಕೆಲಸಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದು. ಎರಡನೆಯದು, ವೈವಿಧ್ಯಮಯ ಸಾಹಿತ್ಯವನ್ನು ಸೃಷ್ಟಿಸಿದ್ದು.

ಬೌದ್ಧಿಕ ಕಣ್ಣಾಮುಚ್ಚಾಲೆ ಕಾವ್ಯಾನಂದರ ಕಾವ್ಯದಲ್ಲಿ ಕಡಿಮೆ. ಅವರದು ರಸಾನುಭವದ ಕಾವ್ಯ. ಸಂವಹನದ‌ ದೃಷ್ಟಿಯಿಂದ ಕಾವ್ಯಕ್ಕಿರುವ ಮಿತಿಯನ್ನೂ ಅವರು ಅರಿತಿದ್ದರು. ಆ ಕಾರಣದಿಂದಲೇ ತಮ್ಮ ಅನುಭವವನ್ನು ಜನಸಾಮಾನ್ಯರೊಂದಿಗೆ‌ ಹಂಚಿಕೊಳ್ಳಲು ವಚನ ಮಾಧ್ಯಮವನ್ನು ಬಳಸಿಕೊ‌ಂಡರು. ನವೋದಯ ಸಂದರ್ಭದ ಅನೇಕ ಲೇಖಕರಿಗೆ, ಮಕ್ಕಳಿಗಾಗಿ ಬರೆಯುವುದು ಅವರ ಕಾಳಜಿಗಳಲ್ಲೊಂದಾಗಿತ್ತಷ್ಟೇ; ಆ ಬದ್ಧತೆ ಪುರಾಣಿಕರದೂ ಆಗಿತ್ತು. ಮಕ್ಕಳ ಸಾಹಿತ್ಯ ರಚನೆಯನ್ನು ಗಂಭೀರವಾಗಿ ಪರಿಗಣಿಸಿದ ಅವರು, ಕನ್ನಡದ‌ ಚಿಣ್ಣರು ಹಾಡಿಕೊಳ್ಳಲು ಅನೇಕ‌ ಗೀತೆಗಳನ್ನು ರಚಿಸಿದರು.

ಕಾಲವೆ ನಿನ್ನ ಕೆಳೆ ಬೇಕು, ಆಳಿಕೆ ಬೇಡ ನನಗೆ! 

ನಿನ್ನ ಪ್ರವಾಹ ಕೊಂಡೊಯ್ದತ್ತ ತೇಲಲು 

ಸತ್ತಮೀನಲ್ಲ ನಾನು,

ನಿನಗೆ ಬೇಕಾದತ್ತ ನೀನೆಳೆ, ನನಗೆ ಬೇಕಾದತ್ತ ನಾನೀಸುವೆ!

‘ಸತ್ತಮೀನಲ್ಲ ನಾನು’ ಎಂದು ಕಾಲಪುರುಷನಿಗೆ ಸ್ಪಷ್ಟಪಡಿಸಿದ ಕವಿ ಪುರಾಣಿಕರು ತಮ್ಮ ಬದುಕಿನುದ್ದಕ್ಕೂ ಈಸಿದ್ದು ತಮ್ಮೊಲವಿನ ದಾರಿಗಳಲ್ಲೇ. ಯಾವ ದಾರಿಯಲ್ಲಿ ನಡೆದರೂ ತಮ್ಮತನವನ್ನು ಬಿಟ್ಟುಕೊಡದವರು ಅವರು. ಎಲ್ಲ ದಾರಿಗಳ ಅಂತಿಮ ಗುರಿ ಮಾನವೀಯತೆ ಎಂದು ನೆಚ್ಚಿದವರು ಅವರು.

ಕಾವ್ಯಾನಂದ ಎಂದಕೂಡಲೇ ಕನ್ನಡದ ಓದುಗರಿಗೆ ಥಟ್ಟೆಂದು ನೆನಪಾಗುವ ಕವಿತೆಗಳು ಎರಡು. ಒಂದು, ‘ಹೊತ್ತಿತೋ ಹೊತ್ತಿತು ಕನ್ನಡದ ದೀಪ’ ಎನ್ನುವ ಕನ್ನಡದ ಹಾಡು. ಇನ್ನೊಂದು ‘ಮೊದಲು ಮಾನವನಾಗು’ ಎನ್ನುವ ಮನುಷ್ಯತ್ವದ ಹಾಡು. ಇವರೆಡನ್ನೂ ಅವರ ಬದುಕು– ವ್ಯಕ್ತಿತ್ವದ ಎರಡು ಮುಖಗಳಾದ ಕನ್ನಡಪ್ರೇಮ ಹಾಗೂ ಮನುಷ್ಯಪ್ರೇಮದ ರೂಪಗಳಲ್ಲಿ ಕಾಣಬಹುದು.

ಕಣ್ಣು ಕುಕ್ಕಿಸುವಂತೆ ದೇದೀಪ್ಯಮಾನ

ಹರ್ಷ ಉಕ್ಕಿಸುವಂತೆ ಶೋಭಾಯಮಾನ

ಕನ್ನಡದ ಮನೆಯಾಗೇ ಜ್ಯೋತಿರ್ನಿಧಾನ

ಕನ್ನಡದ ಪ್ರಾಣ... ಕನ್ನಡದ ಮಾನ...

ಹೊತ್ತಿತೋ ಹೊತ್ತಿತು ಕನ್ನಡದ ದೀಪ

ಪುರಾಣಿಕರ ಕನ್ನಡಪ್ರೇಮ ಭಾವುಕತೆಯ ನೆಲೆಗಟ್ಟಿನಷ್ಟೇ ಕೊನೆಗೊಳ್ಳುವುದಿಲ್ಲ. ‘ಉರಿವವರು ಬೇಕಿನ್ನು ಇದರೆಣ್ಣೆಯಾಗಿ / ಸುಡುವವರು ಬೇಕಿನ್ನು ನಿಡುಬತ್ತಿಯಾಗಿ... / ಧರಿಸುವವರು ಬೇಕಿನ್ನು ಸಿರಿಹಣತೆಯಾಗಿ’ ಎನ್ನುವ ವಾಸ್ತವವೂ ಅವರ ಕವಿತೆಯಲ್ಲಿದೆ. ಹಾಡಿದ್ದಷ್ಟೇ ಅಲ್ಲ – ಕನ್ನಡದ ಕಾಯಕದಲ್ಲಿ ಸ್ವತಃ ಬತ್ತಿಯಾದರು, ಎಣ್ಣೆಯಾದರು.

ನುಡಿದೀಪದ ಹಾಡಿನ ಹಿನ್ನೆಲೆಯಲ್ಲಿ ಕವಿಯ ಬದುಕನ್ನೂ ನೋಡಬೇಕು. ಬರಹಗಾರನಾಗಿ ಹಾಗೂ ನುಡಿಪ್ರೇಮಿಯಾಗಿ ಅವರದು ‘ಮಾಸ್ತಿಮಾರ್ಗ’. ಮಾಸ್ತಿಯವರಿಗೆ ಪುರಾಣಿಕರ ಬಗ್ಗೆ ಅವ್ಯಾಜಪ್ರೇಮ. ಕನ್ನಡದ ಕಟ್ಟಾಳುವಿನಂತೆ ಕಾಣಿಸುತ್ತಿದ್ದ ಹುಡುಗ ತಹಶೀಲ್ದಾರ್‌ ಹುದ್ದೆಗೆ ಆಯ್ಕೆಯಾದಾಗ, ‘ಇದು ಕನ್ನಡಕ್ಕಾದ ನಷ್ಟ’ ಎಂದು ಮಾಸ್ತಿಯವರು ಪ‍್ರತಿಕ್ರಿಯಿಸಿದ್ದರಂತೆ. ಅದಕ್ಕೆ ಪುರಾಣಿಕರು ನೀಡಿದ ಪ್ರತಿಕ್ರಿಯೆ: ‘ನಾನು ನನ್ನ ಕೈಲಾದಷ್ಟು ಕನ್ನಡ ಸೇವೆ ಮಾಡಲಿಕ್ಕೆ ಸದಾ ಬದ್ಧ’. ಅದಕ್ಕೆ ತಕ್ಕನಾಗಿ ಅಧಿಕಾರಿಯಾಗಿದ್ದರೂ ಕನ್ನಡ ಚಳವಳಿಗಳಲ್ಲಿ ಗುರ್ತಿಸಿಕೊಂಡರು. ಗೋಕಾಕ್‌ ಚಳವಳಿ ಜೊತೆ ಗುರ್ತಿಸಿಕೊಂಡಿದ್ದರು. ಸರೋಜಿನಿ ಮಹಿಷಿ ಸಮಿತಿ, ಕನ್ನಡ ಗಡಿ ಸಮಿತಿಗಳಲ್ಲಿ ಕಾರ್ಯ ನಿರ್ವಹಿಸಿದರು. ಅವಕಾಶ ಸಿಕ್ಕಾಗಲೆಲ್ಲ ‘ಕನ್ನಡದ ಪ್ರಾಣ–ಮಾನ’ಕ್ಕಾಗಿ ಸ್ಪಂದಿಸಿದರು.

ಏನಾದರೂ ಆಗು

ನಿನ್ನೊಲವಿನಂತಾಗು

ಏನಾದರೂ ಸರಿಯೆ,

ಮೊದಲು ಮಾನವನಾಗು

ಪುರಾಣಿಕರ ಮನುಷ್ಯತ್ವದ ಗೀತೆ ಕನ್ನಡಿಗರ ನಡುವೆ ಜನಪದ ಗೀತೆಯಂತೆ ಜೀವಂತವಾಗಿರುವ ಕವಿತೆ. ರಾಷ್ಟ್ರಪ್ರೇಮಿಯಾಗು, ಜನಪರವಾಗು, ಸಿರಿವಂತನಾಗು, ಎಡಪಂಥೀಯನಾಗು, ಬಲಪಂಥೀಯನಾಗು... ಹೀಗೆ ವಿವಿಧ ಗುಂಪುಗಳು ‘ತನ್ನಂತಾಗು ಆಗು’ ಎಂದು ಉಳಿದವರ ಬೆನ್ನುಬಿದ್ದಿರುವ ಸಂದರ್ಭದಲ್ಲಿ – ‘ಏನಾದರೂ ಆಗು ಮೊದಲು ಮಾನವನಾಗು’ ಎನ್ನುವ ಪುರಾಣಿಕರ ಮಾತು ಭಿನ್ನವಾಗಿ ಕಾಣಿಸುತ್ತದೆ. ‘ಮನುಷ್ಯನಾಗು’ ಎನ್ನುವ ಮಾತೇ ನಾವು ಏನೆಲ್ಲ ಆಗಿದ್ದೇವೆ ಎನ್ನುವುದನ್ನೂ ನಿಜವಾಗಿ ಆಗಬೇಕಾದುದೇನು ಎನ್ನುವುದನ್ನೂ ಸೂಚಿಸುವಂತಿದೆ.


ಶಂಕರ ಮೊಕಾಶಿ ಪುಣೇಕರ್, ಕುವೆಂಪು, ಹಾ.ಮಾ. ನಾಯಕರೊಂದಿಗೆ ಸಿದ್ಧಯ್ಯ ಪುರಾಣಿಕರು  ಚಿತ್ರಗಳು: ಪ್ರಜಾವಾಣಿ ಆರ್ಕೈವ್

ಪುರಾಣಿಕರ ಸಾಹಿತ್ಯ ಮತ್ತೊಂದು ಕವಲು ವಚನಗಳದು. ‘ಸ್ವತಂತ್ರ ಧೀರ ಸಿದ್ಧೇಶ್ವರಾ’ ಅಂಕಿತದಲ್ಲಿ ನೂರಾರು ವಚನಗಳನ್ನು ರಚಿಸಿದರು. ಆತ್ಮನಿರೀಕ್ಷಣೆ, ಸಮಾಜದ ವಿಮರ್ಶೆ, ಅನುಭವದ ಕೊಡುಕೊಳುವಿಕೆ ರೂಪದಲ್ಲಿ ಅವರ ವಚನಗಳನ್ನು ನೋಡಬಹುದು. ‘ಸಾಯುವವರೆಗೂ ಶಾಸ್ತ್ರ ಹೇಳಿದರೇನು / ಸುಳ್ಳು ಹೇಳುವುದ ಬಿಡಲಿಲ್ಲ ಶಾಸ್ತ್ರಿಗಳ ಬಾಯಿ / ಸಾಯುವವರೆಗೆ ಪೂಜೆ ಮಾಡಿದರೇನು/ ಭಕ್ತರ ಬೋಳಿಸುವುದ ಬಿಡಲಿಲ್ಲ ಪೂಜಾರಿಯ ಕೈ’ ಎಂದು ಸಾಮಾಜಿಕ ವಿಮರ್ಶೆಗೆ ತೊಡಗುವ ಅವರು, ‘ಹಲವು ಅರಸೊತ್ತಿಗೆಗಳು ಬಂದು ಹೋದರೇನು / ಹಳ್ಳಿಗರ ಕೂಗ ಕೇಳಿರಲಿಲ್ಲ ಡಿಳ್ಳಿಯ ಕಿವಿ’ ಎಂದು ಹೇಳಲೂ ಹಿಂಜರಿಯಲಿಲ್ಲ. ಅಧಿಕಾರಿಯಾಗಿದ್ದುಕೊಂಡೂ ಪ್ರಭುತ್ವದ ಕುರಿತು ಎಚ್ಚರ– ವಿವೇಕವನ್ನು ಮಬ್ಬಾಗಿಸಿಕೊಳ್ಳದ ಮನೋಭಾವ ಅವರದು.

‘ನಾನು ಹುಟ್ಟಿದ ಮೇಲೆ ತಾನೆ / ಅರ್ಥಕ್ಕೆ ಶಬ್ದ, ನಾದಕ್ಕೆ ವಾದ್ಯ / ಚಿತ್ರಕ್ಕೆ ಕುಂಚ, ಶಿಲ್ಪಕ್ಕೆ ಉಳಿ / ನಿನಗೆ ಭಕ್ತ ದೊರೆತುದು?’ ರಚನೆ ಕವಿಯ ಆತ್ಮವಿಶ್ವಾಸದ ಪ್ರತೀಕದಂತಿದೆ, ‘ಫಲವಿತ್ತ ರೆಂಬೆ ಬಾಗುತ್ತದೆ / ಗೊನೆ ಹೊತ್ತ ಬಾಳೆ ಬಾಗುತ್ತದೆ / ತೆನೆ ಹೊತ್ತ ದಂಟು ಬಾಗುತ್ತದೆ / ಏನೇನೂ ಇಲ್ಲದುದು ಬೀಗುತ್ತದೆ ನೋಡಾ’ ಎನ್ನುವ ರಚನೆ ಟೊಳ್ಳು– ಗಟ್ಟಿಯ ಕುರಿತು ಮಾತನಾಡುತ್ತದೆ.

ಜನಸಾಮಾನ್ಯರ ಬಗ್ಗೆ ಯೋಚಿಸುವ ಕವಿಯ ಕಣ್ಣಿಗೆ ಮಕ್ಕಳು ಕಾಣಿಸದಿರಲು ಸಾಧ್ಯವೆ? ‘ಅಜ್ಜನ ಕೋಲಿದು ನನ್ನಯ ಕುದುರೆ / ಹೆಜ್ಜೆಗೆ ಹೆಜ್ಜೆಗೆ ಕುಣಿಯುವ ಕುದುರೆ / ಕಾಲಿಲ್ಲದೆಯೇ ನಡೆಯುವ ಕುದುರೆ / ಕೂಳಿಲ್ಲದೆಯೇ ಬದುಕುವ ಕುದುರೆ’ ಎನ್ನುವ ಅವರ ‘ನನ್ನ ಕುದುರೆ’ ಪದ್ಯ ಕನ್ನಡ ಮಕ್ಕಳ ನೆಚ್ಚಿನ ಗೀತೆಗಳಲ್ಲೊಂದಾಗಿ ಹೊಸ ತಲೆಮಾರಿಗೂ ತಲುಪಿದೆ.

ಕವಿಯಾಗಿ ಕಾವ್ಯಾನಂದರು ತಮ್ಮನ್ನು ತಾವು ನೋಡಿಕೊಳ್ಳುವುದು ಹೀಗೆ: ‘ಶಬ್ದದಲಿ ಸವಿಯಾಗಿ ಅರ್ಥದಲಿ ಬೆಳಕಾಗಿ / ಬಾಳ ಭವ್ಯತೆಗಿಲ್ಲಿ ಬೆಳಕು ಸವಿ ಸಾಕಾಗಿ / ಬಾಳುವೆಯ ಸವಿ ಬೆಳಕ ಬರೆಯುವವ ಬೇಕಾಗಿ / ಸಾರುತಿದೆ ಸೃಷ್ಟಿ ಸವಿಛವಿಯಾಗಿ ನಿಂದು / ಕವಿಯಾಗು ಕವಿಯಾಗು ಕವಿಯಾಗು ಎಂದು’. ಈ ಸಾಲುಗಳು ವೈಯಕ್ತಿಕ ಚೌಕಟ್ಟು ದಾಟಿ, ಸಾಹಿತ್ಯದ ಮೂಲಕ ಬದುಕಿನ ಅರ್ಥಪೂರ್ಣತೆಯ ಕುರಿತ ವಿವರಣೆಯಂತೆಯೂ ಇದೆ. ‘ಬಾಳುವೆಯ ಸವಿ ಬೆಳಕ ಬರೆಯುವವ ಬೇಕಾಗಿ’ ಎನ್ನುವ ಪುರಾಣಿಕರ ಉದ್ಗಾರ ಎಲ್ಲ ಕಾಲಗಳಲ್ಲೂ ಮನುಕುಲದ ಪ್ರಾರ್ಥನೆಯಂತೆ ಕಾಣಿಸುತ್ತಿದೆ

**

ಸಿದ್ಧಯ್ಯ ಪುರಾಣಿಕ

ಸಿದ್ಧಯ್ಯ ಪುರಾಣಿಕರದು (ಜೂನ್ 18, 1918– ಸೆ. 5, 1994) ರಾಯಚೂರು ಜಿಲ್ಲೆಯ (ಈಗಿನ ಕೊಪ್ಪಳ ಜಿಲ್ಲೆ) ಯಲಬುರ್ಗಿ ತಾಲ್ಲೂಕಿನ ದ್ಯಾಂಪುರ. ತಂದೆ ಕಲ್ಲಿನಾಥ ಶಾಸ್ತ್ರಿ, ತಾಯಿ ಚೆನ್ನಮ್ಮ. ಕಾವ್ಯಪ್ರೇಮಿಗಳ ಮನೆತನ. ಕಲ್ಲಿನಾಥ ಶಾಸ್ತ್ರಿ ಅವರಿಗೆ ಪುರಾಣ ಪ್ರವಚನಗಳಲ್ಲಿ ವಿಶೇಷ ಆಸಕ್ತಿ. ಪ್ರವಚನ ನೀಡುವುದು ಅವರ ವೃತ್ತಿಯೂ ಆಗಿತ್ತು. ಆ ಕಾರಣದಿಂದಲೇ ಕಾವ್ಯ– ವ್ಯಾಕರಣಗಳ ದೊಡ್ಡದೊಂದು ಸಂಗ್ರಹ ಅವರ ಬಳಿಯಿತ್ತು. ಅಪ್ಪನ ಈ ಕಾವ್ಯಪ್ರೇಮ ಮಗನಿಗೂ ಸಹಜವಾಗಿಯೇ ಒಲಿಯಿತು. ಪುರಾಣಿಕರ ತಾತ ಚೆನ್ನಕವಿಗಳಂತೂ ಷಟ್ಪದಿ ರಚನೆಯಲ್ಲಿ ನಿಸ್ಸೀಮರೆನ್ನಿಸಿಕೊಂಡಿದ್ದ ಕವಿ. ಕುಟುಂಬದಲ್ಲಿನ ಈ ಸಾಹಿತ್ಯದ ಹಿನ್ನೆಲೆ ‘ಕಾವ್ಯಾನಂದ’ರ ವಿಕಸನಕ್ಕೆ ಕಾರಣವಾಯಿತು. ಹುಟ್ಟಿ ಬೆಳೆದ ಪರಿಸರದಲ್ಲಿದ್ದ ಉರ್ದುವಿನ ಪ್ರಾಬಲ್ಯದಿಂದಾಗಿ ಅವರು ಉರ್ದುವನ್ನೂ ಕಲಿತರು. ಕನ್ನಡಪ್ರೇಮವನ್ನೂ ಮೈಗೂಡಿಸಿಕೊಂಡರು.

1943ರಲ್ಲಿ ತಹಶೀಲ್ದಾರ್‌ ಆಗಿ ಉದ್ಯೋಗ ಪ್ರಾರಂಭಿಸಿದ ಅವರು ಕಾರ್ಮಿಕ ಇಲಾಖೆಯ ಆಯುಕ್ತರಾಗಿ 1972ರಲ್ಲಿ ನಿವೃತ್ತರಾದರು. ಮೂರು ದಶಕಗಳ ಸರ್ಕಾರಿ ಸೇವೆಯಲ್ಲಿ ಹಲವು ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿ, ಕೊಡಗು ಹಾಗೂ ಬೆಳಗಾವಿ ಜಿಲ್ಲೆಯ ಜಿಲ್ಲಾಧಿಕಾರಿಯಾಗಿಯೂ ಕೆಲಸ ಮಾಡಿದ್ದರು.


ಕೊಡಗು ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಕೊಡವರ ಪೋಷಾಕಿನಲ್ಲಿ ಸಿದ್ಧಯ್ಯ ಪುರಾಣಿಕ, ಗಿರಿಜಾದೇವಿ ದಂಪತಿ

‘ಜಯ ಕರ್ನಾಟಕ’ ಪತ್ರಿಕೆಯಲ್ಲಿ ಮೊದಲ ಕವಿತೆ ಪ್ರಕಟವಾದಾಗ ಪುರಾಣಿಕರು ಊರಲ್ಲೆಲ್ಲ ಪತ್ರಿಕೆ ತೋರಿಸಿ ಸಂಭ್ರಮಿಸಿದ್ದರಂತೆ. ಅವರ ಚೊಚ್ಚಿಲ ಕವನಸಂಕಲನ ‘ಜಲಪಾತ’ಕ್ಕೆ ಮುನ್ನುಡಿ ಬರೆದಿದ್ದ ದ.ರಾ. ಬೇಂದ್ರೆಯವರು, ತಮ್ಮ ಬರಹದಲ್ಲಿ ಸಮರ್ಥ ಕವಿಯೊಬ್ಬನನ್ನು ಗುರ್ತಿಸಿದ್ದರು. ಕನ್ನಡದ ಜೊತೆಗೆ ಇಂಗ್ಲಿಷ್‌, ಹಿಂದಿ, ಉರ್ದು, ಸಂಸ್ಕೃತ ಭಾಷೆಗಳಲ್ಲೂ ಅವರಿಗೆ ಜ್ಞಾನವಿತ್ತು. 

ಪುರಾಣಿಕರ ಕೆಲವು ಪ್ರಮುಖ ಕೃತಿಗಳು: ‘ಕರುಣಾ ಶ್ರಾವಣ’, ‘ಮಾನಸ ಸರೋವರ, ‘ಮೊದಲು ಮಾನವನಾಗು’, ‘ಚರಗ’ (ಕವನ ಸಂಕಲನಗಳು); ‘ಗಿಲ್‌ ಗಿಲ್‌ ಗಿಲಗಚ್ಚಿ’, ‘ಬಣ್ಣ ಬಣ್ಣದ ಓಕುಳಿ’, ‘ತಿರುಗೆಲೆ ತಿರುಗೆಲೆ ತಿರುಗುಯ್ಯಾಲೆ’, ‘ಗೇಗೇಗೇ’ (ಮಕ್ಕಳ ಸಾಹಿತ್ಯ); ‘ತುಷಾರ’ (ಕಥಾ ಸಂಕಲನ), ‘ತ್ರಿಭುವನ ಮಲ್ಲ’ (ಕಾದಂಬರಿ), ‘ನನ್ನ ನಿನ್ನೆಗಳೊಡನೆ ಕಣ್ಣಾಮುಚ್ಚಾಲೆ’ (ಆತ್ಮಕಥನ), ‘ವಚನೋದ್ಯಾನ’, ‘ವಚನ ನಂದನ’, ‘ವಚನಾರಾಮ’ (ವಚನಗಳು).

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮಾಳವಾಡ ಪ್ರಶಸ್ತಿ, ಭಾರತೀಯ ಭಾಷಾ ಪರಿಷತ್ತಿನ ಬಿಲ್ವಾ ಪ್ರಶಸ್ತಿ, ಕಲಬುರ್ಗಿಯಲ್ಲಿ ನಡೆದ 58ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ – ಇವು ಪುರಾಣಿಕರಿಗೆ ಸಂದ ಕೆಲವು ಗೌರವಗಳು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.