ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂರೀಮನೆ ಕಾಲುಸಂಕದ ಕತೆ

Last Updated 6 ಆಗಸ್ಟ್ 2019, 8:46 IST
ಅಕ್ಷರ ಗಾತ್ರ

‘ಒಂದು ಕಾಲುಸಂಕ ಮಾಡ್ಕೊಳ್ಳೋಕೆ ಸರ್ಕಾರ ಕೊಡೋದು ₹ 400. ಅದು ಕತ್ತದ ಬಳ್ಳಿಗೂ ಸಾಲಲ್ಲ. ಕಾಯಂ ಕಾಲುಸಂಕಮಾಡ್ಕೊಡಿ ಅಂತ ಕೇಳಿ ಕೇಳಿ ಸಾಕಾಯ್ತು. ಪ್ರಯೋಜನವಾಗಲಿಲ್ಲ. ಇವರ ಸಹವಾಸವೇ ಬೇಡ ಅಂತ, ನಾವೇ ಊರಿನವರು ಸೇರ್ಕೊಂಡು ಕಾಲುಸಂಕ ಮಾಡ್ಕೊಂಡಿದ್ದೇವೆ...’ –

ಮಳೆಗಾಲಕ್ಕೆ ಮುನ್ನ ತಾವೇ ಕಟ್ಟಿದ ಉದ್ದನೆಯ ಕಾಲುಸಂಕದ ಮೇಲೆ ಜಾಗ್ರತೆಯಿಂದ ಹೆಜ್ಜೆ ಹಾಕುತ್ತಾ, ಹಾಕುತ್ತಾ, ಗ್ರಾಮಸ್ಥರೇ ಸೇರಿ ಕಟ್ಟಿಕೊಳ್ಳುವ ಕಾಲುಸಂಕದ ಕಥೆಯನ್ನು ಸೂರೀಮನೆ ಗ್ರಾಮದ ನಿವಾಸಿ ಜೋಸೆಫ್‌ ಬೇಸರದಿಂದಲೇ ಹೇಳುತ್ತಾ ಹೊರಟರು. ‘ಇಲ್ಲೊಂದು ಸೇತುವೆ ಕಟ್ಟಿಸಿಕೊಡಿ ಎಂದು ಸರ್ಕಾರಕ್ಕೆ ಸಾಕಷ್ಟು ಬಾರಿ ಮನವಿ ಕೊಟ್ಟಿದ್ದೇವೆ. ಏನೂ ಪ್ರಯೋಜನವಾಗಿಲ್ಲ’ ಎಂದು ಗೊಣಗುತ್ತಲೇ ಹೆಜ್ಜೆ ಹಾಕಿದರು.

ಶಾಲ್ಮಲಾ ನದಿಯ ಕಾಲುವೆ
ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲ್ಲೂಕಿನ ಉಮ್ಮಚಗಿ – ಕುಂದರ್ಗಿ ಗ್ರಾಮಪಂಚಾಯ್ತಿಗೆ ಸೇರಿದ ಪುಟ್ಟ ಗ್ರಾಮ ಸೂರೀಮನೆ. ಇಲ್ಲಿ ಚದುರಿದಂತೆ ಸುಮಾರು 30ಕ್ಕೂ ಹೆಚ್ಚು ಮನೆಗಳಿವೆ. 150ಕ್ಕೂ ಹೆಚ್ಚು ಜನ ಅಲ್ಲಿ ನೆಲೆಸಿದ್ದಾರೆ. ತಾಲ್ಲೂಕು ಕೇಂದ್ರದಿಂದ 30 ಕಿ.ಮೀ. ದೂರವಿದೆ. ಯಲ್ಲಾಪುರ – ಶಿರಸಿ ರಾಜ್ಯ ಹೆದ್ದಾರಿಯಲ್ಲಿ ಸಿಗುವ ತುಡುಗಣಿ ಎಂಬ ಪುಟ್ಟ ಊರಿನಿಂದ 3 ಕಿ.ಮೀ. ಒಳದಾರಿಯಲ್ಲಿದೆ.

ಈ ಊರಿನವರು ದಿನಸಿ ಸೇರಿದಂತೆ ಯಾವುದೇ ವಸ್ತುಗಳನ್ನು ತರಲು 3 ಕಿ.ಮೀ. ದೂರದ ಮುಖ್ಯರಸ್ತೆಗೆ ನಡೆದೇ ಬರಬೇಕು. ಬೇಸಿಗೆಯಲ್ಲಿ ಈ ಓಡಾಟಕ್ಕೆ ತೊಂದರೆಯಾಗದು. ಆದರೆ, ಮಳೆಗಾಲ ಶುರುವಾದರೆ ಸಾಕು, ಶಾಲ್ಮಲಾ ನದಿ 70 ಅಡಿ ಅಗಲದ ಕಾಲುವೆಯಲ್ಲಿ ಮೈದುಂಬಿ ಹರಿಯುತ್ತಾಳೆ. ಆಗ ಸೂರೀಮನೆ–ಮುಖ್ಯರಸ್ತೆ ನಡುವೆ ಸಂಪರ್ಕ ಕಡಿದು ಹೋಗುತ್ತದೆ. ಮೂವತ್ತು ಮಾರು ಸಾಗಬೇಕಾದ ಹಾದಿ ಮೂವತ್ತು ಕಿಲೋಮೀಟರ್‌ಗೆ ವಿಸ್ತರಿಸುತ್ತದೆ. ಇದರಿಂದ ಪಾರಾಗಲು ಗ್ರಾಮಸ್ಥರೇ ಕಾಲುವೆಗೆ ಕಾಲುಸಂಕ ಕಟ್ಟಿಕೊಳ್ಳುತ್ತಾರೆ.

‘ಕಾಲುವೆಗೆ ಸೇತುವೆ ಕಟ್ಟಿಕೊಡಿ. ಸಮಸ್ಯೆ ಪರಿಹಾರ ಮಾಡಿ’ ಗ್ರಾಮಸ್ಥರು ಸರ್ಕಾರಕ್ಕೆ ಅರ್ಜಿ ಸಲ್ಲಿಸುತ್ತಾ ಬಂದಿದ್ದಾರೆ. ಜನಪ್ರತಿನಿಧಿಗಳನ್ನು ಕಂಡು ಮನವಿಗಳನ್ನು ಕೊಟ್ಟಿದ್ದಾರೆ. ಸರ್ಕಾರದಿಂದ ಯಾವುದೇ ನೆರವು ಸಿಕ್ಕಿಲ್ಲ.ಇದರಿಂದ ಬೇಸತ್ತ ಗ್ರಾಮಸ್ಥರು ಪ್ರತಿ ವರ್ಷ ತಾವೇ ಹಣ ಹಾಕಿ ಸಂಕ ಮಾಡಿಕೊಳ್ಳುತ್ತಾರೆ. ಸ್ಥಳೀಯವಾಗಿ ಸಿಗುವ ಬಿದಿರು, ಬೊಂಬುಗಳು, ಕತ್ತದ ಬಳ್ಳಿ(ತೆಂಗಿನಕಾಯಿಯ ನಾರಿನಿಂದ ಮಾಡಿದ ಕಿರುಹಗ್ಗ)ಯಂತಹ ಸ್ಥಳೀಯ ಸಂಪನ್ಮೂಲ ಬಳಸಿ ಕೊಂಡು, ಸಂಕದ ಅಕ್ಕಪಕ್ಕದ ಮರಗಳ ರೆಂಬೆಗಳನ್ನೇ ಆಧಾರವಾಗಿಸಿಕೊಂಡು ಸಂಕ ಕಟ್ಟಿಕೊಂಡಿದ್ದಾರೆ. ಇದರ ನಿರ್ಮಾಣಕ್ಕೆ ಕಬ್ಬಿಣದ ಸರಳಾಗಲಿ, ತಂತಿಯನ್ನಾಗಲಿ ಬಳಸಿಲ್ಲ. ಯಾವುದೇ ಎಂಜಿನಿಯರ್‌ ಸಹಾಯವಿಲ್ಲದೇ ಕಾಲುವೆಗೆ 70 ಅಡಿ ಉದ್ದದ ಕಾಲುಸಂಕ ನಿರ್ಮಿಸುತ್ತಾರೆ.

ಮೂರು ದಶಕಗಳ ಸಮಸ್ಯೆ
ಹೀಗೆ ಸಂಕ ನಿರ್ಮಾಣ ಮಾಡುತ್ತಿರುವುದು ಇಂದು ನಿನ್ನೆಯಿಂದಲ್ಲ. ಮೂವತ್ತು ವರ್ಷಗಳಿಂದ. ಪ್ರತಿ ವರ್ಷ ಮಳೆಗಾಲಕ್ಕೆ ಮುನ್ನ (ಜೂನ್ ತಿಂಗಳಲ್ಲಿ) ಸಂಕ ಕಟ್ಟುವ ಯೋಜನೆ ಸಿದ್ಧವಾಗುತ್ತದೆ. ಬಲಿತ ಬಿದಿರು ಬಂಬುಗಳನ್ನು ಸಂಗ್ರಹಿಸುತ್ತಾರೆ. ಕತ್ತದ ಬಳ್ಳಿಯನ್ನು ಮಾತ್ರ ಹಣ ಕೊಟ್ಟು ಖರೀದಿಸುತ್ತಾರೆ. ಪ್ರತಿ ವರ್ಷ ಸುಮಾರು ಐದಾರು ಸಾವಿರ ರೂಪಾಯಿ ಮೌಲ್ಯದ ಬಳ್ಳಿ ಬೇಕಾಗುತ್ತದಂತೆ. ಉಳಿದ ಕೆಲಸವನ್ನು ಶ್ರಮದಾನದ ಮೂಲಕ ಮಾಡಿಕೊಳ್ಳುತ್ತಾರೆ. ಮರ ಹತ್ತುವ ಕೌಶಲ್ಯ ಗೊತ್ತಿರುವ ನಾಲ್ಕೈದು ಮಂದಿ ಮಾತ್ರ ಸಂಕ ಕಟ್ಟುತ್ತಾರೆ. ಉಳಿದವರು, ಅವರಿಗೆ ನೆರವಾಗುತ್ತಾರೆ.

ಸಂಕ ಎಷ್ಟು ಭದ್ರವಾಗಿದೆ ಎಂದರೂ ನದಿ ಮೈದುಂಬಿ ಹರಿಯುವುದನ್ನು ನೋಡುವಾಗ, ಇದರ ಮೇಲೆ ಹೆಜ್ಜೆ ಹಾಕಲು ತುಸು ಭಯವಾಗುತ್ತದೆ. ದೊಡ್ಡವರೇ ನಡೆದಾಡುವುದು ಕಷ್ಟ. ಆದರೆ, ಇದರ ಮೇಲೆ ಮಕ್ಕಳು ಶಾಲೆಗೆ ನಡೆದು ಹೋಗುತ್ತಾರೆ. ಯಾರಾದರೂ ಅನಾರೋಗ್ಯಪೀಡಿತರಾದರೆ ಅವರಿಗೆ ವೈದ್ಯಕೀಯ ನೆರವು ಸಿಗುವುದು ಬಹಳ ಕಷ್ಟದ ಸಂಗತಿ.‘ತುಡುಗುಣಿ ಶಾಲೆಗೆ ಹೋಗಲು (ಸುಮಾರು 4 ಕಿ.ಮೀ. ದೂರ) ಈ ಸಂಕ ದಾಟಬೇಕು. ಇಲ್ಲದಿದ್ದರೆ ಸುಮಾರು 9-10 ಕಿ.ಮೀ. ಸುತ್ತಿಯೇ ಶಾಲೆಗೆ ಹೋಗಬೇಕಾದ ಅನಿವಾರ್ಯತೆ ಇದೆ’ ಎನ್ನುತ್ತಾರೆ ಗ್ರಾಮಸ್ಥರು.

‘ಮಳೆ ಕಡಿಮೆ ಇರುವ ಸಮಯ ನೋಡಿ ನಾವೇ ದಾಟಿಸಿಕೊಡುತ್ತೇವೆ. ಬಹುತೇಕ ನಾವು ಕೂಲಿಗೆ ಹೋಗುವ ಸಮಯದಲ್ಲಿಯೇ ಮಕ್ಕಳನ್ನ ಕರೆದುಕೊಂಡು ಹೋಗುತ್ತಾರೆ. ಹೀಗಾಗಿ ಸಂಕ ದಾಟಿಸಲು ಸಮಸ್ಯೆಯಾಗಿಲ್ಲ. ಆದರೆ, ಭವಿಷ್ಯ ನೆನೆಸಿಕೊಂಡರೆ ಭಯವಾಗುತ್ತದೆ. ಹಾಗಾಗಿ ನಮ್ಮ ಮಕ್ಕಳ ಕಾಲದಲ್ಲಾದರೂ ನದಿಗೆಸಿಮೆಂಟ್‌ ಸೇತುವೆ ಆಗಲಿ’ ಎಂದು ಆಶಿಸುತ್ತಾರೆ ಊರಿನ ಗೃಹಿಣಿ ವಂದನಾ.

ಮಹಿಳೆಯರಿಗೆ ಸಂಕಷ್ಟ
ಸೂರೀಮನೆ ಗ್ರಾಮದ ಮಹಿಳೆಯರು ಕೂಲಿ ಕೆಲಸಕ್ಕೆ ಹೋಗುವುದಕ್ಕೂ ಇದೇ ನದಿ ದಾಟಬೇಕು. ‘ಸಂಕದ ಮೇಲೆ ಹೋಗೋದ್‌ ಅಂದ್ರ, ದೇವ್ರ ಮೇಲೆ ಭಾರ ಹಾಕೇ ಹೋಗೋದು. ನದಿ ಹರಿಯೋ ಸದ್‌ ಕೇಳಿದ್ರೆ ಎದೆ ನಡುಕಾ ಬರುತ್ತೆ. ತೂಗಾಡುವ ಸಂಕ, ಗಾಳಿ - ಮಳಿಗೆ ಮರ ಮುರಿಕೊಂಡು ಬೀಳುತ್ತೆನೋ ಭಯ ಆಗ್ತತದೆ’ ಎಂದು ಆತಂಕ ವ್ಯಕ್ತಪಡಿಸುತ್ತಾರೆ ರೋಜಾ. ‘ನಮ್ದೆಲ್ಲ ಹಗ್ಗದ ಮೇಲಿನ ಜೀವನ ಆಗ್ಬಿಟಿದೆ. ಸಾಯ್ಲಿ ಮಾರಾಯ್ರೆ... ಇನ್‌ ಏಷ್ಟ್‌ ವರ್ಷ ಈ ನರಕಯಾತನೆ’ ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ.

‘ಈ ಗ್ರಾಮ ಉಮ್ಮಚಗಿ– ಕುಂದರ್ಗಿ ಎರಡು ಪಂಚಾಯ್ತಿಗೆ ಸೇರಿದೆ. ಎರಡೂ ಪಂಚಾಯ್ತಿಯವರ ಸಹಕಾರದಿಂದ ಈ ಕೆಲಸವಾಗಬೇಕಿದೆ’ ಎನ್ನುತ್ತಾರೆ ಉಮ್ಮಚ್ಚಿಗೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಗ.ರಾ. ಭಟ್. ಸೂರೀಮನೆ ಗ್ರಾಮದ ಕಾಲುವೆಗೆ ತೂಗು ಸೇತುವೆ ಅಥವಾ ಫುಟ್‌ ಬ್ರಿಡ್ಜ್‌ ಅನಿವಾರ್ಯ ಹಾಗೂ ಅವಶ್ಯವಾಗಿ ಬೇಕಾಗಿದೆ. ಇದಕ್ಕೆ ದೊಡ್ಡ ಪ್ರಮಾಣದಲ್ಲಿ ಹಣಬೇಕು. ಶಾಸಕರ/ ಸಂಸದರ ನಿಧಿಯಿಂದ ವ್ಯವಸ್ಥಿತವಾಗಿ ಕಾಲುಸಂಕ ಕಟ್ಟಿಸುವ ಪ್ರಯತ್ನ ನಡೆದಿದೆ ಎಂದು ಅವರು ಅಭಿಪ್ರಾಯಡುತ್ತಾರೆ.

ಸೂರೀಮನೆ ಗ್ರಾಮದ ಕಾಲುಸಂಕ ಬೇಡಿಕೆ ಅಜ್ಜಂದಿರ ಕಾಲದ್ದು. ಈಗ ನಮ್ಮ ಮೊಮ್ಮಕ್ಕಳ ಕಾಲಕ್ಕಾದರೂ ಈಡೇರುವಂತಾಗಲಿ ಎಂಬುದು ಗ್ರಾಮಸ್ಥರ ಅಪೇಕ್ಷೆಯಾಗಿದೆ.

ಬಿದಿರು ಬಂಬಿಗೆ ಕಟ್ಟೆ ರೋಗ
ಇಲ್ಲಿವರೆಗೆ ಸರ್ಕಾರ ನಿರ್ಲಕ್ಷ್ಯತೋರುತ್ತಿದ್ದದು ಒಂದು ಸಮಸ್ಯೆಯಾಗಿತ್ತು. ಈಗ ಮೂರು- ನಾಲ್ಕು ವರ್ಷಗಳಿಂದ ಬಿದಿರು ಬೊಂಬಿಗೂ ಕಟ್ಟೆ ರೋಗ ಬಂದಿದೆ. ಮೊದಲು ಸಿಗುತ್ತಿದ್ದಂತೆ ಯಥೇಚ್ಛವಾಗಿ ಬೊಂಬುಗಳು ಸಿಗುತ್ತಿಲ್ಲ. ಇದರಿಂದಾಗಿ ಸುಭದ್ರವಾಗಿ ಸಂಕ ಕಟ್ಟಿಕೊಳ್ಳಲು ಸಾಧ್ಯವಾಗಲಿಲ್ಲ. ಸಿಕ್ಕಿದ ಅಲ್ಪ ಸ್ವಲ್ಪ ಬೊಂಬುಗಳನ್ನು ಬಳಸಿ, ಹಳೆಯ ಸಂಕವನ್ನು ಭದ್ರವಾಗಿ ಕಟ್ಟಿಕೊಳ್ಳುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಅಂತೋನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT