ಶೀಲ–ಅಶ್ಲೀಲಗಳ ನಡುವೆ...

7
Porn video watching-traumatic

ಶೀಲ–ಅಶ್ಲೀಲಗಳ ನಡುವೆ...

Published:
Updated:
Deccan Herald

ಜಗತ್ತನ್ನೇ ಅಂಗೈಯಲ್ಲಿ ಇರಿಸಿರುವ ಮೊಬೈಲ್‌ ಮಾಯಾಂಗನೆ ಈಗ ಬೇಕಾದ್ದನ್ನು ಕ್ಷಣದಲ್ಲೇ ಸ್ಕ್ರೀನ್ ಮೇಲೆ ಮೂಡಿಸುವ ಪಾತರಗಿತ್ತಿಯಂತೆ!. ಹೇಳಿಕೊಳ್ಳಲಾಗದ, ಎಲ್ಲೆಂದರಲ್ಲಿ ನೋಡಲಾಗದ ಅನೇಕ ಸಂಗತಿಗಳಿಗೆ ಈಗ ಮೊಬೈಲೇ ಮಾರ್ಗದರ್ಶಿ.

ಹಿಂದೆ ಕೆಲ ಸಿನಿಮಾ ಮಂದಿರಗಳಲ್ಲಿ ಮಾತ್ರ ಪ್ರದರ್ಶಿತವಾಗುತ್ತಿದ್ದ ನೀಲಿ ಸಿನಿಮಾ, ಅಶ್ಲೀಲ (ಪೋರ್ನ್‌) ವಿಡಿಯೊಗಳಿಗೀಗ ಯಾವುದೇ ಸೆನ್ಸಾರ್‌ ಇಲ್ಲ! ಬೇಕೆಂದಾಗ ಎಲ್ಲೆಂದರಲ್ಲಿ ವೀಕ್ಷಿಸುವ ಭಾಗ್ಯ ನೋಡುಗರದ್ದು. ಇಂಥ ವಿಡಿಯೊಗಳನ್ನು ನೋಡುವುದು ಬಿಡುವುದು ಅವರವರ ವೈಯಕ್ತಿಕ ಇಷ್ಟಾನಿಷ್ಟ. ಆದರೆ, ಇಂಥ ವಿಡಿಯೊಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ನೋಡುವವರ ಮಾನಸಿಕ ಆರೋಗ್ಯದ ಬಗ್ಗೆ ಅನುಮಾನ ಪಡಬೇಕಾಗುತ್ತದೆ ಎಂದು ಎಚ್ಚರಿಸುತ್ತಾರೆ ಮನೋವೈದ್ಯರು.

ಈಚೆಗೆ ಯಲಹಂಕ ನ್ಯೂಟೌನ್‌ನಿಂದ ಜೆ.ಪಿ.ನಗರಕ್ಕೆ ತೆರಳಲು ಯುವತಿಯೊಬ್ಬರು ಕ್ಯಾಬ್ ಬುಕ್ ಮಾಡಿದ್ದರು. ಯುವತಿ ಕ್ಯಾಬ್‌ನಲ್ಲಿದ್ದಾರೆ ಎನ್ನುವ ಅರಿವಿದ್ದರೂ ಕ್ಯಾಬ್ ಡ್ರೈವರ್ ಮಾತ್ರ ಎಗ್ಗಿಲ್ಲದೇ ಅಶ್ಲೀಲ ವಿಡಿಯೊ ವೀಕ್ಷಣೆಯಲ್ಲಿ ನಿರತನಾಗಿದ್ದ. ಅಷ್ಟೇ ಅಲ್ಲ ಆ ವಿಡಿಯೊ ಯುವತಿಗೆ ಕಾಣುವಂತೆ ಹಿಡಿದುಕೊಂಡು ತನ್ನನ್ನು ಮುಟ್ಟಿಕೊಂಡು ಅಸಭ್ಯವಾಗಿ ವರ್ತಿಸಿದ್ದ ಕೂಡಾ.

ಸಾರ್ವಜನಿಕ ಸ್ಥಳಗಳಲ್ಲಿ ಇಂಥ ಘಟನೆಗಳು ನಡೆದಾಗ ಯಾರೇ ಆಗಲಿ ಮಾನಸಿಕವಾಗಿ ಆಘಾತಕ್ಕೊಳಗಾಗುತ್ತಾರೆ. ಆ ಚಾಲಕ ಆಕೆಯ ಮೇಲೆ ದೈಹಿಕವಾಗಿ ಲೈಂಗಿಕ ದೌರ್ಜನ್ಯ ನಡೆಸದಿರಬಹುದು. ಆದರೆ, ಮಹಿಳೆಯ ಗೌರವ ಮತ್ತು ಘನತೆಗೆ ಕುಂದು ತಂದಿದ್ದು ನಿಜ ಅನ್ನುತ್ತಾರೆ ಕಾನೂನು ತಜ್ಞರು.

ಬಹುತೇಕ ಪುರುಷರು ಪೋರ್ನ್ ವಿಡಿಯೊ ನೋಡುವುದು ಒಂದು ಸಹಜ ಪ್ರಕ್ರಿಯೆ ಎಂದೇ ಅರಿತಿದ್ದಾರೆ. ಆದರೆ, ಈ ರೀತಿ ನೋಡುವುದೇ ಅವರಿಗೆ ಮುಂದೆ ಚಟವಾಗಿ ಪರಿಣಮಿಸುತ್ತದೆ. ಅದರಲ್ಲೂ 25ರಿಂದ 35ವರ್ಷಗೊಳಗಿನ ಯುವಕರೇ ಇಂಥ ವಿಡಿಯೊ ನೋಡುವುದರಲ್ಲಿ ಮುಂಚೂಣಿಯಲ್ಲಿರುವುದು ಆತಂಕಕಾರಿ. ಲೈಂಗಿಕತೆಯ ಬಗ್ಗೆ ಇರುವ ಕುತೂಹಲ, ಆತ್ಮವಿಶ್ವಾಸದ ಕೊರತೆ ಇರುವವರೇ ಇಂಥ ವಿಡಿಯೊ ನೋಡುವವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವವರು ಎನ್ನುತ್ತವೆ ಅಂಕಿ–ಅಂಶಗಳು.

ಹದಿಹರೆಯದ ಹೊಸ್ತಿಲಲ್ಲಿರುವವರಿಗೆ ಸಹಜವಾಗಿಯೇ ಲೈಂಗಿಕತೆ ಬಗ್ಗೆ ಸಹಜ ಕುತೂಹಲವಿರುತ್ತದೆ. ಗೆಳೆಯರ ಜತೆಗೂಡಿ ಇಲ್ಲವೇ ಸಾಮಾಜಿಕ ಮಾಧ್ಯಮಗಳ ಪ್ರಭಾವಕ್ಕೊಳಗಾಗಿ ಇಂಥ ವಿಡಿಯೊ ವೀಕ್ಷಿಸುವುದನ್ನೇ ಚಟವಾಗಿಸಿಕೊಂಡವರು, ಮಹಿಳೆಯರು ಮತ್ತು ಮಕ್ಕಳ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಎಸಗಿದ ಉದಾರಣೆಗಳೂ ಕಣ್ಮುಂದೆಯೇ ಇವೆ.

ಮನಸಿನ ಒತ್ತಡ ನಿವಾರಣೆಗಾಗಿಯೋ, ಕುತೂಹಲಕ್ಕಾಗಿಯೋ ನೋಡುವವರು ಅದಕ್ಕೆ ದಾಸರಾಗಿ ಸಮಯ, ಸಂದರ್ಭ, ಸುತ್ತಮುತ್ತಲಿನ ಪರಿಸರದ ಪ್ರಜ್ಞೆಯಿಲ್ಲದೇ ಕೆಲವು ಬಾರಿ ಸಾರ್ವಜನಿಕವಾಗಿಯೇ ಇಂಥ ವಿಡಿಯೊ ನೋಡುವ ಸಾಹಸ ಮಾಡುತ್ತಾರೆ. ಅದು ಅವರೊಳಗಿನ ಸ್ವಯಂ ನಿಯಂತ್ರಣ ಪ್ರಜ್ಞೆಯನ್ನೇ ದಿಕ್ಕುಗೆಡಿಸಿ, ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುತ್ತದೆ ಎನ್ನುತ್ತಾರೆ ಬಿಎಂಎಸ್ ಮಹಿಳಾ ಕಾಲೇಜಿನ ಮನಃಶಾಸ್ತ್ರ ಉಪನ್ಯಾಸಕಿ ಡಾ.ಶ್ವೇತಾ ಬಿ.ಸಿ.

ಸಾರ್ವಜನಿಕ ಸ್ಥಳಗಳಲ್ಲಿ ಅಶ್ಲೀಲವಾಗಿ ವರ್ತಿಸುವುದು, ಆಶ್ಲೀಲ ವಿಡಿಯೊ ನೋಡುವುದು ಆ ವ್ಯಕ್ತಿಯ ಮಾನಸಿಕ ಸಮಸ್ಯೆ ತೋರಿಸುತ್ತದೆ ಎನ್ನುತ್ತಾರೆ ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ನ್ಯುರೊಸೈಕಿಯಾಟ್ರಿಸ್ಟ್ ಡಾ.ರವಿಪ್ರಕಾಶ್.

ವಯಸ್ಕರು, ಪ್ರಬುದ್ಧರು ಏಕಾಂತದಲ್ಲಿ ಇಂಥ ವಿಡಿಯೊ ನೋಡಿದರೂ ಬೇಗನೇ ಮಾನಸಿಕ ಸ್ಥಿಮಿತ ತಂದುಕೊಳ್ಳುತ್ತಾರೆ. ಆದರೆ, ಲೈಂಗಿಕತೆ ಎಂದರೇನು ಎನ್ನುವುದನ್ನು ಅರಿಯದ ಮಕ್ಕಳು, ಅಪ್ರಾಪ್ತ ವಯಸ್ಕರು ಇಂಥ ವಿಡಿಯೊಗಳಿಂದ ಮಾನಸಿಕ ಆಘಾತಕ್ಕೊಳಗಾಗುತ್ತಾರೆ. ಇದು ಅವರ ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಯಾರೇ ಆಗಲಿ ಬಲವಂತವಾಗಿ ಇಂಥ ವಿಡಿಯೊ ತೋರಿಸಿದರೆ ಮಕ್ಕಳು ತಕ್ಷಣವೇ ಪೋಷಕರು, ಪೊಲೀಸರು ಇಲ್ಲವೇ ಆಪ್ತರ ಬಳಿ ಈ ಬಗ್ಗೆ ಹೇಳಿಕೊಳ್ಳಬೇಕು ಅನ್ನುವುದು ಅವರ ಸಲಹೆ.

**

ಶಿಕ್ಷಾರ್ಹ ಅಪರಾಧ

ಪೋರ್ನೊಗ್ರಫಿ ನೋಡುವುದು ನಮ್ಮ ದೇಶದ ಕಾನೂನು ಪ್ರಕಾರ ಅಪರಾಧವಲ್ಲ. ಆದರೆ, ಅಶ್ಲೀಲ ಚಿತ್ರ ಪ್ರದರ್ಶನ, ಪುಸ್ತಕ ಪ್ರದರ್ಶನ ಮಾರಾಟ ಮಾಡುವುದು ಅಪರಾಧ. ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಪ್ರಸಾರ ಮಾಡಿದರೆ ಐಟಿ ಆ್ಯಕ್ಟ್‌ 67 ಮತ್ತು 67 (ಎ) ಪ್ರಕಾರ 3ರಿಂದ 5 ವರ್ಷ ಜೈಲುಶಿಕ್ಷೆ ಮತ್ತು ₹ 3 ಲಕ್ಷ ದಂಡ ವಿಧಿಸಬಹುದು. ಅಶ್ಲೀಲ ಚಿತ್ರ, ಅಶ್ಲೀಲ ಬರಹವನ್ನು ಮತ್ತೊಬ್ಬರಿಗೆ ತೋರಿಸುವುದು, ಮಾರಾಟ ಮಾಡುವುದು ಐಪಿಸಿ 292ರ ಪ್ರಕಾರ ಶಿಕ್ಷಾರ್ಹ ಅಪರಾಧ. ಮಕ್ಕಳಿಗೆ ಪೋರ್ನ್ ವಿಡಿಯೊ ತೋರಿಸಿದರೆ 5 ವರ್ಷ ಜೈಲುಶಿಕ್ಷೆ ವಿಧಿಸಬಹುದು.

–ಸಾಧನಾ ಅಬ್ರಾಹಂ, ವಕೀಲರು, ಹೈಕೋರ್ಟ್

ಬರಹ ಇಷ್ಟವಾಯಿತೆ?

 • 16

  Happy
 • 2

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !